ಮದ್ರಸಗಳ ವಿರುದ್ಧ ದ್ವೇಷ ಕಾರುವವರು ಸುಪ್ರೀಂ ಕೋರ್ಟ್ ತೀರ್ಪಿನಿಂದ ಪಾಠ ಕಲಿತಾರೇ?

Update: 2024-11-07 06:33 GMT

ಭಾರತದಲ್ಲಿ ವೈದಿಕ ಪಾಠಶಾಲೆ ಅಥವಾ ಬೌದ್ಧ ಮಠಗಳ ಕುರಿತು ಇಲ್ಲದ ಕಳವಳ ಮದ್ರಸಗಳ ಮೇಲೆಯೇ ಏಕೆ ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಎತ್ತಿದೆ. ಉತ್ತರ ಪ್ರದೇಶ ಮದ್ರಸ ಕಾನೂನಿನ ಸಾಂವಿಧಾನಿಕತೆಯನ್ನು ಎತ್ತಿ ಹಿಡಿಯುವಾಗ ಈ ವಿಚಾರ ಬಂದಿದೆ.

ಮದ್ರಸ, ಬೌದ್ಧ ಮಠ ಅಥವಾ ವೈದಿಕ ಪಾಠಶಾಲೆಯಂತಹ ಸಂಸ್ಥೆಗಳನ್ನು ಬಹುಸಂಸ್ಕೃತಿಯ ಈ ದೇಶದಲ್ಲಿ ಸಂವಿಧಾನದ ಉಲ್ಲಂಘನೆ ಎಂಬ ದೃಷ್ಟಿಯಿಂದ ನೋಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಉತ್ತರ ಪ್ರದೇಶದ ಮದ್ರಸ ಕಾನೂನನ್ನು ಅಸಾಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಘೋಷಿಸಿತ್ತು. ಅಲಹಾಬಾದ್ ಹೈಕೋರ್ಟ್‌ನ ಆ ಆದೇಶವನ್ನು ಸುಪ್ರೀಂ ಕೋರ್ಟ್ ಈಗ ರದ್ದುಗೊಳಿಸಿದೆ.

ಉತ್ತರ ಪ್ರದೇಶ ಬೋರ್ಡ್ ಆಫ್ ಮದ್ರಸ ಎಜುಕೇಶನ್ ಆ್ಯಕ್ಟ್ 2004ರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಮದ್ರಸ ಮಂಡಳಿಗಳನ್ನು ಸ್ಥಾಪಿಸಲು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಮದ್ರಸಗಳ ಆಡಳಿತ ನಡೆಸಲು ಜಾರಿಗೆ ತರಲಾಗಿದ್ದ ಕಾಯ್ದೆ ಅದು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಈ ಮಹತ್ವದ ತೀರ್ಪು ಕೊಟ್ಟಿದೆ.

ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಳಿಕ ಮದ್ರಸ ಶಿಕ್ಷಣದ ವಿಚಾರವಾಗಿ ಪ್ರಶ್ನೆಯೆದ್ದಿತ್ತು. ಅದು ಈಗ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಪೂರ್ತಿಯಾಗಿ ಬಗೆಹರಿದಂತಾಗಿದೆ.

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ, ಮೊದಲು ಮದ್ರಸ ಎಂದರೇನು ಎಂಬುದನ್ನು ತಿಳಿಯಬೇಕು.

ಮದ್ರಸ ಬಗ್ಗೆ ಜನರಲ್ಲಿ ನಿಜವಾದ ತಿಳುವಳಿಕೆಗಿಂತ ತಪ್ಪು ಮಾಹಿತಿಗಳು ಮತ್ತು ತಪ್ಪು ಭಾವನೆಯೇ ಜಾಸ್ತಿಯಿದೆ.

ಮದ್ರಸ ಅರಬಿ ಭಾಷೆಯ ಶಬ್ದ. ಶಿಕ್ಷಣ ಸಂಸ್ಥೆ ಎಂಬುದು ಅದರ ಅರ್ಥ. ಯೂನಿವರ್ಸಿಟಿ ಎಂದೂ ಅರ್ಥ ಬರುತ್ತದೆ.

ಯೂನಿವರ್ಸಿಟಿ ಎಂದರೆ ಯೂನಿವರ್ಸ್ ಆಫ್ ನಾಲೆಡ್ಜ್ ಅಥವಾ ನಾಲೆಡ್ಜ್ ಆಫ್ ಯೂನಿವರ್ಸ್.

ಅಲ್ಲಿ ಧಾರ್ಮಿಕ ಶಿಕ್ಷಣವನ್ನು ಮಾತ್ರ ನೀಡುವುದಿಲ್ಲ. ಬದಲಾಗಿ ಸಾಮಾಜಿಕವಾಗಿ ಬೇಕಿರುವ ಶಿಕ್ಷಣವನ್ನೂ ನೀಡಲಾಗುತ್ತದೆ.

ಮದ್ರಸಗಳನ್ನು ಸರಕಾರ ನಿಯಂತ್ರಿಸುತ್ತಿಲ್ಲ ಎಂಬುದು ಕೂಡ ಜನರಲ್ಲಿ ಇರುವ ಭಾವನೆಯಾಗಿದೆ. ಮುಸ್ಲಿಮ್ ಸಮಾಜದ ನಿಯಂತ್ರಣದಲ್ಲಿ ಮದ್ರಸ ಇರುತ್ತದೆ. ಮುಸ್ಲಿಮ್ ಸಮಾಜಕ್ಕೆ ಹೇಗೆ ಬೇಕೋ ಹಾಗೆ ಮದ್ರಸಗಳು ನಡೆಯುತ್ತವೆ ಎಂಬ ತಪ್ಪು ತಿಳುವಳಿಕೆ ಜನರಲ್ಲಿದೆ. ಆದರೆ ಇದು ಸತ್ಯವಲ್ಲ.

ಸರಕಾರ 2020ರಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ, 2018-19ರವರೆಗೆ ದೇಶಾದ್ಯಂತ ಇರುವ 24,010 ಮದ್ರಸಗಳಲ್ಲಿ ಶೇ.60ಕ್ಕಿಂತಲೂ ಹೆಚ್ಚು ಅಂದರೆ 14,528 ಮದ್ರಸಗಳು ಉತ್ತರ ಪ್ರದೇಶದಲ್ಲಿಯೇ ಇದ್ದವು.

ಅವುಗಳಲ್ಲಿ 11,621 ಮದ್ರಸಗಳು ಮಾನ್ಯತೆ ಪಡೆದವಾಗಿವೆ. ಉಳಿದವುಗಳಿಗೆ ಮಾನ್ಯತೆ ಸಿಕ್ಕಿಲ್ಲ.

ಇರುವ ಎಲ್ಲ ಮದ್ರಸಗಳನ್ನು ಎರಡು ವರ್ಗಗಳಲ್ಲಿ ವರ್ಗೀಕರಿಸಲಾಗಿದೆ.

ಒಂದು, ದರ್ಸ್-ಎ-ನಿಝಾಮಿ.

ಎರಡು, ದರ್ಸ್-ಎ ಅಲಿಯಾ

ದರ್ಸ್-ಎ-ನಿಝಾಮಿ ಎಂಬುದು ಜನರು ನೀಡುವ ದೇಣಿಗೆಯಿಂದ ನಡೆಯುತ್ತದೆ. ರಾಜ್ಯದಲ್ಲಿನ ಶಿಕ್ಷಣ ಪದ್ಧತಿಯನ್ನು ಅಲ್ಲಿ ಅನುಸರಿಸಲಾಗಿರುತ್ತದೆ.

ದರ್ಸ್-ಎ ಅಲಿಯಾ ಉತ್ತರ ಪ್ರದೇಶ ಬೋರ್ಡ್ ಆಫ್ ಮದ್ರಸ ಎಜುಕೇಶನ್ ಮಾನ್ಯತೆ ಪಡೆಯುತ್ತದೆ. ಅದರಲ್ಲಿನ ಶಿಕ್ಷಣ ವ್ಯವಸ್ಥೆ ಮೇಲೆ ರಾಜ್ಯ ಸರಕಾರದ ನಿಯಂತ್ರಣವಿರುತ್ತದೆ.

ಮತ್ತೊಂದು ಪ್ರಶ್ನೆ ಮದ್ರಸಗಳ ವಿಚಾರದಲ್ಲಿ ಏಳುವುದೆಂದರೆ, ಅಲ್ಲಿ ಏನನ್ನು ಹೇಳಿಕೊಡುತ್ತಾರೆ ಎಂಬುದು.

ಮದ್ರಸದಲ್ಲಿ ಧಾರ್ಮಿಕ ವಿಚಾರ ಮಾತ್ರ ಹೇಳಿಕೊಡಲಾಗುತ್ತದೆ ಎಂಬ ಭಾವನೆಯಿದೆ. ಆದರೆ ವಾಸ್ತವ ಹಾಗಿಲ್ಲ. ಹಿಂದಿ, ಅರಬಿ, ಸಮಾಜಶಾಸ್ತ್ರ, ಇತಿಹಾಸ, ಭೂಗೋಳ ಎಲ್ಲವನ್ನೂ ಅಲ್ಲಿ ಹೇಳಕೊಡಲಾಗುತ್ತದೆ.

ಉತ್ತರ ಪ್ರದೇಶ ಬೋರ್ಡ್ ಆಫ್ ಮದ್ರಸ ಎಜುಕೇಶನ್ ಆ್ಯಕ್ಟ್ 2004ನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸುವಾಗ ಮೂರು ಕಾರಣಗಳನ್ನು ನೀಡಲಾಗಿತ್ತು.

1. ಜಾತ್ಯತೀತ ತತ್ವದ ಉಲ್ಲಂಘನೆ, 2. ಶಿಕ್ಷಣದ ಹಕ್ಕಿನ ಉಲ್ಲಂಘನೆ, 3. ಪದವಿ ನೀಡುವ ಅಧಿಕಾರ. ಮದ್ರಸ ಬೋರ್ಡ್ ಮೂಲಕ ಪದವಿ ನೀಡುವುದು ಕೇಂದ್ರದ ಕಾನೂನಿಗೆ ವಿರುದ್ಧ. ಈ ಮೂರು ಆಧಾರಗಳ ಮೇಲೆ ಮದ್ರಸ ಶಿಕ್ಷಣವನ್ನು ಅಸಾಂವಿಧಾನಿಕ ಎಂದು ಘೋಷಿಸಲಾಗಿತ್ತು. ಇದರೊಂದಿಗೆ ಉತ್ತರ ಪ್ರದೇಶದಲ್ಲಿನ ಎಲ್ಲಾ ಮದ್ರಸಗಳ ಭವಿಷ್ಯವೇ ಅತಂತ್ರವಾಗಿತ್ತು.

ಆದರೆ ಈಗ ಅಲಹಾಬಾದ್ ಹೈಕೋರ್ಟ್ ಆದೇಶ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ 70 ಪುಟಗಳ ತೀರ್ಪಿನಲ್ಲಿ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಂಸ್ಥೆಗಳು ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂವಿಧಾನದ 21ನೇ ಎ ವಿಧಿ (ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು) ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಸಹವಾಚನ ನಡೆಯಬೇಕು ಎಂದಿದೆ. ಇದು ರಾಜ್ಯದ ಶಾಸಕಾಂಗ ಸಾಮರ್ಥ್ಯದ ವ್ಯಾಪ್ತಿಯಲ್ಲಿದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ.

ಮದ್ರಸದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ಕಾಯ್ದೆಯ ವ್ಯಾಪ್ತಿಯಿಂದ ಮದ್ರಸವನ್ನು ಹೊರಗಿಡುವುದು ಸೂಕ್ತವಲ್ಲ ಎಂದು ಪೀಠ ಹೇಳಿದೆ.

ಮದ್ರಸಗಳಲ್ಲಿ ಸೂಚಿಸಲಾದ ಶಿಕ್ಷಣದ ಮಟ್ಟವನ್ನು ನಿಷ್ಕರ್ಷಿಸುವುದು ಕಾಯ್ದೆಯ ಉದ್ದೇಶವಾಗಿದೆ. ಮದ್ರಸ ಕಾಯ್ದೆ ಮದ್ರಸಗಳ ದೈನಂದಿನ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಇದು ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಮತ್ತು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಜೊತೆಗೆ ಯೋಗ್ಯವಾದ ಜೀವನ ನಡೆಸುವಂತೆ ನೋಡಿಕೊಳ್ಳುವ ಸರಕಾರದ ಸಕಾರಾತ್ಮಕ ಬಾಧ್ಯತೆಗೆ ಸಂಬಂಧಿಸಿದ್ದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್‌ನ ಮಂಗಳವಾರದ ತೀರ್ಪು ಬಿಜೆಪಿ, ಸಂಘ ಪರಿವಾರದ ಪ್ರೊಪಗಂಡಾ ನಾಯಕರ ಪಾಲಿಗೆ ಚಾಟಿ ಬೀಸಿದ ಹಾಗಿದೆ.

ಮದ್ರಸಗಳ ಕುರಿತು, ಅಲ್ಲಿನ ಶಿಕ್ಷಣದ ಕುರಿತು ತೀರಾ ನಿರಾಧಾರವಾಗಿ ಬಾಯಿಗೆ ಬಂದಂತೆ ಸುಳ್ಳಾರೋಪ ಮಾಡಿ ಜನರಲ್ಲಿ ತಪ್ಪು ಕಲ್ಪನೆಗಳನ್ನು ಹರಡುತ್ತಿದ್ದ ಬಿಜೆಪಿ ಸಂಘ ಪರಿವಾರದ ನಾಯಕರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸರಿಯಾಗಿ ಓದಿಕೊಳ್ಳಬೇಕು ಮತ್ತು ಇನ್ನಾದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು.

ಉತ್ತರ ಪ್ರದೇಶದ ಮದ್ರಸಗಳಲ್ಲಿ 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಡೀ ಮದ್ರಸ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಹೇಳಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ದೊಡ್ಡದೊಂದು ಸಮಸ್ಯೆ ಸೃಷ್ಟಿಸಿತ್ತು. ಈ ಲಕ್ಷಾಂತರ ಮದ್ರಸ ವಿದ್ಯಾರ್ಥಿಗಳು ಇನ್ನೆಲ್ಲಿಗೆ ಹೋಗುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಸುಪ್ರೀಂ ಕೋರ್ಟಿನ ಈ ತೀರ್ಮಾನದಿಂದಾಗಿ ತೂಗುಯ್ಯಾಲೆಯಲ್ಲಿ ಸಿಲುಕಿದ್ದ ಲಕ್ಷಾಂತರ ಮದ್ರಸ ವಿದ್ಯಾರ್ಥಿಗಳ ಭವಿಷ್ಯ ಈಗ ಸುರಕ್ಷಿತಗೊಂಡಿದೆ.

ಮದ್ರಸಗಳಲ್ಲಿ ಧಾರ್ಮಿಕ ಆದೇಶಗಳ ಜೊತೆ ಜೊತೆಗೆ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಜೊತೆಗೆ ಭಾಷೆಗಳು ಮತ್ತಿತರ ವಿಷಯಗಳನ್ನೂ ಕಲಿಸಲಾಗುತ್ತದೆ. ಹೀಗಿರುವಾಗ ಧಾರ್ಮಿಕ ಶಿಕ್ಷಣ ಪಡೆಯಲು ಬಯಸುವ ಓರ್ವ ವ್ಯಕ್ತಿಯನ್ನು ಅದರಿಂದ ತಡೆಯಲು ಸಾಧ್ಯವಿಲ್ಲ.

ಎಲ್ಲಾ ಮಕ್ಕಳೂ ಫಿಸಿಕ್ಸ್, ಬಯಾಲಜಿ, ಕೆಮಿಸ್ಟ್ರಿ ಕಲಿಯಬೇಕಂತಿಲ್ಲ. ಕೆಲವರ ಆಸಕ್ತಿ ಇತಿಹಾಸ, ವಾಣಿಜ್ಯ, ಭಾಷೆಗಳು ಇತ್ಯಾದಿ ವಿಷಯಗಳಲ್ಲೂ ಇರಬಹುದು. ಇನ್ನು ಕೆಲವರಿಗೆ ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಇರಬಹುದು. ಹೀಗಿರುವಾಗ ಯಾವ ವ್ಯಕ್ತಿ ಯಾವ ವಿಷಯವನ್ನು ಕಲಿಯಬೇಕು ಎಂಬುದು ಆ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿರಬೇಕೇ ಹೊರತು ಅವನ ಮೇಲೆ ಯಾರೂ ಒಂದು ವಿಷಯವನ್ನು ಕಲಿಯುವಂತೆ ಒತ್ತಡ ಹಾಕುವಂತಿಲ್ಲ.

ಮದ್ರಸಗಳಲ್ಲಿ ಗುಣಮಟ್ಟದ ಶಿಕ್ಷಣವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಆದರೆ ನಮ್ಮ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಕುರಿತAnnual Survey of State of Educationನ ವಾರ್ಷಿಕ ರಿಪೋರ್ಟ್ ಗಳನ್ನು ನೋಡಿದರೆ ಗುಣಮಟ್ಟದ ಶಿಕ್ಷಣ ಎಲ್ಲಿ ಸಿಗುತ್ತದೆ ಎಂದು ಕೇಳುವ ದಯನೀಯ ಪರಿಸ್ಥಿತಿ ಇದೆ.

ವಾರ್ಷಿಕ ವರದಿಗಳ ಪ್ರಕಾರ 14ರಿಂದ 18 ವಯಸ್ಸಿನ ಹೆಚ್ಚಿನ ಸಂಖ್ಯೆಯ ಮಕ್ಕಳು ಕೇವಲ 2ನೇ ಕ್ಲಾಸಿನ ಪುಸ್ತಕ ಓದುವಷ್ಟು ಶಕ್ತರಾಗಿದ್ದಾರೆ. ಇದೇ ವಯೋಮಿತಿಯ ಶೇ. 50ರಷ್ಟು ಮಕ್ಕಳು 5ನೇ ಕ್ಲಾಸಿನ ಗಣಿತ ಕೂಡ ಮಾಡಲು ಸಾಧ್ಯವಾಗದವರು. ನಮ್ಮ ಕಾಲೇಜುಗಳಿಂದ ಬರುವ ಶೇ. 45 ಪದವೀಧರರು ಉದ್ಯೋಗ ಪಡೆಯಲು ಯೋಗ್ಯರಲ್ಲ ಎಂದು ವರದಿ ಹೇಳುತ್ತದೆ. ನಮ್ಮ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಆದರೆ ಅಲಹಾಬಾದ್ ಹೈಕೋರ್ಟ್ ಗೆ ಸಮಸ್ಯೆಯಾಗಿ ಕಂಡಿದ್ದು ಮದ್ರಸಗಳು ಮಾತ್ರ.

ಮದ್ರಸಗಳಲ್ಲಿ ಗಣಿತ, ವಿಜ್ಞಾನ, ಹೋಮ್ ಸಯನ್ಸ್ ಇತ್ಯಾದಿ ವಿಷಯಗಳನ್ನು ಕಲಿಸಲಾಗುತ್ತದೆ. ಅದಲ್ಲದೆ ಹಿಂದಿ, ಇಂಗ್ಲಿಷ್, ಉರ್ದು, ಪಾರ್ಸಿ, ಅರೇಬಿಕ್ ತರಹದ ಭಾಷೆಗಳನ್ನೂ ಕಳಿಸಲಾಗುತ್ತದೆ. ಹೆಚ್ಚೆಚ್ಚು ಭಾಷೆಗಳನ್ನು ಕಲಿಯಬೇಕು ಎಂದು ಹೇಳುವ ಈ ಕಾಲದಲ್ಲಿ ಮದ್ರಸದಲ್ಲಿ ಇಷ್ಟೆಲ್ಲಾ ಭಾಷೆಗಳನ್ನು ಕಲಿಸಲಾಗುತ್ತದೆ. ಇದನ್ನು ಬಿಟ್ಟು ಸಾಕಷ್ಟು ಶಿಕ್ಷಕರಿಲ್ಲದ ಸರಕಾರಿ ಶಾಲೆಗಳಿಗೆ 17 ಲಕ್ಷ ಮದ್ರಸ ವಿದ್ಯಾರ್ಥಿಗಳು ಹೋಗಬೇಕು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು.

ಯಾವ ಸಂಸ್ಥೆಯೂ ಪರಿಪೂರ್ಣವಲ್ಲ. ಏಳಿಗೆಗೆ, ಇನ್ನಷ್ಟು ಅಭಿವೃದ್ಧಿಗೆ ಎಲ್ಲ ಕಡೆಯೂ ಅವಕಾಶ ಇದ್ದೇ ಇದೆ. ಅದನ್ನು ಮುಕ್ತ ಮನಸ್ಸಿನಿಂದ, ಮುತುವರ್ಜಿಯಿಂದ ಹೇಳಿ ಮಾಡಿಸಬೇಕೇ ವಿನಃ ಪೂರ್ವಗ್ರಹ ಪೀಡಿತವಾಗಿ ಅಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರವೀಣ್ ಎನ್.

contributor

Similar News