ಶಿಕ್ಷಕರೇ ವಿದ್ಯಾರ್ಥಿಗಳ ಭವಿಷ್ಯದ ಭಕ್ಷಕರಾದರೆ...
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಹಾಲುಣಿಸಿದ ಮಕ್ಕಳೇ ಬದುಕುವುದಿಲ್ಲ, ಇನ್ನು ವಿಷವುಣಿಸಿ ಬೆಳೆಸಿದ ಮಕ್ಕಳು ಬದುಕಲು ಸಾಧ್ಯವೆ?’ ಉತ್ತರ ಪ್ರದೇಶದ ಮುಝಪ್ಫರ್ ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಶಿಕ್ಷಣದ ಹಾಲಿನಲ್ಲಿ ದ್ವೇಷದ ವಿಷ ಬೆರೆಸಿ ಉಣಿಸುತ್ತಿರುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದಾವುದೋ ಪ್ರಶ್ನೆಗೆ ಉತ್ತರಿಸಿಲ್ಲ ಎನ್ನುವ ಕಾರಣಕ್ಕೆ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯೊಬ್ಬನಿಗೆ ಇತರ ಸಮುದಾಯದ ವಿದ್ಯಾರ್ಥಿಗಳ ಮೂಲಕ ಕಪಾಳ ಮೋಕ್ಷ ಮಾಡಿಸಿದ ವೀಡಿಯೊ ದೇಶಾದ್ಯಂತ ವೈರಲ್ ಆಗಿದ್ದು, ಭಾರತದ ಶಿಕ್ಷಣ ವ್ಯವಸ್ಥೆಯ ದುರಂತ. ಈ ಘಟನೆಯು ಪ್ರಜ್ಞಾವಂತರನ್ನು ಆತಂಕಕ್ಕೆ ತಳ್ಳಿದೆ. ವೀಡಿಯೊದಲ್ಲಿ ಎಳೆ ವಿದ್ಯಾರ್ಥಿಗೆ ಥಳಿಸಿರುವುದು ಮಾತ್ರವಲ್ಲ, ಶಿಕ್ಷಕಿಯು ವಿದ್ಯಾರ್ಥಿಯ ಧರ್ಮವನ್ನು ನಿಂದಿಸುತ್ತಿರುವುದು ಕೂಡ ಬಹಿರಂಗವಾಗಿದೆ. ಆರಂಭದಲ್ಲಿ ಈ ಘಟನೆಯನ್ನು ಶಿಕ್ಷಕಿ ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದರು. ಆದರೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ, ವೈರಲ್ ಆಗಿರುವ ವೀಡಿಯೊದಲ್ಲಿ ಘಟನೆಯನ್ನು ತಿರುಚಲಾಗಿದೆ ಎಂದು ಹೇಳಿಕೆ ನೀಡಿದರು. ಸ್ಥಳೀಯ ಜಿಲ್ಲಾಡಳಿತ ತನಿಖೆಗೆ ಇಳಿಯುತ್ತಿದ್ದಂತೆ ಶಿಕ್ಷಕಿ ಕ್ಷಮೆ ಯಾಚಿಸಿದರು. ಎಲ್ಲಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು ಈ ಘಟನೆಯನ್ನು ದೇಶದ ಮುಂದಿಟ್ಟ ಪತ್ರಕರ್ತನ ವಿರುದ್ಧ. ಈ ಸುದ್ದಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ಎಳೆ ವಿದ್ಯಾರ್ಥಿಯ ಗುರುತನ್ನು ಬಹಿರಂಗ ಪಡಿಸಿದ ಆರೋಪದಲ್ಲಿ ‘ಆಲ್ಟ್ ನ್ಯೂಸ್’ನ ಪತ್ರಕರ್ತನ ಮೇಲೆ ಪ್ರಕರಣ ಇದೀಗ ದಾಖಲಿಸಲಾಗಿದೆ. ಆ ವಿದ್ಯಾರ್ಥಿಯ ಮೇಲೆ ನಡೆದ ದೌರ್ಜನ್ಯ, ಶಿಕ್ಷಕಿಯ ದ್ವೇಷ ಮನಸ್ಥಿತಿಗಿಂತ ಪತ್ರಕರ್ತನ ಕೃತ್ಯ ಪೊಲೀಸರಿಗೆ ಭೀಕರ ಅಪರಾಧವಾಗಿ ಕಂಡಿತು. ಈ ಮೂಲಕ ಪೊಲೀಸರು ಕೂಡ ಪರೋಕ್ಷವಾಗಿ ಶಿಕ್ಷಕಿಯ ಕೃತ್ಯದ ಬೆನ್ನಿಗೆ ನಿಂತಿದ್ದಾರೆ.
ಒಂದು ಕಾಲವಿತ್ತು. ಪ್ರಾಥಮಿಕ ಶಾಲೆಗಳು ಬೇರೆ ಬೇರೆ ಜಾತಿ, ಧರ್ಮ, ವರ್ಗಗಳ ಮಕ್ಕಳನ್ನು ಬೆಸೆಯುವ ವೇದಿಕೆಯಾಗುತ್ತಿತ್ತು. ಎಳೆ ಮಕ್ಕಳು ವೈವಿಧ್ಯವನ್ನು ಅರ್ಥಮಾಡಿಕೊಳ್ಳುವುದೇ ಶಾಲೆಗಳಲ್ಲಿ. ಇಲ್ಲಿ ಎಲ್ಲಾ ಜಾತಿ, ಧರ್ಮದ ಮಕ್ಕಳು ಒಂದಾಗಿ ಓದುತ್ತಾ, ಒಟ್ಟಾಗಿ ಆಡುತ್ತಾ ವಿವಿಧತೆಯಲ್ಲಿ ಏಕತೆಯ ಪಾಠವನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಹತ್ತು ಹಲವು ಭಾಷೆಗಳು, ಆಚರಣೆಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳುವುದು ತಮ್ಮ ಸಹಪಾಠಿಗಳ ಮೂಲಕ ಶಾಲೆಗಳಲ್ಲಿ. ಶಿಕ್ಷಕರು ಕೂಡ ಎಲ್ಲಾ ವಿದ್ಯಾರ್ಥಿಗಳನ್ನು ಸಮಭಾವದಿಂದ ಕಾಣುತ್ತಿದ್ದರು. ಜಾತಿ, ಧರ್ಮದಂತಹ ಕಂದಕಗಳನ್ನು ಮುಚ್ಚಿ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತಿದ್ದರು. ಶೋಷಿತ ಸಮುದಾಯದಿಂದ ಬಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಅವರ ಭವಿಷ್ಯವನ್ನು ಉತ್ತಮಗೊಳಿಸಲು ಗರಿಷ್ಠವಾಗಿ ಪ್ರಯತ್ನಿಸುತ್ತಿದ್ದರು. ದಲಿತ ಸಮುದಾಯದಿಂದ ಅಂಬೇಡ್ಕರ್‌ರಂತಹ ಮಹಾನಾಯಕ ಹುಟ್ಟಿ ಬರಲು ಅವರ ಶಿಕ್ಷಕರ ಪಾತ್ರ ಹಿರಿದಾದುದು. ದುರದೃಷ್ಟವಶಾತ್ ಇಂದು ಒಂದಾಗಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಬೇರ್ಪಡಿಸುವ ಕೆಲಸ ಕೆಲವು ಶಿಕ್ಷಕರಿಂದ ನಡೆಯುತ್ತಿದೆ. ಸಂಘಪರಿವಾರದ ದ್ವೇಷ ರಾಜಕಾರಣ ಪ್ರಾಥಮಿಕ ಶಾಲೆಗಳನ್ನು ಪ್ರವೇಶಿಸಿರುವ ಪರಿಣಾಮವಿದು. ವಿದ್ಯಾರ್ಥಿಗಳಿಗೆ ಏಕತೆಯ ಪಾಠವನ್ನು ಬೋಧಿಸಬೇಕಾದ ಶಿಕ್ಷಕರೇ ಅವರಿಗೆ ಅವರ ಜಾತಿ, ಧರ್ಮವನ್ನು ನೆನಪಿಸಿ ಕೊಡುವ ಕೆಲಸ ಶಾಲೆಗಳಲ್ಲಿ ಮಾಡುತ್ತಿದ್ದಾರೆ.
ತನ್ನ ಕೃತ್ಯವನ್ನು ಸಮರ್ಥಿಸುತ್ತಾ ಮುಝಪ್ಫರ್ ನಗರದ ಶಿಕ್ಷಕಿ ‘‘ಎಲ್ಲವನ್ನೂ ವೀಡಿಯೊ ಮಾಡಿದ್ರೆ ಶಿಕ್ಷಕರು ಪಾಠ ಕಲಿಸುವುದು ಹೇಗೆ?’’ ಎಂದು ಕೇಳಿದ್ದಾರೆ. ವೀಡಿಯೊದಲ್ಲಿ ಶಿಕ್ಷಕಿ ಪಾಠ ಕಲಿಸುವ ಯಾವ ವಿವರಗಳೂ ಇಲ್ಲ. ಇತರ ವಿದ್ಯಾರ್ಥಿಗಳ ಮೂಲಕ ಒಬ್ಬ ಎಳೆ ವಿದ್ಯಾರ್ಥಿಯ ಕೆನ್ನೆಗೆ ಬಾರಿಸಲು ಹೇಳಿ, ‘‘ಇವರು ಯಾರಿಗೆ ಯಾವ ರೀತಿಯ ಪಾಠ ಕಲಿಸಲು ಹೊರಟಿದ್ದಾರೆ?’’ ಎಂದು ದೇಶ ಕೇಳುತ್ತಿದೆ. ಮಕ್ಕಳ ಮೇಲೆ ದೌರ್ಜನ್ಯವೆಸಗುವುದು ಕಲಿಕೆಯ ಭಾಗವೆ? ಇಷ್ಟಕ್ಕೂ ಒಬ್ಬ ವಿದ್ಯಾರ್ಥಿಯ ವಿರುದ್ಧ ಇತರ ವಿದ್ಯಾರ್ಥಿಗಳನ್ನು ಎತ್ತಿ ಕಟ್ಟುವ ಮೂಲಕ, ವಿದ್ಯಾರ್ಥಿಗಳ ನಡುವೆ ಶಿಕ್ಷಕಿ ದ್ವೇಷದ ಕಂದಕ ಸೃಷ್ಟಿಸಿದ್ದಾರೆ. ವಿದ್ಯಾರ್ಥಿಯೊಬ್ಬನನ್ನು ಧರ್ಮದ ಆಧಾರದಲ್ಲಿ ಶಿಕ್ಷಿಸುವ ನೆಪದಲ್ಲಿ ತರಗತಿಯ ವಿದ್ಯಾರ್ಥಿಗಳನ್ನು ಭಾವನಾತ್ಮಕವಾಗಿ ವಿಭಜಿಸಿದ್ದಾರೆ. ಅವರಿಗೆ ದ್ವೇಷದ ಪಾಠವನ್ನು ಬೋಧಿಸಿದ್ದಾರೆ. ಇದು ತೀರಾ ಆಕಸ್ಮಿಕವಲ್ಲ. ಇಂದು ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಎಳವೆಯಲ್ಲೇ ವಿಭಜಿಸುವುದಕ್ಕೆ ಶಿಕ್ಷಕರನ್ನು ಸಂಘಪರಿವಾರ ವ್ಯವಸ್ಥಿತವಾಗಿ ಬಳಸುತ್ತಿದೆ. ಪ್ರಾಯ ಪ್ರಬುದ್ಧರಾದ ಮೇಲೆ ವಿಭಜಿಸುವುದಕ್ಕಿಂತ, ಸಣ್ಣವರಿರುವಾಗಲೇ ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸುವುದರಿಂದ ಪರಿಣಾಮ ಹೆಚ್ಚು ಎನ್ನುವುದನ್ನು ಶಿಕ್ಷಕರ ವೇಷದಲ್ಲಿರುವ ವಿಭಜನವಾದಿಗಳು ಅರಿತಿದ್ದಾರೆ. ಆದುದರಿಂದಲೇ, ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಎದ್ದು ನಿಲ್ಲಿಸಿ ಶಿಕ್ಷಕರೊಬ್ಬರು ‘‘ನೀವೆಲ್ಲ ಪಾಕಿಸ್ತಾನಕ್ಕೆ ಯಾಕೆ ಹೋಗಿಲ್ಲ?’’ ಕೇಳುತ್ತಾರೆ. ಇಲ್ಲಿರುವುದು ಕೇವಲ ವಿದ್ಯಾರ್ಥಿಯೊಬ್ಬನನ್ನು ಅವಮಾನಿಸುವ, ನಿಂದಿಸುವ ಉದ್ದೇಶವಷ್ಟೇ ಅಲ್ಲ. ಇಡೀ ಒಂದು ಸಮುದಾಯದ ವಿರುದ್ಧ ಉಳಿದ ವಿದ್ಯಾರ್ಥಿಗಳಲ್ಲಿ ದ್ವೇಷವನ್ನು ತುಂಬುವ ದುರುದ್ದೇಶವೂ ಇದೆ.
ಶಾಲೆಗಳಲ್ಲಿ ಕೆಳಜಾತಿಯ ಅದರಲ್ಲೂ ದಲಿತ ವಿದ್ಯಾರ್ಥಿಗಳನ್ನು ದೂರವಿಡುವ ಕೆಲಸವೂ ಶಿಕ್ಷಕರಿಂದಲೇ ನಡೆಯುತ್ತಿರುವುದು ವಿಪರ್ಯಾಸ. ಉತ್ತರ ಭಾರತದ ಪ್ರಾಥಮಿಕ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾತಿಯನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ಕೊಟ್ ಪುತ್ಲಿಯ ಸರಕಾರಿ ಶಾಲೆಯೊಂದರಲ್ಲಿ 15 ವರ್ಷದ ದಲಿತ ವಿದ್ಯಾರ್ಥಿಯೊಬ್ಬ ಶಾಲೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ಎಲ್ಲ ವಿದ್ಯಾರ್ಥಿಗಳ ಮುಂದೆ ಆತನಿಗೆ ಶಿಕ್ಷಕರು ಜಾತಿ ನಿಂದನೆ ಮಾಡಿರುವುದೇ ಆತ್ಮಹತ್ಯೆಗೆ ಕಾರಣ ಎನ್ನುವುದು ತಿಳಿದು ಬಂದಿದೆ. ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬಳಿಕ ಶಿಕ್ಷಕರಿಬ್ಬರನ್ನು ಅಮಾನತುಗೊಳಿಸಲಾಗಿದೆ. ಆದರೆ ಇಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕಗ್ಗೊಲೆ ಎನ್ನುವುದು ಯಾರಿಗೂ ಅರ್ಥವಾಗಬೇಕು. ಕಳೆದ ವರ್ಷ ಇದೇ ರಾಜಸ್ಥಾನದಲ್ಲಿ ಎಳೆ ವಿದ್ಯಾರ್ಥಿಯೊಬ್ಬ ನೀರಿನ ಮಡಕೆ ಮುಟ್ಟಿದ ಕಾರಣಕ್ಕಾಗಿ ಆತನನ್ನು ಶಿಕ್ಷಕನೇ ಥಳಿಸಿಕೊಂದ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಜಾತಿ ಭೇದಗಳನ್ನು ಅಳಿಸಿ ವಿದ್ಯಾರ್ಥಿಗಳನ್ನು ಒಂದಾಗಿಸಬೇಕಾಗಿರುವ ಶಿಕ್ಷಕರೇ ವಿದ್ಯಾರ್ಥಿಗಳನ್ನು ಜಾತಿ ಆಧಾರದಲ್ಲಿ ಹೊರಗಿಡುವಾಗ, ಇತರ ಮೇಲ್‌ಜಾತಿಗೆ ಸೇರಿದ ವಿದ್ಯಾರ್ಥಿಗಳು ಇವರೊಂದಿಗೆ ಇನ್ನೆಷ್ಟು ಕ್ರೂರವಾಗಿ ವರ್ತಿಸಬಹುದು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳಬೇಕಾಗಿದೆ. ಇಂತಹ ಶಾಲೆಗಳಲ್ಲಿ ಕಲಿತ ಮೇಲ್‌ಜಾತಿ ವಿದ್ಯಾರ್ಥಿಗಳು ಜಾತೀಯತೆಯ ಕೋರೆಹಲ್ಲುಗಳೊಂದಿಗೆ ಬೆಳೆದರೆ, ಶೋಷಿತ ಸಮುದಾಯದ ವಿದ್ಯಾರ್ಥಿಗಳು ಕೀಳರಿಮೆ, ಅಸಹಾಯಕತೆಯೊಂದಿಗೆ ಬೆಳೆಯಬೇಕಾಗುತ್ತದೆ. ಶಾಲೆಗಳಲ್ಲಿ ವಿಭಜನೆಗೊಂಡ ಮನಸ್ಸುಗಳು ಮುಂದೆ ಬೆಳೆದು ಜಾತ್ಯತೀತ ಸಮಾಜವನ್ನು ಕಟ್ಟುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವೇ?