ಮಾಲ್‌ನಲ್ಲಿ ಪ್ರವೇಶ ನಿರಾಕರಿಸಲ್ಪಟ್ಟ ರೈತನೂ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ನಿರಾಕರಿಸಲ್ಪಡುವ ಕನ್ನಡಿಗನೂ...

Update: 2024-07-19 05:02 GMT

PC: x.com/Journz_family

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಲವು ದಶಕಗಳ ಹಿಂದೆ ಚಪ್ಪಲಿ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಖ್ಯಾತ ಕಲಾವಿದ ಎಂ. ಎಫ್. ಹುಸೇನ್ ಅವರಿಗೆ ಪಂಚತಾರಾ ಹೊಟೇಲೊಂದರಲ್ಲಿ ಪ್ರವೇಶ ನಿರಾಕರಣೆಯಾದದ್ದು ಭಾರೀ ಸುದ್ದಿಯಾಗಿತ್ತು. ಪತ್ರಿಕೆಗಳಲ್ಲಿ ಹಲವು ದಿನಗಳ ಕಾಲ ಆ ಘಟನೆ ಚರ್ಚೆಗೀಡಾಯಿತು. ಭಾರತದ ಖ್ಯಾತ ಕಲಾವಿದನೊಬ್ಬನನ್ನು ಆತ ಧರಿಸಿದ ಚಪ್ಪಲಿಯ ಆಧಾರದಿಂದ ಪಂಚತಾರಾ ಹೊಟೇಲಿನ ಆಡಳಿತ ಮಂಡಳಿ ‘ಗೌರವಿಸಿದು’್ದ ಕಲೆಗೆ ಮಾಡಿದ ಭಾರೀ ಅವಮಾನ ಎಂದು ನಾಡಿನ ಚಿಂತಕರು, ಕಲಾವಿದರು, ಸಾಹಿತಿಗಳು ಪ್ರತಿಭಟನೆ ನಡೆಸಿದ್ದರು. ಪಂಚತಾರಾ ಹೊಟೇಲ್, ಬೃಹತ್ ಮಾಲ್‌ಗಳನ್ನು ನಿರ್ಮಿಸಿರುವುದೇ ಸೂಟುಬೂಟುಗಳನ್ನು ಧರಿಸಿದ ಶ್ರೀಮಂತ ವರ್ಗಕ್ಕಾಗಿ. ಜನರ ಅರ್ಹತೆಯನ್ನು ಗುರುತಿಸಲು ಅವರು ಬಳಸುವ ಮಾನದಂಡ ಧಿರಿಸು. ಭಾರತದಲ್ಲಿ ತಮ್ಮ ಧಿರಿಸುಗಳ ಕಾರಣಕ್ಕಾಗಿಯೇ ಪ್ರತಿದಿನ ನೂರಾರು ಜನರು ನೂರಾರು ಸ್ಥಳಗಳಲ್ಲಿ ಪ್ರವೇಶ ನಿರಾಕರಣೆಯನ್ನು ಎದುರಿಸಬೇಕಾಗುತ್ತದೆ. ಚಪ್ಪಲಿ, ಧೋತಿಗಳ ಕಾರಣಕ್ಕಾಗಿ ಮಾತ್ರವಲ್ಲ, ಕೆಲವೊಮ್ಮೆ ತೊಗಲಿನ ಬಣ್ಣದ ಕಾರಣದಿಂದಲೇ ಪ್ರವೇಶ ನಿರಾಕರಿಸಲ್ಪಡುತ್ತಾರೆ. ದಲಿತರು, ಕೆಳಜಾತಿಯ ಜನರು ಎನ್ನುವ ಕಾರಣಕ್ಕಾಗಿ ಈ ದೇಶದ ಸಹಸ್ರಾರು ಜನರು ಇನ್ನೂ ದೇವಸ್ಥಾನಗಳಿಂದ ಹೊರಗೆಯೇ ಇದ್ದಾರೆ. ಹೀಗಿರುವಾಗ, ಧಿರಿಸುಗಳ ಕಾರಣದಿಂದ ಪ್ರವೇಶ ನಿರಾಕರಿಸಲ್ಪಡುವುದು ಇಲ್ಲಿ ದೊಡ್ಡ ವಿಷಯವೇನೂ ಅಲ್ಲ. ಹುಸೇನ್ ಅಂತರ್‌ರಾಷ್ಟ್ರೀಯ ಕಲಾವಿದರಾಗಿರುವ ಕಾರಣದಿಂದ ಅಂದು ಅದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ವಿಪರ್ಯಾಸವೆಂದರೆ, ಈ ಘಟನೆ ನಡೆದ ಎಷ್ಟೋ ವರ್ಷಗಳ ಬಳಿಕ ತನ್ನ ಕಲೆಯ ಕಾರಣಕ್ಕಾಗಿಯೇ ಹುಸೇನ್ ದೇಶದಿಂದ ಪಲಾಯನ ಮಾಡಬೇಕಾಯಿತು. ತನ್ನ ಕಲಾಕೃತಿಗಳ ಕಾರಣದಿಂದ ತೀವ್ರ ಪ್ರತಿಭಟನೆಗಳನ್ನು ಎದುರಿಸಿದ ಹುಸೇನ್ ಬಳಿಕ ದೇಶ ತೊರೆದರು. ವಿದೇಶದಲ್ಲೇ ಮೃತಪಟ್ಟರು.

ಅಂದು ಪಂಚತಾರಾ ಹೊಟೇಲ್‌ನಲ್ಲಿ ಎಂ. ಎಫ್. ಹುಸೇನ್ ಅವರು ಎದುರಿಸಿದ ಅವಮಾನವನ್ನೇ ಎರಡು ದಿನಗಳ ಹಿಂದೆ ಕರ್ನಾಟಕದಲ್ಲಿ ರೈತನೊಬ್ಬ ಮಾಲೊಂದರ ಪ್ರವೇಶ ಸಂದರ್ಭದಲ್ಲಿ ಎದುರಿಸಬೇಕಾಯಿತು. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಮಾಲೊಂದರಲ್ಲಿ ರೈತನೊಬ್ಬ ಪಂಚೆ ಧರಿಸಿ ಬಂದಿದ್ದಾನೆ ಎನ್ನುವ ಕಾರಣಕ್ಕೆ ಆತನನ್ನು ಕಾವಲುಗಾರ ಒಳಗೆ ಬಿಡಲಿಲ್ಲ. ಈತ ಎಂ. ಎಫ್. ಹುಸೇನ್‌ನಂತೆ ಕಲಾವಿದನೇನೂ ಅಲ್ಲದೇ ಇರುವುದರಿಂದ ಇದು ದೊಡ್ಡ ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ, ಅವರ ಜೊತೆಗಿದ್ದ ಯುವಕ ಇದನ್ನು ಪ್ರತಿಭಟಿಸಿದ. ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ. ಈ ನಾಡಿನ ಕಾರ್ಮಿಕರು, ರೈತರ ಜೊತೆಗೆ ಬೃಹತ್ ಮಾಲ್‌ಗಳು, ಕಾರ್ಪೊರೇಟ್ ಸಂಸ್ಥೆಗಳು ಎಂತಹ ದೋರಣೆಯನ್ನು ಹೊಂದಿವೆ ಎನ್ನುವುದನ್ನು ಈ ಘಟನೆ ಬಯಲು ಮಾಡಿತು. ಯುವಕನ ಪ್ರತಿಭಟನೆಗೆ ವಿವಿಧ ಸಂಘಟನೆಗಳು, ಸಾರ್ವಜನಿಕರು ಸ್ಪಂದಿಸುತ್ತಿದ್ದಂತೆಯೇ ಮಾಲ್‌ನ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತು. ಹಲವರು ಪ್ರತಿಭಟನಾರ್ಥವಾಗಿ ಪಂಚೆ ಧರಿಸಿ ಮಾಲ್‌ನ ಮುಂದೆ ನೆರೆದರು. ಪರಿಸ್ಥಿತಿ ಕೈ ಮೀರುತ್ತದೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಆಡಳಿತ ಮಂಡಳಿ ಕ್ಷಮೆ ಯಾಚಿಸಿತು. ಮಾತ್ರವಲ್ಲ ರೈತನನ್ನು ಹೂಹಾರ ಹಾಕಿ ಗೌರವಿಸಿ ತನ್ನ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ನಡೆಸಿತು.

ಸಮಾಧಾನಕರವಾದ ಸಂಗತಿಯೆಂದರೆ, ಈ ಪ್ರಕರಣ ವಿಧಾನಸೌಧದಲ್ಲೂ ಪ್ರತಿಧ್ವನಿಸಿರುವುದು. ಸ್ಪೀಕರ್ ಕೂಡ ಇದರ ವಿರುದ್ಧ ಖಂಡನೆ ವ್ಯಕ್ತಪಡಿಸಿ, ಮಾಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು, ಜಿ.ಟಿ. ಮಾಲ್‌ನ್ನು ಏಳು ದಿನಗಳ ಕಾಲ ಬಂದ್ ಮಾಡುವುದಾಗಿ ಪ್ರಕಟಿಸಿದರು. ಪ್ರವೇಶ ನಿರಾಕರಿಸಿದ್ದ ಮಾಲ್‌ನ ಮಾಲಕನ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಕನ್ನಡದ ನೆಲ, ಜಲವನ್ನು ಬಳಸಿಕೊಂಡು ತಲೆಯೆತ್ತುವ ಮಾಲ್‌ಗಳು, ಸ್ಮಾರ್ಟ್ ಸಿಟಿಗಳು ನಿಧಾನಕ್ಕೆ ಹೇಗೆ ಈ ನಾಡಿನ ರೈತರನ್ನು, ಕಾರ್ಮಿಕರನ್ನು ಹೊರ ಹಾಕಬಹುದು ಎನ್ನುವುದಕ್ಕೆ ಇದೊಂದು ಸಣ್ಣ ನಿದರ್ಶನವಷ್ಟೇ. ಭಾರತದ ಅಭಿವೃದ್ಧಿಯಲ್ಲಿ ಈ ನಾಡಿನ ರೈತರು, ಕಾರ್ಮಿಕರ ಸ್ಥಾನಗಳೇನು ಎನ್ನುವುದನ್ನು ಈ ಘಟನೆ ಪರೋಕ್ಷವಾಗಿ ಬೆಟ್ಟು ಮಾಡಿದೆ. ತಲೆಗೆ ಪೇಟಾ ಸುತ್ತಿ, ಧೋತಿ ಉಟ್ಟ ರೈತರ ಬಗ್ಗೆ ಬರೇ ಕಾರ್ಪೊರೇಟ್ ವಲಯ ಮಾತ್ರವಲ್ಲ ಉಳಿದವರಿಗೂ ಇದಕ್ಕಿಂತ ಭಿನ್ನ ಅಭಿಪ್ರಾಯವೇನೂ ಇಲ್ಲ. ಉತ್ತರ ಕರ್ನಾಟಕದಿಂದ ನಗರಗಳಿಗೆ ವಲಸೆ ಬರುವ ಕಾರ್ಮಿಕರ ಜೊತೆಗೆ ನಗರದ ಜನರು ಟ್ರೈನ್‌ಗಳಲ್ಲಿ, ಬಸ್‌ಗಳಲ್ಲಿ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಒಮ್ಮೆ ಗಮನಿಸಿದರೆ ಸಾಕು ನಮಗೆ ಗೊತ್ತಾಗಿ ಬಿಡುತ್ತದೆ.

ಹಾಗೆ ನೋಡಿದರೆ ಈ ದೇಶದ ಐಟಿ, ಬಿಟಿ ಉದ್ಯಮಿಗಳು ಇಡೀ ಕನ್ನಡಿಗರ ಬಗ್ಗೆಯೂ ಇದೇ ಮನಸ್ಥಿತಿಯನ್ನು ಹೊಂದಿದ್ದಾರೆ. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲಾತಿಯ ಪ್ರಸ್ತಾವವನ್ನು ಸರಕಾರ ಮಾಡಿದಾಕ್ಷಣ, ರಾಜ್ಯದ ಐಟಿ, ಬಿಟಿ ದೈತ್ಯರು ಭೂಕಂಪವಾದಂತೆ ವರ್ತಿಸಿದರು. ಇನ್ನೂ ವಿಧೇಯಕ ಜಾರಿಗೊಂಡಿಲ್ಲ, ಅಷ್ಟರಲ್ಲೇ ಇಡೀ ಉದ್ಯಮದ ಗುಣಮಟ್ಟವೇ ಕೆಟ್ಟು ಹೋಯಿತು ಎಂಬಂತೆ ಹಾಹಾಕಾರ ಮಾಡತೊಡಗಿದರು. ಪ್ರತಿಭೆಗೆ, ಕೌಶಲ್ಯಕ್ಕೆ ಇದರಿಂದ ಧಕ್ಕೆ ಉಂಟಾಗುತ್ತದೆ ಎಂದು ಗದ್ದಲ ಎಬ್ಬಿಸಿದರು. ಇವರ ಪ್ರಕಾರ ಕನ್ನಡಿಗರೆಂದರೆ ಪ್ರತಿಭೆಗಳಿಲ್ಲದ, ಕೌಶಲ್ಯಗಳಿಲ್ಲದ, ಐಟಿ, ಬಿಟಿಗಳಲ್ಲಿ ಉನ್ನತ ಸ್ಥಾನಗಳನ್ನು ನಿಭಾಯಿಸಲು ಯೋಗ್ಯತೆಯಿಲ್ಲದ ಹಳ್ಳಿ ಗಮಾರರು. ‘‘ಮೀಸಲಾತಿ ನೀಡುವ ಮೊದಲು ಇವರಿಗೆ ಉತ್ತಮ ಕೌಶಲ್ಯಗಳ ಬಗ್ಗೆ ಸರಕಾರ ತರಬೇತಿ ನೀಡಬೇಕು’’ ಎಂದು ಕೆಲವು ಉದ್ಯಮಿಗಳು ಆಗ್ರಹಿಸಿದರು. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಕೆಲಸ ಮಾಡಲು ಬೇಕಾದ ಅರ್ಹತೆಗಳಿಲ್ಲ, ಪ್ರತಿಭೆಗಳಿಲ್ಲ, ಕೌಶಲಗಳಿಲ್ಲ ಎಂದು ವಾದಿಸುವ ಮೋಹನ್ ದಾಸ್ ಪೈಗೂ, ಮಾಲ್‌ನೊಳಗೆ ಪ್ರವೇಶಿಲು ಪಂಚೆ ಉಟ್ಟ ರೈತನಿಗೆ ಅರ್ಹತೆಯಿಲ್ಲ ಎಂದ ಮಾಗಡಿ ರಸ್ತೆಯಲ್ಲಿರುವ ಜಿ.ಟಿ. ಮಾಲ್‌ನ ಸಿಬ್ಬಂದಿ ಮತ್ತು ಮಾಲಕರಿಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಪಂಚೆ ಉಟ್ಟ ರೈತನ ಬಗ್ಗೆ ಮಾಲ್‌ನ ಮಾಲಕನಿಗೆ ಯಾವ ಧೋರಣೆಯಿದೆಯೋ ಅದೇ ಧೋರಣೆ ಕಾರ್ಪೊರೇಟ್ ಉದ್ಯಮಿಗಳಿಗೂ ಕನ್ನಡಿಗರ ಕುರಿತಂತೆ ಇದೆ. ಕನ್ನಡಿಗರಿಗೆ ಮೀಸಲಾತಿಯನ್ನು ಜಾರಿಗೊಳಿಸಿದರೆ ನಾವು ಕರ್ನಾಟಕವನ್ನು ಬಿಟ್ಟು ಹೋಗಬೇಕಾಗುತ್ತದೆ ಎನ್ನುವ ಅವರ ಉದ್ಧಟತನ ಸಕಲ ಕನ್ನಡಿಗರನ್ನು ಅವಮಾನಿಸಿದಂತೆಯೇ ಅಲ್ಲವೆ? ಮಾಲ್‌ನಲ್ಲಿ ಸಿನೆಮಾ ನೋಡಲು ಧೋತಿ ಉಟ್ಟ ರೈತನಿಗೆ ಪ್ರವೇಶ ನೀಡಲಿಲ್ಲ ಎಂದು ಸಾರ್ವಜನಿಕರು ಒಂದಾದರು. ವಿಧಾನಸಭೆಯಲ್ಲಿ ರಾಜಕೀಯ ನಾಯಕರೂ ಆ ಮಾಲ್‌ನ ವಿರುದ್ಧ ಮಾತನಾಡಿದರು. ಆದರೆ, ಕನ್ನಡಿಗರಿಗೆ ತಮ್ಮ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಲು ಸಿದ್ಧವಿಲ್ಲ ಎಂದ ಉದ್ಯಮಿಗಳನ್ನು ‘‘ಯಾಕೆ ಕನ್ನಡಿಗರಿಗೆ ನೀವು ನಿಮ್ಮ ಸಂಸ್ಥೆಗಳಲ್ಲಿ ಪ್ರವೇಶ ನೀಡುವುದಿಲ್ಲ’’ ಎಂದು ಪ್ರಶ್ನಿಸುವ ಧೈರ್ಯವನ್ನು ಈವರೆಗೆ ಯಾರೂ ಮಾಡಲಿಲ್ಲ. ಬದಲಿಗೆ ಖಾಸಗಿ ಉದ್ಯಮಿಗಳಿಗೆ ಮಣಿದು ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಡಲಾಯಿತು. ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಮುಖಮಂತ್ರಿ ಅದನ್ನು ಹಿಂದೆಗೆದುಕೊಳ್ಳಬೇಕಾಯಿತು.

ರೈತನಿಗೆ ಪ್ರವೇಶ ನೀಡದ ಮಾಲ್‌ನ್ನು ಏಳು ದಿನಗಳ ಬಂದ್ ಮಾಡಲು ಆದೇಶ ನೀಡಿರುವ ಸರಕಾರ, ಕನ್ನಡಿಗರಿಗೆ ಉದ್ಯೋಗ ನೀಡಲು ಹಿಂದೇಟು ಹಾಕುವ, ಕನ್ನಡಿಗರಿಗೆ ಪ್ರತಿಭೆಯಿಲ್ಲ ಎಂದು ಅವಮಾನಿಸಿದ ಬೃಹತ್ ಕಾರ್ಪೊರೇಟ್ ಸಂಸ್ಥೆಯ ಮಾಲಕರ ವಿರುದ್ಧವೂ ಇದೇ ದಿಟ್ಟ ಕ್ರಮವನ್ನು ತೆಗೆದುಕೊಳ್ಳುವ ಧೈರ್ಯವನ್ನು ಪ್ರದರ್ಶಿಸಿದಾಗ ಮಾತ್ರ ಕರ್ನಾಟಕದಲ್ಲಿ ಕನ್ನಡಿಗರ ಹಿತಾಸಕ್ತಿ ಗೆದ್ದೀತು. ಇಲ್ಲವಾದರೆ, ಮಾಲ್‌ನಲ್ಲಿ ರೈತ ಅನುಭವಿಸಿದ ಅವಮಾನವನ್ನು ಮುಂದಿನ ದಿನಗಳಲ್ಲಿ ಎಲ್ಲ ಕನ್ನಡಿಗರು ಖಾಸಗಿ ವಲಯದ ಸಂಸ್ಥೆಗಳಲ್ಲಿ ಎದುರಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News