ವಿಶ್ವವನ್ನು ತಲುಪಬೇಕಾದ ಕ್ರಾಂತಿಕಾರಿ ಬಸವಣ್ಣ

Update: 2024-01-19 04:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಲಿಂಗಾಯತ ಧರ್ಮದ ಸ್ಥಾಪಕರಾಗಿರುವ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ, ರಾಯಭಾರಿ ಎಂದು ಸಂಪುಟ ಸಭೆ ಅಧಿಕೃತವಾಗಿ ಘೋಷಿಸಿದೆ. ಬಸವಣ್ಣ ಕೇವಲ ಲಿಂಗಾಯತ ಧರ್ಮಕ್ಕೆ ಸೀಮಿತರಾದವರಲ್ಲ ಅಥವಾ ಕೇವಲ ಕರ್ನಾಟಕಕ್ಕೆ ಸೀಮಿತರಾದವರೂ ಅಲ್ಲ. ತಮ್ಮ ಚಿಂತನೆಯ ಮೂಲಕ ಅವರು ಇಡೀ ವಿಶ್ವಕ್ಕೆ ಸಲ್ಲಬೇಕಾದವರು. ಕರ್ನಾಟಕ ಬಸವಣ್ಣನ ಮೂಲಕ ವಿಶ್ವದ ಮುಂದೆ ತನ್ನನ್ನು ಗುರುತಿಸಿಕೊಳ್ಳಲು ನಿರ್ಧರಿಸಿದೆ. ಇದು ಒಂದು ಕ್ರಾಂತಿಕಾರಿ ನಡೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವು ಹಿತಾಸಕ್ತಿಗಳು ಬಸವಣ್ಣನನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಲು, ಬಸವಣ್ಣರ ಕ್ರಾಂತಿಕಾರಿ ವಿಚಾರಗಳನ್ನು ಮುಚ್ಚಿಡಲು ಯತ್ನಿಸುತ್ತಿರುವಾಗ, ಕರ್ನಾಟಕ ಇಂದು ಬಸವಣ್ಣರ ಕ್ರಾಂತಿಕಾರಿ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಮುನ್ನಡೆಯಲು ಸಿದ್ಧತೆ ನಡೆಸುತ್ತಿರುವುದು ಒಂದು ಹೊಸ ಬೆಳವಣಿಗೆಯಾಗಿದೆ.

ಕರ್ನಾಟಕದ ಎರಡು ಐತಿಹಾಸಿಕ ವ್ಯಕ್ತಿಗಳು ವಿಶ್ವಮಟ್ಟದಲ್ಲಿ ಶತಮಾನಗಳ ಹಿಂದೆಯೇ ಗುರುತಿಸಲ್ಪಟ್ಟಿದ್ದಾರೆ. ಅವರಲ್ಲಿ ಮೊದಲಿಗರು ಬಸವಣ್ಣನರಾದರೆ, ಎರಡನೆಯವರು ಟಿಪ್ಪು ಸುಲ್ತಾನ್. ಬಸವಣ್ಣನ ಮೂಲಕ ಕರ್ನಾಟಕದಲ್ಲಿ ಒಂದು ಧರ್ಮ ಹುಟ್ಟಿ ವಿಶ್ವಮಟ್ಟದಲ್ಲಿ ಬೆಳೆಯಿತು ಎನ್ನುವುದು ಬರೇ ಕರ್ನಾಟಕಕ್ಕಲ್ಲ ಇಡೀ ಭಾರತಕ್ಕೇ ಹೆಮ್ಮೆಯ ವಿಷಯವಾಗಬೇಕು. ಕನ್ನಡ ಭಾಷೆಯಲ್ಲಿ ಬಸವಣ್ಣ ಮತ್ತು ಉಳಿದ ಶರಣರು ವಚನಗಳನ್ನು ರಚನೆ ಮಾಡಿದರು. ಸರಳಗನ್ನಡದ ಮೂಲಕ ಕ್ರಾಂತಿಕಾರಿ ವಿಚಾರಗಳನ್ನು ಹರಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಹನ್ನೆರಡನೇ ಶತಮಾನದಲ್ಲಿ ಅಂತರ್ಜಾತಿ ವಿವಾಹಗಳನ್ನು ಮಾಡುವ ಪ್ರಯತ್ನ ನಡೆಸಿದರು. ಇಂದಿಗೂ ಭಾರತದಲ್ಲಿ ಅಂತರ್ಜಾತಿ ವಿವಾಹಗಳು ಉದ್ವಿಗ್ನ ವಾತಾವರಣಗಳಿಗೆ, ಮರ್ಯಾದಾ ಹತ್ಯೆಗಳಿಗೆ ಕಾರಣವಾಗುತ್ತಿವೆ. ಹೀಗಿರುವಾಗ ೧೨ನೆ ಶತಮಾನದಲ್ಲಿ ಇಡೀ ಭಾರತಕ್ಕೆ ಬೇಕಾದ ಆದರ್ಶಮಯ ಸಮಾಜವನ್ನು ರೂಪಿಸುವ ಕನಸನ್ನು ಬಸವಣ್ಣ ಕರ್ನಾಟಕದಲ್ಲಿ ಕಂಡರು. ಕೆಳಜಾತಿಯವರೆಂದು ನಿರ್ಲಕ್ಷಿಸಲ್ಪಟ್ಟವರನ್ನು ಕರೆದು ಅವರಿಗೆ ಲಿಂಗ ಧಾರಣೆ ಮಾಡಿಸಿದರು. ಜಾತಿವ್ಯವಸ್ಥೆಯನ್ನು ತಳಮಟ್ಟದಲ್ಲಿ ಇಲ್ಲವಾಗಿಸಲು ಪ್ರಯತ್ನಿಸಿದರು. ಯಾವುದೇ ಪಾಶ್ಚಿಮಾತ್ಯ ಚಿಂತನೆಗಳ ಪ್ರಭಾವವಿಲ್ಲದೆ, ಅಪ್ಪಟ ಕನ್ನಡದ ಮೂಲ ಸತ್ವಗಳ ಜೊತೆಗೆ ಹನ್ನೆರಡನೆ ಶತಮಾನದಲ್ಲಿ ಕ್ರಾಂತಿಯನ್ನು ಮಾಡುವುದು ಸಣ್ಣ ವಿಷಯವಲ್ಲ. ಅದಕ್ಕಾಗಿ ಅವರು ಮತ್ತು ಅವರ ಜೊತೆಗಿದ್ದ ಶರಣರು ಅಪಾರ ತ್ಯಾಗಗಳನ್ನು ಮಾಡಿದರು. ಸಾವಿರಾರು ಶರಣರನ್ನು ಪುರೋಹಿತ ಶಾಹಿಗಳು ಕೊಂದು ಹಾಕಿದರು. ವಿಗ್ರಹಾರಾಧನೆಗಳನ್ನು ನಿರಾಕರಿಸಿ, ಗುಡಿಗುಂಡಾರಗಳನ್ನು ತಿರಸ್ಕರಿಸಿ ‘ಅನುಭವ ಮಂಟಪ’ವನ್ನು ಸ್ಥಾಪಿಸಿದವರು ಶರಣರು. ಅಲ್ಲಿ ಯಾವುದೇ ದೇವರ ಮೂರ್ತಿಗಳಿಗೆ, ಪೂಜೆ ಪುನಸ್ಕಾರಗಳಿಗೆ ಆಸ್ಪದ ನೀಡಲಿಲ್ಲ. ಆತ್ಮಲಿಂಗವನ್ನು ಧ್ಯಾನಿಸುವ ಮೂಲಕ, ದೇವರನ್ನು ಎಲ್ಲ ಕಟ್ಟುಪಾಡುಗಳಿಂದ, ಕಂಧಾಚಾರಗಳಿಂದ ಬಿಡುಗಡೆಗೊಳಿಸಿದರು. ಬಸವಣ್ಣರು ಇಂದು ಬರೇ ಕರ್ನಾಟಕದ ಮಾತ್ರವಲ್ಲ, ಇಡೀ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಬೇಕು. ಅವರ ವಿಚಾರಧಾರೆಗಳಿಗೆ ಸೂಕ್ತ ಮಾನ್ಯತೆ ದೊರಕಿದ್ದರೆ ಇಂದು ಬೌದ್ಧ ಧರ್ಮದಂತೆಯೇ ಲಿಂಗಾಯತ ಧರ್ಮವೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿತ್ತು. ಕನ್ನಡ ನಾಡು ನುಡಿ ಆ ಮೂಲಕ ವಿಶ್ವಮಾನ್ಯವಾಗುತ್ತಿತ್ತು.

ಇದೇ ಸಂದರ್ಭದಲ್ಲಿ ಎಂತಹ ಬಸವಣ್ಣರನ್ನು ನಾವು ವಿಶ್ವಕ್ಕೆ ತಲುಪಿಸಬೇಕಾಗಿದೆ ಎನ್ನುವ ಪ್ರಜ್ಞೆ ನಮಗಿರಬೇಕು. ಇಂದು ಕರ್ನಾಟಕದಲ್ಲಿ ಬಸವಣ್ಣ ಅವರಿಗೆ ಎಂತಹ ಸ್ಥಿತಿಯನ್ನು ನಾವು ತಂದಿಟ್ಟಿದ್ದೇವೆ ಎನ್ನುವುದರ ಬಗ್ಗೆ ಮೊದಲು ಆತ್ಮವಿಮರ್ಶೆ ನಡೆಯಬೇಕು. ಯಾವ ಮಾನವ ವಿರೋಧಿ ಚಿಂತನೆಗಳ ವಿರುದ್ಧ ಹೋರಾಟಕ್ಕೆ ತನ್ನ ಬದುಕನ್ನು ಬಸವಣ್ಣ ಮುಡಿಪಾಗಿಟ್ಟರೋ ಅದೇ ಚಿಂತನೆಗಳು ಇಂದು ಬಸವಣ್ಣ ಅವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಬಸವಣ್ಣರು ಮೂರ್ತಿಪೂಜೆಯನ್ನು ಸಂಪೂರ್ಣ ನಿರಾಕರಿಸಿದ್ದರು. ಜಾತೀಯತೆಯನ್ನು ಪ್ರೋತ್ಸಾಹಿಸುವ ಎಲ್ಲ ಆಚಾರ, ಸಂಪ್ರದಾಯಗಳನ್ನು ತಮ್ಮ ವಚನಗಳಲ್ಲಿ ಕಟುವಾಗಿ ವಿರೋಧಿಸಿದ್ದರು. ಶಾಸ್ತ್ರ, ಪುರಾಣಗಳನ್ನು ವ್ಯಂಗ್ಯವಾಡಿದ್ದರು. ಅಸ್ಪಶ್ಯತೆಯನ್ನು ಸಾರಾಸಗಟಾಗಿ ನಿರಾಕರಿಸಿದ್ದರು. ಆದರೆ ಇಂದು ವೈದಿಕ ಶಕ್ತಿಗಳು ಬಸವಣ್ಣರನ್ನು ತೆಕ್ಕೆಗೆ ತೆಗೆದುಕೊಳ್ಳಲು ಹೊರಟಿದೆ. ಬಸವಣ್ಣ ಯಾವುದನ್ನು ವಿರೋಧಿಸಿದ್ದರೋ ಅದನ್ನು ಬಸವಣ್ಣ ಅವರ ಹೆಸರಿನಲ್ಲಿ ಮತ್ತೆ ಜಾರಿಗೆ ತರಲು ಪ್ರಯತ್ನಿಸುತ್ತಿವೆ.ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಶೈವ ಪಂಥದ ಜೊತೆಗೆ ಜೋಡಿಸುವ ಪ್ರಯತ್ನವೂ ಇನ್ನೊಂದೆಡೆ ನಡೆಯುತ್ತಿದೆ. ಇದರಿಂದ ಶೈವ ಪಂಥ ಆಚರಿಸುವ ಅಸ್ಪಶ್ಯತೆ, ಜಾತೀಯತೆ, ಶಾಸ್ತ್ರ ಸಂಪ್ರದಾಯಗಳು ಮತ್ತೆ ಬಸವಣ್ಣರ ಹೆಸರಿನಲ್ಲಿ ಲಿಂಗಾಯತರ ಹೆಗಲೇರಿದೆ. ಅಷ್ಟೇ ಅಲ್ಲ, ವೈದಿಕ ಕಂದಾಚಾರಗಳನ್ನು ಲಿಂಗಾಯತ ಧರ್ಮದೊಳಗೆ ಸೇರಿಸಿ ಬಸವಣ್ಣನ ವಿಚಾರಧಾರೆಗಳನ್ನು ವಿರೂಪಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದುದರಿಂದ ಮೊತ್ತ ಮೊದಲು, ಕನ್ನಡಿಗರೇ ಬಸವಣ್ಣ ಯಾರು, ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಆ ಬಳಿಕ ಅವರನ್ನು, ಅವರ ಸಂದೇಶಗಳನ್ನು ವಿಶ್ವಕ್ಕೆ ತಲುಪಿಸ ಬೇಕಾಗಿದೆ.

ಒಂದು ಕಾಲದಲ್ಲಿ ಬೇರೆ ಬೇರೆ ಶೋಷಿತ ಸಮುದಾಯವನ್ನು ತೆಕ್ಕೆಗೆ ತೆಗೆದುಕೊಂಡ ಲಿಂಗಾಯತ ಧರ್ಮ, ಇಂದು ಸ್ವತಃ ಅಸ್ಪಶ್ಯತೆಯನ್ನು ಆಚರಿಸುತ್ತಿರುವುದರ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಕೆಳಜಾತಿಯ ಜನರನ್ನು ಅಸ್ಪಶ್ಯರಂತೆ ಬಸವಣ್ಣನ ಅನುಯಾಯಿಗಳೇ ನೋಡುತ್ತಾರೆ ಎಂದಾದರೆ ಅದು ಬಸವಣ್ಣರಿಗೆ ಮಾಡುವ ಬಹುದೊಡ್ಡ ಅನ್ಯಾಯ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಂತರ್ಜಾತಿ ವಿವಾಹ ಮಾಡಿ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಬಸವಣ್ಣ ಅನುಯಾಯಿಗಳೇ ಇಂದು ಅಂತರ್ಜಾತಿ ವಿವಾಹಗಳಿಗೆ ಶತ್ರುವಾಗಿದ್ದಾರೆ. ಈ ಬಗ್ಗೆ ಲಿಂಗಾಯತಧರ್ಮದೊಳಗೂ ಜಾಗೃತಿಯಾಗಬೇಕಾಗಿದೆ. ಶರಣರು ಕಾಯಕ ಯೋಗಿಗಳು. ಅಂದರೆ ದುಡಿಮೆಯನ್ನೇ ಯೋಗವಾಗಿ ಸ್ವೀಕರಿಸಿದವರು. ಹಾಗೆಯೇ ದಾಸೋಹದ ಮೇಲೆ ನಂಬಿಕೆಯನ್ನು ತಳೆದವರು. ಅನ್ನದಾಸೋಹ, ಅಕ್ಷರ ದಾಸೋಹದ ಮೂಲಕ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಜಂಗಮರು ಕರ್ನಾಟಕದಲ್ಲಿ ಆಗಿ ಹೋಗಿದ್ದಾರೆ. ಈ ತತ್ವವನ್ನು ವಿಶ್ವದೆಡೆಗೆ ಪಸರಿಸುವ ಕೆಲಸ ಸರಕಾರದಿಂದ ಆಗಬೇಕು. ತನ್ನ ಉಚಿತ ಅನ್ನ ಭಾಗ್ಯದಂತಹ ಯೋಜನೆಗಳಿಗೆ ಬಸವಣ್ಣನ ವಿಚಾರಧಾರೆಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಹಾಗೆಯೇ ಅಕ್ಷರ ದಾಸೋಹದ ಮೂಲಕ ಎಲ್ಲ ಸರಕಾರಿ ಶಾಲೆಗಳಿಗೆ ಪುನರುಜ್ಜೀವ ನೀಡುವ ಕೆಲಸವೂ ಸರಕಾರದಿಂದ ಆಗಬೇಕು.

ಬಸವಣ್ಣ ಹಿಂದೆಯೂ ಸಾಂಸ್ಕೃತಿಕ ನಾಯಕರೇ ಆಗಿದ್ದರು. ಸಂಪುಟದಲ್ಲಿ ಅಧಿಕೃತವಾಗಿ ಘೋಷಣೆ ಮಾಡುವುದರಿಂದ ಏನು ಬದಲಾವಣೆಯಾಯಿತು ಎನ್ನುವುದು ಕೂಡ ಮುಖ್ಯವಾಗುತ್ತದೆ. ಬಸವಣ್ಣರನ್ನು ಚುನಾವಣಾ ರಾಜಕೀಯಕ್ಕೆ ಬಳಸದೆ, ಅವರ ವಿಚಾರಧಾರೆಗಳನ್ನು ಅಂತರ್ರಾಷ್ಟ್ರೀಯಮಟ್ಟದಲ್ಲಿ ಹರಡುವುದರ ಬಗ್ಗೆ ಸರಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬೇರೆ ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ವಚನಗಳು, ಬಸವ ಚಿಂತನೆಗಳು ಪಠ್ಯಗಳಾಗಬೇಕು. ಬಸವಣ್ಣ ಮೂರ್ತಿ ಪೂಜೆಗಳ ವಿರೋಧಿ. ಇಂದು ಅವರನ್ನೇ ಪ್ರತಿಮೆಗಳಲ್ಲಿ ಬಂಧಿಸಿಡುವ ಕೆಲಸ ನಡೆಯುತ್ತಿದೆ. ಅವರ ಮೂರ್ತಿ ಸ್ಥಾಪನೆಗಿಂತ, ವಿಶ್ವದ ವಿವಿಧೆಡೆಗಳಲ್ಲಿ ಅನುಭವ ಮಂಟಪಗಳನ್ನು ಸ್ಥಾಪಿಸುವಂತೆ ಮಾಡಿ, ಅಲ್ಲಿ ಅಸ್ಪಶ್ಯತೆಯ ವಿರುದ್ಧ, ಜಾತೀಯತೆಯ ವಿರುದ್ಧ ಬಸವಣ್ಣ ಪ್ರತಿಪಾದಿಸಿದ ಚಿಂತನೆಗಳ ಕುರಿತಂತೆ ಕಾರ್ಯಕ್ರಮಗಳು ನಡೆಯಬೇಕು. ‘‘ಇವನಾರವ, ಇವನಾರವ ಎಂದೆನಿಸದಿರಯ್ಯ. ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ’’ ಎಂಬ ಬಸವಣ್ಣನ ವಚನದ ಸಾಲುಗಳ ಮೂಲಕ ಎಲ್ಲ ಜಾತಿ, ವರ್ಗ, ದೇಶ, ಗಡಿಗಳನ್ನು ಮೀರಿ ವಿಶ್ವವನ್ನು ಕರ್ನಾಟಕ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News