ಕೇಂದ್ರೀಯ ತನಿಖಾ ಸಂಸ್ಥೆಗಳ ಪಕ್ಷಪಾತ

Update: 2023-10-31 04:20 GMT

ಒಂಭತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರತಿಪಕ್ಷಗಳನ್ನು, ಪ್ರತಿರೋಧವನ್ನು ನಿರ್ದಾಕ್ಷಿಣ್ಯವಾಗಿ ದಮನ ಮಾಡಲು ಕೇಂದ್ರೀಯ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಸಿಬಿಐ, ರಾಷ್ಟ್ರೀಯ ತನಿಖಾ ಸಂಸ್ಥೆ ಮುಂತಾದವುಗಳನ್ನು ಮಿತಿ ಮೀರಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸರಕಾರದ ಲೋಪ ದೋಷಗಳನ್ನು ಪ್ರತಿಪಕ್ಷಗಳು ಮಾತ್ರವಲ್ಲ ಜನಸಾಮಾನ್ಯರು ಕೂಡ ಟೀಕಿಸಬಹುದು. ಇದನ್ನು ಅಧಿಕಾರದಲ್ಲಿ ಇರುವವರು ಸ್ವಾಗತಿಸಿ ತಮ್ಮ ಲೋಪಗಳನ್ನು ತಿದ್ದಿಕೊಳ್ಳಬೇಕು.ಇದು ಜನತಂತ್ರ ವ್ಯವಸ್ಥೆಯ ಸಹಜ ತತ್ವ. ಆದರೆ ಈಗಿನ ಸರಕಾರಕ್ಕೆ ವಿಮರ್ಶೆ ಮತ್ತು ಟೀಕೆಗಳ ಬಗ್ಗೆ ವಿಪರೀತ ಅಸಹನೆಯಿದೆ. ತನಿಖಾ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಅದು ಹೊರಟಿದೆ.

ಯಾವುದೇ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಇಷ್ಟದಂತೆ ಜನರು ಮತ ಹಾಕಿ ಮತ್ತೆ ಅಧಿಕಾರಕ್ಕೆ ತರಬೇಕೆಂದು ಕೇಂದ್ರದ ಅಧಿಕಾರ ಸೂತ್ರ ಹಿಡಿದವರು ಬಯಸುತ್ತಾರೆ. ಜನರ ಆದೇಶ ತನಗೆ ಪ್ರತಿಕೂಲ ವಾಗಿದ್ದರೆ ಅಲ್ಲಿ ‘ಆಪರೇಶನ್ ಕಮಲ’ ಕಾರ್ಯಾಚರಣೆ ನಡೆಸಿ ಚುನಾಯಿತ ಸರಕಾರವನ್ನು ಉರುಳಿಸಿ, ಶಾಸಕರನ್ನು ಖರೀದಿ ಮಾಡಿ ತನ್ನ ಸರಕಾರವನ್ನು ಬಿಜೆಪಿ ಪ್ರತಿಷ್ಠಾಪಿಸುತ್ತದೆ. ಆಮಿಷಕ್ಕೆ ಬಲಿಯಾಗದವರ ಮನೆ, ಕಚೇರಿಗಳ ಮೇಲೆ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿಸುತ್ತದೆ.

ರಾಜಸ್ಥಾನದಲ್ಲಿ ಈಗ ವಿಧಾನಸಭಾ ಚುನಾವಣೆ. ಅಲ್ಲಿ ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿಯ ಬಯಕೆ ತಪ್ಪಿಲ್ಲ. ಆದರೆ ಅದಕ್ಕಾಗಿ ಮತದಾರರ ಮನೆ ಬಾಗಿಲಿಗೆ ಹೋಗಿ ಮತ ಯಾಚನೆ ಮಾಡಲಿ, ಅಲ್ಲಿನ ಕಾಂಗ್ರೆಸ್ ಸರಕಾರದ ವೈಫಲ್ಯಗಳ ಬಗ್ಗೆ ಪ್ರಚಾರ ಮಾಡಲಿ ಅಭ್ಯಂತರವಿಲ್ಲ. ಆದರೆ ಕೇಂದ್ರದ ಬಿಜೆಪಿ ಸರಕಾರ ವಿರೋಧ ಪಕ್ಷಗಳನ್ನು ಮಣಿಸಲು ನ್ಯಾಯವಲ್ಲದ ದಾರಿ ಹಿಡಿದಿದೆ. ರಾಜಸ್ಥಾನದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಾಲಿ ವಿಧಾನಸಭಾ ಸದಸ್ಯರೂ ಆಗಿರುವ ಗೋವಿಂದ ಸಿಂಗ್ ದೊತ್ಸಾರಾ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯದ ಮೂಲಕ ದಾಳಿ ಮಾಡಿಸಿ ಮನೆಯನ್ನು ಶೋಧ ಮಾಡಿದೆ. ಅಲ್ಲದೆ ಸಿಕಾರ್ ಜಿಲ್ಲೆಯ ಲಚಮಘರ್ ಕ್ಷೇತ್ರದಿಂದ ಸ್ಪರ್ಧಿಸಲಿರುವ ಗೋವಿಂದ ಸಿಂಗ್ ಮನೆಯ ಮೇಲೆ ಮಾತ್ರವಲ್ಲ ಹಾಲಿ ಪಕ್ಷೇತರ ಶಾಸಕ ಹಾಗೂ ಈ ಬಾರಿ ಮಾಹು ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುತ್ತಿರುವ ಓಂ ಪ್ರಕಾಶ್ ಮನೆ ಮೇಲೆ ಕೂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದರ ಉದ್ದೇಶ ಸ್ಪಷ್ಟ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಖಳನಾಯಕರಂತೆ ಬಿಂಬಿಸುವುದು.

ಇವರಿಬ್ಬರ ಮೇಲೆ ಮಾತ್ರವಲ್ಲ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ನೋಟಿಸ್ ನೀಡಿದೆ. ರಾಜಸ್ಥಾನದಲ್ಲಿ ಜನಕಲ್ಯಾಣ ಕಾರ್ಯಕ್ರಮಗಳ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಲೆಕ್ಕಾಚಾರ ನಡೆಸಿರುವ ಗೆಹ್ಲೋಟ್‌ಗೆ ಪೂರಕವಾದ ವಾತಾವರಣವಿದೆ. ಪಕ್ಷದ ಒಳಗಿನ ಸಚಿನ್ ಪೈಲೆಟ್ ಜೊತೆಗಿನ ಭಿನ್ನಾಭಿಪ್ರಾಯಗಳನ್ನೂ ಗೆಹ್ಲೋಟ್ ಬಗೆಹರಿಸಿಕೊಂಡಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ರಾಜಸ್ಥಾನದ ಬಿಜೆಪಿ ಕರ್ನಾಟಕದ ಬಿಜೆಪಿಯಂತೆ ಒಡೆದ ಮನೆಯಾಗಿದೆ. ಪಕ್ಷದ ಒಳಗಿನ ಜಗಳ ಬೀದಿಗೆ ಬಂದಿದೆ.ಇದನ್ನೆಲ್ಲ ಮುಚ್ಚಿಕೊಳ್ಳಲು ದಿಲ್ಲಿಯ ಬಿಜೆಪಿ ವರಿಷ್ಠ ನಾಯಕರು ತನಿಖಾ ಸಂಸ್ಥೆಗಳ ಮೂಲಕ ಕಾಂಗ್ರೆಸ್ ನಾಯಕರನ್ನು ಬೆದರಿಸಲು ಹೊರಟಿದ್ದಾರೆ.

ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕಲು ಈ ಐಟಿ ಮತ್ತು ಈ.ಡಿ. ದಾಳಿ ನಡೆಯುತ್ತಿದೆ. ಅದು ಸ್ವತಂತ್ರ ಸಂಸ್ಥೆ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ದಾಳಿ ನಿಷ್ಪಕ್ಷಪಾತದಿಂದ ಕೂಡಿದ್ದರೆ ಭ್ರಷ್ಟ ಬಿಜೆಪಿ ನಾಯಕರ ಮತ್ತು ಮಂತ್ರಿಗಳ ಮನೆ, ಕಚೇರಿಗಳ ಮೇಲೇಕೆ ತನಿಖಾ ಸಂಸ್ಥೆಗಳ ದಾಳಿ ನಡೆಯುತ್ತಿಲ್ಲ? ಬಿಜೆಪಿಯಲ್ಲಿ ಇರುವವರೆಲ್ಲ ಸತ್ಯ ಹರಿಶ್ಚಂದ್ರರೇ? ಅವರು ತಿನ್ನಬಾರದ ಹೊಲಸನ್ನು ತಿಂದೇ ಇಲ್ಲವೇ? ತನಿಖಾ ಸಂಸ್ಥೆಗಳು ಅಧಿಕಾರದಲ್ಲಿ ಇರುವ ರಾಜಕೀಯ ಪಕ್ಷದ ಆಣತಿಯಂತೆ ಕಾರ್ಯನಿರ್ವಹಿಸಬಾರದು. ರಾಜಸ್ಥಾನ ಮಾತ್ರವಲ್ಲ ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ ಮುಂತಾದ ಕಡೆ ಕೇಂದ್ರೀಯ ತನಿಖಾ ಸಂಸ್ಥೆಗಳು ನಡೆಸಿದ ಕಾರ್ಯಾಚರಣೆ ನಿಷ್ಪಕ್ಷಪಾತವಾಗಿತ್ತೇ?

ಇತ್ತೀಚಿನ ಹತ್ತು ವರ್ಷಗಳಲ್ಲಿ ಚುನಾಯಿತ ಸರಕಾರಗಳನ್ನು ಉರುಳಿಸಲು ನಡೆದ ಭಾರೀ ಪ್ರಮಾಣದ ಪಕ್ಷಾಂತರದ ಲಾಭವಾಗಿದ್ದು ಯಾವ ಪಕ್ಷಕ್ಕೆ? ಮಧ್ಯಪ್ರದೇಶದಲ್ಲಿ ಚುನಾಯಿತ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಇದೇ ತನಿಖಾ ಸಂಸ್ಥೆಗಳನ್ನು ಮೋದಿ ನೇತೃತ್ವದ ಬಿಜೆಪಿ ಸರಕಾರ ದುರ್ಬಳಕೆ ಮಾಡಿಕೊಳ್ಳಲಿಲ್ಲವೇ! ಕರ್ನಾಟಕದಲ್ಲಿ ಹಿಂದೆ ನಡೆದ ಆಪರೇಶನ್ ಕಮಲ ಮತ್ತು ಈಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ನಡೆಸಿದ ಮಸಲತ್ತಿನಲ್ಲಿ ನಿಜವಾದ ಖಳ ನಾಯಕರು ಯಾರು?!

ಕರ್ನಾಟಕ ವಿಧಾನಸಭೆ ಚುನಾವಣೆ ನಡೆದು ಮತದಾರರು 136 ಸ್ಥಾನಗಳನ್ನು ನೀಡಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಈ ಜನಾದೇಶವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮರ್ಯಾದೆಯಿಂದ ಒಪ್ಪಿಕೊಂಡು ಜನಾದೇಶವನ್ನು ಗೌರವಿಸಬೇಕಾಗಿತ್ತು. ಅದರ ಬದಲಿಗೆ ಈ ಸರಕಾರ ಬಂದಾಗಿನಿಂದ ಅದನ್ನು ಹೇಗಾದರೂ ಮಾಡಿ ಉರುಳಿಸಲು ಮಸಲತ್ತು ನಡೆಸುತ್ತಲೇ ಇವೆ. ಐಟಿ, ಈ.ಡಿ., ಸಿಬಿಐ ದಾಳಿಗಳ ಬೆದರಿಕೆಯನ್ನೂ ಹಾಕಲಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.

ಈ ಎಲ್ಲಾ ವಿದ್ಯಮಾನಗಳಿಂದಾಗಿ ಸ್ವಾಯತ್ತ ಎಂದು ಈ ವರೆಗೆ ಕರೆಯಲ್ಪಡುತ್ತಿದ್ದ ಕೇಂದ್ರೀಯ ತನಿಖಾ ಸಂಸ್ಥೆಗಳ ಕಾರ್ಯವೈಖರಿ ಮತ್ತು ನಿಷ್ಪಕ್ಷಪಾತತೆ ಬಗ್ಗೆ ಸಹಜವಾಗಿ ಸಂದೇಹ ಉಂಟಾಗುತ್ತದೆ. ಸ್ವಾತಂತ್ರ್ಯಾನಂತರ ಈ ಹಿಂದೆ ಇದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಸೇರಿದಂತೆ ಯಾವ ಸರಕಾರವೂ ಈ ರೀತಿ ಅತ್ಯಂತ ಅಗ್ಗವಾಗಿ ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ಹಿತಾಸಕ್ತಿಗಳ ಸಲುವಾಗಿ ಬಳಸಿಕೊಂಡಿರಲಿಲ್ಲ.

ತನಿಖಾ ಸಂಸ್ಥೆಗಳ ಕಿರಿಕಿರಿಯಿಂದ ಪಾರಾಗಲು ಪ್ರತಿಪಕ್ಷ ನಾಯಕರು ಬಿಜೆಪಿಯನ್ನು ಸೇರಿದರೆ ಅಂಥವರಿಗೆ ತನಿಖೆಯಿಂದ ವಿನಾಯಿತಿ ನೀಡಲಾಗುತ್ತದೆ. ಉದಾಹರಣೆಗೆ ಬಿಜೆಪಿ ಸೇರಿರುವ ಮುಕುಲ್‌ರಾಯ್, ನಾರಾಯಣ ರಾಣೆ, ಹಿಮಂತ ಬಿಸ್ವಾ ಶರ್ಮಾ ಮುಂತಾದವರ ಬಗೆಗಿನ ಸಿಬಿಐ ತನಿಖೆ ನಿಧಾನಗತಿಯಲ್ಲಿ ಸಾಗಿರುವುದೇಕೆ? ತನಿಖಾ ಸಂಸ್ಥೆಗಳನ್ನು ಮಾತ್ರವಲ್ಲ ಚುನಾವಣಾ ಆಯೋಗದಂಥ ಸ್ವಾಯತ್ತ, ಸಾಂವಿಧಾನಿಕ ಸಂಸ್ಥೆಗಳನ್ನು ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ರಾಜಕೀಯ ಹಿತಾಸಕ್ತಿಗಳ ಸಲುವಾಗಿ ಬಳಸಿಕೊಳ್ಳುತ್ತಿಲ್ಲವೇ?ಇದಕ್ಕೆ ಕೊನೆ ಯಾವಾಗ? ಇದೇ ಪರಿಸ್ಥಿತಿ ಮುಂದುವರಿದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗಿ ನಿರಂಕುಶ ಆಡಳಿತ ಬರುತ್ತದೆ ಎಂಬುದನ್ನು ಮರೆಯಬಾರದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News