ಬಿಲ್ಕಿಸ್ ಬಾನು ಪ್ರಕರಣ: ಗುಜರಾತ್ ಸರಕಾರಕ್ಕೆ ಮುಖಭಂಗ

Update: 2024-01-09 08:24 GMT

ಬಿಲ್ಕಿಸ್ ಬಾನು Photo: twitter.com/radwitchhh

11ಮಂದಿ ಪಾತಕಿಗಳು Photo: twitter.com/RSPraveenSwaero

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ನಡೆದ ಕೋಮು ಹಿಂಸಾಚಾರ ಹಾಗೂ ಹತ್ಯಾಕಾಂಡದ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11ಮಂದಿ ಪಾತಕಿಗಳ ಶಿಕ್ಷೆಯನ್ನು ಕಡಿತಗೊಳಿಸಿ ಅವರನ್ನು ಬಿಡುಗಡೆ ಮಾಡಿದ್ದ ಗುಜರಾತ್‌ ನ ಬಿಜೆಪಿ ಸರಕಾರದ ಆದೇಶವನ್ನು ರದ್ದುಗೊಳಿಸುವ ಚಾರಿತ್ರಿಕ ತೀರ್ಪನ್ನು ಸೋಮವಾರ ಸುಪ್ರೀಂ ಕೋರ್ಟ್ ನೀಡಿದೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಪಾತಕಿಗಳ ಶಿಕ್ಷೆಯನ್ನು ಕಡಿತಗೊಳಿಸುವ ಅಧಿಕಾರ ಗುಜರಾತ್ ಸರಕಾರಕ್ಕೆ ಇಲ್ಲ ಎಂದು ಛೀಮಾರಿ ಹಾಕಿದೆ. ಹೀಗಾಗಿ ಸಾಮೂಹಿಕ ಅತ್ಯಾಚಾರಕ್ಕೆ ಕಾರಣರಾದ ಎಲ್ಲಾ ಹನ್ನೊಂದು ಮಂದಿ ದುಷ್ಕರ್ಮಿಗಳು ಮತ್ತೆ ಜೈಲಿಗೆ ಹೋಗಬೇಕಾಗಿದೆ.

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಹನ್ನೊಂದು ಮಂದಿ ಪಾತಕಿಗಳನ್ನು ಬಿಡುಗಡೆಗೊಳಿಸಿದ್ದನ್ನು ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, ಗುಜರಾತ್ ಸರಕಾರ 2022 ಮೇ 13ನೇ ತಾರೀಕು ನೀಡಿದ್ದ ತೀರ್ಪು ಅಮಾನ್ಯವಾಗಿದೆ. ಯಾಕೆಂದರೆ ಅದು ನ್ಯಾಯಾಲಯಕ್ಕೆ ವಂಚಿಸಿ, ವಾಸ್ತವ ಸಂಗತಿಗಳನ್ನು ಮರೆಮಾಚಿ ಪಡೆದುಕೊಂಡರ ತೀರ್ಪಾಗಿತ್ತು ಎಂದು ಹೇಳಿದೆ.

ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ, ಕ್ರೂರ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳ ಶಿಕ್ಷೆಯನ್ನು ಕಡಿತಗೊಳಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಅಪರಾಧ ನಡೆದ ರಾಜ್ಯಗಳಿಗೆ ಶಿಕ್ಷೆ ಕಡಿತಗೊಳಿಸುವ ಅಧಿಕಾರವಿಲ್ಲ ಎಂದು ಹೇಳಿದೆ. ಗುಜರಾತ್ ಸರಕಾರ 2022ರಲ್ಲಿ ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಈ ಬಗ್ಗೆ ಪ್ರತಿಪಕ್ಷಗಳು, ಸಾಮಾಜಿಕ ಹೋರಾಟಗಾರರು ವ್ಯಾಪಕ ಪ್ರತಿಭಟನೆಯನ್ನು ನಡೆಸಿದ್ದರು. ಅಪರಾಧಿಗಳನ್ನು ಬಿಡುಗಡೆ ಮಾಡಲಾಗುವ ಬಗ್ಗೆ ತಮಗೂ ಮಾಹಿತಿ ಇರಲಿಲ್ಲ ಎಂದು ಸಂತ್ರಸ್ತೆ ಬಿಲ್ಕಿಸ್ ಬಾನು ಹೇಳಿದ್ದರು.

ಬಿಲ್ಕಿಸ್‌ಬಾನು ಮಾತ್ರವಲ್ಲದೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕಿ ಸುಭಾಷಿಣಿ ಅಲಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ, ಪತ್ರಕರ್ತೆ ರೇವತಿ ಲೌಲ್ ಹಾಗೂ ಲಕ್ನೊ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ರೂಪರೇಖಾ ವರ್ಮಾ ಸಹಿತ ಹಲವು ಮಾನವ ಹಕ್ಕು ಹೋರಾಟಗಾರರು ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಿದ್ದರು.

ಗುಜರಾತಿನಲ್ಲಿ 2002ರಲ್ಲಿ ನಡೆದ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಆಗ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಮೂರು ವರ್ಷದ ಪುತ್ರಿ ಸಹಿತ ಕುಟುಂಬದ ಏಳು ಮಂದಿಯನ್ನು ಈ ಪಾತಕಿಗಳು ಹತ್ಯೆ ಮಾಡಿದ್ದರು.

ಸಂವಿಧಾನದ ಮೂಲಕ ಅಸ್ತಿತ್ವಕ್ಕೆ ಬಂದು ಸಂವಿಧಾನ ವಿರೋಧಿ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಗುಜರಾತಿನ ಬಿಜೆಪಿ ಸರಕಾರ ಕುಖ್ಯಾತಿ ಗಳಿಸಿದೆ. ಅಪರಾಧ ಎಸಗಿದವರು ಸಮಾಜದ ಮೇಲ್ಜಾತಿ ಮತ್ತು ಮೇಲ್ವರ್ಗಗಳಿಗೆ ಸೇರಿದವರು. ಕೋಮುವಾದಿ ಸಂಘಟನೆಗಳ ಬೆಂಬಲಿಗರು. ಭಾರತೀಯ ಸಮಾಜದಲ್ಲಿ ಮೇಲ್ಜಾತಿ ಮತ್ತು ಮೇಲ್ವರ್ಗದ ಜನ ಯಾವುದೇ ಕೊಲೆ, ಅತ್ಯಾಚಾರ ಮಾಡಿ ದಕ್ಕಿಸಿಕೊಳ್ಳಬಲ್ಲರು ಎಂಬುದಕ್ಕೆ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ ಒಂದು ಉದಾಹರಣೆಯಾಗಿದೆ. ರಾಜಕೀಯ ಅಧಿಕಾರ ಕೋಮುವಾದಿ ಶಕ್ತಿಗಳ ಕೈಗೆ ಸಿಕ್ಕ ನಂತರ ನ್ಯಾಯಾಲಯದ ತೀರ್ಪುಗಳನ್ನೇ ಬುಡಮೇಲು ಮಾಡುವಷ್ಟು ಈ ಶಕ್ತಿಗಳು ಪ್ರಭಾವ ಶಾಲಿಯಾಗಿವೆ.

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ ನ್ಯಾಯವಾಗಿ ಅಪರಾಧಿಗಳನ್ನು ಗಲ್ಲಿಗೆ ಹಾಕಬೇಕಾಗಿತ್ತು. ಆದರೆ ಈ ಪಾತಕಿಗಳು ನ್ಯಾಯಾಲಯದ ಮೆಟ್ಟಿಲು ಏರಿ ಮರಣ ದಂಡನೆಯಿಂದ ಪಾರಾಗಿ ಜೀವಾವಧಿ ಶಿಕ್ಷೆ ಎಂದು ಬದಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಘಟನೆ ನಡೆದ ಹದಿನಾಲ್ಕು ವರ್ಷಗಳ ನಂತರ ಗುಜರಾತಿನ ಬಿಜೆಪಿ ಸರಕಾರದ ಕ್ಷಮಾದಾನ ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಅವರನ್ನು ಕೋಮುವಾದಿ ಸಂಘಟನೆಗಳ ಕಾರ್ಯಕರ್ತರು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಿ ಸಂಭ್ರಮಿಸಿದ್ದರು. ಇದು ನಮ್ಮ ಸಮಾಜ ತಲುಪಿದ ಅಧೋಗತಿಗೆ ಒಂದು ಉದಾಹರಣೆಯಾಗಿದೆ. ಮಾಧ್ಯಮಗಳು ಉದ್ಯಮಗಳಾಗಿ ಕೋಮುವಾದಿಗಳ ತುತ್ತೂರಿಯಾದ ನಂತರ ಅವುಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆರೋಪಿಗಳ ರಕ್ಷಣೆಗೆ ಕೇಂದ್ರ ಸರಕಾರವೂ ಪರೋಕ್ಷವಾಗಿ ಕೈಜೋಡಿಸಿರುವುದನ್ನು ಈ ಸಂದರ್ಭದಲ್ಲಿ ನಾವು ನಿರ್ಲಕ್ಷಿಸುವಂತಿಲ್ಲ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲೂ ಈ ಆರೋಪಿಗಳನ್ನು ಅಮಿತ್ ನೇತೃತ್ವದ ತಂಡ ಯಾವ ಲಜ್ಜೆಯಿಲ್ಲದೆ ಬಳಸಿಕೊಂಡಿತ್ತು. ಸುಪ್ರೀಂಕೋರ್ಟ್ ತೀರ್ಪು ಇವರೆಲ್ಲರಿಗೂ ತಪರಾಕಿಯನ್ನು ನೀಡಿದೆ.

ಗುಜರಾತ್ ಮಾತ್ರವಲ್ಲ ಇವರದೇ ಪರಿವಾರದ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ದೇಹವನ್ನು ಪೊಲೀಸರೇ ಸುಟ್ಟು ಹಾಕಿದ್ದರು. ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳನ್ನು ರಕ್ಷಿಸಲು ಅಲ್ಲಿನ ಸರಕಾರ ಲಜ್ಜೆ ಗೆಟ್ಟು ನಿಂತಿತು.

ಈ ಐತಿಹಾಸಿಕ ತೀರ್ಪು ನೀಡಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರು ನಮ್ಮ ಕರ್ನಾಟಕದ ಮಂಡ್ಯದವರು ಎಂಬುದು ಹೆಮ್ಮೆಯ ಸಂಗತಿ.ಇವರ ತಂದೆ ಇ.ಎಸ್. ವೆಂಕಟರಾಮಯ್ಯನವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದರು. ನ್ಯಾಯಮೂರ್ತಿ ನಾಗರತ್ನಾ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನಂತರ ಇಂತಹ ಹಲವಾರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News