ಬಿಲ್ಕಿಸ್ ಬಾನು ಪ್ರಕರಣ: ಗುಜರಾತ್ ಸರಕಾರಕ್ಕೆ ಯಾಕಿಲ್ಲ ಶಿಕ್ಷೆ?

Update: 2024-01-12 04:47 GMT

ಬಿಲ್ಕಿಸ್ ಬಾನು Photo: PTI 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಗೈದು ಆಕೆಯ ಕುಟುಂಬ ಸದಸ್ಯರನ್ನು ಬರ್ಬರವಾಗಿ ಕೊಂದು ಹಾಕಿದ 11 ದೋಷಿಗಳ ಬಿಡುಗಡೆಯನ್ನು ಸುಪ್ರೀಂಕೋರ್ಟ್ ರದ್ದು ಮಾಡಿದಾಗ, ಕೊನೆಗೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿತು ಎಂದು ಸಂವಿಧಾನ ಪರವಾಗಿರುವವರು ಸಂಭ್ರಮಿಸಿದರು. ಆದರೆ ಇಲ್ಲಿ ಸುಪ್ರೀಂಕೋರ್ಟ್ ಸಂತ್ರಸ್ತರಿಗೆ ನ್ಯಾಯ ಕೊಟ್ಟಿರುವುದಲ್ಲ. ಬದಲಿಗೆ ಸಂತ್ರಸ್ತರಿಗಾದ ಇನ್ನೊಂದು ಅನ್ಯಾಯವನ್ನು ಕೊನೆಯ ಕ್ಷಣದಲ್ಲಿ ಸುಪ್ರೀಂಕೋರ್ಟ್ ಸರಿಪಡಿಸಿತು. 11 ಅಪರಾಧಿಗಳ ಆರೋಪ ಸಾಬೀತಾಗಿ ಅವರು ಜೀವಾವಧಿ ಶಿಕ್ಷೆಗೆ ಈಡಾದ ಬಳಿಕವೂ, ಗುಜರಾತ್ ಸರಕಾರ ಮಧ್ಯ ಪ್ರವೇಶಿಸಿ ಅವರನ್ನು ಬಿಡುಗಡೆಗೊಳಿಸಿ ಸಂತ್ರಸ್ತರ ಗಾಯಗಳಿಗೆ ಬರೆ ಎಳೆಯಿತು. ಗುಜರಾತ್ ಸರಕಾರ ಏಕಕಾಲದಲ್ಲಿ ಸಂತ್ರಸ್ತರಿಗೂ, ಸ್ವತಃ ನ್ಯಾಯಾಲಯಕ್ಕೂ ವಂಚಿಸಿತ್ತು. ದೋಷಿಗಳ ಬಿಡುಗಡೆಯನ್ನು ರದ್ದು ಮಾಡುವ ಮೂಲಕ ಸುಪ್ರೀಂಕೋರ್ಟ್ ಸ್ವತಃ ತನಗೆ ತಾನೇ ನ್ಯಾಯ ನೀಡಿತು. ಅಪರಾಧಿಗಳ ಬಿಡುಗಡೆ ಸಂತ್ರಸ್ತರಿಗೆ ಮಾಡಿದ ಎರಡನೆಯ ಅನ್ಯಾಯವಾಗಿತ್ತು. ಆ ಅನ್ಯಾಯವನ್ನು ಸುಪ್ರೀಂಕೋರ್ಟ್ ಸರಿಪಡಿಸಿತೇ ಹೊರತು, ಬಿಲ್ಕಿಸ್ ಬಾನು ಅವರಿಗೆ ಇದರಿಂದ ವಿಶೇಷ ನ್ಯಾಯವೇನೂ ಸಿಕ್ಕಂತಾಗಲಿಲ್ಲ.

ಈ 11 ಮಂದಿ ದೋಷಿಗಳ ಬಿಡುಗಡೆಯನ್ನು ಮಾಡಿರುವುದು ಗುಜರಾತ್ ಸರಕಾರವಾಗಿರುವುದರಿಂದ ಇಲ್ಲಿ ನಿಜವಾದ ಆರೋಪಿಯೂ ಗುಜರಾತ್ ಸರಕಾರವೇ ಆಗಿದೆ. ಸರ್ವೋಚ್ಚ ನ್ಯಾಯಾಲಯವನ್ನು ವಂಚಿಸಿ ನಿರ್ದೇಶನವನ್ನು ಪಡೆಯಲಾಗಿತ್ತು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಇಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ವಂಚಿಸಿದವರು 11 ಮಂದಿ ದೋಷಿಗಳಲ್ಲ, ಬದಲಿಗೆ ಗುಜರಾತ್ ಸರಕಾರ. ಗುಜರಾತ್ ಹತ್ಯಾಕಾಂಡದಲ್ಲಿ 11 ಮಂದಿ ದೋಷಿಗಳನ್ನು ಅಕ್ರಮವಾಗಿ ಬಿಡುಗಡೆಗೊಳಿಸಿದ ಗುಜರಾತ್ ಸರಕಾರಕ್ಕೆ ಈ ತೀರ್ಪಿನಲ್ಲಿ ಯಾವ ಶಿಕ್ಷೆಯೂ ಆಗಿಲ್ಲ ಎನ್ನುವುದು ಗಮನಾರ್ಹವಾಗಿದೆ. ಸುಪ್ರೀಂಕೋರ್ಟ್‌ನ ತೀರ್ಪಿನಿಂದ ಗುಜರಾತ್ ಸರಕಾರಕ್ಕಾಗಿರುವ ಮುಖಭಂಗವನ್ನಷ್ಟೇ ಆರೋಪಿಗಾಗಿರುವ ಶಿಕ್ಷೆಯೆಂದು ಸಂವಿಧಾನದ ಪರವಾಗಿರುವವರು ಸಂತೃಪ್ತಿ ಪಡಬೇಕು. ಇದೇ ಸಂದರ್ಭದಲ್ಲಿ ಆರೋಪಿಗಳು ಜೈಲಿಗೆ ಮರಳಲು ಸುಪ್ರೀಂಕೋರ್ಟ್ ಎರಡು ವಾರಗಳ ಅವಕಾಶವನ್ನು ನೀಡಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿದಾಕ್ಷಣ ಆರೋಪಿಗಳು ‘ಪುಣ್ಯಕೋಟಿ’ ಹಸುಗಳಂತೆ ಮರಳಿ ಜೈಲಿಗೆ ಬಂದು ಸೇರುತ್ತಾರೆ ಎನ್ನುವುದು ಸುಳ್ಳು. ಯಾಕೆಂದರೆ ಈ ಅಪರಾಧಿಗಳು ಕೊಲೆಗಾರರು, ಅತ್ಯಾಚಾರಿಗಳಷ್ಟೇ ಅಲ್ಲ , ತಾವು ಮಾಡಿರುವ ಕೃತ್ಯಗಳನ್ನು ತಮ್ಮ ಶೌರ್ಯವೆಂದು ಬಲವಾಗಿ ನಂಬಿದವರು. ಅವರಷ್ಟೇ ನಂಬಿರುವುದಲ್ಲ, ಒಂದು ಸಮಾಜ ಅವರ ಈ ಕೃತ್ಯವನ್ನು ಹಿಂದೂ ಧರ್ಮದ ಹೆಮ್ಮೆಯಾಗಿ ಗುರುತಿಸಿದೆ. ಬಿಡುಗಡೆಯಾದ ದಿನ, ಮಹಿಳೆಯರ ಕೈಯಲ್ಲೇ ಈ ಅಪರಾಧಿಗಳಿಗೆ ಆರತಿ ಎತ್ತಿ, ಹೂಹಾರ ಹಾಕಿ ಅಭಿನಂದಿಸಲಾಗಿದೆ. ತಾವು ಮಾಡಿರುವ ಕೃತ್ಯಗಳ ಬಗ್ಗೆ ಎಳ್ಳಷ್ಟು ಕೀಳರಿಮೆ, ಪಶ್ಚಾತ್ತಾಪ, ಲಜ್ಜೆಯಿಲ್ಲದ ಇವರು ಆಳದಲ್ಲಿ ಇನ್ನೂ ಅದೇ ಕ್ರೌರ್ಯವನ್ನು, ಕೊಲೆಪಾತಕ ಮನಸ್ಸನ್ನು ಬಚ್ಚಿಟ್ಟುಕೊಂಡವರು. ಆದುದರಿಂದ ಸುಪ್ರೀಂಕೋರ್ಟ್ ತೀರ್ಪುನೀಡಿದಾಕ್ಷಣ ಆ ತೀರ್ಪನ್ನು ಗೌರವಿಸಿ ಜೈಲು ಸೇರುತ್ತಾರೆ ಎಂದು ನಂಬುವಂತಿಲ್ಲ.

ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಿಗೇ ಕಾನೂನು ವ್ಯವಸ್ಥೆ ಇವರನ್ನು ವಶಕ್ಕೆ ತೆಗೆದುಕೊಂಡು ಮರಳಿ ಜೈಲಿಗೆ ಸೇರಿಸುವ ಪ್ರಕ್ರಿಯೆಯನ್ನು ಶುರುಮಾಡಬೇಕಾಗಿತ್ತು. ಆದರೆ ತೀರ್ಪು ಬಿದ್ದು ನಾಲ್ಕು ದಿನ ಕಳೆದಿವೆೆಯಾದರೂ, ಈ ಬಗ್ಗೆ ಗುಜರಾತ್‌ನ ಸ್ಥಳೀಯ ಪೊಲೀಸರು ಯಾವುದೇ ಮಾಹಿತಿಯಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ‘‘ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರದ ಪ್ರಕರಣದ 11 ಅಪರಾಧಿಗಳ ಶರಣಾಗತಿಯ ಕುರಿತು ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಅವರು ವಾಸವಾಗಿರುವ ಪ್ರದೇಶದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ’’ ಎಂದು ಗುಜರಾತ್‌ನ ದಾಹೋದ್ ಎಸ್‌ಪಿ ಬಲರಾಮ ಮೀನಾ ತಿಳಿಸಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬಹುಶಃ ಅಪರಾಧಿಗಳೇ ತಾವಾಗಿ ಬಂದು ಶರಣಾಗುವುದನ್ನು ಪೊಲೀಸರು ಕಾಯುತ್ತಿದ್ದಾರೆ. ತೀರ್ಪು ಹೊರ ಬಿದ್ದ ಬೆನ್ನಿಗೇ ಅಪರಾಧಿಗಳು ಪರಾರಿಯಾಗಲು ಯೋಜನೆ ರೂಪಿಸಿರುವ ಸಾಧ್ಯತೆಗಳಿವೆ. ಆದುದರಿಂದ ತಕ್ಷಣ ಅವರ ಮೇಲೆ ಕಣ್ಗಾವಲಿಡುವುದು ಪೊಲೀಸರ ಕರ್ತವ್ಯ. ವಿಪರ್ಯಾಸವೆಂದರೆ, ಇವರ ಮೇಲೆ ಕಣ್ಣಿಡುವ ಬದಲು, ಕೋಮುಗಲಭೆ ನಡೆಯದಂತೆ ಸಾರ್ವಜನಿಕ ಸ್ಥಳಗಳನ್ನು ಗಸ್ತು ಕಾಯುತ್ತಿದ್ದಾರೆ. ಈ ಮೂಲಕ ‘ಇವರ ಬಂಧನವಾದರೆ ಕೋಮುಗಲಭೆಗಳು ಸಂಭವಿಸಬಹುದು’ ಎನ್ನುವ ಆತಂಕವನ್ನೂ ಪೊಲೀಸ್ ಇಲಾಖೆ ವ್ಯಕ್ತಪಡಿಸುತ್ತಿದೆ. ಇನ್ನೊಂದು ಮೂಲದ ಪ್ರಕಾರ, ಆರೋಪಿಗಳು ಎಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎನ್ನುವುದರ ಬಗ್ಗೆ ಪೊಲೀಸರಿಗೆ ಈವರೆಗೆ ಯಾವುದೇ ಮಾಹಿತಿಯಿಲ್ಲ.

ಈ ಆರೋಪಿಗಳು ಸಾಮಾನ್ಯ ವರ್ಗಕ್ಕೆ ಸೇರಿದವರಲ್ಲ. ಇವರೆಲ್ಲರೂ ಜಾತಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ರಾಜಕೀಯ ಶಕ್ತಿಗಳು ಇವರ ಬೆನ್ನಿಗೆ ನಿಂತಿವೆ. ಗುಜರಾತ್ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇವರನ್ನು ಸರಕಾರ ಬಿಡುಗಡೆಗೊಳಿಸಿತ್ತು ಎನ್ನುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಈ ಅಪರಾಧಿಗಳು ಕಳೆದ ಚುನಾವಣೆಯ ಪ್ರಚಾರದಲ್ಲಿ ನೇರವಾಗಿ ಪಾಲುಗೊಂಡಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಪರಾಧಿಗಳು ಬಿಡುಗಡೆಗೊಂಡಿದ್ದ ಸಂದರ್ಭದಲ್ಲಿ ಹಿರಿಯ ಬಿಜೆಪಿ ನಾಯಕರೊಬ್ಬರು ‘‘ಆರೋಪಿಗಳು ಬ್ರಾಹ್ಮಣ ಸಮುದಾಯಕ್ಕೆ ಸೇರಿರುವುದರಿಂದ ಅವರು ತಪ್ಪು ಮಾಡುವುದು ಸಾಧ್ಯವಿಲ್ಲ’’ ಎಂಬಂತಹ ಹೇಳಿಕೆಯನ್ನೂ ನೀಡಿದ್ದರು. ಗುಜರಾತ್ ಸರಕಾರವೇ ಆರೋಪಿಗಳ ಪರವಾಗಿ ನಿಂತಿರುವಾಗ, ಪೊಲೀಸ್ ಇಲಾಖೆ ಸ್ವತಂತ್ರವಾಗಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸಾಧ್ಯವೇ ಎಂಬ ಅನುಮಾನ ಕಾಡುತ್ತದೆ. ಸುಪ್ರೀಂಕೋರ್ಟ್ ನೀಡಿರುವ ಎರಡು ವಾರಗಳ ಅವಕಾಶವನ್ನು ಅಪರಾಧಿಗಳು ತಮಗೆ ಪೂರಕವಾಗಿ ಬಳಸಿಕೊಂಡರೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೂಡ ವ್ಯರ್ಥವಾಗಿ ಬಿಡಬಹುದು.

ಒಂದು ವೇಳೆ ಆರೋಪಿಗಳು ಪರಾರಿಯಾದಲ್ಲಿ ಅಥವಾ ಅವರು ಮರಳಿ ಜೈಲಿಗೆ ಸೇರಲು ವಿಫಲವಾದಲ್ಲಿ ಅದಕ್ಕೆ ಗುಜರಾತ್ ಸರಕಾರವನ್ನೇ ಸಂಪೂರ್ಣ ಹೊಣೆ ಮಾಡಬೇಕಾಗುತ್ತದೆ. ಮುಖ್ಯವಾಗಿ ನ್ಯಾಯಾಲಯವನ್ನು ಗುಜರಾತ್ ಸರಕಾರ ವಂಚಿಸಿ ಅವರನ್ನು ಬಿಡುಗಡೆ ಮಾಡಿದೆ ಎಂದು ಸ್ವತಃ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ದೋಷಿಗಳ ಅವಧಿಪೂರ್ವ ಬಿಡುಗಡೆ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವೇ ಗುಜರಾತ್ ಸರಕಾರಕ್ಕೆ ಇರಲಿಲ್ಲ. ಆ ಅಧಿಕಾರ ಇದ್ದದ್ದು ಮಹಾರಾಷ್ಟ್ರ ಸರಕಾರಕ್ಕೆ. ಅಂದರೆ ಅಪರಾಧಿಗಳ ಬಿಡುಗಡೆಯಲ್ಲಿ ಗುಜರಾತ್ ಸರಕಾರ ತಪ್ಪೆಸಗಿದೆ. ಗುಜರಾತ್ ಸರಕಾರದ ತಪ್ಪಿನ ಕಾರಣದಿಂದ ಅಪರಾಧಿಗಳು ಬಿಡುಗಡೆಯಾಗಿರುವುದರಿಂದ, ಅವರನ್ನು ಮರಳಿ ಜೈಲಿಗೆ ಸೇರ್ಪಡೆಗೊಳಿಸುವ ಹೊಣೆಗಾರಿಕೆಯೂ ಗುಜರಾತ್ ಸರಕಾರದ್ದೇ ಆಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಹೇಳಿದ ಅವಧಿಯಲ್ಲಿ ಅಪರಾಧಿಗಳು ಮರಳಿ ಜೈಲು ಸೇರಲು ವಿಫಲ ವಾದರೆ ಗುಜರಾತ್ ಸರಕಾರದ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸಾಮೂಹಿಕ ಅತ್ಯಾಚಾರ, ಕೊಲೆಪಾತಕಗಳಿಗಾಗಿ ಗುರುತಿಸಿಕೊಂಡ ಅಪರಾಧಿಗಳನ್ನು ಬಳಸಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಆ ಅಪರಾಧಿಗಳನ್ನು ಮರಳಿ ಜೈಲಿಗೆ ಸೇರಿಸುತ್ತದೆ ಎಂದು ನಂಬುವಂತಿಲ್ಲ. ಆದುದರಿಂದ, ಬರೇ ಸುಪ್ರೀಂಕೋರ್ಟ್ ತೀರ್ಪಿನಿಂದಲೇ ಸಂತ್ರಸ್ತೆಗೆ ನ್ಯಾಯ ಸಿಕ್ಕಿಯೇ ಬಿಟ್ಟಿತು ಎನ್ನುವುದು ಅವಸರದ ತೀರ್ಮಾನವಾಗುತ್ತದೆ. ಅಪರಾಧಿಗಳು ಜೈಲು ಸೇರಲು ವಿಫಲವಾದರೆ, ಅವರ ಬದಲಿಗೆ ಗುಜರಾತ್ ಸರಕಾರವೇ ಜೈಲು ಸೇರುವುದಕ್ಕೆ ಸಿದ್ಧವಾಗಬೇಕು. ಆಗ ಮಾತ್ರ ಸಂತ್ರಸ್ತೆಗೆ ನಿಜವಾದ ಅರ್ಥದಲ್ಲಿ ನ್ಯಾಯ ಸಿಕ್ಕೀತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News