ವಿರೋಧ ಪಕ್ಷವಾಗಲೂ ವಿಫಲವಾದ ಬಿಜೆಪಿ

Update: 2023-11-08 03:58 GMT
Full View

ರಾಜ್ಯದಲ್ಲಿ ಸದ್ಯಕ್ಕಂತೂ ಸುಭದ್ರ ಸರಕಾರವಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಆಕ್ಷೇಪಗಳು ಪಕ್ಷದೊಳಗಿಂದ ಈವರೆಗೆ ಕೇಳಿ ಬಂದಿಲ್ಲ. ಅವರು ‘ಪೂರ್ಣಾವಧಿಯ ಮುಖ್ಯಮಂತ್ರಿ ಹೌದೋ, ಅಲ್ಲವೋ’ ಎನ್ನುವುದು ಪಕ್ಷದೊಳಗಿನ ವಿಚಾರ. ಈ ಹಿಂದೆ ತಮ್ಮ ಅಧಿಕಾರಾವಧಿಯಲ್ಲಿ ಮೂರು ಮೂರು ಮುಖ್ಯಮಂತ್ರಿಗಳನ್ನು ಬದಲಿಸಿದ ಬಿಜೆಪಿ ನಾಯಕರು ಆ ಬಗ್ಗೆ ಮೂಗು ತೂರಿಸುವುದು ಅಧಿಕಪ್ರಸಂಗತನವಾಗುತ್ತದೆ. ಸದ್ಯಕ್ಕೆ, ಆಡಳಿತದಲ್ಲೂ ಗೊಂದಲಗಳಿಲ್ಲ. ಗ್ಯಾರಂಟಿಗಳನ್ನು ಹಂತಹಂತವಾಗಿ ಈಡೇರಿಸುವಲ್ಲಿ ಸರಕಾರ ಯಶಸ್ವಿಯಾಗುತ್ತಿದೆ. ಸರಕಾರ ಸರಿದಾರಿಯಲ್ಲಿದೆ ಎನ್ನುವುದನ್ನು ಸ್ವತಃ ಬಿಜೆಪಿಯೇ ಒಪ್ಪಿಕೊಂಡಂತೆ ಇದೆ. ಆದುದರಿಂದಲೇ ಸಿದ್ದರಾಮಯ್ಯ ನೇತೃತ್ವದ ಸರಕಾರದ ತಪ್ಪುಗಳನ್ನು ವಿರೋಧಿಸುವುದಕ್ಕಾಗಿ ‘ವಿರೋಧ ಪಕ್ಷ ಮತ್ತು ಅದಕ್ಕೊಬ್ಬ ನಾಯಕನ ಅಗತ್ಯ’ವಿಲ್ಲ ಎಂದು ಅದು ತೀರ್ಮಾನಿಸಿದೆ. ಆ ಕಾರಣದಿಂದಲೇ ಇರಬೇಕು,ಬಿಜೆಪಿ ವಿರೋಧಪಕ್ಷದ ನಾಯಕನನ್ನು ಆಯ್ಕೆಮಾಡುವ ತಂಟೆಗೇ ಹೋಗಿಲ್ಲ. ತಮಾಷೆಯೆಂದರೆ, ಸರಕಾರ ರಚನೆಯಾಗಿ ೫ ತಿಂಗಳು ಕಳೆದಿದೆಯಾದರೂ ವಿರೋಧ ಪಕ್ಷದ ನಾಯಕನನ್ನು ಒಮ್ಮತದಿಂದ ಆಯ್ಕೆ ಮಾಡಲು ವಿಫಲವಾಗಿರುವ ಬಿಜೆಪಿಯು ಸಿದ್ದರಾಮಯ್ಯ ನೇತೃತ್ವದ ಸರಕಾರದೊಳಗಿರುವ ಭಿನ್ನಮತಗಳ ಬಗ್ಗೆ ಚಿಂತೆ ವ್ಯಕ್ತಪಡಿಸುತ್ತಿರುವುದು. ಸ್ವತಃ ತನ್ನ ಪಕ್ಷದಲ್ಲಿರುವ ಶಾಸಕರು ತನಗೆ ಎಷ್ಟರಮಟ್ಟಿಗೆ ಬೆಂಬಲ ನೀಡುತ್ತಾರೆ ಎನ್ನುವುದರ ಬಗ್ಗೆಯೇ ಭರವಸೆಯಿಲ್ಲದ ಜೆಡಿಎಸ್‌ನ ಮುಖಂಡ ಕುಮಾರಸ್ವಾಮಿ ಅವರು ‘‘ಡಿಕೆಶಿಯನ್ನು ಮುಖ್ಯಮಂತ್ರಿಯನ್ನಾಗಿಸಲು’’ ತುದಿಗಾಲಿನಲ್ಲಿ ನಿಂತಿದ್ದಾರೆ.

ಆದರೆ ಇಂದು ನಿಜಕ್ಕೂ ಚರ್ಚೆಯಾಗಬೇಕಾಗಿರುವುದು ಬಿಜೆಪಿಯ ದೈನೇಸಿ ಸ್ಥಿತಿಯ ಬಗ್ಗೆ. ಸದ್ಯಕ್ಕೆ ಬಿಜೆಪಿಯನ್ನು ಮುನ್ನಡೆಸಲು ಅದಕ್ಕೊಂದು ರಾಜ್ಯಾಧ್ಯಕ್ಷರೇ ಇಲ್ಲ. ನಳಿನ್ ಕುಮಾರ್ ಕಟೀಲು ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆದರೆ ನೂತನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಸ್ಥಿತಿಯಲ್ಲಿ ಬಿಜೆಪಿ ವರಿಷ್ಠರು ಇಲ್ಲದೇ ಇರುವ ಕಾರಣದಿಂದ ಅವರು ತಮ್ಮ ರಾಜೀನಾಮೆಯನ್ನು ಹಿಂದೆಗೆದುಕೊಳ್ಳಬೇಕಾಯಿತು. ‘ರಾಜಕೀಯವಾಗಿ ನಿವೃತ್ತನಾಗುತ್ತಿದ್ದೇನೆ’ ಎಂದು ಯಡಿಯೂರಪ್ಪ ಎಂದೋ ಘೋಷಣೆ ಮಾಡಿದ್ದರು ಮತ್ತು ಅವರ ಘೋಷಣೆಯನ್ನು ಬಿಜೆಪಿ ಅದ್ದೂರಿಯಿಂದ ಸ್ವಾಗತಿಸಿತ್ತು. ವಿಪರ್ಯಾಸವೆಂದರೆ, ರಾಜಕೀಯವಾಗಿ ನಿವೃತ್ತಿಯಾಗಿರುವ ಯಡಿಯೂರಪ್ಪರನ್ನೇ ಸದ್ಯಕ್ಕೆ ಬಿಜೆಪಿ ನೆಚ್ಚಿಕೊಂಡಿದೆ. ನಿಜಕ್ಕೂ ಯಡಿಯೂರಪ್ಪ ರಾಜ್ಯ ಬಿಜೆಪಿಯೊಳಗೆ ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವುದು ಯಾರಿಗೂ ಸ್ಪಷ್ಟವಿಲ್ಲ. ಒಮ್ಮೊಮ್ಮೆ ಬಿಜೆಪಿಯ ನಾಯಕನಂತೆಯೂ, ಮಗದೊಮ್ಮೆ ಬಿಜೆಪಿಯ ವಿರೋಧಿಯಂತೆಯೂ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ತನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡ ಬಿಜೆಪಿ ವರಿಷ್ಠರ ಬಗ್ಗೆ ಯಡಿಯೂರಪ್ಪ ಈಗಲೂ ಅಸಮಾಧಾನವನ್ನು ಇಟ್ಟುಕೊಂಡಿದ್ದಾರೆ. ಬಿಜೆಪಿ ತನ್ನನ್ನು ಬಳಸಿ ಎಸೆಯುವ ತಂತ್ರ ಅನುಸರಿಸುತ್ತಿರುವ ಬಗ್ಗೆ ಅವರಿಗೆ ಅರಿವಿದೆ. ಆದುದರಿಂದ ಅವರು ಬಿಜೆಪಿಯ ಏಳಿಗೆಗಿಂತ ತನ್ನ ಮಕ್ಕಳ ರಾಜಕೀಯ ಏಳಿಗೆಗೆ ಆದ್ಯತೆ ನೀಡಿದ್ದಾರೆ. ಬಿಜೆಪಿಯಲ್ಲಿ ತನ್ನ ಮಕ್ಕಳಿಗೆ ಯೋಗ್ಯ ಸ್ಥಾನಮಾನ ದೊರಕದೇ ಇದ್ದರೆ ಬಿಜೆಪಿಗೆ ಯಡಿಯೂರಪ್ಪ ಅವರೇ ದೊಡ್ಡ ಸಮಸ್ಯೆಯಾಗಲಿದ್ದಾರೆ. ತನ್ನ ಪಕ್ಷಕ್ಕೊಂದು ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡುವುದರಲ್ಲೇ ವಿಫಲವಾಗಿರುವ ಬಿಜೆಪಿಯು ‘ಯಾರು ಮುಖ್ಯಮಂತ್ರಿಯಾಗಬೇಕು, ಆಗಬಾರದು’ ಎಂದು ಕಾಂಗ್ರೆಸ್‌ಗೆ ಸಲಹೆ ನೀಡುತ್ತಿರುವುದು ರಾಜ್ಯದಲ್ಲಿ ಅದರ ಅತ್ಯಂತ ದಯನೀಯ ಸ್ಥಿತಿಯನ್ನು ಹೇಳುತ್ತಿದೆ.

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷನಾಗಲು, ವಿರೋಧ ಪಕ್ಷದ ನಾಯಕನಾಗಲು ಅರ್ಹರು ಇಲ್ಲ ಎಂದಲ್ಲ. ಒಂದು ವೇಳೆ ವರಿಷ್ಠರು ನಾಯಕನನ್ನು ಆಯ್ಕೆ ಮಾಡಿದ್ದೇ ಆದಲ್ಲಿ ಬಿಜೆಪಿಯು ಬ್ರಾಹ್ಮಣ-ಲಿಂಗಾಯತ-ಒಕ್ಕಲಿಗ ಎಂದು ಒಡೆದು ಚೂರಾಗಲಿದೆ. ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಆರೆಸ್ಸೆಸ್ ಮಾಡಿದ ಹಸ್ತಕ್ಷೇಪದ ಕಾರಣದಿಂದ ಬಿಜೆಪಿಯ ಹಲವು ಹಿರಿಯ ನಾಯಕರು ಪಕ್ಷ ತೊರೆಯುವಂತಾಯಿತು. ರಾಜ್ಯದ ಹಿರಿಯ ಲಿಂಗಾಯತ ನಾಯಕರನ್ನು ಹೊರಗಿಟ್ಟು ಅಮಿತ್ ಶಾ-ಮೋದಿ ವರ್ಚಸ್ಸನ್ನು ಬಳಸಿಕೊಂಡು ಬಿಜೆಪಿಯನ್ನು ಗೆಲ್ಲಿಸಲು ಹೊರಟು ಆರೆಸ್ಸೆಸ್‌ನ ಬ್ರಾಹ್ಮಣ ಲಾಬಿ ತೀವ್ರ ಮುಖಭಂಗ ಅನುಭವಿಸಿತ್ತು. ಸೋಲಿನ ಬಳಿಕ ಬಿಜೆಪಿಯೊಳಗಿನ ಬಿರುಕು ಇನ್ನಷ್ಟು ಹೆಚ್ಚಾಯಿತು. ಈ ಬಿರುಕು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಒಂದು ಗಳವನ್ನು ಎಳೆದರೆ ಇಡೀ ಮನೆಯೇ ಕುಸಿದು ಬೀಳಬಹುದು ಎನ್ನುವ ಭಯ ವರಿಷ್ಠರನ್ನು ಆವರಿಸಿದೆ. ಆದುದರಿಂದಲೇ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮುಂದೆ ಹಾಕುತ್ತಾ ಹೋಗುತ್ತಿದೆ. ವಿರೋಧ ಪಕ್ಷದ ನಾಯಕನ ಸ್ಥಾನವನ್ನು ತುಂಬುವುದಕ್ಕೂ ಬಿಜೆಪಿಗೆ ಇದೇ ಸಮಸ್ಯೆಯಾಗಿದೆ.

ಜೆಡಿಎಸ್-ಬಿಜೆಪಿ ನಡುವಿನ ನಡೆದ ಮೈತ್ರಿ ಯಾವುದೇ ಸ್ಥಳೀಯ ನಾಯಕರ ಗಮನಕ್ಕೆ ಬಂದಿರಲಿಲ್ಲ. ರಾಜ್ಯ ನಾಯಕರಿಗೆ ಯಾವ ಮಾಹಿತಿಯನ್ನೂ ನೀಡದೆ ದಿಲ್ಲಿಯಲ್ಲಿ ವರಿಷ್ಠರು ಜೆಡಿಎಸ್‌ನೊಂದಿಗೆ ಮೈತ್ರಿಯನ್ನು ಮಾಡಿಕೊಂಡರು. ಸ್ವತಃ ಯಡಿಯೂರಪ್ಪ ಅವರು ಇದನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಸದಾನಂದ ಗೌಡರಂತೂ ಈ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ತೋಡಿಕೊಂದ್ದಾರೆ. ತನ್ನ ಪಕ್ಷದ ಸ್ಥಳೀಯ ನಾಯಕರಿಗೆ ಮುಚ್ಚಿಟ್ಟು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿಯ ವರಿಷ್ಠರು ಯಾವ ಚುನಾವಣೆಯನ್ನು ಗೆಲ್ಲಲು ಹೊರಟಿದ್ದಾರೆ? ಅಥವಾ ವಿರೋಧ ಪಕ್ಷಕ್ಕೆ ಯೋಗ್ಯ ನಾಯಕರು ಬಿಜೆಪಿಯಲ್ಲಿಲ್ಲ ಎಂದು ತಿಳಿದುಕೊಂಡು ಕುಮಾರಸ್ವಾಮಿಯನ್ನೇ ವಿರೋಧ ಪಕ್ಷದ ನಾಯಕರನ್ನಾಗಿಸಲು ಹೊರಟಿದ್ದಾರೆಯೆ? ಎನ್ನುವ ಅನುಮಾನ ಬಿಜೆಪಿಯ ಒಳಗೇ ಎದ್ದಿದೆ. ಯಡಿಯೂರಪ್ಪ, ಅಶೋಕ್, ಸೋಮಣ್ಣ , ಯತ್ನಾಳ್ ಮೊದಲಾದ ನಾಯಕರನ್ನೆಲ್ಲ ಗುಡಿಸಿ ಹಾಕಿ ಬಿಜೆಪಿಯನ್ನು ಆರೆಸ್ಸೆಸ್‌ನ ಕಟ್ಟರ್ ಹಿಂದುತ್ವವಾದಿಗಳ ನೇತೃತ್ವದಲ್ಲಿ ಹೊಸದಾಗಿ ಕಟ್ಟುವ ಯೋಜನೆಯೊಂದು ಬಿಜೆಪಿಯ ಬಳಿಯಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಾದ ಹೀನಾಯ ಸೋಲಿನಿಂದ ಆ ಯೋಜನೆಯಿಂದ ವರಿಷ್ಠರು ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ. ತಮ್ಮನ್ನು ಬದಿಗೆ ಸರಿಸಲು ವರಿಷ್ಠರು ಯೋಜನೆ ಹಾಕಿಕೊಂಡಿರುವುದು ಬಿಜೆಪಿಯೊಳಗಿರುವ ಹಿರಿಯ ನಾಯಕರ ಗಮನಕ್ಕೂ ಬಂದಿದೆ. ಆದುದರಿಂದಲೇ ಅವರು ವಿರೋಧ ಪಕ್ಷದ ನಾಯಕ ಸ್ಥಾನ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ತಮ್ಮ ಪಟ್ಟುಗಳನ್ನು ಸಡಿಲಿಸುತ್ತಿಲ್ಲ. ತಮ್ಮೊಳಗಿನ ಹುಳುಕನ್ನು ಮುಚ್ಚಿ ಹಾಕುವುದಕ್ಕಾಗಿ ಬಿಜೆಪಿ ಆಗಾಗ ‘ಆಪರೇಷನ್ ಕಮಲ’ದ ವದಂತಿ ಹುಟ್ಟು ಹಾಕಿ ‘ಕಾಂಗ್ರೆಸ್‌ನ ಭಿನ್ನಮತ’ದ ಬಗ್ಗೆ ಸುದ್ದಿಗಳನ್ನು ಹರಡುತ್ತಿದೆ. ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲೇ ವಿಫಲವಾಗಿರುವ ಬಿಜೆಪಿ, ನಾಳೆ ಆಪರೇಷನ್ ಕಮಲ ನಡೆಸಿ ಸರಕಾರ ರಚಿಸಿದರೂ, ‘ಮುಖ್ಯಮಂತ್ರಿಯ ಆಯ್ಕೆ’ಯನ್ನು ಮಾಡಲು ಅದರಿಂದ ಸಾಧ್ಯವಿದೆಯೆ? ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಹೋಗಲು ಸದ್ಯಕ್ಕೆ ಕಾಂಗ್ರೆಸ್ ಯಾವ ಆಪರೇಷನ್ ನಡೆಸುವ ಅಗತ್ಯವೂ ಇಲ್ಲ. ಒಮ್ಮೆ ಬಿಜೆಪಿಯ ವರಿಷ್ಠರು ವಿರೋಧ ಪಕ್ಷದ ನಾಯಕನನ್ನು ಮತ್ತು ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಲಿ. ಬಿಜೆಪಿಯೊಳಗಿಂದಲೇ ಸಾಲು ಸಾಲಾಗಿ ನಾಯಕರು ತಮಗೆ ತಾವೇ ಆಪರೇಷನ್ ಮಾಡಿಸಿಕೊಂಡು ಕಾಂಗ್ರೆಸ್ ಕಡೆಗೆ ವಲಸೆ ಹೋಗಲಿದ್ದಾರೆ.

ಕಾಂಗ್ರೆಸ್‌ನ ಬಗ್ಗೆ ತಲೆಕೆಡಿಸದೇ ಮೊದಲು ಬಿಜೆಪಿ ತನ್ನ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಬಗ್ಗೆ ಗಂಭೀರವಾಗಬೇಕು. ಇಲ್ಲವಾದರೆ, ಅದು ಸರಕಾರದ ವಿರುದ್ಧ ಮಾಡುವ ಎಲ್ಲ ಟೀಕೆಗಳು ನೆಲೆಕಳೆದುಕೊಳ್ಳುತ್ತವೆ. ಒಂದು ಸರಕಾರ ಜನಪರವಾಗಿ ಮುನ್ನಡೆಯಬೇಕಾದರೆ ಸಮರ್ಥ ವಿರೋಧ ಪಕ್ಷ ಮತ್ತು ವಿರೋಧ ಪಕ್ಷದ ನಾಯಕನ ಅಗತ್ಯವಿರುತ್ತದೆ. ಕಳೆದ ಬಾರಿ ಬಿಜೆಪಿಯ ಭ್ರಷ್ಟ ಆಡಳಿತದ ವಿರುದ್ಧ ಸಮರ್ಥವಾಗಿ ಧ್ವನಿಯೆತ್ತಿದ ಕಾರಣಕ್ಕೇ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಇಂದು ಆಡಳಿತ ಪಕ್ಷದಲ್ಲಿ ಕುಳಿತಿದೆ. ವಿರೋಧ ಪಕ್ಷದ ನಾಯಕ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿದ ಕಾರಣಕ್ಕೆ ಸಿದ್ದರಾಮಯ್ಯ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಕಂಗೊಳಿಸುತ್ತಿದ್ದಾರೆ. ಬಿಜೆಪಿಯಲ್ಲಿ ವಿರೋಧಪಕ್ಷದ ನಾಯಕನಾಗಲು ಯೋಗ್ಯರೇ ಇಲ್ಲ ಎಂದಾದರೆ, ಕನಿಷ್ಠ ಕುಮಾರಸ್ವಾಮಿಯನ್ನೇ ವಿರೋಧ ಪಕ್ಷದ ನಾಯಕನನ್ನಾಗಿಸಲು ಮುಂದಾಗಬೇಕು. ಸರಕಾರ ನಡೆಸಲು ಯೋಗ್ಯರಲ್ಲ ಎಂದು ಜನರು ಬಿಜೆಪಿಯನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಆದರೆ ‘ನಾವು ವಿರೋಧ ಪಕ್ಷಕ್ಕೂ ಯೋಗ್ಯರಲ್ಲ’ ಎನ್ನುವುದನ್ನು ಬಿಜೆಪಿಯ ನಾಯಕರು ಜನರಿಗೆ ಸಾಬೀತು ಪಡಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News