ಕಾವೇರಿ ವಿವಾದ: ಸಂಘರ್ಷ ರೂಪ ಪಡೆಯದಿರಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸುಪ್ರೀಂಕೋರ್ಟ್‌ನಲ್ಲಿ ‘ಕಾವೇರಿ ನೀರಿನ ವಿವಾದ’ ಪ್ರಹಸನ ಪ್ರದರ್ಶನ ಯಶಸ್ವಿಯಾಗಿ ಮುಂದುವರಿದಿದೆ. ಕಾವೇರಿ ವಿವಾದ ಪ್ರಹಸನ ಪ್ರದರ್ಶನ ಸ್ವರೂಪ ಸರಕಾರದಿಂದ ಸರಕಾರಕ್ಕೆ ಬದಲಾಗುತ್ತಿರುತ್ತದೆ. ಕಾವೇರಿ ವಿವಾದದ ಕುರಿತಂತೆ ರಾಜಕೀಯ ಪಕ್ಷಗಳು ಆಡಳಿತ ನಡೆಸುತ್ತಿರುವಾಗ ಸ್ವೀಕರಿಸುವ ರೀತಿಯೇ ಬೇರೆ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿ ನಿಂತು ನೋಡುವ ಬಗೆಯೇ ಬೇರೆ. ಅದೇ ಕಾವೇರಿ, ಅದೇ ವಿವಾದ, ಅದೇ ನೀರು,ಅ ದೇ ಬರಗಾಲ. ಆದರೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ತಾವು ಅಧಿಕಾರದಲ್ಲಿದ್ದೇವೆಯೋ ಇಲ್ಲವೋ ಎನ್ನುವುದರ ಆಧಾರದ ಮೇಲೆ ಹೊರ ಬೀಳುತ್ತದೆ. ಅಧಿಕಾರದಲ್ಲಿದ್ದಾಗ ಎಲ್ಲವನ್ನೂ ಸುಪ್ರೀಂಕೋರ್ಟ್‌ನ ಅಥವಾ ಜಲ ನಿರ್ವಹಣಾ ಪ್ರಾಧಿಕಾರದ ತಲೆಗೆ ಕಟ್ಟಿದರೆ, ವಿರೋಧ ಪಕ್ಷದಲ್ಲಿದ್ದಾಗ ಸರಕಾರದ ತಲೆಗೆ ಕಟ್ಟುತ್ತವೆ. ಆದರೆ ಎಲ್ಲ ರಾಜಕೀಯ ಪಕ್ಷಗಳಿಗೂ ಸ್ಪಷ್ಟವಾಗಿ ಗೊತ್ತಿದೆ, ಕಾವೇರಿ ನೀರಿನ ಕುರಿತಂತೆ ಸರ್ವಾಧಿಕಾರಿ ನಿರ್ಣಯವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ರಾಜ್ಯ ಇಲ್ಲ. ಇಷ್ಟಕ್ಕೂ ತಮಿಳು ನಾಡಿಗೆ ನೀರು ಕೊಟ್ಟಾಕ್ಷಣ ಅದನ್ನು ಅಪರಾಧವೆಂಬಂತೆ ಬೊಬ್ಬಿಟ್ಟು ಗದ್ದಲ ಎಬ್ಬಿಸುವ ವಿರೋಧ ಪಕ್ಷಗಳು ಕೂಡ ಹಿಂದೆ ಅಧಿಕಾರದಲ್ಲಿದ್ದಾಗ ಅದನ್ನೇ ಮಾಡಿದ್ದವು. ಕಾವೇರಿ ನದಿ ಚಲನಶೀಲವಾದುದು. ಕೊಡಗಿನಲ್ಲಿ ಹುಟ್ಟಿ ಮಂಡ್ಯವನ್ನು ಹಸಿರಾಗಿಸಿ, ಬೆಂಗಳೂರಿಗೆ ನೀರುಣಿಸಿ ತಮಿಳುನಾಡಿಗೆ ಸಾಗುವ ಕಾವೇರಿಯನ್ನು ಅಲ್ಲಿನ ಜನರೂ ತಾಯಿಯೆಂದೇ ಬಗೆಯುತ್ತಾರೆ. ಕಾವೇರಿ ಕರ್ನಾಟಕದಲ್ಲಿ ಹುಟ್ಟಿದೆ ಎನ್ನುವ ಒಂದೇ ಕಾರಣಕ್ಕಾಗಿ ನಾವು ಅದರ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ. ಕಾವೇರಿ ಹುಟ್ಟಿರುವುದು ಕೊಡಗಿನಲ್ಲಿ. ಕೊಡಗಿನ ಜನರು ಕೂಡ, ಕಾವೇರಿಯಿಂದ ಕೊಡಗಿನ ಜನರಿಗೆ ಸಿಕ್ಕಿರುವುದು ನೆರೆ ಪರಿಹಾರ ಮಾತ್ರ ಎನ್ನುವ ಅಸಹನೆಯನ್ನು ಪ್ರದರ್ಶಿಸುತ್ತಾ ನೆರೆಯ ಮಂಡ್ಯ, ಮೈಸೂರಿನ ಜನರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಾ ಬಂದಿರುವುದನ್ನು ನಾವು ಮರೆಯಬಾರದು.
ಇದೀಗ, ಕೇಂದ್ರ ಜಲ ನಿರ್ವಹಣಾ ಪ್ರಾಧಿಕಾರದ ನಿರ್ದೇಶನನದಂತೆ ಸೆ. 12ರವರೆಗೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸಲು ಸಿದ್ಧ ಎಂದು ಕರ್ನಾಟಕವು ಸುಪ್ರಿೀಂಕೋರ್ಟ್ ಮುಂದೆ ಹೇಳಿಕೆ ನೀಡಿದೆ. ಆದರೆ ಸೆ. 12ರ ಬಳಿಕ ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವಾಗದು ಎಂದೂ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವ ರಾಜ್ಯ, ‘‘ಕಾವೇರಿ ತಪ್ಪಲಿನ ನಾಲ್ಕು ಜಲಾಶಯಗಳಲ್ಲಿ ಸದ್ಯ 56.043 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಸುಮಾರು 40 ಟಿಎಂಸಿ ನೀರು ಹರಿದು ಬರಬಹುದು ಎಂದು ಅಂದಾಜಿಸಲಾಗಿದೆ. ಋತುವಿನ ಉಳಿದ ಅವಧಿಯಲ್ಲಿ ನಗರಗಳು ಹಾಗೂ ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ಹಾಗೂ ರೈತರ ಬೆಳೆಗಳಿಗೆ ಕರ್ನಾಟಕಕ್ಕೆ 140 ಟಿಎಂಸಿ ನೀರಿನ ಅಗತ್ಯವಿದೆ. ಆದುದರಿಂದ ಸೆ. 12ರ ಆನಂತರ ರಾಜ್ಯದ ಯಾವುದೇ ಜಲಾಶಯಗಳಿಂದ ನೀರನ್ನು ಬಿಡುಗಡೆಗೊಳಿಸಲು ಸಾಧ್ಯವಾಗದು’’ ಎಂದು ತನ್ನ ಅಭಿಪ್ರಾಯವನ್ನು ಮಂಡಿಸಿದೆ. ಅಷ್ಟೇ ಅಲ್ಲದೆ, ಆಗಸ್ಟ್ 29ರಿಂದ ಸೆಪ್ಟಂಬರ್ 3ರ ನಡುವೆ ಕಳೆದ ಆರು ದಿನಗಳ ಕಾಲ ನಿಗದಿತ 30,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆಗೊಳಿಸಿರುವುದನ್ನೂ ಪ್ರಸ್ತಾಪಿಸಿದೆ. ಆದರೆ ಸುಪ್ರೀಂಕೋರ್ಟ್ ಇದನ್ನು ಎಷ್ಟರಮಟ್ಟಿಗೆ ಸ್ವೀಕರಿಸುತ್ತದೆ, ಕರ್ನಾಟಕದ ಅಳಲಿಗೆ ಕಿವಿಯಾಗುತ್ತದೆ ಎನ್ನುವುದರ ಬಗ್ಗೆ ಅನುಮಾನಗಳಿವೆ. ಕಾವೇರಿ ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿರುವುದಕ್ಕಿಂತ ಅನ್ಯಾಯಗಳಾಗಿರುವುದೇ ಹೆಚ್ಚು. ರಾಜ್ಯದ ಹಿತಾಸಕ್ತಿಯನ್ನು ಕೇಂದ್ರಕ್ಕೆ ತಲುಪಿಸುವ ಯೋಗ್ಯ ನಾಯಕರ ಕೊರತೆ ಇದಕ್ಕೆ ಕಾರಣವಾಗಿರಬಹುದು. ಡಬಲ್ ಇಂಜಿನ್ ಸರಕಾರವಿರುವಾಗಲೂ ಇದರಲ್ಲಿ ವ್ಯತ್ಯಾಸವಿರಲಿಲ್ಲ. ಡಬಲ್ ಇಂಜಿನ್ ಸರಕಾರ ಅಸ್ತಿತ್ವದಲ್ಲಿದ್ದಾಗ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲು ಹಿಂಜರಿಯುತ್ತಿದ್ದರು. ಮೋದಿ, ಅಮಿತ್ ಶಾ ಮುಂದೆ ರಾಜ್ಯದ ಹಿತಾಸಕ್ತಿಯನ್ನು ಮಂಡಿಸುವ ಎದೆಗಾರಿಕೆಯುಳ್ಳ ದಿಟ್ಟ ನಾಯಕರೇ ಬಿಜೆಪಿಯೊಳಗಿರಲಿಲ್ಲ. ಆದುದರಿಂದಲೇ ಡಬಲ್ ಇಂಜಿನ್ ಸರಕಾರವನ್ನು ಜನರು ತಿರಸ್ಕರಿಸಿದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಕಾವೇರಿ ನೀರು ಹಂಚಿಕೆಯ ಮೂಲಕ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.
ಸಾಧಾರಣವಾಗಿ ಕಾವೇರಿ ಕಾವು ಏರಿ ಎರಡು ರಾಜ್ಯಗಳ ಜನರ ನಡುವೆ ಉದ್ವಿಗ್ನ ವಾತಾವರಣನಿರ್ಮಾಣವಾದ ಸಂದರ್ಭದಲ್ಲೆಲ್ಲ ಈ ಹಿಂದೆ ಪ್ರಕೃತಿ ನೆರವಿಗೆ ಬರುತ್ತಿತ್ತು. ಏಕಾಏಕಿ ಭರ್ಜರಿ ಮಳೆಯಾಗಿ ಕಾವೇರಿ ತುಂಬಿ ಹರಿದು ಎರಡು ರಾಜ್ಯಗಳು ವಿವಾದವನ್ನು ಮರೆತು ಬಿಡುತ್ತಿದ್ದವು. ಆದರೆ ಈ ಬಾರಿಯ ಮಳೆಯ ನಿಧಾನಗತಿ ನೋಡಿದರೆ ಕಾವೇರಿ ವಿವಾದ ಬಿಗಡಾಯಿಸುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಈಗಾಗಲೇ ಜಲಾಶಯಗಳ ನೀರು ತೀವ್ರ ಇಳಿಕೆ ಕಂಡಿದ್ದು ಮುಂದಿನ ದಿನಗಳಲ್ಲಿ ಈ ಇಳಿಕೆ ವಿಪರೀತಕ್ಕೆ ತಲುಪಬಹುದು. ಹಾಗಾದಲ್ಲಿ ಕರ್ನಾಟಕದ ಜನರ ಕೃಷಿಗೆ ನೀರು ಹರಿಸುವುದು ಇರಲಿ, ಕುಡಿಯುವ ನೀರಿಗೇ ತತ್ವಾರ ಉಂಟಾಗಲಿದೆ. ಇಂತಹ ಸಂದರ್ಭದಲ್ಲಿ ತಮಿಳು ನಾಡಿಗೆ ನೀರನ್ನು ಬಿಡುವುದು ದೂರದ ಮಾತು. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಒತ್ತಡ ಹೇರಿದ್ದೇ ಆದರೆ ಅದು ಹಲವು ಬಿಕ್ಕಟ್ಟುಗಳಿಗೆ ಕಾರಣವಾಗಬಹುದು. ಯಾಕೆಂದರೆ, ಕಾವೇರಿ ವಿವಾದ ಬರೇ ನೀರಿಗಷ್ಟೇ ಸೀಮಿತವಾಗಿಲ್ಲ. ನೀರಿನ ಹೆಸರಿನಲ್ಲಿ ರಕ್ತ ಹರಿಸುವುದಕ್ಕೂ ಕಾಯುತ್ತಾ ಕೂತಿರುವ ರಾಜಕೀಯ ಗುಂಪುಗಳು ನಮ್ಮ ನಡುವೆ ಇವೆ. ಆದುದರಿಂದ ಸುಪ್ರೀಂಕೋರ್ಟ್ ಈ ವಿವಾದವನ್ನು ಅತ್ಯಂತ ಜಾಗರೂಕವಾಗಿ ನಿಭಾಯಿಸಬೇಕಾಗಿದೆ.
ಸರಕಾರವೂ ಕಾವೇರಿ ವಿವಾದದ ಸದ್ಯದ ಬೆಳವಣಿಗೆಗಳನ್ನು ಹದ್ದಿನ ಕಣ್ಣಿನಿಂದ ಗಮನಿಸಬೇಕಾಗಿದೆ. ದಕ್ಷಿಣ ಭಾರತದಲ್ಲಿ ತನ್ನ ನಿಯಂತ್ರಣವನ್ನು ಸಾಧಿಸಲು ಸಂಘಪರಿವಾರ ಮತ್ತು ಬಿಜೆಪಿ ತಮಿಳು ನಾಡು ಮತ್ತು ಕರ್ನಾಟಕ ರಾಜ್ಯಗಳ ನೆಲವನ್ನು ಬಳಸುವುದಕ್ಕೆ ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸುತ್ತಿದೆ. ತಮಿಳು ನಾಡಿನ ಜನರ ವಿರುದ್ಧ ಕನ್ನಡಿಗರನ್ನು ಎತ್ತಿಕಟ್ಟುವ ಪ್ರಯತ್ನ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ನಡೆದಿತ್ತು. ಕಾವೇರಿ ಹೆಸರಿನಲ್ಲಿ ಈ ಪ್ರಯತ್ನ ಮುಂದುವರಿಯುವ ಸಾಧ್ಯತೆಗಳಿವೆ. ತಮಿಳುನಾಡಿನ ರಾಜಕೀಯ ನಾಯಕರೊಬ್ಬರು ‘ಸನಾತನ ಧರ್ಮ’ದ ಕುರಿತಂತೆ ನೀಡಿರುವ ಪ್ರತಿಕ್ರಿಯೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಲ್ಲಿದೆ. ಈ ಹೇಳಿಕೆ ನೀಡಿದ ನಾಯಕನ ತಲೆ ಕಡಿಯಬೇಕು ಎಂದು ಸ್ವಯಂಘೋಷಿತ ಸ್ವಾಮೀಜಿಯೊಬ್ಬ ಕರೆ ನೀಡಿದ್ದಾನೆ. ಸನಾತನ ಧರ್ಮದ ವಿರುದ್ಧ ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು ತಮಿಳರ ವಿರುದ್ಧ ದ್ವೇಷವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ, ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಹೇಳಿಕೆಯೊಂದನ್ನು ನೀಡಿ ‘ಸನಾತನ ಧರ್ಮ ಹೇಳಿಕೆಗೆ ಪ್ರತಿ ಉತ್ತರಿಸಿ’’ ಎಂದು ಕರೆ ನೀಡಿದ್ದಾರೆ. ಈ ಕರೆ ಪರೋಕ್ಷವಾಗಿ ಪ್ರಚೋದನಕಾರಿಯಾಗಿದೆ. ‘ಸನಾತನ ಧರ್ಮದ ಕುರಿತ ಹೇಳಿಕೆಗೆ ಸೂಕ್ತ ಉತ್ತರ ಅಗತ್ಯವಿದೆ’ ಎನ್ನುವ ಪ್ರಧಾನಿಯ ಹೇಳಿಕೆಗೆ ಅರ್ಥವೇನು? ಸನಾತನದ ಧರ್ಮ ಎಂದರೇನು ಎನ್ನುವುದರ ಸೂಕ್ತ ವ್ಯಾಖ್ಯಾನವನ್ನು ನೀಡಲು ಅವರು ಕರೆ ನೀಡುತ್ತಿದ್ದಾರೆಯೆ? ಅಥವಾ ಮಣಿಪುರದಲ್ಲಿ ಕೇಂದ್ರ ಸರಕಾರದ ಮೀಸಲಾತಿ ರಾಜಕೀಯವನ್ನು ಪ್ರಶ್ನಿಸಿದ ಕುಕಿ ಸಮುದಾಯಕ್ಕೆ ಮೈತೈ ಸಮುದಾಯದ ಮೂಲಕ ಉತ್ತರಿಸಿದಂತೆ ಉತ್ತರಿಸಿ ಎಂದು ಹೇಳುತ್ತಿದ್ದಾರೆಯೆ? ಕಾವೇರಿ ವಿವಾದವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕನ್ನಡಿಗರನ್ನು ತಮಿಳು ಭಾಷಿಗರ ವಿರುದ್ಧ ಎತ್ತಿ ಕಟ್ಟುವ ಸಂಚುಗಳು ಇದೇ ಸಂದರ್ಭದಲ್ಲಿ ನಡೆಯಬಹುದು. ‘ಸನಾತನ ಧರ್ಮ’ದ ಮರೆಯಲ್ಲಿ ಕುಳಿತುಕೊಂಡೇ ಅವರು ಕಾವೇರಿ ವಿವಾದವನ್ನು ದುರ್ಬಳಕೆ ಮಾಡಬಹುದು. ಆದುದರಿಂದ ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವ ಜೊತೆ ಜೊತೆಗೇ ಕರ್ನಾಟಕದಲ್ಲಿರುವ ತಮಿಳು ಭಾಷಿಗರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಅವರನ್ನು ರಕ್ಷಿಸುವ ಹೊಣೆಗಾರಿಕೆ ಕೂಡ ಸರಕಾರದ ಮುಂದಿದೆ. ಕಾವೇರಿ ವಿವಾದ ಯಾವ ರೀತಿಯಲ್ಲೂ ಸಂಘರ್ಷ ರೂಪವನ್ನು ಪಡೆಯಬಾರದಂತೆ ಕಾನೂನು ಸುವ್ಯವಸ್ಥೆಯನ್ನು ಬಿಗಿ ಗೊಳಿಸುವುದು ಸರಕಾರತ ಕರ್ತವ್ಯವಾಗಿದೆ.