ಕೊರೋನ ಸಾವು: ಮುಚ್ಚುಮರೆ ಯಾಕೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊರೋನ-ಲಾಕ್‌ಡೌನ್ ದುರಂತಕ್ಕೆ ನಾಲ್ಕು ವರ್ಷಗಳು ಸಂದಿವೆ. ಆದರೆ ಕೊರೋನ ಮಾಡಿ ಹೋದ ಗಾಯಗಳು ಇನ್ನೂ ಒಣಗಿಲ್ಲ. ಮಾಗಿದ ಗಾಯಗಳು ಮುಟ್ಟಿದಂತೆ ಮತ್ತೆ ತೆರೆದುಕೊಳ್ಳುತ್ತಿವೆ. ಕೊರೋನ ಈ ದೇಶದ ಆರೋಗ್ಯದ ಮೇಲೆ ಮಾತ್ರವಲ್ಲ, ಆರ್ಥಿಕತೆಗೂ ಭಾರೀ ಆಘಾತವನ್ನು ನೀಡಿತ್ತು. ಕೊರೋನ ನಿಯಂತ್ರಣಕ್ಕಾಗಿ ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ಸರಕಾರ ಘೋಷಿಸಿದ ಲಾಕ್‌ಡೌನ್ ದೇಶವನ್ನು ಹಲವು ವರ್ಷ ಹಿಂದಕ್ಕೆ ಕೊಂಡೊಯ್ಯಿತು. ದೂರದೃಷ್ಟಿಯಿಲ್ಲದ ನೋಟು ನಿಷೇಧದ ಆಘಾತಕ್ಕೆ ಸಿಕ್ಕಿ ಆಗಷ್ಟೇ ಚೇತರಿಸುತ್ತಿದ್ದ ಭಾರತದ ಆರ್ಥಿಕತೆಯ ಗಾಯಗಳ ಮೇಲೆ ಲಾಕ್‌ಡೌನ್ ಬರೆ ಎಳೆಯಿತು. ಜನಸಾಮಾನ್ಯರ ಸ್ಥಿತಿ ಬದಿಗಿರಲಿ, ಸಣ್ಣ ಪುಟ್ಟ ಉದ್ಯಮಿಗಳೇ ಸಾಲು ಸಾಲಾಗಿ ಆತ್ಮಹತ್ಯೆ ಮಾಡತೊಡಗಿದರು. ಜನರನ್ನು ಕೊರೋನ ಬಲಿ ತೆಗೆದುಕೊಂಡದ್ದಕ್ಕಿಂತ ಲಾಕ್‌ಡೌನ್ ಬಲಿತೆಗೆದುಕೊಂಡದ್ದೇ ಹೆಚ್ಚು. ಬಡವರನ್ನು ಕೊರೋನ ಬಾಧಿಸಿದ್ದಕ್ಕಿಂತ, ಹಸಿವು, ನಿರುದ್ಯೋಗ ಹೆಚ್ಚು ಬಾಧಿಸಿತು. ಜನರು ಆಹಾರ, ಉದ್ಯೋಗ ಎಂದು ಹಾಹಾಕಾರ ಮಾಡುತ್ತಿರುವಾಗ ಸರಕಾರ ಲಸಿಕೆಗಾಗಿ ಕೋಟಿಗಟ್ಟಳೆ ದುಡ್ಡನ್ನು ಸುರಿಯುತ್ತಿತ್ತು. ಕೊರೋನ ಮುಗಿದಾಕ್ಷಣ ಸರಕಾರ, ಸಂಭವಿಸಿದ ಸಾವುನೋವುಗಳು, ಆರ್ಥಿಕತೆಯ ಮೇಲೆ ಅದು ಮಾಡಿದ ದುಷ್ಪರಿಣಾಮಗಳನ್ನು ಅಂದಾಜಿಸಲು ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಸಂತ್ರಸ್ತರಿಗೆ ಪರಿಹಾರ ನೀಡದಿದ್ದರೂ ಪರವಾಗಿಲ್ಲ, ಲಾಕ್‌ಡೌನ್‌ನಿಂದ ಸತ್ತವರೆಷ್ಟು, ಕೊರೋನದಿಂದ ಸತ್ತವರೆಷ್ಟು ಎನ್ನುವುದರ ಬಗ್ಗೆ ಸ್ಪಷ್ಟವಾದ ಅಂಕಿಅಂಶಗಳನ್ನು ಸಂಗ್ರಹಿಸುವುದು ಸರಕಾರದ ಕರ್ತವ್ಯವಾಗಿತ್ತು. ಆದರೆ ಇಂದಿಗೂ ಕೇಂದ್ರ ಸರಕಾರದ ಬಳಿ ಈ ಬಗ್ಗೆ ಸ್ಪಷ್ಟವಾದ ಅಂಕಿಅಂಶಗಳಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಸತ್ತ ವಲಸೆ ಕಾರ್ಮಿಕರ ಬಗ್ಗೆ ತನ್ನ ಬಳಿ ಯಾವುದೇ ಮಾಹಿತಿಯಿಲ್ಲ ಎಂದು ಸರಕಾರವೇ ಸಂಸತ್ತಿನಲ್ಲಿ ಕೈ ಚೆಲ್ಲಿತ್ತು.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ 2020ರಲ್ಲಿ ಭಾರತದಲ್ಲಿ 11.9 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿದೆ ಎಂದು ಅಂತರ್‌ರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ. ಭಾರತದಲ್ಲಿ ಕೋವಿಡ್ ಸಾವುಗಳ ಕುರಿತಂತೆ ಇರುವ ಅಧಿಕೃತ ಅಂಕಿಅಂಶಗಳಿಗಿಂತ ಸುಮಾರು ಎಂಟು ಪಟ್ಟು ಹೆಚ್ಚಿದೆ ಎನ್ನುವುದನ್ನು ಇದು ಹೇಳುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿಗಿಂತಲೂ ಒಂದೂವರೆ ಪಟ್ಟು ಸಾವುಗಳು ಅಧಿಕವಾಗಿದೆ. ಈ ಸಂಶೋಧನೆಯ ಪ್ರಕಾರ, ಸಾಂಕ್ರಾಮಿಕದಿಂದಾಗಿ ಜಾಗತಿಕವಾಗಿ ಸಂಭವಿಸಿದ ಸಾವುಗಳ ಪೈಕಿ ಮೂರನೇ ಒಂದರಷ್ಟು ಭಾರತದಲ್ಲಿ ಸಂಭವಿಸಿದೆ. ಅಷ್ಟೇ ಅಲ್ಲ, ಅಲ್ಪಸಂಖ್ಯಾತ ಮತ್ತು ಶೋಷಿತ ಸಮುದಾಯದ ಮೇಲೆ ಕೊರೋನ ಹೆಚ್ಚು ಭೀಕರ ಪರಿಣಾಮವನ್ನು ಬೀರಿದ್ದು, ಅವರ ಮರಣ ಪ್ರಮಾಣ ಹೆಚ್ಚಳವಾಗಿರುವುದನ್ನು ಉಲ್ಲೇಖಿಸಿದೆ. ಎಂದಿನಂತೆ ಸರಕಾರ, ಈ ಸಮೀಕ್ಷೆಗೆ ಬಳಸಿದ ಮಾನದಂಡವೇ ಸರಿಯಿಲ್ಲ ಎಂದು ವಾದಿಸುತ್ತಿದೆ. ‘ಈ ವರದಿ, ಅಸಮರ್ಥನೀಯ ಮತ್ತು ಸ್ವೀಕಾರಾರ್ಹವಲ್ಲ. ಗಂಭೀರ ನ್ಯೂನತೆಗಳನ್ನು ಇದು ಹೊಂದಿದೆ’ ಎಂದು ಕೇಂದ್ರ ಕುಟುಂಬ ಕಲ್ಯಾಣ ಸಚಿವಾಲಯ ವಾದಿಸುತ್ತಿದೆ. ವಿಪರ್ಯಾಸವೆಂದರೆ, ಕೊರೋನ ಸಾವು ನೋವುಗಳ ಬಗ್ಗೆ ಸರಕಾರದ ಅಂಕಿಅಂಶಗಳನ್ನು ಈ ಹಿಂದೆ ವಿಶ್ವಸಂಸ್ಥೆಯೇ ಅಲ್ಲಗಳೆದಿತ್ತು. ಕೊರೋನ ಸಾವುಗಳ ಬಗ್ಗೆ ಸರಕಾರದ ಬಳಿ ಸ್ಪಷ್ಟ ಅಂಕಿಅಂಶಗಳಿಲ್ಲ ಅಥವಾ ಅದು ಸಾವುಗಳ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎನ್ನುವುದನ್ನು ಎರಡು ವರ್ಷಗಳ ಹಿಂದೆಯೇ ಹೇಳಿತ್ತು.
ಕಳೆದ ಹತ್ತು ವರ್ಷಗಳಿಂದ ಭಾರತ ಎಲ್ಲ ಅಂತರ್‌ರಾಷ್ಟ್ರೀಯ ಮಟ್ಟದ ಅಧ್ಯಯನಗಳ ಬಗ್ಗೆ ತನ್ನ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಾ ಬಂದಿದೆ. ಹಸಿವಿನ ಸೂಚ್ಯಂಕ ಬಹಿರಂಗವಾದ ಬೆನ್ನಿಗೇ ಭಾರತ ಸರಕಾರ, ಸೂಚ್ಯಂಕಕ್ಕೆ ಬಳಸಿದ ಮಾನದಂಡಗಳು ಪ್ರಶ್ನಾರ್ಹವಾಗಿದೆ ಎಂದಿತು. ಬಡತನದ ಬಗ್ಗೆ, ಆರೋಗ್ಯದ ಬಗ್ಗೆ ಅಂತರ್‌ರಾಷ್ಟ್ರೀಯ ವರದಿಗಳನ್ನೂ ಭಾರತ ನಿರಾಕರಿಸುತ್ತಲೇ ಬಂದಿದೆ. ಇಷ್ಟೇ ಅಲ್ಲ, ಭಾರತದ ಪ್ರಜಾಪ್ರಭುತ್ವ ಸೂಚ್ಯಂಕ ಕುಸಿತ ಕಂಡಾಗಲೂ ಸರಕಾರ ಅದನ್ನು ಒಪ್ಪಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯದ ಕುರಿತ ವರದಿಗಳನ್ನೂ ಭಾರತ ಸಾರಾಸಗಟಾಗಿ ನಿರಾಕರಿಸಿತು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಬಡತನವನ್ನು ಇಲ್ಲವಾಗಿಸಲು ಸರಕಾರ ಸುಲಭವಾದ ತಂತ್ರವನ್ನು ಅನುಸರಿಸುತ್ತಿದೆ. ಪರಿಣಾಮವಾಗಿ, ನೀತಿ ಆಯೋಗವು ಭಾರತದಲ್ಲಿ ಬಡತನ ಇಳಿಮುಖವಾಗಿದೆ ಎಂದು ಘೋಷಿಸಿತು. ಬಡತನವನ್ನು ನಿವಾರಿಸುವುದಕ್ಕಿಂತ, ಬಡತನವನ್ನು ನಿರ್ಧರಿಸುವ ಮಾನದಂಡಗಳಲ್ಲಿ ಬದಲಾವಣೆ ಮಾಡುವ ಮೂಲಕ ಬಡವರ ಸಂಖ್ಯೆಯನ್ನು ಇಳಿಸುವುದು ಸುಲಭ ಎನ್ನುವುದನ್ನು ಸರಕಾರ ಕಂಡುಕೊಂಡಿದೆ. ಈ ದೇಶದ ಸಾಮಾಜಿಕ ವಲಯಗಳ ಸ್ಥಿತಿಗತಿಗಳ ಬಗ್ಗೆ ವರದಿಗಳು ಬಂದಾಗ, ಆ ವರದಿಯ ಅಂಕಿಅಂಶಗಳನ್ನು ನಿರಾಕರಿಸುವುದರಿಂದ ಅಥವಾ ವಾಸ್ತವವನ್ನು ಮುಚ್ಚಿಡುವುದರಿಂದ ಭಾರತದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ಅರ್ಥಮಾಡಿಕೊಳ್ಳಬೇಕಾಗಿದೆ. ಕೊರೋನದಿಂದಾಗಿರುವ ಅನಾಹುತಗಳಿಂದ ಭಾರತ ಪಾಠ ಕಲಿಯಬೇಕಾದರೆ ಮೊದಲು ಅದರಲ್ಲಾಗಿರುವ ಸಾವು ನೋವುಗಳ ಬಗ್ಗೆ ತಿಳಿದುಕೊಳ್ಳುವ ಧೈರ್ಯ ಮಾಡಬೇಕು.
ಜನವರಿ 1, 2020ರಿಂದ 31 ಡಿಸೆಂಬರ್ 2021ರವರೆಗೆ 4,81,000 ಸಾವುಗಳನ್ನು ಭಾರತ ವರದಿ ಮಾಡಿತ್ತು. ಆದರೆ ಆಗಲೇ ವಿಶ್ವಸಂಸ್ಥೆಯು ಈ ವರದಿಯನ್ನು ನಿರಾಕರಿಸಿ, ಇದರ ಹತ್ತು ಪಟ್ಟು ಹೆಚ್ಚು ಸಾವು ಸಂಭವಿಸಿದೆ ಎಂದು ಸ್ಪಷ್ಟಪಡಿಸಿತ್ತು. ಚೀನಾದಲ್ಲಿ ಕೊರೋನ ವೈರಸ್ ತನ್ನ ದಾಳಿಯನ್ನು ಆರಂಭಿಸಿ ನಿಧಾನಕ್ಕೆ ವಿಶ್ವದೆಲ್ಲೆಡೆಗೆ ಅದು ಹರಡಿತು. ಭಾರತದಲ್ಲಿ ತಡವಾಗಿ ಆಗಮಿಸಿತಾದರೂ, ಸರಕಾರ ಕೊರೋನ ಹೆಸರಿನಲ್ಲಿ ಅನುಸರಿಸಿದ ದ್ವಂದ್ವ ನಿಲುವುಗಳು, ದ್ವೇಷ ರಾಜಕೀಯಗಳಿಂದಾಗಿ ನಿಧಾನಕ್ಕೆ ವೈರಸ್ ಅತ್ಯಂತ ಭೀಕರ ರೂಪವನ್ನು ಪಡೆಯಿತು. ಒಂದೆಡೆ ಅನಿರೀಕ್ಷಿತ ಲಾಕ್‌ಡೌನ್‌ಗಳಿಂದಾಗಿ ವಲಸೆ ಕಾರ್ಮಿಕರ ಮಾರಣಹೋಮ ನಡೆದರೆ, ಮಗದೊಂದೆಡೆ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ, ಆಕ್ಸಿಜನ್ ಕೊರತೆಯಿಂದಾಗಿ ಸಾವುಗಳು ಸಂಭವಿಸತೊಡಗಿದವು. ಸ್ಮಶಾನಗಳಲ್ಲಿ ಸುಡುವುದಕ್ಕೆ ಹೆಣಗಳು ಸಾಲುಗಟ್ಟಿ ನಿಂತಿರುವುದು ಪತ್ರಿಕೆಗಳ ಮುಖಪುಟದಲ್ಲಿ ವರದಿಯಾದವು. ಒಂದೆಡೆ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳ ಕೊರತೆ, ಮಗದೊಂದೆಡೆ ಮೃತರನ್ನು ಸುಡಲು ಸ್ಮಶಾನದ ಕೊರತೆ. ಗಂಗಾ ನದಿಯ ತಟದಲ್ಲಿ ಕೊಳೆತ ಮೃತದೇಹಗಳನ್ನು ನಾಯಿಗಳು ಎಳೆದಾಡುತ್ತಿರುವ ಪೋಟೊಗಳು ಪತ್ರಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಂಡವು. ಇಷ್ಟಾದರೂ, ಮೃತರ ಸಂಖ್ಯೆಯ ಬಗ್ಗೆ ವಿಶ್ವಸಂಸ್ಥೆಯ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ಸರಕಾರ ತನ್ನ ಮುಖಉಳಿಸಿಕೊಳ್ಳುವ ಪ್ರಯತ್ನ ನಡೆಸಿತು.
ಕೊರೋನದ ಸಾವುನೋವುಗಳ ಅಂಕಿಅಂಶಗಳ ಕುರಿತಂತೆ ಸರಕಾರ ಪ್ರದರ್ಶಿಸಿದ ಬೇಜವಾಬ್ದಾರಿಗೆ ಭಾರತ ಈಗಾಗಲೇ ಭಾರೀ ಬೆಲೆತೆತ್ತಿದೆ. ವಿಶ್ವಸಂಸ್ಥೆ ಅಥವಾ ಇತರ ಅಂತರ್‌ರಾಷ್ಟ್ರೀಯ ವರದಿಗಳು ಅನುಸರಿಸಿದ ಮಾನದಂಡಗಳು ತಪ್ಪೇ ಇರಬಹುದು. ಆದರೆ ಸರಕಾರ ಅನುಸರಿಸಿದ ಮಾನದಂಡಗಳು ಎಷ್ಟರಮಟ್ಟಿಗೆ ಸರಿಯಿದೆ? ಎನ್ನುವುದು ಚರ್ಚೆಯಾಗಬೇಕು. ಭಾರತವು ಮೊದಲು ತನ್ನ ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆಯನ್ನು ಮಾಡಬೇಕು. ಸಾಂಕ್ರಾಮಿಕ ರೋಗಗಳು ಹರಡಿದಾಗ ಸಂಭವಿಸುವ ಸಾವು ನೋವುಗಳ ಬಗ್ಗೆ ಆಸ್ಪತ್ರೆಗಳಿಂದ ಮಾಹಿತಿ ಸಂಗ್ರಹಿಸಲು ನೂತನ ತಂತ್ರಜ್ಞಾನಗಳನ್ನು ಬಳಸಬೇಕು. ಕೊರೋನ ಸಾವುನೋವುಗಳ ಬಗ್ಗೆ ಸ್ಪಷ್ಟ ವಿವರಗಳನ್ನು ಪಡೆಯುವುದು ಈ ದೇಶದ ಜನರ ಹಕ್ಕು. ಆದುದರಿಂದ, ಮುಂದಿನ ಜನಗಣತಿಯ ಸಂದರ್ಭದಲ್ಲಿ ಒಂದು ಪ್ರಶ್ನೆಯನ್ನು ಪ್ರತ್ಯೇಕವಾಗಿ ಅರ್ಜಿಯಲ್ಲಿ ಸೇರಿಸಬೇಕು. 2020ರಲ್ಲಿ ಕೊರೋನ ಸಾಂಕ್ರಾಮಿಕ ಹರಡಿದಾಗ ನಿಮ್ಮ ಮನೆಯಲ್ಲಿ ಸಾವು ಸಂಭವಿಸಿದೆಯೆ? ಸಂಭವಿಸಿದ್ದೇ ಆದರೆ ಅವರ ವಯಸ್ಸು, ಲಿಂಗ, ಮೃತ ದಿನಾಂಕವನ್ನು ದಾಖಲಿಸಬೇಕು. ಆಗ ಮಾತ್ರ ಭಾರತದಲ್ಲಿ ಸಂಭವಿಸಿದ ಕೊರೋನ ಸಾವುಗಳ ನಿಖರ ಮಾಹಿತಿ ಬಹಿರಂಗವಾಗಬಹುದು.