ಕೊರೋನ: ತಪ್ಪುಗಳು ಮರುಕಳಿಸದಿರಲಿ

Update: 2023-12-21 07:03 GMT

Photo: freepik

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಿಂದ’ ಎನ್ನುತ್ತಿದೆ ಕೊರೋನ. ಮಾಧ್ಯಮಗಳು ಮತ್ತು ರಾಜಕಾರಣಿಗಳು ಅದಾವುದೋ ದೇಶದಿಂದ ವಿವಿಐಪಿ ಆಗಮಿಸಿದಂತೆ ಕೊರೋನ ಅಂಕಿಸಂಕಿಗಳನ್ನು ಸಂಭ್ರಮಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕೊರೊನಾ ಮಾಡಿರುವ ಹಿಂದಿನ ಗಾಯಗಳೇ ಇನ್ನೂ ಒಣಗಿಲ್ಲ, ಅಷ್ಟರಲ್ಲಿ ಮತ್ತೆ ಕೊರೋನ ಹೆಸರಿನಲ್ಲಿ ಸರಕಾರ ಹೇಳಿಕೆಗಳು ನೀಡುತ್ತಿರುವುದನ್ನು ಜನಸಾಮಾನ್ಯರು ಆತಂಕದಿಂದ ಗಮನಿಸುತ್ತಿದ್ದಾರೆ. ‘‘ಕೊರೋನ ಆತಂಕ ಬೇಡ, ಸದ್ಯಕ್ಕೆ ನಿರ್ಬಂಧವಿಲ್ಲ’ ಎನ್ನುವ ಹೇಳಿಕೆಗಳನ್ನು ಜನಸಾಮಾನ್ಯರು ನಂಬುತ್ತಿಲ್ಲ. ಯಾಕೆಂದರೆ ಈ ಹಿಂದೆ, ಇಂತಹದೇ ಹೇಳಿಕೆಗಳನ್ನು ನೀಡುತ್ತಾ ಸರಕಾರ ನಯವಾಗಿ ಜನಸಾಮಾನ್ಯರ ಬೆನ್ನಿಗೆ ಲಾಕ್‌ಡೌನ್ ಮೂಲಕ ಇರಿಯಿತು. ಅದಾದ ಬಳಿಕ ಲಸಿಕೆಗಳ ಹೆಸರಿನಲ್ಲೂ ಜನರ ತೆರಿಗೆ ಹಣವನ್ನು ಹಾಡಹಗಲೇ ಲೂಟಿ ಮಾಡಿತು. ಸರಕಾರದ ಮಾತುಗಳನ್ನು ನಂಬಿ ಎರಡೆರಡು ಬಾರಿ ಲಸಿಕೆಗಳನ್ನು ಪಡೆದ ಜನರು ಕೊರೋನ ಇನ್ನಾದರೂ ತೊಲಗಬಹುದು ಎಂದು ಭಾವಿಸಿದ್ದರು. ಕೊರೋನ ತೊಲಗಿತೋ ಇಲ್ಲವೋ, ಆದರೆ ಲಸಿಕೆಗಳು ಜನಸಾಮಾನ್ಯರ ಬದುಕಿನ ಮೇಲೆ ಬೇರೆ ಬೇರೆ ರೀತಿಯ ದುಷ್ಪರಿಣಾಮಗಳನ್ನು ಬೀರತೊಡಗಿವೆ. ಅದರ ಬೆನ್ನಿಗೇ ಇದೀಗ ಮತ್ತೆ ‘ಕೊರೋನ ಬಂದಿದೆ, ಜಾಗ್ರತೆ’ ಎಂದು ಸರಕಾರ ಹೇಳಿಕೆ ನೀಡುತ್ತಿದೆ. ಲಸಿಕೆಗಳನ್ನು ಪಡೆದರೆ ಕೊರೋನ ಬರುವುದಿಲ್ಲ ಎಂದು ಈ ಹಿಂದೆ ಸರಕಾರವೇ ನಂಬಿಸಿತ್ತು. ಹೀಗಿರುವಾಗ ಮತ್ತೆ ಕೊರೋನ ಬಂದದ್ದು ಹೇಗೆ? ಎನ್ನುವ ಪ್ರಶ್ನೆಗೆ ಯಾರೂ ಉತ್ತರಿಸುತ್ತಿಲ್ಲ.

ಕೇರಳದಲ್ಲಿ ಕೊರೋನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ರಾಜಕಾರಣಿಗಳು, ಮಾಧ್ಯಮ ಮಂದಿ ಕೊರೋನದ ಬಗ್ಗೆ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಈ ಸಂದರ್ಭದಲ್ಲಿ ನಿಜಕ್ಕೂ ಹೇಳಿಕೆಗಳನ್ನು ನೀಡಬೇಕಾದವರು ಕೊರೋನ ಸಂಬಂಧಿ ವೈದ್ಯಕೀಯ ತಜ್ಞರು. ೬೦ ವರ್ಷ ಮೀರಿದವರು, ಕಾಯಿಲೆಪೀಡಿತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ರಾಜ್ಯ ಸರಕಾರ ಆದೇಶ ನೀಡಿದೆ. ಇದೇ ಸಂದರ್ಭದಲ್ಲಿ, ಕೇರಳದಿಂದ ಬರುವ ಯಾತ್ರಿಗಳು ಮತ್ತು ಪ್ರವಾಸಿಗರನ್ನು ತಡೆದು ಕ್ವಾರಂಟೈನ್‌ನಲ್ಲಿ ಇಡುವ ಪ್ರಯತ್ನ ಕೆಲವೆಡೆ ನಡೆಯುತ್ತಿದೆ. ಅಷ್ಟೇ ಅಲ್ಲ, ಗಡಿಭಾಗದಲ್ಲಿ ಜನರನ್ನು ಬಲವಂತವಾಗಿ ಪರೀಕ್ಷೆ ಮಾಡುತ್ತಿರುವ ಬಗ್ಗೆಯೂ ವರದಿಗಳು ಬರುತ್ತಿವೆ. ಇದು ನಿಜಕ್ಕೂ ಆತಂಕಕಾರಿ. ‘ಮಾಸ್ಕ್’ ಮೂಲಕ ಕೊರೋನವನ್ನು ತಡೆಯಬಹುದು ಎನ್ನುವ ಪ್ರತಿಪಾದನೆಯ ಬಗ್ಗೆ ಅರ್ಹ ತಜ್ಞರು ಒಮ್ಮತಾಭಿಪ್ರಾಯವನ್ನು ಹೊಂದಿಲ್ಲ. ಭಾರತದಂತಹ ದೇಶದಲ್ಲಿ ಕೊರೋನದಂತಹ ವೈರಸ್ ಹರಡಲು ಮಾಸ್ಕ್ ಕೂಡ ಕಾರಣವಾಗಬಹುದು ಎನ್ನುವ ಎಚ್ಚರಿಕೆಯನ್ನು ಹಲವು ತಜ್ಞರು ನೀಡಿದ್ದಾರೆ. ಬಡವರು, ವಲಸೆ ಕಾರ್ಮಿಕರು ಸ್ವಚ್ಛ ಮಾಸ್ಕ್‌ಗಳನ್ನು ಹೊಂದುವುದಕ್ಕೆ ಸಾಧ್ಯವಿಲ್ಲದ ಸ್ಥಿತಿ ಭಾರತದಲ್ಲಿದೆ. ಪೊಲೀಸರ ಲಾಠಿಗೆ ಹೆದರಿ ಇವರು ಬಳಸಿದ ಮಾಸ್ಕ್‌ಗಳನ್ನೇ ಮತ್ತೆ ಮತ್ತೆ ಬಳಸುವ ಸಾಧ್ಯತೆಗಳಿವೆ. ಮಾಸ್ಕ್‌ಗಳೇ

ಕೆಲವೊಮ್ಮೆ ಬೇರೆ ಬೇರೆ ರೋಗಗಳನ್ನು ಹರಡುವ ಸಾಧ್ಯತೆಗಳ ಬಗ್ಗೆಯೂ ವೈದ್ಯರು ಎಚ್ಚರಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆದುದರಿಂದ ಜನರ ಮೇಲೆ ಅನಗತ್ಯವಾಗಿ ಮಾಸ್ಕ್‌ಗಳನ್ನು ಹೇರುವ ಪ್ರಯತ್ನವನ್ನು ಸರಕಾರ ಮಾಡಬಾರದು.

ಇದೇ ಸಂದರ್ಭದಲ್ಲಿ, ಗುಣಮುಖರಾಗಿರುವ ಕೊರೋನ ಸೋಂಕಿತರು ಪ್ರತಿರೋಧಕ ಶಕ್ತಿಯನ್ನು ಪಡೆದಿರುತ್ತಾರೆ ಎಂದು ಈಗಾಗಲೇ ವೈದ್ಯರು ಹೇಳಿಕೆಯನ್ನು ನೀಡಿದ್ದಾರೆ. ಭಾರತದಲ್ಲಿ ಈಗಾಗಲೇ ಒಮ್ಮೆ ಕೊರೋನ ಬಂದು ಹೋಗಿದೆ. ಬಹುಸಂಖ್ಯಾತ ಭಾರತೀಯರನ್ನು ಕೊರೋನ ಅವರಿಗೆ ತಿಳಿದೋ ತಿಳಿಯದೆಯೋ ಸಂಪರ್ಕಿಸಿದೆ. ಇದರ ಜೊತೆ ಜೊತೆಗೆ ಲಸಿಕೆಗಳನ್ನು ಕೂಡ ಪಡೆದಿದ್ದಾರೆ. ಹೀಗಿರುವಾಗ, ಮತ್ತೆ ಕೊರೋನ ಹೆಸರಿನಲ್ಲಿ ಗದ್ದಲ ಎಬ್ಬಿಸುವ ಅಗತ್ಯವಿದೆಯೆ? ಇಷ್ಟಕ್ಕೂ ಅನಗತ್ಯವಾಗಿ ಕೊರೋನ ಪರೀಕ್ಷೆ ನಡೆಸುವುದರಿಂದ ಏನು ಪ್ರಯೋಜನವಿದೆ? ಲಸಿಕೆಯ ಹೊರತಾಗಿ ಕೊರೋನಕ್ಕೆ ಅಧಿಕೃತ ಔಷಧಿಗಳನ್ನು ಇನ್ನೂ ಗುರುತಿಸಿಲ್ಲ. ಲಸಿಕೆಯ ಪರಿಣಾಮದ ಬಗ್ಗೆ ಸರಕಾರಕ್ಕೇ ಗೊಂದಲವಿದೆ. ಜನಸಾಮಾನ್ಯರ ಮೇಲೆ ಲಸಿಕೆಗಳನ್ನು ಸರಕಾರವೇ ಹೇರಿತಾದರೂ, ಅದು ಹಲವರ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡಿದಾಗ ಅದರ ಜೊತೆಗೆ ಅಂತರವನ್ನು ಕಾಪಾಡಿಕೊಂಡಿತು. ಲಸಿಕೆಯಿಂದ ಹಾನಿಗೊಳಗಾದವರ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿ ಸರಕಾರದಿಂದ ಪರಿಹಾರವನ್ನು ಕೇಳಿದಾಗ ‘ಲಸಿಕೆ ಕಡ್ಡಾಯವಲ್ಲ, ಐಚ್ಛಿಕ. ಲಸಿಕೆಗೆ ಸಂಬಂಧಿಸಿ ಆಯಾ ಕಂಪೆನಿಗಳ ಜೊತೆಗೇ ಸಂತ್ರಸ್ತರು ಪರಿಹಾರವನ್ನು ಕೇಳಬೇಕು’ ಎಂದು ನ್ಯಾಯಾಲಯದಲ್ಲಿ ವಾದಿಸಿತು. ಹೀಗಿರುವಾಗ, ಮತ್ತೆ ಕೊರೋನ ಪರೀಕ್ಷೆಯ ಪ್ರಹಸನವನ್ನು ಮರು ಪ್ರದರ್ಶನಕ್ಕೆ ಇಳಿಸುವುದು ಎಷ್ಟು ಸರಿ? ಪ್ರತಿ ದಿನ ಕೊರೋನ ಪೀಡಿತರ ಸಂಖ್ಯೆಗಳನ್ನು ಪ್ರಕಟಿಸುವುದರಿಂದ ಕೊರೋನವನ್ನು ತಡೆಯಲು ಸಾಧ್ಯವೆ?

ಈ ಸಂದರ್ಭದಲ್ಲಿ ಸರಕಾರ ನಿಜಕ್ಕೂ ಮಾಡಬೇಕಾಗಿರುವುದು ಸಾರ್ವಜನಿಕ ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದು. ಹಾಗೆಯೇ ಉಸಿರಾಟ ಸಂಬಂಧಿ ರೋಗಿಗಳಿಗೆ ಬೇಕಾದ ಅತ್ಯಗತ್ಯ ಔಷಧಿಗಳು, ಆಕ್ಸಿಜನ್‌ಗಳು ಸಿಗುವಂತೆ ನೋಡಿಕೊಳ್ಳುವುದು. ಕೊರೋನ ಸಂದರ್ಭದಲ್ಲಿ ತಕ್ಷಣಕ್ಕೆ ಬಲಿಯಾಗುವವರು ಅಸ್ತಮಾದಂತಹ ಉಸಿರಾಟ ಸಂಬಂಧಿತ ಕಾಯಿಲೆ ಪೀಡಿತರು. ಕೊರೋನದ ಗದ್ದಲದಲ್ಲಿ ಈ ರೋಗಿಗಳನ್ನು ಆಸ್ಪತ್ರೆಗಳು ನಿರ್ಲಕ್ಷಿಸುತ್ತವೆ. ಇದೇ ಸಂದರ್ಭದಲ್ಲಿ ಕ್ಷಯ, ಎಚ್‌ಐವಿ, ಕಿಡ್ನಿ ವೈಫಲ್ಯ ಮೊದಲಾದ ಕಾಯಿಲೆಗಳಿಂದ ನರಳುತ್ತಿರುವವರು ಆಸ್ಪತ್ರೆಗಳ ಸೌಲಭ್ಯಗಳಿಲ್ಲದೆ ಅವರ ಸ್ಥಿತಿ ಗಂಭೀರವಾಗುತ್ತದೆ. ಸರಿಯಾದ ಚಿಕಿತ್ಸೆಯಿಲ್ಲದೆ ಇವರು ಮೃತಪಟ್ಟರೆ ಇವರ ಸಾವುಗಳನ್ನೆಲ್ಲ ಕೊರೋನದ ಖಾತೆಗೆ ತುಂಬಲಾಗುತ್ತದೆ. ಇಂತಹ ಸ್ಥಿತಿಯನ್ನು ಸರಕಾರ ಮತ್ತೊಮ್ಮೆ ಜನಸಾಮಾನ್ಯರಿಗೆ ತಂದಿಡಬಾರದು. ಈ ದೇಶದ ಬಹುಸಂಖ್ಯಾತ ಜನರು ಕೊರೋನಕ್ಕಿಂತ ಹೆಚ್ಚು ಹೆದರುತ್ತಿರುವುದು ನಿರುದ್ಯೋಗ, ಹಸಿವಿಗೆ. ಕಳೆದ ಬಾರಿಯ ಕೊರೋನ, ಲಾಕ್‌ಡೌನ್‌ನಿಂದಾಗಿ ನೂರಾರು ಉದ್ಯಮಗಳು ಮುಚ್ಚಿ ಹೋದವು. ಕಾರ್ಮಿಕರು ಬೀದಿ ಪಾಲಾದರು. ಅಳಿದುಳಿದವರು ಇದೀಗ ಚೇತರಿಸಿ ನಿಧಾನಕ್ಕೆ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಕೊರೋನ ಗದ್ದಲ ಎಬ್ಬಿಸಿ ಲಾಕ್‌ಡೌನ್‌ಗಳನ್ನು ಜನಸಾಮಾನ್ಯರ ಮೇಲೆ ಹೇರಿದ್ದಾದರೆ ಅದು ದೇಶದ ಮೇಲೆ ಅತ್ಯಂತ ಭೀಕರ ಪರಿಣಾಮವನ್ನು ಬೀರಲಿದೆ.

ಕೊರೋನದ ಹೆಸರಿನಲ್ಲಿ ಮತ್ತೊಮ್ಮೆ ಲಸಿಕೆಗಳ ಹೇರಿಕೆಯೂ ಬೇಡ. ಈಗಾಗಲೇ ಲಸಿಕೆಗಳ ದುಷ್ಪರಿಣಾಮಗಳ ಬಗ್ಗೆ ಶ್ರೀಸಾಮಾನ್ಯರು ಆತಂಕಕ್ಕೆ ಒಳಗಾಗಿದ್ದಾರೆ. ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳಿಗೆ ಲಸಿಕೆಗಳನ್ನು ಪಡೆದಿರುವುದೇ ಕಾರಣ ಎಂದು ನಂಬಿಸಲಾಗುತ್ತಿದೆ. ಸರಕಾರವೂ ಇದನ್ನು ಅಧಿಕೃತವಾಗಿ ನಿರಾಕರಿಸಿಲ್ಲ. ಲಸಿಕೆಯ ಹೆಸರಿನಲ್ಲಿ ಸರಕಾರ ಭಾರೀ ಅಕ್ರಮಗಳನ್ನು ನಡೆಸಿರುವ ಆರೋಪಗಳೂ ಕೇಳಿ ಬಂದಿವೆ. ಇಂತಹ ಹೊತ್ತಿನಲ್ಲಿ ಮತ್ತೊಮ್ಮೆ ಕೊರೋನವನ್ನು ತಮ್ಮ ರಾಜಕೀಯ ದುರುದ್ದೇಶಗಳಿಗೆ, ಆರ್ಥಿಕ ಲೂಟಿಗೆ ರಾಜಕಾರಣಿಗಳು ಬಳಸುವಂತಾಗಬಾರದು. ಈ ಸಂದರ್ಭದಲ್ಲಿ ಜನಸಾಮಾನ್ಯರು ಸ್ವಯಂ ಜಾಗೃತಿಯನ್ನು ಹೊಂದಬೇಕು. ಉಸಿರಾಟ ಸಂಬಂಧಿ ಕಾಯಿಲೆಗಳ ತಜ್ಞರು ಕೊರೋನಕ್ಕೆ ಸಂಬಂಧಿಸಿ ಮಾತನಾಡಬೇಕು. ಜನರಿಗೆ ಹಾಗೂ ಸರಕಾರಕ್ಕೆ ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ನೀಡಿ ಕೊರೋನದಿಂದ ಮಾತ್ರವಲ್ಲ, ಅದರ ಹೆಸರಿನಲ್ಲಿ ನಡೆಯುವ ಎಲ್ಲ ಅಕ್ರಮ, ಅವ್ಯವಹಾರಗಳಿಂದ ಜನರನ್ನು ರಕ್ಷಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News