ಕೊರೋನ ಹೆಸರಿನಲ್ಲಿ ನಾಡನ್ನು ಬಲಿತೆಗೆದುಕೊಂಡ ಭ್ರಷ್ಟಾಚಾರ
ನೋಟು ನಿಷೇಧ ಮತ್ತು ಕೊರೋನ ಇವೆರಡೂ ಈ ದೇಶದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಗಳಿಗೆ ಕಾರಣವಾದವು. ನೋಟು ನಿಷೇಧದ ಹೆಸರಿನಲ್ಲಿ ಈ ದೇಶದ ಕಾಳಧನಗಳೆಲ್ಲ ಅಕ್ರಮ ದಾರಿಯಲ್ಲಿ ಬಿಳಿಯಾದರೆ, ಕೊರೋನ ಹೆಸರಿನಲ್ಲಿ ರಾಜಕಾರಣಿಗಳು, ಕಾರ್ಪೊರೇಟ್ ಸಂಸ್ಥೆಗಳು ಜೊತೆ ಸೇರಿ ಜನರನ್ನು ಸುಲಿದವು. ಕೊರೋನ ವೈರಸ್ಗಿಂತಲೂ, ಸರಕಾರದ ಅಕ್ರಮಗಳೇ ಸಾವಿರಾರು ಜನರನ್ನು ಬಲಿತೆಗೆದುಕೊಂಡವು. ಕ್ವಾರಂಟೈನ್ ಹೆಸರಿನಲ್ಲಿ ಆಸ್ಪತ್ರೆಗಳು ಬಡವರ ಹೆಣದ ಮೇಲೆ ಲಕ್ಷಾಂತರ ರೂ. ಬಿಲ್ ಮಾಡಿ ದೋಚಿದವು. ಕೊರೋನ ತಡೆಯಲು ಮೂಲಭೂತ ಸೌಕರ್ಯದ ಹೆಸರಿನಲ್ಲಿ ರಾಜಕಾರಣಿಗಳು ಲಂಚ ಹೊಡೆದರು. ಎಲ್ಲ ಮುಗಿದ ಬಳಿಕ ಲಸಿಕೆಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪೆನಿಗಳು ಜನರ ತೆರಿಗೆ ಹಣಕ್ಕೆ ಕನ್ನ ಹಾಕಿದವು. ಕಾರ್ಪೊರೇಟ್ ಕಂಪೆನಿಗಳು ಮತ್ತು ರಾಜಕಾರಣಿಗಳ ಅನೈತಿಕ ಸಂಬಂಧದ ಕೂಸು ಈ ಲಸಿಕೆ ವ್ಯಾಪಾರ. ಸರಕಾರವೇ ಮುಂದೆ ನಿಂತು ಜನರ ಮೇಲೆ ಈ ಲಸಿಕೆಗಳನ್ನು ಹೇರಿತು. ಜನರು ಆಹಾರಕ್ಕಾಗಿ ಹಾಹಾಕಾರ ಮಾಡುತ್ತಿದ್ದರೆ ಸರಕಾರಕ್ಕದು ಲಸಿಕೆ ಲಸಿಕೆ ಎಂದು ಕೇಳಿಸುತ್ತಿತ್ತು. ಕೊರೋನ ಅವ್ಯವಹಾರದಲ್ಲಿ ಕರ್ನಾಟಕ ರಾಜ್ಯವೂ ಹಿಂದೆ ಬೀಳಲಿಲ್ಲ. ಇಲ್ಲಿ ಸರಕಾರಿ ಆಸ್ಪತ್ರೆಗಳ ಬೆಡ್ಗಳು ಕಾಳದಂಧೆಯಲ್ಲಿ ಮಾರಾಟವಾಗುತ್ತಿತ್ತು. ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಗಳಲ್ಲಿ ಸಾಲು ಸಾಲು ಸಾವುಗಳು ಸಂಭವಿಸಿದ್ದವು. ಮೃತದೇಹಗಳ ಚೀಲಗಳಲ್ಲೂ ರಾಜಕಾರಣಿಗಳು ಹಣವನ್ನು ತುಂಬಿಕೊಂಡರು. ಬಿಜೆಪಿ ಸರಕಾರದ ಅಂದಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಿಜೆಪಿಯ ಹಿರಿಯ ನಾಯಕರೇ ಇದೀಗ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ. ಕೊರೋನ ಸಂದರ್ಭದಲ್ಲಿ ಯಡಿಯೂರಪ್ಪ ಸರಕಾರದಿಂದ ೪೦,೦೦೦ ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಬಿಜೆಪಿ ಈ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮಾತ್ರವಲ್ಲ, ಈ ಗಂಭೀರ ಆರೋಪ ಮಾಡಿದ ಯತ್ನಾಳ್ ವಿರುದ್ಧ ಯಾವುದೇ ಕ್ರಮವನ್ನೂ ತೆಗೆದುಕೊಡಿಲ್ಲ. ಈ ಮೂಲಕ ಯತ್ನಾಳ್ ಆರೋಪವನ್ನು ಸ್ವತಃ ಬಿಜೆಪಿಯೇ ಒಪ್ಪಿಕೊಂಡಂತಾಗಿದೆ.
ಕೊರೋನ ಕಾಲದಲ್ಲಿ ರಾಜ್ಯದ ಅರಾಜಕತೆಯನ್ನು ನೆನೆದು ಜನರು ಈಗಲೂ ಬೆಚ್ಚಿ ಬೀಳುತ್ತಾರೆ. ಜನರಿಗೆ ಸೂತಕದ ಕಾಲವಾದರೆ, ಆ ಸೂತಕದ ಮನೆಯಲ್ಲೇ ಸರಕಾರ ಉಂಡು ತೇಗಿತು. ಯಡಿಯೂರಪ್ಪ ನೇತೃತ್ವದ ಸರಕಾರ ಆಗ ರಾಜ್ಯವನ್ನು ಆಳುತ್ತಿತ್ತು. ಯಡಿಯೂರಪ್ಪರ ಪುತ್ರ ವಿಜಯೇಂದ್ರ ಅವರು ತಂದೆಯ ಪರವಾಗಿ ಅಧಿಕಾರ ಚಲಾಯಿಸುತ್ತಿದ್ದರು. ಪುತ್ರನ ಭಾರೀ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯೊಳಗಿರುವ ನಾಯಕರು ಯಡಿಯೂರಪ್ಪ ವಿರುದ್ಧ ಬಂಡೆದ್ದರು. ಕೊರೋನಾ ವೈಫಲ್ಯಕ್ಕೆ ಹೊಣೆ ಮಾಡಿ ಕೇಂದ್ರ ವರಿಷ್ಠರು ಯಡಿಯೂರಪ್ಪರನ್ನು ಕೊನೆಗೂ ಅಧಿಕಾರದಿಂದ ಕೆಳಗಿಳಿಸಿದರು. ಆದರೆ ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಕೊರೋನ ಅವ್ಯವಹಾರ ಒಂದು ನೆಪ ಮಾತ್ರವಾಗಿತ್ತು. ಕೊರೋನದ ವೈಫಲ್ಯದ ಸಂಪೂರ್ಣ ಹೊಣೆಯನ್ನು ಯಡಿಯೂರಪ್ಪರ ತಲೆಗೆ ಕಟ್ಟಲಾಯಿತಾದರೂ, ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಕೂಡ ರಾಜ್ಯದ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸಿತ್ತು. ರಾಜ್ಯಕ್ಕೆ ಸರಿಯಾದ ಸಂದರ್ಭದಲ್ಲಿ ಆಕ್ಸಿಜನ್ ಪೂರೈಸಲಿಲ್ಲ ಮಾತ್ರವಲ್ಲ, ಲಸಿಕೆಗಳಿಗೂ ರಾಜ್ಯದಿಂದ ಹಣವನ್ನು ವಸೂಲಿ ಮಾಡಿತ್ತು. ಕೊರೋನ ಕಾಲದಲ್ಲಿ ಶಾಸಕರಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಎಲ್ಲರೂ ಅಕ್ರಮಗಳಲ್ಲಿ ಭಾಗಿಯಾಗಿದ್ದರು. ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಯಡಿಯೂರಪ್ಪರನ್ನು ಕೆಳಗಿಳಿಸಿದ ಬಳಿಕ ಅಕ್ರಮಗಳಲ್ಲಿ ಇಳಿಕೆಯಾಗಲಿಲ್ಲ. ಬದಲಿಗೆ, ಇನ್ನಷ್ಟು ಹೆಚ್ಚಿತು. ಬೊಮ್ಮಾಯಿ ನೇತೃತ್ವದ ಸರಕಾರ ಶೇ. ೪೦ ಕಮಿಶನ್ ಸರಕಾರವೆಂಬ ಕುಖ್ಯಾತಿಯನ್ನು ಪಡೆಯಿತು. ಕೊರೋನ ಕಾಲದ ಹಗರಣಗಳನ್ನು ಬೊಮ್ಮಾಯಿ ನೇತೃತ್ವದ ಸರಕಾರ ವ್ಯವಸ್ಥಿತವಾಗಿ ಮುಚ್ಚಿ ಹಾಕಿತು. ಯಾಕೆಂದರೆ ಈ ಅವ್ಯವಹಾರದ ತನಿಖೆ ನಡೆದದ್ದೇ ಆದರೆ, ಯಡಿಯೂರಪ್ಪ ಮಾತ್ರವಲ್ಲ ಬಿಜೆಪಿಯ ಬಹುತೇಕ ಗಣ್ಯರು ಜೈಲುಪಾಲಾಗಬೇಕಾಗುತ್ತಿತ್ತು.
ಕೊರೋನ ವೈಫಲ್ಯ, ಭ್ರಷ್ಟಾಚಾರದ ಕಾರಣಕ್ಕೆ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ನಿಜವಾದರೆ, ಮತ್ತೆ ಯಡಿಯೂರಪ್ಪರ ಕೈಗೆ ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನು ವರಿಷ್ಠರು ನೀಡುತ್ತಿರಲಿಲ್ಲ. ಆರೆಸ್ಸೆಸ್ ಒತ್ತಡಕ್ಕೆ ಮಣಿದು ಅಂದು ಯಡಿಯೂರಪ್ಪರನ್ನು ವರಿಷ್ಠರು ಮೂಲೆಗುಂಪು ಮಾಡಿದ್ದರು. ಆದರೆ ಯಡಿಯೂರಪ್ಪ ಅವರ ಹಿಂದಿರುವ ಲಿಂಗಾಯತ ಶಕ್ತಿಯನ್ನು ನಿರ್ಲಕ್ಷಿಸಿ ಮುಂದೆ ಹೋಗುವುದು ಕಷ್ಟ ಎನ್ನುವುದು ಅರಿವಾಗುತ್ತಿದ್ದಂತೆಯೇ ಮತ್ತೆ ಯಡಿಯೂರಪ್ಪ ಪುತ್ರನ ಕೈಗೆ ಬಿಜೆಪಿಯ ಚುಕ್ಕಾಣಿಯನ್ನು ನೀಡಲಾಗಿದೆ. ಕೊರೋನಾ ಕಾಲದಲ್ಲಿ ಆ ಪ್ರಮಾಣದಲ್ಲಿ ಅವ್ಯವಹಾರ ನಡೆಸಲು ಕೇಂದ್ರ ವರಿಷ್ಠರ ಸಹಕಾರವಿಲ್ಲದೆ ಯಡಿಯೂರಪ್ಪ ಅವರಿಗೆ ಸಾಧ್ಯವಿರುತ್ತಿರಲಿಲ್ಲ. ಇದೀಗ ೪೦,೦೦೦ ಕೋಟಿ ರೂ. ಅಕ್ರಮ ಆರೋಪವನ್ನು ಬಿಜೆಪಿಯ ನಾಯಕ ಸ್ಥಾನದಲ್ಲಿರುವ ವ್ಯಕ್ತಿ ಮಾಡಿರುವುದರಿಂದ ಪಕ್ಷದ ವರಿಷ್ಠರು ಈ ಆರೋಪಕ್ಕೆ ಪ್ರತಿಕ್ರಿಯಿಸಬೇಕಾಗಿದೆ. ಅಥವಾ ಯತ್ನಾಳ್ರನ್ನು ಪಕ್ಷದಿಂದ ವಜಾಗೊಳಿಸಬೇಕು. ಯತ್ನಾಳ್ ಈ ಆರೋಪವನ್ನು ಯಾಕೆ ಮಾಡಿದ್ದಾರೆ ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ. ಪಕ್ಷದ ಪ್ರಮುಖ ಹುದ್ದೆಯನ್ನು ನೀಡದೇ ಇರುವ ಅಸಮಾಧಾನದಿಂದ ಅವರು ಬಾಯಿ ತೆರೆದಿದ್ದಾರೆ. ಜನಸಾಮಾನ್ಯರು ಸಾವು-ಬದುಕಿನ ನಡುವೆ ಒದ್ದಾಡುತ್ತಿರುವ ಸಂದರ್ಭದಲ್ಲಿ ನಡೆದ ಈ ಅವ್ಯವಹಾರಗಳ ಕುರಿತಂತೆ ಯತ್ನಾಳ್ ಈವರೆಗೆ ಯಾಕೆ ಬಾಯಿ ಮುಚ್ಚಿ ಕೂತಿದ್ದರು ಎನ್ನುವುದು ಇನ್ನೊಂದು ಪ್ರಶ್ನೆ. ಬಿಜೆಪಿಯ ಪ್ರಮುಖ ಹುದ್ದೆ ಅವರಿಗೆ ಸಿಕ್ಕಿದ್ದಿದ್ದರೆ ಅವರು ಈ ಅಕ್ರಮಗಳ ಬಗ್ಗೆ ಮಾತನಾಡುತ್ತಿರಲಿಲ್ಲ ಮಾತ್ರವಲ್ಲ, ಅವುಗಳನ್ನು ಸಮರ್ಥಿಸುತ್ತಿದ್ದರು. ಒಂದು ರೀತಿಯಲ್ಲಿ ಈ ೪೦,೦೦೦ ಕೋಟಿ ರೂ. ಅಕ್ರಮದಲ್ಲಿ ಯತ್ನಾಳ್ ಕೂಡ ಭಾಗಿಯಾಗಿದ್ದಾರೆ. ನಿಜಕ್ಕೂ ಅವರಿಗೆ ನಾಡಿನ ಬಗ್ಗೆ ಕಾಳಜಿಯಿದ್ದರೆ ಈ ಅಕ್ರಮವನ್ನು ‘ಬ್ಲ್ಯಾಕ್ಮೇಲ್’ಗೆ ಬಳಸಿ ಕೊಳ್ಳದೆ, ಸಂಬಂಧ ಪಟ್ಟ ತನಿಖಾ ಸಂಸ್ಥೆಗೆ ಅವರಲ್ಲಿದ್ದ ದಾಖಲೆಗಳನ್ನು ನೀಡಲಿ. ಆ ಮೂಲಕ ಬಿಜೆಪಿಯ ಭ್ರಷ್ಟಾಚಾರದಲ್ಲಿ ನಾನು ಪಾಲುದಾರನಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಿ. ಬಿಜೆಪಿಯಲ್ಲಿ ಉನ್ನತ ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಆರೆಸ್ಸೆಸನ್ನು ಒಲಿಸಲು ಯತ್ನಾಳ್ ಸಮಾಜಕ್ಕೆ ಬೆಂಕಿ ಹಚ್ಚುವ ಹೇಳಿಕೆಗಳನ್ನು ಹಲವು ಬಾರಿ ನೀಡಿದ್ದಾರೆ. ಈ ದ್ವೇಷದ ಮಾತುಗಳು ಬಿಜೆಪಿಯ ಮುಖಂಡನಾಗಲು ತನಗೆ ಅರ್ಹತೆಯನ್ನು ನೀಡುತ್ತದೆ ಎಂದು ಭಾವಿಸಿದ್ದರು. ಆದರೆ ಅವುಗಳು ಫಲಕೊಡದೇ ಇದ್ದಾಗ, ತನ್ನ ಬತ್ತಳಿಕೆಯಲ್ಲಿರುವ ಕೊರೋನ ಹಗರಣವನ್ನು ಕೈಗೆತ್ತಿಕೊಂಡಿದ್ದಾರೆ.
ಈಗಾಗಲೇ ಕೊರೋನ ಹಗರಣದ ತನಿಖೆ ನಡೆಸಲು ರಾಜ್ಯ ಸರಕಾರ ಆಯೋಗವೊಂದನ್ನು ರಚಿಸಿದೆ. ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ಹಗರಣದ ತನಿಖೆ ನಡೆಯುತ್ತಿದೆ. ಕೊರೋನ ಔಷಧ, ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಹಿಂದೆ ನೀಡಿರುವ ವರದಿಯಲ್ಲಿನ ಗಂಭೀರ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ಸರಕಾರ ತನಿಖೆಗೆ ಆದೇಶಿಸಿ ಈಗಾಗಲೇ ಮೂರು ತಿಂಗಳು ಕಳೆದಿವೆ. ಯತ್ನಾಳ್ಗೆ ತನಿಖಾ ಆಯೋಗದ ಮುಂದೆ ಹೇಳಿಕೆಗಳನ್ನು ನೀಡುವ ಅವಕಾಶವಿದ್ದರೂ ಅದನ್ನು ಅವರು ಬಳಸುತ್ತಿಲ್ಲ. ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಷ್ಟೇ ಈ ಹಗರಣವನ್ನು ಅವರು ಬಳಸಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ತನಿಖಾ ಆಯೋಗದ ಮುಖ್ಯಸ್ಥರು ಈ ನಿಟ್ಟಿನಲ್ಲಿ ಯತ್ನಾಳ್ ಅವರ ಹೇಳಿಕೆಗಳನ್ನು ದಾಖಲಿಸುವ ಅಗತ್ಯವಿದೆ. ಈ ಹಿಂದೆ ವಿರೋಧ ಪಕ್ಷ ವಾಗಿದ್ದಾಗ ಕಾಂಗ್ರೆಸ್ ಪಕ್ಷ ಕೊರೋನ ಉಪಕರಣ ಖರೀದಿಯಲ್ಲಿ ೪,೦೦೦ ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿತ್ತು. ಆದರೆ ಯತ್ನಾಳ್ ಆರೋಪ ಅದಕ್ಕಿಂತ ಹಲವು ಪಟ್ಟು ದೊಡ್ಡದಿದೆ. ಹಗರಣದ ತನಿಖೆ ಇನ್ನಷ್ಟು ಆಳಕ್ಕಿಳಿಯುವ ಅಗತ್ಯವನ್ನು ಇದು ಹೇಳುತ್ತಿದೆ. ಒಟ್ಟಿನಲ್ಲಿ ಕೊರೋನ ವೈರಸ್ಗಿಂತಲೂ ಅಪಾಯಕಾರಿಯಾದ ಭ್ರಷ್ಟಾಚಾರ ಎನ್ನುವ ವೈರಸ್ ಈ ನಾಡನ್ನು ಹೇಗೆ ಬಲಿತೆಗೆದುಕೊಂಡಿತು ಎನ್ನುವುದನ್ನು ಇದರಿಂದ ನಾವು ಅರ್ಥ ಮಾಡಿಕೊಳ್ಳಬಹುದು.