ಉಂಡ ಮನೆಗೆ ಕನ್ನ ಬೇಡ

Update: 2024-02-07 05:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ‘ರಾಷ್ಟ್ರೀಯತೆಯ’ ಹೆಸರಿನಲ್ಲಿ ರಾಜ್ಯಗಳ ಮೇಲೆ ಪೂರ್ಣ ಪ್ರಮಾಣದ ನಿಯಂತ್ರಣವನ್ನು ಸಾಧಿಸಲು ಕೇಂದ್ರ ಸರಕಾರ ಹವಣಿಸುತ್ತಿರುವ ಸಂದರ್ಭದಲ್ಲಿ, ರಾಜ್ಯಗಳು ಅದನ್ನು ಬೇರೆ ಬೇರೆ ರೂಪಗಳಲ್ಲಿ ತೀವ್ರವಾಗಿ ವಿರೋಧಿಸುತ್ತಿವೆ. ದಕ್ಷಿಣ ರಾಜ್ಯಗಳಷ್ಟೇ ಅಲ್ಲ, ಉತ್ತರದ ಕೆಲವು ರಾಜ್ಯಗಳೂ ಕೇಂದ್ರ ಸರಕಾರದ ವಿರುದ್ಧ ಧ್ವನಿಯೆತ್ತಿವೆ. ಪಂಜಾಬ್, ಪಶ್ಚಿಮ ಬಂಗಾಳದಂತಹ ರಾಜ್ಯಗಳು ಕೇಂದ್ರ ಸರಕಾರದ ಮಲತಾಯಿ ಧೋರಣೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿವೆ. ವಿವಿಧ ಕಲ್ಯಾಣ ಯೋಜನೆಗಳಿಗಾಗಿ ಕೇಂದ್ರ ಸರಕಾರ ಬಾಕಿ ಉಳಿಸಿರುವ ಹಣವನ್ನು ತಕ್ಷಣ ಪಾವತಿಸಿ ಎಂದು ಕೆಲವು ದಿನಗಳ ಹಿಂದೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಕೇಂದ್ರ ಸರಕಾರದ ಮಲತಾಯಿ ಧೋರಣೆಯ ವಿರುದ್ಧ ಕೇರಳ ಮತ್ತು ತಮಿಳುನಾಡು ಸರಕಾರಗಳು ನಡೆಸುತ್ತಿರುವ ತಿಕ್ಕಾಟ ಹಳೆಯದು. ಕೇಂದ್ರವು ಕೇರಳದ ಜೊತೆಗೆ ಅನುಸರಿಸುತ್ತಿರುವ ನೀತಿಯ ವಿರುದ್ಧ ಅಲ್ಲಿನ ಸರಕಾರ ಇತ್ತೀಚೆಗೆ ನಿರ್ಣಯವೊಂದನ್ನು ಅಂಗೀಕರಿಸಿದೆ. ತಮಿಳುನಾಡು ಸರಕಾರವಂತೂ ಕೇಂದ್ರದ ನೀತಿಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ರಾಷ್ಟ್ರಪತಿಗೂ ಪತ್ರ ಬರೆದಿದೆ. ಕೇಂದ್ರ ಸರಕಾರ ರಾಜ್ಯಗಳಿಗೆ ಎರಡು ರೀತಿಯಲ್ಲಿ ವಂಚಿಸುತ್ತಿದೆ. ದಕ್ಷಿಣದ ರಾಜ್ಯಗಳು ಅತ್ಯಧಿಕ ತೆರಿಗೆಯನ್ನು ಕೇಂದ್ರಕ್ಕೆ ಸಲ್ಲಿಸಿದರೂ, ಅದು ಸೂಕ್ತ ರೀತಿಯಲ್ಲಿ ರಾಜ್ಯಗಳಿಗೆ ಮರುಪಾವತಿಯಾಗುತ್ತಿಲ್ಲ ಎನ್ನುವುದು ಒಂದು ಅಸಮಾಧಾನ. ಇನ್ನೊಂದೆಡೆ ದಕ್ಷಿಣವನ್ನು ಕಡೆಗಣಿಸಿ ಉತ್ತರದ ರಾಜ್ಯಗಳಿಗೆ ಮಣೆ ಹಾಕುತ್ತಿದೆ ಎನ್ನುವ ಆರೋಪ. ಇಷ್ಟಾದರೂ ಉತ್ತರದ ರಾಜ್ಯಗಳಾದರೂ ಏಳಿಗೆಯಾಗುತ್ತಿವೆಯೋ ಎಂದರೆ ಅದೂ ಇಲ್ಲ. ಭಾವನಾತ್ಮಕ ರಾಜಕೀಯಕ್ಕಾಗಿ ಜನಸಾಮಾನ್ಯರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವುದರಿಂದ, ಉತ್ತರ ಭಾರತದ ರಾಜ್ಯಗಳು ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ಹಿಂದುಳಿದಿವೆ. ಉತ್ತರ ಪ್ರದೇಶವೂ ಸೇರಿದಂತೆ ಅಲ್ಲಿನ ರಾಜ್ಯಗಳು ದೇವಸ್ಥಾನ, ಪ್ರತಿಮೆಗಳ ಹಿಂದೆ ಬಿದ್ದು ಅಭಿವೃದ್ಧಿಯನ್ನು ಬದಿಗೆ ತಳ್ಳಿದೆ. ಇದಕ್ಕೂ ಕೇಂದ್ರದ ಧರ್ಮ ರಾಜಕಾರಣವೇ ಮುಖ್ಯ ಕಾರಣ.

ಇದೀಗ ಕರ್ನಾಟಕ ತನ್ನ ಹಕ್ಕಿಗಾಗಿ ದಿಲ್ಲಿ ಚಲೋ ಹಮ್ಮಿಕೊಂಡಿದೆ. ಈ ಹೋರಾಟವನ್ನು ಬಿಜೆಪಿ-ಕಾಂಗ್ರೆಸ್ ಎಂದು ವಿಭಜಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದ ಕಾರಣಕ್ಕಾಗಿ ಕೇಂದ್ರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದರೆ ಅದು ಪೂರ್ತಿ ನಿಜ ಅಲ್ಲ. ಯಾಕೆಂದರೆ, ಈ ಹಿಂದೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗಲೂ ಕೇಂದ್ರ ಸರಕಾರ ‘ಡಬಲ್ ಇಂಜಿನ್ ಸರಕಾರ’ ಎಂದು ಕೊಚ್ಚಿ ಕೊಳ್ಳುತ್ತಲೇ, ವಂಚಿಸಿತ್ತು. ಕರ್ನಾಟಕ ಕೇಂದ್ರಕ್ಕೆ ಅತ್ಯಧಿಕ ಬಿಜೆಪಿ ಸಂಸದರನ್ನು ನೀಡಿತ್ತು. ಅಷ್ಟೇ ಅಲ್ಲ, ದಕ್ಷಿಣ ಭಾರತಕ್ಕೆ ಬಿಜೆಪಿಗೆ ಪ್ರವೇಶ ಸಿಕ್ಕಿರುವುದು ಕರ್ನಾಟಕ ರಾಜ್ಯದ ಮೂಲಕ. ಈ ಕಾರಣಕ್ಕಾಗಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಂದ್ರ ಸರಕಾರ ರಾಜ್ಯದ ಬಗ್ಗೆ ವಿಶೇಷ ಒಲವನ್ನು ತೋರಿಸಬೇಕಾಗಿತ್ತು. ವಿಪರ್ಯಾಸವೆಂದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಮಳೆ ಪರಿಹಾರವನ್ನು ಬಿಡುಗಡೆ ಮಾಡಲು ಸತಾಯಿಸಿತು. ಆಡಳಿತ ನಡೆಸುವುದೇ ಯಡಿಯೂರಪ್ಪ ಅವರಿಗೆ ಕಷ್ಟವಾಯಿತು. ಪರಿಹಾರ ಬಿಡುಗಡೆಗಾಗಿ ಕೇಂದ್ರಕ್ಕೆ ತೆರಳಿದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಪ್ರಧಾನಿ ಮೋದಿಯವರು ಭೇಟಿಯಾಗುವುದಕ್ಕೆ ನಿರಾಕರಿಸಿದರು. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ‘ಕೇಂದ್ರ ಸರಕಾರ ಪರಿಹಾರ ನೀಡುತ್ತಿಲ್ಲ’ ಎಂದು ಯಡಿಯೂರಪ್ಪ, ಯತ್ನಾಳ್ ಮೊದಲಾದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾಗ, ಬಿಜೆಪಿಯ ಕೆಲವು ಸಂಸದರು ‘‘ರಾಜ್ಯಕ್ಕೆ ಪರಿಹಾರ ನೀಡುವ ಅಗತ್ಯವಿಲ್ಲ. ರಾಜ್ಯದ ಬೊಕ್ಕಸದಲ್ಲಿ ಸಾಕಷ್ಟು ಹಣವಿದೆ’’ ಎನ್ನುತ್ತಾ ಕೇಂದ್ರ ಸರಕಾರಕ್ಕೆ ಕೊಡೆ ಹಿಡಿದರು. ಕೇಂದ್ರಕ್ಕೆ ಒತ್ತಡ ಹೇರುವ ವರ್ಚಸ್ಸಿರುವ ಒಬ್ಬನೇ ಒಬ್ಬ ಸಂಸದ ಕರ್ನಾಟಕದಲ್ಲಿರದೇ ಇರುವುದರಿಂದ, ರಾಜ್ಯವನ್ನು ಕೇಂದ್ರ ಸರಕಾರ ಸಂಪೂರ್ಣ ನಿರ್ಲಕ್ಷಿಸಿತು. ರಾಜ್ಯಕ್ಕೆ ನೀಡಬೇಕಾದ ಪರಿಹಾರ ಹಣವನ್ನು ನೀಡಿ ಎಂದು ಕೇಳುವ ಧೈರ್ಯ ಯಾವೊಬ್ಬ ಸಂಸದನಿಗೂ ಇದ್ದಿರಲಿಲ್ಲ. ಸಂಸದರ ಈ ಗುಲಾಮಿ ಮನಸ್ಥಿತಿಯ ಬಗ್ಗೆ ಅರಿವಿದ್ದಿದ್ದರಿಂದಲೇ ಅಮಿತ್ ಶಾ ಮೊದಲಾದವರು ಕರ್ನಾಟಕಕ್ಕೆ ಮೂರು ಕಾಸಿನ ಮರ್ಯಾದೆಯನ್ನೂ ನೀಡಲಿಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕರು ಮೋದಿಯ ಹೆಸರಿನಲ್ಲಿ ಮತ ಯಾಚಿಸಿ ಗೆದ್ದ ಪರಿಣಾಮವಾಗಿತ್ತು ಅದು. ತನ್ನ ಅಧಿಕಾರಾವಧಿಯಲ್ಲಿ ಕೇಂದ್ರ ಸರಕಾರ ಪರಿಹಾರ ನೀಡುವ ವಿಷಯದಲ್ಲಿ ಹೇಗೆ ನಡೆಸಿಕೊಂಡಿತ್ತು ಎನ್ನುವುದನ್ನು ಇಂದು ಯಡಿಯೂರಪ್ಪ ಅವರು ಸ್ಮರಿಸಿಕೊಳ್ಳಬೇಕಾಗಿದೆ.

ಇದೀಗ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಾಂಗ್ರೆಸ್ ಮುಖಂಡರು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಕ್ಕೆ ಆಗಿರುವ ಆರ್ಥಿಕ ಅನ್ಯಾಯಗಳ ಬಗ್ಗೆ ಅಂಕಿಅಂಶಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.ಮೋದಿಯವರು ಪ್ರಧಾನಿ ಆದ ಬಳಿಕ 15ನೇ ಹಣಕಾಸು ಆಯೋಗದ ತೆರಿಗೆ ಪಾಲು ಹಂಚಿಕೆಯಲ್ಲಿ 62,098 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ತೆರಿಗೆ ಹಣದಲ್ಲಿ 100 ರೂಪಾಯಿ ಕೇಂದ್ರಕ್ಕೆ ಹೋದರೆ ರಾಜ್ಯಕ್ಕೆ 12ರಿಂದ 13 ರೂಪಾಯಿಯಷ್ಟೇ ವಾಪಸ್ ಬರುತ್ತಿದೆ ಎಂದು ಅವರು ದೂರಿದ್ದಾರೆ. ಜಿಎಸ್‌ಟಿ ಹೆಸರಿನಲ್ಲೂ ರಾಜ್ಯಕ್ಕೆ ವಂಚಿಸಲಾಗಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ. ಜಿಎಸ್‌ಟಿ ಪರಿಹಾರ ಹಣವನ್ನು ನಿಲ್ಲಿಸಿರುವುದರ ವಿರುದ್ಧ ಈಗಾಗಲೇ ಹಲವು ರಾಜ್ಯಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯಗಳ ಹಣವನ್ನು ಕಡಿತಗೊಳಿಸಿ ಬಳಿಕ ‘ಆ್ಯಕ್ಟ್ ಆಫ್ ಗಾಡ್’ ಎಂದು ದೇವರ ತಲೆಗೆ ಅದನ್ನು ಕಟ್ಟಿದ್ದರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಇಂದು ಬರ ಪರಿಹಾರವನ್ನು ಕೇಂದ್ರ ಪಾವತಿಸುತ್ತಿಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಬೇಕಾದ ಹಣವನ್ನು ನೀಡಿಲ್ಲ, 15ನೇ ಹಣಕಾಸು ಆಯೋಗ ಮಾಡಿರುವ 5,495 ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಸಹಭಾಗಿತ್ವ ಯೋಜನೆಗೆ ಬೇಕಾದ ಅನುದಾನದಲ್ಲೂ ಕಡಿತ ಮಾಡಿದೆ. ರಾಜ್ಯ ಸರಕಾರದ ಈ ಎಲ್ಲ ಆರೋಪಗಳಿಗೆ ಸ್ಪಷ್ಟ ಅಂಕಿಅಂಶಗಳ ಸಹಿತ ಕೇಂದ್ರ ಸರಕಾರ ಉತ್ತರಿಸಬೇಕಾಗಿತ್ತು. ಆದರೆ ನಿರ್ಮಲಾ ಸೀತಾರಾಮನ್ ಅತ್ಯಂತ ಉಡಾಫೆಯ ಹೇಳಿಕೆಯ ಮೂಲಕ ರಾಜ್ಯದ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸಂಸದರು, ನಾಯಕರು ಏನು ಮಾಡಬೇಕು? ಕೇಂದ್ರದಲ್ಲಿರುವುದು ಬಿಜೆಪಿ ಸರಕಾರವಾಗಿರುವುದರಿಂದ ಅವರ ವಿರುದ್ಧ ಮಾತನಾಡುವುದು ಬಿಜೆಪಿ ನಾಯಕರಿಗೆ ಕಷ್ಟವಾಗುತ್ತಿದೆ. ಇದನ್ನು ನಾವೂ ಅರ್ಥ ಮಾಡಿಕೊಳ್ಳಬಹುದು. ಆದರೆ, ಇದೇ ಸಂದರ್ಭದಲ್ಲಿ ಕೇಂದ್ರವನ್ನು ಸಮರ್ಥಿಸದೇ ಮೌನವಾಗುಳಿಯುವ ಅವಕಾಶ ರಾಜ್ಯದ ಬಿಜೆಪಿ ನಾಯಕರಿಗಿದೆ. ಕೇಂದ್ರ ಸರಕಾರದ ಮಲತಾಯಿ ಧೋರಣೆಯ ಪರಿಣಾಮವಾಗಿ ಒಂದು ಕಾಲದಲ್ಲಿ ಬಿಜೆಪಿ ಸರಕಾರಕ್ಕೆ ಆಡಳಿತ ನಡೆಸುವುದು ಎಷ್ಟು ಕಷ್ಟವಾಗಿತ್ತು ಎನ್ನುವುದನ್ನು ಯಡಿಯೂರಪ್ಪ ಯೋಚಿಸಬೇಕು. ಕೇಂದ್ರ ಸರಕಾರ ರಾಜ್ಯದ ವಿರುದ್ಧ ಅನುಸರಿಸಿದ ನೀತಿಗಳ ಅತಿ ದೊಡ್ಡ ಸಂತ್ರಸ್ತರಾಗಿದ್ದರು ಯಡಿಯೂರಪ್ಪ. ಇಂದು ಕೇಂದ್ರ ಸರಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಬಿಜೆಪಿ ನಾಯಕರು ರಾಜ್ಯದ ಗಾಯಗಳಿಗೆ ಬರೆ ಎಳೆಯಬಾರದು. ರಾಜ್ಯಕ್ಕೆ ಬರಬೇಕಾದ ಹಕ್ಕಿನ ಹಣ ಸಿಗಲಿ. ಆ ಹಣವನ್ನು ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಎನ್ನುವ ವಿಷಯದಲ್ಲಿ ರಾಜ್ಯ ಸರಕಾರದ ಜೊತೆಗೆ ಬಿಜೆಪಿ ನಾಯಕರು ಗುದ್ದಾಡಲಿ. ‘‘ಕೇಂದ್ರ ಸರಕಾರ ರಾಜ್ಯಕ್ಕೆ ಯಾವುದೇ ಹಣ ನೀಡಬೇಕಾಗಿಲ್ಲ’’ ಎನ್ನುವ ಹೇಳಿಕೆಯನ್ನು ನೀಡುತ್ತಿರುವ ಕೆಲವು ಬಿಜೆಪಿ ನಾಯಕರು, ಆ ಮೂಲಕ ರಾಜ್ಯದ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ತಮ್ಮ ಆತ್ಮಾಭಿಮಾನವನ್ನು , ನಾಡಿನ ಹಿತಾಸಕ್ತಿಯನ್ನು ಒತ್ತೆಯಿಟ್ಟು ಕೇಂದ್ರದ ಗುಲಾಮಗಿರಿ ಮಾಡಲು ಮುಂದಾದರೆ, ರಾಜ್ಯದ ಜನರು ಯಾವತ್ತೂ ಬಿಜೆಪಿ ನಾಯಕರನ್ನು ಕ್ಷಮಿಸಲಾರರು. ರಾಜ್ಯ ಕೇಂದ್ರದ ಬಳಿ ಯಾವುದೇ ಭಿಕ್ಷೆಯನ್ನು ಕೇಳುತ್ತಿಲ್ಲ. ತನ್ನ ಹಕ್ಕಿನ ಹಣವನ್ನು ಕೇಳುತ್ತಿದೆ. ಈ ಕಾರಣದಿಂದ ಸದ್ಯದ ಹೋರಾಟಕ್ಕೆ ಎಲ್ಲ ರಾಜಕೀಯ ನಾಯಕರೂ ಪಕ್ಷಾತೀತವಾಗಿ ಕೈ ಜೋಡಿಸಬೇಕು. ಬಿಜೆಪಿಯ ನಾಯಕರಿಗೆ ಇದು ಸಾಧ್ಯವಿಲ್ಲ ಎಂದಾದರೆ, ಕನಿಷ್ಠ ಮೌನಕ್ಕೆ ಶರಣಾಗಬೇಕು. ಉಂಡ ಮನೆಗೆ ಕನ್ನ ಕೊರೆಯುವ ರಾಜಕಾರಣದಿಂದ ಬಿಜೆಪಿಗೆ ರಾಜ್ಯದಲ್ಲಿ ನಷ್ಟವೇ ಹೆಚ್ಚು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News