ಚುನಾವಣಾ ಆಯೋಗದ ಸಂಶಯಾಸ್ಪದ ನಡೆ

Update: 2024-05-14 04:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಾರ್ವತ್ರಿಕ ಚುನಾವಣೆಯನ್ನು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗದ ನಡೆ ಈಗ ಸಂಶಯಾಸ್ಪದ ವಾಗಿದೆ. ಪ್ರತಿಪಕ್ಷ ನಾಯಕರು ಮಾತ್ರವಲ್ಲ, ಪಕ್ಷಾತೀತ ಸಂಘ, ಸಂಸ್ಥೆಗಳು, ಪತ್ರಕರ್ತರ ಸಂಘಟನೆಗಳು ಕೂಡ ಈ ಬಗ್ಗೆ ಪದೇ ಪದೇ ಸಂದೇಹವನ್ನು ವ್ಯಕ್ತಪಡಿಸುತ್ತಲೇ ಇವೆ. ಈ ವರೆಗೆ ನಡೆದ ಚುನಾವಣೆಯಲ್ಲಿ ಮತದಾನ ಪ್ರಮಾಣ ಎಷ್ಟಾಯಿತು ಎಂದು ವಿವರ ಪ್ರಕಟಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮನವಿ ಮಾಡಿಕೊಂಡರು. ಆದರೆ ಈ ಮನವಿಗೆ ಸ್ಪಂದಿಸಿ ವಿವರ ನೀಡಬೇಕಾದ ಚುನಾವಣಾ ಆಯೋಗ ಖರ್ಗೆಯವರು ಏನೋ ಅಪರಾಧ ಮಾಡಿದ್ದಾರೆಂಬಂತೆ ಅವರ ಹೇಳಿಕೆಯ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿ ‘‘ಅನುಮಾನ ಮತ್ತು ಅರಾಜಕತೆಯನ್ನು ಸೃಷ್ಟಿಸುವ ಯತ್ನ’’ ಎಂದು ಟೀಕಿಸಿತು. ಕೋಮು ಆಧಾರದಲ್ಲಿ ನಿತ್ಯವೂ ಅತ್ಯಂತ ಪ್ರಚೋದನಾಕಾರಿಯಾಗಿ ಮಾತಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ಬಗ್ಗೆ ಜಾಣ ಮೌನ ತಾಳಿರುವ ಚುನಾವಣಾ ಆಯೋಗ ಸಾಂವಿಧಾನಿಕ, ಸ್ವಾಯತ್ತ ಸಂಸ್ಥೆಯಾಗಿ ನಿಷ್ಪಕ್ಷವಾಗಿ ನಡೆದುಕೊಳ್ಳದೆ ಪಕ್ಷಪಾತದಿಂದ ವರ್ತಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲದಿಲ್ಲ.

ಈಗಾಗಲೇ ಮೂರು ಹಂತದ ಚುನಾವಣೆ ಮುಗಿದಿದ್ದು ನಿನ್ನೆ ನಾಲ್ಕನೇ ಹಂತದ ಮತದಾನವೂ ಕೊನೆಗೊಂಡಿತು. ಈವರೆಗೆ ಯಾವ್ಯಾವ ಹಂತದಲ್ಲಿ ಶೇಕಡಾವಾರು ಎಷ್ಟು ಮತದಾನ ನಡೆಯಿತು ಎಂಬುದನ್ನು ಚುನಾವಣಾ ಆಯೋಗ ಪ್ರಕಟಿಸಿಲ್ಲ. ಈ ವಿಳಂಬದಿಂದ ಅಂತಿಮ ಹಂತದ ಫಲಿತಾಂಶವನ್ನು ತಿರುಚುವ ಹುನ್ನಾರ ಎಂಬ ಖರ್ಗೆಯವರ ಆಕ್ಷೇಪಕ್ಕೆ ಸಮಾಧಾನದಿಂದ ಸ್ಪಷ್ಟನೆ ನೀಡಬೇಕಿದ್ದ ಚುನಾವಣಾ ಆಯೋಗ ಅವರ ಮೇಲೆಯೇ ಹರಿ ಹಾಯುವುದು ಸರಿಯಲ್ಲ. ಚುನಾವಣಾ ಆಯೋಗವೇನು ವಿಮರ್ಶೆಗೆ ಅತೀತವಾದ ಸಂಸ್ಥೆಯಲ್ಲ. ಆರ್ಬಿಐ, ಸಿಎಜಿ, ಹಣಕಾಸು ಆಯೋಗ ಮತ್ತಿತರ ಸಂಸ್ಥೆಗಳಂತೆ ಅದು ವಿಮರ್ಶೆಗೆ ಮುಕ್ತವಾಗಿರಬೇಕಾದ ಸಂಸ್ಥೆಯಾಗಿದೆ.

ಸ್ವಾತಂತ್ರ್ಯಾನಂತರದ ಕಳೆದ ಏಳು ದಶಕಗಳಲ್ಲಿ ಐದು ವರ್ಷಗಳ ಹಿಂದೆ ೨೦೧೯ರ ಚುನಾವಣೆಯ ವರೆಗೆ ಚುನಾವಣಾ ಆಯೋಗ ಪ್ರತಿ ಸುತ್ತಿನ ಮತದಾನದ ಶೇಕಡಾವಾರು ವಿವರಗಳನ್ನು ಆಯಾ ಸುತ್ತಿನ ಮತದಾನದ ನಂತರ ಪ್ರಕಟಿಸುತ್ತ ಬಂದಿದೆ. ಆದರೆ ಈ ವರ್ಷ ದೇಶವ್ಯಾಪಿ ಮೂರು ಸಲ ಮತದಾನ ಮುಗಿದ ನಂತರವೂ ಚುನಾವಣಾ ಆಯೋಗ ವಿವರಗಳನ್ನು ಪ್ರಕಟಿಸಿಲ್ಲ. ಇದರಿಂದ ಸಹಜವಾಗಿ ಸಾರ್ವಜನಿಕರಲ್ಲಿ ಸಂದೇಹ ಮೂಡುತ್ತದೆ.

ಪ್ರತೀ ಚುನಾವಣೆಯಲ್ಲಿ ಮತದಾನದ ಪ್ರತೀ ಸುತ್ತಿನ ನಂತರ ಸುದ್ದಿಗೋಷ್ಠಿ ನಡೆಸಿ ವಿವರ ನೀಡುವ ಪರಿಪಾಠವನ್ನು ಚುನಾವಣಾ ಆಯೋಗ ಈ ಸಲ ಕೈ ಬಿಡುವುದರ ಉದ್ದೇಶವೇನು? ಖರ್ಗೆಯವರು ಆಪಾದಿಸಿದಂತೆ ಅಂತಿಮ ಸುತ್ತಿನ ಮತದಾನದ ನಂತರ ಫಲಿತಾಂಶವನ್ನು ಉಲ್ಟಾಪಲ್ಟಾ ಮಾಡುವ ಉದ್ದೇಶವೇನಾದರೂ ಇದೆಯೇ? ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಪಾರದರ್ಶಕವಾಗಿರಬೇಕು. ಆದರೆ ಈಗಿನ ಚುನಾವಣಾ ಆಯೋಗ ಬಿಜೆಪಿಯ ಒಂದು ಅಂಗದಂತೆ, ಆಜ್ಞಾನುವರ್ತಿಯಂತೆ ಕೆಲಸ ಮಾಡುತ್ತಿದೆಯೇ ಎಂಬ ಸಂದೇಹ ಸಹಜವಾಗಿ ಬರುತ್ತಿದೆ. ದೇಶದ ಪ್ರಮುಖ ಮಾಧ್ಯಮ ಸಂಘಟನೆಗಳು ಈ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿವೆ.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ನ್ಯಾಯ ಸಮ್ಮತವಾಗಿ ಮತ್ತು ಮುಕ್ತವಾಗಿ ನಡೆಸಲೆಂದೇ ಚುನಾವಣಾ ಆಯೋಗ ಎಂಬುದಿದೆ. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಚುನಾವಣಾ ಆಯೋಗದ ನಡೆ ಸಂಶಯಾಸ್ಪದವಾಗಿದೆ. ದೇಶದ ಇತಿಹಾಸದಲ್ಲಿ ಮೊದಲ ಚುನಾವಣೆ ನಡೆದಾಗ ಇಬ್ಬರು ಮುಖ್ಯಮಂತ್ರಿಗಳನ್ನು ಈ.ಡಿ. ಬಂಧಿಸಿತು. ಜಾರ್ಖಂಡ್ ಮುಖ್ಯಮಂತ್ರಿ ಬಂಧನದ ನಂತರ ಅವರು ರಾಜೀನಾಮೆ ಕೊಟ್ಟರು. ಇತ್ತೀಚೆಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಅವರ ಜನತಾಂತ್ರಿಕ ಮತ್ತು ರಾಜಕೀಯ ಹಕ್ಕನ್ನು ನಿರಾಕರಿಸಲಾಯಿತು. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಜೂನ್ ೧ರ ವರೆಗೆ ಕೇಜ್ರಿವಾಲ್ರಿಗೆ ಜಾಮೀನು ಮಂಜೂರು ಮಾಡಿದೆ. ಈ ಬಗ್ಗೆ ಚುನಾವಣಾ ಆಯೋಗ ಯಾಕೆ ಮೌನ ತಾಳಿತ್ತು ಎಂಬುದು ಅರ್ಥವಾಗುತ್ತಿಲ್ಲ. ಕೇಜ್ರಿವಾಲ್ ಅವರ ಬಂಧನದ ಹಿಂದಿನ ಕಾನೂನಾತ್ಮಕ ಅಂಶಗಳೇನೇ ಇರಲಿ ತಮ್ಮ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಹಕ್ಕನ್ನು ನಿರಾಕರಿಸಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸೂಕ್ತವಾಗಿದೆ.

ಅರವಿಂದ ಕೇಜ್ರಿವಾಲ್ ಜಾಮೀನು ಬಿಡುಗಡೆಗೆ ಜಾರಿ ನಿರ್ದೇಶನಾಲಯ (ಈ.ಡಿ.) ಆಕ್ಷೇಪ ವ್ಯಕ್ತಪಡಿಸಿತ್ತು. ಮತ ಚಲಾಯಿಸುವುದು ಮತ್ತು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದು ಮೂಲಭೂತ ಹಕ್ಕು ಅಲ್ಲದಿರುವ ಕಾರಣದಿಂದ ಕೇಜ್ರಿವಾಲ್ರಿಗೆ ಜಾಮೀನು ನೀಡುವುದು ರಾಜಕಾರಣಿಗಳಿಗೆ ವಿಶೇಷ ಸೌಲಭ್ಯ ವನ್ನು ಕಲ್ಪಿಸಿದಂತಾಗುವುದು ಎಂಬ ಈ.ಡಿ. ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಡೆ ಸಹಜವಾಗಿ ಸಂದೇಹಕ್ಕೆ ಕಾರಣವಾಗಿದೆ. ಈ ಸಲದ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಮುನ್ನ ಇಬ್ಬರು ಚುನಾವಣಾ ಆಯುಕ್ತರು ದಿಢೀರನೇ ರಾಜೀನಾಮೆ ನೀಡಿದರು.ಅವರು ರಾಜೀನಾಮೆ ನೀಡಿದ ತಕ್ಷಣ ಅಷ್ಟೇ ಅವಸರವಸರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಇಬ್ಬರನ್ನು ಒಳಗೊಂಡ ಆಯ್ಕೆ ಸಮಿತಿ ನೂತನ ಚುನಾವಣಾ ಆಯುಕ್ತರನ್ನು ನೇಮಕ ಮಾಡಿ ಆದೇಶ ಹೊರಡಿಸಿತು. ಈ ಆಯ್ಕೆ ಸಮಿತಿಯಲ್ಲಿ ಹಿಂದಿನಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಇರಲಿಲ್ಲ. ಲೋಕಸಭೆಯಲ್ಲಿ ವಿಧೇಯಕ ತಂದು, ಬಹುಮತದಿಂದ ಪಾಸು ಮಾಡಿಸಿ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಹೊರಗಿಡಲಾಗಿತ್ತು. ಇಂತಹ ಚುನಾವಣಾ ಆಯೋಗ ಸಹಜವಾಗಿ ಸಂದೇಹಕ್ಕೆ ಕಾರಣವಾಗಿದೆ.

ಕಳೆದ ಹತ್ತು ವರ್ಷಗಳಿಂದ ಅನೇಕ ರಾಜ್ಯಗಳಲ್ಲಿ ಜನಾದೇಶವನ್ನೇ ಉಲ್ಟಾಪಲ್ಟಾ ಮಾಡಿ ಆಪರೇಷನ್ ಕಮಲದ ಮೂಲಕ ಎದುರಾಳಿ ಪಕ್ಷದ ಶಾಸಕರನ್ನು ಖರೀದಿಸಿ, ಇಲ್ಲವೇ ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ಹಾಕಿ ಪಕ್ಷಗಳನ್ನೇ ವಿಭಜಿಸಿ ಚುನಾಯಿತ ಸರಕಾರಗಳನ್ನೇ ಉರುಳಿಸಿದ ಅನೇಕ ಉದಾಹರಣೆಗಳಿವೆ. ಇತ್ತೀಚೆಗೆ ಸೂರತ್ನಲ್ಲಿ ಕಾಂಗ್ರೆಸ್ ಮತ್ತಿತರ ಪಕ್ಷಗಳ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿ ಬಿಜೆಪಿ ಹುರಿಯಾಳು ಅವಿರೋಧವಾಗಿ ಆರಿಸಿ ಬರುವಂತೆ ಮಾಡಲಾಯಿತು. ಇವೆಲ್ಲ ನಡೆಯುವಾಗ ಚುನಾವಣಾ ಆಯೋಗ ಏನು ಮಾಡುತ್ತಿದೆ? ಖರ್ಗೆಯವರು ಸ್ಪಷ್ಟೀಕರಣ ಕೇಳಿದರೆ ತಾಳ್ಮೆ ಕಳೆದುಕೊಂಡು ಉತ್ತರಿಸುವ ಚುನಾವಣಾ ಆಯುಕ್ತರನ್ನು ಕರ್ತವ್ಯ ಲೋಪಕ್ಕಾಗಿ ದಂಡನೆಗೆ ಗುರಿಪಡಿಸುವವರು ಯಾರು?

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News