ಕುಡಿಯುವ ನೀರೇ ವಿಷವಾದರೆ?

Update: 2024-05-23 05:08 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಕ್ರಮ ಕಳ್ಳ ಭಟ್ಟಿ ಸಾರಾಯಿ ಕುಡಿದು ಈ ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಜನರು ಸಾಯುತ್ತಿರುತ್ತಾರೆ. ಈ ಕುರಿತಂತೆ ಚರ್ಚೆ, ತನಿಖೆಗಳೆಲ್ಲವೂ ನಡೆಯುತ್ತಿರುತ್ತವೆ. ನಮ್ಮ ನಾಡಿನ ದುರಂತವೆಂದರೆ, ಇಲ್ಲಿ ಅಕ್ರಮ ಸಾರಾಯಿ ಕುಡಿದು ಸಾಯುವವರಿಗಿಂತ ಕಲುಷಿತ ನೀರು ಕುಡಿದು ಸಾಯುವವರ ಸಂಖ್ಯೆ ದೊಡ್ಡದಿದೆ. ಬೇಸಿಗೆಕಾಲ ಬಂತು ಎನ್ನುವಾಗ ಒಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಕಲುಷಿತ ನೀರು ಕುಡಿದು ಸಾಯುವವರ ಸಂಖ್ಯೆಯೂ ಇದರ ಜೊತೆ ಜೊತೆಗೇ ಪ್ರಕಟವಾಗತೊಡಗುತ್ತವೆ. ಮೈಸೂರಿನ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮೃತಪಟ್ಟ ಘಟನೆ ವರದಿಯಾಗಿದ್ದು, 48ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಕೆ. ಸಾಲುಂಡಿ ಗ್ರಾಮದಲ್ಲಿ ಸೋಮವಾರ ಕಲುಷಿತ ನೀರು ಸೇವಿಸಿ ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂದರ್ಭದಲ್ಲಿ ಓರ್ವ ಮೃತಪಟ್ಟಿದ್ದಾನೆ. ಕಲುಷಿತ ಕುಡಿಯುವ ನೀರಿಗೆ ಪ್ರತಿವರ್ಷವೂ ನೂರಾರು ಜನರು ಬಲಿಯಾಗುತ್ತಿದ್ದಾರಾದರೂ ಅದು ಸುದ್ದಿಯಾಗುವುದು, ಚರ್ಚೆಯಾಗುವುದು ತೀರಾ ಕಡಿಮೆ. ಬಡತನ, ಹಸಿವು ಚರ್ಚೆಯಾದಷ್ಟು ಈ ಜಗತ್ತಿನಲ್ಲಿ ನೀರು ಚರ್ಚೆಯಾಗಿಲ್ಲ. ಭಾರತದಲ್ಲಿ ಹಸಿವಿನ ಸೂಚ್ಯಂಕವನ್ನು ಗುರುತಿಸಲು, ಬಡತನವನ್ನು ಗುರುತಿಸಲು ಮಾನದಂಡಗಳಿವೆ. ಇದೇ ಸಂದರ್ಭದಲ್ಲಿ ನೀರಿನ ಕೊರತೆಯಿಂದ ಬಳಲುವ ಜನರನ್ನು ಗುರುತಿಸುವುದಕ್ಕೆ ಸ್ಪಷ್ಟವಾದ ಮಾನದಂಡಗಳಿಲ್ಲ. ಕುಡಿಯುವ ನೀರು ಕೂಡ ಆಹಾರದ ಒಂದು ಪ್ರಮುಖ ಭಾಗ ಎಂದು ಗುರುತಿಸಿ ಅದನ್ನು ಜನರಿಗೆ ಒದಗಿಸುವಲ್ಲಿ ಸರಕಾರ ಎಷ್ಟರಮಟ್ಟಿಗೆ ಕ್ರಮ ತೆಗೆದುಕೊಂಡಿದೆ ಎನ್ನುವುದು ಯಾವತ್ತೂ ಗಂಭೀರ ಚರ್ಚೆಯ ವಿಷಯವಾಗಿಲ್ಲ.

ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 16 ಕೋಟಿಗೂ ಅಧಿಕ ಜನರು ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. 21 ಕೋಟಿ ಜನರು ಶುಚಿತ್ವದ ಸಮಸ್ಯೆಯನ್ನು ನೀರಿನ ದೆಸೆಯಿಂದಲೇ ಎದುರಿಸುತ್ತಿದ್ದಾರೆ. ಶೇ.21ರಷ್ಟು ಸಾಂಕ್ರಾಮಿಕ ರೋಗಗಳನ್ನು ಈ ದೇಶದ ಜನರು ಕಲುಷಿತ ನೀರಿನ ಮೂಲಕವೇ ಆಹ್ವಾನಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಪ್ರತಿ ದಿನ ಐದು ವರ್ಷದ ಒಳಗಿನ 500 ಮಕ್ಕಳು ಅತಿಸಾರದಿಂದ ಸಾಯುತ್ತಿದ್ದಾರೆ. ಇದಕ್ಕೆ ಕಲುಷಿತ ನೀರಿನ ಕೊಡುಗೆ ಬಹುದೊಡ್ಡದಿದೆ. ಹೇಗೆ ಅಕ್ರಮ-ಸಕ್ರಮ ಸಾರಾಯಿ ಈ ದೇಶದ ಆರೋಗ್ಯ ವಲಯವನ್ನು ಸರ್ವನಾಶ ಮಾಡುತ್ತಿದ್ದೆಯೋ ಅದಕ್ಕಿಂತಲೂ ಗಂಭೀರ ರೀತಿಯಲ್ಲಿ ಕಲುಷಿತ ನೀರು ಈ ದೇಶದ ಆರೋಗ್ಯ ವಲಯವನ್ನು ಕೆಡಿಸುತ್ತಿದೆ. ಭಾರತದಂತಹ ದೇಶದಲ್ಲಿ ಶುಚಿತ್ವ ಯಾಕೆ ಸವಾಲಿನ ವಿಷಯವಾಗಿದೆಯೆಂದರೆ, ಇಲ್ಲಿ ಕುಡಿಯುವ ನೀರಿಗೆ ತತ್ವಾರವಿರುವಾಗ, ಶುಚಿತ್ವಕ್ಕೆ ಬೇಕಾಗಿರುವ ನೀರನ್ನು ಒದಗಿಸುವವರು ಯಾರು? ಈ ದೇಶದಲ್ಲಿ ಕಟ್ಟಿಸಿದ ಸಾವಿರಾರು ಸಾರ್ವಜನಿಕ ಶೌಚಾಲಯಗಳು ನೀರಿನ ಕೊರತೆಯ ಕಾರಣದಿಂದಲೇ ಪಾಳು ಬಿದ್ದಿವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡೂ ಈ ಸವಾಲನ್ನು ಎದುರಿಸುತ್ತಿವೆ. ಜನರು ಕುಡಿಯುವ ನೀರಿನ ಬೇಡಿಕೆಯನ್ನು ಇಟ್ಟಾಗಲೆಲ್ಲ, ಅಂತರ್ಜಲ ಬತ್ತುತ್ತಿರುವುದರ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಇರುವ ನೀರನ್ನು ಎಷ್ಟರಮಟ್ಟಿಗೆ ಈ ದೇಶ ಸಮಾನವಾಗಿ ಹಂಚುತ್ತಿದೆ ಎನ್ನುವುದರ ಬಗ್ಗೆ ಯಾವ ಸ್ಪಷ್ಟತೆಯೂ ನಮ್ಮಲ್ಲಿಲ್ಲ. ಬೇಸಿಗೆಯ ಸಂದರ್ಭದಲ್ಲಿ ನೀರಿನ ಕೊರತೆ ಎದುರಾದಾಗಲೆಲ್ಲ ಜಿಲ್ಲಾಡಳಿತ, ಕೃಷಿಕರಿಗೆ ನದಿ ನೀರನ್ನು ಮುಟ್ಟದಂತೆ ಆದೇಶ ನೀಡುತ್ತದೆ. ಆದರೆ ಇದೇ ಸಂದರ್ಭದಲ್ಲಿ ಬೃಹತ್ ಕೈಗಾರಿಕೆಗಳು ಅಕ್ರಮವಾಗಿ ಸಂಗ್ರಹಿಸಿಡುವ ನೀರಿನ ಬಗ್ಗೆ ಕಣ್ಣಿದ್ದು ಕುರುಡಾಗುತ್ತದೆ.

ಜಲನೀತಿಯ ಪ್ರಕಾರ ನದಿ ನೀರನ್ನು ಬಳಸುವಾಗ ಮೊತ್ತ ಮೊದಲು ಕುಡಿಯುವ ನೀರಿಗೆ, ಬಳಿಕ ಕೃಷಿಗೆ ಆದ್ಯತೆಯನ್ನು ನೀಡಬೇಕು. ಆ ಬಳಿಕ ವಾಣಿಜ್ಯ ಬಳಕೆಗೆ ಅವಕಾಶ ನೀಡಬೇಕು. ಆದರೆ, ಬೇಸಿಗೆ ಆರಂಭವಾಗುತ್ತಿದ್ದಂತೆಯೇ ನೀರಿನ ಕಾಳದಂಧೆ ವ್ಯಾಪಾರ ಆರಂಭವಾಗುತ್ತದೆ. ಬೃಹತ್ ಕೈಗಾರಿಕೆಗಳು, ಹೊಟೇಲ್ ಗಳು, ಲಾಡ್ಜ್‌ಗಳು ನೀರನ್ನು ಅನಧಿಕೃತವಾಗಿ ಶೇಖರಿಸಿಡಲು ಆರಂಭಿಸುತ್ತವೆ. ನಗರದಲ್ಲಿ ನೀರಿನ ಕೊರತೆ ಎದುರಾಗಲು ಮುಖ್ಯ ಕಾರಣವೇ ಇದು. ಕೊರೋನ, ಲಾಕ್‌ಡೌನ್ ಸಂದರ್ಭದಲ್ಲಿ ನಗರಗಳನ್ನು ಕುಡಿಯುವ ನೀರಿನ ಸಮಸ್ಯೆ ಕಾಡಲಿಲ್ಲ. ಯಾಕೆಂದರೆ ಎಲ್ಲ ವಾಣಿಜ್ಯ ಸಂಸ್ಥೆಗಳು ಆ ಹೊತ್ತಿಗೆ ಬಂದ್ ಆಗಿದ್ದವು. ಮೊತ್ತ ಮೊದಲು ನಗರಗಳಲ್ಲಿ ಕುಡಿಯುವ ನೀರಿನ ಕೃತಕ ಅಭಾವವನ್ನು ತಡೆಯಲು ಜಿಲ್ಲಾಡಳಿತಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ. ಯಾಕೆಂದರೆ ಈ ಅಭಾವದ ಹಿಂದೆ ವಾಣಿಜ್ಯ ಸಂಸ್ಥೆಗಳು ಮಾತ್ರವಲ್ಲ, ನೀರು ಪೂರೈಕೆ ಮಾಡುವ ಖಾಸಗಿ ಟ್ಯಾಂಕರ್ ಮಾಫಿಯಾಗಳೂ ಕೆಲಸ ಮಾಡುತ್ತಿರುವ ಬಗ್ಗೆ ಆರೋಪಗಳಿವೆ. ಇದೇ ಸಂದರ್ಭದಲ್ಲಿ ನೀರಿನ ಅಭಾವ ಎದುರಾದಾಗ ಟ್ಯಾಂಕರ್‌ಗಳು ಪೂರೈಕೆ ಮಾಡುವ ಕುಡಿಯುವ ನೀರಿಗೆ ಯಾವುದೇ ಗುಣಮಟ್ಟದ ಮಾನದಂಡಗಳಿಲ್ಲ. ನೀರಿನ ಬೇಡಿಕೆ ತೀವ್ರವಾಗಿರುವ ಸಂದರ್ಭದಲ್ಲಿ, ಕಲುಷಿತ ನೀರಿನ ಕಲಬೆರಕೆಯಾದರೂ ಅದನ್ನು ಕೇಳುವವರೇ ಇಲ್ಲ ಎನ್ನುವಂತಹ ಸ್ಥಿತಿಯಿದೆ.

ಭಾರತವು ಕುಡಿಯುವುದಕ್ಕಾಗಿ ನದಿ ನೀರನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಆದರೆ ಇಲ್ಲಿರುವ ಬಹುತೇಕ ನದಿಗಳು ಮಾಲಿನ್ಯಗೊಂಡಿವೆ. ಈ ದೇಶದ ನದಿಗಳನ್ನು ಶುದ್ದೀಕರಿಸುವುದಕ್ಕಾಗಿಯೇ ಸಾವಿರಾರು ಕೋಟಿ ರೂಪಾಯಿಗಳನ್ನು ಸರಕಾರ ವ್ಯಯ ಮಾಡಿದೆಯಾದರೂ, ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಭಾರತದಲ್ಲಿ ಸುಮಾರು 351 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ಹೇಳುತ್ತವೆ. ಮಹಾರಾಷ್ಟ್ರವು ಅತಿ ಹೆಚ್ಚು ಕಲುಷಿತ ನದಿಗಳನ್ನು ಹೊಂದಿರುವ ರಾಜ್ಯವೆಂದು ಕುಖ್ಯಾತಿಯನ್ನು ಪಡೆದಿದೆ. ಇಲ್ಲಿ ಸುಮಾರು 53 ನದಿಗಳು ಕಲುಷಿತಗೊಂಡು, ಅದರ ನೀರು ಕುಡಿಯಲು ಅಯೋಗ್ಯವೆನಿಸಿದೆ. ಎರಡನೇ ಸ್ಥಾನದಲ್ಲಿ ಅಸ್ಸಾಂ ರಾಜ್ಯವಿದೆ. ಇಲ್ಲಿ 44 ನದಿಗಳು ಕಲುಷಿತಗೊಂಡಿವೆ. ಕರ್ನಾಟಕದಲ್ಲಿ 17 ನದಿಗಳು ಕುಡಿಯಲು ಯೋಗ್ಯವಾದ ನೀರನ್ನು ಹೊಂದಿಲ್ಲ. ಗಂಗಾ ನದಿಯನ್ನು ನಾವು ಅದೆಷ್ಟರ ಮಟ್ಟಿಗೆ ಕೆಡಿಸಿದ್ದೇವೆ ಎಂದರೆ ಸರಕಾರ ಇದನ್ನು ಶುದ್ದೀಕರಿಸುವುದಕ್ಕಾಗಿ ವಿಶೇಷ ಯೋಜನೆಯನ್ನು ಘೋಷಿಸಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ವ್ಯಯಿಸಿದರೂ, ಅದರಲ್ಲಿ ಯಶಸ್ವಿಯಾಗಲಿಲ್ಲ. ಕೈಗಾರಿಕೆಗಳ ಕಲುಷಿತ ತ್ಯಾಜ್ಯಗಳು ಒಂದೆಡೆ ನದಿಗಳನ್ನು ಕೆಡಿಸುತ್ತಿದ್ದರೆ, ಧಾರ್ಮಿಕತೆಯ ಹೆಸರಿನಲ್ಲೂ ನಾವು ನದಿಗಳನ್ನು ಸಾಯಿಸುತ್ತಿದ್ದೇವೆ. ಗಂಗಾನದಿಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಸಾವಿರಾರು ಮೃತದೇಹಗಳ ಅವಶೇಷಗಳು ಪತ್ತೆಯಾದವು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಅರೆಬೆಂದ ಮೃತದೇಹಗಳನ್ನು ಗಂಗೆಗೆ ಎಸೆದ ಪರಿಣಾಮ ಇದು. ತನಗೆ ಜೀವಜಲವನ್ನು ಇತ್ತು ಪೋಷಿಸುವ ನದಿಯನ್ನೇ ತನ್ನ ಸ್ವಾರ್ಥಕ್ಕಾಗಿ ಕೆಡಿಸುವ ಮನುಷ್ಯರನ್ನು ಹೊಂದಿರುವವರೆಗೆ, ನೀರಿನ ಕೊರತೆಗಾಗಿ ಪ್ರಕೃತಿಯನ್ನು ದೂರುವ ನೈತಿಕತೆಯನ್ನು ನಾವು ಕಳೆದುಕೊಳ್ಳುತ್ತೇವೆ.

ಅಂತರ್ಜಲವನ್ನು ಹೆಚ್ಚಿಸುವ ಬಗ್ಗೆ ಸರಕಾರ ಬೇರೆ ಬೇರೆ ಯೋಜನೆಗಳನ್ನು ರೂಪಿಸಿದೆ. ಅದಕ್ಕೆ ಮೊದಲು ಇರುವ ನದಿಗಳನ್ನು ರಕ್ಷಿಸುವ ಬಗ್ಗೆ ಸರಕಾರ ಕ್ರಮವನ್ನು ತೆಗೆದುಕೊಳ್ಳಬೇಕು. ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ನದಿಯನ್ನು ಮಾಲಿನ್ಯಗೊಳಿಸುವವರ ವಿರುದ್ದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾರ್ಖಾನೆಗಳು ತ್ಯಾಜ್ಯಗಳನ್ನು ನದಿಗೆ ಬಿಡುವ ಕೃತ್ಯವನ್ನು ಘೋರ ಅಪರಾಧವಾಗಿ ಭಾವಿಸಬೇಕು. ನದಿ ನೀರಿನ ಪೂರೈಕೆಯಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಆದ್ಯತೆಯನ್ನು ನೀಡಬೇಕು. ಹೂಳು ತುಂಬಿ ನಾಶವಾಗಿರುವ ಕೆರೆಗಳನ್ನು ಗುರುತಿಸಿ ಅವುಗಳನ್ನು ಮತ್ತೆ ಜೀವಂತಗೊಳಿಸಬೇಕು. ಅತ್ಯುತ್ತಮವಾದ ಕುಡಿಯುವ ನೀರು ಜನರ ಮೂಲಭೂತ ಹಕ್ಕು ಎನ್ನುವುದನ್ನು ಸರಕಾರ ಯಾವತ್ತೂ ಮರೆಯಬಾರದು.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News