ಕರಡಿ ಆಡಿಸುವವರಿಗೆ ದೊಣ್ಣೆ, ಆನೆ ಆಡಿಸುವವರಿಗೇಕೆ ಬೆಣ್ಣೆ ?

Update: 2023-10-27 04:07 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಳೆಯ ಕನ್ನಡ ಸಿನೆಮಾಗಳಲ್ಲಿ ವಿಲನ್ಗಳೆಂದರೆ ಅವರಿಗೆ ದಪ್ಪ ಮೀಸೆಯಿರಬೇಕು. ಇದೇ ಸಂದರ್ಭದಲ್ಲಿ ಅವರೊಳಗಿನ ಕ್ರೌರ್ಯವನ್ನು ಅಭಿವ್ಯಕ್ತಿಗೊಳಿಸಲು ಕುತ್ತಿಗೆಗೆ ಹುಲಿಯುಗುರು ಇರುವ ಸರವನ್ನು ಕಡ್ಡಾಯವಾಗಿ ಧರಿಸಿಕೊಳುತ್ತಿದ್ದರು. ಕನ್ನಡ ಸಿನೆಮಾಗಳೇ ಹುಲಿಯುಗುರು ಮತ್ತು ವಿಲನ್ಗಳಿಗೆ ಇರುವ ಸಂಬಂಧವನ್ನು ಸಾರುತ್ತಾ ಬಂದಿವೆ. ದುರದೃಷ್ಟವಶಾತ್ ಇದೀಗ ಕನ್ನಡದ ಹಲವು ಸಿನೆಮಾ ತಾರೆಯರು ಹಾಗೂ ರಾಜಕಾರಣಿಗಳು ನಿಜ ಜೀವನದಲ್ಲಿ ಹುಲಿಯುಗುರು ಸಹಿತ ಸಿಕ್ಕಿ ಬಿದ್ದಿದ್ದಾರೆ. ಹಲವು ಸೆಲೆಬ್ರಿಟಿಗಳ ಮನೆಗೆ ಅರಣ್ಯಾಧಿಕಾರಿಗಳು ಲಗ್ಗೆಯಿಟ್ಟಿದ್ದಾರೆ. ‘‘ಹುಲಿಯುಗುರು ಸೇರಿದಂತೆ ವನ್ಯಜೀವಿಗಳಿಗೆ ಸಂಬಂಧಿಸಿದ ಸಂಗ್ರಹಗಳಿದ್ದವರು ತಕ್ಷಣ ಅದನ್ನು ಇಲಾಖೆಗೆ ಮರಳಿಸಬೇಕು’’ ಎಂದು ಅರಣ್ಯ ಇಲಾಖೆ ಸೂಚನೆ ನೀಡಿದೆ. ಜೊತೆಗೆ, ವನ್ಯಜೀವಿ ಕಾಯ್ದೆಯ ಬಗ್ಗೆ ಹೊಸದಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲು ಸರಕಾರ ಹೊರಟಿದೆ. ಸಾಧಾರಣವಾಗಿ ಈ ಕೃತ್ಯಗಳನ್ನು ಅನಕ್ಷರಸ್ಥ ಜನರು ಮಾಡಿದ್ದಿದ್ದರೆ ಇಷ್ಟು ಹೊತ್ತಿಗೆ ಜೈಲಲ್ಲಿರುತ್ತಿದ್ದರು. ಕೋತಿ ಆಡಿಸುವವರು, ಕರಡಿ ಆಡಿಸುವವರು, ಬೀದಿಯಲ್ಲಿ ಎಣ್ಣೆ, ಉಗುರುಗಳನ್ನು ಮಾರುವವರು ಆಗಾಗ ಅರಣ್ಯ ಇಲಾಖಾಧಿಕಾರಿಗಳ ಕೈಗೆ ಸಿಕ್ಕಿ ಜೈಲು ಸೇರುತ್ತಿರುತ್ತಾರೆ. ಇವರೆಲ್ಲ ಹೊಟ್ಟೆ ಪಾಡಿಗಾಗಿ ಈ ಕೃತ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಇವರಿಗೆ ಸೂಕ್ತ ಪುನರ್ವಸತಿಯ ವ್ಯವಸ್ಥೆಯನ್ನು ಮಾಡಿದರೆ ಈ ವೃತ್ತಿಗಳಿಂದ ದೂರ ಸರಿಯಬಹುದು.

ಆದರೆ ಹುಲಿಯುಗುರಿನ ಜೊತೆಗೆ ಸಿಲುಕಿಕೊಂಡಿರುವ ಸಿನೆಮಾ ತಾರೆಯರು ಮುಗ್ಧರೂ ಅಲ್ಲ, ಬಡವರೂ ಅಲ್ಲ. ಈ ಹುಲಿಯುಗುರನ್ನು ಕೊರಳಲ್ಲಿ ಇವರು ಧರಿಸುತ್ತಿರುವುದು ಶೋಕಿಗಾಗಿ ಮತ್ತು ತಮ್ಮ ದೌಲತ್ತುಗಳನ್ನು ಪ್ರದರ್ಶಿಸುವುದಕ್ಕಾಗಿ. ಹುಲಿಯುಗುರು ಸೇರಿದಂತೆ ವನ್ಯಜೀವಿಗೆ ಸಂಬಂಧಿಸಿದ ಯಾವುದೇ ಸಂಗ್ರಹಗಳನ್ನು ಹೊಂದಿರುವುದು ತಪ್ಪು ಎನ್ನುವುದು ಗೊತ್ತಿದ್ದೂ ಇವರು ಮಾಡುತ್ತಿದ್ದಾರೆ. ಇದರ ಬಗ್ಗೆ ಅರಣ್ಯ ಇಲಾಖೆ ಕಣ್ಣಿದ್ದೂ ಕುರುಡಾಗಿದೆ. ಅರಣ್ಯ ಭಾಗದಲ್ಲಿ ಜೀವನದ ಅಗತ್ಯಕ್ಕಾಗಿ ಆದಿವಾಸಿಗಳು ಒಂದು ಹಿಡಿ ಕಟ್ಟಿಗೆ ಸಂಗ್ರಹಿಸಿದರೂ ಅವರ ಮೇಲೆ ಕಾನೂನು ಕ್ರಮ ಜರುಗಿಸುವ ಅಧಿಕಾರಿಗಳು ಈ ಸೆಲೆಬ್ರಿಟಿಗಳ ಶೋಕಿಗಳಿಗೆ ಪರೋಕ್ಷವಾಗಿ ಸಹಕರಿಸುತ್ತಾ ಬಂದಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯ ನೆರವಿಲ್ಲದೆ ಈ ಸಂಗ್ರಹಗಳು ಸೆಲೆಬ್ರಿಟಿಗಳನ್ನು ತಲುಪಲು ಸಾಧ್ಯವಿಲ್ಲ. ಸಿನೆಮಾ ತಾರೆಯರಿಗೆ, ರಾಜಕಾರಣಿಗಳಿಗೆ ಆಯಾ ಸೀಸನ್ಗೆ ತಕ್ಕಂತೆ ಪ್ರಾಣಿಗಳ ಮಾಂಸವನ್ನೇ ಒದಗಿಸುವವರು ಅದರ ಅಳಿದುಳಿದ ಪಳೆಯುಳಿಕೆಗಳನ್ನು ಒದಗಿಸುವುದು ದೊಡ್ಡ ಮಾತೇನೂ ಅಲ್ಲ. ಯಾಕೆಂದರೆ ಕಾಳದಂಧೆಯಲ್ಲಿ ವನ್ಯಜೀವಿಯ ಸಂಗ್ರಹಗಳ ಲಕ್ಷಾಂತರ ವ್ಯವಹಾರಗಳು ನಡೆಯುತ್ತಿರುತ್ತವೆ. ಸೆಲೆಬ್ರಿಟಿಗಳೇ ಈ ದಂಧೆಯ ಪ್ರಮುಖ ಗ್ರಾಹಕರೂ ಆಗಿದ್ದಾರೆ.

ವನ್ಯಜೀವಿಗಳ ಸಂಗ್ರಹದ ಬಗ್ಗೆ ತನಿಖೆ ನಡೆಯುತ್ತಿದ್ದಂತೆಯೇ ರಾಜಕಾರಣಿಯೊಬ್ಬರು, ಬೀದಿಯಲ್ಲಿ ನವಿಲು ಗರಿ ಹಿಡಿದು ಭಿಕ್ಷೆ ಬೇಡುವವರನ್ನು ಮೊದಲು ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಹುಲಿಯುಗುರು ಸಂಗ್ರಹಕ್ಕೆ ಧರ್ಮದ ಲೇಪವನ್ನು ಹಚ್ಚಲು ಮುಂದಾಗಿದ್ದಾರೆ. ನವಿಲು ಗರಿಯನ್ನು ಪಡೆಯಬೇಕಾದರೆ ನವಿಲನ್ನು ಕೊಲ್ಲಬೇಕಾಗಿಲ್ಲ. ಆದರೆ ಹುಲಿಯುಗುರನ್ನು ಕಿತ್ತುಕೊಳ್ಳಬೇಕಾದರೆ ಹುಲಿಗಳನ್ನು ಕೊಲ್ಲಬೇಕಾಗುತ್ತದೆ ಅಥವಾ ಜೀವಂತ ಹುಲಿಯ ಉಗುರನ್ನು ಹಾಗೆಯೇ ಕೀಳಬೇಕಾಗುತ್ತದೆ. ನವಿಲುಗರಿಗಳನ್ನು ಹೊಂದುವುದು ಕಾನೂನು ಪ್ರಕಾರ ಅಪರಾಧವೇ ಆಗಿದ್ದರೆ ತಕ್ಷಣ ಆ ಬಗ್ಗೆ ಸೂಕ್ತ ಆದೇಶಗಳನ್ನು ಹೊರಡಿಸಿ ನವಿಲುಗರಿಗಳನ್ನು ವಶಪಡಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೇ ಹೊರತು, ಬಡಪಾಯಿಗಳ ಕೈಯಲ್ಲಿರುವ ನವಿಲುಗರಿಗಳನ್ನು ತೋರಿಸಿ ಶ್ರೀಮಂತರ ಕೊರಳಲ್ಲಿರುವ ಹುಲಿಯುಗುರುಗಳನ್ನು ಸಮರ್ಥಿಸಿಕೊಳ್ಳುವುದಲ್ಲ. ಇಂದು ವನ್ಯಜೀವಿ ಸಂಗ್ರಹಗಳನ್ನು ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ, ಅಹಿಂಸೆಯನ್ನು ಬೋಧಿಸುವಂತಹ ಸ್ವಾಮೀಜಿಗಳು ಕೂಡ ಹೊಂದಿರುವುದು ಖೇದಕರವಾಗಿದೆ. ಸೆಲೆಬ್ರಿಟಿಗಳನ್ನೇನೋ ಬಂಧಿಸುವ ಅಥವಾ ಅವರ ಮೇಲೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಸೂಚನೆಗಳನ್ನು ಅರಣ್ಯ ಇಲಾಖೆ ನೀಡಿದೆ. ಆದರೆ ವನ್ಯಜೀವಿಗಳ ಚರ್ಮಗಳನ್ನು, ಸಂಗ್ರಹಗಳನ್ನು ಹೊಂದಿರುವ ಸ್ವಾಮೀಜಿಗಳ ಮೇಲೆ ಇಷ್ಟೇ ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವೆ?

ದೇವಸ್ಥಾನಕ್ಕೆ ಪ್ರವೇಶ ಮಾಡುವ ಭಕ್ತರ ಹೊಟ್ಟೆಯೊಳಗಿರುವುದು ಮಾಂಸಾಹಾರವೋ, ಸಸ್ಯಾಹಾರವೋ ಎನ್ನುವುದರ ಬಗ್ಗೆ ಮಾಧ್ಯಮಗಳು ಚರ್ಚೆ ನಡೆಸುತ್ತವೆ. ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದರು ಎನ್ನುವ ಆರೋಪಗಳು ತೀವ್ರ ವಿವಾದಕ್ಕೆ ಕಾರಣವಾಗುತ್ತವೆ. ಇದೇ ಸಂದರ್ಭದಲ್ಲಿ ಕೆಲವು ಸ್ವಾಮೀಜಿಗಳು ತಾವು ಕುಳಿತು ಕೊಳ್ಳುವ ಪೀಠದಲ್ಲಿ ಜಿಂಕೆಯ ಚರ್ಮವನ್ನು ಹಾಸುತ್ತಾರೆ. ಮಾಂಸಾಹಾರವನ್ನು ಸೇವಿಸಿದ ಜನರು ದೇವರಿಗೆ ಇಷ್ಟವಾಗುವುದಿಲ್ಲ ಎಂದಾದರೆ, ಸತ್ತ ಜಿಂಕೆಯ ಚರ್ಮವನ್ನು ಆಸೀನರಾಗಲು ಬಳಸುವುದು ದೇವರಿಗೆ ಇಷ್ಟವಾಗುವ ಮಾತೆ? ಹುಲಿ ಚರ್ಮವನ್ನು ಕೂಡ ಆಸೀನರಾಗಲು ಬಳಸುವ ಸ್ವಾಮೀಜಿಗಳು ದೇಶದಲ್ಲಿದ್ದಾರೆ. ಅಹಿಂಸೆಯ ಬಗ್ಗೆ ಗಂಟೆಗಟ್ಟಳೆ ಉಪನ್ಯಾಸ ಕೊಡುವ ಸ್ವಾಮೀಜಿಗಳು ಕುಳಿತುಕೊಳ್ಳಲು ವನ್ಯಜೀವಿಗಳ ಚರ್ಮವನ್ನು ಬಳಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಹುಲಿಯುಗುರಿನ ಜೊತೆಗೇ ಎದ್ದಿದೆ. ವನ್ಯಜೀವಿಗಳ ದೇಹದ ಅಂಗಗಳನ್ನು ಇಟ್ಟುಕೊಂಡು ಮೋಸ ಮಾಡುವ ದೊಡ್ಡ ವರ್ಗವಿದೆ. ಧರ್ಮ ಮಾತ್ರವಲ್ಲ, ಮೌಢ್ಯಗಳು ಈ ದಂಧೆಯೊಂದಿಗೆ ಶಾಮೀಲಾಗಿವೆ. ಇಂತಹ ಪ್ರಾಣಿಗಳ ಅವಯವಗಳಿದ್ದರೆ ಅದರಿಂದ ಧನಭಾಗ್ಯವಿದೆ, ಅದೃಷ್ಟ ಭಾಗ್ಯವಿದೆ ಎಂದು ನಂಬಿಸುವ ಪುರೋಹಿತರೂ ಇದ್ದಾರೆ. ಇವರ ಮಾತುಗಳನ್ನು ನಂಬಿ ವನ್ಯ ಜೀವಿ ಕಾಯ್ದೆಗಳನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಿದೆ.

ಭಾರತದಲ್ಲಿ ವನ್ಯಜೀವಿ ಕಾಯ್ದೆ ಹೆಸರಿಗಷ್ಟೇ ಇದೆ. ಇಂದು ಜನರ ಮೌಢ್ಯ, ಶೋಕಿಗಳಿಗೆ ಹುಲಿಗಳಷ್ಟೇ ಬಲಿಯಾಗುತ್ತಿರುವುದಲ್ಲ. ಅತಿ ಹೆಚ್ಚು ದೌರ್ಜನ್ಯಕ್ಕೀಡಾಗುತ್ತಿರುವುದು ಆನೆಗಳು. ಭಾರತೀಯರು ಆನೆಗಳನ್ನು ಅತ್ಯಂತ ಪೂಜನೀಯ ಸ್ಥಾನದಲ್ಲಿ ಕಾಣುತ್ತಾ ಬಂದಿದ್ದಾರೆ. ಆನೆ ಭಾರತದ ಘನತೆಯ ಸಂಕೇತವೂ ಆಗಿದೆ. ಇಂತಹ ಆನೆಗಳನ್ನು ಭಾರತದಷ್ಟು ನಿಕೃಷ್ಟವಾಗಿ ಯಾವ ದೇಶವೂ ನಡೆಸುವುದಿಲ್ಲ ಎನ್ನುವುದು ವರದಿಗಳು ಹೇಳುತ್ತವೆ. ಆನೆಗಳ ಮೇಲೆ ಭಾರತ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಹಲವು ಸಾಕ್ಷ್ಯ ಚಿತ್ರಗಳು ಬಂದಿವೆ. ಮುಖ್ಯವಾಗಿ ಭಾರತದ ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ ಆನೆಗಳ ಬಳಕೆ ವ್ಯಾಪಕವಾಗಿವೆ. ಇದೇ ಸಂದರ್ಭದಲ್ಲಿ ಆನೆಗಳನ್ನು ಪಳಗಿಸುವ ನೆಪದಲ್ಲಿ, ಬಂಧಿಸಿಡುವ ನೆಪದಲ್ಲಿ ಅವುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರಾಣಿ ದಯಾ ಸಂಘಗಳು ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಿವೆ. ಅತ್ಯಂತ ಶ್ರಮದ ಕೆಲಸಗಳಿಗೆ ಆನೆಗಳನ್ನು ಬಳಸುವುದು ಸರಿ. ಆದರೆ ಉತ್ಸವಗಳಿಗಾಗಿ, ಶೋಕಿಗಳಿಗಾಗಿ, ಧಾರ್ಮಿಕ ನಂಬಿಕೆಗಳಿಗಾಗಿ, ಪ್ರತಿಷ್ಠೆಗಾಗಿ ಆನೆಗಳನ್ನು ಶೋಷಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆಗಳನ್ನು ಪ್ರಾಣಿ ದಯಾ ಸಂಘಗಳು ಕೇಳುತ್ತಿವೆ. ಹೊಟ್ಟೆ ಹೊರೆಯುವುದಕ್ಕಾಗಿ ಕರಡಿ ಆಡಿಸುವುದು ತಪ್ಪು ಎಂದಾದರೆ, ಧರ್ಮದ ಹೆಸರಿನಲ್ಲಿ, ಉತ್ಸವಗಳ ಹೆಸರಿನಲ್ಲಿ ಆನೆಗಳನ್ನು ಆಡಿಸುವುದು ಕೂಡ ತಪ್ಪಲ್ಲವೆ? ಇತ್ತೀಚೆಗಷ್ಟೇ ಮೈಸೂರು ದಸರಾ ಉತ್ಸವದಲ್ಲಿ ಆನೆಗಳನ್ನು ಜಂಬೂಸವಾರಿಗೆ ಬಳಸಿಕೊಳ್ಳ ಲಾಯಿತು. ಇದನ್ನು ನಾವೆಲ್ಲರೂ ಸಂಭ್ರಮದಿಂದ ಕಣ್ತುಂಬಿಕೊಂಡಿದ್ದೇವೆ. ಆದರೆ ಈ ಜಂಬೂ ಸವಾರಿಗೆ ಬಳಕೆಯಾದ ಆನೆಗಳ ಕಣ್ಣಿನಲ್ಲಿ ಆ ಸಂಭ್ರಮಗಳಿದ್ದವೆ? ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಲಕ್ಷಾಂತರ ಜನಸಂದಣಿಯಿರುವ ಈ ಪ್ರದೇಶದಲ್ಲ್ ಆನೆಗಳೇನಾದರೂ ಸಿಡಿದೆದ್ದರೆ ಆಗಬಹುದಾದ ಅನಾಹುತಗಳನ್ನು ಕೂಡ ನಾವು ಒಮ್ಮೆ ಕಲ್ಪಿಸಿಕೊಳ್ಳೋಣ. ಕರಡಿ ಆಡಿಸುವವರಿಗೆ ಅನ್ವಯವಾಗುವ ಕಾನೂನು ಆನೆ ಆಡಿಸುವವರಿಗೆ ಯಾಕೆ ಅನ್ವಯವಾಗುವುದಿಲ್ಲ ಎನ್ನುವ ಪ್ರಶ್ನೆಗಳಿಗೆ ಅರಣ್ಯ ಇಲಾಖೆ ಉತ್ತರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News