ಮಲಹೊರುವ ಪದ್ಧತಿ ನಿವಾರಣೆಗಿರುವ ಅಡ್ಡಿಯೇನು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಸಂಪೂರ್ಣವಾಗಿ ನಿಷೇಧವಿದ್ದರೂ ಮಲ ಹೊರುವುದು ಹಾಗೂ ಮಲ ತೆಗೆಯುವ ಪದ್ಧತಿ ಜೀವಂತ’ ಎಂಬ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿ ಪ್ರಕರಣ ದಾಖಲಿಸುವಂತೆ ಹೈಕೋರ್ಟ್ ಆದೇಶಿಸಿದೆ. ‘‘ಯಂತ್ರೋಪಕರಣಗಳಿದ್ದೂ ಮಲಗುಂಡಿ ಸ್ವಚ್ಛಗೊಳಿಸಲು ಮನುಷ್ಯರನ್ನು ಯಾಕೆ ಬಳಸಲಾಗುತ್ತದೆ? ಯಂತ್ರೋಪಕರಣ ಅಷ್ಟೊಂದು ದುಬಾರಿಯೆ?’’ ಎಂದು ನ್ಯಾಯಾಧೀಶರು ಕೇಳಿದ್ದಾರೆ. ‘‘ಸಮಸ್ಯೆ ಯಂತ್ರಗಳದ್ದಲ್ಲ, ಮನಸ್ಥಿತಿಯದ್ದು’’ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ. ‘‘ಕೆಳಜಾತಿಯನೊಬ್ಬನ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಬಳಸಿಕೊಂಡು ಇಂತಹ ಕೆಲಸಗಳಿಗೆ ತಳ್ಳುವುದು ಆಘಾತಕಾರಿಯಾಗಿದೆ. ಆ ಮೂಲಕ ಮನುಷ್ಯನನ್ನು ಪ್ರಾಣಿ, ಪಕ್ಷಿಗಳಿಗಿಂತ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ’’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕೋಲಾರದಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿ ದಲಿತ ವಿದ್ಯಾರ್ಥಿಗಳ ಕೈಯಲ್ಲೇ ಮಲದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಮೊರಾರ್ಜಿ ವಸತಿ ಶಾಲೆಯ ಉದ್ದೇಶವೇ ಶೋಷಿತ ಸಮುದಾಯದ, ಬಡ ಮಕ್ಕಳಿಗೆ ಘನತೆಯ ಬದುಕನ್ನು ನೀಡುವುದು. ಆದರೆ ದುರದೃಷ್ಟಕ್ಕೆ ಅವರನ್ನು ಅಲ್ಲಿ ಮಲಹೊರುವ ಪದ್ಧತಿಗೆ ಸಿದ್ಧಪಡಿಸಲಾಗುತ್ತಿತ್ತು. ಘಟನೆ ಆಕಸ್ಮಿಕವೇ ಆಗಿರಬಹುದು. ಆದರೆ ದಲಿತ ವಿದ್ಯಾರ್ಥಿಗಳ ಕೈಯಲ್ಲೇ ಶುಚೀಕರಣಗೊಳಿಸಿದ ಶಿಕ್ಷಕರ ಮನಸ್ಥಿತಿ ಸಮಾಜದ ಮನಸ್ಥಿತಿಗೆ ಹಿಡಿದ ಕನ್ನಡಿ. ಜಾತೀಯತೆಯ ಕಲ್ಮಶಗಳನ್ನು ಶುಚಿಗೊಳಿಸಬೇಕಾದ ಶಿಕ್ಷಕರ ಮನಸ್ಸೆ ಇಷ್ಟೊಂದು ಕಲುಷಿತಗೊಂಡಿರುವಾಗ, ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡು ಬದುಕುತ್ತಿರುವ ಸಮಾಜ ಈ ಮಲಹೊರುವ ಪದ್ಧತಿಯನ್ನು ಹೇಗೆ ಸ್ವೀಕರಿಸಿರಬಹುದು?
ಭಾರತದಲ್ಲಿ ಶೇ. 34ರಷ್ಟು ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿ ಜೀವಂತ ಇದೆ ಎನ್ನುವ ಅಂಶವನ್ನು ಕಳೆದ ವರ್ಷ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಒಪ್ಪಿಕೊಂಡಿತ್ತು. 766 ಜಿಲ್ಲೆಗಳ ಪೈಕಿ 508 ಜಿಲ್ಲೆಗಳಲ್ಲಿ ಈ ಪದ್ಧತಿಯಿಲ್ಲ ಎಂದು ಸರಕಾರ ಹೇಳಿಕೊಂಡಿದೆ. ಇವುಗಳ ನಡುವೆಯೂ ಪದೇ ಪದೇ ಮಲದ ಗುಂಡಿಗೆ ಇಳಿದು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಮಾಧ್ಯಮಗಳಿಂದ ಅತಿ ವೈಭವೀಕರಿಸಲ್ಪಡುತ್ತಿರುವ ಗುಜರಾತ್ ರಾಜ್ಯವೂ ಮಲಹೊರುವ ಪದ್ಧತಿಗಾಗಿ ಕುಖ್ಯಾತವಾಗಿದೆ. 1993 ಮತ್ತು 2014ರ ನಡುವೆ ಶೌಚಗುಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುತ್ತಿದ್ದಾಗ ಸಾವನ್ನಪ್ಪಿದ 16 ಸ್ವಚ್ಛತಾ ಕಾರ್ಮಿಕರಿಗೆ ಪರಿಹಾರವನ್ನು ಪಾವತಿಸದ್ದಕ್ಕಾಗಿ ಬುಧವಾರ ರಾಜ್ಯ ಸರಕಾರವನ್ನು ಅಲ್ಲಿನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇಡೀ ದೇಶದಲ್ಲಿ ಮಲಹೊರುವ ಪದ್ಧತಿ ಸಂಪೂರ್ಣ ನಿಷೇಧವಾಗಿದೆ ಎಂದು ಘೋಷಣೆಯಾಗಿರುವಾಗ, ಈ ವ್ಯವಸ್ಥೆಗೆ ಸಿಲುಕಿ ಕಾರ್ಮಿಕರು ಸಾಯುತ್ತಿರುವುದು ಆ ರಾಜ್ಯಕ್ಕೆ ಅತ್ಯಂತ ಅವಮಾನಕಾರಿ ಸಂಗತಿಯಾಗಬೇಕು. ಆ ಅವಮಾನವನ್ನು ತೊಡೆದು ಹಾಕಲು ತಕ್ಷಣವೇ ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನು ವಿತರಿಸಬೇಕು. ವಿಪರ್ಯಾಸವೆಂದರೆ ಸಂತ್ರಸ್ತರಿಗೆ ಪರಿಹಾರವನ್ನು ನೀಡುವುದಕ್ಕೇ ಸರಕಾರ ಈವರೆಗೆ ಹಿಂದೇಟು ಹಾಕಿದೆ. ಹೆಚ್ಚಿನ ಸರಕಾರಗಳು ಮಲಹೊರುವ ಪದ್ಧತಿಯ ಪ್ರಕರಣಗಳು ಬೆಳಕಿಗೆ ಬಂದಿದ್ದೇ ಆದರೆ ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತವೆ. ಅಂದರೆ ಮೃತಪಟ್ಟ ಕಾರ್ಮಿಕ ಮಲ ಶುಚಿ ಮಾಡುವ ಸಂದರ್ಭದಲ್ಲಿ ಮೃತಪಟ್ಟಿರುವುದಲ್ಲ ಎಂದು ಸಾಬೀತು ಮಾಡಲು ಯತ್ನಿಸುತ್ತದೆ. ಮಲಹೊರುವ ಪದ್ಧತಿಯ ಕಳಂಕ ತನ್ನ ರಾಜ್ಯಕ್ಕೆ ಬರಬಾರದು ಎನ್ನುವ ಉದ್ದೇಶದಿಂದ ಸರಕಾರ ಇಡೀ ಪ್ರಕರಣವನ್ನು ನಿರಾಕರಿಸುತ್ತದೆ. ಇದರಿಂದ ಕಾರ್ಮಿಕ ಸೂಕ್ತ ಪರಿಹಾರದಿಂದಲೂ ವಂಚಿತನಾಗುತ್ತಾನೆ.
ದೇಶದಲ್ಲಿ ಮಲಹೊರುವ ಪ್ರಕರಣಗಳಿದ್ದರೂ ಪರವಾಗಿಲ್ಲ, ಅವುಗಳು ದಾಖಲಾಗದಂತೆ ನೋಡಿಕೊಳ್ಳಿ ಎನ್ನುವ ಸರಕಾರದ ಪರೋಕ್ಷ ಸಂದೇಶವನ್ನು ಎಲ್ಲ ಜಿಲ್ಲಾಡಳಿತಗಳು ಪಾಲಿಸುತ್ತಿವೆ. ಜಾತೀಯತೆ ಪ್ರಬಲವಾಗಿರುವ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ನಂತಹ ರಾಜ್ಯಗಳಲ್ಲಿ ಇಂದಿಗೂ ಮಲಹೊರುವ ಪದ್ಧತಿ ಜೀವಂತವಿದೆಯಾದರೂ, ದಾಖಲಾಗುವುದು ತೀರಾ ಕಡಿಮೆ. ಸಾಧಾರಣವಾಗಿ ಮಲಹೊರುವ ಪದ್ಧತಿ ಬಹಿರಂಗವಾಗಬೇಕಾದರೆ ಯಾವುದಾದರೂ ದುರಂತಗಳು ಸಂಭವಿಸಬೇಕು. ಮುಖ್ಯವಾಗಿ, ದುರಂತದಲ್ಲಿ ಕಾರ್ಮಿಕ ಸಾಯಬೇಕು. ಇಲ್ಲವಾದರೆ ಈ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲನ್ನೇ ಹತ್ತುವುದಿಲ್ಲ. ಇಂತಹ ದುರಂತಗಳು ಸಂಭವಿಸಿದಾಗ ಅದನ್ನು ಮುಚ್ಚಿ ಹಾಕಲು ಗರಿಷ್ಠ ಪ್ರಯತ್ನ ತಳಮಟ್ಟದಿಂದಲೇ ಆರಂಭವಾಗುತ್ತದೆ. ಇಲ್ಲಿ ಕಾರ್ಮಿಕನನ್ನು ದುರ್ಬಳಕೆ ಮಾಡಿದಾತ ಮೇಲ್ಜಾತಿಗೆ ಮತ್ತು ಮೇಲ್ವರ್ಗಕ್ಕೆ ಸೇರಿರುವುದರಿಂದ ಸಂತ್ರಸ್ತ ಕುಟಂಬಕ್ಕೆ ಸಣ್ಣ ಮೊತ್ತವನ್ನು ಪಾವತಿಸಿ ಪ್ರಕರಣವನ್ನು ಮುಗಿಸಲು ಯತ್ನಿಸುತ್ತಾನೆ. ಬಡತನದಿಂದ ನರಳುತ್ತಿರುವ ಈ ಕುಟುಂಬ ಪರಿಹಾರದ ಆಸೆಗೆ ಅಥವಾ ಮೇಲ್ಜಾತಿಯ ಜನರ ದಬ್ಬಾಳಿಕೆಗೆ ಬೆದರಿ ಮಣಿಯುತ್ತದೆ. ಪ್ರಕರಣ ದಾಖಲಿಸುವುದು ಜಿಲ್ಲಾಡಳಿತಕ್ಕೂ ಬೇಡವಾಗಿರುತ್ತದೆ. ಯಾಕೆಂದರೆ, ‘‘ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಮಲಹೊರುವ ಪದ್ಧತಿಯಿಲ್ಲ’’ ಎಂಬ ಅವರ ಘೋಷಣೆಯನ್ನು ಈ ಪ್ರಕರಣ ಅಲ್ಲಗಳೆಯುವ ಆತಂಕ ಅವರನ್ನು ಕಾಡುತ್ತದೆ. ಪ್ರಕರಣವನ್ನು ಮುಚ್ಚಿ ಹಾಕಲು ಜಿಲ್ಲಾಡಳಿತವೂ ಪರೋಕ್ಷ ಕೈ ಜೋಡಿಸುವುದಿದೆ. ಎಲ್ಲ ಅಡೆತಡೆಗಳನ್ನು ದಾಟಿ ಸಂತ್ರಸ್ತರು ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕವೂ ಅವರಿಗೆ ನ್ಯಾಯ ಮರೀಚಿಕೆಯಾಗಿದೆ. ಇದಕ್ಕೆ ಉದಾಹರಣೆ ಗುಜರಾತ್ನ 16 ಮೃತ ಕಾರ್ಮಿಕರ ಕುಟುಂಬಗಳು. ಉತ್ತರ ಭಾರತದ ರಾಜ್ಯಗಳಲ್ಲಿ ಮಲ ಹೊರುವ ಪದ್ಧತಿ ಅಸ್ತಿತ್ವದಲ್ಲಿಲ್ಲ ಎಂದರೆ ಅದರ ಅರ್ಥ, ಅವುಗಳು ಸರಕಾರದ ದಾಖಲೆಗಳಲ್ಲಿ ಇಲ್ಲ ಎಂದಷ್ಟೇ.
ಸ್ವಚ್ಛತಾ ಆಂದೋಲನಕ್ಕಾಗಿ ಸರಕಾರ ಕೋಟ್ಯಂತರ ರೂ.ಯನ್ನು ವೆಚ್ಚ ಮಾಡುತ್ತಾ ಬರುತ್ತಿದೆಯಾದರೂ, ಈ ಆಂದೋಲನದಲ್ಲಿ ಮಲಹೊರುವ ಪದ್ಧತಿಯನ್ನು ನಿವಾರಿಸುವ ಬಗ್ಗೆ ಯಾವ ಕಾರ್ಯಕ್ರಮಗಳೂ ಅಧಿಕೃತವಾಗಿ ಇಲ್ಲ. 1993ರಲ್ಲಿ ಮಲಹೊರುವ ಪದ್ಧತಿ ನಿಷೇಧ ಕಾಯ್ದೆ ಜಾರಿಯಾಯಿತು. 2013ರಲ್ಲಿ ಈ ಕಾಯ್ದೆಯನ್ನು ಇನ್ನಷ್ಟು ಬಿಗಿ ಗೊಳಿಸಲಾಯಿತು. ಅಂದರೆ ಆರೋಪಿಗಳಿಗೆ ಶಿಕ್ಷೆಯನ್ನು ಹೆಚ್ಚಿಸಲಾಯಿತು ಮಾತ್ರವಲ್ಲ, ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನೀಡುವುದಕ್ಕೆ ಯೋಜನೆಯನ್ನು ರೂಪಿಸಲಾಯಿತು. ಹಲವು ಸಂದರ್ಭಗಳಲ್ಲಿ ಬೇರೆ ಉದ್ಯೋಗಗಳಿಲ್ಲದೇ ಇರುವುದರಿಂದ ಈ ಸಂತ್ರಸ್ತರು ತಾವಾಗಿಯೇ ಮಲಹೊರುವ ವ್ಯವಸ್ಥೆಗೆ ಜೊತೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಮಲ ಹೊರುವ ವ್ಯವಸ್ಥೆ ನಿಷೇಧದ ಜೊತೆಗೆ ನಿರುದ್ಯೋಗಿಗಳಾಗಿರುವ ಇವರಿಗೆ ಪುನರ್ವಸತಿ ವ್ಯವಸ್ಥೆಯನ್ನು ರೂಪಿಸಲೂ ಕ್ರಮ ತೆಗೆದುಕೊಳ್ಳಲಾಗಿತ್ತು. ಒಂದೆಡೆ ಸ್ವಚ್ಛತಾ ಆಂದೋಲನದ ಹೆಸರಿನಲ್ಲಿ ಕಾರ್ಮಿಕರಿಗೆ ಸೇರಬೇಕಾದ ಹಣವನ್ನು ಅಧಿಕಾರಿಗಳು ಲೂಟಿಹೊಡೆಯುತ್ತಿದ್ದರೆ, ಇತ್ತ ಮಲಹೊರುವ ಪದ್ಧತಿಯ ಪುನರ್ವಸತಿಗಾಗಿ ಸರಕಾರ ಬಜೆಟ್ನಲ್ಲಿ ಮೀಸಲಿಡುತ್ತಿದ್ದ ಹಣ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. 2020ರಲ್ಲಿ ಸರಕಾರ 100 ಕೋಟಿ ರೂ. ಮೀಸಲಿಟ್ಟಿದ್ದರೆ, 2021ರಲ್ಲಿ 30 ಕೋಟಿ ರೂ. ಹಂಚಿಕೆಯಾಗಿದೆ. 2022ರಲ್ಲಿ 40 ಕೋಟಿ ರೂ. ಮೀಸಲಿರಿಸಲಾಗಿದೆ. ಎಲ್ಲಾ ಜಿಲ್ಲಾಡಳಿತಗಳು ಮಲಹೊರುವ ವ್ಯವಸ್ಥೆಯನ್ನು ಮುಚ್ಚಿಡಲು ಶ್ರಮಿಸುತ್ತಿರುವುದರಿಂದ, ಈ ಹಣ ಕಂಡವರ ಪಾಲಾಗುತ್ತಿದೆ. ಮಲದ ಗುಂಡಿ ಶುಚಿಗೊಳಿಸುವ ಕೆಲಸಕ್ಕೆ ಇದೀಗ ಕೆಲವೆಡೆ ಯಂತ್ರಗಳನ್ನು ಬಳಸಲಾಗುತ್ತಿದೆ. ವಿಪರ್ಯಾಸವೆಂದರೆ, ಯಂತ್ರಗಳ ಮೂಲಕ ಶುಚಿಗೊಳಿಸುವುದಕ್ಕೂ ಅಧಿಕಾರಿಗಳು ದಲಿತರಿಗೇ ತರಬೇತಿಗಳನ್ನು ನೀಡುತ್ತಿದ್ದಾರೆ. ಮಲಹೊರುವ ವ್ಯವಸ್ಥೆ ಯೊಂದಿಗೆ ನಿರ್ದಿಷ್ಟ ಜಾತಿಯನ್ನು ಹೇಗೆ ಜೋಡಿಸಲಾಗಿದೆ ಎನ್ನುವುದನ್ನು ಇದು ಹೇಳುತ್ತದೆ. ಎಲ್ಲಿಯವರೆಗೆ ಈ ದೇಶದಲ್ಲಿ ಜಾತೀಯತೆ ಅಳಿಯುವುದಿಲ್ಲವೋ ಅಲ್ಲಿಯವರೆಗೆ ಮಲಹೊರುವ ವ್ಯವಸ್ಥೆಯೂ ಅಳಿಯುವುದಿಲ್ಲ. ಉತ್ತರ ಭಾರತದಲ್ಲಿ ಈ ವ್ಯವಸ್ಥೆಯಿಂದ ಹೊರಗೆ ಬರುವುದೆಂದರೆ ಜಾತಿ ವ್ಯವಸ್ಥೆಯಿಂದ ಹೊರ ಬರುವುದು ಎನ್ನುವ ಸ್ಥಿತಿಯಿದೆ. ಮಲ ಶುಚಿಗೊಳಿಸಲು ಸಹಕರಿಸದೇ ಇದ್ದರೆ ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುತ್ತದೆ. ಬಲಾಢ್ಯ ಜಾತಿಗಳನ್ನು ಎದುರಿಸಲಾಗದೆ ಈ ವ್ಯವಸ್ಥೆಗೆ ದಲಿತರು ತಲೆಬಾಗಬೇಕಾಗುತ್ತದೆ. ಹೀಗಿರುವಾಗ, ನ್ಯಾಯಾಲಯ ಈ ಮೇಲ್ಜಾತಿಯ ಜನರ ಮೆದುಳಲ್ಲಿ ಅಂಟಿಕೊಂಡಿರುವ ಜಾತೀಯ ಮಲವನ್ನು ಶುಚಿಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಮೆದುಳು ಸ್ವಚ್ಛಗೊಂಡಾಗ, ಈ ಪದ್ಧತಿಯೂ ನಮ್ಮ ನಡುವಿನಿಂದ ಪೂರ್ಣ ಪ್ರಮಾಣದಲ್ಲಿ ಇಲ್ಲವಾಗಬಹುದು.