ಚುನಾವಣಾ ಬಾಂಡ್ ಅಕ್ರಮದ ಜೊತೆಗೆ ಕೈಜೋಡಿಸಿತೇ ಎಸ್ ಬಿಐ?

Update: 2024-03-08 04:52 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಚುನಾವಣಾ ಬಾಂಡ್ ಹೆಸರಿನಲ್ಲಿ, ಪ್ರಜಾಸತ್ತೆಯನ್ನು ಹಣದ ಮೂಲಕ ಕೊಂಡು-ಕೊಲ್ಲುವ ವ್ಯಾಪಾರಕ್ಕೆ ಸುಪ್ರೀಂಕೋರ್ಟ್ ನಿಂದ ಇತ್ತೀಚೆಗೆ ತಡೆ ಬಿದ್ದಿದೆ. ‘ಚುನಾವಣಾ ಬಾಂಡ್’ನ್ನು ಅಸಾಂವಿಧಾನಿಕ ಎಂದು ಘೋಷಿಸುವ ಮೂಲಕ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಂದ ಅಕ್ರಮವಾಗಿ ದೇಣಿಗೆ ವಸೂಲಿ ಮಾಡುವ ಕೇಂದ್ರದ ‘ಕಪ್ಪು ವ್ಯವಹಾರ’ ಈ ಮೂಲಕ ಬೆಳಕಿಗೆ ಬಂದಂತಾಗಿದೆ. ಈ ತೀರ್ಪನ್ನು ನೀಡುವ ಸಂದರ್ಭದಲ್ಲಿ, ಪಕ್ಷಗಳು ಸ್ವೀಕರಿಸಿದ ಚುನಾವಣಾ ಬಾಂಡ್ ನ ವಿವರಗಳನ್ನು ಮಾರ್ಚ್ 13ರಂದು ವೆಬ್ಸೈಟ್ನಲ್ಲಿ ಜಾಹೀರು ಗೊಳಿಸಬೇಕು ಎಂದೂ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಮೂಲಕ, ಯಾರ್ಯಾರು ಯಾವ ಯಾವ ಸಂಸ್ಥೆಗಳಿಂದ ಎಷ್ಟೆಷ್ಟು ಹಣವನ್ನು ಪಡೆದಿದ್ದಾರೆ ಎನ್ನುವುದು ಇಡೀ ದೇಶಕ್ಕೆ ಗೊತ್ತಾಗುತ್ತದೆ ಮತ್ತು ದೇಣಿಗೆ ನೀಡಿದವರ ಅಸಲಿ ಮುಖ ಮತ್ತು ಪಡೆದವರ ಸಾಚಾತನ ಎರಡೂ ಬಹಿರಂಗವಾಗುತ್ತದೆ. ಈಗಾಗಲೇ, ಬಿಜೆಪಿಯು ಈ.ಡಿ. ದಾಳಿಗೊಳಗಾಗಿದ್ದ ಹಲವು ಸಂಸ್ಥೆಗಳಿಂದ ದೇಣಿಗೆ ಪಡೆದಿರುವುದು ಮಾಧ್ಯಮಗಳಿಂದ ಬೆಳಕಿಗೆ ಬಂದಿದೆ. ‘ಮೋದಿಯವರ ಭ್ರಷ್ಟಾಚಾರ ವಿರೋಧಿ ಆಡಳಿತ’ದ ಅಸಲಿ ಮುಖ, ಮಾರ್ಚ್ 13ರಂದು ಎಸ್ಬಿಐ ಬಹಿರಂಗಪಡಿಸುವ ವಿವರಗಳಿಂದ ಇನ್ನಷ್ಟು ಸ್ಪಷ್ಟವಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ದೇಣಿಗೆ ವಿವರಗಳನ್ನು ಬಹಿರಂಗಪಡಿಸಲು ತನಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಸುಪ್ರೀಂಕೋರ್ಟ್ ಮುಂದೆ ಎಸ್ಬಿಐ ಮನವಿ ಮಾಡಿದೆ.

ಚುನಾವಣಾ ಬಾಂಡ್ ಎನ್ನುವ ಅಸಾಂವಿಧಾನಿಕ ಕಪ್ಪು ವ್ಯವಹಾರದಲ್ಲಿ ಎಸ್ಬಿಐಯೂ ಶಾಮೀಲಾಗಿದೆಯೇ ಎನ್ನುವ ಅನುಮಾನವನ್ನು ಈ ಮನವಿ ಹುಟ್ಟಿಸಿ ಹಾಕಿದೆ. ನೋಟು ನಿಷೇಧದ ಬಳಿಕ ಡಿಜಿಟಲ್ ಬ್ಯಾಂಕ್ ಬಗ್ಗೆ ಎಸ್ ಬಿಐ ತುತ್ತೂರಿ ಊದುತ್ತಿದೆ. ತಂತ್ರಜ್ಞಾನ ಇಂದು ಬ್ಯಾಂಕ್ ವ್ಯವಹಾರಗಳನ್ನು ಅತ್ಯಂತ ಸುಲಭಗೊಳಿಸಿರುವ ಹೊತ್ತಿನಲ್ಲಿ, ದೇಣಿಗೆದಾರರ 44, 434 ಸ್ವಯಂಚಾಲಿತ ನೋಂದಣಿಗಳನ್ನು ಬಿಡುಗಡೆ ಮಾಡಲು ಎಸ್ಬಿಐಗೆ ಇರುವ ಕಷ್ಟವಾದರೂ ಏನು? ಎನ್ನುವ ಪ್ರಶ್ನೆಯನ್ನು ವಿರೋಧ ಪಕ್ಷಗಳ ನಾಯಕರು ಕೇಳುತ್ತಿದ್ದಾರೆ. ಇಂದು ವಿರೋಧ ಪಕ್ಷಗಳು ಸುಪ್ರೀಂಕೋರ್ಟ್ ನ ತೀರ್ಪನ್ನು ಹಾರ್ದಿಕವಾಗಿ ಸ್ವಾಗತಿಸುತ್ತಿರುವಾಗ, ಬಿಜೆಪಿಗೆ ಮಾತ್ರ ಯಾಕೆ ದೇಣಿಗೆ ವಿವರಗಳು ಬಿಡುಗಡೆಗೊಳ್ಳುವುದು ಬೇಡವಾಗಿದೆ? ಚುನಾವಣಾ ಬಾಂಡ್ ಹೇಗೆ ಇಡೀ ದೇಶದ ಪ್ರಜಾಸತ್ತೆಯನ್ನು ಬುಡಮೇಲು ಗೊಳಿಸಬಹುದು ಎನ್ನುವುದನ್ನು ಸುಪ್ರೀಂಕೋರ್ಟ್ ನುಡಿದಿರುವಾಗ, ಕಪ್ಪು ಹಣ ಪರಿವರ್ತನೆಗೆ ಮತ್ತು ಭ್ರಷ್ಟರಿಗೆ ಇದು ಹೇಗೆ ಪರೋಕ್ಷ ರಕ್ಷಣೆಯನ್ನು ನೀಡಬಹುದು ಎನ್ನುವುದನ್ನು ಸುಪ್ರೀಂಕೋರ್ಟ್ ಘೋಷಿಸಿದ ಬಳಿಕವೂ ಎಸ್ಬಿಐ ವಿವರಗಳನ್ನು ಬಿಡುಗಡೆ ಮಾಡಲು ಯಾಕೆ ಆಸಕ್ತಿ ವಹಿಸುತ್ತಿಲ್ಲ? ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ ಎನ್ನುವ ಕೇಂದ್ರ ಸರಕಾರ ಯಾಕೆ ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿದೆ? ಎನ್ನುವ ಪ್ರಶ್ನೆಗಳು ಎದ್ದಿವೆ.

ಚುನಾವಣಾ ಬಾಂಡ್ನ ಗೌಪ್ಯಗಳನ್ನು ಎಸ್ಬಿಐಯೂ ಈವರೆಗೆ ಕೇಂದ್ರ ಸರಕಾರದೊಂದಿಗೆ ಹಂಚಿಕೊಳ್ಳುವ ಅವಕಾಶಗಳಿದ್ದವು. ಇದೇ ಸಂದರ್ಭದಲ್ಲಿ ಆರ್ಟಿಐ ಮೂಲಕ ಈ ವಿವರಗಳನ್ನು ಪಡೆದುಕೊಳ್ಳುವ ಅಧಿಕಾರ ಜನಸಾಮಾನ್ಯರಿಗಿರಲಿಲ್ಲ. ವಿರೋಧ ಪಕ್ಷಗಳಿಗೆ ಯಾವ ಯಾವ ಮೂಲಗಳಿಂದ ದೇಣಿಗೆಗಳು ಬಂದಿವೆ ಎನ್ನುವ ಮಾಹಿತಿಯನ್ನು ಕೇಂದ್ರ ಸರಕಾರ ಪಡೆದುಕೊಳ್ಳಬಹುದಿತ್ತು. ಆದರೆ ಇತರ ಪಕ್ಷಗಳಿಗೆ ಈ ಹಕ್ಕು ಇರಲಿಲ್ಲ. ಇದರಿಂದಾಗಿ ಇತರ ಪಕ್ಷಗಳಿಗೆ ದೇಣಿಗೆ ನೀಡುವ ಕಾರ್ಪೊರೇಟ್ ಸಂಸ್ಥೆಗಳು ಸಹಜವಾಗಿಯೇ ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಬಹುದಿತ್ತು. ಈ ಹಿಂದೆ ಕೇಂದ್ರ ಸರಕಾರಕ್ಕೆ ಬೇಕೆಂದಾಗ ಮಾಹಿತಿಯನ್ನು ನೀಡುತ್ತಿದ್ದ ಎಸ್ಬಿಐ, ಇದೀಗ ಎಲ್ಲ ವಿವರಗಳನ್ನು ವೆಬ್ಸೈಟ್ನಲ್ಲಿ ಬಹಿರಂಗಪಡಿಸಬೇಕು ಎನ್ನುವಾಗ ಮಾತ್ರ ಸಮಯಾವಕಾಶ ಕೇಳುತ್ತಿದೆ. ದೇಣಿಗೆಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಎಸ್ಬಿಐ ಬಳಸಿಕೊಂಡಿರುವ ತಂತ್ರಜ್ಞಾನವು ಈಗ ಅದರ ವಿವರಗಳನ್ನು ಬಹಿರಂಗ ಪಡಿಸುವ ಸಂದರ್ಭದಲ್ಲಿ ಯಾಕೆ ಉಪಯೋಗಕ್ಕೆ ಬರುತ್ತಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ಎಸ್ಬಿಐಗೆ ಹೆಚ್ಚುವರಿ ಸಮಯದ ಅಗತ್ಯವೇ ಇಲ್ಲ ಎನ್ನುವುದನ್ನು ಹಿರಿಯ ತಜ್ಞರು ಈಗಾಗಲೇ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದ್ದಾರೆ. ಎಸ್ಬಿಐ ಸ್ವತಂತ್ರ ಘಟಕವೇ ಆಗಿದ್ದರೂ ಅದು ಕೇಂದ್ರ ಸರಕಾರದೊಂದಿಗೆ ಪರೋಕ್ಷ ಸಂಬಂಧವನ್ನು ಹೊಂದಿದೆ. ಬೃಹತ್ ಕಾರ್ಪೊರೇಟ್ ಉದ್ಯಮಿಗಳಿಗೆ ನೀಡಿರುವ ಬೃಹತ್ ಸಾಲಗಳ ಸಿಕ್ಕುಗಳಲ್ಲಿ ಸಿಲುಕಿಕೊಂಡಿರುವ ಎಸ್ಬಿಐಯು ರಾಜಕಾರಣಿಗಳ ಹಸ್ತಕ್ಷೇಪಗಳ ಜೊತೆಗೇ ಮುನ್ನಡೆಯುತ್ತಿದೆ. ನೋಟು ನಿಷೇಧದ ವೈಫಲ್ಯದ ಬಳಿಕ ಆರ್ಥಿಕ ವಲಯದಲ್ಲಿ ಎದ್ದ ಬಿರುಗಾಳಿ, ಸುಧಾರಣೆಯ ಹೆಸರಿನಲ್ಲಿ ಬ್ಯಾಂಕುಗಳ ವಲಯದಲ್ಲಿ ಆಗಿರುವ ಬದಲಾವಣೆಗಳೆಲ್ಲವೂ, ಸರಕಾರದೊಂದಿಗೆ ಪರೋಕ್ಷವಾಗಿ ಸಹಕರಿಸುವ ಅನಿವಾರ್ಯ ಸ್ಥಿತಿಯನ್ನು ಎಸ್ಬಿಐಗೆ ನಿರ್ಮಾಣ ಮಾಡಿದೆ. ಚುನಾವಣಾ ಬಾಂಡ್ನ ಒಳಗಿರುವ ಅಕ್ರಮಗಳ ಬಗ್ಗೆ ಸ್ಫೋಟಕ ಮಾಹಿತಿಯನ್ನು ಎಸ್ಬಿಐ ಹೊಂದಿದೆ. ಕೇಂದ್ರ ಸರಕಾರ ಈ ವಿವರಗಳು ಹೊರ ಬೀಳದಂತೆ ಎಸ್ಬಿಐ ನೆರವನ್ನು ಪಡೆಯಲು ಮುಂದಾಗಿದೆ.

ಕನಿಷ್ಠ ಚುನಾವಣೆ ಮುಗಿಯುವವರೆಗೆ ವಿವರಗಳು ಹೊರ ಬೀಳುವುದು ಕೇಂದ್ರ ಸರಕಾರಕ್ಕೆ ಬೇಡವಾಗಿದೆ. ಒಂದು ವೇಳೆ ಈ ವಿವರಗಳನ್ನು ಎಸ್ಬಿಐ ಬಹಿರಂಗ ಪಡಿಸಿದ್ದೇ ಆದರೆ, ಕೇಂದ್ರ ಸರಕಾರ ನಡೆಸಿರುವ ಹತ್ತು ಹಲವು ಅಕ್ರಮಗಳು ಮಾಧ್ಯಮಗಳಿಗೆ ಆಹಾರವಾಗಬಹುದು. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರ ಹಲವು ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಕಾರ್ಪೊರೇಟ್ ಸಂಸ್ಥೆಗಳು ಸರಕಾರಕ್ಕೆ ನೀಡಿದ ಉಡುಗೊರೆ ಎಷ್ಟು ಎನ್ನುವುದು ಎಸ್ಬಿಐ ಬಹಿರಂಗಗೊಳಿಸುವ ಮಾಹಿತಿಯಿಂದ ದೇಶಕ್ಕೆ ಗೊತ್ತಾಗಲಿದೆ. ಈ.ಡಿ.ಯಂತಹ ತನಿಖಾ ಸಂಸ್ಥೆಗಳ ಮೂಲಕ ಬೆದರಿಸಿ ವಸೂಲಿ ಮಾಡಿದ ಹಣ, ಅತಿ ಹೆಚ್ಚು ದೇಣಿಗೆಗಳನ್ನು ನೀಡಿದ ಸಂಸ್ಥೆಗಳಿಗೆ ಸರಕಾರ ಮಾಡಿದ ಸಹಾಯ ಇವೆಲ್ಲವೂ ಒಂದೊಂದಾಗಿ ಹೊರ ಬೀಳಲಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಬಿಜೆಪಿಯ ವಿರುದ್ಧ ಪ್ರಚಾರಕ್ಕೆ ಈ ಅಕ್ರಮಗಳೇ ಧಾರಾಳ ಸಾಕು. ಆದುದರಿಂದಲೇ, ಚುನಾವಣೆ ಮುಗಿಯುವವರೆಗೆ ‘ಚುನಾವಣಾ ಬಾಂಡ್’ ಅಕ್ರಮ ಬಹಿರಂಗವಾಗುವುದು ಕೇಂದ್ರ ಸರಕಾರಕ್ಕೆ ಬೇಡವಾಗಿದೆ. ‘ಬೀಸುವ ದೊಣ್ಣೆಯಿಂದ ಪಾರಾದರೆ ನೂರು ವರ್ಷ ಆಯಸ್ಸು’ ಎನ್ನುವಂತೆ, ಚುನಾವಣೆ ಗೆದ್ದ ಬಳಿಕ ಸುಪ್ರೀಂಕೋರ್ಟ್ ತೀರ್ಪನ್ನೇ ಶಾಶ್ವತವಾಗಿ ಕಸದ ಬುಟ್ಟಿಗೆ ಹಾಕಿ ಬಿಡಬಹುದು ಎನ್ನುವ ಆತ್ಮವಿಶ್ವಾಸ ಕೇಂದ್ರ ಸರಕಾರಕ್ಕಿರುವಂತಿದೆ.

ಜನಸಾಮಾನ್ಯರ ನಂಬಿಕೆಯ ಮೇಲೆ ಕಟ್ಟಿ ನಿಲ್ಲಿಸಿರುವ ಸಂಸ್ಥೆಯಾಗಿದೆ ಎಸ್ಬಿಐ. ಇಂದು ಸರಕಾರದ ಅಕ್ರಮಗಳನ್ನು ಮುಚ್ಚಿ ಹಾಕುವುದಕ್ಕಾಗಿ ಅದು ದೇಶದ ಜನತೆಯ ಬೆನ್ನಿಗೆ ಚೂರಿ ಹಾಕಲು ಮುಂದಾಗಿರುವುದು ವಿಷಾದನೀಯವಾಗಿದೆ. ಈಗಾಗಲೇ ಎಸ್ಬಿಐ ಹಲವು ಕಾರಣಗಳಿಗಾಗಿ ಜನರಿಂದ ವಿಶ್ವಾಸವನ್ನು ಕಳೆದುಕೊಂಡಿದೆ. ಎಸ್ಬಿಐ ಜಾರಿಗೊಳಿಸುತ್ತಿರುವ ನಿಯಮಗಳ ಪರಿಣಾಮದಿಂದ, ‘ಬ್ಯಾಂಕ್ ದರೋಡೆ’ಯ ಬದಲಿಗೆ ಬ್ಯಾಂಕ್ಗಳಿಂದಲೇ ಜನಸಾಮಾನ್ಯರ ದರೋಡೆಗಳು ನಡೆಯುತ್ತಿವೆ. ಇದರ ಬೆನ್ನಿಗೇ, ಸುಪ್ರೀಂಕೋರ್ಟ್ ಯಾವುದನ್ನು ‘ಅಸಾಂವಿಧಾನಿಕ’ ಎಂದು ಘೋಷಿಸಿದೆಯೋ ಆ ಅಕ್ರಮದ ಜೊತೆಗೆ ಪರೋಕ್ಷ ಕೈ ಜೋಡಿಸಿ, ಜನರ ನಂಬಿಕೆಗಳಿಗೆ ಇನ್ನಷ್ಟು ಧಕ್ಕೆಯನ್ನುಂಟು ಮಾಡಿದೆ. ಎಸ್ಬಿಐಯ ಮನವಿಯ ಹಿಂದಿರುವ ‘ರಾಜಕೀಯ’ವನ್ನು ಗುರುತಿಸಿ, ತಕ್ಷಣ ಮಾಹಿತಿಯನ್ನು ಬಹಿರಂಗಗೊಳಿಸಲು ಸುಪ್ರೀಂಕೋರ್ಟ್ ಆದೇಶ ನೀಡಬೇಕು. ಇಲ್ಲವಾದರೆ, ಚುನಾವಣಾ ಬಾಂಡ್ ವಿರುದ್ಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅರ್ಥ ಕಳೆದುಕೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News