ಇದು ಒಕ್ಕೂಟ ವ್ಯವಸ್ಥೆಗೆ ಮಾರಕ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈಗಿರುವ ಚುನಾವಣಾ ವ್ಯವಸ್ಥೆಯನ್ನು ಬದಲಿಸಿ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಪರಾಮರ್ಶಿಸಿ ವರದಿ ನೀಡಲು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ನೇಮಿಸಿದ್ದ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ವರದಿ ನೀಡಿ ಮೂರು ವಾರಗಳಾಗುತ್ತಾ ಬಂತು. ಎಲ್ಲಾ ಮೂರು ಹಂತಗಳ ಆಡಳಿತ ವ್ಯವಸ್ಥೆಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಈ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇದರಲ್ಲಿ ಏಕಕಾಲದಲ್ಲಿ ಯಾಕೆ ಚುನಾವಣೆ ನಡೆಸಬೇಕೆಂಬುದಕ್ಕೆ ಯಾವುದೇ ಸಮರ್ಥನೆ ಇಲ್ಲ ಹಾಗೂ ಇದನ್ನು ಹೇಗೆ ಜಾರಿಗೆ ತರಬೇಕು, ಅದರ ವಿಧಿ, ವಿಧಾನಗಳು ಯಾವುವು? ಎನ್ನುವುದರ ಬಗ್ಗೆ ಈ ಶಿಫಾರಸು ಮೌನವಾಗಿದೆ. ಇಡೀ ಚುನಾವಣಾ ವ್ಯವಸ್ಥೆಯ ಬಗ್ಗೆ ವಸ್ತುನಿಷ್ಠವಾಗಿ ಪರಾಮರ್ಶಿಸದೆ ತರಾತುರಿಯಲ್ಲಿ ಕೊಟ್ಟ ವರದಿ ಇದು ಎಂಬುದು ಸ್ಪಷ್ಟವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಆಗಾಗ ಪ್ರತಿಪಾದಿಸುತ್ತ ಬಂದ ‘ಒಂದು ದೇಶ ಒಂದು ಚುನಾವಣೆ’ ಎಂಬ ಆಶಯಕ್ಕೆ ಪೂರಕವಾಗಿ ಈ ವರದಿ ಬಂದಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ಮತ್ತು ಅದಾಗಿ ನೂರು ದಿನಗಳೊಳಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೆಂದು ಈ ಸಮಿತಿ ಶಿಫಾರಸು ಮಾಡಿದೆ. ಎಲ್ಲಾ ಮೂರು ಹಂತಗಳ ಚುನಾವಣೆಗೆ ಒಂದೇ ಮತದಾರರ ಪಟ್ಟಿ ಹಾಗೂ ಫೋಟೊ ಸಹಿತ ಗುರುತು ಚೀಟಿ ಇರಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಈ ವರದಿ ನೀಡುವ ಮುನ್ನ ರಾಜಕೀಯ ಪಕ್ಷಗಳು ಹಾಗೂ ಹಲವಾರು ಸಂಸ್ಥೆಗಳಿಂದ ಅಭಿಪ್ರಾಯ ವನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಬಹುಸಂಖ್ಯಾತರ ಅಭಿಪ್ರಾಯ ‘ಒಂದೇ ದೇಶ ಒಂದೇ ಚುನಾವಣೆ’ ಪರವಾಗಿ ಇದೆ ಎಂದು ಸಮಿತಿ ಹೇಳಿದೆ. ಇದರರ್ಥ ಇದೊಂದು ಎಲ್ಲಾ ರಾಜಕೀಯ ಪಕ್ಷಗಳ ಸಾರ್ವಜನಿಕರ ಒಮ್ಮತದಿಂದ ರೂಪುಗೊಂಡ ವರದಿಯಲ್ಲ. ಬಹುಸಂಖ್ಯಾತರ ಅಭಿಪ್ರಾಯದಂತೆ ರೂಪುಗೊಂಡ ವರದಿ ಎಂಬುದು ಖಚಿತವಾಗುತ್ತದೆ.
ಸ್ವಾತಂತ್ರ್ಯಾನಂತರದ ಏಳು ದಶಕಗಳ ಕಾಲಾವಧಿಯಲ್ಲಿ ಅಸ್ತಿತ್ವದಲ್ಲಿರುವ ಚುನಾವಣಾ ವ್ಯವಸ್ಥೆಯನ್ನು ಕೈ ಬಿಟ್ಟು ಏಕಕಾಲದಲ್ಲಿ ಚುನಾವಣೆ ನಡೆಸುವ ಪದ್ಧತಿಯನ್ನು ಯಾಕೆ ಜಾರಿ ಮಾಡಬೇಕೆಂಬ ಬಗ್ಗೆ ಕೋವಿಂದ್ ಸಮಿತಿಯು ಕೊಟ್ಟ ಕಾರಣ ಸಮರ್ಥನೀಯವಾಗಿಲ್ಲ. ಈಗ ಅಸ್ತಿತ್ವದಲ್ಲಿರುವ ಚುನಾವಣಾ ವ್ಯವಸ್ಥೆಯಿಂದ ಸಂಪನ್ಮೂಲ ವ್ಯರ್ಥವಾಗಿ ಹರಿದು ಹೋಗುತ್ತದೆ, ಆಡಳಿತ ವ್ಯವಸ್ಥೆ ನಿಷ್ಕ್ರಿಯಗೊಳ್ಳುತ್ತದೆ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಭಾರೀ ಹೊರೆಯಾಗುತ್ತದೆ, ಮತದಾರರು ದಣಿಯುತ್ತಾರೆ ಎಂಬ ಸಮಿತಿಯ ಶಿಫಾರಸಿನಲ್ಲಿ ಅರ್ಥವಿಲ್ಲ.
ಸ್ವಾತಂತ್ರ್ಯಾನಂತರ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿತ್ತು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿರುವವರೆಗೆ ಇದು ನಡೆದುಕೊಂಡು ಬಂತು. ಆದರೆ 1967ರಲ್ಲಿ ಮೊದಲ ಬಾರಿ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸೇತರ ಪಕ್ಷಗಳ ಸಂಯುಕ್ತ ರಂಗ ಸರಕಾರಗಳು ಅಧಿಕಾರಕ್ಕೆ ಬಂದ ನಂತರ ಕ್ರಮೇಣ ಎಲ್ಲ ಬದಲಾಗತೊಡಗಿತು. ಪಕ್ಷಾಂತರದ ಹಾವಳಿ ಆರಂಭವಾಗಿ ಅವಧಿಗೆ ಮುನ್ನವೇ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸುವುದು ಅನಿವಾರ್ಯವಾಯಿತು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದು ಸಹಜ. ಇದರಲ್ಲಿ ಹಣಕಾಸಿನ ಲೆಕ್ಕಾಚಾರದ ನೆಪ ಮುಂದೆ ಮಾಡುವುದು ಸರಿಯಲ್ಲ.
ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ವರದಿ ನೀಡುವ ಮುನ್ನ ಈ ಬಗ್ಗೆ ಇತರರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನಕ್ಕೆ ತೆಗೆದುಕೊಂಡು, ಇದರ ಪರಿಣಾಮಗಳ ಬಗ್ಗೆ ಗಂಭೀರ ಅಧ್ಯಯನ ಮಾಡಿದಂತೆ ಕಾಣುವುದಿಲ್ಲ.
ಭಾರತವು ಯಾವುದೇ ಒಂದು ಧರ್ಮ, ಜನಾಂಗ, ಭಾಷೆ, ಜಾತಿಗೆ ಸೇರಿದ ದೇಶವಲ್ಲ. ಇದು ಬಹುತ್ವದ ತಾಣ. ಇಲ್ಲಿ ಒಂದೇ ಧರ್ಮ, ಒಂದೇ ಭಾಷೆ, ಒಂದೇ ಚುನಾವಣೆ ಮಾಡಲು ಹೊರಟರೆ ಅದು ಕಾರ್ಯಗತವಾಗುವುದಿಲ್ಲ. ಬಹುತ್ವ ಭಾರತವನ್ನು ಅಖಂಡ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟ ಸಂಘಪರಿವಾರದ ಹಳೆಯ ಪ್ರಸ್ತಾವನೆಯನ್ನು ಮತ್ತೆ ಮುಂದಿಟ್ಟಿರುವ ಪ್ರಧಾನಿ ಮೋದಿಯವರು ಕೋವಿಂದ್ ಸಮಿತಿ ಮೂಲಕ ಶಿಫಾರಸು ತೆಗೆದುಕೊಂಡಿದ್ದಾರೆ. 2019ರಲ್ಲಿ ಒಮ್ಮೆ ಇಂಥ ಪ್ರಸ್ತಾವನೆಯನ್ನು ಮುಂದಿಟ್ಟು ಪ್ರತಿಪಕ್ಷಗಳನ್ನು ಒಲಿಸಿಕೊಳ್ಳಲು ಮೋದಿಯವರು ಯತ್ನಿಸಿದ್ದರು. ಆದರೆ ಅವರು ಕರೆದ ಸಭೆಯನ್ನು ಪ್ರತಿಪಕ್ಷಗಳು ಬಹಿಷ್ಕರಿಸಿದ್ದವು. ಈಗ ಮತ್ತೆ ಅದೇ ಪ್ರಸ್ತಾವನೆ ಕೋವಿಂದ್‌ವರದಿಯ ರೂಪದಲ್ಲಿ ಬಂದಿದೆ.
ಕೋವಿಂದ್ ಸಮಿತಿಯ ವರದಿಯನ್ನು ಜಾರಿಗೆ ತರಲು ಹೊರಟರೆ ಸಂವಿಧಾನಕ್ಕೆ ಐದು ತಿದ್ದುಪಡಿಗಳನ್ನು ತರಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಇವಿಎಂ ಯಂತ್ರಗಳನ್ನು ತಯಾರಿಸ ಬೇಕಾಗುತ್ತದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸಬೇಕಾಗುತ್ತದೆ. ಇಷ್ಟೆಲ್ಲಾ ಮಾಡಿದ ನಂತರವೂ ಅಸ್ತಿತ್ವಕ್ಕೆ ಬರುವ ವಿಧಾನಸಭೆ ಐದು ವರ್ಷಗಳ ಕಾಲ ಅಸ್ತಿತ್ವದಲ್ಲಿ ಇರುತ್ತದೆಂಬುದು ಗ್ಯಾರಂಟಿ ಇಲ್ಲ. ಪಕ್ಷಾಂತರಗಳು ನಡೆದು ಚುನಾಯಿತ ಸರಕಾರಗಳು ಪತನಗೊಂಡು ವಿಧಾನಸಭೆಯನ್ನು ವಿಸರ್ಜಿಸಬೇಕಾದ ಸಂದರ್ಭ ಬರಬಹುದು. ಆಗ ಉಳಿದ ಅವಧಿಗೆ ರಾಷ್ಟ್ರಪತಿ ಆಡಳಿತ ಹೇರಲು ಆಗುತ್ತದೆಯೇ? ಇದು ಸಂವಿಧಾನಕ್ಕೆ ವಿರುದ್ಧವಾದ ಕ್ರಮವಾಗುವುದಿಲ್ಲವೇ?
ಒಂದು ದೇಶ, ಒಂದು ಚುನಾವಣೆ ಪ್ರಸ್ತಾವ ಹಿಂದೆ ಬಂದಾಗಲೇ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು. ಇದರ ಬಗ್ಗೆ ಟೀಕೆ, ವಿಮರ್ಶೆಗಳು ಬಂದಿದ್ದವು. ಇವುಗಳ ಬಗ್ಗೆ ಕೋವಿಂದ್ ಸಮಿತಿಯ ಬಳಿ ಉತ್ತರವಿಲ್ಲ. ವಾಸ್ತವವಾಗಿ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಭಿನ್ನ ವಿಷಯಗಳು, ಆದ್ಯತೆಗಳ ಆಧಾರದ ಮೇಲೆ ನಡೆಯುತ್ತವೆ. ಏಕಕಾಲದಲ್ಲಿ ಚುನಾವಣೆ ನಡೆಸಲು ಹೊರಟರೆ ಈ ವಿಭಿನ್ನ ವಿಷಯ ಮತ್ತು ಆದ್ಯತೆಗಳು ಕಡೆಗಣಿಸಲ್ಪಡುತ್ತವೆ.ಬಲವಂತವಾಗಿ ಇದನ್ನು ಹೇರಲು ಹೊರಟರೆ ಭಾರತದ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ ಎಂಬುದನ್ನು ಅಧಿಕಾರದಲ್ಲಿ ಇರುವವರು ಮರೆಯಬಾರದು.
ಅಧ್ಯಕ್ಷೀಯ ಮಾದರಿಯ ವ್ಯವಸ್ಥೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಗಳಿಗೆ ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಬಹುದು. ಆದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೆ ನಿಗದಿ ಪಡಿಸಲು ಬರುವುದಿಲ್ಲ. ಚುನಾಯಿತ ಸರಕಾರವೊಂದು ಬಹುಮತವನ್ನು ಕಳೆದುಕೊಂಡರೆ ವಿಧಾನಸಭೆ ವಿಸರ್ಜನೆ ಅನಿವಾರ್ಯವಾಗುತ್ತದೆ. ಇದಾವುದನ್ನು ಗಮನಿಸದೆ ಅಧಿಕಾರದಲ್ಲಿರುವವರ ಮರ್ಜಿಯಂತೆ ರೂಪುಗೊಂಡ ಕೋವಿಂದ್ ಸಮಿತಿಯ ಶಿಫಾರಸು ನ್ಯಾಯ ಸಮ್ಮತವಲ್ಲ.