ಮುಗಿದ ಸಮಸ್ಯೆ ಕೆದಕುವುದು ವಿವೇಕದ ನಡೆಯಲ್ಲ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಲೋಕಸಭಾ ಚುನಾವಣೆಯ ಪ್ರಚಾರ ಕಾವೇರುತ್ತಿರುವ ಈ ದಿನಗಳಲ್ಲಿ ಜನತೆಗೆ ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸುವಲ್ಲಿ ವಿಫಲಗೊಂಡ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಎಂದೋ ಮುಗಿದು ಹೋದ ವಿಚಾರಗಳನ್ನು ಮತ್ತೆ ಕೆದಕಿ ರಾಜಕಾರಣದ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವುದು ಕೀಳು ಮಟ್ಟದ ರಾಜಕೀಯವಲ್ಲದೆ ಬೇರೇನೂ ಅಲ್ಲ.
ಉದಾಹರಣೆಗೆ ಶ್ರೀಲಂಕಾ ಜೊತೆಗಿನ ಬಾಂಧವ್ಯ ಹಾಳಾಗುವಂತಹ ಮಾತನ್ನು ಮೋದಿಯವರು ಆಡಿದ್ದಾರೆ. ಕಚ್ಚತೀವು ದ್ವೀಪವನ್ನು ಭಾರತವು ಶ್ರೀಲಂಕಾಗೆ ಕೊಟ್ಟಿರುವುದು ಸರಿಯಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮೋದಿಯವರ ನೇರ ಗುರಿ ಅರವತ್ತು ವರ್ಷಗಳ ಹಿಂದೆ ನಮ್ಮನ್ನಗಲಿದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ನಂತರ ಪ್ರಧಾನಿಯಾದ ಇಂದಿರಾಗಾಂಧಿ ಆಗಿದ್ದಾರೆ. ‘‘ನೆಹರೂ ಮತ್ತು ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಕಚ್ಚತೀವು ದ್ವೀಪವನ್ನು ಕೊಟ್ಟಿರುವುದು ಸರಿಯಲ್ಲ. ರಾಷ್ಟ್ರೀಯ ಭದ್ರತೆ ಪ್ರಶ್ನೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ’’ ಎಂದು ಮೋದಿಯವರು ಈಗ ಆರೋಪಿಸಿದ್ದಾರೆ. ಕಚ್ಚತೀವು ಪ್ರದೇಶವನ್ನು ಶ್ರೀಲಂಕಾಗೆ ನೀಡಲು ಆಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಡಿಎಂಕೆಯ ಕರುಣಾನಿಧಿ ಅವರು ಒಪ್ಪಿಗೆ ಸೂಚಿಸಿದ್ದರೆಂದು ಮೋದಿ ಹೇಳಿದ್ದಾರೆ.
ಇಷ್ಟು ದಿನ ಬಾಯಿ ಮುಚ್ಚಿಕೊಂಡಿದ್ದ ಮೋದಿಯವರಿಗೆ ಈಗ ಕಚ್ಚತೀವು ನೆನಪಾಗಿದೆ. ಜನರ ಬಳಿ ಹೇಳಲು ಯಾವ ವಿಷಯವೂ ಇಲ್ಲದಾಗ ಹಳೆಯದನ್ನು ಕೆದಕಿದ್ದಾರೆ. ಈಗ ಅದರ ಪ್ರಸ್ತಾಪ ಅಗತ್ಯವಿರಲಿಲ್ಲ. ಮೋದಿಯವರ ಪಕ್ಷದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಕಚ್ಚತೀವು ದ್ವೀಪಕ್ಕೆ ಸಂಬಂಧಿಸಿದಂತೆ ಹಿಂದಿನ ಸರಕಾರಗಳು ಕೈಗೊಂಡ ಯಾವುದೇ ತೀರ್ಮಾನವನ್ನು ಕೆದಕಲು ಹೋಗಿರಲಿಲ್ಲ. ಈ ದ್ವೀಪದ ಮೇಲೆ ಭಾರತಕ್ಕೆ ಐತಿಹಾಸಿಕವಾದ ಯಾವುದೇ ಹಕ್ಕು ಇಲ್ಲ. ಕಾರಣ ಸದರಿ ದ್ವೀಪವನ್ನು ಶ್ರೀಲಂಕಾಗೆ ಹಸ್ತಾಂತರ ಮಾಡಲಾಯಿತು ಎಂದು 2013ರಲ್ಲಿ ಭಾರತ ಸರಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟವಾಗಿ ತಿಳಿಸಿತ್ತು. ಈಗಿನ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರಕಾರ ಕೂಡ ಭಾರತ-ಶ್ರೀಲಂಕಾ ಅಂತರ್‌ರಾಷ್ಟ್ರೀಯ ಜಲಗಡಿಯ ಶ್ರೀಲಂಕಾ ಭಾಗದಲ್ಲಿ ಕಚ್ಚತೀವು ದ್ವೀಪ ಇದೆ ಎಂದು ರಾಜ್ಯಸಭೆಗೆ 2022ರಲ್ಲಿ ಹೇಳಿತ್ತು.
ಇದಲ್ಲದೆ 1974 ಮತ್ತು 1976ರಲ್ಲಿ ಶ್ರೀಲಂಕಾ ಜೊತೆಗೆ ಮಾಡಿಕೊಂಡ ಒಪ್ಪಂದಗಳ ಅಂಶವನ್ನು ವಿದೇಶಾಂಗ ಸಚಿವಾಲಯವು ಮದ್ರಾಸ್ ಹೈಕೋರ್ಟ್ ಗೆ 2014ರ ಜುಲೈನಲ್ಲಿ ವಿವರಿಸಿ ‘‘ಇದು ಮುಗಿದ ವಿಚಾರ’’ ಎಂದು ಸ್ಪಷ್ಟೀಕರಣ ನೀಡಿತ್ತು.
ವಾಸ್ತವವಾಗಿ ಕಚ್ಚತೀವು ದ್ವೀಪವನ್ನು ಸ್ವಾಧೀನ ಪಡಿಸಿಕೊಂಡೂ ಇಲ್ಲ, ಹಸ್ತಾಂತರ ಮಾಡಿಯೂ ಇಲ್ಲ ಎಂದೂ, ಈ ದ್ವೀಪವು ಅಂತರ್‌ರಾಷ್ಟ್ರೀಯ ಜಲ ಗಡಿಯ ಶ್ರೀಲಂಕಾ ಭಾಗದಲ್ಲಿ ಇದೆ ಎಂದೂ ವಿದೇಶಾಂಗ ಸಚಿವಾಲಯವು 2015ರಲ್ಲಿ ಮಾಹಿತಿ ಹಕ್ಕು ಅಡಿಯಲ್ಲಿ ನೀಡಿರುವ ಮಾಹಿತಿಯಲ್ಲಿ ತಿಳಿಸಿತ್ತು. ಐತಿಹಾಸಿಕ ದಾಖಲೆಗಳು ಕೂಡ ಇದಕ್ಕೆ ಪೂರಕವಾಗಿವೆ. ವಾಸ್ತವಾಂಶ ಹೀಗಿರುವಾಗ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಒಮ್ಮಿಂದೊಮ್ಮೆಲೆ ಯಾಕೆ ಕಚ್ಚತೀವು ನೆನಪಾಯಿತು ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.
ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳನ್ನು ಗೆಲ್ಲುವುದು ಸಂಘಪರಿವಾರದ ಬಹುದಿನಗಳ ಕನಸಾಗಿದೆ. ಮುಖ್ಯವಾಗಿ ತಮಿಳುನಾಡಿನ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಆದರೆ ಅಲ್ಲಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ವಿಚಾರವಾದಿ ಆಂದೋಲನದ ಪ್ರಭಾವ ವ್ಯಾಪಕವಾಗಿದೆ. ಹೀಗಾಗಿ ಕೋಮುವಾದಿ ಶಕ್ತಿಗಳ ಲೆಕ್ಕಾಚಾರ ವಿಫಲವಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಕೆಲವು ಸ್ಥಾನಗಳನ್ನಾದರೂ ಗೆಲ್ಲಲು ಪ್ರಧಾನಿ ಮೋದಿಯವರು ಎಂದೋ ಮುಗಿದ ಕಚ್ಚತೀವು ವಿಚಾರವನ್ನು ಕೆದಕಿದ್ದಾರೆ.
ಕೇಂದ್ರದಲ್ಲಿ ವಿಭಿನ್ನ ಪಕ್ಷಗಳ ಸರಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಸರಕಾರ ಎಂಬುದು ಯಾವುದೇ ಪಕ್ಷದ ಸೊತ್ತಲ್ಲ. ರಾಜಕೀಯ ಲಾಭಕ್ಕಾಗಿ ಒಂದು ಪಕ್ಷದ ಸರಕಾರ ಕೈಗೊಂಡ ತೀರ್ಮಾನವನ್ನು ಕೆದಕುವುದು ರಾಜಕೀಯ ಸಭ್ಯತೆ ಎನಿಸುವುದಿಲ್ಲ. ಇದು ವಿವೇಕದ ನಡೆಯೂ ಅಲ್ಲ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಆರೋಪ, ಪ್ರತ್ಯಾರೋಪ ಮಾಡುವುದು ಸಹಜ. ಆದರೆ ಪ್ರಧಾನ ಮಂತ್ರಿ ಸ್ಥಾನದಲ್ಲಿ ಇರುವ ವ್ಯಕ್ತಿ ನೆರೆರಾಷ್ಟ್ರದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರುವ ವಿಚಾರವನ್ನು ಕೆದಕುವುದು ಜವಾಬ್ದಾರಿಯುತ ನಡೆಯಲ್ಲ.
ತಮಿಳುನಾಡಿನಲ್ಲಿ ಹಿಂದುತ್ವದ ಆಟ ನಡೆಯುವುದಿಲ್ಲ ಎಂದು ಗೊತ್ತಾದಾಗ ಅಲ್ಲಿನ ಪ್ರಾದೇಶಿಕ ಭಾವನೆಯನ್ನು ಕೆರಳಿಸಲು ಇಂತಹ ಹೇಳಿಕೆ ನೀಡುವುದು ಸರಿಯೇ?. ಇದರಿಂದಾಗಿ ಶ್ರೀಲಂಕಾ ಜೊತೆಗಿನ ಭಾರತದ ದ್ವಿಪಕ್ಷೀಯ ಸಂಬಂಧ ಕೆಡಬಹುದು. ತಮಿಳುನಾಡಿನಲ್ಲಿ ರಾಜಕೀಯವಾಗಿ ತಳವೂರಲು ಬಿಜೆಪಿ ಈ ಹತಾಶ ಯತ್ನವನ್ನು ನಡೆಸಿದೆ.
ರಾಷ್ಟ್ರೀಯ ಭದ್ರತೆ ಹಾಗೂ ನೆರೆಯ ರಾಷ್ಟ್ರದ ಜೊತೆಗಿನ ಉತ್ತಮ ಸಂಬಂಧ ವನ್ನು ಕಡೆಗಣಿಸಿ ಕೇವಲ ಚುನಾವಣಾ ಲಾಭಕ್ಕಾಗಿ ಇಂತಹ ಮಾತು ಪ್ರಧಾನಿ ಬಾಯಿಯಿಂದ ಬರಬಾರದಾಗಿತ್ತು.
ಈ ಸೂಕ್ಷ್ಮ ಪ್ರಶ್ನೆಯಲ್ಲಿ ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿ ಅವರು ತೋರಿಸಿದ ಮುತ್ಸದ್ದಿತನ ಅನುಕರಣೀಯವಾಗಿದೆ. 1974ರಲ್ಲಿ ಮಾಡಿಕೊಂಡಿದ್ದ ಒಪ್ಪಂದದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕೂಡಾ ಮರುಪರಿಶೀಲನೆ ಮಾಡುವ ಗೋಜಿಗೆ ಹೋಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಇನ್ನು ಮುಂದಾದರೂ ಚುನಾವಣಾ ರಾಜಕೀಯ ಲಾಭಕ್ಕಾಗಿ ಮುಗಿದ ವಿಚಾರಗಳನ್ನು ಕೆದಕುವುದನ್ನು ನಿಲ್ಲಿಸಲಿ.