ಮೌಢ್ಯದ ಮೋಡ ಕರಗಲಿ, ಸುಜ್ಞಾನದ ಮಳೆ ಸುರಿಯಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಳೆ ಬರದೇ ಇದ್ದಾಗ ಕೃತಕ ಮೋಡಗಳ ಬಿತ್ತನೆ ನಡೆಸಿ ಧಾರಾಕಾರ ಮಳೆ ಸುರಿಯುವಂತೆ ಮಾಡಿರುವ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಹೀಗೆ ಕೃತಕವಾಗಿ ಮಳೆಯನ್ನು ಸುರಿಯುವಂತೆ ಪ್ರಕೃತಿಯ ಮೇಲೆ ಒತ್ತಡ ಹೇರುವುದು ಎಷ್ಟು ಸರಿ? ಎನ್ನುವ ಚರ್ಚೆ ಆಗಾಗ ನಡೆಯುತ್ತಿರುತ್ತವೆ. ಇದು ಪ್ರಕೃತಿಯ ಮೇಲೆ ಮನುಷ್ಯ ನಡೆಸುವ ಹಸ್ತಕ್ಷೇಪ, ಪ್ರಕೃತಿಯ ಲಯವನ್ನು ಇದು ಅಸ್ತವ್ಯಸ್ತಗೊಳಿಸುತ್ತದೆ ಎನ್ನುವ ವಾದವನ್ನು ಹಲವರು ಮಂಡಿಸುತ್ತಾ ಬಂದಿದ್ದಾರೆ. ವೈಜ್ಞಾನಿಕ ಪ್ರಕ್ರಿಯೆ ಇದಾಗಿದ್ದರೂ, ವಿಜ್ಞಾನದ ಮೂಲಕ ಪ್ರಕೃತಿಯ ಮೇಲೆ ನಡೆಯುವ ಈ ಮನುಷ್ಯನ ಹಸ್ತಕ್ಷೇಪವೂ ಕೆಲವೊಮ್ಮೆ ಅತಿವೃಷ್ಟಿ, ಅನಾವೃಷ್ಟಿ ಎರಡಕ್ಕೂ ಕಾರಣವಾಗುವ ಅಪಾಯವಿದೆ ಎನ್ನುವ ಅಭಿಪ್ರಾಯ ಪರಿಸರ ತಜ್ಞರದ್ದು. ಇತ್ತೀಚೆಗೆ ದುಬೈಯಲ್ಲಿ ಭಾರೀ ಮಳೆ ಸುರಿದು ಅನಾಹುತ ನಡೆಯಲು ಮೋಡ ಬಿತ್ತನೆಯೇ ಕಾರಣ ಎನ್ನುವ ವದಂತಿ ಹರಡಿತ್ತು. ಇದು ವೈಜ್ಞಾನಿಕ ಮೋಡ ಬಿತ್ತನೆಯ ಕತೆಯಾಯಿತು. ಭಾರತದಲ್ಲಿ ಮಳೆ ಸುರಿಯುವಂತೆ ಮಾಡಲು ಪುರಾತನ ಕಾಲದಿಂದಲೇ ಬೇರೆ ಬೇರೆ 'ಸ್ವದೇಶಿ ತಂತ್ರ'ವನ್ನು ಅನುಸರಿಸುತ್ತಾ ಬರಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಕಪ್ಪೆಗಳಿಗೆ ಮದುವೆ ಮಾಡುವುದು, ಕತ್ತೆಗಳಿಗೆ ಮದುವೆ ಮಾಡುವುದು ಒಂದು ಬಗೆಯಾದರೆ, ದೇವರಿಗೆ ಬೇರೆ ಬೇರೆ ಹರಕೆ ಹೊತ್ತು ಮಳೆಯನ್ನು ಆಹ್ವಾನಿಸುವುದು ಸಂಪ್ರದಾಯಿಕ ಆಚರಣೆಗಳಾಗಿವೆ. ಆದರೆ ಇತ್ತೀಚೆಗೆ ಮಳೆಯ ಹೆಸರಿನಲ್ಲಿ ಚಿಕ್ಕಮಗಳೂರಿನಲ್ಲಿ ನಡೆದಿರುವ ಕೃತ್ಯವೊಂದು, ಗ್ರಾಮೀಣ ಪ್ರದೇಶಗಳು ಹೇಗೆ ಇನ್ನೂ ಮೌಡ್ಯಗಳ ಮೋಡಗಳ ಮರೆಯಲ್ಲಿ ಹುದುಗಿ ಕೂತಿವೆ ಎನ್ನುವುದನ್ನು ಬೆಳಕಿಗೆ ತಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಬಯಲು ಭಾಗ ಇನ್ನೂ ಮಳೆಗಾಗಿ ಹಾಹಾಕಾರ ಮಾಡುತ್ತಿದೆ. ಅಡಿಕೆ ಕೃಷಿಕರು ಟ್ಯಾಂಕರ್‌ನಿಂದ ನೀರು ತಂದು ತೋಟಕ್ಕೆ ಹರಿಸುವ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗೂ ಈ ಭಾಗದಲ್ಲಿ ತತ್ವಾರ ಉಂಟಾಗಿದೆ. ಮುಖ್ಯವಾಗಿ ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಶಿವನಿ, ಜಲದಿಹಳ್ಳಿ, ಚಿಕ್ಕಾನವಂಗಲ, ತಿಮ್ಮಾಪುರ, ದಂದೂರು, ಕಲ್ಲೇನ ಹಳ್ಳಿ ಮೊದಲಾದ ಗ್ರಾಮಗಳಲ್ಲಿ ನೀರಿನ ಹಾಹಾಕಾರ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಬೇರೆ ಬೇರೆ ಸ್ವದೇಶಿ ತಂತ್ರಗಳ ಪ್ರಯೋಗ ಈ ಭಾಗದಲ್ಲಿ ನಡೆಯುತ್ತಿದೆ. ವಿಜ್ಞಾನಿಗಳ ಜಾಗದಲ್ಲಿ ಮಂತ್ರವಾದಿಗಳು ಕೂತಿದ್ದಾರೆ. ಶಿವನಿ ಹೋಬಳಿ ಸಮೀಪ ಮಳೆಗಾಗಿ ಮೊರೆ ಹೋದ ಗ್ರಾಮಸ್ಥರು 'ಇದಕ್ಕೆ ಕಾರಣವೇನು?' ಎಂದು ಸ್ಥಳೀಯ ಅರ್ಚಕರ ಬಳಿ ನಿಮಿತ್ತ ಕೇಳಿದ್ದರು. ತೊನ್ನು ಹತ್ತಿದ ಮಹಿಳೆಯ ಮೃತದೇಹವನ್ನು ಸುಡದೇ ಹೂಳಲಾಗಿದೆ. ಅದನ್ನು ಹೊರತೆಗೆದು ಸುಡಬೇಕು ಎಂದು ಅರ್ಚಕರು ಪರಿಹಾರ ನೀಡಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಮಾತುಕತೆ ನಡೆಸಿ ಶಿವನಿ ಗ್ರಾಮದಲ್ಲಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದ ಮಹಿಳೆಯೊಬ್ಬರ ಮೃತದೇಹವನ್ನು ಏಳು ಹಳ್ಳಿಯ ಸಾವಿರಾರು ಜನರು ಗುರುವಾರ ಹೊರತೆಗೆದು ಸುಟ್ಟು ಹಾಕಿದ್ದಾರೆ. ಕಾಕತಾಳೀಯವೆಂಬಂತೆ, ಅಂದು ಈ ಭಾಗದಲ್ಲಿ ಒಂದೆರಡು ಹನಿ ಮಳೆ ಸುರಿದಿರುವುದರಿಂದ, ಗ್ರಾಮದಲ್ಲಿ ತೊನ್ನು ರೋಗದಿಂದ ಮೃತಪಟ್ಟಿದ್ದಾರೆ ಎನ್ನಲಾಗಿರುವ ವ್ಯಕ್ತಿಗಳ ಮೃತದೇಹಗಳ ಹುಡುಕಾಟ ತೀವ್ರವಾಗಿದೆ. ಈ ಘಟನೆಗೆ ಸಂಬಂಧಿಸಿ ಮೃತರ ಸಂಬಂಧಿಯೊಬ್ಬರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಸಾಧಾರಣವಾಗಿ ಮಳೆ ಸುರಿಯದೇ ಇದ್ದಾಗ ಜನರು ಮೊರೆ ಹೋಗುವುದು ದೇವರ ಬಳಿ, ಮಸೀದಿ, ಚರ್ಚ್, ಮಂದಿರಗಳಲ್ಲಿ ಪೂಜೆ, ಪ್ರಾರ್ಥನೆಗಳು ಈ ಸಂದರ್ಭದಲ್ಲಿ ನಡೆಯುವುದು ಸಹಜ ಕ್ರಮವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನಿತರ ಹರಕೆಗಳನ್ನು ಕೂಡ ಹೊತ್ತು ಕೊಳ್ಳುತ್ತಾರೆ. ದೇವರ ಮೂರ್ತಿಗೆ ಮೆಣಸು ಅರೆದು ಸವರಿ ಬಿಸಿಲಲ್ಲಿ ನಿಲ್ಲಿಸುವ ಪದ್ದತಿಯೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿದೆ. ಇವೆಲ್ಲ ವೈಯಕ್ತಿಕ ನಂಬಿಕೆಗಳು. ಇಂತಹ ಆಚರಣೆಗಳಿಂದ ಸಮಾಜಕ್ಕಾಗಲಿ, ಜನರಿಗಾಗಲಿ ಯಾವುದೇ ತೊಂದರೆಗಳಿಲ್ಲ. ಹತಾಶೆಗೊಂಡ ಜನರನ್ನು ಅಂತಿಮವಾಗಿ ಕೈ ಹಿಡಿದು ಮುನ್ನಡೆಸುವುದು ನಂಬಿಕೆಗಳು. ಕೆಲವೊಮ್ಮೆ ಕಪ್ಪೆಗಳಿಗೆ ಮದುವೆ, ಕತ್ತೆಗಳಿಗೆ ಮದುವೆಯಂತಹ ತಲೆಬುಡವಿಲ್ಲದ ಆಚರಣೆಗಳೂ ನಡೆಯುತ್ತವೆಯಾದರೂ ಇವು ಧಾರ್ಮಿಕ ನಂಬಿಕೆಗಳಲ್ಲ. ಬದಲಿಗೆ ಜನಪದೀಯ ನಂಬಿಕೆಗಳು. ಆದರೆ ಕಾಯಿಲೆಗಳನ್ನು ಬರಗಾಲಕ್ಕೆ ಹೊಣೆ ಮಾಡುವುದು ಮಾತ್ರ ಅಪಾಯಕಾರಿ. ಅದು ಸಾಮಾಜಿಕವಾಗಿ ಹಲವು ದುರಂತಗಳಿಗೆ ಕಾರಣವಾಗುತ್ತದೆ. ಚಿಕ್ಕಮಗಳೂರಿನಲ್ಲಿ ತೊನ್ನು ರೋಗಿಯ ಮೃತದೇಹವನ್ನು ತೆಗೆದು ಅದನ್ನು ಸುಡುವ ಮೂಲಕ ಮೃತರ ಘನತೆಗೆ ಧಕ್ಕೆ ತರಲಾಗಿದೆ ಮಾತ್ರವಲ್ಲ, ಸಾಮಾಜಿಕವಾಗಿ ಕ್ಷುದ್ರ ನಂಬಿಕೆಯೊಂದನ್ನು ಈ ಮೂಲಕ ಎತ್ತಿ ಹಿಡಿಯಲಾಗಿದೆ. ಇಂತಹ ಆಚರಣೆಗಳಿಂದ ಮಳೆ ಬರುವುದು ಸಾಧ್ಯವೇ ಇಲ್ಲ ಎನ್ನುವ ಬಗ್ಗೆ ನಾಸ್ತಿಕರು-ಆಸ್ತಿಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮಳೆಯ ಹೆಸರಿನಲ್ಲಿ ಈ ಮೌಢ್ಯವನ್ನು ಯಾರೇ ಪೋಷಿಸಲಿ ಇದು ಮಹಾದಾಪರಾಧವಾಗಿದೆ.
ಇಂತಹ ಕೃತ್ಯಗಳ ಮೂಲಕ ತೊನ್ನು ರೋಗದ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡಲಾಗಿದೆ. ತೊನ್ನು ರೋಗದ ಕುರಿತಂತೆ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಹಲವು ತಪ್ಪು ಕಲ್ಪನೆಗಳು ಅಸ್ತಿತ್ವದಲ್ಲಿವೆ. ತೊನ್ನು ರೋಗ ಪೀಡಿತರನ್ನು ಅಸ್ಪೃಶ್ಯರಂತೆ ನೋಡುವ ಜನರು ಈಗಲೂ ಈ ಭಾಗದಲ್ಲಿದ್ದಾರೆ. ತೊನ್ನು ರೋಗ ಗುಣ ಪಡಿಸಲು ಸಾಧ್ಯವಾಗುತ್ತದೆ ಎಂದು ವೈದ್ಯರೇ ಹೇಳುತ್ತಾರೆ. ತೊನ್ನು ರೋಗವನ್ನು ಒಪ್ಪಿಕೊಂಡು ಅದರ ಜೊತೆ ಜೊತೆಗೇ ಸಹಜ ಜೀವನ ಮಾಡುವ ನೂರಾರು ಜನರು ನಮ್ಮ ನಡುವೆ ಇದ್ದಾರೆ. ಇವರನ್ನೆಲ್ಲ ಕೀಳರಿಮೆಯಿಂದ ನರಳುವಂತೆ ಮಾಡಿದೆ ಚಿಕ್ಕಮಗಳೂರಿನಲ್ಲಿ ನಡೆದಿರುವ ಕೃತ್ಯ. ಅಷ್ಟೇ ಅಲ್ಲ, ಬರಗಾಲಕ್ಕೂ ಈ ತೊನ್ನು ರೋಗ ಪೀಡಿತರಿಗೂ ಅನಗತ್ಯ ಸಂಬಂಧವನ್ನು ಕಲ್ಪಿಸಿದಂತೆ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ದಫನ ಮಾಡಿದ ಮೃತದೇಹವನ್ನು ಕುಟುಂಬಿಕರ ಅನುಮತಿಯಿಲ್ಲದೆ ಅಗೆದು ತೆಗೆಯುವುದು ಅಪರಾಧವಾಗಿದೆ. ಇದು ಹೀಗೇ ಮುಂದುವರಿದರೆ ಇನ್ನಿತರ ಅಪರಾಧಗಳಿಗೆ ದಾರಿ ತೆರೆದುಕೊಡುತ್ತದೆ. ಆದುದರಿಂದ, ಮಳೆಗಾಗಿ ಹೂತಿಟ್ಟ ಶವಗಳನ್ನು ಹೊರತೆಗೆದವರನ್ನು ಗುರುತಿಸಿ ಅವರ ಮೇಲೆ ತಕ್ಷಣ ಪ್ರಕರಣ ದಾಖಲಿಸಬೇಕು. ಈ ಮೂಲಕ, ಇಂತಹ ಕೃತ್ಯಗಳು ಮತ್ತೊಮ್ಮೆ ಜರುಗದಂತೆ ನೋಡಿಕೊಳ್ಳಬೇಕಾಗಿದೆ. ತೊನ್ನು, ಕುಷ್ಠ ರೋಗದಂತಹ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯ ಇನ್ನೂ ಇದೆ ಎನ್ನುವುದನ್ನು ಈ ಘಟನೆ ಹೇಳುತ್ತಿದೆ.
ಇದೇ ಸಂದರ್ಭದಲ್ಲಿ ಮಳೆ ಯಾಕೆ ಸಮಯಕ್ಕೆ ಸರಿಯಾಗಿ ಸುರಿಯುತ್ತಿಲ್ಲ ಎನ್ನುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮನುಷ್ಯ ತನ್ನ ಕರ್ತವ್ಯವನ್ನು, ಹೊಣೆಗಾರಿಕೆಯನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಲು ಹಿಂದೇಟು ಹಾಕುತ್ತಿದ್ದಾನೆ. ಆದರೆ, ಪ್ರಕೃತಿ ಮಾತ್ರ ತನ್ನ ಕರ್ತವ್ಯವನ್ನು, ಹೊಣೆಗಾರಿಕೆಯನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಬೇಕು ಎಂದು ಬಯಸುತ್ತಾನೆ. ಕಾಡುಗಳನ್ನು ಕಡಿಯುತ್ತಾ, ಏಸಿ, ರೆಫ್ರಿಜರೇಟರ್ ಎಂದು ನಮ್ಮ ಪರಿಸರವನ್ನು ನಾವೇ ಬಿಸಿಯಾಗಿಸುತ್ತಾ ಪರಿಸರವನ್ನು ಅಸ್ತವ್ಯಸ್ತಗೊಳಿಸುತ್ತಿದ್ದೇವೆ. ಪರಿಸರ ಮಾಲಿನ್ಯ ಅತಿರೇಕ ತಲುಪಿದೆ. ನಮ್ಮ ಕ್ರಿಯೆಗೆ ತಕ್ಕಂತೆಯೇ ಪ್ರಕೃತಿ ಪ್ರತಿಕ್ರಿಯಿಸುತ್ತಿದೆ. ಪರಿಸರದ ಕುರಿತಂತೆ ಜಾಗೃತಿಯನ್ನು ಮೂಡಿಸುವುದೇ ಮಳೆ ಕಾಲ ಕಾಲಕ್ಕೆ ಸರಿಯಾಗಿ ಸುರಿಯುವಂತೆ ನೋಡಿಕೊಳ್ಳುವುದಕ್ಕಿರುವ ಅತ್ಯುತ್ತಮ ದಾರಿಯಾಗಿದೆ.
ಹೆಚ್ಚುತ್ತಿರುವ ತಾಪಮಾನದ ಕುರಿತಂತೆ ಚರ್ಚೆಗಳು ಬರೇ ನಗರ ಪ್ರದೇಶಗಳಿಗೆ ಸೀಮಿತವಾಗಬಾರದು. ಗ್ರಾಮೀಣ ಜನರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು. ಹಾಗೆಯೇ ಮಳೆ, ಬೆಳೆ, ಬರ, ನೆರೆ ಇತ್ಯಾದಿಗಳನ್ನು ನಾವು ವಿಜ್ಞಾನ ಮಾರ್ಗದಲ್ಲಿ ಎದುರಿಸಬೇಕೇ ಹೊರತು, ಅಜ್ಞಾನ ಮಾರ್ಗದಲ್ಲಿ ಅಲ್ಲ ಎನ್ನುವ ತಿಳಿವನ್ನು ನಾವು ಜನರಿಗೆ ತಲುಪಿಸಬೇಕು.