ಕಾನೂನು ಸುವ್ಯವಸ್ಥೆಗೆ ಬಿಜೆಪಿಯೇ ಸವಾಲಾದರೆ?

Update: 2024-05-24 07:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದ ದಿನದಿಂದ, ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಬಿಜೆಪಿ ನಾಯಕರಲ್ಲಿ ಭಾರೀ ಕಾಳಜಿ ವ್ಯಕ್ತವಾಗುತ್ತಿದೆ. ಪೊಲೀಸರ ನಿಷ್ಕ್ರಿಯತೆ, ಅಪರಾಧಗಳಲ್ಲಿ ಹೆಚ್ಚಳ, ಮಹಿಳೆಯರ ಮೇಲೆ ನಡೆಯುತ್ತಿರುವ ದಾಳಿ ಇವುಗಳನ್ನೆಲ್ಲ ಮುಂದಿಟ್ಟು ಬಿಜೆಪಿಯ ರಾಜ್ಯ ನಾಯಕರು ರಾಜ್ಯ ಸರಕಾರದ ಮೇಲೆ ಟೀಕೆಗಳ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ಕ್ರಿಮಿನಲ್‌ಗಳ ಮೇಲೆ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಂಡಾಗ ಈ ಬಿಜೆಪಿ ನಾಯಕರ ವರ್ತನೆ ಹೇಗಿರುತ್ತದೆ ಎನ್ನುವುದು ಬೆಳ್ತಂಗಡಿ ತಾಲೂಕಿನಲ್ಲಿ ಇನ್ನೊಮ್ಮೆ ಬಟಾ ಬಯಲಾಗಿದೆ. ಕರಾವಳಿಯಲ್ಲಿ ಮರಳು ಗಣಿಗಾರಿಕೆ ಮತ್ತು ಅಕ್ರಮ ಕಲ್ಲುಕೋರೆ ಗಣಿಗಾರಿಕೆ ಮಾಫಿಯಾ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಗೂಂಡಾ ಪಡೆಗಳು ಮತ್ತು ರಾಜಕೀಯ ಶಕ್ತಿಗಳು ಜೊತೆಯಾಗಿ ಇವುಗಳನ್ನು ನಿಯಂತ್ರಿಸುತ್ತಿವೆ. ಆದುದರಿಂದಲೇ, ಅಕ್ರಮ ಮರಳುಗಾರಿಕೆ ಮತ್ತು ಗಣಿಗಾರಿಕೆಗಳಿಗೆ ಕಡಿವಾಣ ಹಾಕುವುದು ಕಾನೂನು ಪಾಲಕರಿಗೆ ಕಷ್ಟವಾಗುತ್ತಿದೆ. ಗೂಂಡಾಗಳು ಮತ್ತು ರಾಜಕಾರಣಿಗಳೆಂಬ ಈ ಎರಡೂ ಶಕ್ತಿಗಳಿಗೆ ಹೆದರುತ್ತಾ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಒಂದು ವೇಳೆ ಇವರನ್ನು ಎದುರು ಹಾಕಿಕೊಂಡು ಕರ್ತವ್ಯ ನಿರ್ವಹಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಬೆಳ್ತಂಗಡಿಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಪೊಲೀಸ್ ಠಾಣೆಯೊಳಗೆ ನಡೆಸಿದ ದಾಂಧಲೆಯೇ ಸಾಕ್ಷಿ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಲ್ಲಿನ ಕೋರೆಗೆ ದಾಳಿ ನಡೆಸಿದ ಬೆಳ್ತಂಗಡಿ ತಹಶೀಲ್ದಾರ್ ನೇತೃತ್ವದ ಪೊಲೀಸರ ತಂಡವು ಅಕ್ರಮದಲ್ಲಿ ಭಾಗಿಯಾದ ಪ್ರಮುಖ ರೌಡಿ ಶೀಟರ್ ಸಹಿತ ಆತನ ಸಹಚರರನ್ನು ಬಂಧಿಸಿತು. ಈ ರೌಡಿ ಶೀಟರ್ ಬಿಜೆಪಿ ಯುವ ಮೋರ್ಚದ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷನಾಗಿರುವುದು ಇನ್ನೊಂದು ವಿಪರ್ಯಾಸ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ಎಂಬಾತ ಇನ್ನೋರ್ವ ಪ್ರಮುಖ ಆರೋಪಿ. ಇವರಿಬ್ಬರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಫೋಟಕಗಳು ಸೇರಿದಂತೆ ಹಲವು ಅಕ್ರಮ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ತಕ್ಷಣ ಅಭಿನಂದಿಸಿ ಅವರ ಕರ್ತವ್ಯ ಪರತೆಗೆ ಮೆಚ್ಚುಗೆ ಸೂಚಿಸಬೇಕಾಗಿತ್ತು. ವಿಪರ್ಯಾಸವೆಂದರೆ, ಅಭಿನಂದಿಸುವುದಿರಲಿ, ಶಾಸಕರು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಮಾತ್ರವಲ್ಲ ಕರ್ತವ್ಯ ನಿರತ ಪೊಲೀಸರಿಗೆ ಬೆದರಿಕೆಯೊಡ್ಡಿದ್ದಾರೆ. ಪೊಲೀಸರ ತಂದೆ ತಾಯಿಗಳನ್ನು ನಿಂದಿಸಿರುವುದು ಮಾತ್ರವಲ್ಲ, ‘‘ಬಿಜೆಪಿ ಕಾರ್ಯಕರ್ತರು ಯಾವುದೇ ಅಕ್ರಮದಲ್ಲಿ ಭಾಗಿಯಾಗಿರಲಿ, ಅವರನ್ನು ಬಂಧಿಸಿದರೆ ನಿಮ್ಮ ಕಾಲರ್ ಪಟ್ಟಿ ಹಿಡಿಯುತ್ತೇನೆ. ತಾಕತ್ತಿದ್ದರೆ ನನ್ನನ್ನು ಬಂಧಿಸಿ’’ ಎಂದು ಬಹಿರಂಗವಾಗಿ ಕಾನೂನು ವ್ಯವಸ್ಥೆಗೆ ಸವಾಲು ಹಾಕಿದ್ದಾರೆ. ಇದೀಗ ಅವರ ಮೇಲೆಯೂ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರೈತರು, ಕಾರ್ಮಿಕರು ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ರಸ್ತೆ ತಡೆ ನಡೆಸಿದಾಗ, ಜನಸಾಮಾನ್ಯರು ಸರಕಾರದ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಪೊಲೀಸರು ಅವರ ಮೇಲೆ ದೌರ್ಜನ್ಯ ಎಸಗಿದರೆ, ಆಗ ಜನಪ್ರತಿನಿಧಿಗಳು ಜನರ ಧ್ವನಿಯಾಗಿ ಪೊಲೀಸ್ ಠಾಣೆಗಳಿಗೆ ತೆರಳುವುದಿದೆ. ಪೊಲೀಸರ ವಿರುದ್ಧ ಧಿಕ್ಕಾರ ಕೂಗುವುದಿದೆ. ಕರಾವಳಿಯಲ್ಲಿ ಯಾವುದೇ ಕೋಮುಗಲಭೆಗಳಲ್ಲಿ ಸಂಘಪರಿವಾರದ ನಾಯಕರ ಪಾತ್ರ ಕಂಡುಬಂದರೆ ಅವರನ್ನು ಪೊಲೀಸರು ಬಂಧಿಸುವುದಕ್ಕೆ ಹಿಂಜರಿಯುತ್ತಾರೆ. ಯಾಕೆಂದರೆ, ಅದನ್ನೇ ಮುಂದಿಟ್ಟುಕೊಂಡು ಸಂಘಪರಿವಾರ ಮತ್ತು ಬಿಜೆಪಿಯ ನಾಯಕರು ಸಮಾಜದಲ್ಲಿ ಕೋಮು ಉದ್ವಿಗ್ನ ವಾತಾವರಣ ಸೃಷ್ಟಿಸುತ್ತಾರೆ ಎನ್ನುವುದು ಪೊಲೀಸರ ಭಯವಾಗಿದೆ. ಆದರೆ ಇದೀಗ ಕರಾವಳಿಯ ಸ್ಥಿತಿ ಯಾವ ಹಂತಕ್ಕೆ ಬಂದು ತಲುಪಿದೆ ಎಂದರೆ, ತಮ್ಮ ಕಾರ್ಯಕರ್ತರು ಅಕ್ರಮವಾಗಿರುವ ಯಾವುದೇ ಕೆಲಸಗಳಲ್ಲಿ ಭಾಗಿಯಾದರೂ ಅವರನ್ನು ಬಂಧಿಸಬಾರದು ಎನ್ನುವ ಒತ್ತಡಗಳನ್ನು ಬಿಜೆಪಿ ನಾಯಕರು ಹಾಕತೊಡಗಿದ್ದಾರೆ. ಬಂಧಿಸಿದ್ದೇ ಆದರೆ, ‘ಹಿಂದೂಗಳ ಮೇಲೆ ದೌರ್ಜನ್ಯ’ ಎನ್ನುವ ಕೂಗೆಬ್ಬಿಸುತ್ತಾ ಪಾತಕಿಗಳನ್ನು ರಕ್ಷಿಸಲು ಮುಂದಾಗುತ್ತಾರೆ. ಬೆಳ್ತಂಗಡಿ ತಾಲೂಕಿನಲ್ಲೂ ಇದೇ ನಡೆದಿದೆ.

‘‘ಅಮಾಯಕರನ್ನು ಬಂಧಿಸಲು ಪೊಲೀಸ್ ಠಾಣೆ ನಿನ್ನ ಅಪ್ಪನದಾ?’’ ಎಂದು ಪೂಂಜಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕುತ್ತಿರುವ ವೀಡಿಯೊ ವೈರಲ್ ಆಗಿದೆ. ಆದರೆ ಬಂಧಿಸಲ್ಪಟ್ಟವನ ಮೇಲೆ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಆತ ರೌಡಿ ಶೀಟರ್ ಎನ್ನುವುದು ಶಾಸಕ ಪೂಂಜಾ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಇನ್ನು ಬಂಧಿಸಲ್ಪಟ್ಟ ಪ್ರಕರಣದ ಬಗ್ಗೆಯೂ ಶಾಸಕರಿಗೆ ಮಾಹಿತಿಯಿದೆ. ಇಷ್ಟಾದರೂ ಬಂಧಿತನಿಗೆ ‘ಅಮಾಯಕ’ ಎಂದ ಹಣೆಪಟ್ಟಿ ನೀಡಿ ಗೌರವಿಸಿದ್ದಾರೆ. ಬಂಧಿತರು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ದೂರುಗಳಿವೆ. ಸಾಕ್ಷಿಗಳೂ ಇದ್ದಾರೆ. ಆರೋಪಿಗಳಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಿದ್ದರೂ, ಅವರನ್ನು ಬಂಧಿಸಬಾರದು ಎಂದರೆ ಅದಕ್ಕೆ ಎರಡು ಕಾರಣಗಳಿವೆ. ಒಂದು, ಈ ಅಕ್ರಮ ಗಣಿಗಾರಿಕೆಯಲ್ಲಿ ಶಾಸಕರ ಕೈವಾಡವಿದೆ ಅಥವಾ ಪಾಲುದಾರಿಕೆಯಿದೆ. ಇವರ ಸೂಚನೆಯಂತೆ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಎರಡನೆಯದೆಂದರೆ, ಸಂಘಪರಿವಾರ ಕಾರ್ಯಕರ್ತರ ವೇಷದಲ್ಲಿ ಯಾವುದೇ ಅಕ್ರಮಗಳನ್ನು ನಡೆಸಿದರೂ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎನ್ನುವ ನಿಲುವಾಗಿದೆ. ಬಿಜೆಪಿ ಯುವ ಮೋರ್ಚಾಕ್ಕೂ ಅಕ್ರಮ ಕಲ್ಲುಗಣಿಗಾರಿಕೆಗೂ ಇರುವ ಸಂಬಂಧವೇನು? ಯುವಮೋರ್ಚಾ ಅಧಿಕೃತವಾಗಿ ಈ ಅಕ್ರಮಗಳನ್ನು ನಡೆಸುತ್ತಿದೆಯೆ? ಶಾಸಕರು ಪ್ರತಿಪಾದಿಸುವ ಹಿಂದುತ್ವಕ್ಕೂ ಇಂತಹ ಅಕ್ರಮಗಳಿಗೂ ಏನು ಸಂಬಂಧ? ಈ ಎಲ್ಲ ಪ್ರಶ್ನೆಗಳಿಗೆ ಇದೀಗ ಜಿಲ್ಲೆಯ ಜನರು ಶಾಸಕರಿಂದ ಉತ್ತರಗಳನ್ನು ನಿರೀಕ್ಷಿಸುತ್ತಿದ್ದಾರೆ. ಈ ಅಕ್ರಮ ಗಣಿಗಾರಿಕೆಯ ವಿರುದ್ಧ ಪೊಲೀಸರಿಗೆ ಮಾಹಿತಿ, ದೂರುಗಳನ್ನು ನೀಡಿರುವುದು ಕೂಡ ಸ್ಥಳೀಯ ಹಿಂದೂಗಳೇ ಆಗಿದ್ದಾರೆ. ಒಟ್ಟಿನಲ್ಲಿ ಕರಾವಳಿಯಲ್ಲಿ ಹಿಂದುತ್ವಕ್ಕೂ, ಇಂತಹ ಅಕ್ರಮ ಚಟುವಟಿಕೆಗಳಿಗೂ ಇರುವ ಅನೈತಿಕ ಸಂಬಂಧವನ್ನು ತನಿಖೆ ನಡೆಸುವುದಕ್ಕೆ ಇದು ಸುಸಮಯವಾಗಿದೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣಕ್ಕಾಗಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲಾಗಿದೆ. ಈ ಬಾರಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಬಂಧಿಸಲೆಂದು ನಿವಾಸಕ್ಕೆ ತೆರಳಿದಾಗ ಶಾಸಕರು ತಲೆಮರೆಸಿಕೊಂಡಿದ್ದರು. ಬಿಜೆಪಿ ಮುಖಂಡರ ಮನವೊಲಿಕೆಯ ಬಳಿಕ ರಾತ್ರಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ವಿಪರ್ಯಾಸವೆಂದರೆ, ಅಕ್ರಮ ಸ್ಫೋಟಕ ಸಂಗ್ರಹಿಸಿದ ಆರೋಪಿಯ ಪರವಾಗಿ ಪೊಲೀಸ್ ಠಾಣೆಯಲ್ಲಿ ದಾಂಧಲೆ ಎಬ್ಬಿಸಿದ ಶಾಸಕರಿಗೆ ತಕ್ಷಣವೇ ಸ್ಟೇಷನ್ ಬೇಲ್ ಸಿಕ್ಕಿದೆ. ಇತರ ಆರೋಪಿಗಳಿಗೆ ಸಿಗದ ಈ ಸವಲತ್ತು ಶಾಸಕರಿಗೆ ಹೇಗೆ ಸಿಕ್ಕಿತು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದ ರಾಜ್ಯ ಬಿಜೆಪಿ ವರಿಷ್ಠರು ಇದೀಗ ಬಾಯಿಗೆ ಬೀಗ ಹಾಕಿ ಕೂತಿದ್ದಾರೆ. ಈ ನಾಡಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಒಂದಿಷ್ಟು ಕಾಳಜಿ ಅವರಿಗಿದ್ದರೆ ಬಿಜೆಪಿಯ ವಿವಿಧ ಮೋರ್ಚಾಗಳಲ್ಲಿರುವ ರೌಡಿ ಶೀಟರ್‌ಗಳನ್ನು ಮೊದಲು ಹೊರ ಹಾಕಲಿ. ಕರ್ತವ್ಯ ನಿರ್ವಹಿಸಲು ಪೊಲೀಸರಿಗೆ ಅಡ್ಡಿಯಾದ ಶಾಸಕ ಪೂಂಜಾ ವಿರುದ್ಧ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳಲಿ. ಆಗ ರಾಜ್ಯ ಸರಕಾರದ ವಿರುದ್ಧ, ಗೃಹ ಸಚಿವರ ವಿರುದ್ಧ ಟೀಕೆ ಮಾಡುವ ನೈತಿಕತೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News