ನಾನು ಹೊಡೆದಂತೆ ಮಾಡುವೆ, ನೀನು ಅತ್ತಂತೆ ಮಾಡು!

Update: 2024-05-29 05:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇವೇಗೌಡರು ಹೊಡೆದಂತೆ ಮಾಡಿದರೆ, ವಿದೇಶದಲ್ಲಿ ಅಜ್ಞಾತ ಸ್ಥಳದಲ್ಲಿ ಅಡಗಿ ಕೂತಿರುವ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ಅತ್ತಂತೆ ಮಾಡಿದ್ದಾರೆ. ಐದು ದಿನಗಳ ಹಿಂದೆ ಜೆಡಿಎಸ್‌ನ ಹಿರಿಯ ನಾಯಕರಾಗಿರುವ ದೇವೇಗೌಡರು ‘‘ಎಲ್ಲಿದ್ದರೂ ಬಂದು ಶರಣಾಗಬೇಕು. ವಿಚಾರಣೆ ಎದುರಿಸಬೇಕು. ಇದು ನಾನು ನಿನಗೆ ಕೊಡುತ್ತಿರುವ ಎಚ್ಚರಿಕೆ. ಈ ಎಚ್ಚರಿಕೆಗೆ ಮನ್ನಣೆ ಕೊಡದೇ ಇದ್ದರೆ ನನ್ನ ಮತ್ತು ಕುಟುಂಬದ ಕೋಪ ಎದುರಿಸಬೇಕಾಗುತ್ತದೆ. ಕಾನೂನಿಗೆ ತಲೆಬಾಗದೇ ಇದ್ದರೆ ಏಕಾಂಗಿಯಾಗಬೇಕಾಗುತ್ತದೆ. ನನ್ನ ಬಗ್ಗೆ ಗೌರವವಿದ್ದಲ್ಲಿ ಕೂಡಲೇ ವಾಪಸ್ ಬರಬೇಕು’’ ಎಂದು ಇತ್ತೀಚೆಗೆ ತನ್ನ ಮೊಮ್ಮಗನಿಗೆ ಪತ್ರ ಬರೆದಿದ್ದರು. ಇದೀಗ ಆ ಪತ್ರಕ್ಕೆ ಅಜ್ಞಾತ ಸ್ಥಳದಿಂದಲೇ ಉತ್ತರಿಸಿರುವ ಪ್ರಜ್ವಲ್, ‘‘ಮೇ 31ಕ್ಕೆ ಬರುವೆ. ಸಿಟ್ ಮುಂದೆ ವಿಚಾರಣೆಗೆ ಹಾಜರಾಗುವೆ’’ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ ತಾನು ವಿದೇಶಕ್ಕೆ ತೆರಳಿದ್ದು ತನಿಖೆಯಿಂದ ತಪ್ಪಿಸಿಕೊಳ್ಳುವುದಕ್ಕಲ್ಲ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಜೊತೆಗೆ, ತನ್ನ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ. ‘ಹೇಳಿಕೆ ನನಗೆ ಸಮಾಧಾನ ತಂದಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೂ ಹೇಳಿದ್ದಾರೆ.

ಮುಖ್ಯವಾಗಿ ಮೊಮ್ಮಗನಿಗೆ ದೇವೇಗೌಡರ ಪತ್ರವೇ ಒಂದು ದೊಡ್ಡ ಅಣಕವಾಗಿದೆ. ಅವರ ಎಚ್ಚರಿಕೆಯ ಪತ್ರ, ಈ ಹಿಂದೆ, ಕುಮಾರಸ್ವಾಮಿ ಪಕ್ಷ ಒಡೆದು ಬಿಜೆಪಿಯೊಂದಿಗೆ ಕೈ ಜೋಡಿಸಿದ ದಿನಗಳನ್ನು ನೆನಪಿಗೆ ತರುತ್ತದೆ. ಮೊದಲ ಬಾರಿ ತನ್ನ ಶಾಸಕರ ಗುಂಪಿನ ಜೊತೆಗೆ ಕುಮಾರಸ್ವಾಮಿಯವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿ ಜೆಡಿಎಸ್-ಕಾಂಗ್ರೆಸ್ ಸರಕಾರವನ್ನು ಉರುಳಿಸಿದಾಗ, ದೇವೇಗೌಡರು ಭಾರೀ ಆಘಾತಗೊಂಡವರಂತೆ ಮಾಧ್ಯಮಗಳ ಮುಂದೆ ನಟಿಸಿದ್ದರು. ‘ತಕ್ಷಣ ವಾಪಸ್ ಬಾ. ಇಲ್ಲದಿದ್ದರೆ ನಾನು ಸುಮ್ಮನಿರುವುದಿಲ್ಲ’ ಎಂಬ ಎಚ್ಚರಿಕೆಯನ್ನು ನೀಡಿದ್ದರು. ‘ಮಗನಿಂದ ನನಗೆ ಅತೀವ ನೋವಾಗಿದೆ’ ಎಂದು ಕಣ್ಣೀರು ಸುರಿಸಿದ್ದರು. ಆದರೆ ಮಗ ಮುಖ್ಯಮಂತ್ರಿಯಾದ ಕೆಲವೇ ತಿಂಗಳಲ್ಲಿ ‘ಶಹಭಾಸ್‌ಗಿರಿ’ ನೀಡಿದ್ದರು. ಜಾತ್ಯತೀತ ಮೌಲ್ಯಗಳ ಬಗ್ಗೆ ಮಾತನಾಡುತ್ತಲೇ ಅಧಿಕಾರಕ್ಕಾಗಿ ಬಿಜೆಪಿಯ ಜೊತೆಗೆ ಕುಮಾರಸ್ವಾಮಿ ಅನೈತಿಕ ಸಂಬಂಧವನ್ನು ಬೆಸೆದದ್ದು ಕಡಿಮೆ ಅಶ್ಲೀಲವಾದದ್ದೇನೂ ಆಗಿರಲಿಲ್ಲ. ಇದೀಗ ನೋಡಿದರೆ ಇಡೀ ಕುಟುಂಬವೇ ಬಿಜೆಪಿಯ ಜೊತೆಗೆ ಅಧಿಕೃತವಾಗಿ ಮೈತ್ರಿಯನ್ನು ಮಾಡಿಕೊಂಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಜೊತೆಗೆ ಮೈತ್ರಿ ನಡೆದಿರುವುದೇ ದೇವೇಗೌಡರ ನೇತೃತ್ವದಲ್ಲಿ. ಹಾಗೆ ನೋಡಿದರೆ ಪ್ರಜ್ವಲ್‌ನ ಲೈಂಗಿಕ ಹಗರಣದಷ್ಟೇ ಅಶ್ಲೀಲವಾದದ್ದಿದು. ಈ ಹಿಂದೆ ಮಾಧ್ಯಮಗಳ ಮುಂದೆ ‘ಪ್ರಜ್ವಲ್‌ನನ್ನು ನಾನು ರಾಜಕೀಯವಾಗಿ ಸಿದ್ಧಗೊಳಿಸುತ್ತೇನೆ’ ಎಂದು ದೇವೇಗೌಡರು ಹೇಳಿಕೆ ನೀಡಿದ್ದರು. ಆತನ ರಾಜಕೀಯ ಗುರು ಸ್ವತಃ ದೇವೇಗೌಡರೇ ಆಗಿದ್ದರು. ಪ್ರಜ್ವಲ್ ಲೈಂಗಿಕ ಹಗರಣದ ಬಗ್ಗೆ ದೇವೇಗೌಡರಿಗೆ ಮಾಹಿತಿಯೇ ಇರಲಿಲ್ಲ ಎನ್ನುವುದು, ಕುಮಾರಸ್ವಾಮಿ ಬಿಜೆಪಿ ಸೇರುವ ಕುರಿತಂತೆ ಮಾಹಿತಿ ಇದ್ದಿರಲಿಲ್ಲ ಎನ್ನುವಷ್ಟೇ ಸತ್ಯ. ರಾಜಕೀಯ ನಾಯಕ ತನ್ನ ಚಾರಿತ್ರ್ಯವನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎನ್ನುವ ಪಾಠವನ್ನು ಆರಂಭದಲ್ಲೇ ದೇವೇಗೌಡರು ಹೇಳಿಕೊಟ್ಟಿದ್ದರೆ, ಇಂದು ಅವರು ಈ ರೀತಿ ಪತ್ರ ಬರೆಯುವ, ಪ್ರಜ್ವಲ್ ವಿದೇಶದಲ್ಲಿ ಕುಳಿತು ಅದಕ್ಕೆ ಉತ್ತರಿಸುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ.

ವೀಡಿಯೊದಲ್ಲಿ ಪ್ರಜ್ವಲ್ ರೇವಣ್ಣ ತನ್ನ ವಿರುದ್ಧ ರಾಜಕೀಯ ಸಂಚು ನಡೆಯುತ್ತಿದೆ ಎಂದು ಹೇಳಿದ್ದಾರೆಯೇ ಹೊರತು, ‘ಲೈಂಗಿಕ ಹಗರಣದ ಪೆನ್‌ಡ್ರೈವ್‌ಗೂ ತನಗೂ ಸಂಬಂಧವಿಲ್ಲ’ ಎಂದು ಎಲ್ಲೂ ಸ್ಪಷ್ಟ ಧ್ವನಿಯಲ್ಲಿ ಹೇಳಿಲ್ಲ. ಇಡೀ ಪ್ರಕರಣದಲ್ಲಿ, ಪ್ರಜ್ವಲ್ ಮೇಲಿರುವ ಮುಖ್ಯ ಆರೋಪ ತನ್ನ ಕೃತ್ಯವನ್ನು ವೀಡಿಯೊ ಮಾಡಿಕೊಂಡಿರುವುದು. ತನ್ನ ಅಶ್ಲೀಲ ಕೃತ್ಯದ ಬಗ್ಗೆ ಯಾವ ಹೇಳಿಕೆಯನ್ನೂ ನೀಡದ ಪ್ರಜ್ವಲ್ ಈ ಪೆನ್‌ಡ್ರೈವ್ ಹಂಚಿಕೆಯ ಹಿಂದೆ ವಿರೋಧ ಪಕ್ಷದ ನಾಯಕರಿದ್ದಾರೆ ಎಂದು ಆರೋಪಿಸಿದ್ದಾರೆ. ಇಲ್ಲಿ ಅಪರಾಧ ಘಟಿಸಿರುವುದು ಪ್ರಜ್ವಲ್ ಕೈಯಲ್ಲಿ. ತನ್ನ ನಾಚಿಕೆಗೆಟ್ಟ ಕೆಲಸವನ್ನು ತಾನೇ ಚಿತ್ರೀಕರಿಸಿ ಸಿಕ್ಕಿ ಹಾಕಿಕೊಂಡಿದ್ದಾರೆೆ. ಆ ದೃಶ್ಯದ ತುಣುಕುಗಳು ರಾಜಕೀಯ ವಿರೋಧಿಗಳ ಕೈಗೆ ಸಿಕ್ಕಿದರೆ ಅವರು ಯಾಕೆ ಸುಮ್ಮನಿರುತ್ತಾರೆ? ಈ ಹಿಂದೆ ರೆಸಾರ್ಟ್ ರಾಜಕೀಯ ಸಂದರ್ಭದಲ್ಲಿ ಜಾರಕಿಹೊಳಿ ಸಹಿತ ಹಲವು ರಾಜಕೀಯ ನಾಯಕರ ಅಶ್ಲೀಲ ಸೀಡಿಗಳು ಬಹಿರಂಗವಾಗಿ ಅದು ರಾಜಕೀಯ ವಲಯದಲ್ಲಿ ಸೃಷ್ಟಿಸಿದ ಕಂಪನದ ಅರಿವು ಪ್ರಜ್ವಲ್‌ರಿಗೆ ಇರಬೇಕಾಗಿತ್ತು. ಜಾರಕಿ ಹೊಳಿ ಪ್ರಕರಣದಲ್ಲಿ ಅವರ ಖಾಸಗಿ ಅಶ್ಲೀ ಕ್ಷಣಗಳನ್ನು ರಾಜಕೀಯ ವಿರೋಧಿಗಳು ಗುಟ್ಟಾಗಿ ಚಿತ್ರೀಕರಿಸಿದ್ದರು. ಈ ಪ್ರಕರಣದಲ್ಲಿ ಸ್ವತಃ ಪ್ರಜ್ವಲ್‌ರೇ ಚಿತ್ರೀಕರಿಸಿ ಅದನ್ನು ಪರೋಕ್ಷವಾಗಿ ಅವರೇ ವಿರೋಧಿಗಳ ಕೈಗೆ ಒಪ್ಪಿಸಿದ್ದಾರೆ. ತಾನೇ ತೋಡಿದ ಹೊಂಡದಲ್ಲಿ ತಾನೇ ಬಿದ್ದು, ಇದೀಗ ಅದಕ್ಕೆ ಬೇರೆಯವರನ್ನು ಹೊಣೆ ಮಾಡುತ್ತಿದ್ದಾರೆ. ಪೆನ್‌ಡ್ರೈವ್ ಹಂಚುವಿಕೆಯ ಹಿಂದೆ ರಾಜಕೀಯ ವಿರೋಧಿಗಳು ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಮಾಡಿದ ಅಶ್ಲೀಲ ಕೆಲಸವನ್ನು ಖಂಡಿಸಬಾರದು, ಸಾರ್ವಜನಿಕವಾಗಿ ಟೀಕಿಸಬಾರದು , ವಿರೋಧಿಗಳು ಅದನ್ನು ತಮ್ಮ ರಾಜಕೀಯಕ್ಕೆ ಬಳಸಬಾರದು ಎಂದು ದೇವೇಗೌಡ ಕುಟುಂಬ ನಿರೀಕ್ಷಿಸುವುದಾದರೂ ಎಷ್ಟು ಸರಿ?

‘‘ಎಪ್ರಿಲ್ 26ರಂದು ಚುನಾವಣೆ ನಡೆದ ಸಂದರ್ಭದಲ್ಲಿ ನನ್ನ ವಿರುದ್ಧ ಯಾವುದೇ ಪ್ರಕರಣಗಳಿರಲಿಲ್ಲ. ಸಿಟ್ ಸಹ ರಚನೆಯಾಗಿರಲಿಲ್ಲ. ಹಾಗಾಗಿ, ನಾನು ವಿದೇಶಕ್ಕೆ ತೆರಳುವುದು ಮೊದಲೇ ನಿಗದಿಯಾಗಿತ್ತು’’ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಯಾವಾಗ ಆರೋಪಗಳು ಮಾಧ್ಯಮಗಳ ಮೂಲಕ ಸ್ಫೋಟಗೊಂಡಿತೋ, ಆಗಲೇ ರಾಜ್ಯಕ್ಕೆ ವಾಪಸಾಗಿ ತನ್ನ ನಿರಪರಾಧಿತ್ವವನ್ನು ಸಾಬೀತು ಪಡಿಸುವ ಅವಕಾಶ ಪ್ರಜ್ವಲ್‌ಗಿತ್ತು. ಅದನ್ನು ತಡೆದವರಾದರೂ ಯಾರು? ರಾಜ್ಯದಲ್ಲಿ ಇಷ್ಟೆಲ್ಲ ರಾದ್ಧಾಂತವಾಗಿರುವಾಗ, ತನ್ನ ಕುಟುಂಬದ ಮಾನ ಕಾಪಾಡುವ ದೃಷ್ಟಿಯಿಂದಲಾದರೂ, ಪ್ರಜ್ವಲ್ ರಾಜ್ಯಕ್ಕೆ ಮರಳಿ ಸ್ಪಷ್ಟೀಕರಣವನ್ನು ನೀಡಬೇಕಾಗಿತ್ತು.ಈಗಲೂ ಮೇ 31ಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ. ಯಾಕೆ ದಿನ ಮುಂದೂಡುತ್ತಿದ್ದಾರೆ? ಒಂದಂತೂ ಸ್ಪಷ್ಟವಾಗಿದೆ. ಪ್ರಜ್ವಲ್ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಗೆದ್ದಲ್ಲಿ ‘ಮತದಾರರ ತೀರ್ಪನ್ನು’ ಗುರಾಣಿಯಾಗಿ ಬಳಸಿಕೊಂಡು ಮುಖ ಉಳಿಸಿಕೊಳ್ಳಲು ಹೊರಟಿದ್ದಾರೆ. ‘‘ತನ್ನ ಮೇಲಿನ ಎಲ್ಲ ಆರೋಪಗಳಿಗೆ ಮತದಾರರೇ ಉತ್ತರಿಸಿದ್ದಾರೆ’’ ‘‘ವಿರೋಧ ಪಕ್ಷಗಳ ಹುನ್ನಾರವನ್ನು ಮತದಾರರು ವಿಫಲಗೊಳಿಸಿದ್ದಾರೆ’’ ಮೊದಲಾದ ಹೇಳಿಕೆಗಳ ಮೂಲಕ, ಕಳೆದು ಹೋದ ಮಾನವನ್ನು ಗಳಿಸಿಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ. ಆದುದರಿಂದ ಪ್ರಜ್ವಲ್‌ರ ಸೋಲು-ಗೆಲುವು ದೇವೇಗೌಡರ ಕುಟುಂಬದ ಪಾಲಿಗೆ, ಜೆಡಿಎಸ್ ಸಾವು-ಬದುಕಿನ ಪ್ರಶ್ನೆಯಾಗಿದೆ.

ಪ್ರಜ್ವಲ್ ಪರವಾಗಿ ನರೇಂದ್ರ ಮೋದಿಯವರು ಪ್ರಚಾರ ನಡೆಸಿದ್ದಾರೆ. ಪ್ರಜ್ವಲ್‌ರ ಲೈಂಗಿಕ ಹಗರಣ ಬೆಳಕಿಗೆ ಬಂದದ್ದು ಚುನಾವಣೆ ನಡೆದ ಮರುದಿನ. ಆದುದರಿಂದ, ಪೆನ್‌ಡ್ರೈವ್ ಹಾಸನದ ಫಲಿತಾಂಶದ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೂ, ಸೋತರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಜೆಡಿಎಸ್ ಯಾವ ರೀತಿಯಲ್ಲೂ ಹಿಂಜರಿಯಬಾರದು. ಆತನ ಕೈಯಲ್ಲಿ ರಾಜೀನಾಮೆ ನೀಡಿಸಿ, ಆತನನ್ನು ರಾಜಕೀಯದಿಂದ ಗಡಿಪಾರು ಮಾಡದೇ ಇದ್ದರೆ ಆತನ ಹಗರಣದ ಪಾಲನ್ನು ದೇವೇಗೌಡರೂ ಹೊತ್ತುಕೊಳ್ಳಬೇಕಾಗುತ್ತದೆ. ಹುಸಿ ಕಣ್ಣೀರಿನಿಂದ ತನ್ನ ಮೊಮ್ಮಗನ ಕಳಂಕವನ್ನು ತೊಳೆದು ಹಾಕಲು ಸಾಧ್ಯವಿಲ್ಲ ಎನ್ನುವುದನ್ನು ಅವರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ತನ್ನ ರಾಜಕೀಯ ಜೀವನದಲ್ಲಿ ಸಂಪಾದಿಸಿದ ಒಳಿತುಗಳನ್ನು ಪ್ರಜ್ವಲ್‌ರ ಲೈಂಗಿಕ ಹಗರಣಕ್ಕೆ ಒತ್ತೆಯಿಡಬಾರದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News