ಮೋದಿ ಅಭಿವೃದ್ಧಿಯ ತುತ್ತೂರಿಯ ಬಣ್ಣ ಕರಗ ತೊಡಗಿದೆಯೇ?

Update: 2024-07-05 05:05 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬಿಹಾರದಲ್ಲಿ ಕುಸಿಯುತ್ತಿರುವ ಸೇತುವೆಗಳ ಸದ್ದು ದೇಶವನ್ನು ಬೆಚ್ಚಿ ಬೀಳಿಸುತ್ತಿದೆ. ಸೇತುವೆಗಳು ಕುಸಿಯುವುದಕ್ಕಾಗಿಯೇ ಪರಸ್ಪರ ಸ್ಪರ್ಧೆಯಲ್ಲಿರುವಂತಿದೆ. ಗುರುವಾರ ಸಾರನ್ ಜಿಲ್ಲೆಯಲ್ಲಿ ಇನ್ನೊಂದು ಸೇತುವೆ ಕುಸಿದಿದ್ದು ಕೇವಲ 16 ದಿನಗಳಲ್ಲಿ ಒಟ್ಟು 10 ಸೇತುವೆಗಳು ಕುಸಿದಂತಾಗಿದೆ. ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ ಪತನವಾದ ಮೂರನೇ ಸೇತುವೆ ಇದು. ಕೇವಲ 14 ವರ್ಷಗಳ ಹಿಂದೆ ಈ ಸೇತುವೆಯನ್ನು ಕಟ್ಟಲಾಗಿತ್ತು. ತೀವ್ರವಾಗಿ ಸುರಿಯುತ್ತಿರುವ ಮಳೆಯೇ ಸೇತುವೆ ಕುಸಿತಕ್ಕೆ ಕಾರಣವಾಗಿರಬಹುದು ಎಂದು ಜಿಲ್ಲಾಡಳಿತ ಅನುಮಾನ ಪಡುತ್ತಿದೆಯಾದರೂ, ಬಿಹಾರದಲ್ಲಿ ಮಳೆಗೆ ಸೇತುವೆಗಳೇ ಕುಸಿಯುತ್ತದೆ ಎಂದಾದರೆ ಇತರ ಕಾಮಗಾರಿಗಳ ಗತಿ ಏನಾಗಬೇಕು? ಸೇತುವೆಗಳೇ ಯಾಕೆ ಮಳೆಗೆ ಗುರಿಯಾಗುತ್ತಿವೆ. ಮಾತು ಮಾತಿಗೆ ಅಭಿವೃದ್ಧಿಯ ತುತ್ತೂರಿಯನ್ನು ಊದುತ್ತಿರುವ ಪ್ರಧಾನಿಯ ತುತ್ತೂರಿಯ ಬಣ್ಣ ಮೊದಲ ಮಳೆಗೇ ಕರಗಿ ಹೋಯಿತೆ ಎಂದು ಜನರು ಕೇಳುವಂತಾಗಿದೆ. ನರೇಂದ್ರ ಮೋದಿ ಸರಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಂದಿನಿಂದಸೋರಿಕೆಗಳು ಮತ್ತು ಬಿರುಕುಗಳು ದೇಶವನ್ನು ಕಾಡುತ್ತಿವೆ. ನೀಟ್ ಪ್ರಶ್ನೆಪತ್ರಿಕೆಗಳ ಸೋರಿಕೆಯ ಬಳಿಕ, ಅಯೋಧ್ಯೆಯಲ್ಲಿ ಆರು ತಿಂಗಳ ಹಿಂದೆ ಉದ್ಘಾಟನೆಗೊಂಡ ರಾಮ ಮಂದಿರದ ಮೇಲ್ಛಾವಣಿ ಸೋರಲು ಆರಂಭಿಸಿತು. ಅವುಗಳ ಜೊತೆಗೆ, ಮೋದಿಯವರು ಅವಸರದಿಂದ ಉದ್ಘಾಟಿಸಿದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ವಿಮಾನ ನಿಲ್ದಾಣಗಳ ಮೇಲ್‌ಛಾವಣಿಗಳೂ ಒಂದೊಂದಾಗಿ ಕುಸಿಯುತ್ತಿವೆ.

ಕಟ್ಟಡಗಳ ಕುಸಿತ ಮತ್ತು ಮೂಲಸೌಕರ್ಯಗಳು ನೀರಿನಲ್ಲಿ ಕೊಚ್ಚಿ ಹೋಗಿರುವುದಕ್ಕೆ ಪ್ರಧಾನಿಯೊಬ್ಬರನ್ನು ದೂರುವುದು ಏಕಪಕ್ಷೀಯ ಕ್ರಮದಂತೆ ಕಾಣಬಹುದು. ಆದರೆ, ದೇಶದಲ್ಲಿ ಸಣ್ಣದೊಂದು ಮೈದಾನದ ಕಾಮಗಾರಿ ಪೂರ್ತಿಯಾದರೂ ಅಲ್ಲಿ ರಿಬ್ಬನ್ ಕತ್ತರಿಸಲು ಹೋಗಿ, ಫೊಟೋಗೆ ವಿವಿಧ ಭಂಗಿಗಳನ್ನು ನೀಡುವ ನರೇಂದ್ರ ಮೋದಿಯವರು, ಕಾಮಗಾರಿಗಳ ಲೋಪಗಳ ಹೊಣೆಯನ್ನು ಸಹಜವಾಗಿಯೇ ಹೊತ್ತುಕೊಳ್ಳಬೇಕಾಗುತ್ತದೆ. ಬಿಹಾರದಲ್ಲಿ ಕುಸಿಯುತ್ತಿರುವ ಸೇತುವೆಗಳ ಮತ್ತು ಬಿರುಕುಗಳು ಸೃಷ್ಟಿಯಾಗಿರುವ ರಾಷ್ಟ್ರೀಯ ಹೆದ್ದಾರಿಗಳ ದೊಡ್ಡ ಪಟ್ಟಿಯೇ ಇದೆ. ಜೊತೆಗೆ ದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಟರ್ಮಿನಲ್ ಕುಸಿದು ಟ್ಯಾಕ್ಸಿ ಚಾಲಕರೊಬ್ಬರು ಮೃತಪಟ್ಟಿದ್ದಾರೆ. ಆ ವ್ಯಕ್ತಿ ತನ್ನ ಕುಟುಂಬದ ಏಕೈಕ ಆಧಾರವಾಗಿದ್ದರು. ಇಷ್ಟೇ ಅಲ್ಲ, ದೇಶಾದ್ಯಂತ ಇಂಥ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ.

ದಿಲ್ಲಿಯಲ್ಲಿ ಸುರಿದ ಅಗಾಧ ಮಳೆಯು ಖಂಡಿತವಾಗಿಯೂ ದೇವರ ಚಿತ್ತವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ, ನನ್ನನ್ನು ದೇವರು ತನ್ನ ಕೆಲಸ ಮಾಡುವುದಕ್ಕಾಗಿ ಭೂಮಿಗೆ ನೇರವಾಗಿ ಕಳುಹಿಸಿದ್ದಾರೆ ಮತ್ತು ನಾನು ತಾಯಿಯ ಗರ್ಭದಿಂದ ಹುಟ್ಟಿದವನಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ತನ್ನನ್ನು ತಾನು ದೇವರು ಎಂದು ಬಿಂಬಿಸಿಕೊಂಡು ನೀಡಿದ ಹೇಳಿಕೆಯನ್ನಾದರೂ ಅವರು ಹಿಂದೆಗೆದುಕೊಳ್ಳಬೇಕು. ದಿಲ್ಲಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 228 ಮಿಲಿ ಮೀಟರ್ ಮಳೆಯಾಗಿರುವುದನ್ನು ಸಫ್ದರ್‌ಜಂಗ್‌ನಲ್ಲಿರುವ ಹವಾಮಾನ ಕಚೇರಿ ದಾಖಲಿಸಿದೆ. ಆದರೆ, ಸಾಮಾನ್ಯವಾಗಿ ಇಡೀ ಜೂನ್ ತಿಂಗಳಲ್ಲಿ ಇಲ್ಲಿ ಸರಾಸರಿ 80 ಮಿಲಿಮೀಟರ್ ಮಳೆಯಾಗುತ್ತದೆ. ನಗರದ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತವಾದವು. ಕೆಲವು ಕಡೆ ಮಂಡಿವರೆಗೆ, ಕೆಲವು ಕಡೆ ಎದೆವರೆಗೆ ನೀರು ನಿಂತವು. ಕಾರುಗಳು ನೀರಿನಿಂದ ಆವೃತವಾದವು. ಇದು ಪ್ರಗತಿ ಮೈದಾನ ಸುರಂಗದ ಮುಚ್ಚುಗಡೆಗೂ ಕಾರಣವಾಯಿತು. ಈ ಸುರಂಗವನ್ನು ಕೆಲವು ವರ್ಷಗಳ ಹಿಂದೆ ಪ್ರಧಾನಿ ಮೋದಿ ಭಾರೀ ಪ್ರಚಾರದೊಂದಿಗೆ ವೈಭವೋಪೇತ ಕಾರ್ಯಕ್ರಮದಲ್ಲಿ ಏಕಾಂಗಿಯಾಗಿ ಉದ್ಘಾಟಿಸಿದ್ದರು. ಅದೇ ಸುರಂಗ ಈಗ ಮಥುರಾ ರಸ್ತೆಯಲ್ಲಿ ಪ್ರವಾಹಕ್ಕೆ ಕಾರಣವಾಗಿದೆ.

ಮೋದಿ ಸರಕಾರದ ಕಳೆದ 10 ವರ್ಷಗಳ ಕಾಲದ ಮೂಲಸೌಕರ್ಯ ಕಾಮಗಾರಿಗಳು ನಿರಂತರವಾಗಿ ಕುಸಿಯುತ್ತಿವೆ. ದಿಲ್ಲಿ ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್ ಕುಸಿತ, ಜಬಲ್ಪುರ ವಿಮಾನ ನಿಲ್ದಾಣ ಕುಸಿತ, ಅಯೋಧ್ಯೆಯ ಜಲಾವೃತ ರಸ್ತೆಗಳು, ಅಯೋಧ್ಯೆಯಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿರುವ ರಾಮ ಮಂದಿರದ ಮೇಲ್ಛಾವಣಿಯಲ್ಲಿ ಸೋರಿಕೆ, ಮುಂಬೈಯ ಅಟಲ್ ಸೇತುವಿನಲ್ಲಿ ಬಿರುಕುಗಳು, ಬಿಹಾರದಲ್ಲಿ 2023 ಮತ್ತು 2024ರಲ್ಲಿ 13 ಸೇತುವೆಗಳ ಕುಸಿತ, ಪ್ರಗತಿ ಮೈದಾನ ಸುರಂಗ ಜಲಾವೃತ ಮತ್ತು ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿತ ಇವುಗಳಲ್ಲಿ ಪ್ರಮುಖವಾದವುಗಳು. ಈ ಪಟ್ಟಿಯು ಜಾಗತಿಕ ದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ ಎನ್ನುವ ಮೋದಿ ಮತ್ತು ಬಿಜೆಪಿಯ ಅತಿಶಯೋಕ್ತಿಯ ಹೇಳಿಕೆಗಳ ಅಸಲಿಯತ್ತನ್ನು ಬಯಲುಗೊಳಿಸಿದೆ.

ದಿಲ್ಲಿಯ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕುಸಿತಕ್ಕೆ ಕೇಂದ್ರ ಸರಕಾರ ಮತ್ತು ವಿಮಾನ ನಿಲ್ದಾಣದ ಆಡಳಿತ ತಿಪ್ಪೆ ಸಾರಿಸುವ ಹೇಳಿಕೆಗಳನ್ನು ನೀಡಿವೆ. ಮಾರ್ಚ್ 10ರಂದು ಮೋದಿಯವರು ಉದ್ಘಾಟಿಸಿದ್ದು ವಿಮಾನ ನಿಲ್ದಾಣದ ಟರ್ಮಿನಲ್ ಒಂದರ ಬೇರೆಯದೇ ಭಾಗವನ್ನು ಹಾಗೂ ಕುಸಿದ ಭಾಗವನ್ನು 2009ರಲ್ಲಿ ನಿರ್ಮಿಸಲಾಗಿತ್ತು ಎಂಬುದಾಗಿ ಕೇಂದ್ರ ನಾಗರಿಕ ವಾಯುಯಾನ ಸಚಿವ ಕೆ. ರಾಮಮೋಹನ ನಾಯ್ಡು ಮತ್ತು ಜಿಎಮ್‌ಆರ್ ಗ್ರೂಪ್‌ನ ಅಧಿಕಾರಿಗಳು ಹೇಳಿದ್ದಾರೆ. ಅವರು ಹೇಳುವುದೇನೆಂದರೆ, ಮೋದಿಯವರು ಸ್ವತಃ ಉದ್ಘಾಟಿಸಿರುವ ಕಟ್ಟಡಗಳು ಈಗಲೂ ಭದ್ರವಾಗಿವೆ. ಈ ಜಿಎಮ್‌ಆರ್ ಗ್ರೂಪ್ ಆಡಳಿತಾರೂಢ ಬಿಜೆಪಿಗೆ ಚುನಾವಣಾ ಟ್ರಸ್ಟೊಂದರ ಮೂಲಕ ದೇಣಿಗೆ ನೀಡಿದೆ. 2018ರಿಂದಲೂ ಕಂಪೆನಿಯು ಪ್ರೂಡೆಂಟ್ ಇಲೆಕ್ಟೋರಲ್ ಟ್ರಸ್ಟ್‌ನ ಉನ್ನತ ದೇಣಿಗೆದಾರರ ಪೈಕಿ ಒಂದಾಗಿದೆ. ಈ ಟ್ರಸ್ಟ್ ತನ್ನ ಗರಿಷ್ಠ ನಿಧಿಗಳನ್ನು ಬಿಜೆಪಿಗೆ ನೀಡುತ್ತಿದೆ.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಅಭಿವೃದ್ಧಿ ಯೋಜನೆಯು ಸದ್ಯಕ್ಕೆ ಪೂರ್ಣಗೊಳ್ಳುವಂತೆ ಕಾಣುತ್ತಿಲ್ಲ. 2024ಕ್ಕೆ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು 2027ರ ಆಚೆಗೆ ವಿಸ್ತರಿಸಿದೆ. ಈ ಹಿಂದೆ ನಿಗದಿಯಾಗಿದ್ದ ಯೋಜನವಾ ವೆಚ್ಚವೂ ಇದರ ಜೊತೆ ಜೊತೆಗೆ ಹೆಚ್ಚಳವಾಗುತ್ತಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಅವಸರವಸರವಾಗಿ ಉದ್ಘಾಟಿಸಿದ ರಾಮಮಂದಿರ ಮತ್ತು ರಾಮಪಥಗಳು ಸೋರಿಕೆಯ ಮೂಲಕ ಇದೀಗ ಸುದ್ದಿಯಲ್ಲಿವೆ. ನಿಧಾನಗತಿಯಲ್ಲಿ ಸಾಗುತ್ತಿರುವ ಸೆಂಟ್ರಲ್ ವಿಸ್ತಾ ಯೋಜನೆ ಗುರಿ ಮುಟ್ಟುವ ಮೊದಲೇ ಸೋರಿಕೆಯಾಗದಿರಲಿ ಎನ್ನುವುದು ದೇಶದ ಒಕ್ಕೊರಲ ಪ್ರಾರ್ಥನೆಯಾಗಿದೆ. ಎಲ್ಲ ಕುಸಿತ, ಸೋರಿಕೆಗಳೂ ಗಂಭೀರ ತನಿಖೆಯಾಗುವ ಅಗತ್ಯವಿದೆ. ಬಿಹಾರದ ಕುಸಿಯುತ್ತಿರುವ ಸೇತುವೆಗಳ ವಿರುದ್ಧ ಈಗಾಗಲೇ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ದೇಶದಲ್ಲಿ ಸೋರುತ್ತಿರುವ, ಕುಸಿಯುತ್ತಿರುವ ಕಾಮಗಾರಿಗಳ ಹಿಂದಿರುವ ಭ್ರಷ್ಟ ವ್ಯವಸ್ಥೆಯನ್ನು ಶಿಕ್ಷಿಸುವುದಕ್ಕಾಗಿ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಯಬೇಕಾಗಿದೆ. ಈ ಸೋರಿಕೆ, ಕುಸಿತದ ಹಿಂದಿರುವ ಸಂಸ್ಥೆಗಳು, ಇಂಜಿನಿಯರ್‌ಗಳು, ರಾಜಕಾರಣಿಗಳ ಅಸಲಿ ಬಣ್ಣ ಬಯಲಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News