ಉಳ್ಳವರ ತಟ್ಟೆಯ ತುಪ್ಪವೂ, ಶೋಷಿತರ ತಟ್ಟೆಯ ಕೆನೆಯೂ...

Update: 2024-08-05 04:58 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಪರಿಶಿಷ್ಟ ಸಮುದಾಯದ ಬಹುದಿನಗಳ ಬೇಡಿಕೆಯಾಗಿರುವ ಒಳ ಮೀಸಲಾತಿಗೆ ಸಂಬಂಧಿಸಿ ಉಪ ವರ್ಗೀಕರಣ ಮಾಡಲು ರಾಜ್ಯಗಳಿಗೆ ಅನುಮತಿ ನೀಡಬಹುದಾಗಿದೆ ಎಂದು ಮುಖ್ಯ ನ್ಯಾಯಾಧೀಶ ಡಿ. ವೈ. ಚಂದ್ರಚೂಡ್ ನೇತೃತ್ವದ ಏಳು ಸದಸ್ಯರ ಸಂವಿಧಾನ ಪೀಠವು ಬಹುಮತದ ತೀರ್ಪಿನಲ್ಲಿ ತಿಳಿಸಿದೆ. ಸುದೀರ್ಘ ಮೂರು ದಶಕಗಳ ಹೋರಾಟಕ್ಕೆ ಈ ಮೂಲಕ ಜಯ ಸಿಕ್ಕಂತಾಗಿದೆ. ತಮಿಳುನಾಡು, ಆಂಧ್ರ, ಕರ್ನಾಟಕ ಈ ಹೋರಾಟದ ಮುಂಚೂಣಿಯಲ್ಲಿದ್ದ ರಾಜ್ಯಗಳಾಗಿದ್ದವು. ಪರಿಶಿಷ್ಟ ಸಮುದಾಯದಲ್ಲಿರುವ ತೀರಾ ಬಲಾಢ್ಯ ಜಾತಿಗಳೇ ಮೀಸಲಾತಿಯ ಎಲ್ಲ ಸೌಲಭ್ಯಗಳನ್ನು ಕಬಳಿಸುತ್ತಿರುವ ಹೊತ್ತಿಗೆ, ಮುಂದಿನ ದಿನಗಳಲ್ಲಿ ಪರಿಶಿಷ್ಟ ಸಮುದಾಯದಲ್ಲಿ ಉಪವರ್ಗೀಕರಣಗಳನ್ನು ಮಾಡಿ ಮೀಸಲಾತಿಯನ್ನು ಇನ್ನಷ್ಟು ತಳಸ್ತರಕ್ಕೆ ತಲುಪುವಂತೆ ಪರಿಣಾಕಾರಿಯಾಗಿ ಹಂಚುವ ಹೊಣೆಗಾರಿಕೆ ರಾಜ್ಯ ಸರಕಾರಗಳದ್ದು. ಈಗಾಗಲೇ ಈ ತೀರ್ಪನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಳಮೀಸಲಾತಿಯ ವಿಷಯ ಬಂದಾಗ ಚೆಂಡನ್ನು ಕೇಂದ್ರಸರಕಾರಕ್ಕೆ ಅಥವಾ ಸುಪ್ರೀಂಕೋರ್ಟ್ ಕಡೆಗೆ ಒದೆಯುವ ರಾಜ್ಯ ಸರಕಾರಗಳ ವರ್ತನೆಗೆ ಈ ತೀರ್ಪಿನಿಂದ ಕಡಿವಾಣ ಬಿದ್ದಿದೆ. ಜೊತೆಗೆ ಈ ಮೂಲಕ ದೇಶದ ಪರಿಶಿಷ್ಟ ಸಮುದಾಯದ ಆಮೂಲಾಗ್ರ ಅಭಿವೃದ್ಧಿಗೆ ಸಾಧ್ಯತೆಯೊಂದು ತೆರೆದುಕೊಂಡಿದೆ.

ಇದೇ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯದೊಳಗೂ ಇರುವ ಕೀಳುಮೇಲುಗಳನ್ನು ಸರಿಪಡಿಸುವುದಕ್ಕೆ ದಲಿತ ನಾಯಕರು ಇದನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕಾಗಿದೆ. ದಲಿತ ಸಮುದಾಯದಲ್ಲಿ ತುಸು ಮೇಲ್ಪದರದಲ್ಲಿರುವ ಜಾತಿಗಳು ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ದಲಿತ ಸಮುದಾಯವನ್ನು ಕೀಳಾಗಿ ನೋಡುವ ಮನಸ್ಥಿತಿ ಇನ್ನೂ ಉಳಿದುಕೊಂಡಿದೆ. ಜಾತಿ ಅಸಮಾನತೆಯ ಸಂತ್ರಸ್ತರೇ ತಮ್ಮ ಸರದಿ ಬಂದಾಗ ತಮಗಿಂತ ಕೆಳಸ್ತರದಲ್ಲಿರುವ ಜನರ ಶೋಷಣೆಗೆ ಇಳಿಯಲು ಹಿಂದೆ ಮುಂದೆ ನೋಡದೇ ಇರುವುದು ದಲಿತರ ಬದುಕನ್ನು ಇನ್ನಷ್ಟು ಶೋಚನೀಯವಾಗಿಸಿದೆ. ಪರಿಶಿಷ್ಟ ಸಮುದಾಯ ತಮಗೆ ಸಿಕ್ಕಿರುವ ಹಕ್ಕುಗಳನ್ನು ಪೂರ್ಣವಾಗಿ ಬಳಸಿಕೊಂಡು ಜಾತೀಯತೆಯ ವಿರುದ್ಧ ನಿಲ್ಲುವ ಶಕ್ತಿ ಪಡೆದುಕೊಳ್ಳಬೇಕಾದರೆ ಮೊದಲು ತಮ್ಮೊಳಗಿರುವ ಸಾಮಾಜಿಕ ಅಸಮಾನತೆಯನ್ನು ಇಲ್ಲವಾಗಿಸಿಕೊಳ್ಳಬೇಕು. ಪರಿಶಿಷ್ಟ ಸಮುದಾಯದಲ್ಲಿ ಉಪವರ್ಗೀಕರಣವಾಗಿ ಮೀಸಲಾತಿಯ ಸಮಪಾಲು ದಲಿತರನ್ನೆಲ್ಲ ಸಮಾನ ಪಂಕ್ತಿಗೆ ತಂದದ್ದೇ ಆದರೆ, ಮುಂದಿನ ದಿನಗಳಲ್ಲಿ ದಲಿತರು ಸಂಘಟಿತವಾಗಿ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಇದೇ ಸಂದರ್ಭದಲ್ಲಿ, ಪರಿಶಿಷ್ಟ ಸಮುದಾಯದೊಳಗಿರುವ ಕ್ರೀಮಿಲೇಯರ್‌ನ್ನು ಗುರುತಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿರುವುದು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿರುವ ಕೆನೆಪದರವನ್ನು ಗುರುತಿಸಿ ಅವರನ್ನು ಮೀಸಲಾತಿ ಸೌಲಭ್ಯದಿಂದ ಹೊರಗಿಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡುವ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿರುವ ಕೆನೆಪದರವನ್ನು ಗುರುತಿಸಲು ಸರಕಾರವು ನೀತಿಯೊಂದನ್ನು ರೂಪಿಸಬೇಕು ಮತ್ತು ಅವರನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡಬೇಕು. ಸಂವಿಧಾನದಲ್ಲಿ ಪ್ರಸ್ತಾವಿಸಲಾಗಿರುವ ನೈಜ ಸಮಾನತೆಯನ್ನು ಸಾಧಿಸಲು ಇದು ಏಕೈಕ ವಿಧಾನವಾಗಿದೆ’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದು ಹಲವು ಗೊಂದಲಗಳನ್ನು, ಅನುಮಾನಗಳನ್ನು, ಆತಂಕಗಳನ್ನು ದಲಿತ ಸಮುದಾಯದೊಳಗೆ ಹುಟ್ಟಿಸಿ ಹಾಕಿದೆ. ಕ್ರೀಮಿ ಲೇಯರ್ ಹೆಸರಿನಲ್ಲಿ ಹಂತಹಂತವಾಗಿ ದಲಿತರ ಮೀಸಲಾತಿಯನ್ನು ಕಿತ್ತುಕೊಳ್ಳುವ ದುರುದ್ದೇಶ ಇದರ ಹಿಂದಿದೆ ಎಂದು ಕೆಲವರು ಆರೋಪಿಸಿದ್ದಾರೆ. ಇದರ ಜೊತೆಗೇ, ಕೇಂದ್ರ ಸರಕಾರದ ಭಾಗವಾಗಿರುವ ಕೆಲವು ದಲಿತ ನಾಯಕರೇ ಒಳಮೀಸಲಾತಿ ತೀರ್ಪಿನ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಪರಿಶಿಷ್ಟ ಸಮುದಾಯದ ತಳಸ್ತರದ ಜನರು ಒಳಮೀಸಲಾತಿಗಾಗಿ ಬೃಹತ್ ಸಮಾವೇಶ ನಡೆಸಿದ್ದರು. ಈ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿರುವುದೂ ವಿಶೇಷವಾಗಿತ್ತು. ಸಮಾವೇಶದಲ್ಲಿ ಮಾದಿಗ ದಂಡೋರಾದ ಅಧ್ಯಕ್ಷ ಕೃಷ್ಣ ಮಾದಿಗ ಅವರು ಭಾವುಕರಾಗಿ ಕಣ್ಣೀರು ಹಾಕಿದಾಗ ಅವರನ್ನು ಪ್ರಧಾನಿ ಮೋದಿ ತಬ್ಬಿಕೊಂಡು ಸಂತೈಸಿದ್ದರು. ಆದರೆ ಇದು ಬರೇ ಒಂದು ಪ್ರಹಸನವಾಗಿತ್ತು. ಯಾಕೆಂದರೆ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಮೋದಿ ನೇತೃತ್ವದ ಸರಕಾರಕ್ಕೆ ಮನಸ್ಸು ಮಾಡಿದ್ದರೆ ಒಳಮೀಸಲಾತಿ ಅನುಷ್ಠಾನಕ್ಕೆ ಬೇಕಾದ ಕ್ರಮವನ್ನು ಎಂದೋ ತೆಗೆದುಕೊಳ್ಳಬಹುದಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕವೂ ಎನ್‌ಡಿಎ ಸರಕಾರ ಒಳಮೀಸಲಾತಿ ಅನುಷ್ಠಾನದ ಬಗ್ಗೆ ವಿಶೇಷ ಆಸಕ್ತಿಯನ್ನು ಪ್ರದರ್ಶಿಸುತ್ತಿಲ್ಲ.

ರಾಮದಾಸ್ ಆಠವಳೆ, ಚಿರಾಗ್ ಪಾಸ್ವಾನ್‌ರಂತಹ ಪ್ರಮುಖ ದಲಿತ ನಾಯಕರು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಈಗಾಗಲೇ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಒಳ ಮೀಸಲಾತಿಯ ತೀರ್ಪಿನ ವಿರುದ್ಧವೇ ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಪರಿಶಿಷ್ಟರ ಮೀಸಲಾತಿಯಲ್ಲಿ, ಈಗಾಗಲೇ ಬಲಾಢ್ಯವಾಗಿರುವ ಸಮುದಾಯಗಳು ರಾಜಕೀಯವಾಗಿ ಹೆಚ್ಚು ಪ್ರಾತಿನಿಧ್ಯಗಳನ್ನು ಪಡೆದು, ಸ್ಥಾನಮಾನಗಳನ್ನು ಅನುಭವಿಸುತ್ತಿವೆ. ಇವರ ಕಾರಣದಿಂದಾಗಿಯೇ ಒಳಮೀಸಲಾತಿ ಇನ್ನೂ ಜಾರಿಗೊಳ್ಳದೆ ಉಳಿದಿದೆ. ಇದೀಗ ಇವರಿಗೆ ಈ ತೀರ್ಪಿನಿಂದ ಅಸಮಾಧಾನವಾಗಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಕೆನೆಪದರದ ಕುರಿತಂತೆ ದಲಿತ ನಾಯಕರು ಹೊಂದಿರುವ ಆತಂಕ ಸಹಜವಾದದ್ದೇ ಆಗಿದೆ. ಕೆಲವೊಮ್ಮೆ ದಲಿತರು ಮೀಸಲಾತಿಯ ಅನುಕೂಲಗಳನ್ನು ಪಡೆದು ಶ್ರೀಮಂತರಾಗಬಹುದು, ರಾಜಕೀಯವಾಗಿ ಪ್ರಬಲ ನಾಯಕರಾಗಿಯೂ ರೂಪುಗೊಳ್ಳಬಹುದು. ಆದರೆ ‘ಅಸ್ಪಶ್ಯ’ತೆಯ ಕಳಂಕದಿಂದ ಅವರು ಪಾರಾಗುವುದಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ಬಿಜೆಪಿ ಸಂಸದರು, ಮಾಜಿ ಸಚಿವರಾಗಿರುವ ರಮೇಶ್ ಜಿಗಜಿಣಗಿ. ದಲಿತರೆನ್ನುವ ಕಾರಣಕ್ಕಾಗಿ ಇಂದಿಗೂ ಅವರಿಗೆ ರಾಜ್ಯದ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ. ಮೇಲ್‌ಜಾತಿಯ ಜನರ ಭಾವನೆಗಳಿಗೆ ನೋವಾಗುತ್ತದೆಯೆನ್ನುವ ಕಾರಣಕ್ಕಾಗಿ, ದೇವಸ್ಥಾನದ ಹೊರಗೆ ನಿಂತು ಪ್ರಸಾದವನ್ನು ಸ್ಪೀಕರಿಸುತ್ತಿದ್ದಾರೆ. ‘ತಾನು ದಲಿತನಾಗಿರುವ ಕಾರಣದಿಂದಲೇ ತನಗೆ ಕೇಂದ್ರದಲ್ಲಿ ಸಚಿವ ಸ್ಥಾನವನ್ನು ನಿರಾಕರಿಸಲಾಗಿದೆ’ ಎಂದು ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ದಲಿತರು ಅದೆಷ್ಟು ಶ್ರೀಮಂತರಾಗಿದ್ದರೂ ಅವರಿಗೆ ದೇವಸ್ಥಾನದಲ್ಲಿ ಸಮಾನ ಪಂಕ್ತಿಯಲ್ಲಿ ಕುಳ್ಳಿರಿಸಲಾಗುವುದಿಲ್ಲ. ಕ್ರೀಮಿಲೇಯರ್ ಬಗ್ಗೆ ಸುಪ್ರೀಂಕೋರ್ಟ್ ಮಾತನಾಡುವ ಸಂದರ್ಭದಲ್ಲಿ, ಈ ದೇಶದ ಜಾತೀಯತೆ, ಅಸ್ಪಶ್ಯತೆಯನ್ನು ನಿವಾರಿಸಲು ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸೂಚನೆಗಳನ್ನು ನೀಡಬೇಕಾಗಿತ್ತು. ಅಸ್ಪಶ್ಯತೆಯ ವಿರುದ್ಧದ ಕಾನೂನು ಗಳನ್ನು ಬಿಗಿಯಾಗಿಸುವ ಮತ್ತು ಶಾಶ್ವತವಾಗಿ ಜಾತಿ ಅಸಮಾನತೆಯನ್ನು ಇಲ್ಲವಾಗಿಸುವ ಬಗ್ಗೆಯೂ ನಿರ್ದೇಶನಗಳನ್ನು ನೀಡಬೇಕಾಗಿತ್ತು.

ಸದ್ಯಕ್ಕೆ ಬೆಣ್ಣೆ, ತುಪ್ಪ ತಿನ್ನುತ್ತಿರುವ ಮೇಲ್‌ಜಾತಿಯ ಬಲಾಢ್ಯ ಸಮುದಾಯಗಳು ಮೀಸಲಾತಿಗಾಗಿ ಬೀದಿಗಿಳಿದಿರುವ ದಿನಗಳು ಇವು. ಪಟೇಲರು, ಗುಜ್ಜಾರರು, ಜಾಟರು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಈಗಾಗಲೇ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿದವರು. ಆದರೆ ತಮ್ಮ ಜನಬಲ, ರಾಜಕೀಯ ಬಲ, ಆರ್ಥಿಕ ಬಲಗಳನ್ನು ಮುಂದಿಟ್ಟು ಮೀಸಲಾತಿಗಾಗಿ ಸರಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಇದೇ ಹೊತ್ತಿಗೆ, ಯಾವ ಹೋರಾಟವೂ ಇಲ್ಲದೆ ಮೇಲ್‌ಜಾತಿಯ ಬಡವರು ಅಂದರೆ ಮಾಸಿಕ 60,000 ರೂಪಾಯಿ ದುಡಿಯುವ ತುಪ್ಪ ತಿನ್ನುತ್ತಿರುವ ಬಡವರಿಗೆ ಸರಕಾರ ಶೇ. 10 ಮೀಸಲಾತಿಯನ್ನು ನೀಡಿದೆ. ಇಂತಹ ಹೊತ್ತಿನಲ್ಲಿ ಸುಪ್ರೀಂಕೋರ್ಟ್‌ಗೆ ಬೆರಳೆಣಿಕೆಯ ದಲಿತರ ಮೀಸಲಾತಿಯ ತಟ್ಟೆಯಲ್ಲಿರುವ ಕೆನೆಯ ಮೇಲೆ ಕಣ್ಣು ಬಿದ್ದಿರುವುದು ವಿಪರ್ಯಾಸವೇ ಸರಿ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News