ವಾಹನಗಳ ದಟ್ಟಣೆಯ ದುಷ್ಪರಿಣಾಮ

Update: 2024-09-24 05:19 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದ ರಾಜಧಾನಿ ದಿಲ್ಲಿ, ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ನಮ್ಮ ಬಹುತೇಕ ನಗರಗಳು ವಾಹನಗಳ ದಟ್ಟಣೆಯಿಂದ ತತ್ತರಿಸಿ ಹೋಗಿವೆ. ಅನೇಕ ಕಡೆ ಅಪಘಾತಕ್ಕೆ ಈ ವಾಹನಗಳ ದಟ್ಟಣೆಯೂ ಕಾರಣ ಎಂದರೆ ತಪ್ಪಾಗಲಾರದು. ಈ ವಾಹನ ದಟ್ಟಣೆಗೆ ಅಗತ್ಯಕ್ಕಿಂತ ಹೆಚ್ಚು ವಾಹನಗಳಿರುವುಗಿದೆ. ಈಗ ನಗರ ಪ್ರದೇಶದ ಹಲವೆಡೆ ಮೂವರು ಸದಸ್ಯರನ್ನು ಹೊಂದಿರುವ ಕುಟುಂಬಗಳಲ್ಲೂ ಮೂರು ಕಾರುಗಳು ಹಾಗೂ ಮೂರು ದ್ವಿ ಚಕ್ರ ವಾಹನಗಳು ಇರುತ್ತವೆ. ಒಂದು ಐದಾರು ಸೀಟಿನ ದೊಡ್ಡ ವಾಹನದಲ್ಲಿ ಒಬ್ಬರೇ ಓಡಾಡುತ್ತಿರುತ್ತಾರೆ. ಇದರಿಂದ ರಸ್ತೆಗಳಲ್ಲಿ ವಿಪರೀತ ವಾಹನ ದಟ್ಟಣೆಯಾಗಿ ಅಪಘಾತಗಳು ಪದೇ ಪದೇ ಸಂಭವಿಸುತ್ತವೆ. ಈ ಬಗ್ಗೆ ಸರಕಾರ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜನರು ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವಂತೆ ಮನವೊಲಿಸಬೇಕು ಹಾಗೂ ಜನಪ್ರಿಯ ಗೊಳಿಸುವಂತೆ ಮಾಡಬೇಕು.

ಬೆಂಗಳೂರಿನಲ್ಲಂತೂ ವಾಹನಗಳ ಸಂಖ್ಯೆ ಮಿತಿ ಮೀರಿದೆ. ಪ್ರತಿ ದಿನ ಅಂದಾಜು ಎರಡು ಸಾವಿರ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಈ ನಗರದ ಜನಸಂಖ್ಯೆ 1.5 ಕೋಟಿಗಿಂತ ಹೆಚ್ಚಿಗಿದೆ. ವಾಹನಗಳ ಸಂಖ್ಯೆಯೂ 1 ಕೋಟಿಗಿಂತ ಹೆಚ್ಚಿಗಿದೆ. ಸಾರ್ವಜನಿಕ ವಾಹನಗಳಿಗಿಂತ ಸ್ವಂತಕ್ಕೊಂದು ವಾಹನವಿರಲಿ ಎಂದು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೊಸ ವಾಹನಗಳನ್ನು ಭರಾಟೆಯಿಂದ ಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಬ್ಯಾಂಕುಗಳು ಯಾವ ಹೆಚ್ಚಿನ ಷರತ್ತುಗಳಿಲ್ಲದೆ ಸಾಲ ಕೊಡುವುದರಿಂದ ಸಾರ್ವಜನಿಕರು ಪೈಪೋಟಿಯಿಂದ ವಾಹನಗಳನ್ನು ಖರೀದಿಸುತ್ತಿದ್ದಾರೆ. ಆದಾಯ ಹೆಚ್ಚುತ್ತಿದ್ದಂತೆ ಕೆಲವರು ಸ್ಥಳೀಯ ಉಪಯೋಗಕ್ಕೆ ಒಂದು ವಾಹನ, ದೂರದ ಪ್ರಯಾಣಕ್ಕೆ ಇರಲೆಂದು ಐಷಾರಾಮಿ, ಸುಸಜ್ಜಿತ ದೊಡ್ಡ ವಾಹನಗಳನ್ನು ಖರೀದಿಸುತ್ತಿದ್ದಾರೆ. 1923-24ರ ವರ್ಷದಲ್ಲಿ ನಿತ್ಯ ಎರಡು ಸಾವಿರ ವಾಹನಗಳು ನೋಂದಣಿಯಾಗಿವೆ. ಅವುಗಳಲ್ಲಿ ಸುಮಾರು 1,300 ದ್ವಿಚಕ್ರ ವಾಹನಗಳು, 500 ಕಾರುಗಳು ಸೇರಿವೆ.

ಸಾರಿಗೆ ಇಲಾಖೆಯ ದಾಖಲೆಗಳ ಪ್ರಕಾರ ಕಳೆದ ಮೇ ತಿಂಗಳ ಕೊನೆಗೆ ಬೆಂಗಳೂರಿನಲ್ಲಿ 78 ಲಕ್ಷ ದ್ವಿಚಕ್ರ ವಾಹನಗಳು, 23.9 ಲಕ್ಷ ಕಾರುಗಳಿವೆ. ಹೀಗಾಗಿ ವಾಹನಗಳ ಸಂಖ್ಯೆ 1.16 ಕೋಟಿಯನ್ನು ದಾಟಿದೆ. ಕಳೆದ ವರ್ಷ 1.9 ಲಕ್ಷ ವಾಹನಗಳಿದ್ದು ಒಂದೇ ವರ್ಷದಲ್ಲಿ 7 ಲಕ್ಷ ವಾಹನಗಳು ಹೊಸದಾಗಿ ಸೇರ್ಪಡೆಯಾಗಿವೆ. ಸಾರಿಗೆ ಹಾಗೂ ಸಾರಿಗೇತರ ವಾಹನಗಳ ಸಂಖ್ಯೆ ಒಟ್ಟು 1.16 ಕೋಟಿಗಿಂತ ಹೆಚ್ಚಾಗಿದೆ. 2022-23ರಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿನಿತ್ಯ 1,400 ಹೊಸ ವಾಹನಗಳು ನೋಂದಣಿಯಾಗುತ್ತಿದ್ದವು. 2022ರ ಹಿಂದೆ ಕೋವಿಡ್ ಪರಿಣಾಮವಾಗಿ ವಾಹನಗಳ ಮಾರಾಟ ಪ್ರಮಾಣವು ಇಳಿಮುಖವಾಗಿತ್ತು. ಈಗ ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿಯೂ ಮಹಾನಗರದ ಜನತೆ ಸ್ವಂತದ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ.

ವಿಪರೀತ ವಾಹನ ದಟ್ಟಣೆಯಿಂದಾಗಿ ವಾಯುಮಾಲಿನ್ಯವೂ ಉಂಟಾಗುತ್ತಿದೆ.ವಾಯುಮಾಲಿನ್ಯದಿಂದಾಗಿ ಜಗತ್ತಿನಲ್ಲಿ ಪ್ರತಿವರ್ಷ ಎಪ್ಪತ್ತು ಲಕ್ಷ ಮಂದಿ ಅಸು ನೀಗುತ್ತಿದ್ದಾರೆ. ಇದರಲ್ಲಿ ಆಫ್ರಿಕಾ ಮತ್ತು ಏಶ್ಯದ ಜನರ ಸಂಖ್ಯೆ ಹೆಚ್ಚಾಗಿದೆ. ವಾಯುಮಾಲಿನ್ಯದಿಂದಾಗಿ ಶ್ವಾಸಕೋಶ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ರಾಜಧಾನಿ ದಿಲ್ಲಿಯಲ್ಲಿ ಉಸಿರಾಡುವ ಗಾಳಿಯೂ ಮಲಿನಗೊಂಡು ಆಗಾಗ ವಾಹನ ಸಂಚಾರದ ಮೇಲೆ ಸರಕಾರ ಕಡಿವಾಣ ಹಾಕುತ್ತಲೇ ಇದೆ. ಬೆಂಗಳೂರು ಕೂಡ ಇದಕ್ಕೆ ಹೊರತಾಗಿಲ್ಲ. ಬೆಂಗಳೂರು ಕೂಡಾ ದೇಶದ ಅತ್ಯಂತ ಕಲುಷಿತ ನಗರಗಳಲ್ಲೊಂದು ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ವಾಹನಗಳ ಸಂಖ್ಯೆಯೇನೋ ಹೆಚ್ಚಾಗುತ್ತಲೇ ಇದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ತಕ್ಕಂತೆ ಸುರಕ್ಷಿತವಾದ ರಸ್ತೆ ಸೌಕರ್ಯ ನಮ್ಮ ನಗರಗಳಲ್ಲಿ ಇಲ್ಲ. ನಮ್ಮ ನಗರ, ಪಟ್ಟಣಗಳಲ್ಲಿ ನಿರ್ವಹಣೆಯಿಲ್ಲದ ರಸ್ತೆಗಳು ಕಿತ್ತು ಹೋದ ಡಾಂಬರು ಹಾಗೂ ಅವೈಜ್ಞಾನಿಕ ಜಾಮರ್‌ಗಳು, ಅಪಾಯಕಾರಿ ತಿರುವುಗಳು ಹೀಗೆ ನಾನಾ ಕಾರಣಗಳಿಂದಾಗಿ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಪಾದಚಾರಿ ಮಾರ್ಗದ ಒತ್ತುವರಿಯಿಂದಾಗಿ ಏಕಾಏಕಿ ಮುಖ್ಯರಸ್ತೆಗೆ ನುಗ್ಗುವ ಪಾದಚಾರಿಗಳು, ವಾಹನ ಚಾಲಕರ ಬೇಜವಾಬ್ದಾರಿ ಚಾಲನೆ ಹೀಗೆ ಹಲವಾರು ಕಾರಣಗಳಿಂದಾಗಿಯೂ ಅಪಘಾತಗಳು ಹೆಚ್ಚುತ್ತಲೇ ಇವೆ.

ಆಟೊಮೊಬೈಲ್ ಉದ್ಯಮಗಳನ್ನು ಬದುಕಿಸಲು ನಮ್ಮ ದೇಶದ ಜನಸಾಮಾನ್ಯರ ಅಮೂಲ್ಯ ಪ್ರಾಣಗಳನ್ನು ಬಲಿ ಕೊಡುವುದು ಬೇಡ. ಆಟೊಮೊಬೈಲ್ ಉದ್ದಿಮೆಯೂ ಉಳಿಯಬೇಕು. ದೇಶದ ಜನರ ಸಂಚಾರಿ ಬದುಕು ಸುರಕ್ಷಿತವಾಗಿಯೂ ಇರಬೇಕು. ಈ ನಿಟ್ಟಿನಲ್ಲಿ ರಸ್ತೆ ಅಪಘಾತಗಳನ್ನು ತಡೆಯಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ವಿಶ್ವದಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಈ ಕುರಿತು ಅಧ್ಯಯನ ನಡೆಸಲಾದ ಐವತ್ತಾರು ದೇಶಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಮೆರಿಕ ದೇಶಗಳಿವೆ. ಅತ್ಯಂತ ಹೆಚ್ಚು ಸುರಕ್ಷಿತ ರಸ್ತೆಗಳನ್ನು ಹೊಂದಿರುವ ರಾಷ್ಟ್ರಗಳ ಪೈಕಿ ನಾರ್ವೆ ಮೊದಲ ಸ್ಥಾನದಲ್ಲಿದೆ. ಜಪಾನ್ ಹಾಗೂ ಸ್ವೀಡನ್‌ಗಳು ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

ಸರಕಾರ ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಅಸು ನೀಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇವೆ ಎಂಬುದನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಅವರೇ ಒಪ್ಪಿಕೊಂಡಿದ್ದಾರೆ. ರಸ್ತೆ ಅಪಘಾತಗಳನ್ನು ತಡೆಯಲು ಅಗತ್ಯದ ಕ್ರಮಗಳನ್ನು ಕೈಗೊಳ್ಳುವುದಾಗಿ ಸಚಿವರು ಸಂಸತ್ತಿನಲ್ಲಿ ಭರವಸೆ ನೀಡಿದ್ದಾರೆ. ಸಾರ್ವಜನಿಕರು ಹಾಗೂ ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು. ಅಪಘಾತಗಳಿಗೆ ಕಾರುಗಳು ಮಾತ್ರವಲ್ಲ; ದ್ವಿಚಕ್ರ ವಾಹನ ಚಾಲಕರ ತರಾತುರಿಯೂ ಕಾರಣ ಎಂದರೆ ತಪ್ಪಲ್ಲ. ಅಪಘಾತಗಳನ್ನು ತಡೆಯಲು ಸರಕಾರ ಮಾತ್ರವಲ್ಲ ಸಾರ್ವಜನಿಕರು ಕೂಡ ಎಚ್ಚರ ವಹಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ವಾಹನಗಳ ಸಂಖ್ಯೆ ಕಡಿಮೆಯಾಗಬೇಕು. ನಮ್ಮ ಮಹಾನಗರಗಳಲ್ಲಿ ಜನಸಂಖ್ಯೆಯನ್ನು ಮೀರಿ ವಾಹನಗಳ ಸಂಖ್ಯೆ ಬೆಳೆಯುತ್ತಿದೆ.ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದು ಕೊಡುವ ಮೂಲಗಳಲ್ಲಿ ಹೊಸ ವಾಹನಗಳ ನೋಂದಣಿಯೂ ಒಂದಾಗಿದೆ. ನಗರಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ರಾಜ್ಯ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುತ್ತದೆ.ಆದರೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಹದಗೆಡುತ್ತಿದೆ. ಜೊತೆಗೆ ಪರಿಸರ ಮಾಲಿನ್ಯವೂ ಹೆಚ್ಚಾಗುತ್ತದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಬೊಕ್ಕಸಕ್ಕೆ ಬರುವ ಹಣಕ್ಕಿಂತ ಜನರ ಆರೋಗ್ಯ ಮುಖ್ಯ ಎಂಬುದನ್ನು ಸರಕಾರ ಅರಿತುಕೊಳ್ಳಬೇಕು ಹಾಗೂ ಸಾರ್ವಜನಿಕ ಸಾರಿಗೆಯನ್ನು ಯಾವುದೇ ಕೊರತೆಯಾಗದಂತೆ ಬಲಗೊಳಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News