ಮತ್ತೆ ಸದ್ದು ಮಾಡುತ್ತಿರುವ ಚುನಾವಣಾ ಬಾಂಡ್

Update: 2024-09-30 05:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

'ಬಿಜೆಪಿಯ ಸತತ ಪ್ರಯತ್ನದ ಫಲ'ವಾಗಿ ಚುನಾವಣಾ ಬಾಂಡ್ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯದ ಹಲವು ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೇಲ್ನೋಟಕ್ಕೆ ಇದು ಸರಕಾರೇತರ ಸಂಸ್ಥೆಯ ಕಾರ್ಯಕರ್ತರ ಹೋರಾಟದ ಫಲವಾಗಿದ್ದರೂ, ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಇದೀಗ ತುರ್ತಾಗಿ ಅನುಮತಿ ನೀಡುವುದರ ಹಿಂದೆ ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳೂ ಪರೋಕ್ಷ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ, ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಲೋಕಸಭಾ ಚುನಾವಣೆಗೆ ಮುನ್ನವೇ ಘೋಷಿಸಿದ್ದು, ಇದನ್ನು ಈಗಾಗಲೇ ರದ್ದುಗೊಳಿಸಿದೆ. ಚುನಾವಣಾ ಬಾಂಡ್‌ಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ತೀರ್ಪು ಕೇಂದ್ರ ಸರಕಾರಕ್ಕೆ ಬಹುದೊಡ್ಡ ಹಿನ್ನಡೆಯಾಗಿತ್ತು.ಚುನಾವಣಾ ಬಾಂಡ್ ಮೂಲಕ ಕೇಂದ್ರ ಸರಕಾರ ಹಲವು ಬೃಹತ್ ಕಂಪೆನಿಗಳನ್ನು ತನ್ನ ಪಕ್ಷಕ್ಕೆ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದೆ ಎನ್ನುವ ವ್ಯಾಪಕ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಐಟಿ, ಈ.ಡಿ. ದಾಳಿಗೊಳಗಾಗಿರುವ ಹಲವು ಸಂಸ್ಥೆಗಳು ಬಳಿಕ ಕೋಟ್ಯಂತರ ರೂ. ಬೆಲೆಯ ಬಿಜೆಪಿಯ ಚುನಾವಣಾ ಬಾಂಡ್‌ನ್ನು ಖರೀದಿ ಮಾಡಿರುವುದನ್ನು ಮಾಧ್ಯಮಗಳು ಬಹಿರಂಗ ಪಡಿಸಿದ್ದವು. ಇತರ ಪಕ್ಷಗಳ ಚುನಾವಣಾ ಬಾಂಡ್ ನ್ನು ಖರೀದಿಸಿದ ಕಂಪೆನಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪವೂ ಕೇಂದ್ರ ಸರಕಾರದ ಮೇಲಿದ್ದವು. ಚುನಾವಣಾ ಬಾಂಡ್ ಖರೀದಿಸಿದ ಕಂಪೆನಿಗಳಿಗೆ ಹಲವು ಮಹತ್ವದ ಯೋಜನೆಗಳ ಗುತ್ತಿಗೆಗಳನ್ನು ಕೊಟ್ಟಿರುವುದು ಕೂಡ ಅನುಮಾನಗಳಿಗೆ ಕಾರಣವಾಗಿದ್ದವು. ಇವೆಲ್ಲದರ ಬೆನ್ನಿಗೆ, ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ನ್ನು ರದ್ದುಗೊಳಿಸಿತು. ವಿರೋಧ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಇದನ್ನು ಬಳಸಿಕೊಂಡವಾದರೂ, ಚುನಾವಣಾ ಫಲಿತಾಂಶದ ಬಳಿಕ ಬಹುತೇಕ ಮರೆತು ಬಿಟ್ಟಿದ್ದವು.

ಚುನಾವಣಾ ಬಾಂಡ್ ಅಕ್ರಮಗಳಿಗೆ ಸಂಬಂಧಿಸಿ ಕೇಂದ್ರ ಸರಕಾರದ ವಿರುದ್ಧ ಗಂಭೀರ ಆಂದೋಲನವೊಂದನ್ನು ಹುಟ್ಟು ಹಾಕಲು ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾದವು. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ರಾಜಕೀಯೇತರ ಸಂಸ್ಥೆಯೊಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಸರಕಾರೇತರ ಸಂಸ್ಥೆ ಕಳೆದ ಮಾರ್ಚ್‌ನಿಂದಲೇ ಎಫ್‌ಐಆರ್ ದಾಖಲಿಸುವ ಪ್ರಯತ್ನವನ್ನು ನಡೆಸಿತ್ತು. ಚುನಾವಣಾ ಬಾಂಡ್‌ ಗೆ ಸಂಬಂಧಿಸಿ ಸುಮಾರ್ 15 ದೂರುಗಳನ್ನು ಅದು ಸಲ್ಲಿಸಿತ್ತಾದರೂ, ಕೆಳ ಹಂತದ ಪೊಲೀಸ್ ಅಧಿಕಾರಿಗಳು ಈ ದೂರನ್ನು ದಾಖಲಿಸಲು ಹಿಂದೇಟು ಹಾಕಿದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲು ಅನಿವಾರ್ಯವಾಗಿ ಸಂಸ್ಥೆ ನ್ಯಾಯಾಲಯದ ಮೆಟ್ಟಿ ಲೇರಿತು. ರಾಜ್ಯದ ಕಾಂಗ್ರೆಸ್ ನಾಯಕರಿಗೆ ಈ ಎಫ್‌ಐಆರ್ ಬಗ್ಗೆ ವಿಶೇಷ ಆಸಕ್ತಿಯೇನೂ ಇದ್ದಿರಲಿಲ್ಲ. ಬಹುಶ: ಬಿಜೆಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಹಗರಣವನ್ನು ಮುಂದಿಟ್ಟುಕೊಂಡು ರಾಜ್ಯಮಟ್ಟದಲ್ಲಿ ಗದ್ದಲಗಳನ್ನು ಸೃಷ್ಟಿಸದೇ ಇದ್ದಿದ್ದರೆ, ಇಂದು ವಿತ್ತ ಸಚಿವೆ ಮತ್ತು ಬಿಜೆಪಿಯ ರಾಜ್ಯ ನಾಯಕರ ವಿರುದ್ಧ ದಾಖಲಾಗಿರುವ ಎಫ್‌ ಐಆರ್ ಬಗ್ಗೆ ಕಾಂಗ್ರೆಸ್ ಇಷ್ಟೊಂದು ಆಸಕ್ತಿಯಿಂದ ಪತ್ರಿಕಾಗೋಷ್ಠಿಯನ್ನು ಮಾಡುತ್ತಲೂ ಇರಲಿಲ್ಲ.

ರಾಜ್ಯದಲ್ಲಿ ಸರಕಾರ ರಚನೆಯಾದ ಆರಂಭದಲ್ಲಿ "ಬಿಜೆಪಿ ನಾಯಕರ ವಿರುದ್ಧದ ಎಲ್ಲ ಪ್ರಕರಣಗಳನ್ನು ವಿಚಾರಣೆಗೊಳಪಡಿಸುತ್ತೇವೆ'' ಎಂದು ಅಬ್ಬರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ ತಣ್ಣಗಾಗಿದ್ದರು. ವಿಪರ್ಯಾಸವೆಂದರೆ, ಉಡುಪಿಯಲ್ಲಿ ಪರಶುರಾಮನ ನಕಲಿ ಪ್ರತಿಮೆಗೆ ಸಂಬಂಧಿಸಿ ಬಿಜೆಪಿಯ ಕಾರ್ಯಕರ್ತರೇ ಬೀದಿಯಲ್ಲಿ ನಿಂತು ಬಿಜೆಪಿ ಮುಖಂಡ ಸುನೀಲ್ ಕುಮಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ಈ ಬಗ್ಗೆ ತನಿಖೆಗೆ ಸರಕಾರ ಆಸಕ್ತಿ ವಹಿಸಲಿಲ್ಲ. ಆದರೆ, ಯಾವಾಗ ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರದ ಸಣ್ಣ ಪುಟ್ಟ ಹಗರಣಗಳನ್ನೂ ಬಿಡದೆ ಜನರ ಮುಂದಿಟ್ಟು ಬೀದಿ ರಂಪ ಮಾಡತೊಡಗಿದರೋ, ಆಗ ರಾಜ್ಯ ಸರಕಾರಕ್ಕೆ ಬಿಜೆಪಿ ನಾಯಕರ ಹಿಂದಿನ ಹಗರಣಗಳು ನೆನಪಾದವು. ಸರಕಾರ ರಚನೆಯಾದ ಒಂದು ವರ್ಷದ ಬಳಿಕ ಏಕಾಏಕಿ ಬೆಂಗಳೂರಿನಲ್ಲಿ ನಕಲಿ ಪರಶುರಾಮ ಪ್ರತಿಮೆಯ ವಿರುದ್ದ ಪ್ರತಿಭಟನೆ ನಡೆದು, ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡಿತು. 'ಸರಕಾರದ ಹಗರಣದ ವಿರುದ್ದ ಪ್ರತಿಭಟನೆ ಮಾಡಿದರೆ ಬಿಜೆಪಿಯ ಹಳೆಯ ಪ್ರಕರಣಗಳನ್ನು ಕೆದಕಬೇಕಾಗುತ್ತದೆ' ಎಂದು ಕಾಂಗ್ರೆಸ್ ಮುಖಂಡರು ಪದೇ ಪದೇ ಎಚ್ಚರಿಸಿದ ಬಳಿಕವೂ ಬಿಜೆಪಿ ಸುಮ್ಮನಿರದೇ ಇದ್ದಾಗ ಬಿಜೆಪಿಯ ಹಗರಣಗಳ ಧೂಳು ಕೊಡವುದು ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಅನಿವಾರ್ಯವಾಯಿತು.

ಬಹುಶಃ ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಯ ರಾಜೀನಾಮೆಗೆ ಬಿಜೆಪಿ ಒತ್ತಾಯಿಸದೇ ಇರುತ್ತಿದ್ದರೆ, ಚುನಾವಣಾ ಬಾಂಡ್ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವೆಯ ವಿರುದ್ಧ ಎಫ್‌ಐಆರ್ ದಾಖಲಿಸಲು ಇಷ್ಟು ಸುಲಭದಲ್ಲಿ ಅನುಮತಿ ಸಿಗುತ್ತಿರಲಿಲ್ಲ. ಈ ಕಾರಣಕ್ಕಾಗಿಯಾದರೂ ನಾವು ರಾಜ್ಯ ಬಿಜೆಪಿ ನಾಯಕರನ್ನು ಅಭಿನಂದಿಸಬೇಕು. ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯ ವಿಚಾರಣೆಗೆ ರಾಜ್ಯಪಾಲರು ಮಾತ್ರವಲ್ಲ, ನಮ್ಮ ನ್ಯಾಯಾಲಯವೂ ಅತ್ಯಾಸಕ್ತಿಯನ್ನು ವಹಿಸಿತು. ಆ ಆಸಕ್ತಿ ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧವೂ ಇದ್ದಿದ್ದರೆ, ಇಂದು ಹಲವು ಬಿಜೆಪಿ ನಾಯಕರ ಮೇಲೆ ಎಫ್‌ಐಆರ್‌ಗಳು ದಾಖಲಾಗುತ್ತಿದ್ದವು, ಬಿಜೆಪಿಯ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳಸಿಕೊಂಡಿತಾದರೂ, ಬಿಜೆಪಿಯ ನಾಯಕರ ಮೇಲೆ ಎಫ್‌ಐಆರ್ ದಾಖಲಿಸಿ ಅದನ್ನು ವೈಯಕ್ತಿಕವಾಗಿಸುವುದು ಅವರಿಗೆ ಬೇಡವಾಗಿತ್ತು. ಆದರೆ ಇಂದು ಬಿಜೆಪಿಯು ಇಡೀ ಕಾಂಗ್ರೆಸ್ ಸರಕಾರವನ್ನು ಗುರಿ ಮಾಡದೇ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ಪ್ರತಿಭಟನೆಯನ್ನು ನಡೆಸುತ್ತಿದೆ. ಹಾಗೆಂದು ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೆ ಹೊಣೆಗಾರಿಕೆಯೇ ಇಲ್ಲ ಎನ್ನುವಂತಿಲ್ಲ. ಈ ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರಕ್ಕೆ ಹೋಲಿಸಿದರೆ, ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಪಡೆಯುವುದು ನ್ಯಾಯವಲ್ಲ ಎನ್ನುವುದು ಒಂದು ತರ್ಕವಾಗಿದೆ.

ವಿತ್ತ ಸಚಿವರ ಮೇಲಿನ ಎಫ್‌ಐಆರ್ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಬೆನ್ನಿಗೇ ಕುಮಾರಸ್ವಾಮಿಯ ಹಗರಣಗಳೂ ಮುನ್ನೆಲೆಗೆ ಬರುತ್ತಿವೆ. ಸಿದ್ದರಾಮಯ್ಯ ವಿರುದ್ದ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ "ನಾನು ಅವರ ರಾಜೀನಾಮೆಗೆ ಒತ್ತಾಯಿಸುವುದಿಲ್ಲ'' ಎಂದು ಕುಮಾರಸ್ವಾಮಿ ಬಿಳಿ ಬಾವುಟ ಹಾರಿಸಿರುವುದು ಇದೇ ಕಾರಣಕ್ಕೆ. ಒಟ್ಟಿನಲ್ಲಿ, ಸಿದ್ದರಾಮಯ್ಯ ಮೇಲಿರುವ ಮುಡಾ ಹಗರಣ, ಈ ರಾಜ್ಯದ ಮಾತ್ರವಲ್ಲ ದೇಶದ ಎಲ್ಲ ಭ್ರಷ್ಟರನ್ನು ಏಕಾಏಕಿ ಮುನ್ನೆಲೆಗೆ ತಂದಿದೆ. ಇದರ ಎಲ್ಲ ಹೆಗ್ಗಳಿಕೆಯೂ ವಿರೋಧ ಪಕ್ಷದಲ್ಲಿ ಕೂತಿರುವ ರಾಜ್ಯ ಬಿಜೆಪಿಯ ನಾಯಕರಿಗೇ ಸಲ್ಲಬೇಕೆ ಹೊರತು, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರಕಾರಕ್ಕಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಸಂದರ್ಭದಲ್ಲಿ, ಎಫ್‌ಐಆರ್ ದಾಖಲಾಗಿದೆ ಎನ್ನುವ ಕಾರಣಕ್ಕಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುವುದಾದರೆ, ವಿತ್ತ ಸಚಿವೆ ನಿರ್ಮಲಾ ಅವರೂ ರಾಜೀನಾಮೆ ನೀಡಬೇಕಾಗುತ್ತದೆ. ತನ್ನ ಎಲೆಯಲ್ಲಿ ಸತ್ತ ಕತ್ತೆಯನ್ನಿಟ್ಟುಕೊಂಡು ಕಾಂಗ್ರೆಸ್ ಎಲೆಯಲ್ಲಿರುವ ನೊಣದ ಬಗ್ಗೆ ಬಿಜೆಪಿ ಮಾತನಾಡಿದರೆ, ಅದನ್ನು ಯಾರೂ ಗಂಭೀರವಾಗಿ ಸ್ವೀಕರಿಸಲಾರರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News