ಚುನಾವಣಾ ಬಾಂಡ್: ಕೇಂದ್ರ ಸರಕಾರದ ‘ಕಪ್ಪು ಮುಖ’
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಚುನಾವಣಾ ಬಾಂಡ್’ ಎನ್ನುವುದು ಪ್ರಜಾಸತ್ತೆಯನ್ನು ಹಣದ ಮೂಲಕ ಕೊಂಡು ಕೊಳ್ಳುವ-ಕೊಲ್ಲುವ ಅತಿ ದೊಡ್ಡ ಅಕ್ರಮ ಎನ್ನುವುದು ಸುಪ್ರೀಂಕೋರ್ಟ್ ಆದೇಶದಿಂದ ಸಾಬೀತಾಗಿದೆ. ಚುನಾವಣಾ ಬಾಂಡ್ ಅಸಾಂವಿಧಾನಿಕವಾಗಿದೆ ಎಂದು ಗುರುವಾರ ಬಣ್ಣಿಸಿರುವ ಸುಪ್ರೀಂ ಕೋರ್ಟ್, ಯೋಜನೆಯನ್ನು ರದ್ದುಗೊಳಿಸಿದೆ. ಇದು ದೇಣಿಗೆದಾರರು ಮತ್ತು ರಾಜಕೀಯ ಪಕ್ಷಗಳ ನಡುವೆ ಒಳ ಒಪ್ಪಂದಕ್ಕೆ ಅವಕಾಶ ಮಾಡಿಕೊಡಬಹುದು ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಈ ಆತಂಕವನ್ನು ದೇಶದ ಜನತೆ ಕಳೆದ ನಾಲ್ಕು ವರ್ಷಗಳಿಂದ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಒಂದೆಡೆ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುತ್ತೇನೆ ಎಂದು ಕೊಚ್ಚಿಕೊಳ್ಳುತ್ತಲೇ ಇನ್ನೊಂದೆಡೆ ಸರಕಾರದ ನೇತೃತ್ವದಲ್ಲೇ ಬೃಹತ್ ಕಾರ್ಪೊರೇಟ್ ದೊರೆಗಳಿಂದ ಅಕ್ರಮವಾಗಿ ದೇಣಿಗೆಯನ್ನು ಸ್ವೀಕರಿಸುವ ಸರಕಾರದ ಆಷಾಡಭೂತಿತನಕ್ಕೆ ಸುಪ್ರೀಂಕೋರ್ಟ್ ತಪರಾಕಿ ನೀಡಿದೆ. ಚುನಾವಣಾ ಬಾಂಡ್ನ್ನು ಅಸಾಂವಿಧಾನಿಕ, ಮಾಹಿತಿ ಹಕ್ಕಿನ ಉಲ್ಲಂಘನೆ ಎಂದು ಬಣ್ಣಿಸಿರುವ ಸರ್ವೋಚ್ಚ ನ್ಯಾಯಾಲಯ, ಮಾರ್ಚ್ 13ರಂದು ಎಲ್ಲ ವಿವರಗಳನ್ನು ವೆಬ್ಸೈಟ್ನಲ್ಲಿ ಜಾಹೀರುಗೊಳಿಸುವಂತೆ ರಾಜಕೀಯ ಪಕ್ಷಗಳಿಗೆ ಆದೇಶಿಸಿದೆ. ಅಷ್ಟೇ ಅಲ್ಲದೆ ಚುನಾವಣಾ ಬಾಂಡ್ಗಳನ್ನು ನೀಡುವುದನ್ನು ತಕ್ಷಣ ನಿಲ್ಲಿಸುವಂತೆ ನ್ಯಾಯಾಲಯವು ಭಾರತೀಯ ಸ್ಟೇಟ್ ಬ್ಯಾಂಕ್ಗೆ ನಿರ್ದೇಶನವನ್ನೂ ನೀಡಿದೆ. 2019 ಎಪ್ರಿಲ್ 12ರಿಂದ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆಯೂ ಅದು ಬ್ಯಾಂಕ್ಗೆ ಸೂಚಿಸಿದೆ. ಈ ದೇಶದ ಪ್ರಜಾಸತ್ತೆಯ ಅಳಿವು ಉಳಿವಿನ ದೃಷ್ಟಿಯಿಂದ ಇದೊಂದು ಮಹತ್ತರ ತೀರ್ಪಾಗಿದೆ.
ದೇಶವನ್ನು ಕಪ್ಪು ಹಣದಿಂದ ಮುಕ್ತವಾಗಿಸುತ್ತೇನೆ ಎಂದು ನೋಟು ನಿಷೇಧ ಮಾಡಿದ ನರೇಂದ್ರ ಮೋದಿ, ಕಪ್ಪು ಹಣವನ್ನೆಲ್ಲ ಅಕ್ರಮವಾಗಿ ಬಿಳಿಯಾಗಿಸಲು ಪರೋಕ್ಷವಾಗಿ ಸಹಕರಿಸಿದರು. ಪರಿಣಾಮವಾಗಿ ನೋಟು ನಿಷೇಧದ ಉದ್ದೇಶ ವಿಫಲವಾಯಿತು. ಕಪ್ಪು ಹಣ ಬಹಿರಂಗವಾಗಲೇ ಇಲ್ಲ. ಇದರ ಬೆನ್ನಿಗೇ ಬಿಜೆಪಿ ವಿಶ್ವದಲ್ಲೇ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿತು. ವಿದೇಶದಿಂದ ಕಪ್ಪು ಹಣ ತರುವುದು ಪಕ್ಕಕ್ಕಿರಲಿ, ನೀವು ಕಪ್ಪು ಹಣವನ್ನೆಲ್ಲ ನಮ್ಮ ಪಕ್ಷಕ್ಕೆ ದೇಣಿಗೆ ರೂಪದಲ್ಲಿ ಕೊಡಿ. ಅದನ್ನು ಬಿಳಿಯಾಗಿಸುತ್ತೇನೆ ಎನ್ನುವ ಪರೋಕ್ಷ ಕರೆಯೊಂದಿಗೆ 2017ರಲ್ಲಿ ಜನಪ್ರಾತಿನಿಧ್ಯ ಕಾಯ್ದೆಗೆ ತಿದ್ದು ಪಡಿ ಮಾಡಿ ಚುನಾವಣಾ ಬಾಂಡ್ನ್ನು ಪರಿಚಯಿಸಲಾಯಿತು. ಅಲ್ಲಿಯವರೆಗೆ ಕಾಯ್ದೆಯ ಪ್ರಕಾರ, ವ್ಯಕ್ತಿ ಅಥವಾ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ 20,000 ರೂ. ಗಿಂತ ಹೆಚ್ಚಿದ್ದರೆ ಹೆಸರು ಬಹಿರಂಗಪಡಿಸಬೇಕಾಗಿತ್ತು. ತಿದ್ದು ಪಡಿಯ ಬಳಿಕ 10,000 ರೂ.ನಿಂದ ಒಂದು ಕೋಟಿ ರೂ.ಯವರೆಗಿನ ಮೌಲ್ಯದ ಬಾಂಡ್ಗಳನ್ನು ಖರೀದಿಸಿ ಯಾವುದೇ ಪಕ್ಷಕ್ಕೆ ಗುಟ್ಟಾಗಿ ನೀಡುವ ಅವಕಾಶ ಕಾರ್ಪೊರೇಟ್ ಸಂಸ್ಥೆಗಳಿಗೆ ಸಿಕ್ಕಿತು. ಎಲ್ಲಕ್ಕಿಂತ ಮುಖ್ಯವಾಗಿ ಮಾಹಿತಿ ಹಕ್ಕಿನ ಕಾಯ್ದೆಯ ಅಡಿಯಲ್ಲಿ ದೇಣಿಗೆ ನೀಡುವವರ ಮಾಹಿತಿ ವಿವರಗಳನ್ನು ಕೇಳುವುದಕ್ಕೆ ಜನಸಾಮಾನ್ಯರಿಗೆ ಅವಕಾಶವಿರಲಿಲ್ಲ. ದೇಣಿಗೆ ನೀಡಿದವರ ವಿವರಗಳನ್ನು ಗುಟ್ಟಾಗಿ ಇಡಲಾಗುವ ಅವಕಾಶ ಇಲ್ಲಿದೆ. ರಾಜಕೀಯ ದೇಣಿಗೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವುದಕ್ಕಾಗಿ ಹಾಗೂ ಕಪ್ಪುಹಣ ಸೃಷ್ಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ತಾನು ಚುನಾವಣಾ ಬಾಂಡ್ಗಳನ್ನು ತರುತ್ತಿರುವುದಾಗಿ 2018ರಲ್ಲಿ ಕೇಂದ್ರ ಸರಕಾರ ಹೇಳಿತ್ತು. ಆದರೆ ಪರೋಕ್ಷವಾಗಿ ಇದು ಕಪ್ಪು ಹಣವನ್ನು ಪೋಷಿಸುತ್ತಿತ್ತು. ಮುಖ್ಯವಾಗಿ ಈ ದೇಣಿಗೆಗಳ ಮೂಲಕ ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ಹಣವನ್ನು ಹೂಡಿಕೆ ಮಾಡಿದಂತಾಗುತ್ತಿತ್ತು. ಮತ್ತು ಆ ಮೂಲಕ ಸರಕಾರವನ್ನು ನಿಯಂತ್ರಿಸುವ ಎಲ್ಲ ಅವಕಾಶಗಳು ಅವುಗಳಿಗಿವೆ.
ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಯಾವುದೇ ಉದ್ಯಮದಲ್ಲಾಗಲಿ, ರಾಜಕೀಯ ಪಕ್ಷದಲ್ಲಾಗಲಿ ಲಾಭವಿಲ್ಲದೆ ಹೂಡಿಕೆ ಮಾಡುವುದಿಲ್ಲ. ದೇಣಿಗೆ ನೀಡಲು ರಾಜಕೀಯ ಪಕ್ಷಗಳು ಸಾಮಾಜಿಕೇತರ ಸಂಸ್ಥೆಯಲ್ಲ. ದೇಣಿಗೆಗಳ ಮೂಲಕ ಸರಕಾರ ಚುನಾವಣೆಯನ್ನು ಗೆದ್ದು ಸರಕಾರ ರಚನೆ ಮಾಡಿದರೆ ಸಹಜವಾಗಿಯೇ ದೇಣಿಗೆ ನೀಡಿದ ಸಂಸ್ಥೆಗಳಿಗೆ, ವ್ಯಕ್ತಿಗೆ ಸರಕಾರ ಋಣಿಯಾಗಿರಬೇಕಾಗುತ್ತದೆ. ವಿಪರ್ಯಾಸವೆಂದರೆ, ಯಾವ ಸಂಸ್ಥೆಗಳು ಬಾಂಡ್ಗಳನ್ನು ಖರೀದಿಸಿ ದೇಣಿಗೆ ನೀಡಿವೆ ಎನ್ನುವುದನ್ನು ಗೊತ್ತು ಪಡಿಸಿಕೊಳ್ಳುವ ಹಕ್ಕು ಜನಸಾಮಾನ್ಯರಿಗಿಲ್ಲ. ಆದರೆ ಎಸ್ಬಿಐ ಮೂಲಕ ಕೇಂದ್ರ ಸರಕಾರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ತನಗೆ ದೇಣಿಗೆ ನೀಡಿದವರ ಪರವಾಗಿ ಆಡಳಿತ ನೀತಿಗಳನ್ನು ಜಾರಿಗೊಳಿಸುವುದು ಮಾತ್ರವಲ್ಲ, ಇತರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಸಂಸ್ಥೆಗಳನ್ನು ಬಗ್ಗು ಬಡಿಯುವ ಅವಕಾಶವೂ ಸರಕಾರಕ್ಕಿದೆ. ಅತ್ಯಂತ ಆತಂಕದ ವಿಷಯವೆಂದರೆ, ಈ ದೇಣಿಗೆಯ ಅತಿ ದೊಡ್ಡ ಫಲಾನುಭವಿ ಬಿಜೆಪಿಯಾಗಿದೆ. ಭವಿಷ್ಯದಲ್ಲಿ ಯಾವ ಪಕ್ಷ ಸರಕಾರ ರಚಿಸುತ್ತದೆ ಎಂದು ಉದ್ಯಮ ಪತಿಗಳು ಭಾವಿಸುತ್ತಾರೆಯೋ ಆ ಪಕ್ಷಕ್ಕೆ ಹೆಚ್ಚು ದೇಣಿಗೆಗಳನ್ನು ನೀಡುತ್ತಾರೆ. 2022ರವರೆಗೆ ಮಾರಾಟಗೊಂಡ ಒಟ್ಟು 9,208 ಕೋಟಿ ರೂ. ಮೌಲದ್ಯ ಚುನಾವಣಾ ಬಾಂಡ್ಗಳ ಪೈಕಿ 5,270 ಕೋಟಿ ರೂ. ಮೌಲ್ಯದ ಬಾಂಡ್ಗಳನ್ನು ಬಿಜೆಪಿಯೊಂದೇ ಪಡೆದಿದೆ ಎಂದು ಚುನಾವಣಾ ಆಯೋಗವು ಪ್ರಕಟಿಸಿದೆ. ಅದರೆ ಇಷ್ಟು ಕೋಟಿ ರೂಪಾಯಿಗಳನ್ನು ಉದ್ಯಮಿಗಳು ಸರಕಾರಕ್ಕೆ ಪುಕ್ಕಟೆಯಾಗಿ ನೀಡುತ್ತಾರೆಯೇ? ಅದಕ್ಕೆ ಪ್ರತಿಯಾಗಿ ಸರಕಾರ ಏನನ್ನು ನೀಡಿದೆ ಎನ್ನುವುದು ತನಿಖೆ ನಡೆಯಬೇಡವೇ?
ಚುನಾವಣಾ ಬಾಂಡ್ ಅಕ್ರಮವೆಂದು ಸುಪ್ರೀಂಕೋರ್ಟ್ ಹೇಳಿರುವುದು ಪ್ರಜಾಸತ್ತೆ ಉಳಿವಿನ ಮೊದಲ ಹಂತ. ಬಾಂಡ್ ಅಕ್ರಮವೇ ಆಗಿದ್ದರೆ ಇದರ ಮೂಲಕ ಅತಿ ಹೆಚ್ಚು ಲಾಭ ಪಡೆದುಕೊಂಡ ಬಿಜೆಪಿಯೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಅಷ್ಟೇ ಅಲ್ಲ, ಇದರ ಪೂರ್ಣ ಪ್ರಯೋಜನವನ್ನು ಪಡೆದಿರುವ ಸರಕಾರ ಈವರೆಗೆ ಅಕ್ರಮವಾಗಿ ದೇಣಿಗೆದಾರರಿಗೆ ನೀಡಿರುವ ಸವಲತ್ತು ಏನೇನು ಎನ್ನುವುದರ ತನಿಖೆಯಾಗಬೇಕಾಗುತ್ತದೆ. ಸರಕಾರದ ನೇತೃತ್ವದಲ್ಲಿ ನಡೆದಿರುವ ಈ ಅಕ್ರಮ ಈ ದೇಶದ ಜನರಿಗೆ ಮಾಡಿದ ಅತಿ ದೊಡ್ಡ ವಂಚನೆಯಾಗಿದೆ. ಈ ವಂಚನೆಯಿಂದ ದೇಶಕ್ಕಾಗಿರುವ ಹಾನಿಯೆಷ್ಟು ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಜನತೆಗಿದೆ. ಈ ನಿಟ್ಟಿನಲ್ಲಿ ಬಿಜೆಪಿಗೆ ಹರಿದು ಬಂದಿರುವ ಅತಿ ದೊಡ್ಡ ದೇಣಿಗೆದಾರರು ಸರಕಾರದಿಂದ ಪಡೆದಿರುವ ಸವಲತ್ತುಗಳು ಏನೇನು ಎನ್ನುವುದು ವಿಚಾರಣೆಗೊಳಗಾಗಬೇಕು. ಚುನಾವಣಾ ಬಾಂಡ್ ಅಕ್ರಮ ಎಂದಿರುವ ಸುಪ್ರೀಂಕೋರ್ಟ್ ಈ ತನಿಖೆಯ ನೇತೃತ್ವವನ್ನು ವಹಿಸಿಕೊಂಡಾಗ ಮಾತ್ರ ಚುನಾವಣಾ ಬಾಂಡ್ನ ಹಿಂದಿರುವ ಕಪ್ಪು ಮುಖಗಳ ಇನ್ನಷ್ಟು ವಿವರಗಳು ಬಹಿರಂಗವಾಗಬಹುದು.