ಶೋಷಿತ ಸಮುದಾಯ ಶಿಕ್ಷಣಕ್ಕಾಗಿ ತೆರಬೇಕಾದ ಶುಲ್ಕ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸ್ವಯಂ ಸಾಧನೆಯಿಂದ ಕಲಿತ ವಿದ್ಯೆಗಾಗಿ ತನ್ನ ಹೆಬ್ಬೆರಳನ್ನು ಶುಲ್ಕವಾಗಿ ಕಟ್ಟಿದ ಏಕಲವ್ಯನ ನೆಲ ನಮ್ಮದು. ಕೆಳಜಾತಿಯ ಜನರು ವಿದ್ಯೆ ಕಲಿತರೆ ಅವರ ಕಿವಿಗೆ ಕಾದ ಸೀಸವನ್ನು ಸುರಿಯಬೇಕು ಎನ್ನುವ ಒಂದು ಕಾಲದ ಮನು ಸಂವಿಧಾನದ ಆದೇಶವನ್ನು ಜಾರಿಯಲ್ಲಿಸಲು ಇಂದಿಗೂ ಒಂದು ಗುಂಪು ಪ್ರಯತ್ನಿಸುತ್ತಲೇ ಇದೆ. ಇಲ್ಲಿ ಶಿಕ್ಷಣ ಮೇಲ್‌ಜಾತಿಯ ಹಕ್ಕಾಗಿದ್ದರೆ, ದುಡಿಮೆ, ಗುಲಾಮ ಬದುಕು ಕೆಳಜಾತಿಯ ಹಕ್ಕಾಗಿತ್ತು. ಬರೇ ನೂರು ವರ್ಷಗಳ ಹಿಂದೆ ಈ ದೇಶದ ಶಿಕ್ಷಣದ ಮಟ್ಟ ಹೇಗಿತ್ತು ಎನ್ನುವುದನ್ನು ನಾವು ಅಧ್ಯಯನ ಮಾಡಿದರೆ ಸಾಕು, ಶಿಕ್ಷಣವನ್ನು ಈ ನೆಲದ ಕೆಳಜಾತಿ, ಕೆಳವರ್ಗದಿಂದ ಹೇಗೆ ಶತಮಾನಗಳಿಂದ ಮುಚ್ಚಿಡುತ್ತಾ ಬರಲಾಗಿತ್ತು ಎನ್ನುವುದು ಅರಿವಿಗೆ ಬರುತ್ತದೆ. ದೇಶ ಸ್ವತಂತ್ರಗೊಂಡು ಸಂವಿಧಾನ ಜಾರಿಗೆ ಬಂದ ಬಳಿಕವಷ್ಟೇ ಈ ನೆಲದಲ್ಲಿ ಶಿಕ್ಷಣವು ಎಲ್ಲರ ಹಕ್ಕಾಗಿ ಬದಲಾಯಿತು. ಭಾರತ ಸ್ವತಂತ್ರಗೊಂಡಾಗ ಶೇ.12ರಷ್ಟಿದ್ದ ಸಾಕ್ಷರತೆ, ಸಂವಿಧಾನದ ಬಲದಿಂದಾಗಿ ಇಂದು 77.7 ಪ್ರತಿ ಶತಕ್ಕೇರಿದೆ.ಆದರೆ ಇಂದಿಗೂ ಶಿಕ್ಷಣಕ್ಕಾಗಿ ತಮ್ಮ ಹೆಬ್ಬೆರಳುಗಳನ್ನು ಕೊಡಬೇಕಾದ ಪರಿಸ್ಥಿತಿಯಿಂದ ಬಡವರು, ಕೆಳಜಾತಿಯ ಜನರು ಹೊರ ಬಂದಿಲ್ಲ . ಅದಕ್ಕೆ ಒಂದು ಹೃದಯವಿದ್ರಾವಕ ಉದಾಹರಣೆಯಾಗಿದೆ ತಮಿಳುನಾಡಿನ ಸೇಲಂನಲ್ಲಿ ಮಗನ ಶಿಕ್ಷಣದ ಶುಲ್ಕಕ್ಕಾಗಿ ತಾಯಿಯೊಬ್ಬಳು ತನ್ನ ಪ್ರಾಣವನ್ನೇ ತ್ಯಾಗ ಮಾಡಿರುವುದು. ತಾನು ಸತ್ತರೆ ಮಗನ ಕಾಲೇಜು ಶುಲ್ಕ ಭರಿಸಲು ಪರಿಹಾರ ಸಿಗುತ್ತದೆ ಎಂದು ನಂಬಿ ತಾಯಿಯೊಬ್ಬಳು ಚಲಿಸುವ ಬಸ್ಸಿನೆಡೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಕಳೆದ ಜೂನ್ 28ರಂದು ಸೇಲಂನ ಅಗ್ರಹಾರ ರಸ್ತೆಯಲ್ಲಿ ಈ ದುರಂತ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಮೃತ ಮಹಿಳೆಯದು ಅಪಘಾತವಲ್ಲ, ಆತ್ಮಹತ್ಯೆ ಎನ್ನುವುದು ಗೊತ್ತಾಯಿತು. ಆಕೆ ತನ್ನ ಮಗನನ್ನು ಪದವಿ ಓದಿಸುವ ಪ್ರಯತ್ನದಲ್ಲಿದ್ದಳು. ಸುಮಾರು 45,000 ರೂಪಾಯಿ ಶುಲ್ಕ ಪಾವತಿಸಲು ಬಾಕಿಯಿದ್ದುದರಿಂದಾಗಿ ಶಿಕ್ಷಣ ಸಾಲಕ್ಕಾಗಿ ಸ್ಥಳೀಯ ಬ್ಯಾಂಕಿಗೆ ಅರ್ಜಿಯನ್ನೂ ಸಲ್ಲಿಸಿದ್ದಳು. ಆದರೆ ಬ್ಯಾಂಕ್ ಸಾಲ ನೀಡಲು ನಿರಾಕರಿಸಿತ್ತು. ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ಸತ್ತು ಹೋದರೆ ವಿಮೆ ಹಣ ಸಿಗುತ್ತದೆ ಎಂದು ಯಾರೋ ಹೇಳಿದ್ದನ್ನು ಆ ತಾಯಿ ನಂಬಿದ್ದಾರೆ. ತಾನು ಸತ್ತರೆ ಆ ಹಣದಿಂದ ಮಗ ವಿದ್ಯಾಭ್ಯಾಸ ಮುಂದುವರಿಸಬಹುದು ಎನ್ನುವ ಆಸೆಯಿಂದ ಆಕೆ ವೇಗವಾಗಿ ಚಲಿಸುವ ಬಸ್‌ನ ಮುಂದೆ ಧುಮುಕಿದ್ದಾರೆ. ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ವಾತಂತ್ರದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಈ ದೇಶದ ಒಬ್ಬ ಯುವಕ ತನ್ನ ಪದವಿ ಮುಗಿಸುವುದಕ್ಕಾಗಿ ತಾಯಿಯ ಜೀವವನ್ನೇ ಶುಲ್ಕವಾಗಿ ತೆರೆಬೇಕಾದಂತಹ ಸ್ಥಿತಿ ಇದೆ ಎಂದಾದರೆ, ಈ ಕಾಲವನ್ನು ಅಮೃತ ಕಾಲವೆಂದು ಕರೆಯುವ ಬದಲಿಗೆ ಬಡವರ ಪಾಲಿನ ಮೃತ್ಯು ಕಾಲವೆಂದೇ ಕರೆಯಬೇಕಾಗುತ್ತದೆ. ಈ ದೇಶದಲ್ಲಿ ದಲಿತರ ಪಾಲಿಗೂ ಶಿಕ್ಷಣವೆನ್ನುವುದು ಹೇಗೆ ಗಗನ ಕುಸುಮವಾಗುತ್ತಿದೆ ಎನ್ನುವುದಕ್ಕೆ ವಿವಿಗಳಲ್ಲಿ ದಲಿತ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳೇ ಹೇಳುತ್ತಿವೆ. ಮಹಾಭಾರತದ ಕಾಲದಲ್ಲಿ ಏಕಲವ್ಯ ಬೆರಳನ್ನು ಕೊಟ್ಟರೆ, ಪ್ರಧಾನಿ ಮೋದಿಯ ಅಮೃತ ಕಾಲದಲ್ಲಿ ದಲಿತರು ತಮ್ಮ ಕೊರಳನ್ನೇ ಕೊಡಬೇಕಾದ ಸ್ಥಿತಿಯಿದೆ ಎನ್ನುವುದು ರೋಹಿತ್ ವೇಮುಲಾ ಆತ್ಮಹತ್ಯೆಯಿಂದ ಬಟಾಬಯಲಾಯಿತು. ಎಲ್ಲ ಆರ್ಥಿಕ ಸವಾಲುಗಳನ್ನು ಎದುರಿಸಿ ಕಾಲೇಜಿಗೆ ಕಾಲಿಟ್ಟ ಬಳಿಕವೂ ಒಬ್ಬ ದಲಿತ ವಿದ್ಯಾರ್ಥಿಯ ಸಮಸ್ಯೆ ಮುಗಿಯುವುದಿಲ್ಲ. ಅವನು ಅಲ್ಲಿ ಜಾತಿ ತಾರತಮ್ಯವನ್ನು ಎದುರಿಸುತ್ತಲೇ ತನ್ನ ವಿದ್ಯಾರ್ಥಿ ಜೀವನವನ್ನು ಮುಂದುವರಿಸಬೇಕು. ತಾರತಮ್ಯವನ್ನು ಸಹಿಸಲು ಸಿದ್ಧವಿಲ್ಲದ ವಿದ್ಯಾರ್ಥಿಗಳು ಅಂತಿಮವಾಗಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಾರೆ.
ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಸಂವಿಧಾನ ಘೋಷಿಸಿದೆಯಾದರೂ, ಆ ಶಿಕ್ಷಣವನ್ನು ಬಡವರು ಮತ್ತು ಶೋಷಿತರ ಕೈಯಿಂದ ಮತ್ತೆ ಕಿತ್ತುಕೊಳ್ಳುವ ಪ್ರಯತ್ನ ಬೇರೆ ಬೇರೆ ರೂಪಗಳಲ್ಲಿ ನಡೆಯುತ್ತಿದೆ. ಕೊರೋನ ಕಾಲದಲ್ಲಿ ಶಿಕ್ಷಣ 'ಮೊಬೈಲ್ ಹೊಂದಿರುವವರ ಸೊತ್ತು' ಎಂದು ಸರಕಾರವೇ ಘೋಷಿಸಿ ಬಿಟ್ಟಿತು. ಮೊಬೈಲ್ ಇದ್ದವರು-ಇಲ್ಲದವರು, ನಗರ ಪ್ರದೇಶ-ಗ್ರಾಮೀಣ ಪ್ರದೇಶ, ಬಡವರು-ಶ್ರೀಮಂತರು ಹೀಗೆ ಶಿಕ್ಷಣವೆನ್ನುವುದು ಸ್ಪಷ್ಟವಾಗಿ ಹಂಚಿ ಹೋಯಿತು. ತಳಸ್ತರದಲ್ಲಿರುವ ಬಡವರಂತೂ ಶಾಲೆಗಳನ್ನೇ ತೊರೆಯಬೇಕಾದ ಸ್ಥಿತಿ ನಿರ್ಮಾಣವಾಯಿತು. ಇಂದಿಗೂ ಅವರನ್ನು ಪೂರ್ಣ ಪ್ರಮಾಣದಲ್ಲಿ ಮರಳಿ ಶಾಲೆಗಳಿಗೆ ಸೇರಿಸುವ ಕೆಲಸ ನಡೆದಿಲ್ಲ. ಹೀಗಿರುವಾಗ, ಕಾಲೇಜಿಗೆ ಕಾಲಿಟ್ಟಿದ್ದ ಬಡವರ ಮಕ್ಕಳ ಸ್ಥಿತಿ ಏನಾಗಬೇಕು? ಕನ್ನಡ ಮಾಧ್ಯಮಗಳಿಗೆ ವಿದ್ಯಾರ್ಥಿಗಳಿಲ್ಲ, ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳಿಲ್ಲ ಎಂದು ಶಾಲೆಗಳನ್ನು ಒಂದೊಂದಾಗಿ ಸರಕಾರ ಮುಚ್ಚಿಸುತ್ತಿದೆ. ಸರಕಾರಿ ಶಾಲೆಗಳನ್ನೇ ನೆಚಿ ್ಚಕೊಂಡ ವಿದ್ಯಾರ್ಥಿಗಳು ಈ ಕಾರಣದಿಂದ ಶಿಕ್ಷಣದಿಂದ ಹೊರದಬ್ಬಲ್ಪಡುತ್ತಿದ್ದಾರೆ. ಕನ್ನಡ ಮಾಧ್ಯಮಗಳಿಗೆ ವಿದ್ಯಾರ್ಥಿಗಳಿಲ್ಲ ಎಂದಾದರೆ ಸರಕಾರಿ ಶಾಲೆಗಳನ್ನು ಮುಚ್ಚಿಸುವುದು ಪರಿಹಾರವಲ್ಲ. ಯಾಕೆಂದರೆ ಸರಕಾರಿ ಶಾಲೆಗಳ ಉದ್ದೇಶವೇ ಎಲ್ಲರಿಗೂ ಶಿಕ್ಷಣವನ್ನು ನೀಡುವುದು. ಭಾಷೆಯ ಕಾರಣದಿಂದ ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ ಎಂದಾದರೆ, ಇಂಗ್ಲಿಷ್ ಮಾಧ್ಯಮದ ಮೂಲಕವಾದರೂ ಸರಕಾರಿ ಶಾಲೆಗಳನ್ನು ಉಳಿಸಿ, ಎಲ್ಲರಿಗೂ ಶಿಕ್ಷಣ ದಕ್ಕುವಂತೆ ಮಾಡಬೇಕು. ಆದರೆ ಸರಕಾರಿ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿಯೇ ಸರಕಾರಕ್ಕಿದ್ದಂತಿಲ್ಲ. ಕಡಿಮೆ ವಿದ್ಯಾರ್ಥಿಗಳನ್ನು ನೆಪವಾಗಿಸಿಕೊಂಡು ಶಾಲೆಗಳನ್ನು ಮುಚ್ಚಿಸುವಾಗ, ಶಾಲೆಗಳಲ್ಲಿ ಉಳಿದುಕೊಂಡಿರುವ ಆ ಅಲ್ಪಸಂಖ್ಯೆಯ ವಿದ್ಯಾರ್ಥಿಗಳ ಶಿಕ್ಷಣದ ಗತಿಯೇನು ಎನ್ನುವುದರ ಬಗ್ಗೆ ಸರಕಾರ ಚಿಂತಿಸುತ್ತಿಲ್ಲ.
ಶೋಷಿತರ ಮಕ್ಕಳು ಎಸೆಸೆಲ್ಸಿವರೆಗೆ ಓದಿದರೆ ಅದುವೇ ಬಹುದೊಡ್ಡ ಸಾಧನೆ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಸರಕಾರಿ ಕಾಲೇಜುಗಳಲ್ಲಿ ಓದಬೇಕಾದರೂ ಇಂದು ಮೂರು ವರ್ಷಗಳ ಪದವಿ ಶಿಕ್ಷಣಕ್ಕೆ ಕನಿಷ್ಠ 40,000 ರೂ. ವೆಚ್ಚವಾಗುತ್ತದೆ. ಇಷ್ಟು ಓದಿದ ಬಳಿಕವೂ ಆ ಓದು ಅವರ ಬದುಕನ್ನು ಮಾರ್ಪಡಿಸುತ್ತದೆ ಎಂದು ಹೇಳುವಂತಿಲ್ಲ. ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣವಂತೂ ಇವರ ಪಾಲಿಗೆ ಗಗನ ಕುಸುಮ. ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿದೆ. 17 ವರ್ಷ ವಯಸ್ಸಿನವರೆಗೆ ಶಿಕ್ಷಣ ನೀಡಲು ಕನಿಷ್ಠ 30 ಲಕ್ಷ ರೂ. ಬೇಕು ಎಂದು ಮಾಧ್ಯಮ ಸಮೀಕ್ಷೆಯೊಂದು ಹೇಳುತ್ತದೆ. ಹಣದುಬ್ಬರವನ್ನು ಪರಿಗಣಿಸಿದರೆ ಈ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ. 2012ರಿಂದ 2020ರವರೆಗಿನ ಸಮೀಕ್ಷೆಯನ್ನು ತೆಗೆದುಕೊಂಡರೆ, ಈ ದೇಶದಲ್ಲಿ ಶಿಕ್ಷಣದ ವೆಚ್ಚವು ಶೇ. 10ರಿಂದ ಶೇ. 12ರವರೆಗೆ ಏರಿಕೆಯಾಗಿದೆ. ಇಕಾನಮಿಕ್ ಟೈಮ್ಸ್‌ನ ಅಧ್ಯಯನದ ಪ್ರಕಾರ ನಗರಗಳಲ್ಲಿ ಹೆಚ್ಚಿನ ಶಾಲೆಗಳು 25,000 ರೂಪಾಯಿಯಿಂದ 75,000 ರೂಪಾಯಿಯವರೆಗೆ ಶುಲ್ಕವನ್ನು ಹೊಂದಿವೆ. ಇದು ಎಲ್‌ಕೆಜಿ, ಯುಕೆಜಿಯಂತಹ ಶಿಕ್ಷಣಕ್ಕೆ ಸಂಬಂಧಿಸಿದ ಶುಲ್ಕಗಳಾಗಿವೆ. ಬ್ಯಾಂಕ್‌ಗಳು ನೀಡುವ ಶಿಕ್ಷಣ ಸಾಲವಂತೂ ವಿದ್ಯಾರ್ಥಿಗಳು ಶಿಕ್ಷಣವನ್ನು ಪೂರ್ತಿಗೊಳಿಸುವಷ್ಟರಲ್ಲಿ ಅವರನ್ನು ಸಾಲಗಾರರ ಸಾಲಿನಲ್ಲಿ ನಿಲ್ಲಿಸಿರುತ್ತದೆ. ಶಿಕ್ಷಣ ಸಾಲಕ್ಕಾಗಿ ತಮ್ಮ ಆಸ್ತಿ, ಮನೆಗಳನ್ನು ಕಳೆದುಕೊಂಡ ಪಾಲಕರ ಸಂಖ್ಯೆ ದೊಡ್ಡದಿದೆ. ಇಂತಹ ಸಂದರ್ಭದಲ್ಲಿ ಸರಕಾರ ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವುದಷ್ಟೇ ಭಾರತವನ್ನು ಮೇಲ್‌ದರ್ಜೆಗೇರಿಸಲು ಸರಕಾರದ ಮುಂದಿರುವ ದಾರಿಯಾಗಿದೆ. ಸರಕಾರಿ ಶಾಲೆಗಳನ್ನು ಮುಚ್ಚಿಸುವುದೆಂದರೆ ಶೋಷಿತ ಸಮುದಾಯವನ್ನು ಶಿಕ್ಷಣದಿಂದ ಶಾಶ್ವ ತವಾಗಿ ದೂರವಿರಿಸಿದಂತೆ. ಹಾಗಾದಾಗ ಬಡವರ ಮಕ್ಕಳು ತಮ್ಮ ಶಿಕ್ಷಣಕ್ಕಾಗಿ ತಮ್ಮ ಪೋಷಕರನ್ನೇ ಶುಲ್ಕವಾಗಿ ಪಾವತಿಸುವಂತಹ ಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಸೇಲಂನಲ್ಲಿ ತಾಯಿಯೊಬ್ಬಳು ತನ್ನ ಮಗನ ಶಿಕ್ಷಣದ ಹಕ್ಕಿಗಾಗಿ ಪ್ರಾಣವನ್ನೇ ತೆತ್ತಿರುವುದು ಭಾರತದ ಸಂವಿಧಾನದ ಆಶಯಕ್ಕಾಗಿರುವ ಆಘಾತವಾಗಿದೆ.