ವಿತ್ತ ಸಚಿವೆಯ ‘ಬಾಂಡ್’ ಗ್ಯಾರಂಟಿ!

Update: 2024-04-22 04:39 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಚುನಾವಣಾ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಕರ್ನಾಟಕದಲ್ಲಿ ಖುದ್ದಾಗಿ ಪ್ರಧಾನಿ ಮೋದಿಯವರು ಎರಡೆರಡು ಪ್ರಚಾರಗಳನ್ನು ನಡೆಸಿದ್ದಾರೆ. ‘ಇಂಡಿಯಾ’ದ ಜನಪರ, ಅಭಿವೃದ್ಧಿ ಪರವಾದ ಗ್ಯಾರಂಟಿಗಳಿಗೆ ಸೆಡ್ಡು ಹೊಡೆಯಲು ಯತ್ನಿಸುತ್ತಿರುವ ಮೋದಿ ಬಳಗ, ಅದರಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಣುತ್ತಿಲ್ಲ. ಕರ್ನಾಟಕದಲ್ಲಿ ಪ್ರಧಾನಿ ಮೋದಿಯವರಿಗೆ ಇಲ್ಲಿನ ಐದು ಗ್ಯಾರಂಟಿಗಳು ಚುನಾವಣಾ ಪ್ರಚಾರಕ್ಕೆ ಭಾರೀ ಹಿನ್ನಡೆಯನ್ನು ಉಂಟು ಮಾಡುತ್ತಿವೆ. ಕರ್ನಾಟಕದ ಗ್ಯಾರಂಟಿ ಮಾದರಿಯನ್ನು ವಿರೋಧಪಕ್ಷಗಳು ದೇಶಾದ್ಯಂತ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿರುವ ಕಾರಣದಿಂದ, ಅನಿವಾರ್ಯವಾಗಿ ಪ್ರಧಾನಿ ಮೋದಿಯವರೂ ಕೆಲವು ಗ್ಯಾರಂಟಿಗಳನ್ನು ಜನರಿಗಾಗಿ ಘೋಷಿಸಬೇಕಾಯಿತು. ಆದರೆ ಒಂದೆಡೆ ಜನ ಸಾಮಾನ್ಯರಿಗಾಗಿ ಕರ್ನಾಟಕ ನೀಡುತ್ತಿರುವ ಗ್ಯಾರಂಟಿಗಳನ್ನು ವ್ಯಂಗ್ಯ ಮಾಡುತ್ತಾ, ಈ ಗ್ಯಾರಂಟಿಗಳು ನಾಡಿನ ಆರ್ಥಿಕತೆಯನ್ನು ದಿವಾಳಿ ಮಾಡುತ್ತಿದೆ ಎಂದು ಆರೋಪಿಸುತ್ತಲೇ ಚುನಾವಣೆಯ ದೃಷ್ಟಿಯಿಂದ ಪ್ರಧಾನಿ ಘೋಷಣೆ ಮಾಡಿರುವ ಗ್ಯಾರಂಟಿಗಳನ್ನು ಜನಸಾಮಾನ್ಯರು ಅನುಮಾನದಿಂದ ನೋಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಈ ಗ್ಯಾರಂಟಿಗಳನ್ನು ಕೇಂದ್ರ ಸರಕಾರ ಯಾಕೆ ಅನುಷ್ಠಾನಗೊಳಿಸಲಿಲ್ಲ ಎಂದು ಜನರು ಕೇಳತೊಡಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ‘ದ್ವೇಷ ರಾಜಕಾರಣ’ವನ್ನು ಬದಿಗೆ ಸರಿಸಿ, ಅಭಿವೃದ್ಧಿ ರಾಜಕಾರಣವನ್ನು ಮುನ್ನೆಲೆಗೆ ತರಲು ಬಿಜೆಪಿ ವರಿಷ್ಠರು ಪ್ರಯತ್ನಿಸಿದ್ದಾರಾದರೂ, ಚುನಾವಣೆಯಲ್ಲಿ ಅವರ ಪ್ರಯತ್ನ ಫಲಕೊಡುವಂತೆ ಕಾಣುತ್ತಿಲ್ಲ. ಆದುದರಿಂದಲೇ ಮೋದಿಯವರು ಮತ್ತೆ ‘ಸನಾತನ ಧರ್ಮದ ಗ್ಯಾರಂಟಿ’ಗೆ ಶರಣಾಗಿದ್ದಾರೆ. ಕೆಲವು ದಿನಗಳ ಹಿಂದೆ ರಾಜ್ಯದ ರ್ಯಾಲಿಯೊಂದರಲ್ಲಿ ಭಾಗವಹಿಸಿ ‘‘ಸನಾತನ ಧರ್ಮ ರಕ್ಷಣೆಯೇ ನನ್ನ ಗ್ಯಾರಂಟಿ’’ ಎಂದು ಘೋಷಿಸಿದ್ದರು. ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಜೆಪಿಯ ಜೋಳಿಗೆೆಯಲ್ಲಿ ಯಾವ ಸ್ಪಷ್ಟ ನೀತಿಗಳೂ ಇಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತಿದೆ.

ಪ್ರಧಾನಿ ಮೋದಿಯವರಿಗೆ ಆರ್ಥಿಕ ವಿಷಯದಲ್ಲಿ ತಿಳಿವು ಕಡಿಮೆ ಎಂದು ಅವರನ್ನು ಕ್ಷಮಿಸಿ ಬಿಡೋಣ. ಕನಿಷ್ಠ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಾದರೂ ಬಿಜೆಪಿಯ ಭವಿಷ್ಯದ ಅಭಿವೃದ್ಧಿ ದೃಷ್ಟಿಕೋನಗಳನ್ನು ಜನರ ಮುಂದಿಡಬೇಕಾಗಿತ್ತು. ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಹಣದ ವಿಷಯದಲ್ಲಿ ಸುಳ್ಳು ಹೇಳಿ ಸಂಪೂರ್ಣ ಮುಜುಗರಕ್ಕೀಡಾಗಿರುವ ನಿರ್ಮಲಾ ಸೀತಾರಾಮನ್ ಇದೀಗ ಹೊಸದೊಂದು ಗ್ಯಾರಂಟಿಯನ್ನು ಘೋಷಿಸುವ ಮೂಲಕ ಬಿಜೆಪಿಯನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ. ‘‘ಭಾರತೀಯ ಜನತಾ ಪಕ್ಷ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಎಲ್ಲ ಹಕ್ಕುದಾರರ ಜೊತೆಗೆ ವಿಸ್ತೃತ ಸಮಾಲೋಚನೆ ನಡೆಸಿ ಚುನಾವಣಾ ಬಾಂಡ್ ಯೋಜನೆಗೆ ಮರು ಜೀವ ನೀಡುತ್ತದೆ’’ ಎಂದು ಘೋಷಿಸಿದ್ದಾರೆ. ರಾಜಕೀಯ ಪಕ್ಷಗಳು ಬೃಹತ್ ಉದ್ಯಮಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ತಮ್ಮ ತಿಜೋರಿಗೆ ತುಂಬಿಸುವುದಕ್ಕಾಗಿ ಬಿಜೆಪಿಯನ್ನು ಮರು ಆಯ್ಕೆ ಮಾಡಬೇಕೇ ಎಂದು ಜನರು ಕೇಳುತ್ತಿದ್ದಾರೆ. ‘ಈ ಚುನಾವಣಾ ಬಾಂಡ್’ ಗ್ಯಾರಂಟಿಯ ಸಂಪೂರ್ಣ ಫಲಾನುಭವಿಗಳು ರಾಜಕೀಯ ಪಕ್ಷಗಳು. ಈ ಚುನಾವಣಾ ಬಾಂಡ್ ಗ್ಯಾರಂಟಿಯಿಂದ ದೇಶದ ಜನತೆಗೆ ಸಿಗುವ ಲಾಭವೇನು? ಇದು ದೇಶದ ಅಭಿವೃದ್ಧಿಯಲ್ಲಿ ಯಾವ ರೀತಿ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನಾದರೂ ವಿತ್ತ ಸಚಿವರು ವಿವರಿಸಬೇಕಾಗಿತ್ತು. ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ತನ್ನ ಪಕ್ಷದ ತಿಜೋರಿ ತುಂಬಿಸುವುದಕ್ಕಾಗಿ ‘ಚುನಾವಣಾ ಬಾಂಡ್’ಗೆ ಮರು ಜೀವ ಕೊಡುತ್ತೇನೆ ಎನ್ನುವ ವಿತ್ತ ಸಚಿವೆ, ರಾಜ್ಯದ ಜನರ ತೆರಿಗೆ ಹಣದ ವಿಷಯದಲ್ಲಿ ಉಡಾಫೆಯಾಗಿ ಮಾತನಾಡುವುದು ಸಹಜವೇ ಆಗಿದೆ.

‘ಚುನಾವಣಾ ಬಾಂಡ್’ ಸಂವಿಧಾನ ಬಾಹಿರ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ ಮಾತ್ರವಲ್ಲ, ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗ ಪಡಿಸುವ ನಿಟ್ಟಿನಲ್ಲಿ ಅದು ನೀಡಿದ ತೀರ್ಪುಗಳು ಬಿಜೆಪಿಯ ‘ಕಪ್ಪು’ ಮುಖವನ್ನು ಚುನಾವಣಾ ಘೋಷಣೆಯ ಹೊತ್ತಿಗೇ ಬಹಿರಂಗ ಪಡಿಸಿತ್ತು. ಚುನಾವಣಾ ಬಾಂಡ್ ವಿವರಗಳು ಬಹಿರಂಗವಾಗದಂತೆ ಕೇಂದ್ರ ಸರಕಾರ ಎಸ್ಬಿಐಯನ್ನು ಮುಂದಿಟ್ಟುಕೊಂಡು ಗರಿಷ್ಠ ಪ್ರಯತ್ನ ಯಾಕೆ ನಡೆಸಿತ್ತು ಎನ್ನುವುದು ವಿವರ ಬಹಿರಂಗದ ಬಳಿಕ ದೇಶಕ್ಕೆ ಅರ್ಥವಾಗತೊಡಗಿತು. ಐಟಿ, ಈ.ಡಿ ದಾಳಿಗಳ ಮೂಲಕ ಬೆದರಿಸಿ ಹಲವು ಬೃಹತ್ ಕಂಪೆನಿಗಳಿಂದ ಬಿಜೆಪಿಯು ಸಾವಿರಾರು ಕೋಟಿ ರೂಪಾಯಿ ಬಾಂಡ್ಗಳನ್ನು ಸಂಪಾದಿಸಿದೆ ಎನ್ನುವ ಅಂಶಗಳು ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ. ‘ಭ್ರಷ್ಟಾಚಾರವನ್ನು ಮಟ್ಟ ಹಾಕುತ್ತೇವೆ’ ಎಂದು ಹೇಳುತ್ತಲೇ ಈಡಿ ದಾಳಿಗೊಳಗಾದ ಕಂಪೆನಿಗಳಿಂದಲೇ ನೂರಾರು ಕೋಟಿ ರೂಪಾಯಿಗಳನ್ನು ಬಿಜೆಪಿ ವಸೂಲಿ ಮಾಡಿತ್ತು. ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ಅದೆಷ್ಟು ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ಹಣ ಸಂಗ್ರಹಿಸಿದೆ, ಅದೆಷ್ಟು ಕಂಪೆನಿಗಳನ್ನು ತನಿಖಾ ಸಂಸ್ಥೆಗಳ ಮೂಲಕ ಬೆದರಿಸಿ ವಸೂಲಿ ಮಾಡಿದೆ ಎನ್ನುವುದು ಮಾಧ್ಯಮಗಳಲ್ಲಿ ಇಂದಿಗೂ ಸರಣಿ ರೂಪದಲ್ಲಿ ಪ್ರಕಟವಾಗುತ್ತಲೇ ಇವೆ. ಹಲವು ಬೃಹತ್ ಸಂಸ್ಥೆಗಳು ತಮ್ಮ ಅಕ್ರಮಗ ಳನ್ನು ಮುಚ್ಚಿ ಹಾಕಲು ಬಿಜೆಪಿಯ ಬಾಂಡ್ನ್ನು ಖರೀದಿಸಿದರೆ, ಇನ್ನು ಕೆಲವು ಬೃಹತ್ ಕಂಪೆನಿಗಳು ಸರಕಾರದಿಂದ ವಿವಿಧ ಯೋಜನೆಗಳ ಗುತ್ತಿಗೆಗಳನ್ನು ಪಡೆದುಕೊಳ್ಳಲು, ಸವಲತ್ತುಗಳನ್ನು ತಮ್ಮದಾಗಿಸಲು ಲಂಚದ ರೂಪದಲ್ಲಿ ಚುನಾವಣಾ ಬಾಂಡ್ ಖರೀದಿಸಿವೆ. ಈ ಎಲ್ಲ ಆರೋಪಗಳಿಗೆ ಬಿಜೆಪಿ ಇನ್ನೂ ಸ್ಪಷ್ಟೀಕರಣವನ್ನು ನೀಡಿಲ್ಲ. ಇದೀಗ ವಿತ್ತ ಸಚಿವರು ‘ಚುನಾವಣಾ ಬಾಂಡ್ಗೆ ಮರುಜೀವ ನೀಡುತ್ತೇವೆ’ ಎಂಬ ಹೇಳಿಕೆಯನ್ನು ನೀಡುವ ಮೂಲಕ, ‘ಚುನಾವಣಾ ಬಾಂಡ್’ ಭ್ರಷ್ಟಾಚಾರವನ್ನು ಸಮರ್ಥಿಸಿದ್ದಾರೆ ಮಾತ್ರವಲ್ಲ, ಆ ಭಾರೀ ಭ್ರಷ್ಟಾಚಾರವನ್ನು ಮತ್ತೆ ದೇಶದ ಮೇಲೆ ಹೇರುವುದಕ್ಕಾಗಿ ‘ಬಿಜೆಪಿಗೆ ಮತ ನೀಡಿ’ ಎಂದು ಕರೆ ನೀಡಿದ್ದಾರೆ.

ಬಿಜೆಪಿಯು ನಿಜಕ್ಕೂ ಚುನಾವಣಾ ಬಾಂಡ್ ವಿಷಯದಲ್ಲಿ ಪ್ರಾಮಾಣಿಕವಾಗಿದ್ದಿದ್ದರೆ ಈ ಆರೋಪಗಳನ್ನೆಲ್ಲ ಗಂಭೀರವಾಗಿ ತೆಗೆದುಕೊಂಡು, ಈ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವ ಭರವಸೆಯನ್ನು ನೀಡಬೇಕಾಗಿತ್ತು. ಈ ಹಿಂದೆ ಬೃಹತ್ ರಫೇಲ್ ಯುದ್ಧ ವಿಮಾನದಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಯನ್ನೇ ನಡೆಯದಂತೆ ನೋಡಿಕೊಂಡು ತನ್ನನ್ನು ತಾನು ರಕ್ಷಿಸಿಕೊಂಡಿರುವ ಬಿಜೆಪಿ ಇದೀಗ ಚುನಾವಣಾ ಬಾಂಡ್ ವಿಷಯದಲ್ಲೂ ಹೆದರಿದೆ. ತನ್ನ ಸರಕಾರವೇನಾದರೂ ಅಧಿಕಾರಕ್ಕೆ ಬರದೇ ಇದ್ದರೆ ಚುನಾವಣಾ ಬಾಂಡ್ ಹಗರಣ ತನಿಖೆಯಾಗುವ ಸಾಧ್ಯತೆಗಳ ಬಗ್ಗೆ ಅದಕ್ಕೆ ಆತಂಕವಿದೆ. ದೇಶದ ಇಂದಿನ ಅಗತ್ಯ, ಚುನಾವಣಾ ಬಾಂಡ್ ಅಲ್ಲ, ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ನಡೆಸಿರುವ ಬೃಹತ್ ಅವ್ಯವಹಾರಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿದೆ. ತಾನು ಭ್ರಷ್ಟರ ವಿರುದ್ಧವಿದ್ದೇನೆ ಎಂದು ಹೇಳುವ ಪ್ರಧಾನಿ ಮೋದಿಯವರು ಚುನಾವಣಾಬಾಂಡ್ ಹಗರಣದ ಸ್ವತಂತ್ರ ತನಿಖೆಯ ಗ್ಯಾರಂಟಿಯನ್ನು ದೇಶದ ಜನತೆಗೆ ನೀಡಲು ಸಿದ್ಧರಿದ್ದಾರೆಯೆ? ಎಂದು ದೇಶ ಕೇಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News