ಪೂರ್ಣಾವಧಿ ಮುಖ್ಯಮಂತ್ರಿ: ಮತ್ತೆ ಮುನ್ನೆಲೆಗೆ ಬಂದ ಅನಗತ್ಯ ಚರ್ಚೆ

Update: 2024-01-18 03:59 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಾಂಗ್ರೆಸ್ ಮುಖಂಡರಾಗಿರುವ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿರುವ ಸಾರ್ವಜನಿಕ ಹೇಳಿಕೆಯೊಂದರ ಮೂಲಕ ‘ಪೂರ್ಣಾವಧಿ ಮುಖ್ಯಮಂತ್ರಿ’ ಮತ್ತೆ ಚರ್ಚೆಗೆ ಬಂದಿದೆ. ಮಂಗಳವಾರ ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’’ ಎಂದು ಹೇಳಿದ್ದಾರೆ. ಇದು ಪರೋಕ್ಷವಾಗಿ ‘‘ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಕಳಪೆ ಸಾಧನೆ ಮಾಡಿದ್ದೇ ಆದರೆ ಸಿದ್ದರಾಮಯ್ಯ ಪೂರ್ಣಾವಧಿ ಮುಂಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ’’ ಎಂದು ಅವರಾಗಿಯೇ ಘೋಷಿಸಿದಂತಾಗಿದೆ. ಈ ಹಿಂದೆ ಸ್ವತಃ ಸಿದ್ದರಾಮಯ್ಯ ಅವರೇ ‘‘ನಾನೇ ಪೂರ್ಣಾವಧಿ ಮುಖ್ಯಮಂತ್ರಿ’’ ಎಂದು ಹೇಳಿಕೊಂಡಿದ್ದರು. ಇದೀಗ ಲೋಕಸಭಾ ಚುನಾವಣೆಯ ನೆಪದಲ್ಲಿ ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಅನಗತ್ಯ ಚರ್ಚೆಯೊಂದು ಮತ್ತೆ ಮುನ್ನೆಲೆಗೆ ಬಂದಂತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಈ ಹೇಳಿಕೆ ಮಹತ್ವವನ್ನು ಪಡೆದುಕೊಂಡರೆ, ಚುನಾವಣೆಯ ಸೋಲನ್ನು ಸಂಪೂರ್ಣವಾಗಿ ಸಿದ್ದರಾಮಯ್ಯ ಅವರೆ ಹೊತ್ತುಕೊಳ್ಳಬೇಕಾಗುತ್ತದೆ ಮಾತ್ರವಲ್ಲ, ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರೆ ಆ ಸೋಲನ್ನು ಒಪ್ಪಿಕೊಂಡು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾದ ಸನ್ನಿವೇಶವೂ ಸೃಷ್ಟಿಯಾಗಬಹುದು.

ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಮೂಲಕ ಸಿದ್ದರಾಮಯ್ಯ ಅವರ ಜನಪ್ರಿಯತೆ ಹೆಚ್ಚಿದೆ. ಈ ಜನಪ್ರಿಯತೆಯನ್ನೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಗದೀಕರಿಸಲು ಕಾಂಗ್ರೆಸ್ ನಿರ್ಧರಿಸಿದಂತಿದೆ. ಈ ಕಾರಣಕ್ಕಾಗಿಯೇ ‘‘ ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ನೀವು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸನ್ನು ಬೆಂಬಲಿಸಬೇಕು’’ ಎನ್ನುವ ಆಮಿಷವನ್ನು ಕಾಂಗ್ರೆಸ್ ನಾಯಕರು ಮತದಾರರಿಗೆ ಒಡ್ಡುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಕಳಪೆ ಸಾಧನೆ ಮಾಡಿದ್ದೇ ಆದಲ್ಲಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಮಾತ್ರವಲ್ಲ, ಅದರ ಜೊತೆಜೊತೆಗೆ ಗ್ಯಾರಂಟಿ ಯೋಜನೆಗಳೂ ಇಲ್ಲವಾಗಿ ಬಿಡಬಹುದು ಎನ್ನುವ ಸಂದೇಶವನ್ನು ಮತದಾರರಿಗೆ ತಲುಪಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಜನಪ್ರಿಯತೆ ಪ್ರಭಾವ ಬೀರುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಗ್ರಾಮೀಣ ಪ್ರದೇಶದ ಮಹಿಳೆಯರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸಾಧಾರಣವಾಗಿ ಪ್ರಧಾನಿ ಅಭ್ಯರ್ಥಿಯನ್ನು ಮುಂದಿಟ್ಟು ಮತ ಕೇಳಲಾಗುತ್ತದೆಯಾದರೂ, ಕರ್ನಾಟಕದಲ್ಲಿ ಸಿದ್ದರಾಮಯ್ಯ ವರ್ಚಸ್ಸು ಯಾವುದೇ ರಾಷ್ಟ್ರೀಯ ನಾಯಕರಿಗಿಂತ ಒಂದು ಹೆಜ್ಜೆ ಮುಂದಿದೆ. ಆದುದರಿಂದ, ಅವರ ಜನಪ್ರಿಯತೆಯನ್ನೇ ಚುನಾವಣೆಯಲ್ಲಿ ಪಣಕ್ಕಿಡುವುದಕ್ಕೆ ಕಾಂಗ್ರೆಸ್ ಯೋಚಿಸಿದಂತಿದೆ. ಆದರೆ ಪ್ರಧಾನಿ ಮೋದಿಯ ಹೆಸರಿನಲ್ಲಿ ಬಿಜೆಪಿ ಹರಡುತ್ತಿರುವ ಸುಳ್ಳುಗಳು, ವದಂತಿಗಳನ್ನು ಎದುರಿಸುವಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಯಶಸ್ವಿಯಾಗುತ್ತದೆಯೇ ಎನ್ನುವುದು ಬಹಳ ಮುಖ್ಯ. ‘ರಾಮಮಂದಿರ’ದ ಹೆಸರಿನಲ್ಲಿ ಜನರನ್ನು ಮತ್ತೆ ಭಾವನಾತ್ಮಕವಾಗಿ ಕೆರಳಿಸಿ ಅವರಿಂದ ಮತಕೀಳುವುದಕ್ಕೆ ಬಿಜೆಪಿ ಸಂಚು ನಡೆಸಿದೆ. ಬಿಜೆಪಿಯ ಧರ್ಮ ರಾಜಕಾರಣದ ಮುಂದೆ ಸಿದ್ದರಾಮಯ್ಯರ ಅಭಿವೃದ್ಧಿ ರಾಜಕಾರಣ ಲೋಕಸಭೆ ಚುನಾವಣೆಯಲ್ಲಿ ಮುಖಾಮುಖಿಯಾಗಲಿದೆ. ಸಿದ್ದರಾಮಯ್ಯರ ಉಚಿತ ಅಕ್ಕಿ ಗೆ ಎದುರಾಗಿ ರಾಮಮಂದಿರದ ಮಂತ್ರಾಕ್ಷತೆಯ ಅಕ್ಕಿಕಾಳನ್ನು ಹಂಚಲು ಸಂಘಪರಿವಾರ ಸಿದ್ಧ ತೆ ನಡೆಸುತ್ತಿದೆ. ಜನರು ಯಾವುದನ್ನು ಸ್ವೀಕರಿಸುತ್ತಾರೆ ಎನ್ನುವುದರ ಆಧಾರದಲ್ಲಿ ರಾಜ್ಯದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.

‘ಪೂರ್ಣಾವಧಿಯ ಮುಖ್ಯಮಂತ್ರಿ’ ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದಕ್ಕಿಂತ ಕಾಂಗ್ರೆಸ್‌ನೊಳಗೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದನ್ನು ನಾವು ಚರ್ಚಿಸಬೇಕಾಗಿದೆ. ಸದ್ಯಕ್ಕಂತೂ ಈ ಹೇಳಿಕೆ ‘‘ಸಿದ್ದರಾಮಯ್ಯರನ್ನು ಪೂರ್ಣಾವಧಿ ಮುಖ್ಯಮಂತ್ರಿ’’ಯಾಗಿ ವರಿಷ್ಠರು ಅಂತಿಮಗೊಳಿಸಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದೆ. ಲೋಕಸಭಾ ಚುನಾವಣೆಯ ಸೋಲು ಗೆಲುವನ್ನು ಈ ಮೂಲಕ ಸಿದ್ದರಾಮಯ್ಯ ತಲೆಗೆ ಕಟ್ಟುವ ಸಂಚು ನಡೆಯುತ್ತಿದೆಯೇ ಎಂದು ಶಂಕಿಸ ಬೇಕಾಗಿದೆ. ಲೋಕಸಭಾ ಚುನಾವಣೆಯ ಸೋಲು ಗೆಲುವು ರಾಷ್ಟ್ರಮಟ್ಟದ ನಾಯಕತ್ವದ ನಡೆಗಳಿಂದ ನಿರ್ಧಾರವಾಗುತ್ತದೆಯೇ ಹೊರತು, ರಾಜ್ಯ ನಾಯಕತ್ವದ ಮೂಲಕ ಅಲ್ಲ. ಇಷ್ಟಕ್ಕೂ ಸಿದ್ದರಾಮಯ್ಯ ಅವರ ಈವರೆಗಿನ ಆಡಳಿತ ಸಣ್ಣ ಪುಟ್ಟ ಲೋಪಗಳ ನಡುವೆಯೂ ಜನಪರವಾಗಿಯೇ ಇದೆ. ಗ್ರಾಮೀಣ ಪ್ರದೇಶದ ಬಡವರು, ಮಹಿಳೆಯರು ಸಿದ್ದರಾಮಯ್ಯ ಸರಕಾರದ ಗ್ಯಾರಂಟಿಗಳ ದೊಡ್ಡ ಪ್ರಮಾಣದ ಫಲಾನುಭವಿಗಳಾಗಿದ್ದಾರೆ. ಹೀಗಿರುವಾಗ ರಾಮಮಂದಿರದ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಮರುಳುಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾದರೆ ಅದನ್ನು ಸಿದ್ದರಾಮಯ್ಯ ತಲೆಗೆ ಕಟ್ಟುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಕಾಂಗ್ರೆಸ್‌ನೊಳಗೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಲು ಕಾದು ನಿಂತವರಿಗೆ ಇದೊಂದು ಅವಕಾಶವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎನ್ನುವ ಹೇಳಿಕೆಗೆ ಕಾಂಗ್ರೆಸ್‌ನೊಳಗಿರುವ ಕೆಲವು ನಾಯಕರು ಸಹಮತವನ್ನು ಹೊಂದಿಲ್ಲ. ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯದಂತೆ ನೋಡಿಕೊಳ್ಳುವುದಕ್ಕಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆಯದಂತೆ ಕಾಂಗ್ರೆಸ್‌ನೊಳಗೆ ಸಂಚು ನಡೆದರೆ ಅಚ್ಚರಿಯೇನೂ ಇಲ್ಲ.

ಈ ನಾಡಿನ ಜನತೆ ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಬೇಕು ಎಂದೇ ಬಯಸಿರಬಹುದು. ಆದರೆ ಕಾಂಗ್ರೆಸ್‌ನೊಳಗಿರುವ ಎಲ್ಲ ನಾಯಕರೂ ಅದನ್ನೇ ಬಯಸುತ್ತಿದ್ದಾರೆಯೇ ಎನ್ನುವುದರ ಬಗ್ಗೆಯೂ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುವ ಮೊದಲು ಆಲೋಚಿಸಬೇಕಾಗಿತ್ತು. ಎರಡನೇ ಅವಧಿಗೆ ಮುಖ್ಯಮಂತ್ರಿಯ ಬದಲಾವಣೆಯಾಗಬೇಕು ಎಂದು ಬಯಸುವವರು ಈ ಹೇಳಿಕೆಯನ್ನು ಸವಾಲಾಗಿ ತೆಗೆದುಕೊಂಡರೆ, ಲೋಕಸಭೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಸ್ವತಃ ರಾಜ್ಯ ಕಾಂಗ್ರೆಸ್ ನಾಯಕರೇ ಕಾರಣರಾಗಿ ಬಿಡಬಹುದು. ಆದುದರಿಂದ, ಲೋಕಸಭಾಚುನಾವಣೆಗೆ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಪಣಕ್ಕಿಡುವುದರಿಂದ ಕಾಂಗ್ರೆಸ್‌ಗೆ ಪರೋಕ್ಷ ಹಿನ್ನಡೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಲೋಕಸಭಾಚುನಾವಣೆಗೆ ಸಿದ್ದರಾಮಯ್ಯ ನೇತೃತ್ವಕ್ಕಿಂತ ಖರ್ಗೆ ನೇತೃತ್ವವನ್ನು ನೀಡುವುದು ಹೆಚ್ಚು ಪರಿಣಾಮಕಾರಿ. ಈಗಾಗಲೇ ಇಂಡಿಯಾದ ನಾಯಕತ್ವವನ್ನು ಅವರು ವಹಿಸಿಕೊಂಡಿದ್ದಾರೆ. ಭವಿಷ್ಯದ ಪ್ರಧಾನಿ ಅಭ್ಯರ್ಥಿಯಾಗಿಯೂ ಮಾಧ್ಯಮಗಳ ಮೂಲಕ ಗುರುತಿಸಲ್ಪಡುತ್ತಿದ್ದಾರೆ. ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ನೀಡುವ ಮೂಲಕ, ಕರ್ನಾಟಕದ ದಲಿತ ನಾಯಕರೊಬ್ಬರು ಈ ದೇಶದ ಪ್ರಧಾನಿಯಾಗುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ಯಾವ ಹಿಂಜರಿಕೆಯಿಲ್ಲದೆ ನಾಡಿನ ಜನತೆಯ ಮುಂದೆ ಮನವಿ ಮಾಡಬೇಕು. ಖರ್ಗೆ ಅವರನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು ಒಗ್ಗಟ್ಟನ್ನು ಪ್ರದರ್ಶಿಸಬೇಕೇ ಹೊರತು, ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿ ಮುಖ್ಯಮಂತ್ರಿಯಾಗಿಸುವುದಕ್ಕಲ್ಲ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News