ಗೂಂಡಾಗಳ ನಿಯಂತ್ರಣದಲ್ಲಿ ಹರ್ಯಾಣ ಸರಕಾರ?

Update: 2023-08-10 05:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶ ಮಣಿಪುರದ ಬಗ್ಗೆ ಮಾತನಾಡುತ್ತಾ, ಪ್ರಧಾನಿಯ ಕಾರ್ಯವೈಖರಿಯನ್ನು ಟೀಕಿಸುತ್ತಿರುವ ಹೊತ್ತಿಗೆ ಸರಿಯಾಗಿ ಹರ್ಯಾಣದ ನೂಹ್ನಲ್ಲಿ ಹಿಂಸಾಚಾರ ಭುಗಿಲೆದ್ದು ಅಲ್ಪಸಂಖ್ಯಾತರ ಮಾರಣ ಹೋಮಕ್ಕೆ ಸಾಕ್ಷಿಯಾಯಿತು. ಅಮಾಯಕ ಮುಸ್ಲಿಮ್ ಸಮುದಾಯದ ಜನರ ಅಂಗಡಿಗಳು ಲೂಟಿಗೊಳಗಾದವು. ಓರ್ವ ಧರ್ಮಗುರು ಸೇರಿದಂತೆ ೧೦ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಲಭೆ ಭುಗಿಲೆದ್ದ ಬೆನ್ನಿಗೇ ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ‘‘ಎಲ್ಲರನ್ನೂ ರಕ್ಷಿಸಲು ಪೊಲೀಸರಿಗೆ ಸಾಧ್ಯವೆ?’’ ಎಂದು ಮಾಧ್ಯಮಗಳಲ್ಲಿ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಗಲಭೆಯೆದ್ದ ಬಳಿಕ ಎಲ್ಲರನ್ನು ರಕ್ಷಿಸಲು ಸಾಧ್ಯವಿಲ್ಲ ನಿಜ. ಆದರೆ ಗಲಭೆ ನಡೆಸಲು ಒಂದು ದೊಡ್ಡ ಸಂಚು ಸಿದ್ಧವಾಗುತ್ತಿರುವಾಗ, ಅದನ್ನು ತಡೆದು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರಿಗೆ ಸಾಧ್ಯವಿತ್ತು. ಅದರಲ್ಲಿ ಪೊಲೀಸರೇಕೆ ವಿಫಲರಾದರು ಎನ್ನುವ ಪ್ರಶ್ನೆಗೂ ಅವರು ಉತ್ತರಿಸಬೇಕಾಗುತ್ತದೆ. ಹರ್ಯಾಣದಲ್ಲಿ ಸರಕಾರ ವಿಫಲವಾಗಿರುವುದನ್ನು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ. ಕೇಂದ್ರ ಸಹಾಯಕ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು ‘‘ಧಾರ್ಮಿಕ ಮೆರವಣಿಗೆಯಲ್ಲಿ ಶಸ್ತ್ರಾಸ್ತ್ರ ಹೇಗೆ ಬಂತು?’’ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಬೇಕಾದುದು ಹರ್ಯಾಣ ಸರಕಾರ ಮತ್ತು ಅಲ್ಲಿನ ಪೊಲೀಸರು. ಸ್ವತಃ ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರೇ ‘ಸರಕಾರದ ವೈಫಲ್ಯ’ವನ್ನು ಒಪ್ಪಿಕೊಂಡಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನು ಅಂದಾಜಿಸಲು ಪೊಲೀಸರು ವಿಫಲರಾದುದೇ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ವಿಪರ್ಯಾಸವೆಂದರೆ ನೂಹ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಗಲಭೆಯ ಮುನ್ಸೂಚನೆ ಇದ್ದವರಂತೆ ಜುಲೈ ೨೨ರಿಂದ ರಜೆಯಲ್ಲಿದ್ದಾರೆ. ಇಡೀ ಜಿಲ್ಲೆ ಉಸ್ತುವಾರಿ ಅಧಿಕಾರಿಯ ಕೈಯಲ್ಲಿದ್ದಾಗ ಹಿಂಸೆ ಸ್ಫೋಟಿಸಿದೆ.

ಸರಕಾರದ ಕುರಿತಂತೆ ಅನುಮಾನ ಪಡಲು ಕಾರಣಗಳಿವೆ. ಸರಕಾರದ ನಿಯಂತ್ರಣ ಇಲ್ಲಿನ ಸಂಘಪರಿವಾರ ಗೂಂಡಾಗಳ ಮೇಲಿದ್ದಿದ್ದರೆ ಪೊಲೀಸರು ಈ ಹಿಂಸೆಯನ್ನು ತಡೆಯುತ್ತಿದ್ದರೋ ಏನೋ. ಆದರೆ ಸಂಘಪರಿವಾರವೇ ನೂಹ್ ಜಿಲ್ಲೆಯನ್ನು ನಿಯಂತ್ರಿಸುತ್ತಿರುವುದು ಈ ಘಟನೆಯಿಂದ ಬೆಳಕಿಗೆ ಬರುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿರುವ ಸಂಘಪರಿವಾರ ಮುಖಂಡ ಮೋನು ಮನೆಸರ್ ಹರ್ಯಾಣದಲ್ಲಿ ದ್ವೇಷದ ವಿಷವನ್ನು ಬೇರೆ ಬೇರೆ ರೂಪದಲ್ಲಿ ಹರಡುತ್ತಾ, ಅಲ್ಲಲ್ಲಿ ಅಮಾಯಕರ ಮೇಲೆ ದೌರ್ಜನ್ಯಗಳನ್ನು ಎಸಗುತ್ತಿದ್ದಾಗ ಆತನನ್ನು ಬಂಧಿಸಲು ಸರಕಾರಕ್ಕೆ ಸಾಧ್ಯವಾಗಿರಲಿಲ್ಲ. ನೂಹ್ನಲ್ಲಿ ನಡೆದ ಧಾರ್ಮಿಕ ಮೆರವಣಿಗೆಯಲ್ಲಿ ಈತನೂ ಭಾಗವಹಿಸಿದ್ದ ಎನ್ನುವುದಕ್ಕೆ ಸಾಕ್ಷ್ಯಗಳಿವೆ. ವೀಡಿಯೊ ಒಂದರಲ್ಲಿ ‘‘ಮೆರವಣಿಗೆಯಲ್ಲಿ ನಾನೂ ಭಾಗವಹಿಸುತ್ತಿದ್ದೇನೆ. ನೀವು ಬನ್ನಿ’’ ಎಂದು ಕರೆಕೊಟ್ಟಾಗಲೇ, ಗಲಭೆ ನಡೆಯುವ ಸೂಚನೆ ಸ್ಥಳೀಯರಿಗೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ಪೊಲೀಸರು ಚುರುಕಾಗಿ ಈತನನ್ನು ಮತ್ತು ಈತನ ಹಿಂಬಾಲಕರನ್ನು ಬಂಧಿಸಿದ್ದಿದ್ದರೆ ಹಿಂಸಾಚಾರವನ್ನು ತಪ್ಪಿಸಬಹುದಾಗಿತ್ತು.

ಯೂಟ್ಯೂಬ್ ಮೂಲಕ ದ್ವೇಷ ಹರಡುತ್ತಿದ್ದ ಮೋನು ಮನೆಸರ್ ಒಂದು ಲಕ್ಷ ಚಂದಾದಾರರನ್ನು ಪಡೆದ ಕಾರಣಕ್ಕೆ, ಕಳೆದ ವರ್ಷದ ಅಕ್ಟೋಬರ್ನಲ್ಲಿ ‘ಸಿಲ್ವರ್ ಪ್ಲೇ ಬಟನ್’ ಪ್ರಶಸ್ತಿಯನ್ನು ಯೂಟ್ಯೂಬ್ನಿಂದ ಪಡೆದುಕೊಂಡಿದ್ದಾನೆ. ಹರ್ಯಾಣ ನಿವಾಸಿಯಾಗಿರುವ ಮೋನು ಮನೆಸರ್, ತಾನು ಮತ್ತು ತನ್ನ ಗೆಳೆಯರು ಜನರನ್ನು ಬೆನ್ನಟ್ಟಿ ಹಲ್ಲೆ ನಡೆಸುವುದನ್ನು ತೋರಿಸುವ ವೀಡಿಯೊಗಳನ್ನು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಾಕುತ್ತಿರುತ್ತಾನೆ. ತಾವು ಬೆನ್ನಟ್ಟಿ ಹಲ್ಲೆ ಮಾಡುವ ಜನರು ಕಸಾಯಿಖಾನೆಗೆ ದನಗಳನ್ನು ಸಾಗಿಸುತ್ತಿದ್ದರು ಎಂದು ವೀಡಿಯೊದಲ್ಲಿ ಅವನು ಆರೋಪಿಸುತ್ತಾನೆ. ಮನೆಸರ್ ಬಜರಂಗದಳದ ಸದಸ್ಯ. ಹಿಂದಿನಿಂದಲೂ ಈತನ ಪ್ರಧಾನ ಗುರಿ ಹರ್ಯಾಣದ ಸಣ್ಣ ಮುಸ್ಲಿಮ್ ಬಾಹುಳ್ಯದ ಪ್ರದೇಶ ನೂಹ್ನ ನಿವಾಸಿಗಳು. ಜನವರಿಯಲ್ಲಿ ತನ್ನ ನೇತೃತ್ವದ ಗುಂಪೊಂದು ನೂಹ್ನ ಮೂವರು ಮುಸ್ಲಿಮರಿಗೆ ಹಲ್ಲೆ ನಡೆಸಿ ಅಪಹರಿಸುವುದನ್ನು ತೋರಿಸುವ ವೀಡಿಯೊವೊಂದನ್ನು ಮನೆಸರ್ ಯೂಟ್ಯೂಬ್ನಲ್ಲಿ ಹಾಕಿದ್ದನು. ಬಳಿಕ, ಅಪಹೃತರ ಪೈಕಿ ಓರ್ವನಾಗಿದ್ದ ವಾರಿಸ್ ಖಾನ್ ಶವವಾಗಿ ಪತ್ತೆಯಾಗಿದ್ದರು. ಆ ಸಂದರ್ಭದಲ್ಲೇ ಈತನ ಬಂಧನವಾಗಿದ್ದಿದ್ದರೆ ಹರ್ಯಾಣದಲ್ಲಿ ಹಿಂಸಾಚಾರವೇ ನಡೆಯುತ್ತಿರಲಿಲ್ಲ. ದುರದೃಷ್ಟಕ್ಕೆ ಅಂದು ಪೊಲೀಸರೇ ‘‘ಹತ್ಯೆಯಲ್ಲಿ ಮನೆಸರ್ ಪಾತ್ರವಿಲ್ಲ’’ ಎಂದು ಕ್ಲೀನ್ಚಿಟ್ ನೀಡಿದ್ದರು.

ಒಂದು ತಿಂಗಳ ಬಳಿಕ, ರಾಜಸ್ಥಾನದ ಇನ್ನಿಬ್ಬರು ಮುಸ್ಲಿಮರು- ಜುನೈದ್ ಮತ್ತು ನಾಸಿರ್- ಹರ್ಯಾಣದಲ್ಲಿ ಕಾರೊಂದರಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಂಬಂಧಿಕರೂ ಈ ಕೊಲೆಗಳಲ್ಲಿ ಮನೆಸರ್ ಹಾಗೂ ಪೊಲೀಸರು ದುಷ್ಕರ್ಮಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು. ಮನೆಸರ್ನನ್ನು ಬಂಧಿಸಲು ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಬದಲಿಗೆ, ಮನೆಸರ್ಗೆ ಹಿಂದುತ್ವ ಗುಂಪುಗಳಿಂದ ಅಗಾಧ ಬೆಂಬಲ ವ್ಯಕ್ತವಾಯಿತು. ಅವನಿಗೆ ಬೆಂಬಲ ವ್ಯಕ್ತಪಡಿಸಲು ಸಮುದಾಯ ಪಂಚಾಯತ್ಗಳನ್ನು ನಡೆಸಲಾಯಿತು. ‘‘ಮೋನುನನ್ನು ಬಂಧಿಸಲು ರಾಜಸ್ಥಾನ ಪೊಲೀಸರು ಇಲ್ಲಿಗೆ ಗೆ ಕಾಲಿರಿಸಿದರೆ, ಅವರು ಬಂದ ಹಾಗೆ ವಾಪಸ್ ಹೋಗುವುದಿಲ್ಲ’’ ಎಂದು ಸಭೆಯಲ್ಲಿ ಬಹಿರಂಗ ಸವಾಲು ಹಾಕಿದಾಗಲೂ ಸರಕಾರ ಮೌನವಿತ್ತು. ಇದರ ಅರ್ಥವಾದರೂ ಏನು? ಒಂದೋ ಪೊಲೀಸ್ ಇಲಾಖೆ ಈ ಗೂಂಡಾನಿಗೆ ಹೆದರುತ್ತಿದೆ ಅಥವಾ ಆ ಗೂಂಡಾನೇ ಹರ್ಯಾಣ ಪೊಲೀಸ್ ಇಲಾಖೆಯನ್ನು ನಿಯಂತ್ರಿಸುತ್ತಿದ್ದಾನೆ.

ಹಿಂಸಾಚಾರದಲ್ಲಿ ಮನೆಸರ್ನ ಪಾತ್ರದ ಬಗ್ಗೆ ಹರ್ಯಾಣ ಸರಕಾರವು ಈಗ ತನಿಖೆ ನಡೆಸುವ ನಾಟಕ ಮಾಡುತ್ತಿದೆ. ಒಂದೆಡೆ ಪೊಲೀಸರು ಆತನನ್ನು ಹುಡುಕಾಡುತ್ತಿದ್ದಾರೆ, ಆದರೆ ಆತ ವೀಡಿಯೋಗಳ ಮೇಲೆ ವೀಡಿಯೋಗಳನ್ನು ಮಾಡುತ್ತಾ ಪೊಲೀಸರಿಗೆ ಸವಾಲುಹಾಕುತ್ತಿದ್ದಾನೆ. ಇಷ್ಟಾದರೂ ಹರ್ಯಾಣ ಸರಕಾರ ಈ ಬಗ್ಗೆ ತುಟಿ ಬಿಚ್ಚಿಲ್ಲ. ಬಿಜೆಪಿಯ ತಂತ್ರಗಾರಿಕೆ ಇಲ್ಲಿ ಸ್ಪಷ್ಟವಿದೆ. ಹರ್ಯಾಣದಲ್ಲಿ ಮಾಡಿದ ಕೊಲೆಗಳಿಗಾಗಿ ಮನೆಸರ್ನನ್ನು ಬಂಧಿಸಲು ಹರ್ಯಾಣ ಮುಖ್ಯಮಂತ್ರಿ ಖಟ್ಟರ್ ನಿರಾಕರಿಸಿದ್ದಾರೆ. ಆದರೆ, ರಾಜಸ್ಥಾನ ಪೊಲೀಸರು ಅವನನ್ನು ಬಂಧಿಸಬಹುದಾಗಿದೆ ಎಂದು ಗುರುವಾರ ಹೇಳಿದ್ದಾರೆ. ಆದರೆ, ಈ ಹಿಂದೆ ರಾಜಸ್ಥಾನ ಪೊಲೀಸರು ಮನೆಸರ್ನನ್ನು ಬಂಧಿಸಲು ಪ್ರಯತ್ನಿಸಿದ್ದಾಗ ರಾಜಸ್ತಾನದ ಪೊಲೀಸರ ವಿರುದ್ಧವೇ ಎಫ್ಐಆರ್ ದಾಖಲಾಗಿತ್ತು. ನೂಹ್ ಗಲಭೆಯ ಬಳಿಕ ಈತನನ್ನು ಬಂಧಿಸುವ ಬದಲು, ಹರ್ಯಾಣ ಸರಕಾರ ನೂರಾರು ಅಮಾಯಕರ ಗುಡಿಸಲುಗಳನ್ನು ಬುಲ್ಡೋಜರ್ಗಳ ಮೂಲಕ ಉರುಳಿಸಿದೆ. ‘‘ಇವೆಲ್ಲವು ಅಕ್ರಮ ಗುಡಿಸಲುಗಳು’’ ಎನ್ನುವುದು ಸರಕಾರದ ಆರೋಪವಾಗಿದೆ. ಬಹುಶಃ ಬಜರಂಗದಳ ನೇತೃತ್ವದಲ್ಲಿ ನಡೆದ ಅನ್ಯಾಯಕ್ಕಿಂತಲೂ ಸರಕಾರದ ನೇತೃತ್ವದಲ್ಲಿ ನಡೆದ ಈ ಅನ್ಯಾಯ ಭೀಕರವಾಗಿದೆ. ಗಲಭೆಯ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಹಲವು ಅಂಗಡಿ, ಮುಂಗಟ್ಟುಗಳನ್ನು ಧ್ವಂಸಗೊಳಿಸಿದರೆ, ಗಲಭೆಯ ಬಳಿಕ ಧ್ವಂಸಗೊಳಿಸುವ ನೇತೃತ್ವವನ್ನು ಸರಕಾರವೇ ವಹಿಸಿತು. ಇದು ನೂಹ್ ಜಿಲ್ಲೆಯ ಸಂತ್ರಸ್ತರ ಗಾಯಗಳ ಮೇಲೆ ಬರೆ ಎಳೆದಂತಾಗಿದೆ. ನೂಹ್ ಜಿಲ್ಲೆಯಲ್ಲಿ ಬದುಕುತ್ತಿದ್ದ ವಲಸೆ ಕೂಲಿ ಕಾರ್ಮಿಕರನ್ನು ಅತ್ಯಂತ ಕ್ರೂರವಾಗಿ ಒಕ್ಕಲೆಬ್ಬಿಸಲಾಗಿದೆ. ಆ ವಲಸೆ ಕಾರ್ಮಿಕರು ಕೃಷಿ ಕಾರ್ಯಗಳಲ್ಲಿ ಹಲವು ದಶಕಗಳಿಂದ ಹೆಗಲು ಸೇರಿಸುತ್ತಾ ಬಂದವರಾಗಿದ್ದರು. ಆ ಕಾರ್ಮಿಕರನ್ನೇ ಇಂದು ವಿದೇಶಿಯರು ಎಂಬ ಹಣೆಪಟ್ಟಿ ಕಟ್ಟಿ ಹೊರದಬ್ಬುವ ಪ್ರಯತ್ನ ಸರಕಾರದ ನೇತೃತ್ವದಲ್ಲಿ ನಡೆಯುತ್ತಿದೆ.

ಇಡೀ ಪ್ರಕರಣದಿಂದ ಹರ್ಯಾಣವನ್ನು ಮೋನು ಮನೆಸರ್ರಂತಹ ಗೂಂಡಾಗಳು ಆಳುತ್ತಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಪಕ್ಷ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಧ್ವನಿಯಲ್ಲಿ ಮಾತನಾಡುತ್ತಿರುವಾಗ ಬಿಜೆಪಿಗೆ ಮೋನ್ ಮನೆಸರ್ನಂತಹ ಮೃಗಗಳು ಚುನಾವಣೆ ಎದುರಿಸಲು ಇರುವ ಕಟ್ಟಕಡೆಯ ಆಸರೆಯಾಗಿದೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋನು ಮನೆಸರ್ನಂತಹ ನರಭಕ್ಷಕ ಮೃಗಗಳನ್ನು ಪೋಷಿಸುತ್ತಿರುವ ಸರಕಾರ, ಇಡೀ ದೇಶವನ್ನು ಒಂದಲ್ಲ ಒಂದು ದಿನ ಈ ಮೃಗಗಳಿಗೆ ಆಹಾರವಾಗಿ ನೀಡಲಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News