ತಾನೂ ಕೊಡ, ಕೊಡುವವರನ್ನೂ ಬಿಡ!

Update: 2023-09-01 03:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘‘ಸರಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ’’ ಎನ್ನುವ ಮಾತುಗಳನ್ನು ಪ್ರಧಾನಿ ಮೋದಿಯವರು ಪದೇ ಪದೇ ಆಡುತ್ತಾ ಬಂದಿದ್ದಾರೆ. ಸಾರ್ವಜನಿಕ ಸಂಸ್ಥೆಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುವ ಸಂದರ್ಭಗಳಲ್ಲಿ ಈ ಮಾತುಗಳನ್ನು ಸರಕಾರ ಊರುಗೋಲಾಗಿ ಬಳಸುತ್ತಾ ಬಂದಿದೆ. ‘‘ಉದ್ಯಮ ನಡೆಸುವುದು ಸರಕಾರದ ಕೆಲಸವಲ್ಲ’’ ಎನ್ನುತ್ತಾ ಲಾಭದಾಯಕವಾಗಿದ್ದ ಹಲವು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಜನರ ಮಡಿಲಿಗೆ ಹಾಕಿದೆ. ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಖಾಸಗಿ ಸೊತ್ತಾಗಿವೆ. ಸರಕಾರಿ ಆಸ್ಪತ್ರೆಗಳನ್ನು, ಶಾಲೆಗಳನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಮುನ್ನಡೆಸಲು ಮುಂದಾಗುತ್ತಿದೆ. ಹಾಗಾದರೆ ಸರಕಾರವಿರುವುದು ಕೇವಲ ತೆರಿಗೆ ಸಂಗ್ರಹಿಸುವುದಕ್ಕೆ ಮಾತ್ರವೆ? ಈ ಸಂಗ್ರಹಿಸಿದ ತೆರಿಗೆಗಳನ್ನು ಸದುಪಯೋಗಗೊಳಿಸುವ ಹೊಣೆಗಾರಿಕೆ ಸರಕಾರದ ಮುಂದಿಲ್ಲವೆ? ಸರಕಾರಿ ಸಂಸ್ಥೆಗಳನ್ನು ಕಟ್ಟುವುದು ಲಾಭ ಪಡೆಯುವುದಕ್ಕಾಗಿ ಅಲ್ಲ. ಜನರ ಸೇವೆಗಾಗಿ. ಬಡವರಿಗೆ, ದುರ್ಬಲರಿಗೆ ಆಗುವ ಸಹಾಯವೇ ಸರಕಾರದ ಲಾಭ. ಆದರೆ ಇತ್ತೀಚೆಗೆ ಸರಕಾರ ಲಾಭವನ್ನು ಹಣದ ಮೂಲಕ ಗುರುತಿಸಲು ಮುಂದಾಗುತ್ತಿದೆ. ಸರಕಾರ ನಡೆಸುವುದೆಂದರೆ ಪ್ರಜೆಗಳನ್ನು ದರೋಡೆ ಮಾಡುವುದು ಎಂದು ನಂಬುವಂತಾಗಿದೆ.

ಇದೇ ಸಂದರ್ಭದಲ್ಲಿ ಈ ದೇಶದ ಪರಿಸರ, ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳಿಗಾಗಿ ಪರ್ಯಾಯ ಸರಕಾರವಾಗಿ ನೂರಾರು ಸರಕಾರೇತರ ಸಂಸ್ಥೆಗಳು ದುಡಿಯುತ್ತಾ ಬಂದಿವೆ. ಈ ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಈ ಮಟ್ಟಕ್ಕೆ ತಲುಪಬೇಕಾದರೆ ಲಾಭದ ಉದ್ದೇಶಗಳಿಲ್ಲದ ಇಂತಹ ಸಂಸ್ಥೆಗಳ ಕೊಡುಗೆ ಬಹುದೊಡ್ಡದು. ವಿಶ್ವದ ಸಹಸ್ರಾರು ದಾನಿಗಳು ಈ ಸಂಸ್ಥೆಗಳಿಗೆ ತಮ್ಮ ಹಣವನ್ನು ದಾನವಾಗಿ ನೀಡುತ್ತಾ ಬಡ ರಾಷ್ಟ್ರಗಳಿಗೆ ನೆರವಾಗುತ್ತಾ ಬರುತ್ತಿದ್ದಾರೆ. ಈ ಸರಕಾರೇತರ ಸಂಸ್ಥೆಗಳು ಸಮಾಜದ ಒಳಿತಿಗಾಗಿ ದುಡಿಯುವುದು ಮಾತ್ರವಲ್ಲ, ಸರಕಾರದ ಜನವಿರೋಧಿ ನೀತಿಗಳ ವಿರುದ್ಧವೂ ಮಾತನಾಡುತ್ತಾ ಬಂದಿವೆ. ಪರಿಸರಕ್ಕೆ ಅನ್ಯಾಯವಾದಾಗ ಧ್ವನಿಯೆತ್ತಿವೆ. ಆದಿವಾಸಿಗಳ ಪರವಾಗಿ ಮಿಡಿದಿವೆ. ಗ್ರಾಮೀಣ ಪ್ರದೇಶದಲ್ಲಿ ನೀರು, ಶಿಕ್ಷಣ ಎಂದು ಸರಕಾರ ಮಾಡಬೇಕಾದ ಕೆಲಸಗಳನ್ನು ಮಾಡಿವೆ. ಭಾರತದ ಅಭಿವೃದ್ಧಿಯಲ್ಲಂತೂ ಇಂತಹ ಲಾಭ ರಹಿತ ಸರಕಾರೇತರ ಸಂಸ್ಥೆಗಳ ಪಾತ್ರ ಬಹುದೊಡ್ದದು.

ಆದರೆ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ದಿನಗಳಿಂದ ಅದು ಇಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳತೊಡಗಿತು. ಪರಿಸರ, ಬಡತನ, ಆರೋಗ್ಯದ ಬಗ್ಗೆ ಭಾರತವನ್ನು ಜಾಗತಿಕವಾಗಿ ಪ್ರತಿನಿಧಿಸುವ, ಇಲ್ಲಿನ ಸರಕಾರದ ನೀತಿಗಳನ್ನು ಟೀಕಿಸುವ ಸಂಘಟನೆಗಳನ್ನು ತನ್ನ ವೈರಿ ಎಂದು ಭಾವಿಸುತ್ತಾ ಬಂತು. ಬೇರೆ ಬೇರೆ ತಂತ್ರಗಳ ಮೂಲಕ ಅವುಗಳ ದಮನಗಳನ್ನು ಆರಂಭಿಸಿತು. ಈ ದೇಶದ ಕಾರ್ಪೊರೇಟ್ ಶಕ್ತಿಗಳ ಸೂಚನೆಯಂತೆ ಸರಕಾರ ಈ ಕೃತ್ಯಗಳನ್ನು ಎಸಗುತ್ತಾ ಬಂದಿದೆ. ಆದಿವಾಸಿಗಳ ಬಗ್ಗೆ ಮಾತನಾಡುವ ಸಂಘಟನೆಗಳನ್ನು, ಅದರ ಕಾರ್ಯಕರ್ತರನ್ನು ಸರಕಾರಿ ವಿರೋಧಿಗಳು ಎಂದು ಬಿಂಬಿಸಿತು. ಆ ಸಂಸ್ಥೆಗಳಿಗೆ ಸಿಗುವ ವಿದೇಶಿ ದೇಣಿಗೆಗಳನ್ನು ತಡೆಯುವ ಮೂಲಕ ಸಂಸ್ಥೆಗಳ ಕೈ ಕಾಲುಗಳನ್ನು ಕಟ್ಟಿ ಹಾಕಿತು. ಇದರಿಂದ ಪರಿಸರ, ಅರಣ್ಯಗಳನ್ನು ಲೂಟಿ ಮಾಡುವ ಕಾರ್ಪೊರೇಟ್ ದೊರೆಗಳಿಗೆ ತಮ್ಮ ಕೆಲಸ ಸುಲಭವಾಯಿತು. ಬಡವರ ಕಡೆಗೆ ಸರಕಾರವೂ ಬೆನ್ನು ಹಾಕಿ ನಿಂತಿತು. ಜೊತೆಗೆ ಬಡವರಿಗಾಗಿ ಮಿಡಿಯುತ್ತಿದ್ದ ಲಾಭರಹಿತ ಸರಕಾರೇತರ ಸಂಘಟನೆಗಳನ್ನು ಕೂಡ ಕೆಲಸ ಮಾಡದಂತೆ ನೋಡಿಕೊಂಡಿತು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅಪೌಷ್ಟಿಕತೆ, ಅನಾರೋಗ್ಯ ಹೆಚ್ಚುವುದಕ್ಕೆ ಇದೂ ಕಾರಣವಾಗಿದೆ.

ಕಳೆದ ಏಳು ತಿಂಗಳ ಅವಧಿಯಲ್ಲಿ ೧೦೦ಕ್ಕೂ ಅಧಿಕ ಲಾಭದ ಉದ್ದೇಶಗಳಿಲ್ಲದ ಸರಕಾರೇತರ ಸಂಘಟನೆಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಪರವಾನಿಗೆಗಳನ್ನು ಕಳೆದುಕೊಂಡವು. ಈ ಕಾರಣದಿಂದ ನೂರಾರು ಸಂಸ್ಥೆಗಳು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಬೇಕಾಯಿತು. ಇದರ ನೇರ ಬಲಿಪಶುಗಳು ಈ ದೇಶದ ಯುವಕರು. ಈ ಸಂಸ್ಥೆಗಳು ಬಾಗಿಲು ಮುಚ್ಚಿದ ಕಾರಣದಿಂದಾಗಿ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದ ಸಾವಿರಾರು ಯುವಕರು ಕೆಲಸ ಕಳೆದುಕೊಂಡರು. ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಬೃಹತ್ ಸರಕಾರೇತರ ಸಂಸ್ಥೆಗಳಲ್ಲಿ ಒಂದಾಗಿರುವ ‘ಕೇರ್’ನಲ್ಲಿ ೪,೦೦೦ ಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎನ್ನುವುದು ವರದಿಯಾಗಿದೆ. ಒಂದು ಖಾಸಗಿ ಉದ್ಯಮ ಸಂಸ್ಥೆ ಮುಚ್ಚಿದಾಗ

ಕೆಲಸ ಕಳೆದುಕೊಂಡ ಉದ್ಯೋಗಿಗಳ ಸಂಖ್ಯೆ ಚರ್ಚೆಯಾಗುತ್ತದೆ. ಆದರೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಕಾರಣದಿಂದಾಗಿ ಮುಚ್ಚಲ್ಪಟ್ಟ ಸರಕಾರೇತರ ಸಂಸ್ಥೆಗಳಲ್ಲಿ ಕೆಲಸ ಕಳೆದುಕೊಂಡವರ ಕುರಿತ ವರದಿಗಳು ಚರ್ಚೆಯಾಗಲೇ ಇಲ್ಲ. ಇಲ್ಲಿ ಕೆಲಸ ಮಾಡುತ್ತಿರುವ ಯುವಕರಲ್ಲಿ ಬಹುತೇಕರು ಪದವೀಧರರು. ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಇವರು ಜನಸಾಮಾನ್ಯರ ನಡುವೆ ಓಡಾಡುತ್ತಾ ಕೆಲಸ ಮಾಡುತ್ತಾ ಬಂದವರು. ವಿದೇಶಿ ದೇಣಿಗೆಗಳಿಂದ ಈ ಸಂಘಟನೆಗಳು ಈ ದೇಶದ ಸಹಸ್ರಾರು ಯುವಕರಿಗೆ ಉದ್ಯೋಗಗಳನ್ನು ನೀಡುತ್ತಾ ಬಂದಿವೆ. ಸರಕಾರದ ಕಾರಣದಿಂದಲೇ ಇವರು ಬೀದಿಗೆ ಬೀಳುವಂತಾಗಿದೆ.

ಇಷ್ಟಕ್ಕೂ ಈ ಯುವಕರು ಸಾಮಾಜಿಕ ಬದ್ಧತೆಗಾಗಿ ತಮ್ಮನ್ನು ಮೀಸಲಿರಿಸಿಕೊಂಡವರು. ಗ್ರಾಮೀಣ ಪ್ರದೇಶಗಳ ಆರೋಗ್ಯ, ಶಿಕ್ಷಣ, ಅಪೌಷ್ಟಿಕತೆಗಳಿಗೆ ಸ್ಪಂದಿಸುತ್ತಾ ಸಂಘಟನೆಗಳ ಮೂಲಕ ಅವರ ಏಳಿಗೆಗಾಗಿ ತಮ್ಮನ್ನು ಮೀಸಲಿರಿಸಿಕೊಂಡವರು. ಕೇಂದ್ರ ಸಚಿವಾಲಯದ ೨೦೧೨ರ ವರದಿಯೊಂದರ ಪ್ರಕಾರ, ನಾಗರಿಕ ಸಮಾಜದ ಸಂಘಟನೆಗಳು ೨೭ ಲಕ್ಷ ಉದ್ಯೋಗಗಳನ್ನು ಒದಗಿಸಿವೆ ಮತ್ತು ೩೪ ಲಕ್ಷ ಪೂರ್ಣಕಾಲಿಕ ಸ್ವಯಂಸೇವಕರನ್ನು ಹೊಂದಿವೆ. ಸರಕಾರಿ ಕ್ಷೇತ್ರಗಳ ಉದ್ದಿಮೆಗಳು ಒದಗಿಸುವ ಉದ್ಯೋಗಕ್ಕಿಂತಲೂ ಅಧಿಕ ಉದ್ಯೋಗಗಳನ್ನು ಅವುಗಳು ನೀಡುತ್ತಿವೆ. ೫೧೫ ಲಾಭದ ಉದ್ದೇಶಗಳಿಲ್ಲದ ಸಾಮಾಜಿಕ ಸಂಘಟನೆಗಳ ಸಮೀಕ್ಷೆಯೊಂದನ್ನು ಸಿವಿಲ್ ಸೊಸೈಟಿ ಆರ್ಗನೈಸೇಶನ್ ಕೋಯಲೀಶನ್‌ನಡೆಸಿತು. ತಾವು ಕಾರ್ಯಾಚರಿಸುತ್ತಿರುವ ಪ್ರದೇಶಗಳ ಅರ್ಧಕ್ಕೂ ಅಧಿಕ ಸ್ಥಳಗಳಲ್ಲಿ ಔಪಚಾರಿಕ ಉದ್ಯೋಗಗಳನ್ನು ನೀಡುತ್ತಿರುವ ದೊಡ್ಡ ಉದ್ಯೋಗದಾತ ಸಂಸ್ಥೆಗಳು ತಾವು ಎಂಬುದಾಗಿ ೪೭ ಶೇ. ಸರಕಾರೇತರ ಸಂಘಟನೆಗಳು ಹೇಳಿವೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಈ ಲಾಭದ ಉದ್ದೇಶಗಳಿಲ್ಲದ ಪರೋಪಕಾರಿ ಸಂಸ್ಥೆಗಳು ಸರಕಾರ ಮತ್ತು ಜನರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿವೆ. ಇಂತಹ ಶೇ. ೫೦ಕ್ಕೂ ಅಧಿಕ ಸಂಘಟನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿವೆ. ಅವುಗಳು ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಜೀವನೋಪಾಯ, ನೀರು ಮತ್ತು ನೈರ್ಮಲ್ಯ, ಹವಾಮಾನ ಬದಲಾವಣೆ, ಕೃಷಿ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು ಮತ್ತು ಅಂಗವೈಕಲ್ಯ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿವೆ.

ಎಫ್‌ಸಿಆರ್‌ಎ ಪರವಾನಿಗೆಗಳು ರದ್ದಾಗುವಾಗ, ಬೇರೆ ಬೇರೆ ರೀತಿಯ ಸಾಮಾಜಿಕ ಸೇವಾ ಕೆಲಸಗಳೂ ನಿಲ್ಲುತ್ತವೆ. ಶಿಶು ರಕ್ಷಣೆ, ರೋಗನಿರೋಧಕತೆ, ಪ್ರಸವದ ವೇಳೆ ಸಂಭವಿಸುವ ಸಾವುಗಳ ತಡೆಗಟ್ಟುವಿಕೆ, ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಒದಗಿಸುವುದು, ಬಾಲ್ಯಾವಸ್ಥೆಯ ಕಲಿಕೆಗಾಗಿ ಶಿಕ್ಷಕ ತರಬೇತಿ ಸಾಮಗ್ರಿ ಗಳ ಸೃಷ್ಟಿ, ಮಕ್ಕಳನ್ನು ಶಾಲೆಗೆ ಸೇರಿಸುವ ಬಗ್ಗೆ ಹೆತ್ತವರೊಂದಿಗೆ ಚರ್ಚೆ, ಯುವಕರಿಗೆ ಕೌಶಲ ಮತ್ತು ಜೀವನೋಪಾಯ ಅವಕಾಶಗಳನ್ನು ಒದಗಿಸುವುದು, ಸರಕಾರಿ ಸೌಲಭ್ಯಗಳನ್ನು ತೆಗೆಸಿಕೊಡುವುದು- ಮುಂತಾದ ಕ್ಷೇತ್ರಗಳಲ್ಲಿನ ಕೆಲಸ ನಿಂತುಹೋಗಿದೆ. ಹಾಗಾಗಿ, ಎಫ್‌ಸಿಆರ್‌ಎ ಅನುಮೋದನೆಗಳು ನಿಂತ ಬಳಿಕ, ಅವುಗಳನ್ನು ಕಳೆದುಕೊಂಡಿರುವ ಪರೋಪಕಾರಿ ಸಂಘಟನೆಗಳಿಂದ ಸೇವೆಗಳನ್ನು ಪಡೆಯುತ್ತಿದ್ದ ಸುಮಾರು ೮ ಲಕ್ಷ ಜನರು ಸೇವೆಗಳಿಂದ ವಂಚಿತರಾಗಿದ್ದಾರೆ. ಒಂದೆಡೆ ಸಂಸ್ಥೆಗಳಲ್ಲಿರುವ ಉದ್ಯೋಗಿಗಳೆಲ್ಲರೂ ನಿರುದ್ಯೋಗಿಗಳಾಗಿದ್ದಾರೆ. ಇವರೆಲ್ಲರೂ ಭಾರತದ ಭವಿಷ್ಯದ ಆಧಾರ ಸ್ತಂಭವಾಗಿದ್ದಾರೆ. ಇನ್ನೊಂದೆಡೆ ಈ ಉದ್ಯೋಗಿಗಳ ಮೂಲಕ ಸೇವೆ ಪಡೆಯುತ್ತಿದ್ದ ಜನಸಾಮಾನ್ಯರು ಕೂಡಾ ಸೇವಾ ವಂಚಿತರಾಗಿದ್ದಾರೆ. ಇದು ಗ್ರಾಮೀಣ ಪ್ರದೇಶದ ಬೇರೆ ಬೇರೆ ವಲಯಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ವಿದೇಶಿ ದೇಣಿಗೆಯನ್ನು ತಡೆದು ಹಲವು ಸರಕಾರೇತರ ಸಂಸ್ಥೆಗಳನ್ನು ಮುಚ್ಚಿಸಿರುವ ಸರಕಾರ, ಆ ಸಂಸ್ಥೆಗಳು ಮಾಡಿಕೊಂಡು ಬಂದ ಸಾಮಾಜಿಕ ಕೆಲಸಗಳನ್ನು ಮುಂದುವರಿಸಲು ಸಿದ್ಧವಿದೆಯೆ? ಅಂತಹ ಸಂಸ್ಥೆಗಳಲ್ಲಿ ಕೆಲಸ ಕಳೆದುಕೊಂಡ ಯುವಕರಿಗೆ ಕೆಲಸ ನೀಡಲು ಸರಕಾರ ತಯಾರಿದೆಯೆ? ಈ ಪ್ರಶ್ನೆಗಳಿಗೆ ಸರಕಾರ ಮೌನವನ್ನೇ ಉತ್ತರವಾಗಿಸಿದೆ. ‘ತಾನೂ ಕೊಡ, ಕೊಡುವವರನ್ನೂ ಬಿಡ’ ಎನ್ನುವಂತೆ ಸರಕಾರ ಗ್ರಾಮೀಣ ಪ್ರದೇಶದ ಬಡವರಿಗೆ ತಾನೂ ಕೊಡಲಾರೆ, ಕೊಡುವವರನ್ನೂ ಬಿಡಲಾರೆ ಎನ್ನುವ ನೀತಿಯನ್ನು ಅನುಸರಿಸುತ್ತಿದೆ. ಇದು ಅಮಾನವೀಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News