ಪ್ರಜಾಸತ್ತೆಯ ಹೈಜಾಕ್: ನಾಪತ್ತೆಯಾಗಿರುವ ಚುನಾವಣಾ ಆಯೋಗ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚುನಾವಣೆ ನಡೆದು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿಗಳನ್ನು ಹಣದ ಮೂಲಕ ಕೊಂಡು ಅವರ ಕೈಯಿಂದ ರಾಜೀನಾಮೆ ನೀಡಿಸಿ ಪ್ರಜಾಸತ್ತೆಯನ್ನು ಹೈಜಾಕ್ ಮಾಡುತ್ತಿರುವುದನ್ನು ಜನರು ಅಸಹಾಯಕರಾಗಿ ನೋಡುತ್ತಾ ಬರುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನೇ ತಮಾಷೆಗೀಡು ಮಾಡುವ ಆಪರೇಷನ್ ಕಮಲದ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಬೇಕಾಗಿದ್ದ ಚುನಾವಣಾ ಆಯೋಗ ಪ್ರಜಾಸತ್ತೆಯನ್ನು ಬುಡಮೇಲುಗೊಳಿಸುವ ಈ ಕೃತ್ಯಕ್ಕೆ ಮೌನ ಕುಮ್ಮಕ್ಕನ್ನು ನೀಡುತ್ತಾ ಬಂದಿದೆ. ಪರಿಣಾಮವಾಗಿ ಇಂದು ಆಪರೇಷನ್ ಕಮಲವೆನ್ನುವ ಪ್ರಜಾಪ್ರಭುತ್ವ ಹೆಗ್ಗಳಿಕೆಯಾಗಿ ಗುರುತಿಸಲ್ಪಡುತ್ತಿದೆ. ‘ಚಾಣಕ್ಯ ತಂತ್ರ’ವೆಂದು ಮಾಧ್ಯಮ ಇದನ್ನು ಬಣ್ಣಿಸುತ್ತಿದೆ. ವಿಪರ್ಯಾಸವೆಂದರೆ, ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಮತದಾನ ನಡೆಯುವ ಮೊದಲೇ ಬಿಜೆಪಿ ಆಪರೇಷನ್ ಕಮಲ ಮಾಡುವಲ್ಲಿ ಯಶಸ್ವಿಯಾಗಿದೆ. ಗುಜರಾತ್ನ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಇತರ ಎಲ್ಲ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಏಕಾಏಕಿ ಹಿಂದೆಗೆದುಕೊಂಡಿದ್ದು, ಬಿಜೆಪಿಯ ಮುಕೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಏಳು ಪಕ್ಷೇತರರು ಮತ್ತು ಬಿಎಸ್ಪಿಯ ಪ್ಯಾರೇಲಾಲ್ ಭಾರ್ತಿ ಸೇರಿದಂತೆ ಎಂಟು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದೆಗೆದುಕೊಂಡಿದ್ದಾರೆ. ರವಿವಾರ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿಯವರ ಮೂವರು ಸೂಚಕರು
ನಾಮಪತ್ರಕ್ಕೆ ತಾವು ಸಹಿ ಹಾಕಿಲ್ಲವೆಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸಿದ ಬಳಿಕ ಈ ಎಲ್ಲ ಬೆಳವಣಿಗೆಗಳು ನಡೆದಿವೆ. ಈ ನಡುವೆ ನಾಮಪತ್ರ ತಿರಸ್ಕೃತಗೊಂಡಿರುವ ನೀಲೇಶ್ ಕುಂಭಾನಿಯವರು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈವರೆಗೆ ಚುನಾವಣೆ ನಡೆದು ಗೆದ್ದ ಅಭ್ಯರ್ಥಿಯನ್ನು ಬಿಜೆಪಿ ಖರೀದಿ ಮಾಡುತ್ತಿದ್ದರೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳನ್ನೇ ಖರೀದಿಸಿ ತನ್ನ ಪಕ್ಷದ ಅಭ್ಯರ್ಥಿಯನ್ನು ಬಿಜೆಪಿ ಅವಿರೋಧವಾಗಿ ಗೆಲ್ಲಿಸಲು ಮುಂದಾಗಿದೆ. ಬಿಜೆಪಿಯ ‘ಆಪರೇಷನ್ ಕಮಲ’ ಯಾವ ಹಂತಕ್ಕೆ ತಲುಪಿದೆ ಎಂದರೆ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಮಾತ್ರವಲ್ಲ, ಆತನನ್ನು ಸೂಚಿಸುವ, ಅನುಮೋದಿಸುವ ಜನರನ್ನೂ
ಖರೀದಿಸುವ ಮೂಲಕ ಚುನಾವಣೆಯ ಅಕ್ರಮಕ್ಕೆ ಹೊಸತೊಂದು ಅಧ್ಯಾಯವನ್ನೇ ಸೇರಿಸಿದೆ. ಮುಂದಿನ ದಿನಗಳಲ್ಲಿ, ಚುನಾವಣಾ ಅಭ್ಯರ್ಥಿಗಳು, ಸೂಚಕರು, ಅನುಮೋದಕರು ಎಲ್ಲರನ್ನೂ ಚುನಾವಣೆ ಮುಗಿಯುವವರೆಗೆ ರಿಸಾರ್ಟ್ ನಲ್ಲಿ ಕಾಪಾಡಬೇಕಾದಂತಹ ಸ್ಥಿತಿ ಪಕ್ಷಗಳಿಗೆ ನಿರ್ಮಾಣವಾಗಬಹುದು. ಚುನಾವಣೆಗೆ ಮುನ್ನವೇ ಇತರ ಪಕ್ಷಗಳ ಅಭ್ಯರ್ಥಿಗಳನ್ನು ಖರೀದಿ ಮಾಡಿ ಚುನಾವಣೆಯನ್ನೇ ನಡೆಸದೆ ತಮ್ಮ ಅಭ್ಯರ್ಥಿಗಳನ್ನು ಪಕ್ಷಗಳು ಅವಿರೋಧವಾಗಿ ಗೆಲ್ಲಿಸತೊಡಗಿದರೆ ಚುನಾವಣೆಗೆ ಅರ್ಥವಾದರೂ ಏನು? ಇದೇ ಸಂದರ್ಭದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೊದಲೇ ಮಾರಾಟವಾದ ಅಭ್ಯರ್ಥಿ, ಗೆದ್ದ ಬಳಿಕ ಮಾರಾಟವಾಗದೆ ಉಳಿವನೇ ಎನ್ನುವುದು ಇನ್ನೊಂದು ಪ್ರಶ್ನೆ. ಗೆದ್ದ ಬಳಿಕ ಮಾರಾಟವಾಗುವುದಕ್ಕಿಂತ ಚುನಾವಣೆಗೆ ಮುನ್ನವೇ ಮಾರಾಟವಾಗುವುದು ಒಂದು ರೀತಿಯಲ್ಲಿ ಸಮಾಧಾನಕರ ವಿಷಯ. ಇಲ್ಲವಾದರೆ, ಕ್ಷೇತ್ರದ ಜನರ
ಮೇಲೆ ಎರಡೆರಡು ಬಾರಿ ಚುನಾವಣೆಯನ್ನು ಹೇರಿದಂತಾಗುತ್ತಿತ್ತು. ಇದರ ಎಲ್ಲ ಖರ್ಚುವೆಚ್ಚಗಳನ್ನು ಜನಸಾಮಾನ್ಯರೇ ಹೊರಬೇಕಾಗುತ್ತಿತ್ತು. ಇಷ್ಟಾದರೂ, ಚುನಾವಣೆಯೇ ನಡೆಯದೆ ಅಕ್ರಮ ದಾರಿಯಲ್ಲಿ ಇತರ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸದಂತೆ ಮಾಡಿ ತನ್ನ ಪಕ್ಷದ ಅಭ್ಯರ್ಥಿಯನ್ನು ಅವಿರೋಧವಾಗಿ ಗೆಲ್ಲಿಸುವುದಾದರೆ, ಚುನಾವಣೆಯ ಅಗತ್ಯವಾದರೂ ಏನು? ಎನ್ನುವ ಪ್ರಶ್ನೆಗೆ ಚುನಾವಣಾ ಆಯೋಗ ಉತ್ತರಿಸಬೇಕಾಗುತ್ತದೆ.
ಸೂರತ್ನಲ್ಲಿ ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಯಾಗಿರುವುದರ ಹಿಂದಿರುವ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಅರಿವಿರದೇ ಇಲ್ಲ. ಇಲ್ಲಿ ಯಾವುದೇ ವಿರೋಧಗಳಿಲ್ಲದೆ ಬಿಜೆಪಿ ಅಭ್ಯರ್ಥಿಯ ಆಯ್ಕೆಯಾಗಿಲ್ಲ. ವಿರೋಧಗಳನ್ನು ಅಕ್ರಮ ದಾರಿಯಲ್ಲಿ ನಿವಾರಿಸಿ ಆ ಮೂಲಕ ಬಿಜೆಪಿ ಅಭ್ಯರ್ಥಿಯನ್ನು
ಗೆಲ್ಲಿಸಲಾಗಿದೆ. ಚುನಾವಣೆಯಲ್ಲಿ ಅಕ್ರಮಗಳು ನಡೆದರೆ ಅಂದರೆ ಮತಗಟ್ಟೆಗಳಲ್ಲಿ ಅಕ್ರಮ ನಡೆದಿರುವುದು ಗೊತ್ತಾದರೆ ಅಲ್ಲಿ ಹೊಸದಾಗಿ ಚುನಾವಣೆಯನ್ನು ಘೋಷಿಸಲಾಗುತ್ತದೆ. ಸೂರತ್ನಲ್ಲಿ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿರುವುದರಿಂದ ಇಲ್ಲಿ ಮರುಚುನಾವಣೆ ನಡೆಸುವುದರಿಂದಷ್ಟೇ ಪ್ರಜಾಸತ್ತೆಗೆ ನ್ಯಾಯ ನೀಡಬಹುದು. ಇಲ್ಲದೇ ಹೋದರೆ, ಚುನಾವಣಾ ಆಯೋಗವೇ ಭವಿಷ್ಯದಲ್ಲಿ ಇಂತಹ ಅಕ್ರಮ ಅವಿರೋಧ ಆಯ್ಕೆಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸದೆಯೇ ಅಭ್ಯರ್ಥಿಗಳು ಕೋಟಿಗಟ್ಟಳೆ ಹಣವನ್ನು
ಎದುರು ಪಕ್ಷಗಳಿಂದ ಬಾಚಿ ನಾಮಪತ್ರಗಳನ್ನು ಹಿಂದೆಗೆದುಕೊಳ್ಳುವ ದಿನಗಳು ಬರಬಹುದು.
ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ತೀರಾ ಹತಾಶೆಗೊಂಡಿರುವುದು ಎದ್ದು ಕಾಣುತ್ತದೆ. ಸೂರತ್ನಲ್ಲಿ ನಡೆದಿರುವ ‘ಅವಿರೋಧ ಆಯ್ಕೆ’ ಚುನಾವಣೆಯನ್ನು ಎದುರಿಸುವಲ್ಲಿ ಬಿಜೆಪಿಯ ಭಯವನ್ನು ಬಹಿರಂಗ ಪಡಿಸಿದೆ. ಚುನಾವಣಾ ಪ್ರಚಾರದಲ್ಲಿ ಅಭಿವೃದ್ಧಿ ವಿಷಯವನ್ನು ಸಂಪೂರ್ಣ ಕೈ ಬಿಟ್ಟಿರುವ ಪ್ರಧಾನಿ ಮೋದಿ, ಹಿಂದೂಗಳನ್ನು ಮುಸ್ಲಿಮರ ಮೇಲೆ ಎತ್ತಿ ಕಟ್ಟಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಹಿಂದೂ-ಮುಸ್ಲಿಮ್ ಎಂದು ದೇಶದ ಜನರನ್ನು ಸ್ಪಷ್ಟವಾಗಿ ವಿಭಜಿಸಿ ರಾಜಸ್ಥಾನದಲ್ಲಿ ಮತ ಯಾಚನೆಗೆ ಇಳಿದಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಅಭಿವೃದ್ಧಿಯಾಗಿರುವುದು ನಿಜವೇ ಆಗಿದ್ದರೆ ಅದರ ಆಧಾರದಲ್ಲಿ ಮೋದಿ ಮತಯಾಚನೆಯನ್ನು ಮಾಡಬಹುದಿತ್ತು.
ಚುನಾವಣಾ ಬಾಂಡ್ಗಳ ಮೂಲಕ ಬೃಹತ್ ಉದ್ಯಮಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ತನ್ನ ತಿಜೋರಿಗೆ ತುಂಬಿಸಿ, ದೇಶದ ಸಾರ್ವಜನಿಕ ಸೊತ್ತುಗಳನ್ನು
ಅವರಿಗೆ ಮಾರಾಟ ಮಾಡಿರುವುದು ಯಾರು ಎನ್ನುವುದು ಜನರಿಗೆ ಮನದಟ್ಟಾಗಿದೆ. ಖಾಸಗೀಕರಣದ ಹೆಸರಿನಲ್ಲಿ ಅದಾನಿ, ಅಂಬಾನಿಗಳಿಗೆ ದೇಶದ ಸಂಪತ್ತನ್ನು ಮಾರಾಟ ಮಾಡಿರುವುದು ಯಾರು ಎನ್ನುವುದೂ ಗುಟ್ಟಾಗಿ ಉಳಿದಿಲ್ಲ.
ಬೆಲೆಯೇರಿಕೆ, ಅಪೌಷ್ಟಿಕತೆ, ಬಡತನ ಇವೆಲ್ಲವುಗಳನ್ನು ಮುಚ್ಚಿಡುವುದಕ್ಕಾಗಿ
ಚುನಾವಣಾ ಸಭೆಗಳಲ್ಲಿ ಮುಸ್ಲಿಮ್ ವಿರೋಧಿ ಮಾತುಗಳನ್ನು ಪ್ರಧಾನಿ ಆಡುತ್ತಿದ್ದಾರೆ. ಅವರು ಮುಸ್ಲಿಮರೇ ಇಲ್ಲದ ದ್ವೇಷಾಧಾರಿತ
ದೇಶವನ್ನು ಕಟ್ಟುವ ಭರವಸೆಯನ್ನು ಜನತೆಗೆ ನೀಡುತ್ತಿದ್ದಾರೆ. ಇದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕಾಗಿರುವ ಚುನಾವಣಾ ಆಯೋಗ ಗಾಢ ಮೌನವನ್ನು ತಳೆದಿದೆ.
ಸೂರತ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ನಾಪತ್ತೆಯಾಗಿದ್ದರೆ, ರಾಜಸ್ಥಾನದಲ್ಲಿ ಪ್ರಧಾನಿ ಮೋದಿಯವರ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಚುನಾವಣಾ
ಆಯೋಗವೇ ನಾಪತ್ತೆಯಾಗಿದೆ. ಮೊದಲು ನಾಪತ್ತೆಯಾಗಿರುವ ಚುನಾವಣಾ
ಆಯೋಗವನ್ನು ಹುಡುಕುವ ಕೆಲಸವನ್ನು ಮಾಡಬೇಕು. ಚುನಾವಣಾ ಆಯೋಗದ ಅನುಪಸ್ಥಿತಿಯಲ್ಲಿ ನಡೆಯುವ ಈ ಚುನಾವಣೆ ಯಾವ ರೀತಿಯಲ್ಲೂ ಪ್ರಜಾಸತ್ತೆಯನ್ನು ಎತ್ತಿಹಿಡಿಯಲಾರದು.