ಮಹಾರಾಷ್ಟ್ರ ಸ್ಪೀಕರ್ ನಡೆ ನಿಷ್ಪಕ್ಷಪಾತವೇ?

Update: 2024-01-16 04:33 GMT

Photo: PTI

Full View

ಶಾಸನಸಭೆಗಳಲ್ಲಿ ಸ್ಪೀಕರ್ ಸ್ಥಾನವನ್ನು ಅಲಂಕರಿಸಿದವರು ನಿಷ್ಪಕ್ಷಪಾತ ವಾಗಿರುತ್ತಾರೆಂಬುದು ಒಂದು ನಂಬಿಕೆ ಮಾತ್ರ. ವಾಸ್ತವದಲ್ಲಿ ಈ ನಂಬಿಕೆಗೆ ವ್ಯತಿರಿಕ್ತವಾಗಿ ಸ್ಪೀಕರ್ ವರ್ತಿಸುತ್ತಾರೆಂಬುದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಇತ್ತೀಚಿನ ರೂಲಿಂಗ್‌ನಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಅಲ್ಲಿ ಬಾಳಾ ಠಾಕ್ರೆ ಅವರು ಸ್ಥಾಪಿಸಿದ ಶಿವಸೇನಾ ಪಕ್ಷವು ೨೦೨೨ರಲ್ಲಿ ವಿಭಜನೆಯಾದ ನಂತರ ನಡೆದ ವಿದ್ಯಮಾನಗಳು ಎಲ್ಲರಿಗೆ ಗೊತ್ತಿವೆ. ಬಿಜೆಪಿ ಪ್ರಚೋದನೆಯಿಂದ ಉದ್ಧವ್ ಠಾಕ್ರೆ ನಾಯಕತ್ವವನ್ನು ಧಿಕ್ಕರಿಸಿ ಶಿವಸೇನೆಯಿಂದ ಹೊರಗೆ ಬಂದ ಏಕನಾಥ ಶಿಂದೆ ತಮ್ಮೊಂದಿಗೆ ಕೆಲವರನ್ನು ಕಟ್ಟಿಕೊಂಡು ಬಂದು ಪ್ರತ್ಯೇಕ ಬಣ ರಚಿಸಿಕೊಂಡು ಬಿಜೆಪಿ ಜೊತೆಗೆ ಸೇರಿ ಸರಕಾರ ರಚನೆ ಮಾಡಿದರು.ಇದಾದ ನಂತರ ಯಾವ ಬಣ ಅಧಿಕೃತ ಎಂಬ ಪ್ರಶ್ನೆ ಉದ್ಭವಿಸಿದಾಗ ಸ್ಪೀಕರ್ ನಾರ್ವೇಕರ್ ಅವರು ನೀಡಿದ ತೀರ್ಪಿನ ಪ್ರಕಾರ ಶಿಂದೆ ಬಣ ಅಧಿಕೃತ ಶಿವಸೇನೆಯೆಂದು ಮಾನ್ಯತೆ ಪಡೆಯಿತು. ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಅಧ್ಯಕ್ಷ ಉದ್ಧವ್ ಠಾಕ್ರೆ ಕ್ರಮ ಅಸಿಂಧು ಎಂದು ಸ್ಪೀಕರ್ ನೀಡಿದ ತೀರ್ಪು ವಿವಾದಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಲ್ಲಿ ಮುಂಚೆ ಶಿವಸೇನೆ, ಶರದ್ ಪವಾರ್ ಅವರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿಕೊಂಡು ರಚಿಸಿದ ಮಹಾರಾಷ್ಟ್ರ ವಿಕಾಸ್ ಆಘಾಡಿ ಸರಕಾರದ ವಿರುದ್ಧ ಬಂಡೆದ್ದು ಅದನ್ನು ಉರುಳಿಸಿದ ಏಕನಾಥ ಶಿಂದೆ ಬಿಜೆಪಿಯ ದಿಲ್ಲಿ ನಾಯಕರ ಆಜ್ಞೆಯಂತೆ ತಮ್ಮ ಗುರಿ ಸಾಧಿಸಿ ಮುಖ್ಯಮಂತ್ರಿಯಾದರು. ಇದರಲ್ಲಿ ಸ್ಪೀಕರ್ ತೀರ್ಪು ನಿರ್ಣಾಯಕವಾಗಿತ್ತು. ಆದರೆ ಯಾವುದೇ ಸ್ಪೀಕರ್ ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಶಾಸಕರ ಅನರ್ಹತೆ ತಾನು ಪ್ರತಿನಿಧಿಸುವ ಆಡಳಿತಾರೂಢ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ತೀರ್ಪು ನೀಡಿದ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಹೆಸರಿಗೆ ಸ್ಪೀಕರ್ ಹುದ್ದೆ ಸಾಂವಿಧಾನಿಕ ಸ್ಥಾನಮಾನ ಹೊಂದಿದ್ದರೂ ಆ ಸ್ಥಾನದಲ್ಲಿ ಇರುವವರು ಪೂರ್ವಾಗ್ರಹ ಪೀಡಿತರಾಗದೆ ನಿಷ್ಪಕ್ಷಪಾತ ನಿರ್ಣಯ ಕೈಗೊಳ್ಳಬೇಕೆಂದಿದ್ದರೂ ವಾಸ್ತವವಾಗಿ ಆ ರೀತಿ ಆಗುತ್ತಿಲ್ಲ. ಹೀಗಾಗಿ ಅವರ ಅಧಿಕಾರ ವ್ಯಾಪ್ತಿಯ ಬಗ್ಗೆ ಸಹಜವಾಗಿ ಚರ್ಚೆಗಳು ಆರಂಭವಾಗಬೇಕಿದೆ.

ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಈ ಸಂಬಂಧದಲ್ಲಿ ತುಂಬಾ ವಿಳಂಬವಾಗಿ ರೂಲಿಂಗ್ ನೀಡಿದರು. ರೂಲಿಂಗ್ ನೀಡಲು ಸುಪ್ರೀಂ ಕೋರ್ಟ್ ನೀಡಿದ ಗಡುವಿನ ಕೊನೆಯ ದಿನ ಅವರು ತೀರ್ಮಾನವನ್ನು ಪ್ರಕಟಿಸಿದರು. ಯಾವುದೇ ವಿಳಂಬ ಮಾಡದೆ ತ್ವರಿತವಾಗಿ ನಿರ್ಣಯವನ್ನು ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಪದೇ ಪದೇ ಸ್ಪೀಕರ್ ಗೆ ಸೂಚನೆಯನ್ನು ನೀಡುತ್ತಲೇ ಬಂದರೂ ಅವರು ಕ್ಯಾರೆ ಅನ್ನಲಿಲ್ಲ. ಸ್ಪೀಕರ್ ಸ್ಥಾನದಲ್ಲಿ ಇರುವವರು ನಿಷ್ಪಕ್ಷಪಾತವಾಗಿರಬೇಕಾದುದು ಸಾಂವಿಧಾನಿಕ ಹೊಣೆಗಾರಿಕೆ ಯಾದರೂ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆಂದು ಸುಪ್ರೀಂ ಕೋರ್ಟ್‌ಹಿಂದೊಮ್ಮೆ ಆಕ್ಷೇಪಿಸಿದ್ದನ್ನು ಇಲ್ಲಿ ಗಮನಿಸಬಹುದು.

ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಮಾತ್ರವಲ್ಲ ಮಣಿಪುರದಲ್ಲಿ ಮಂತ್ರಿಯೊಬ್ಬರ ವಿರುದ್ಧ ಸಲ್ಲಿಕೆಯಾಗಿದ್ದ ಅನರ್ಹತೆಗೆ ಸಂಬಂಧಿಸಿದ ಅರ್ಜಿಯ ಕುರಿತಂತೆ ಅಲ್ಲಿನ ಸ್ಪೀಕರ್ ವರ್ಷಗಳ ಕಾಲ ಹಾಗೇ ಇಟ್ಟುಕೊಂಡ ಪರಿಣಾಮವಾಗಿ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಸದರಿ ಮಂತ್ರಿಯನ್ನು ಸಂಪುಟದಿಂದ ವಜಾ ಮಾಡಬೇಕಾಗಿ ಬಂದ ಘಟನೆಯೂ ಈ ದೇಶದಲ್ಲಿ ನಡೆದಿದೆ. ಹೀಗಾಗಿ ಯಾರನ್ನೇ ಅನರ್ಹಗೊಳಿಸುವ ಅಧಿಕಾರವನ್ನು ಸ್ಪೀಕರ್ ಬದಲಾಗಿ ಸ್ವತಂತ್ರವಾದ, ನಿಷ್ಪಕ್ಷಪಾತ ಆದರೆ ಸಾಂವಿಧಾನಿಕ ಸ್ಥಾನಮಾನ ಹೊಂದಿದವರ ಕೈಗೆ ನೀಡಬೇಕೆಂಬ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

ಮಹಾರಾಷ್ಟ್ರದಲ್ಲಿ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ನೀಡಿರುವ ರೂಲಿಂಗ್ ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿ ಏಕನಾಥ ಶಿಂದೆ ಬಣಕ್ಕೆ ದೊರೆತ ಜಯವಾಗಿದೆಯೆಂದರೆ ಅತಿಶಯೋಕ್ತಿಯಲ್ಲ. ಚುನಾವಣಾ ಆಯೋಗವೂ ಏಕನಾಥ ಶಿಂದೆ ಬಣವನ್ನೇ ನಿಜವಾದ ಶಿವಸೇನೆ ಎಂದು ಮಾನ್ಯತೆ ನೀಡಿದೆ. ಶಿಂದೆ ಬಣಕ್ಕೆ ಶಿವಸೇನಾ ಪಕ್ಷದ ಚಿಹ್ನೆಯನ್ನು ಬಳಸಿಕೊಳ್ಳುವ ಅವಕಾಶವನ್ನು ನೀಡಿದೆ. ಚುನಾವಣಾ ಆಯೋಗದ ಈ ತೀರ್ಮಾನವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟಿನ ಮೆಟ್ಟಿಲನ್ನು ಏರಿದೆ.ಅನರ್ಹತೆಗೆ ಸಂಬಂಧಿಸಿದ ಸ್ಪೀಕರ್ ನಿರ್ಣಯವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಉದ್ಧವ್ ಠಾಕ್ರೆ ಬಣ ಹೇಳಿದೆ.

ಶಿವಸೇನೆಯ ಠಾಕ್ರೆ ಬಣದ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥ ವಾಗಲು ಒಂದಿಷ್ಟು ಸಮಯ ಬೇಕಾಗಬಹುದು. ಈ ವರ್ಷ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಈ ಅರ್ಜಿಯು ಅಪ್ರಸ್ತುತ ವಾಗಬಹುದು. ಆದರೆ ಚುನಾವಣಾ ಆಯೋಗ ಮತ್ತು ಸ್ಪೀಕರ್ ತೀರ್ಮಾನಗಳು ಸಾಂವಿಧಾನಿಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ಇದ್ದವೇ ಎಂಬ ಪ್ರಶ್ನೆ ಉಳಿದೇ ಉಳಿಯುತ್ತದೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯಂತೆ ಶರದ್ ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ.) ಕೂಡ ಎರಡು ಹೋಳಾಗಿದೆ. ಈ ಬಣಗಳ ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳನ್ನು ಸ್ಪೀಕರ್ ಅವರು ಜನವರಿ ೩೧ರೊಳಗೆ ಇತ್ಯರ್ಥ ಪಡಿಸಬೇಕಾಗಿದೆ. ಮಹಾರಾಷ್ಟ್ರದಲ್ಲಿ ಎರಡು ಪ್ರಮುಖ ಪಕ್ಷಗಳಾದ ಶಿವಸೇನೆ ಮತ್ತು ಶರದ್ ಪವಾರರ ಎನ್.ಸಿ.ಪಿಗಳನ್ನು ಒಡೆಯುವಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕತ್ವದ ಕುತಂತ್ರ ಯಶಸ್ವಿಯಾಗಿದೆ. ಸ್ವತಂತ್ರವಾಗಿ ಎಲ್ಲೂ ಗೆಲ್ಲಲಾಗದ ಬಿಜೆಪಿ ಕೇಂದ್ರದಲ್ಲಿ ತನಗಿರುವ ಅಧಿಕಾರವನ್ನು ಬಳಸಿಕೊಂಡು ಪ್ರಮುಖ ಪಕ್ಷಗಳನ್ನು ಇಬ್ಭಾಗ ಮಾಡಿ ಅಧಿಕಾರಕ್ಕೆ ಬರುವ ಮಸಲತ್ತು ಮಾಡುತ್ತಲೇ ಬಂದಿದೆ.

ಕೇಂದ್ರದ ಬಿಜೆಪಿ ಸರಕಾರ ಚುನಾವಣಾ ಆಯೋಗ ಸೇರಿದಂತೆ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಂಡು ತನ್ನ ರಾಜಕೀಯ ಗುರಿ ಸಾಧಿಸುತ್ತಿರುವ ಬಗ್ಗೆ ಸಂದೇಹಗಳು ವ್ಯಕ್ತವಾಗುತ್ತಲೇ ಇವೆ. ಪಕ್ಷಗಳ ವಿಭಜನೆ ಹಾಗೂ ಇತರ ಕಾನೂನಾತ್ಮಕ ಅಂಶಗಳ ಬಗ್ಗೆ ಚುನಾವಣಾ ಆಯೋಗ ಹಾಗೂ ನ್ಯಾಯಾಲಯಗಳು ತೀರ್ಮಾನ ಕೈಗೊಳ್ಳಬೇಕಿದ್ದರೂ ಸಾರ್ವಜನಿಕರಲ್ಲಿ ಸಂದೇಹಗಳು ನಿವಾರಣೆಯಾಗುವುದಿಲ್ಲ. ಇಂಥ ಪ್ರಶ್ನೆಯಲ್ಲಿ ಜನಾದೇಶವನ್ನೇ ಉಲ್ಟಾಪಲ್ಟಾ ಮಾಡುವ ಹುನ್ನಾರಗಳ ಬಗ್ಗೆ ಮಹಾರಾಷ್ಟ್ರದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರೇ ತೀರ್ಮಾನ ಕೈಗೊಂಡು ಸ್ಪಷ್ಟವಾದ ಫಲಿತಾಂಶ ನೀಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News