ಭಿಕ್ಷುಕರ ನಿರ್ಮೂಲವೆಂದರೆ ಅವರ ಸಾಮೂಹಿಕ ಹತ್ಯಾಕಾಂಡವೆ?

Update: 2023-07-07 04:27 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜಾತಿ ಅಸ್ಪಶ್ಯತೆಯ ಬಳಿಕ ಈ ದೇಶದಲ್ಲಿ ಆಳವಾಗಿ ಬೇರೂರಿರುವ ‘ವರ್ಗ ಅಸ್ಪಶ್ಯತೆ’ಯೊಂದಿದೆ. ಬಡವರೆನ್ನುವ ವ್ಯವಸ್ಥೆಯ ಅತ್ಯಂತ ತಳಮಟ್ಟದ ಈ ವರ್ಗವನ್ನು ‘ಭಿಕ್ಷುಕರು’ ಎಂದು ಕರೆದು ಸಮಾಜ ಅವರನ್ನು ನಾಗರಿಕ ವ್ಯವಸ್ಥೆಯಿಂದ ದೂರವಿಟ್ಟಿದೆ. ಸಮಾಜ ಭಿಕ್ಷುಕರೊಂದಿಗೆ ಕಾಪಾಡಿಕೊಂಡು ಬಂದಿರುವ ಅಂತರವನ್ನು ಬಳಸಿಕೊಂಡು ಕ್ರಿಮಿನಲ್‌ಗಳು ಅವರನ್ನು ಅತ್ಯಂತ ಹೀನಾಯವಾಗಿ ಶೋಷಣೆಗೀಡು ಮಾಡುತ್ತಾ ಬರುತ್ತಿದ್ದಾರೆ. ಈ ಭಿಕ್ಷುಕ ವರ್ಗವನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಬಗ್ಗೆ ಸಮಾಜ ಚಿಂತಿಸಿದ್ದು ಕಡಿಮೆ. ಮತನೀಡುವ ಹಕ್ಕು, ವಸತಿ, ಆರೋಗ್ಯ, ಶಿಕ್ಷಣ ಇವೆಲ್ಲವೂ ತಮ್ಮ ಬದುಕಿನ ಅಗತ್ಯ ಎನ್ನುವುದನ್ನು ಸಂಪೂರ್ಣ ಮರೆತು ಬಿಟ್ಟ ಸಮುದಾಯಕ್ಕೆ ದೈನಂದಿನ ಕೂಳಿನ ಸಮಸ್ಯೆಯೊಂದು ಇತ್ಯರ್ಥವಾದರೆ ಎಲ್ಲವೂ ಇತ್ಯರ್ಥವಾದಂತೆ. ವ್ಯವಸ್ಥೆಯಂತೂ ಭಿಕ್ಷುಕರನ್ನು ಕ್ರಿಮಿನಲ್‌ಗಳಂತೆಯೇ ನಡೆಸಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ದೇಹದ ಅಂಗಾಂಗ ಕಳ್ಳತನಗಳಿಗೆ ಈ ಭಿಕ್ಷುಕಕರು ಗುರಿಯಾಗುತ್ತಿದ್ದಾರೆ. ರಸ್ತೆ ಬದಿಯಲ್ಲಿ ಭಿಕ್ಷುಕರ ಹೆಣ ಬಿದ್ದರೂ ಅದನ್ನು ಪ್ರಶ್ನಿಸುವವರಿಲ್ಲ ಎನ್ನುವ ಸ್ಥಿತಿಯಿದೆ. ಭಿಕ್ಷುಕರು ಏಕಾಏಕಿ ನಾಪತ್ತೆ ಸಮಾಜ ನಿಟ್ಟುಸಿರು ಬಿಡುತ್ತದೆಯೇ ಹೊರತು, ಅವರು ಏನಾದರು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಇಲಾಖೆಯು ಭಿಕ್ಷಾಟನೆಯಲ್ಲಿ ತೊಡಗಿರುವವರ ಪುನರ್ವಸತಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆಯಾದರೂ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯ ಕೊರತೆಯಿದೆ. ಇವರ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಿದರೂ ಅದನ್ನು ಪ್ರಶ್ನಿಸುವವರಿಲ್ಲ ಎನ್ನುವ ಸ್ಥಿತಿಯಿದೆ. 2020-21ರಲ್ಲಿ ಭಿಕ್ಷುಕರ ಕಲ್ಯಾಣಕ್ಕಾಗಿ 100 ಕೋಟಿ ರೂ.ಯನ್ನು ನೀಡಲಾಗಿದ್ದರೆ, 2021-22ರಲ್ಲಿ 50 ಕೋಟಿ ರೂ.ಯನ್ನು ಒದಗಿಸಲಾಗಿತ್ತು. 2022-23ರ ಸಾಲಿಗೆ ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಜುಜುಬಿ 15 ಕೋಟಿ ರೂ.ಯನ್ನು ನೀಡಲಾಗಿದೆ. ಇದಕ್ಕಿಂತಲೂ ಗಂಭೀರ ವಿಷಯವೆಂದರೆ, ಒದಗಿಸಲಾಗಿರುವ ಅನುದಾನವನ್ನು ಸರಿಯಾಗಿ ಖರ್ಚೇ ಮಾಡಲಾಗಿಲ್ಲ. 2020-21ರಲ್ಲಿ, 100 ಕೋಟಿ ರೂ. ಅನುದಾನ ಒದಗಿಸಲಾಗಿದ್ದರೂ, ವಾಸ್ತವಿಕವಾಗಿ ಆ ಹಣ ಅವರ ಕಲ್ಯಾಣಕ್ಕೆ ಯಾವುದೇ ರೀತಿಯಲ್ಲಿ ವಿನಿಯೋಗವಾಗಿಲ್ಲ. ಅದರ ನಂತರದ ವರ್ಷ ಈ ಕಾರ್ಯಕ್ರಮಕ್ಕಾಗಿ 50 ಕೋಟಿ ರೂ. ನೀಡಲಾಗಿದ್ದರೂ, ವಾಸ್ತವಿಕವಾಗಿ ಖರ್ಚು ಮಾಡಿದ್ದು ಜುಜುಬಿ 5 ಲಕ್ಷ ರೂ. 2022-23ರ ಸಾಲಿನಲ್ಲಿ ಮಾಡಲಾದ ಖರ್ಚಿಗೆ ಸಂಬಂಧಿಸಿ 2022 ಡಿಸೆಂಬರ್ 31ರವರೆಗಿನ ಅಂಕಿಅಂಶಗಳು ಮಾತ್ರ ಲಭ್ಯವಾಗಿವೆ. ಅಂದರೆ, ಈ ಅವಧಿಯಲ್ಲಿ ಕೇವಲ 26 ಲಕ್ಷ ರೂ. ಖರ್ಚು ಮಾಡಲಾಗಿದೆ ಎನ್ನುವುದನ್ನು ಅಂಕಿಅಂಶಗಳು ತೋರಿಸಿವೆ. ದೇಶದಲ್ಲಿರುವ ಭಿಕ್ಷುಕರ ಸಂಖ್ಯೆಗೆ ಹೋಲಿಸಿದರೆ ಈ ಹಣ ಏನೇನೂ ಅಲ್ಲ. ಭಿಕ್ಷುಕರೆಂದರೆ ಯಾರು? ಅವರನ್ನು ಸ್ಪಷ್ಟವಾಗಿ ಗುರುತಿಸುವಲ್ಲಿಯೇ ಸರಕಾರ ಎಡವುತ್ತಿದೆ. ನಿರ್ಗತಿಕರೆಲ್ಲರೂ ಭಿಕ್ಷುಕರಲ್ಲ. ಭಿಕ್ಷುಕರಲ್ಲಿ ಹೆಚ್ಚಿನವರು ಪರಿಸ್ಥಿತಿಯ ಒತ್ತಡಕ್ಕೊಳಗಾಗಿ ಭಿಕ್ಷಾಟನೆೆಗೆ ಇಳಿದವರು. ಬಾಲ ಭಿಕ್ಷುಕರಂತೂ ಸಂಘಟಿತ ಕ್ರಿಮಿನಲ್ ಗ್ಯಾಂಗ್‌ಗಳ ಬಲಿಪಶುಗಳು. ಹಾಗೆಯೇ ಮಾನಸಿಕ ಅಸ್ವಸ್ಥರನ್ನೂ ನೇರವಾಗಿ ಭಿಕ್ಷುಕರ ಪಟ್ಟಿಗೆ ಸೇರಿಸಿ ಬಿಡಲಾಗುತ್ತದೆ. ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದ್ದರೂ ಅದನ್ನು ಒದಗಿಸುವ ವ್ಯವಸ್ಥೆಯಿಲ್ಲ. ನಗರ ಪ್ರದೇಶಗಳಲ್ಲಿ ಹೀಗೆ ಮಾನಸಿಕವಾಗಿ ಅಸ್ವಸ್ಥರಾಗಿ ಭಿಕ್ಷುಕರ ಸಾಲಿಗೆ ಸೇರಿ ಕರಗಿ ಹೋಗಿರುವ ಅದೆಷ್ಟೋ ವಿದ್ಯಾವಂತರಿದ್ದಾರೆ. ಶ್ರೀಮಂತ ಕುಟುಂಬದಿಂದ ಬಂದ ವ್ಯಕ್ತಿಗಳಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ವ್ಯವಸ್ಥಿತವಾದ ಪುನರ್ವಸತಿಯನ್ನು ಒದಗಿಸಿಕೊಡುವ ಅಗತ್ಯವಿದೆ. ಹಾಗೆಯೇ ಭಿಕ್ಷುಕರ ರಕ್ಷಣಾ ಕಾರ್ಯಾಚರಣೆಗೂ ಸರಕಾರ ಆದ್ಯತೆಯನ್ನು ನೀಡುವ ಅಗತ್ಯವಿದೆ. ಹತ್ತು ವರ್ಷದ ಹಿಂದೆ ಭಿಕ್ಷುಕರ ಪರಿಹಾರ ಕೇಂದ್ರದಲ್ಲಿ 20ಕ್ಕೂ ಅಧಿಕ ಭಿಕ್ಷುಕರು ಮೃತರಾಗಿರುವುದನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಿಕೊಳ್ಳಬೇಕಾಗಿದೆ. ದೇಶಾದ್ಯಂತ ಭಿಕ್ಷುಕರಿಗಾಗಿ ಸರಕಾರ ಸ್ಥಾಪಿಸಿರುವ ಕೇಂದ್ರಗಳಲ್ಲಿ ನಡೆಯುವ ಸಾವು, ನೋವುಗಳು ಚರ್ಚೆಯಾಗುವುದೇ ಇಲ್ಲ.

ಮಹಿಳಾ ಭಿಕ್ಷುಕರ ಮೇಲೆ ನಡೆಯುವ ಅತ್ಯಾಚಾರಗಳು ಕೂಡ ಬೆಳಕಿಗೆ ಬರುವುದಿಲ್ಲ. ನಮ್ಮಲ್ಲಿ ಅನುಭವಿ ಸಮಾಜ ಸೇವಕರಿದ್ದಾರೆ, ಸಾಮಾಜಿಕ ಸಂಘಟನೆಗಳಿವೆ, ವಕೀಲರಿದ್ದಾರೆ ಮತ್ತು ಕಾನೂನು ನೆರವು ಸಂಸ್ಥೆಗಳಿವೆ. ಈ ವ್ಯಕ್ತಿಗಳು ಮತ್ತು ಸಂಸ್ಥೆಗಳ ಜೊತೆಗೆ ಹಿರಿಯ ಅಥವಾ ನಿವೃತ್ತ ಅಧಿಕಾರಿಗಳನ್ನೂ ಬಳಸಿಕೊಂಡು ಭಿಕ್ಷಾಟನೆಗೆ ಸಂಬಂಧಿಸಿದ ಮಾನವಹಕ್ಕು ವಿಷಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ದುರದೃಷ್ಟಕರ ಸನ್ನಿವೇಶಗಳಲ್ಲಿ ಭಿಕ್ಷುಕರು ಎಂಬ ತಪ್ಪು ಕಲ್ಪನೆಯಿಂದ ಹಿಡಿಯಲ್ಪಟ್ಟಿರುವ ಸಾವಿರಾರು ಮನೆರಹಿತ ಜನರಿಗೆ ಮಾನವೀಯ ನೆಲೆಯಲ್ಲಿ ಪುನರ್ವಸತಿ ಕಲ್ಪಿಸಲು ಇಂಥವರ ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ.ಇದರ ಜೊತೆ ಜೊತೆಗೆ, ಎಲ್ಲಾ ಮನೆರಹಿತ ಜನರಿಗೆ ಆಶ್ರಯ ಕಲ್ಪಿಸುವ ವಿಸ್ತೃತ ಕಾರ್ಯದ ನಿಟ್ಟಿನಲ್ಲೂ ಕೆಲಸ ಆರಂಭಿಸಲು ಅವಕಾಶವಿದೆ. 2020-22ರ ಎರಡು ವರ್ಷಗಳ ಅವಧಿಯಲ್ಲಿ ಲಭ್ಯವಿದ್ದ 150 ಕೋಟಿ ರೂ. ಮೊತ್ತವನ್ನು ರಚನಾತ್ಮಕವಾಗಿ ಬಳಸಿದ್ದರೆ, ಹೆಚ್ಚಿನ ಸಾಧನೆಗಳನ್ನು ಮಾಡಬಹುದಾಗಿತ್ತು. ಆದರೆ, ದುರದೃಷ್ಟವಶಾತ್, ಆ ಅವಧಿಯಲ್ಲಿ ಕೇವಲ 5 ಲಕ್ಷ ರೂ.ಯನ್ನು ಖರ್ಚು ಮಾಡಲಾಯಿತು. ಸಹಜವಾಗಿಯೇ ಇದು ಭಿಕ್ಷುಕರ ಕಲ್ಯಾಣ ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮವನ್ನು ಬೀರಲಿಲ್ಲ.2022-23ರ ಸಾಲಿಗೆ ಭಿಕ್ಷುಕರ ಕಲ್ಯಾಣ ಕಾರ್ಯಕ್ರಮದಡಿ ಬಿಡುಗಡೆಯಾಗಿರುವುದು ಕೇವಲ 15 ಕೋಟಿ ರೂ. ಆ ಪೈಕಿ, 2022 ಡಿಸೆಂಬರ್ 31ರವರೆಗೆ ಖರ್ಚಾಗಿದ್ದು ಕೇವಲ 26 ಲಕ್ಷ ರೂ. ಈ ಹಣದಲ್ಲಿ ಯಾವುದೇ ಮಹತ್ವದ ಕೆಲಸ ಆಗಿರುವ ಬಗ್ಗೆ ವರದಿಯಿಲ್ಲ.

ಹಾಗಾಗಿ, ಈ ನಿರಾಶಾದಾಯಕ ಅನುಭವದ ಆಧಾರದಲ್ಲಿ, ಈವರೆಗೆ ನಿಧಿಗಳ ಪರಿಣಾಮಕಾರಿ ಬಳಕೆಯನ್ನು ತಡೆದಿರುವ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವುದು ಈಗ ಅಗತ್ಯವಾಗಿದೆ. ಆಮೂಲಕ ಈ ವರ್ಷ ಹೊಸ ಆರಂಭವೊಂದಕ್ಕೆ ನಾಂದಿ ಇಡಬೇಕಾಗಿದೆ.2023-24ರ ಸಾಲಿಗೆ ಈ ಕಾರ್ಯಕ್ರಮಕ್ಕಾಗಿ 20 ಕೋಟಿ ರೂ.ಯನ್ನು ಒದಗಿಸಲಾಗಿದೆ. ಈ ಮೊತ್ತವನ್ನು ಪರಿಷ್ಕೃತ ಅಂದಾಜಿನ ವೇಳೆ ಏರಿಸಬೇಕಾದ ಅಗತ್ಯವಿದೆ. ಆ ಮೂಲಕ, ಈ ಮಹತ್ವದ, ಆದರೆ ನಿರ್ಲಕ್ಷಿತ ಕಾರ್ಯಕ್ರಮಕ್ಕೆ ಒಂದು ಭರವಸೆಯ ಆರಂಭವನ್ನು ನೀಡಬೇಕಾಗಿದೆ.ಹಾಗೆಯೇ ಭಿಕ್ಷುಕರ ಕಲ್ಯಾಣಕ್ಕಾಗಿ ಸರಕಾರ ಬಿಡುಗಡೆ ಮಾಡಿರುವ ಹಣದಲ್ಲಿ ಸದುಪಯೋಗವಾಗಿರುವ ಹಣವೆಷ್ಟು ಮತ್ತು ಉಳಿದ ಹಣ ಏನಾಯಿತು ಎನ್ನುವುದು ತನಿಖೆಯಾಗಬೇಕಾಗಿದೆ. ಈ ದೇಶದಲ್ಲಿ ಹಣದ ಕೊರತೆಯಷ್ಟೇ ಭಿಕ್ಷುಕರನ್ನು ಸೃಷ್ಟಿಸಿಲ್ಲ. ಮಾನಸಿಕ ಮತ್ತು ದೈಹಿಕ ಅನಾರೋಗ್ಯ ಒಬ್ಬನನ್ನು ಯಾವತ್ತೂ ಬೀದಿಗೆ ತಳ್ಳಬಹುದು. ಹೀಗೆ ಬೀದಿಗೆ ಬಿದ್ದವರನ್ನು ಮೇಲೆತ್ತುವ ಬದಲು ಅವರ ಹಣೆಗೆ ಭಿಕ್ಷುಕರೆನ್ನುವ ಮುದ್ರೆಯನ್ನು ಶಾಶ್ವತವಾಗಿ ಒತ್ತಿ ಅವರನ್ನು ಮುಖ್ಯವಾಹಿನಿಗೆ ಮತ್ತೆ ವಾಪಸಾಗದಂತೆ ನೋಡಿಕೊಳ್ಳಲಾಗುತ್ತಿದೆ. ಒಂದೆಡೆ ಭಿಕ್ಷಾಟನೆಯನ್ನು ನಿಷೇಧಿಸುವ ಕಾನೂನಿನ ಬಗ್ಗೆ ಸರಕಾರ ಮಾತನಾಡುತ್ತಿದೆ. ಇದೇ ಸಂದರ್ಭದಲ್ಲಿ ಅವರನ್ನು ಆ ಜಾಲದಿಂದ ಹೊರ ತಂದು ಮತ್ತೆ ಮನುಷ್ಯರನ್ನಾಗಿಸುವ ಹೊಣೆಗಾರಿಕೆಯಿಂದ ಜಾರಿಗೊಳ್ಳುತ್ತಿದೆ. ಹಾಗಾದರೆ ಭಿಕ್ಷುಕರ ನಿರ್ಮೂಲನೆಯೆಂದರೆ ಭಿಕ್ಷುಕರ ಸಾಮೂಹಿಕ ಹತ್ಯಾಕಾಂಡವೆ? ಎನ್ನುವ ಪ್ರಶ್ನೆಗೆ ಸರಕಾರ ಸ್ಪಷ್ಟೀಕರಣ ನೀಡಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News