ನ್ಯಾಯಯಾತ್ರೆಯ ಮೇಲೆ ನಡೆಯುತ್ತಿರುವ ದಾಳಿ ನ್ಯಾಯವೆ?

Update: 2024-01-23 04:35 GMT

Photo: twitter.com/INCIndia

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

.ಧರ್ಮ, ಜಾತಿಯ ಹೆಸರಿನಲ್ಲಿ ಭಾರತವನ್ನು ಒಡೆಯುವ ಪ್ರಯತ್ನದ ವಿರುದ್ಧ ‘ಭಾರತ್ ಜೋಡೊ’ ಜಾಥಾವನ್ನು ಮುನ್ನಡೆಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ರಾಹುಲ್ ಗಾಂಧಿಯವರು ಇದೀಗ ‘ಭಾರತ ಜೋಡೊ ನ್ಯಾಯ ಯಾತ್ರೆ’ಯನ್ನು ಹಮ್ಮಿಕೊಂಡಿದ್ದಾರೆ. ದೇಶದಲ್ಲಿ ಎಲ್ಲರಿಗೂ ನ್ಯಾಯ ದಕ್ಕಿದಾಗ ಮಾತ್ರ ಮನಸ್ಸುಗಳು ಒಂದಾಗಿ ಬೆಸೆಯಲು ಸಾಧ್ಯ ಎನ್ನುವ ಅತ್ಯುನ್ನತ ಮೌಲ್ಯವೊಂದು ಈ ಯಾತ್ರೆಯ ಹಿಂದಿದೆ. ಭಾರತವನ್ನು ರಾಮರಾಜ್ಯ ಮಾಡಲು ಹೊರಟ ಬಿಜೆಪಿಯನ್ನು ಅಣಕಿಸುವಂತೆ ಅವರು ಮಣಿಪುರದಿಂದ ನ್ಯಾಯ ಯಾತ್ರೆಗೆ ಚಾಲನೆ ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರಗಳಿಗೆ ಬಲಿಯಾದ, ಸಾವುನೋವುಗಳಿಂದ ತತ್ತರಿಸಿರುವ ಮಣಿಪುರಕ್ಕೆ ಒಮ್ಮೆಯೂ ಭೇಟಿ ನೀಡದ ಪ್ರಧಾನಿ ಮೋದಿಯವರು ಈ ದೇಶವನ್ನು ರಾಮರಾಜ್ಯವಾಗಿಸಬಲ್ಲರೆ? ಎಂದು ರಾಹುಲ್‌ಗಾಂಧಿ ತಮ್ಮ ಯಾತ್ರೆಯ ಮೂಲಕ ಕೇಳುತ್ತಿದ್ದಾರೆ. ಮಹಾತ್ಮಾಗಾಂಧೀಜಿಯ ಕನಸಿನ ರಾಮರಾಜ್ಯದಲ್ಲಿ ‘ಮಹಿಳೆ ಮಧ್ಯ ರಾತ್ರಿಯಲ್ಲೂ ಯಾವ ಅಪಾಯವೂ ಇಲ್ಲದೆ ಓಡಾಡುವ ವಾತಾವರಣ’ ನಿರ್ಮಾಣವಾಗಿರುತ್ತದೆ. ಆದರೆ ಮಣಿಪುರದಲ್ಲಿ ಹಾಡಹಗಲೇ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದವು. ಇಂದಿಗೂ ಮಣಿಪುರದಲ್ಲಿ ಹಿಂಸೆ ತಣ್ಣಗಾಗಿಲ್ಲ. ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಮಣಿಪುರದಲ್ಲಿ ನೂರಾರು ಸೀತೆಯರು ನ್ಯಾಯಕ್ಕಾಗಿ ಕಣ್ಣೀರಿಡುತ್ತಿರುವಾಗ ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ನಿಂತು ರಾಮನ ಆದರ್ಶಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರು ಈವರೆಗೆ ಮಣಿಪುರದ ಮಹಿಳೆಯರ ಕಣ್ಣೀರಿಗೆ ಯಾಕೆ ಸ್ಪಂದಿಸಿಲ್ಲ ಎಂದು ರಾಹುಲ್ ಗಾಂಧಿ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರಿಸುವ ಬದಲು ಪ್ರಶ್ನೆಯನ್ನೇ ದಮನಿಸುವ ಪ್ರಯತ್ನ ಮೋದಿ ತಂಡದಿಂದ ನಡೆಯುತ್ತಿದೆ. ಅದರ ಭಾಗವಾಗಿಯೇ ಅಸ್ಸಾಂನಲ್ಲಿ ನ್ಯಾಯಯಾತ್ರೆಯ ಮೇಲೆ ದಾಳಿಗಳು ನಡೆಯುತ್ತಿವೆ.

ಅಸ್ಸಾಂನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆಯ ಮೇಲೆ ಬಿಜೆಪಿಯ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಶನಿವಾರ ಕಾಂಗ್ರೆಸ್ ಆರೋಪಿಸಿದೆ. ಅಸ್ಸಾಂನ ಲಖೀಮ್‌ಪುರದಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆಯ ವಾಹನಗಳ ಮೇಲೆ ಗೂಂಡಾಗಳು ದಾಳಿ ನಡೆಸಿದ್ದಾರೆ ಮಾತ್ರವಲ್ಲ, ಯಾತ್ರೆಯ ಭಿತ್ತಿ ಪತ್ರಗಳನ್ನು ಹರಿದು ಹಾಕಿದ್ದಾರೆ ಎಂದು ಪಕ್ಷ ದೂರಿದೆ. ಅಷ್ಟೇ ಅಲ್ಲ, ಶೋನಿತ್‌ಪುರ ಜಿಲ್ಲೆಯಲ್ಲಿ ರವಿವಾರ ದುಷ್ಕರ್ಮಿಗಳು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಜೊತೆಗೆ ಮಾಧ್ಯಮ ವ್ಯಕ್ತಿಗೂ ಹಲ್ಲೆ ನಡೆಸಿದ್ದಾರೆ ಎಂದು ಸಂಘಟಕರು ಆರೋಪಿಸಿದ್ದಾರೆ. ದಾಳಿಕೋರರು ಕಾರಿನ ಮೇಲಿದ್ದ ನ್ಯಾಯ ಯಾತ್ರೆಯ ಪೋಸ್ಟರ್‌ಗಳನ್ನು ಹರಿದಿದ್ದು, ಅಲ್ಲಿ ಬಿಜೆಪಿಯ ಧ್ವ ಜ ಹಾರಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ‘‘ ಕಾಂಗ್ರೆಸ್ ಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಅಸ್ಸಾಂ ಸರಕಾರ ಜನರಿಗೆ ಬೆದರಿಕೆ ಹಾಕುತ್ತಿದೆ’’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಆರೋಪವನ್ನು ಎತ್ತಿ ಹಿಡಿಯುವಂತೆ ಸೋಮವಾರ ಅಸ್ಸಾಂನ ನಾಗಾಂವ್‌ನಲ್ಲಿರುವ ದೇವಸ್ಥಾನಕ್ಕೆ ಪ್ರವೇಶಿಸದಂತೆ ರಾಹುಲ್‌ಗಾಂಧಿಗೆ ಅಲ್ಲಿನ ಅಧಿಕಾರಿಗಳು ತಡೆದಿರುವುದು ಸುದ್ದಿಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಪೂರ್ಣಗೊಳ್ಳುವವರೆಗೆ ದೇವಸ್ಥಾನ ಪ್ರವೇಶಿಸದಂತೆ ದೇವಸ್ಥಾನದ ಆಡಳಿತ ಸಮಿತಿಯು ಸೂಚನೆ ನೀಡಿದೆ ಎನ್ನಲಾಗಿದೆ. ಇದನ್ನು ವಿರೋಧಿಸಿ ರಾಹುಲ್ ಗಾಂಧಿಯವರು ದೇವಸ್ಥಾನದ ಮುಂದೆ ಧರಣಿ ನಡೆಸಿದ್ದಾರೆ.

ನ್ಯಾಯ ಯಾತ್ರೆಗೆ ರಾಹುಲ್‌ಗಾಂಧಿ ಈಶಾನ್ಯ ಭಾರತವನ್ನೇ ಆಯ್ಕೆ ಮಾಡಿಕೊಂಡಿರುವುದು ಆಕಸ್ಮಿಕ ಅಲ್ಲ. ಕೇಂದ್ರ ಸರಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಅನ್ಯಾಯಗಳಿಂದಾಗಿಯೇ ಮಣಿಪುರ ಹಿಂಸಾಗ್ರಸ್ತವಾಗಿದೆ. ಇತ್ತ ಅಸ್ಸಾಂನಲ್ಲಿ ರಾಜ್ಯ ಸರಕಾರದ ನೇತೃತ್ವದಲ್ಲೇ ಕೋಮು ಗಲಭೆಗಳು ನಡೆಯುತ್ತಿವೆ. ಅಲ್ಪಸಂಖ್ಯಾತರು ಭಯದಿಂದ ಬದುಕುವ ವಾತಾವರಣವಿದೆ. ಈಶಾನ್ಯ ಭಾರತದ ಬುಡಕಟ್ಟು ಜನರು, ಆದಿವಾಸಿಗಳು ಸರಕಾರದ ಮಲತಾಯಿ ಧೋರಣೆಗಳಿಂದಾಗಿ ನಾಡಿಗೂ, ಕಾಡಿಗೂ ಸಲ್ಲದೆ ಅತಂತ್ರರಾಗಿದ್ದಾರೆ. ವ್ಯವಸ್ಥೆಯನ್ನು ಪ್ರಶ್ನಿಸಿದವರನ್ನು ನಕ್ಸಲ್ ಹಣೆಪಟ್ಟಿ ಕಟ್ಟಿ ಕೊಂದು ಹಾಕಲಾಗುತ್ತಿದೆ. ತಲೆ ತಲಾಂತರಗಳಿಂದ ಕಾಡುಗಳಲ್ಲಿ ವಾಸಿಸುತ್ತಿದ್ದ ಜನರನ್ನು ಒಕ್ಕಲೆಬ್ಬಿಸಿ, ಕಾಡುಗಳನ್ನು ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಇಲ್ಲಿರುವ ಶೋಷಿತ ಬುಡಕಟ್ಟು ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತಿ ಹಿಂಸಾಚಾರಕ್ಕೆ ಸರಕಾರವೇ ಕುಮ್ಮಕ್ಕು ನೀಡುತ್ತಿದೆ. ಮಣಿಪುರದಲ್ಲಿ ಕುಕಿ ಮತ್ತು ಮೈತೈ ಸಮುದಾಯದ ನಡುವೆ ಬಿರುಕುಗಳನ್ನು ಬಿತ್ತಿದ್ದು ಕೂಡ ಸರಕಾರವೇ. ಬಹುಸಂಖ್ಯಾತ ಮೈತೈಗಳನ್ನು ಇಲ್ಲಿನ ಅಲ್ಪಸಂಖ್ಯಾತ ಕುಕಿಗಳ ಮೇಲೆ ಎತ್ತಿ ಕಟ್ಟಿದ ಬಿಜೆಪಿ ನಾಯಕರು ಇದೀಗ ಅಮಾಯಕರಂತೆ ವರ್ತಿಸುತ್ತಿದ್ದಾರೆ. ಕುಕಿ ಸಮುದಾಯದ ಮೀಸಲಾತಿ ಸ್ಥಾನಮಾನವನ್ನು ಕಿತ್ತು ಹಾಕುವ ಪ್ರಸ್ತಾವವನ್ನು ಮತ್ತೆ ಮುನ್ನೆಲೆಗೆ ತಂದಿರುವ ಇಲ್ಲಿನ ಸರಕಾರ, ಇನ್ನಷ್ಟು ಗಲಭೆಗಳಿಗೆ ಮಣಿಪುರವನ್ನು ಪ್ರಚೋದಿಸುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಹಸ್ತಕ್ಷೇಪ ನಡೆಸುತ್ತಿದೆ. ಕೇಂದ್ರ ಸರಕಾರ ಈ ಕುರಿತಂತೆ ಅಸಹಾಯಕವಾಗಿದೆ. ತ್ರಿಪುರ-ಅಸ್ಸಾಂ ಮಧ್ಯೆಯೂ ಗಡಿ ತಿಕ್ಕಾಟಗಳು ನಡೆಯುತ್ತಿವೆ. ಅನ್ಯಾಯ, ಅಸಮಾನತೆಗಳು ಈಶಾನ್ಯ ಭಾಗವನ್ನು ಭಾರತದಿಂದ ಪ್ರತ್ಯೇಕಿಸುತ್ತಿದೆ. ನ್ಯಾಯಾಲಯಗಳೂ ಜನರಿಗೆ ನ್ಯಾಯ ನೀಡುವಲ್ಲಿ ವಿಫಲವಾಗುತ್ತಿವೆ. ಸರಕಾರದ ಕೈಗೊಂಬೆಗಳಂತೆ ವರ್ತಿಸುತ್ತಿವೆ. ಇದೇ ಸಂದರ್ಭದಲ್ಲಿ ರಾಮನಿಗೆ ಮಂದಿರವನ್ನು ಕಟ್ಟುವ ಸಂಭ್ರಮದಲ್ಲಿದ್ದಾರೆ ಪ್ರಧಾನಿ ಮೋದಿಯವರು. ಯಾವ ನೆಲದಲ್ಲಿ ರಾಮನ ಆದರ್ಶಗಳಿಗೆ ನೆಲೆಯಿಲ್ಲವೋ ಅಲ್ಲಿ ಕಟ್ಟುವ ಮಂದಿರದಲ್ಲಿ ರಾಮ ನೆಲೆ ನಿಲ್ಲುವುದಾದರೂ ಹೇಗೆ ಸಾಧ್ಯ? ಅಗಸನ ಮಾತನ್ನು ಎತ್ತಿ ಹಿಡಿದು, ಸೀತೆಯನ್ನು ಕಾಡಿಗೆ ಬಿಟ್ಟು ಬಂದ ನ್ಯಾಯ ಪರಿಪಾಲಕ ಶ್ರೀರಾಮ. ಮೋದಿಯವರು ತಮ್ಮ ರಾಜಕೀಯಕ್ಕಾಗಿ ನ್ಯಾಯ ಕೇಳಿದ ನ್ಯಾಯದೇವತೆಯನ್ನೇ ಕಾಡಿಗಟ್ಟಿದ್ದಾರೆ. ವನವಾಸದಲ್ಲಿರುವ ಆಕೆಯನ್ನು ಮತ್ತೆ ನಾಡಿಗೆ ಕರೆತರದೆ ರಾಮರಾಜ್ಯದ ಕನಸು ನನಸಾಗುವುದು ಸಾಧ್ಯವೆ?

ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ಮಂದಿರ ಉದ್ಘಾಟಿಸುತ್ತಿರುವಾಗ, ಇತ್ತ ಅಸ್ಸಾಂನಲ್ಲಿ ರಾಹುಲ್‌ಗಾಂಧಿಯವರು ಮಂದಿರ ಪ್ರವೇಶಕ್ಕಾಗಿ ಧರಣಿ ನಡೆಸುತ್ತಿದ್ದರು. ಭಕ್ತರನ್ನು ಹುಡುಕಿಕೊಂಡು ಅವರಿಗೆ ದರ್ಶನ ಕೊಟ್ಟವನು ಶ್ರೀರಾಮ. ಇದೀಗ ನೋಡಿದರೆ ಯಾರಿಗೆ ದರ್ಶನಕೊಡಬೇಕು, ಕೊಡಬಾರದು ಎನ್ನುವುದನ್ನು ಸ್ವತಃ ಮೋದಿ ಶ್ರೀರಾಮನಿಗೆ ನಿರ್ದೇಶಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಯವರು ರಾಮಮಂದಿರ ಉದ್ಘಾಟಿಸುವವರೆಗೆ ಇತರರು ದೇವಸ್ಥಾನ ಪ್ರವೇಶಿಸಬಾರದು ಎನ್ನುವ ಮೂಲಕ ಮೋದಿಯನ್ನು ದೇವರಿಗಿಂತ ದೊಡ್ಡವನಾಗಿಸಲು ಅಸ್ಸಾಂ ಸರಕಾರ ಹೊರಟಿದೆ. ಇದು ಸ್ವತಃ ಹಿಂದೂ ಧರ್ಮಕ್ಕೆ ಮಾಡಿದ ಅಪಚಾರವಾಗಿದೆ. ಈ ಮೂಲಕ ಮಹಾತ್ಮಾಗಾಂಧೀಜಿಯ ರಾಮರಾಜ್ಯದ ಪರಿಕಲ್ಪನೆಯನ್ನು ಹಾಡಹಗಲೇ ನಗೆಪಾಟಲಿಗೀಡು ಮಾಡಲಾಗಿದೆ. ದೇವರನ್ನು ಪ್ರಧಾನಿ ಮೋದಿಗೆ ಅಸ್ಸಾಂ ಸರಕಾರ ಒತ್ತೆಯಿಟ್ಟಿದೆ. ಮೋದಿ ಆಡಳಿತದಲ್ಲಿ ಸ್ವತಃ ದೇವರೇ ನ್ಯಾಯ ವಂಚಿತರಾಗಿರುವಾಗ, ಜನಸಾಮಾನ್ಯರ ಪಾಡೇನು? ರಾಹುಲ್ ನೇತೃತ್ವದ ನ್ಯಾಯ ಯಾತ್ರೆಯ ಮೇಲೆ ನಡೆಯುತ್ತಿರುವ ದಾಳಿಗಳೇ ಈ ದೇಶದಲ್ಲಿ ನ್ಯಾಯಯಾತ್ರೆಯ ಅಗತ್ಯವನ್ನು ಎತ್ತಿ ಹಿಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News