ಇಸ್ರೇಲ್ ಕದನ ವಿರಾಮ: ಮೌನಕ್ಕೆ ತೆರಬೇಕಾದ ಬೆಲೆ

Update: 2023-10-30 05:24 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸಂಪಾದಕೀಯ | ಇಸ್ರೇಲ್ ಕದನ ವಿರಾಮ: ಮೌನಕ್ಕೆ ತೆರಬೇಕಾದ ಬೆಲೆ

Full View

ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ತಕ್ಷಣ ಮಧ್ಯ ಪ್ರವೇಶಿಸುವ ನಿಟ್ಟಿನಲ್ಲಿ ‘ಕದನ ವಿರಾಮ, ಸಂತ್ರಸ್ತರಿಗೆ ನೆರವು ಸಾಮಗ್ರಿಗಳ ಪೂರೈಕೆ, ನಾಗರಿಕರ ರಕ್ಷಣೆ’ ಇವುಗಳಿಗೆ ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಶುಕ್ರವಾರ ಬಹುಮತದೊಂದಿಗೆ ಅಂಗೀಕರಿಸಿತು. ಈ ನಿರ್ಣಯದ ಪರವಾಗಿ 120 ಮತಗಳು ಬಿದ್ದರೆ 14 ರಾಷ್ಟ್ರಗಳಷ್ಟೇ ವಿರುದ್ಧ ಮತಗಳನ್ನು ಚಲಾಯಿಸಿದ್ದವು. ನಿರ್ಣಯದ ವಿರುದ್ಧ ಯಾವೆಲ್ಲ ರಾಷ್ಟ್ರಗಳು ಮತ ಚಲಾಯಿಸಿದ್ದವು ಎನ್ನುವುದು ಊಹಿಸುವುದಕ್ಕೆ ಕಷ್ಟವೇನೂ ಇಲ್ಲ. ಫೆಲೆಸ್ತೀನ್ ನಾಗರಿಕರ ಮೇಲೆ ನಡೆಯುತ್ತಿರುವ ದಾಳಿಯಲ್ಲಿ ನೇರ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ರಾಷ್ಟ್ರಗಳೆಲ್ಲ ನಿರ್ಣಯದ ವಿರುದ್ಧ ಮತಗಳನ್ನು ಚಲಾಯಿಸಿದ್ದವು. ಆ ಮೂಲಕ ಗಾಝಾಪಟ್ಟಿಯಲ್ಲಿ ನಡೆಯುತ್ತಿರುವ ಸಹಸ್ರಾರು ಅಮಾಯಕರು, ಮಕ್ಕಳು, ಮಹಿಳೆಯರ ಕಗ್ಗೊಲೆಗಳನ್ನು ಸಮರ್ಥಿಸಿಕೊಂಡಿದೆ. ಹೀಗೆ ಕೆಂಪು ಮೊಹರನ್ನು ಒತ್ತಿರುವುದು ತೀರಾ ಸಣ್ಣ ಸಂಖ್ಯೆ. ಆದರೆ ಈ ಸಂಖ್ಯೆಯ ಕೈಗಳಲ್ಲೇ ವಿಶ್ವಸಂಸ್ಥೆಯ ಮೂಗುದಾರ ವಿರುವುದರಿಂದ ನಿರ್ಣಯದಿಂದ ಫೆಲೆಸ್ತೀನ್‌ಗೆ ನ್ಯಾಯ ಸಿಗುತ್ತದೆ ಎಂದು ಹೇಳುವಂತಿಲ್ಲ. ಯಾಕೆಂದರೆ, ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ಈ ಹಿಂದೆಯೂ ನಿರ್ಣಯಗಳಾಗಿವೆ. ಆ ಬಳಿಕವೂ ಅಮೆರಿಕದಂತಹ ದೇಶಗಳು ಇಸ್ರೇಲ್‌ನ ಪುಂಡಾಟಿಕೆಗೆ ನೇರ ಬೆಂಬಲವನ್ನು ನೀಡುತ್ತಲೇ ಬಂದಿವೆ. ಮಧ್ಯಪ್ರಾಚ್ಯದ ಮೇಲೆ ತಮ್ಮ ನಿಯಂತ್ರಣವನ್ನು ಸಾಧಿಸಲು ಇಸ್ರೇಲನ್ನು ಅವುಗಳು ಬಳಸಿಕೊಳ್ಳುತ್ತಿವೆ. ನಿರ್ಣಯದ ವಿರುದ್ಧ ಮತ ಚಲಾಯಿಸುವ ಮೂಲಕ ಈ 14 ದೇಶಗಳು ಫೆಲೆಸ್ತೀನ್‌ನಲ್ಲಿ ತಾವು ನಡೆಸುತ್ತಿರುವ ಕೃತ್ಯಗಳನ್ನು ಸಮರ್ಥಿಸುವ ವಿಫಲ ಪ್ರಯತ್ನ ನಡೆಸಿದವು.

ಇದೇ ಸಂದರ್ಭದಲ್ಲಿ ಭಾರತವೂ ಸೇರಿದಂತೆ 45 ದೇಶಗಳು ತಟಸ್ಥ ನಿಲುವನ್ನು ಅನುಸರಿಸಿವೆ. ಅಂದರೆ ಮತದಾನದಲ್ಲಿ ಭಾಗವಹಿಸದೆ ಗೈರಾದವು. ಕೆಲವು ಸಂದರ್ಭಗಳಲ್ಲಿ ಮೌನವೂ ಪರೋಕ್ಷ ಸಮ್ಮತಿಯೇ ಆಗಿರುತ್ತದೆ. ಆಸ್ಟ್ರೇಲಿಯ, ಜರ್ಮನಿ, ಬ್ರಿಟನ್ ಮೊದಲಾದ ದೇಶಗಳ ಪಾಲಿನ ಹಿರಿಮೆಗಳಲ್ಲಿ ಅವುಗಳು ನಡೆಸಿದ ಐತಿಹಾಸಿಕ ಹತ್ಯಾಕಾಂಡಗಳೂ ಸೇರಿರುವುದರಿಂದ ಅವುಗಳ ಮೌನಕ್ಕೆ ಅರ್ಥವಿದೆ. ಜರ್ಮನಿ ಇಂದಿಗೂ ಗುರುತಿಸಲ್ಪಡುವುದು ಯೆಹೂದಿಗಳ ವಿರುದ್ಧ ಹಿಟ್ಲರ್ ನಡೆಸಿದ ಹತ್ಯಾಕಾಂಡಗಳಿಗಾಗಿ. ಆದುದರಿಂದ ಗಾಝಾಪಟ್ಟಿಯಲ್ಲಿ ನಡೆಯುತ್ತಿರುವ ಅಮಾಯಕರ ಸಾವು ನೋವುಗಳು ಈ ದೇಶಗಳ ಪಾಲಿಗೆ ಸಮರ್ಥನೀಯವಾಗುವುದು ಸಹಜ. ಇಷ್ಟಾದರೂ ಇವುಗಳು ನಿರ್ಣಯದ ವಿರುದ್ಧ ಮತ ಹಾಕಲಿಲ್ಲ ಎನ್ನುವುದು ಸಮಾಧಾನದ ವಿಷಯ. ನಿರ್ಣಯದ ಪರವಾಗಿ ಮತ ಹಾಕದೇ ಇರಲು ಇವು ಕುಂಟು ನೆಪವನ್ನು ಬಳಸಿಕೊಂಡಿತು. ಮಾನವೀಯ ಕದನ ವಿರಾಮದಲ್ಲಿ ‘ಹಮಾಸ್ ದಾಳಿಗಳು ಹಾಗೂ ಒತ್ತೆಯಾಳುಗಳನ್ನು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಖಂಡಿಸುವುದನ್ನು ನಿರ್ಣಯದಲ್ಲಿ ಸೇರ್ಪಡೆಗೊಳಿಸಬೇಕು’ ಎನ್ನುವ ಕರಡು ನಿರ್ಣಯವನ್ನು ಮುಂದಿಟ್ಟುಕೊಂಡು, ಈ 45 ದೇಶಗಳು ತಮ್ಮ ಮುಖ ಉಳಿಸಿಕೊಳ್ಳುವ ಪ್ರಯತ್ನ ನಡೆಸಿತು. ಕೆನಡಾದ ತಿದ್ದುಪಡಿ ನಿರ್ಣಯ ಮೂರನೇ ಎರಡರಷ್ಟು ಮತಗಳು ಬೀಳದೆ ಇರುವ ಕಾರಣದಿಂದ ಸಭೆಯಲ್ಲಿ ಸೋಲುಂಡಿತು. ಇದನ್ನೇ ಮುಂದೊಡ್ಡಿ ವಿಶ್ವಸಂಸ್ಥೆಯ ನಿರ್ಣಯದ ಮತದಾನಕ್ಕೆ ಗೈರಾದವು. ವಿಪರ್ಯಾಸವೆಂದರೆ ಹೀಗೆ ಗೈರಾಗಿರುವ ದೇಶಗಳಲ್ಲಿ ಉಕ್ರೇನ್ ಕೂಡ ಸೇರಿದೆ.

ಭಾರತದಲ್ಲಿ ನಡೆದ ಶೃಂಗ ಸಭೆಯಲ್ಲಿ ಉಕ್ರೇನ್ ವಿರುದ್ಧ ನಡೆಯುತ್ತಿರುವ ದಾಳಿಯನ್ನು ಒಮ್ಮತದಿಂದ ಖಂಡಿಸಲಾಗಿತ್ತು. ಉಕ್ರೇನ್ ವಿರುದ್ಧ ರಶ್ಯ ನಡೆಸುತ್ತಿರುವ ಅನ್ಯಾಯಕ್ಕಿಂತಲೂ ಕ್ರೂರವಾದದ್ದನ್ನು ಫೆಲೆಸ್ತೀನ್ ವಿರುದ್ಧ ಇಸ್ರೇಲ್ ಎಸಗುತ್ತಿದೆ. ಉಕ್ರೇನ್‌ನ ವಿರುದ್ಧ ದಾಳಿ ನಡೆಸಲು ರಶ್ಯದ ಬಳಿಯೂ ಇಸ್ರೇಲ್ ಬಳಿ ಇದ್ದಂತಹದೇ ಕಾರಣಗಳಿವೆ. ಯುರೋಪ್ ರಾಷ್ಟ್ರಗಳ ಕುಮ್ಮಕ್ಕಿಗೆ ಬಲಿಯಾಗಿ ಉಕ್ರೇನ್ ನೇಟೋ ಪಡೆಯನ್ನು ಸೇರಲು ಅತ್ಯಾತ್ಸಾಹ ಪ್ರದರ್ಶಿಸಿದ್ದು ರಶ್ಯವನ್ನು ಕೆರಳಿಸಿತು. ಅಮೆರಿಕ ಸೇರಿದಂತೆ ಯುರೋಪ್ ರಾಷ್ಟ್ರಗಳು ರಶ್ಯದ ವಿರುದ್ಧ ಉಕ್ರೇನನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತದೆ ಎನ್ನುವ ಆತಂಕ ರಶ್ಯದ್ದು. ಇದು ಅಂತಿಮವಾಗಿ ಉಕ್ರೇನ್ ಮೇಲಿನ ದಾಳಿಗೆ ಕಾರಣವಾಯಿತು. ಆ ಬಳಿಕ ನಡೆದ ಅಪಾರ ನಾಶ, ನಷ್ಟವನ್ನು ಮುಂದಿಟ್ಟು ಉಕ್ರೇನ್ ವಿಶ್ವದ ಮುಂದೆ ತನ್ನನ್ನು ತಾನು ಸಂತ್ರಸ್ತ ರಾಷ್ಟ್ರವಾಗಿ ಬಿಂಬಿಸಿಕೊಳ್ಳುತ್ತಿದೆ. ಉಕ್ರೇನ್‌ಗೆ ಹೋಲಿಸಿದರೆ ಫೆಲೆಸ್ತೀನ್ ಒಂದು ಪರಿಪೂರ್ಣ ದೇಶವೇ ಅಲ್ಲ. ರಶ್ಯದ ಬಹುತೇಕ ದಾಳಿಗಳು ಉಕ್ರೇನ್‌ನ ಸೇನಾನೆಲೆಗಳ ಮೇಲೆ ನಡೆದಿವೆ. ಅದಕ್ಕೆ ಉಕ್ರೇನ್ ಸೇನೆಗಳು ಅಷ್ಟೇ ಬಲವಾಗಿ ಪ್ರತಿರೋಧವನ್ನು ವ್ಯಕ್ತಪಡಿಸಿವೆ. ಎಲ್ಲಕ್ಕೂ ಮುಖ್ಯವಾಗಿ ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಯಾವ ಯುದ್ಧವೂ ನಡೆಯುತ್ತಿಲ್ಲ. ಹಮಾಸ್‌ನ ದಾಳಿಯ ಬಳಿಕ ಇಸ್ರೇಲ್ ಏಕಮುಖವಾಗಿ ಗಾಝಾಪಟ್ಟಿಯಲ್ಲಿರುವ ನಾಗರಿಕರ ಮೇಲೆ, ಮಕ್ಕಳ ಮೇಲೆ, ನಿವಾಸಗಳ ಮೇಲೆ ದಾಳಿ ನಡೆಸುತ್ತಿದೆ. ಗಾಝಾಪಟ್ಟಿಯಲ್ಲಿ ದಾಳಿಗೆ ಯಾವ ಪ್ರತಿರೋಧಗಳೂ ಇಲ್ಲ. ಇದು ವಿಶ್ವಸಂಸ್ಥೆಗೆ ಚೆನ್ನಾಗಿಯೇ ಗೊತ್ತಿದೆ. ಹಮಾಸ್ ದಾಳಿ ನಡೆಸುವ ಮೊದಲು ಗಾಝಾಪಟ್ಟಿಯಲ್ಲಿ ಎಲ್ಲವೂ ಚೆನ್ನಾಗಿತ್ತು ಎಂದಾಗಿದ್ದರೆ ಎಲ್ಲ ನಾಶ ನಷ್ಟವನ್ನು ಹಮಾಸ್ ತಲೆಗೆ ಕಟ್ಟಿ ಬಿಡಬಹುದಿತ್ತು. ಸದ್ಯಕ್ಕೆ ಗಾಝಾಪಟ್ಟಿಯಲ್ಲಿ ನಾಗರಿಕರ ವಿರುದ್ಧ ಇಸ್ರೇಲ್ ಏಕಮುಖ ದಾಳಿ ನಡೆಸುತ್ತಿರುವುದರಿಂದ, ಅದನ್ನು ತಡೆಯಲು ಆದ್ಯತೆ ನೀಡಬೇಕಾಗಿದೆ. ಆದರೆ ಉಕ್ರೇನ್, ಗಾಝಾಪಟ್ಟಿಯಲ್ಲಿ ಅಮಾಯಕರ ಮೇಲೆ ನಡೆಯುವ ದಾಳಿಗೆ ಮೌನ ಸಮ್ಮತಿಯನ್ನು ನೀಡುವ ಮೂಲಕ ರಶ್ಯವು ತನ್ನ ಮೇಲೆ ನಡೆಸುತ್ತಿರುವ ದಾಳಿಗೂ ಪರೋಕ್ಷ ಸಮ್ಮತಿ ನೀಡಿದೆ.

ಇಸ್ರೇಲ್ ನಡೆಸುತ್ತಿರುವ ಮಾನವ ಹಕ್ಕು ದಮನಗಳ ವಿರುದ್ಧ ವಿಶ್ವಸಂಸ್ಥೆ ಈ ಹಿಂದೆ ಹತ್ತು ಹಲವು ಬಾರಿ ಕಳವಳವನ್ನು ವ್ಯಕ್ತಪಡಿಸಿದೆ. ಇಸ್ರೇಲ್ ದೇಶವೇ ಭಯೋತ್ಪಾದಕ ದೇಶವಾಗಿ ವಿಶ್ವಸಂಸ್ಥೆಯಿಂದ ಕರೆಸಿಕೊಂಡಿದೆ. ಹಮಾಸ್ ದಾಳಿಯನಂತರದ ಬೆಳವಣಿಗೆಗಳ ಬಗ್ಗೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಹೇಳಿಕೆ ಈಗಾಗಲೇ ಇಸ್ರೇಲನ್ನು ಕೆರಳಿಸಿದೆ ಮಾತ್ರವಲ್ಲ, ವಿಶ್ವಸಂಸ್ಥೆಯ ಅಧಿಕಾರಿಗಳಿಗೇ ವೀಸಾವನ್ನು ನಿರಾಕರಿಸಿದೆ. ಇಸ್ರೇಲ್ ಈಗ ವಿಶ್ವಸಂಸ್ಥೆಗೇ ಪಾಠ ಕಲಿಸುವ ಮಟ್ಟಕ್ಕೆ ತಲುಪಿದೆ. ‘‘ನಾವು ಈಗಾಗಲೇ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಮಹಾಕಾರ್ಯದರ್ಶಿ ಮಾರ್ಟಿನ್ ಗ್ರಿಫಿಕ್ಸ್‌ಗೆ ವೀಸಾ ನಿರಾಕರಿಸಿದ್ದೇವೆ. ಅವರಿಗೆ ಪಾಠ ಕಲಿಸುವ ಸಮಯ ಈಗ ಬಂದಿದೆ’’ ಎಂದು ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇಂತಹ ಇಸ್ರೇಲ್‌ನ ಜೊತೆಗೆ ಉಕ್ರೇನ್, ಭಾರತದಂತಹ ದೇಶಗಳು ಕೈ ಜೋಡಿಸುವುದೆಂದರೆ ಪರೋಕ್ಷವಾಗಿ ವಿಶ್ವದ ಬಲಾಢ್ಯ ರಾಷ್ಟ್ರಗಳು ತಮ್ಮ ಮೇಲೆ ನಡೆಸುವ ಅಕ್ರಮಗಳಿಗೆ ಆಹ್ವಾನವನ್ನು ನೀಡಿದಂತೆಯೇ ಸರಿ.

ನೆಹರೂ ಕಾಲದಲ್ಲಿ ಭಾರತ ತೃತೀಯ ಶಕ್ತಿಯ ನೇತಾರನಾಗಿ ಹೊರ ಹೊಮ್ಮಿತ್ತು. ಅಮೆರಿಕ ಮತ್ತು ಸೋವಿಯತ್ ರಶ್ಯ ಎರಡು ಶಕ್ತಿಗಳಾಗಿ ಜಗತ್ತನ್ನು ಆಳುವುದಕ್ಕೆ ಹವಣಿಸುತ್ತಿರುವಾಗ ಪಾಕಿಸ್ತಾನವು ಅಮೆರಿಕದ ಜೊತೆಗೆ ಕೈ ಜೋಡಿಸಿ ತನ್ನ ನಾಶವನ್ನು ತಾನೇ ಆಹ್ವಾನಿಸಿಕೊಂಡಿತು. ಇದೇ ಸಂದರ್ಭದಲ್ಲಿ ಸಮತಾವಾದದಲ್ಲಿ ಒಲವನ್ನು ಇಟ್ಟುಕೊಳ್ಳುತ್ತಲೇ ಅಲಿಪ್ತ ರಾಷ್ಟ್ರವಾಗಿ ಭಾರತ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿತ್ತು. ಭಾರತಕ್ಕೆ ಒಂದು ಸ್ಪಷ್ಟ ವಿದೇಶಾಂಗ ನೀತಿಯಿತ್ತು. ಯಾವುದೇ ಅನ್ಯಾಯ, ಅಕ್ರಮಗಳು ನಡೆದಾಗ ಅವುಗಳನ್ನು ತಡೆಯುವ ನೈತಿಕ ಶಕ್ತಿಯನ್ನು ಭಾರತ ಉಳಿಸಿಕೊಂಡಿತ್ತು. ಅಲಿಪ್ತ ರಾಷ್ಟ್ರವೆಂದರೆ ಬಲಿಷ್ಠ ರಾಷ್ಟ್ರಗಳ ಜೊತೆಗೆ ಗುರುತಿಸಿಕೊಳ್ಳುವುದೂ ಅಲ್ಲ, ಅಕ್ರಮಗಳು ನಡೆದಾಗ ಮೌನವಾಗಿರುವುದೂ ಅಲ್ಲ. ಆದರೆ ಇಂದು ಭಾರತ ಗೆದ್ದೆತ್ತಿನ ಬಾಲ ಹಿಡಿಯುವುದನ್ನೇ ವಿದೇಶಾಂಗ ನೀತಿಯೆಂದು ಭಾವಿಸಿದೆ. ಅಮೆರಿಕದ ಆಪ್ತ ರಾಷ್ಟ್ರವಾಗುವ ಆತುರದಲ್ಲಿ ಅದು ತನ್ನ ವಿದೇಶಾಂಗ ನೀತಿಯನ್ನೆಲ್ಲ ಹಂತಹಂತವಾಗಿ ಬಲಿಕೊಟ್ಟಿತು. ಅಮೆರಿಕ ಇಂದು ಭಾರತದ ಮೂಗಿಗೆ ತುಪ್ಪ ಸವರಿ ತನ್ನ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತಿದೆ. ಅಮೆರಿಕ, ಯುರೋಪ್ ದೇಶಗಳ ಸಹವಾಸದಿಂದ ಉಕ್ರೇನ್‌ಗೆ ಒದಗಿರುವ ಗತಿ ನಮ್ಮ ಕಣ್ಣೆದುರಿಗಿದ್ದರೂ ನಾವಿಂದು ಅಮೆರಿಕ, ಇಸ್ರೇಲ್‌ನಂತಹ ದೇಶಗಳನ್ನು ಓಲೈಸುವ ಪ್ರಯತ್ನದಲ್ಲಿದ್ದೇವೆ. ಫೆಲೆಸ್ತೀನ್‌ನಲ್ಲಿ ಇಸ್ರೆಲ್ ನಡೆಸುತ್ತಿರುವ ಅತಿಕ್ರಮಣಗಳಿಗೆ ಮೌನವಹಿಸುವ ಮೂಲಕ, ಚೀನಾವು ಅರುಣಾಚಲ

ದಲ್ಲಿ ನಡೆಸುತ್ತಿರುವ ಅತಿಕ್ರಮಣಗಳಿಗೆ ಸಮ್ಮತಿಯ ಮುದ್ರೆ ಒತ್ತುತ್ತಿದ್ದೇವೆ. ಭಾರತದ ದ್ವಂದ್ವ ನಡೆಯಿಂದಾಗಿ ಅದು ವಿಶ್ವದ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ಫೆಲೆಸ್ತೀನ್ ವಿಷಯದಲ್ಲಿ ಭಾರತ ತಳೆದ ಮೌನ, ಒಂದಲ್ಲ ಒಂದು ದಿನ ತಿರುಗುಬಾಣವಾಗುವ ಅಪಾಯವಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News