ಸೋರುತ್ತಿರುವ ಭಾರತ, ಕುಸಿಯುತ್ತಿರುವ ಅಭಿವೃದ್ಧಿ

Update: 2024-07-01 06:02 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸೇತುವೆಗಳೆಂದರೆ ಅಭಿವೃದ್ಧಿಯ ನಡುವಿನ ಬೆಸುಗೆಗಳು. ವಿಪರ್ಯಾಸವೆಂದರೆ, ಭಾರತದಲ್ಲಿ ಈ ಸೇತುವೆಗಳು ಕುಸಿಯುತ್ತಿರುವ ಕಾರಣಕ್ಕಾಗಿ ಇತ್ತೀಚೆಗೆ ಮಾಧ್ಯಮಗಳು ಪ್ರಮುಖ ಸುದ್ದಿಯಾಗುತ್ತಿವೆ. ಬಿಹಾರದಲ್ಲಿರುವ ಸೇತುವೆಗಳಿಗೆ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ‘ಮೈತ್ರಿ ಸರಕಾರ’ಕ್ಕಿರುವ ಆಯಸ್ಸು ಕೂಡ ಇಲ್ಲವೇನೋ ಎಂದು ಅನುಮಾನಪಡುವಂತಾಗಿದೆ. ಕಳೆದ ಹತ್ತು ದಿನಗಳಲ್ಲಿ ಬಿಹಾರದಲ್ಲಿ ಐದು ಸೇತುವೆಗಳು ಕುಸಿದು ಬಿದ್ದಿವೆ. ಕಳೆದ ವಾರ ಅಂದರೆ ಜೂನ್ 18ರಂದು ಅರಾರಿಯಾದಲ್ಲಿ ಬಾಕ್ರಾ ನದಿಗೆ ಕಟ್ಟಿರುವ ಸೇತುವೆಯ ಒಂದು ಭಾಗ ಕುಸಿದು ಬಿತ್ತು. ಆದರೆ ಯಾವುದೇ ಸಾವು ನೋವುಗಳು ಸಂಭವಿಸಿರಲಿಲ್ಲ. ಇದಾದ ನಾಲ್ಕೇ ದಿನಗಳಲ್ಲಿ ಅಂದರೆ ಜೂನ್ 22ರಂದು ಮುಂಜಾನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಕಿರು ಸೇತುವೆಯೊಂದು ಕುಸಿಯಿತು. ಈ ಸೇತುವೆಯು ದಾರೌಂಡಾ-ಮಹಾರಾಜ್ ಗಂಜ್ ಎನ್ನುವ ಎರಡು ಊರನ್ನು ಬೆಸೆದಿತ್ತು. ವಿಪರ್ಯಾಸವೆಂದರೆ ಅದರ ಮರುದಿನ ಬಿಹಾರದ ಚಂಪಾರಣ್ ಜಿಲ್ಲೆಯ ಘೋರಸಾಹನ್-ಚೈನ್‌ಪುರ್-ಲೌಕಾನ್ ರಸ್ತೆಗಳ 60 ಅಡಿ ಉದ್ದದ ಸೇತುವೆ ಕುಸಿಯಿತು. ಇದಾದ ಮೂರು ದಿನಗಳಲ್ಲಿ ಈ ರಾಜ್ಯದಲ್ಲಿ ನಾಲ್ಕನೆಯ ಸೇತುವೆ ಕುಸಿತಕಂಡಿತು. ಕಿಶನ್ ಗಂಜ್ ಜಿಲ್ಲೆಯಲ್ಲಿ ಕಂಕೈ ಮರಿಯಾ ನದಿಗೆ ಕಟ್ಟಿದ ಸೇತುವೆ ಬಿರುಕು ಬಿಟ್ಟು, ಬಳಿಕ ಕುಸಿಯಿತು. ಜೂನ್ 28ರಂದು ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಮಧುಬನಿ ಜಿಲ್ಲೆಯಲ್ಲಿ ಕುಸಿತು ಬಿತ್ತು. ಕುಸಿದು ಬಿದ್ದ ಐದೂ ಸೇತುವೆಗಳಲ್ಲಿ ಆಯಸ್ಸು ಮುಗಿದ ಸೇತುವೆಗಳು ಇದ್ದಿರಲಿಲ್ಲ. ಎಲ್ಲವೂ ಇತ್ತೀಚೆಗೆ ನಿರ್ಮಾಣವಾದವುಗಳು ಮತ್ತು ಒಂದೆರಡು ನಿರ್ಮಾಣ ಹಂತದ ಸೇತುವೆಗಳು. ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸಮಯ ಸಾಧಕ ರಾಜಕಾರಣಗಳ ದುಷ್ಪರಿಣಾಮಗಳಲ್ಲಿ ಕುಸಿತಗೊಳ್ಳುತ್ತಿರುವ ಈ ಸೇತುವೆಗಳೂ ಒಂದು ಎನ್ನುವುದು ಅರ್ಥ ಮಾಡಿಕೊಳ್ಳುವುದು ಕಷ್ಟವಿಲ್ಲ.

ಆದರೆ ಈ ಕುಸಿತ ಕೇವಲ ಬಿಹಾರಕ್ಕಷ್ಟೇ ಸೀಮಿತವಾಗಿಲ್ಲ. ಬಿಹಾರದಾಚೆಗೂ ಸೇತುವೆಗಳು ಕುಸಿಯುತ್ತಿರುವ ಕುರಿತಂತೆ ವರದಿಗಳು ಬರುತ್ತಿವೆ. ಇದರ ಬೆನ್ನಿಗೇ, ಮಧ್ಯಪ್ರದೇಶ, ದಿಲ್ಲಿ, ಗುಜರಾತ್‌ನಲ್ಲಿ ಏರ್‌ಪೋರ್ಟ್ ಮೇಲ್‌ಛಾವಣಿಗಳೇ ಕುಸಿದು ಬೀಳತೊಡಗಿವೆ. ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಕಳೆದ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ದುಮ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡದ ಮುಂಭಾಗದ ಮೇಲ್‌ಛಾವಣಿಯ ಭಾಗವೊಂದು ಕುಸಿತು ಬಿತ್ತು. ಇದು ಮೂರು ದಿನಗಳ ಹಿಂದೆ ಅಂದರೆ ಕಳೆದ ಮಾರ್ಚ್ 10ರಂದು ಪ್ರಧಾನಿ ಮೋದಿ ಉದ್ಘಾಟಿಸಿದ ಮೇಲ್‌ಛಾವಣಿಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆದರೆ ಬಿಜೆಪಿ ಇದನ್ನು ನಿರಾಕರಿಸಿದ್ದು, ಕುಸಿತಗೊಂಡಿರುವುದು ಮೋದಿ ಉದ್ಘಾಟಿಸಿದ ಮೇಲ್ ಛಾವಣಿಯ ಭಾಗವಲ್ಲ ಎಂದಿದೆ. ಹೀಗೆ ಪ್ರತಿಕ್ರಿಯಿಸಿ ಮೋದಿಯವರನ್ನು ರಕ್ಷಿಸುತ್ತಿರುವ ಹೊತ್ತಿಗೇ, ಅದರ ಮರುದಿನ ಶುಕ್ರವಾರ ದಿಲ್ಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್‌ನ ಮೇಲ್‌ಛಾವಣಿಯ ಒಂದು ಭಾಗ ಕುಸಿದು ಒಬ್ಬ ಮೃತ್ತಪಟ್ಟಿದ್ದಾನೆ. ಹಲವರು ಗಾಯಗೊಂಡಿದ್ದಾರೆ. ಅತಿ ಹೆಚ್ಚು ಚಟುವಟಿಕೆಗಳಿರುವ ಜಗತ್ತಿನ ವಿಮಾನ ನಿಲ್ದಾಣಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಈ ನಿಲ್ದಾಣದ ಒಂದನೇ ಟರ್ಮಿನಲ್‌ನಿಂದ ಹೊರಡುವ ಮತ್ತು ಆಗಮಿಸುವ ಎಲ್ಲಾ ವಿಮಾನಗಳನ್ನು ಸಂಜೆಯವರೆಗೆ ರದ್ದು ಪಡಿಸಲಾಗಿತ್ತು. ಈ ಟರ್ಮಿನಲ್‌ನ ವಿಸ್ತರಣಾ ಭಾಗ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿತ್ತು. ಈ ಮೇಲ್‌ಛಾವಣಿ ಕುಸಿತದ ಬಗ್ಗೆ ತನಿಖೆ ನಡೆಸಲು ಸರಕಾರ ಆದೇಶ ನೀಡುತ್ತಿದ್ದಂತೆಯೇ ಗುಜರಾತ್‌ನ ರಾಜ್‌ಕೋಟ್‌ನಲ್ಲೂ ಏರ್‌ಪೋರ್ಟ್ ಮೇಲ್‌ಛಾವಣಿ ಕುಸಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಆದರೆ, ಈ ಕುಸಿತಗಳು ಮೋದಿಯ ಅಭಿವೃದ್ಧಿಯ ಸೋಗಲಾಡಿತನಗಳನ್ನು ಬಹಿರಂಗಪಡಿಸಿವೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಆಡಳಿತದಲ್ಲಿ ನಡೆದಿರುವ ಕಾಮಗಾರಿಗಳು ಮತ್ತು ಅವುಗಳ ಗುಣಮಟ್ಟಗಳನ್ನು ಈ ಕುಸಿತಗಳು ಪ್ರಶ್ನಿಸುವಂತೆ ಮಾಡಿವೆ. ಏರ್‌ಪೋರ್ಟ್‌ಗಳ ನಿರ್ವಹಣೆಯನ್ನು ಅದಾನಿಯ ಕಂಪೆನಿಗಳು ಅದೆಷ್ಟು ಪ್ರಾಮಾಣಿಕತೆಯಿಂದ ಮಾಡುತ್ತಿವೆ ಎನ್ನುವುದನ್ನು ಕೂಡ ಇದು ಹೇಳುತ್ತಿದೆ.

ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಯಾರು ಎಷ್ಟೆಷ್ಟು ಲೂಟಿ ಮಾಡಿದ್ದಾರೆ ಎನ್ನುವುದನ್ನು ತನಿಖೆಗೊಳಪಡಿಸುವ ಕೆಲಸ ಮೂರನೇ ಅವಧಿಯಲ್ಲಿ ಪ್ರಧಾನಿಯಾಗುತ್ತಿರುವ ಮೋದಿಯವರ ಹೆಗಲಿಗೆ ಬಿದ್ದಿದೆ. ‘ನಾ ಖಾವುಂಗಾ, ನಾ ಖಾನೆ ದೂಂಗಾ’ ಎನ್ನುವುದು ಪ್ರಧಾನಿಯ ಹಳೆಯ ಘೋಷಣೆ. ಆದರೆ ಈ ಘೋಷಣೆಯ ಮರೆಯಲ್ಲೇ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದನ್ನು ಅಂತಾರ್‌ರಾಷ್ಟ್ರೀಯ ಮಟ್ಟದ ವರದಿ ಈ ಹಿಂದೆಯೇ ಬಹಿರಂಗಪಡಿಸಿತ್ತು. 2023ರ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ 180 ದೇಶಗಳಲ್ಲಿ 90ನೇ ಸ್ಥಾನದಲ್ಲಿತ್ತು. 2022ರಲ್ಲಿ ಭಾರತ 85ನೇ ಸ್ಥಾನದಲ್ಲಿತ್ತು. ಪ್ರಧಾನಿ ಮೋದಿಯವರ ‘ಚೌಕೀದಾರಿಕೆಯ ಫಲ’ವಾಗಿ ಒಂದೇ ವರ್ಷದಲ್ಲಿ ಐದು ಸ್ಥಾನ ಕೆಳಕ್ಕೆ ತಳ್ಳಲ್ಪಟ್ಟಿದೆ. ಯಾವುದೇ ಘೋಷಣೆಗಳನ್ನು ಮಾಡದೆಯೇ ನೆರೆಯ ಚೀನಾ ಭ್ರಷ್ಟಾಚಾರದಲ್ಲಿ 42ನೇ ಸ್ಥಾನದಲ್ಲಿದೆ. ಅಂದರೆ, ಭಾರತ ಚೀನಾವನ್ನು ಹಿಂದಿಕ್ಕಿ ಭ್ರಷ್ಟಾಚಾರದಲ್ಲಿ ಸಾಧನೆಯನ್ನು ಮೆರೆದಿದೆ. ಈ ಹಿಂದೆ ಯುಪಿಎ ಸರಕಾರದ ಭ್ರಷ್ಟಾಚಾರಗಳನ್ನು ವಿರೋಧಿಸಿ 2014ರಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರ ಹಿಡಿಯಿತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ಭ್ರಷ್ಟಾಚಾರ ಯುಪಿಎ ಅಧಿಕಾರದಲ್ಲಿದ್ದುದಕ್ಕಿಂತಲೂ ಹೆಚ್ಚಾಗಿವೆಯೇ ಹೊರತು ಕಡಿಮೆಯಾಗಿಲ್ಲ. ಪರಿಣಾಮವಾಗಿ, ಇಂದು ಸೇತುವೆಗಳು, ಏರ್‌ಪೋರ್ಟ್‌ಗಳ ಮೇಲ್‌ಛಾವಣಿಗಳು ಕುಸಿಯುತ್ತಿರುವುದಕ್ಕೆ ದೇಶ ಸಾಕ್ಷಿಯಾಗ ಬೇಕಾಗಿದೆ.ಇದು ಆರಂಭ ಮಾತ್ರ. ಭವಿಷ್ಯದಲ್ಲಿ ಇಂತಹ ಕುಸಿತುಗಳು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಬಿಜೆಪಿ ತನ್ನನ್ನು ತಾನು ‘ಧಾರ್ಮಿಕ’ನೆಂದು ಬಿಂಬಿಸಿಕೊಂಡು ಬಂದಿದೆ ಮಾತ್ರವಲ್ಲ, ಧರ್ಮದ ಹೆಸರಿನಲ್ಲಿ ಅದರಲ್ಲೂ ರಾಮನ ಹೆಸರಿನಲ್ಲಿ ಮತ ಯಾಚಿಸಿ ಅಧಿಕಾರ ಹಿಡಿದಿದೆ. ಕನಿಷ್ಠ ‘ರಾಮಮಂದಿರ’ಕ್ಕಾದರೂ ಭ್ರಷ್ಟಾಚಾರ ಸೋಂಕದಂತೆ ತಡೆಯುವ ಪ್ರಯತ್ನವನ್ನು ಪ್ರಧಾನಿ ಮೋದಿಯವರು ಮಾಡಬಹುದಿತ್ತು. ಸ್ವತಃ ಪ್ರಧಾನಿ ಮೋದಿಯವರಿಂದಲೇ ಅಧಿಕೃತವಾಗಿ ಉದ್ಘಾಟನೆಗೊಂಡ ರಾಮಮಂದಿರ ಇಂದು ಸೋರುತ್ತಿರುವ ಕಾರಣಕ್ಕಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಈ ದೇಶದಲ್ಲಿ ಪುರಾತನ, ಪ್ರಾಚೀನ ಮಂದಿರಗಳು ನೂರಾರಿವೆ. ಮಳೆ, ಬಿಸಿಲನ್ನು ತಾಳಿಕೊಂಡು ಸಾವಿರಾರು ವರ್ಷಗಳಿಂದ ಈ ದೇವಸ್ಥಾನಗಳು, ಮಂದಿರಗಳು, ಸ್ಮಾರಕಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಆದರೆ, ತನ್ನ ಮಹತ್ತರ ಸಾಧನೆಯೆಂದು ಬಿಂಬಿಸಿಕೊಂಡು ಮೋದಿ ನೇತೃತ್ವದಲ್ಲಿ ನಿರ್ಮಾಣಗೊಂಡ ರಾಮಮಂದಿರ, ಕೆಲವೇ ತಿಂಗಳಲ್ಲಿ ಸೋರತೊಡಗಿವೆ ಎಂದರೆ, ಭ್ರಷ್ಟಾಚಾರದ ಬೇರು ಎಷ್ಟು ಆಳವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ರಾಮಮಂದಿರವನ್ನು ಬೆಸೆಯುವ 14 ಕಿ.ಮೀ. ಉದ್ದದ ರಾಮಪಥವೂ ಮೊದಲ ಮಳೆಗೆ ಹೊಂಡಗುಂಡಿಗಳಿಂದ ತುಂಬಿಹೋಗಿವೆೆ. ಇದಕ್ಕಾಗಿ ಸರಕಾರ ಈಗಾಗಲೇ 6 ಇಂಜಿನಿಯರ್‌ಗಳನ್ನು ಅಮಾನತು ಮಾಡಿದೆ. ಆದರೆ ಇಂಜಿನಿಯರ್‌ಗಳು ಇಲ್ಲಿ ಬಲಿಪಶುಗಳು. ರಾಮಮಂದಿರದ ಹೆಸರಿನಲ್ಲಿ ಹಣ ಸಂಗ್ರಹಿಸಿದವರು, ಅದನ್ನು ಕಟ್ಟುವ ನೇತೃತ್ವವನ್ನು ವಹಿಸಿದ ರಾಜಕಾರಣಿಗಳು, ಅದನ್ನು ಆತುರಾತುರವಾಗಿ ಉದ್ಘಾಟಿಸಿದ ದೇಶದ ಪ್ರಧಾನಿ ಎಲ್ಲರೂ ಈ ಭ್ರಷ್ಟಾಚಾರದಲ್ಲಿ ನೇರ ಅಥವಾ ಪರೋಕ್ಷ ಭಾಗಿಯಾಗಿದ್ದಾರೆ. ರಾಮಮಂದಿರ ನಿರ್ಮಾಣದಲ್ಲೇ ಹಣ ಲೂಟಿ ಹೊಡೆದು, ದೇವಸ್ಥಾನ ಸೋರುವಂತೆ ಮಾಡಿದವರು ಸೇತುವೆ, ವಿಮಾನನಿಲ್ದಾಣದ ಮೇಲ್‌ಛಾವಣಿಗಳನ್ನು ಬಿಟ್ಟಾರೆಯೆ? ಪರಿಣಾಮವಾಗಿ ಅಭಿವೃದ್ಧಿ ಕುಸಿಯುತ್ತಿದೆ, ದೇಶ ಸೋರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News