ಜೆಡಿಎಸ್ ತನ್ನನ್ನು ತಾನು ಕಾಪಾಡಿಕೊಳ್ಳಲಿ

Update: 2024-08-06 05:31 GMT

PC: x.com/hd_kumaraswamy

Full View

ಬಿಜೆಪಿ ಮತ್ತು ಜೆಡಿಎಸ್‌ಗಳು ದಿಲ್ಲಿ ನಾಯಕರ ಒತ್ತಡಕ್ಕೆ ಮಣಿದು ಆರಂಭಿಸಿರುವ ಪಾದಯಾತ್ರೆ ಮೈಸೂರನ್ನು ತಲುಪುವುದರೊಳಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಪತನಗೊಳ್ಳುತ್ತದೆ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರರ ತಂದೆ ಯಡಿಯೂರಪ್ಪ ಮತ್ತು ದೇವೇಗೌಡರ ಪುತ್ರ ಕುಮಾರಸ್ವಾಮಿ ಹೇಳಿದ್ದಾರೆ. ಒಲ್ಲದ ಮನಸ್ಸಿನಿಂದಲೇ ಬಿಜೆಪಿ ಜೊತೆಗೆ ಪಾದಯಾತ್ರೆ ಹೊರಟ ಕುಮಾರಸ್ವಾಮಿ ಅವರಿಗೆ ಎಲ್ಲಿ ತಮ್ಮ ಪಕ್ಷದ ಕೋಟೆಯನ್ನೇ ಬಿಜೆಪಿ ಕಬಳಿಸಿಬಿಡುವುದೋ ಎಂಬ ಆತಂಕದಿಂದ ಮೊದಲು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು. ಆದರೆ ದಿಲ್ಲಿ ಒತ್ತಡಕ್ಕೆ ಮಣಿದು ಹೆಜ್ಜೆ ಹಾಕುತ್ತಿದ್ದಾರೆ.

ದೇಶದಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲವೇ ಹೊಂದಾಣಿಕೆ ಮಾಡಿಕೊಂಡ ಯಾವ ಪಕ್ಷವೂ ಸುರಕ್ಷಿತವಾಗಿ ಉಳಿದಿಲ್ಲ ಎಂಬುದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ತನ್ನ ಕೋಮುವಾದಿ ಅಜೆಂಡಾವನ್ನು ಜಾರಿಗೆ ತರಲು ಬಿಜೆಪಿಗೆ ರಾಜಕೀಯ ಅಧಿಕಾರ ಬೇಕು. ಬಹುತೇಕ ಹಿಂದೂಗಳೂ ಸೇರಿ ಸಮಸ್ತ ಭಾರತೀಯರು ಅದನ್ನು ತಿರಸ್ಕರಿಸುತ್ತಿರುವುದರಿಂದ ಪ್ರಾದೇಶಿಕ ಪಕ್ಷಗಳ ಜೊತೆಗೆ ಅದು ಸಂದರ್ಭಸಾಧಕ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಇದೊಂದು ರೀತಿ ಧೃತರಾಷ್ಟ್ರಾಲಿಂಗನ. ಮೈತ್ರಿ ಮಾಡಿಕೊಂಡ ಪಕ್ಷವನ್ನೇ ನುಂಗಿ ನೀರು ಕುಡಿಯುವುದು ಬಿಜೆಪಿ ಚಾಳಿ. ಈಗ ದೇವೇಗೌಡರ ಜಾತ್ಯತೀತ ಎಂದು ಕರೆದುಕೊಳ್ಳುವ ಜನತಾ ಪಕ್ಷ ಬಿಜೆಪಿಯ ಬಲೆಗೆ ಬಿದ್ದಿದೆ. ಇದೊಂದು ರೀತಿ ಜೇಡರ ಬಲೆಯಲ್ಲದೆ ಬೇರೇನೂ ಅಲ್ಲ. ಇದು ಗೊತ್ತಿದ್ದೂ ಕುಮಾರಸ್ವಾಮಿ ಅವರು ರಾಜಕೀಯ ಅಸ್ತಿತ್ವದ ಅನಿವಾರ್ಯತೆಗಾಗಿ ರಾಜಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಆ ಪಕ್ಷವನ್ನೇ ಒಡೆದು ಏಕನಾಥ್ ಶಿಂದೆಯನ್ನು ಮುಂದಿಟ್ಟುಕೊಂಡು ಇನ್ನೊಂದು ನಕಲಿ ಶಿವಸೇನೆಯನ್ನೇ ಮಾಡಿತು. ಶರದ್ ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು ಒಡೆದು ಅಜಿತ್ ಪವಾರ್ ಬಣವನ್ನು ಸೃಷ್ಟಿಸಿ ಶಿಂದೆ ನಾಯಕತ್ವದಲ್ಲಿ ಸರಕಾರ ರಚಿಸಿತು. ಗೋವೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಅತ್ಯಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸನ್ನು ಒಡೆದು ತನ್ನ ಸರಕಾರ ರಚಿಸಿತು. ಮಧ್ಯಪ್ರದೇಶದಲ್ಲೂ ಆಪರೇಶನ್ ಕಮಲದ ಮೂಲಕ ಸರಕಾರ ರಚಿಸಿತ್ತು. ಕರ್ನಾಟಕದಲ್ಲೂ ಶಿವಮೊಗ್ಗದ ಸಮಾಜವಾದಿ ನಾಯಕ ಎಸ್.ಬಂಗಾರಪ್ಪನವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರ ಪ್ರಾಬಲ್ಯದ ಮೂಲವನ್ನು ಪತ್ತೆ ಹಚ್ಚಿ ಅವರ ವೋಟ್ ಬ್ಯಾಂಕನ್ನು ಹೈಜಾಕ್ ಮಾಡಿತು. ಇಂತಹ ನೂರಾರು ಉದಾಹರಣೆಗಳಿವೆ. ಕರ್ನಾಟಕದಲ್ಲಿ ಇನ್ನಷ್ಟು ತಳವೂರಲು ಒಕ್ಕಲಿಗರ ಪ್ರಾಬಲ್ಯದ ಹಳೆಯ ಮೈಸೂರಿನ ಭಾಗವನ್ನು ಸ್ವಾಧೀನಪಡಿಸಿಕೊಳ್ಳುವುದು ಸಂಘಪರಿವಾರದ ಕಾರ್ಯತಂತ್ರವಾಗಿದೆ. ಈಗಾಗಲೇ ಟಿಪ್ಪು ಸುಲ್ತಾನ್, ಉರಿಗೌಡ-ನಂಜೆಗೌಡರಂಥ ಸುಳ್ಳು ಕಥಾನಕಗಳ ಮೂಲಕ ಅನೇಕ ಯುವಕರ ಮೆದುಳಿಗೆ ವಿಷಲೇಪನ ಮಾಡಲಾಗಿದೆ. ಆದರೂ ಸಂಪೂರ್ಣವಾಗಿ ಯಶಸ್ಸು ಸಾಧಿಸಲು ಆಗಿಲ್ಲ. ಅದಕ್ಕಾಗಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಅದರ ಸಮಾಧಿಯ ಮೇಲೆ ಜನಾಂಗ ದ್ವೇಷದ ಬಾವುಟ ಹಾರಿಸಲು ಅದು ಮಸಲತ್ತು ನಡೆಸಿದೆ. ಹಳೆಯ ಮೈಸೂರು ಭಾಗದಲ್ಲಿ ಒಕ್ಕಲಿಗರು, ಉತ್ತರ ಕರ್ನಾಟಕದಲ್ಲಿ ಲಿಂಗಾಯತರನ್ನು ಗೆದ್ದು ಕೊಂಡರೆ ಗುಜರಾತಿನಂತೆ ಈ ರಾಜ್ಯ ವನ್ನು ಸುದೀರ್ಘವಾಗಿ ಆಳುವ ಲೆಕ್ಕಾಚಾರ ಹಾಕಿದ ಸಂಘಪರಿವಾರ ಉತ್ತರ ಕರ್ನಾಟಕದಲ್ಲಿ ವಚನ ದರ್ಶನ ಅಭಿಯಾನವೊಂದನ್ನು ಆರಂಭಿಸಿದೆ ಶರಣರ ವಚನಗಳನ್ನು ತಿರುಚಿ ವಚನಗಳ ಮೂಲ ವೈದಿಕ ಸಾಹಿತ್ಯ ಎಂದು ಪ್ರಚಾರ ನಡೆಸಿದೆ. ಅದರಲ್ಲಿ ಸಂಘದ ನಾಯಕರಾದ ದತ್ತಾತ್ರೇಯ ಹೊಸಬಾಳೆ ಮತ್ತು ಬಿ.ಎಲ್. ಸಂತೋಷ್ ಪಾಲ್ಗೊಂಡಿದ್ದಾರೆ. ಇದರ ವಿರುದ್ಧ ಕಲಬುರಗಿಯಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಆರೋಪಿಸಲು ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಆದರೂ ಮೋದಿ ಮತ್ತು ಅಮಿತ್ ಶಾ ಒತ್ತಡಕ್ಕೆ ಮಣಿದು ಪಾದಯಾತ್ರೆ ಹೊರಟವರು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭ್ರಷ್ಟಾಚಾರದ ಆರೋಪದಡಿ ಜೈಲಿಗೆ ಹೋಗಿ ಬಂದವರು.(ಅವರ ಮೇಲೆ ಈಗಲೂ ಪೊಕ್ಸೊ ಪ್ರಕರಣವಿದೆ) ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅಪ್ಪ ಮುಖ್ಯಮಂತ್ರಿಯಾಗಿದ್ದಾಗ ಆರ್‌ಟಿಜಿಎಸ್ ಮೂಲಕ ಗುತ್ತಿಗೆದಾರರಿಂದ ಲಂಚ ಪಡೆದ ಆರೋಪವಿದೆ.

ಇನ್ನು ಜನಾರ್ದನ ರೆಡ್ಡಿ(ಗಣಿ ಲೂಟಿ, ಸಿಬಿಐ, ಈ.ಡಿ., ತನಿಖೆ- ನಾಲ್ಕುವರ್ಷ ಜೈಲು ವಾಸ), ಶ್ರೀರಾಮುಲು (ಗಣಿ ಲೂಟಿ), ಮುನಿರತ್ನ(ನಕಲಿ ವೋಟರ್ ಐಡಿ ಹಗರಣದ ಆರೋಪಿ), ಆರ್. ಅಶೋಕ್ (ಮಾರ್ಕೊಪೋಲೋ ಬಸ್ ಖರೀದಿ ಹಗರಣ), ಎಚ್.ಡಿ. ಕುಮಾರಸ್ವಾಮಿ (ಭೂ ಹಗರಣದ ಬಗ್ಗೆ ಬಿಜೆಪಿಯೇ ಜಾಹೀರಾತು ನೀಡಿತ್ತು. ಜೆಡಿಎಸ್ ಟಿಕೆಟ್ ಮಾರಾಟ ಆರೋಪವಿದೆ. ರೇವಣ್ಣರ ಇಡೀ ಕುಟುಂಬ ಅಪಹರಣ, ಅತ್ಯಾಚಾರದ ಆರೋಪದಲ್ಲಿ ಜೈಲು, ಕೋರ್ಟು ಅಲೆಯುತ್ತಿದೆ), ಡಾ. ಅಶ್ವತ್ಥನಾರಾಯಣ (ಪಿಎಸ್‌ಐ ನೇಮಕಾತಿ ಹಗರಣದ ಆರೋಪ) ಬಿಚ್ಚುತ್ತಾ ಹೋದರೆ ಇನ್ನಷ್ಟು ಹಗರಣಗಳು ಹೊರಗೆ ಬರುತ್ತವೆ

ಅಷ್ಟೇ ಅಲ್ಲ ಕರ್ನಾಟಕದ ಬಿಜೆಪಿ ಒಡೆದ ಮನೆಯಾಗಿದೆ. ವಿಜಯೇಂದ್ರರ ನೇತೃತ್ವದ ಪಾದಯಾತ್ರೆಯಿಂದ ಮುನಿಸಿಕೊಂಡ ಅನೇಕ ಹಿರಿಯ ಬಿಜೆಪಿ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಇದೆಲ್ಲ ಬಿಜೆಪಿ ಹೈ ಕಮಾಂಡ್‌ಗೆ ಗೊತ್ತಿಲ್ಲವೆಂದಲ್ಲ. ಅವರು ಮನಸ್ಸು ಮಾಡಿದರೆ ಪಾದಯಾತ್ರೆ ವಿರುದ್ಧ ಅಪಸ್ವರ ತೆಗೆದ ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್‌ಜಾರಕಿಹೊಳಿ ಮುಂತಾದವರ ಬಾಯಿ ಮುಚ್ಚಿಸಬಹುದು. ಆದರೆ ಬಿಕ್ಕಟ್ಟು ಬಗೆಹರಿಯುವುದು ಅವರಿಗೂ ಬೇಕಾಗಿಲ್ಲ. ಸಂತೋಷ್ ಬಣಕ್ಕೆ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಕಂಡರೆ ಆಗುವುದಿಲ್ಲ. ವಿಧಾನಪರಿಷತ್ತಿನಲ್ಲಿ ತನ್ನನ್ನು ಕಡೆಗಣಿಸಿ ಛಲವಾದಿ ನಾರಾಯಣಸ್ವಾಮಿಯವರಿಗೆ ಪ್ರತಿಪಕ್ಷ ನಾಯಕನ ಸ್ಥಾನಕೊಟ್ಟಿರುವುದಕ್ಕೆ ಸಿ.ಟಿ.ರವಿಯವರಿಗೆ ಅಸಮಾಧಾನ ಉಂಟಾಗಿರುವುದು ಗುಟ್ಟಿನ ವಿಷಯವಲ್ಲ.

ಬಿಜೆಪಿ-ಜೆಡಿಎಸ್‌ಗೆ ಕಾಂಗ್ರೆಸ್ ಸರಕಾರವನ್ನು ಟೀಕಿಸಲು ಬೇಕಾದಷ್ಟು ವಿಷಯಗಳಿದ್ದವು.ಇತ್ತೀಚಿನ ಮಳೆ, ನೆರೆ ಹಾವಳಿ, ಭೂ ಕುಸಿತದಂತಹ ವಿಷಯಗಳ ಬಗ್ಗೆ ತರಾಟೆಗೆ ತೆಗೆದುಕೊಳ್ಳಬಹುದಿತ್ತು. ರಾಜ್ಯದ ಜನ ಪ್ರವಾಹದಿಂದ ಬೀದಿಗೆ ಬಿದ್ದಿರುವಾಗ ಇವರು ನಡೆಸಿದ ಪ್ರಹಸನ ಅಪಹಾಸ್ಯಕರ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News