‘ಹಣಕ್ಕಾಗಿ ಪ್ರಶ್ನೆ’ ಆರೋಪ ಪ್ರಜಾಸತ್ತೆಯ ತಲೆದಂಡಕ್ಕೆ ಕಾರಣವಾಗದಿರಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಹಣಕ್ಕಾಗಿ ಪ್ರಶ್ನೆ’ ಆರೋಪವನ್ನು ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಸಂಸದರಾಗಿ ಮುಂದುವರಿಯಲು ಅವಕಾಶ ನೀಡಬಾರದು ಮತ್ತು ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂಬ ಶಿಫಾರಸನ್ನು ಸಂಸದೀಯ ನೈತಿಕ ಸಮಿತಿ ಅಂಗೀಕರಿಸಿದೆ. ಈ ಮೂಲಕ ಮಹುವಾ ಮೊಯಿತ್ರಾ ಅವರ ಸಂಸತ್ ಸದಸ್ಯತ್ವ ವಜಾ ಆಗುವುದು ಬಹುತೇಕ ಖಚಿತವಾಗಿದೆ. ತೃಣಮೂಲ ಕಾಂಗ್ರೆಸ್ ಕೂಡ ಈ ಪ್ರಕರಣದಲ್ಲಿ ಮೊಯಿತ್ರಾ ಅವರಿಂದ ಅಂತರ ಕಾಪಾಡಿಕೊಂಡಿದೆ. ಲೋಕಸಭೆಯ ನೈತಿಕ ಸಮಿತಿಯು, ತನ್ನ ವರದಿಯನ್ನು ಯಾವುದೇ ಚರ್ಚೆಯಿಲ್ಲದೆ ಕೇವಲ ಎರಡೂವರೆ ನಿಮಿಷಗಳಲ್ಲಿ ಅಂಗೀಕರಿಸಿದೆ ಎನ್ನುವ ಆರೋಪವನ್ನು ಈಗಾಗಲೇ ಸಂಸದರೋರ್ವರು ಮಾಡಿದ್ದಾರೆ. ಇದು ಅನಿರೀಕ್ಷಿತವೇನೂ ಅಲ್ಲ. ಯಾಕೆಂದರೆ, ಇಲ್ಲಿ ವಿಚಾರಣೆ, ವರದಿ ಎಲ್ಲವೂ ನೆಪ ಮಾತ್ರಕ್ಕೆ. ತೀರ್ಪು ಮೊದಲೇ ನಿರ್ಧಾರವಾಗಿದೆ. ಬಳಿಕ ಆರೋಪ ಹೊರಿಸಲಾಗಿದೆ. ಯಾವುದೋ ಒಂದು ಭಾಷಣದಲ್ಲಿ ‘ಮೋದಿ ಸರ್‌ನೇಮ್‌ಗಳನ್ನು ಹೊಂದಿದವರೇಕೆ ಭ್ರಷ್ಟರು?’ ಎಂದು ಪ್ರಶ್ನಿಸಿದ ಕಾರಣಕ್ಕಾಗಿ ರಾಷ್ಟ್ರೀಯ ಪಕ್ಷವೊಂದರ ನಾಯಕರಾಗಿದ್ದ ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವವನ್ನೇ ವಜಾಗೊಳಿಸಿದವರಿಗೆ ಮಹುವಾ ಮೊಯಿತ್ರಾ ಅವರ ಸಂಸತ್ ಸದಸ್ಯತ್ವವನ್ನು ವಜಾಗೊಳಿಸುವುದು ದೊಡ್ಡ ಕೆಲಸವಲ್ಲ. ತಮ್ಮ ಭಾಷಣಗಳ ಮೂಲಕ ನೂರಾರು ಜನರ ಸಾವು ನೋವುಗಳಿಗೆ ಕಾರಣರಾದವರು ಈ ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಇನ್ನೂ ಮುಂದುವರಿಯುತ್ತಿರುವಾಗ, ಸಂಸತ್‌ನೊಳಗೇ ಒಬ್ಬ ಸಂಸದ ಇನ್ನೊಬ್ಬ ಸಂಸದನನ್ನು ಆತನ ಧರ್ಮದ ಕಾರಣವನ್ನು ಮುಂದಿಟ್ಟುಕೊಂಡು ‘ಭಯೋತ್ಪಾದಕರು’ ಎಂದು ಕರೆದರೂ ಯಾವುದೇ ಕ್ರಮಕ್ಕೆ ಒಳಗಾಗದಿರುವಾಗ ಇತ್ತ ‘ಭ್ರಷ್ಟ ಆರೋಪ’ವನ್ನು ಅದೂ ವ್ಯಂಗ್ಯ ರೂಪದಲ್ಲಿ ಮಾಡಿದ ಕಾರಣಕ್ಕಾಗಿ ರಾಹುಲ್‌ಗಾಂಧಿಯವರು ತಮ್ಮ ಸಂಸತ್ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಹೀಗಿರುವಾಗ ‘ಹಣಕ್ಕಾಗಿ ಪ್ರಶ್ನೆ’ಯ ನೇರ ಆರೋಪವನ್ನು ಎದುರಿಸುತ್ತಿರುವ ಮಹುವಾ ಮೊಯಿತ್ರಾ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವುದರಲ್ಲಿ ವಿಶೇಷವೇನಿದೆ?
ಸಂಸದ ಸ್ಥಾನವನ್ನು ಕಳೆದುಕೊಂಡು ಕಾನೂನು ಹೋರಾಟದ ಮೂಲಕ ಅದನ್ನು ಮತ್ತೆ ತನ್ನದಾಗಿಸಿಕೊಂಡ ರಾಹುಲ್‌ಗಾಂಧಿಗೂ, ಸಂಸತ್ ಸದಸ್ಯ ಸ್ಥಾನವನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿರುವ ಮೊಯಿತ್ರಾ ಅವರಿಗೂ ಒಂದು ವಿಷಯದಲ್ಲಿ ಸಾಮ್ಯತೆಯಿದೆ. ಇವರಿಬ್ಬರೂ, ಅದಾನಿಯ ಭ್ರಷ್ಟಾಚಾರವನ್ನು ಅಂಕಿ ಅಂಶಗಳ ಮೂಲಕ ಸಂಸತ್‌ನಲ್ಲಿ ತೆರೆದಿಟ್ಟವರು, ಅದಾನಿ-ಪ್ರಧಾನಿ ಮೋದಿಯ ನಡುವಿನ ಸಂಬಂಧವನ್ನು ಸಂಸತ್‌ನಲ್ಲಿ ಪ್ರಶ್ನಿಸಿ ಬಿಜೆಪಿಗೆ ಮುಜುಗರವನ್ನು ತಂದಿಟ್ಟವರು. ಎಲ್ಲಕ್ಕಿಂತ ಮುಖ್ಯವಾಗಿ ಬೃಹತ್ ಕಾರ್ಪೊರೇಟ್ ಸಂಸ್ಥೆಯ ಒಡೆಯರಾಗಿರುವ ಅದಾನಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರವನ್ನೇ ನಿಯಂತ್ರಿಸಿ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎನ್ನುವ ಆರೋಪಗಳನ್ನು ಇವರಿಬ್ಬರು ಮಾಡಿದ್ದರು. ನಿಜಕ್ಕೂ ಸಂಸತ್‌ನಲ್ಲಿ ತನಿಖೆಯಾಗಬೇಕಾಗಿದ್ದು, ಚರ್ಚೆ ನಡೆಯಬೇಕಾಗಿದ್ದು ಈ ಗಂಭೀರ ಆರೋಪಗಳು. ದುರದೃಷ್ಟವಶಾತ್ ಸಂಸತ್‌ನಲ್ಲಿ ಅದಾನಿಯ ಕುರಿತಂತೆ ಪ್ರಶ್ನೆಗಳನ್ನು ಕೇಳಿದ ಮೊಯಿತ್ರಾ ಅವರೇ ಅಪರಾಧಿಯಾಗಿ ನಿಂತಿದ್ದಾರೆ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಅಕ್ರಮ ಸಂಬಂಧಗಳ ಕುರಿತ ಆರೋಪಗಳ ಮುಂದೆ ಮೊಯಿತ್ರಾ ಅವರ ಮೇಲಿರುವ ಆರೋಪ ತೀರಾ ಜುಜುಬಿಯಾದದ್ದು. ಅದಾನಿಯ ವಿರುದ್ಧ ಯಾವುದೇ ಗಂಭೀರ ತನಿಖೆ ನಡೆಯದೇ ಇರುವ ಹೊತ್ತಿನಲ್ಲೇ ಮೊಯಿತ್ರಾ ವಿರುದ್ದ ಸಮಿತಿ ತನಿಖೆ ನಡೆಸಿ ಶಿಫಾರಸನ್ನೂ ನೀಡಿ ಆಗಿದೆ. ಇನ್ನು ತಲೆದಂಡವಷ್ಟೇ ಬಾಕಿ ಉಳಿದಿದೆ.
‘ಹಣಕ್ಕಾಗಿ ಪ್ರಶ್ನೆ’ ಭಾರತದ ಪಾಲಿಗೆ ಹೊಸತೇನೂ ಅಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ಪ್ರಶ್ನೆ ಕೇಳಲು ಹಣ ಪಡೆದು ಇದೇ ಬಿಜೆಪಿಯ ಆರು ಮಂದಿ ಸಂಸದರು ವಜಾಗೊಂಡು ಸುದ್ದಿಯಾಗಿದ್ದರು. ೨೦೦೫ರ ಡಿಸೆಂಬರ್‌ನಲ್ಲಿ ನಡೆದ ಕುಟುಕು ಕಾರ್ಯಾಚರಣೆಯೊಂದರಲ್ಲಿ ೧೦ ಮಂದಿ ಲೋಕಸಭಾ ಸದಸ್ಯರು ಮತ್ತು ಓರ್ವ ರಾಜ್ಯ ಸಭಾ ಸದಸ್ಯರು ಸಿಕ್ಕಿ ಬಿದ್ದಿದ್ದರು. ಇವರಲ್ಲಿ ಬಿಎಸ್‌ಪಿಯ ಮೂವರು ಸದಸ್ಯರು, ಕಾಂಗ್ರೆಸ್ ಮತ್ತು ಆರ್‌ಜೆಡಿಯ ತಲಾ ಒಬ್ಬರು ಮತ್ತು ಆರು ಮಂದಿ ಬಿಜೆಪಿ ಸದಸ್ಯರು ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಈ ಕಳಂಕ ಬಿಜೆಪಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿತ್ತು. ಇದಾದ ಬಳಿಕ, ಎಲ್. ಕೆ. ಅಡ್ವಾಣಿಯವರು ಬಿಜೆಪಿ ಸದಸ್ಯರಿಗೆ ಬಹಿರಂಗ ಎಚ್ಚರಿಕೆಯನ್ನು ನೀಡಿದ್ದರು. ‘‘ಕಾರ್ಪೊರೇಟ್ ಲಾಬಿಗಾರರು ತಮ್ಮ ಪರವಾಗಿ ಪ್ರಶ್ನೆಗಳನ್ನು ಕೇಳುವಂತೆ ಸಂಸದರನ್ನು ಹುಡುಕುವ ವ್ಯಾಪಕ ಪ್ರಯತ್ನದಲ್ಲಿದ್ದಾರೆ. ಆದುದರಿಂದ ಹಿನ್ನೆಲೆ ಅರಿಯದೇ ಯಾರೋ ಸೂಚಿಸಿದ ಪ್ರಶ್ನೆಗಳಿಗೆ ಸಹಿಯನ್ನು ಹಾಕಬೇಡಿ’’ ಎಂದು ಬಿಜೆಪಿಯ ನೂತನ ಲೋಕಸಭಾ ಸದಸ್ಯರಿಗೆ ಅವರು ಕಿವಿ ಮಾತು ಹೇಳಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಹಣಕ್ಕಾಗಿ ಪ್ರಶ್ನೆ ಸಂಸತ್ ಅಧಿವೇಶನದ ಉದ್ದೇಶವನ್ನೇ ಬುಡಮೇಲು ಗೊಳಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನಸಾಮಾನ್ಯರು ತಮ್ಮ ಸಂಕಟಗಳನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವುದಕ್ಕಾಗಿ ಅಭ್ಯರ್ಥಿಗಳನ್ನು ಗೆಲ್ಲಿಸಿರುತ್ತಾರೆ. ಆದರೆ ಗೆದ್ದ ಅಭ್ಯರ್ಥಿಗಳು ಹಣ ನೀಡಿದ ಉದ್ಯಮಿಗಳ ಪರವಾಗಿ ಸಂಸತ್‌ನಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಇದರಿಂದ ಜನಸಾಮಾನ್ಯರ ಸಮಸ್ಯೆಗಳು ಬದಿಗೆ ತಳ್ಳಲ್ಪಡುತ್ತವೆ. ಆದರೆ ಸದ್ಯದ ದಿನಗಳಲ್ಲಿ ಬಿಜೆಪಿಯು ಕಾರ್ಪೊರೇಟ್ ಶಕ್ತಿಗಳೊಂದಿಗೆ ಶಾಮೀಲಾಗಿ ಗೆದ್ದ ಶಾಸಕರನ್ನೇ ಕೊಂಡುಕೊಂಡು ಸರಕಾರವನ್ನು ಬೀಳಿಸುವ ಮತ್ತು ಹೊಸದಾಗಿ ರಚಿಸುವ ಮೂಲಕ ಸುದ್ದಿಯಲ್ಲಿದೆ. ಇಷ್ಟಾದರೂ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ. ಇದರ ಮುಂದೆ ‘ಹಣಕ್ಕಾಗಿ ಪ್ರಶ್ನೆ’ ಎನ್ನುವುದು ವಿಷಯವೇ ಅಲ್ಲ ಎನ್ನುವಂತಾಗಿದೆ. ಹಣಕ್ಕಾಗಿ ತನ್ನನ್ನು ಇನ್ನೊಂದು ಪಕ್ಷಕ್ಕೆ ಸಂಪೂರ್ಣ ಮಾರಿಕೊಳ್ಳುವ ಸಂಸದರಿರುವಾಗ, ಹಣ ಪಡೆದು ಒಂದು ಪ್ರಶ್ನೆಯನ್ನು ಕೇಳುವುದು ಅಪರಾಧವೇ ಎಂಬ ವಾತಾವರಣವನ್ನು ಸ್ವತಃ ‘ಭ್ರಷ್ಟ ಬಿಜೆಪಿ’ಯೇ ನಿರ್ಮಾಣ ಮಾಡಿದೆ.
ಇವೆಲ್ಲದರ ಮಧ್ಯೆ, ‘ಕಾರ್ಪೊರೇಟ್ ಲಾಬಿ’ಗಳ ಕುರಿತಂತೆ ಅಡ್ವಾಣಿಯವರು ಅಂದು ನೀಡಿದ ಎಚ್ಚರಿಕೆಯನ್ನು ಈಗ ನೆನಪಿಸಿಕೊಳ್ಳಬೇಕಾಗಿದೆ. ಪ್ರಧಾನಿ ಮೋದಿಯ ವೈಫಲ್ಯ ಮತ್ತು ಅದಾನಿಯ ಜೊತೆಗೆ ಸರಕಾರದ ಅಕ್ರಮ ಸಂಬಂಧಗಳ ಬಗ್ಗೆ ಹಲವು ಸಮಯಗಳಿಂದ ಮೊಯಿತ್ರಾ ಅವರು ಪ್ರಶ್ನೆಗಳನ್ನು ಎತ್ತುತ್ತಲೇ ಬಂದಿದ್ದಾರೆ. ಇದೀಗ ಮೊಯಿತ್ರಾ ಅವರ ಬಾಯಿ ಮುಚ್ಚಿಸುವುದಕ್ಕೋಸ್ಕರ ಕಾರ್ಪೊರೇಟ್ ಲಾಬಿಗಳು ಮಾಡಿದ ಸಂಚಿಗೆ ಅವರು ಬಲಿಯಾಗಿದ್ದಾರೆಯೇ ಎನ್ನುವ ಶಂಕೆಯೊಂದು ಎದ್ದಿದೆ. ಅದಾನಿಯವರು ಪಶ್ಚಿಮಬಂಗಾಳದಲ್ಲೂ ಭಾರೀ ಪ್ರಮಾಣದ ಬಂಡವಾಳವನ್ನು ಹೂಡುವ ಪ್ರಯತ್ನದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅದಾನಿ ಕಂಪೆನಿಗೆ ಬಹು ದೊಡ್ಡ ತಡೆಯಾಗಿರುವುದು ಸಂಸದೆ ಮಹುವಾ ಮೊಯಿತ್ರಾ. ಸಂಸದೆಯ ಜೊತೆಗೆ ಮಾತುಕತೆ ನಡೆಸಲು ಈಗಾಗಲೇ ಅದಾನಿ ಕಂಪೆನಿ ಹಲವು ಗಣ್ಯರನ್ನು ಮಧ್ಯವರ್ತಿಗಳನ್ನಾಗಿ ಕಳುಹಿಸಿದೆ ಎನ್ನುವ ಆರೋಪಗಳೂ ಇವೆ. ಆದರೆ ಸಂಧಾನಕ್ಕೆ ಮೊಯಿತ್ರಾ ಬಗ್ಗಿಲ್ಲ. ಇದೇ ಸಂದರ್ಭದಲ್ಲಿ ಅದಾನಿಯ ವಿರುದ್ಧ ಕೇಳಿದ ಪ್ರಶ್ನೆಗಳನ್ನೇ ಮುಂದಿಟ್ಟುಕೊಂಡು ಮೊಯಿತ್ರಾ ಅವರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆಯೆ ಎಂದು ಶಂಕಿಸಬೇಕಾಗಿದೆ. ಮೊಯಿತ್ರಾ ಅವರ ಸಂಸತ್ ಸದಸ್ಯತ್ವವನ್ನು ವಜಾಗೊಳಿಸುವ ಮೊದಲು, ‘ಅದಾನಿಗಾಗಿ ಪ್ರಧಾನಿ’ ಎನ್ನುವ ಆರೋಪಗಳನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಅದಾನಿಯ ಮೇಲಿರುವ ಆರೋಪಗಳ ಬಗ್ಗೆ ಗಂಭೀರ ತನಿಖೆ ನಡೆಸದೆ, ಅವರನ್ನು ಪ್ರಶ್ನಿಸಿದ ಮೊಯಿತ್ರಾ ಅವರ ಮೇಲಿರುವ ಈ ಆರೋಪಕ್ಕಾಗಿ ಆಕೆಯ ಸಂಸತ್ ಸದಸ್ಯತ್ವವನ್ನು ವಜಾಗೊಳಿಸುವುದೆಂದರೆ, ಮನೆಯನ್ನು ದೋಚಿದ ದರೋಡೆಕೋರನನ್ನು ಪಾರಾಗಲು ಬಿಟ್ಟು, ಕಳ್ಳನ ಬಗ್ಗೆ ಸೂಚನೆ ನೀಡಿದ ಕಾವಲು ನಾಯಿಯನ್ನೇ ಶಿಕ್ಷಿಸಿದಂತಾಗುತ್ತದೆ. ಸ್ಪೀಕರ್ ತನ್ನ ಸ್ಥಾನದ ಘನತೆಗೆ ತಕ್ಕಂತೆ ತೀರ್ಪನ್ನು ನೀಡುವುದು ಇಂದಿನ ಪ್ರಜಾಸತ್ತೆಯ ಪಾಲಿಗೆ ಅಳಿವುಉಳಿವಿನ ಪ್ರಶ್ನೆಯಾಗಿದೆ. ಆ ಪ್ರಶ್ನೆ ಯಾವ ಕಾರಣಕ್ಕೂ ಅದಾನಿಯ ಲಾಬಿಗಳಿಗೆ ಬಲಿಯಾಗಬಾರದು.