ಮಣಿಪುರ ಮುಖ್ಯಮಂತ್ರಿಯನ್ನು ವಜಾ ಮಾಡಲಿ

Update: 2023-08-05 03:11 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಮೂರು ತಿಂಗಳುಗಳಿಂದ ಕೋಮುವಾದಿ ಶಕ್ತಿಗಳು ಹಚ್ಚಿದ ಕಿಡಿಯಿಂದಾಗಿ ಮೈತೈ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ನಡೆದ ಘರ್ಷಣೆ ಮತ್ತು ಹಿಂಸಾಚಾರದಿಂದಾಗಿ ನಲುಗಿಹೋಗಿರುವ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದೆ. ಅಷ್ಟೇ ಅಲ್ಲ ಅಲ್ಲಿನ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿದೆ ಎಂದು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಇನ್ನೊಂದೆಡೆ ಹರ್ಯಾಣದಲ್ಲಿ ನಡೆದ ಕೋಮು ಹಿಂಸಾಚಾರದಿಂದ ಈ ವರೆಗೆ ೬ ಮಂದಿ ಸಾವಿಗೀಡಾಗಿದ್ದಾರೆ. ಹೀಗಾಗಿ ದೇಶದ ಅನೇಕ ಕಡೆ ಅರಾಜಕ ವಾತಾವರಣ ನಿರ್ಮಾಣವಾಗಿದೆ.

ಮಣಿಪುರದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವನ್ನು ವಜಾ ಮಾಡಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ಪ್ರತಿಪಕ್ಷಗಳು ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಿವೆೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮಣಿಪುರದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿರುವುದನ್ನು ಒತ್ತಿ ಹೇಳಿದೆ. ಇಷ್ಟೆಲ್ಲಾ ರಾದ್ಧಾಂತವಾಗಿರುವಾಗ ಜವಾಬ್ದಾರಿಯಿಂದ ವರ್ತಿಸಬೇಕಾಗಿದ್ದ ಪ್ರಧಾನಿ ಮಣಿಪುರದ ಬಗ್ಗೆ ಮಾತಾಡದೆ ರಾಜಸ್ಥಾನದಲ್ಲಿ ಹಾಗೆ ಆಗುತ್ತದೆ, ಹೀಗೆ ಆಗುತ್ತಿದೆ ಎಂದು ಕತೆ ಹೇಳುತ್ತಾ ಅಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜಿ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಮೂವರು ಸದಸ್ಯರ ನ್ಯಾಯಪೀಠವು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡು ಮಣಿಪುರ ವಿದ್ಯಮಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣದ ತನಿಖೆ ವಿಳಂಬವಾಗಿರುವುದಕ್ಕೆ ಪೊಲೀಸರ ಮತ್ತು ಸರಕಾರದ ನಿರಾಸಕ್ತಿಯೇ ಕಾರಣವಾಗಿದ್ದು, ಅಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಸುಪ್ರೀಂ ಕೋರ್ಟ್ ನೇರವಾಗಿ ಹೇಳಿದೆ.

ಮಣಿಪುರದ ಅರಾಜಕತೆ ಬಗ್ಗೆ ಸುಪ್ರೀಂ ಕೋರ್ಟ್ ನಿತ್ಯವೂ ಉಗಿಯುತ್ತಿದ್ದರೂ ಡಬಲ್ ಇಂಜಿನ್ ಸರಕಾರ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುವ ಬಿಜೆಪಿ ಮಣಿಪುರ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡದೆ ದುರಹಂಕಾರದಿಂದ ವರ್ತಿಸುವುದು ನಿರಂಕುಶ ಸರ್ವಾಧಿಕಾರಿ ಮನೋಭಾವಕ್ಕೆ ಒಂದು ಉದಾಹರಣೆಯಾಗಿದೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ೬,೫೦೦ ಎಫ್ಐಆರ್ಗಳು( ಮೊದಲ ಮಾಹಿತಿ ವರದಿ) ದಾಖಲಾದರೂ ಸರಕಾರ ಮತ್ತು ವಿಶೇಷವಾಗಿ ಪೊಲೀಸರು ಕೈಗೊಂಡ ಕ್ರಮಗಳೇನು ಎಂದು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಆಗಸ್ಟ್ ೭ನೇ ತಾರೀಕು ಸುಪ್ರೀಂ ಕೋರ್ಟ್ ಮುಂದೆ ಸ್ವತಃ ಹಾಜರಾಗುವಂತೆ ಮಣಿಪುರದ ಪೊಲೀಸ್ ವರಿಷ್ಠಾಧಿಕಾರಿ(ಡಿಜಿಪಿ)ಗೆ ಆದೇಶ ನೀಡಿದೆ. ಅಲ್ಲಿ ಇಷ್ಟೆಲ್ಲ ನಡೆದಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಮಣಿಪುರ ಒಂದನ್ನು ಬಿಟ್ಟು ಬೇರೆಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಮತ್ತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ( ೨೦೨೪) ತಮ್ಮನ್ನು ಚುನಾಯಿಸಿದರೆ ಹೊಸ ಭಾರತ ಕಟ್ಟುವುದಾಗಿ ಜನರ ಕಿವಿಯ ಮೇಲೆ ಹೂ ಇಡಲು ಹೊರಟಿದ್ದಾರೆ. ಇಂಥ ಸನ್ನಿವೇಶದಲ್ಲಿ ಸುಪ್ರೀಂ ಕೋರ್ಟ್ ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡಬೇಕಾಗಿ ಬಂದಿದೆ. ಮೋದಿ ಸರಕಾರ ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ ಬಗ್ಗೆ ಸಿಬಿಐ ತನಿಖೆ ನಡೆಸುವುದಾಗಿ ಸಬೂಬು ಹೇಳುತ್ತಿದೆ. ಆದರೆ ಅಲ್ಲಿನ ಅಯೋಗ್ಯ,ಅಸಮರ್ಥ ಮುಖ್ಯಮಂತ್ರಿಯನ್ನು ಬದಲಿಸದೆ ಮಣಿಪುರದ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಿಲ್ಲ.

ಗಲಭೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವವರು ಮತ್ತು ಕಾನೂನು ಸುವ್ಯವಸ್ಥೆ ಪಾಲನೆಯ ಹೊಣೆ ಹೊತ್ತವರು ಒಬ್ಬರೇ ಆದಾಗ ಯಾವುದೇ ಹಿಂಸಾಚಾರ ನಿಯಂತ್ರಿಸಲು ಸಾಧ್ಯವಿಲ್ಲ. ಈಶಾನ್ಯ ರಾಜ್ಯಗಳನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಲು ಹೊರಟ ಸಂಘ ಪರಿವಾರ ಯಾವುದೇ ಧರ್ಮಕ್ಕೆ ಸಂಬಂಧವಿಲ್ಲದ ತಮ್ಮದೇ ಜೀವನ ಶೈಲಿಯನ್ನು ಹೊಂದಿರುವ ಬುಡಕಟ್ಟು ಸಮುದಾಯಗಳ ನಡುವೆ ಕಿಡಿ ಹಚ್ಚಿ ಹೊಡೆದಾಟಕ್ಕೆ ಪ್ರಚೋದಿಸಿದ್ದೇ ಮಣಿಪುರ ಪರಿಸ್ಥಿತಿ ಇಷ್ಟೊಂದು ಹದಗೆಡಲು ಕಾರಣ.

ಭಾರತ ಎಂಬುದು ಬಹು ಜನಾಂಗೀಯ, ಬಹು ಧರ್ಮಗಳ, ಬಹುಭಾಷೆಗಳ, ವಿಭಿನ್ನ ಸಂಸ್ಕೃತಿಗಳನ್ನು ಒಳಗೊಂಡ ಒಕ್ಕೂಟ ರಾಷ್ಟ್ರ. ಹಾಗಾಗಿಯೇ ಸಂವಿಧಾನ ನಿರ್ಮಾಪಕರು ಇದನ್ನು ಒಕ್ಕೂಟ ರಾಷ್ಟ್ರ ಎಂದು ಕರೆದರು. ಇಲ್ಲಿ ನೂರಾರು ಬುಡಕಟ್ಟುಗಳಿವೆ. ಅವುಗಳ ಅಸ್ಮಿತೆಯನ್ನು ಗೌರವಿಸಿದರೆ ಮಾತ್ರ ಇದು ಒಂದಾಗಿ ಉಳಿಯುತ್ತದೆ.

ಭಾರತದಂಥ ಬಹುಮುಖಿ ದೇಶದ ಮೇಲೆ ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆಯನ್ನು ಹೇರುವ ಸಂಘ ಪರಿವಾರದ ಸಿದ್ಧಾಂತವನ್ನು ಜಾರಿಗೆ ತರಲು ಹೊರಟವರು ಅಧಿಕಾರದಲ್ಲಿ ಇರುವುದರಿಂದ ಮಣಿಪುರದಂಥ ಸಮಸ್ಯೆಗಳು ಉದ್ಭವವಾಗುತ್ತವೆ.

ಇನ್ನಾದರೂ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಮಣಿಪುರ ರಾಜ್ಯದ ಬಗ್ಗೆ ತನ್ನ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಹೇಳಿದ ನಂತರವೂ ಅಲ್ಲಿನ ಮುಖ್ಯಮಂತ್ರಿಯನ್ನು ಮುಂದುವರಿಸುವುದು ಸರಿಯಲ್ಲ. ಹಾಗಾಗಿ ತಕ್ಷಣ ಮಣಿಪುರ ಮುಖ್ಯಮಂತ್ರಿಯನ್ನು ವಜಾ ಮಾಡಬೇಕು.

ಮಣಿಪುರ ವಿಷಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೌನ ಸರಿಯಲ್ಲ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ರನ್ನು ಮೌನಿ ಬಾಬಾ ಎಂದು ಟೀಕಿಸುತ್ತಿದ್ದ ಮೋದಿಯವರು ಈಗಲಾದರೂ ಮೌನ ಮುರಿದು ಮಣಿಪುರ ವಿದ್ಯಮಾನಗಳ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು. ಅದಕ್ಕಿಂತ ಮೊದಲು ಮಣಿಪುರದ ಈಗಿನ ಮುಖ್ಯಮಂತ್ರಿಯನ್ನು ತೆಗೆದುಹಾಕಬೇಕು. ಅಲ್ಲಿ ಮತ್ತೆ ಕಾನೂನು ಮತ್ತು ಸುವ್ಯವಸ್ಥೆ ನೆಲೆಗೊಳ್ಳುವಂತೆ ಮಾಡಬೇಕು.

ಮಣಿಪುರದ ಭಯಾನಕ ಘಟನೆಗಳನ್ನು ಜಗತ್ತು ನೋಡುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರ ಮೌನ ಜಗತ್ತಿಗೆ ತಪ್ಪು ಸಂದೇಶವನ್ನು ನೀಡುತ್ತದೆ

ಭಾರತದ ಬಗ್ಗೆ ತಪ್ಪು ಕಲ್ಪನೆ ಉಂಟಾಗುತ್ತದೆ. ವಿಶ್ವಗುರುವಾಗಲು ಹೊರಟ ದೇಶದಲ್ಲಿ ಇಂಥ ಕೆಟ್ಟ ಘಟನೆಗಳು ನಡೆಯಬಾರದು. ಸರಕಾರ ಮಣಿಪುರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತೆ ಹಳಿಗೆ ತರಬೇಕು. ಈಶಾನ್ಯ ರಾಜ್ಯಗಳಲ್ಲಿ ಪರಕೀಯ ಭಾವನೆ ಉಂಟಾಗದಂತೆ ನೋಡಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News