ಇವಿಎಂ ಸುಧಾರಣೆಗೆ ಆಯೋಗ ಇನ್ನಾದರೂ ಸಿದ್ಧವಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇವಿಎಂ ವಿರುದ್ಧ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸುತ್ತಲೇ ಈ ಬಾರಿಯ ಲೋಕಸಭಾ ಚುನಾವಣಾ ಕಣಕ್ಕೆ ವಿರೋಧ ಪಕ್ಷಗಳು ಸಜ್ಜಾಗಿದ್ದವು. ಇವಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ವಿರೋಧ ಪಕ್ಷಗಳು ಮನವಿ ಸಲ್ಲಿಸಿದ್ದವು. ಮಾತ್ರವಲ್ಲ ಸುಪ್ರೀಂಕೋರ್ಟ್ ಮೆಟ್ಟಿಲನ್ನು ತುಳಿದಿದ್ದವು. ಕನಿಷ್ಠ ಇವಿಎಂ ಬಳಕೆಯಲ್ಲಿ ಕೆಲವು ಸುಧಾರಣೆಗಳನ್ನಾದರೂ ತರಬೇಕು ಎಂದು ಒತ್ತಾಯಿಸಿದ್ದವು. ಬಹುಶಃ ಈ ಬಾರಿ ಚುನಾವಣೋತ್ತರ ಸಮೀಕ್ಷೆಯಂತೆಯೇ ಫಲಿತಾಂಶ ಹೊರಬಿದ್ದಿದ್ದರೆ ವಿರೋಧ ಪಕ್ಷಗಳು ಅದರ ಹೊಣೆಯನ್ನು ಇವಿಎಂ ಮೇಲೆ ಹೊರಿಸುತ್ತಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿಜೆಪಿ ಭರ್ಜರಿ ಬಹುಮತವನ್ನು ಪಡೆದಿದ್ದರೆ, ಇದೀಗ ಇವಿಎಂ ವಿರುದ್ಧ ಹೇಳಿಕೆ, ಪ್ರತಿ ಹೇಳಿಕೆಗಳು ಭಾರೀ ಸದ್ದು ಮಾಡುತ್ತಿದ್ದವು. ಆದರೆ ಈ ಬಾರಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿಯ ಹಿನ್ನಡೆಯೇ ನಮ್ಮ ಮುನ್ನಡೆ ಎಂದು ಇಂಡಿಯಾದ ನಾಯಕರು ತೃಪ್ತಿ ಪಟ್ಟುಕೊಂಡಿದ್ದಾರೆ. ರಾಮಮಂದಿರ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಗೊಳ್ಳದೇ ಇದ್ದುದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿರುವುದು ಇಂಡಿಯಾ ನಾಯಕರಿಗೆ ಬಹಳಷ್ಟು ಸಮಾಧಾನ ತಂದಿದೆ. ಆದುದರಿಂದಲೇ ಅವರು ಇವಿಎಂ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಒಂದು ವೇಳೆ ಎನ್ಡಿಎ ಗೆಲುವನ್ನು ಇವಿಎಂ ತಲೆಗೆ ಕಟ್ಟಿದರೆ, ಈ ಬಾರಿಯ ಇಂಡಿಯ ಸಾಧನೆಯೂ ಜೊತೆಗೇ ಪ್ರಶ್ನೆಗೊಳಗಾಗುತ್ತದೆ.
ಭಾರತದಲ್ಲಿ ಇವಿಎಂ ವಿರುದ್ಧ ಹೇಳಿಕೆ ನೀಡಬೇಕೋ ಬೇಡವೋ ಎಂದು ವಿರೋಧ ಪಕ್ಷಗಳ ನಾಯಕರು ಧರ್ಮಸಂಕಟದಲ್ಲಿರುವ ಹೊತ್ತಿನಲ್ಲಿ, ದೂರದ ಅಮೆರಿಕದಿಂದಲೇ ಇವಿಎಂ ವಿರುದ್ಧ ಅಸಮಾಧಾನಗಳು ವ್ಯಕ್ತವಾಗಿವೆ. ಅಮೆರಿಕದಿಂದ ಬಂದದ್ದೆಲ್ಲ ತೀರ್ಥವೆಂದು ಭಾವಿಸುತ್ತಿದ್ದ ಭಾರತದ ಜನನಾಯಕರು ಆ ಅಸಮಾಧಾನಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ತಿಳಿಯದೇ ಕಕ್ಕಾ ಬಿಕ್ಕಿಯಾಗಿದ್ದಾರೆ. ಈವರೆಗೆ ಇವಿಎಂ ವಿರುದ್ಧ ಭಾರತದಲ್ಲಿ ಮಾತನಾಡುತ್ತಿದ್ದವರೆಲ್ಲ ರಾಜಕಾರಣಿಗಳು. ಇದೀಗ ಅಮೆರಿಕದಲ್ಲಿ ನಿಂತು ಇವಿಎಂ ವಿರುದ್ಧ ಅನುಮಾನವನ್ನು ವ್ಯಕ್ತಪಡಿಸುತ್ತಿರುವುದು ಯಾವನೋ ಒಬ್ಬ ರಾಜಕಾರಣಿಯೇ ಆಗಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಈ ಬಾರಿ ಧ್ವನಿಯೆತ್ತಿರುವುದು ಇಲೆಕ್ಟ್ರಿಕ್ ವಾಹನಗಳ ತಯಾರಕ ಸಂಸ್ಥೆ ಟೆಸ್ಲಾ ಹಾಗೂ ಬಾಹ್ಯಾಕಾಶಯಾನ ಸಂಸ್ಥೆ ಸ್ಪೇಸ್ ಎಕ್ಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲಾನ್ ಮಸ್ಕ್. ಈ ವರ್ಷದ ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರು ಇಲೆಕ್ಟ್ರಾನಿಕ್ ಮತ ಯಂತ್ರಗಳ ಸುರಕ್ಷತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆತಂಕಕ್ಕೆ ಪ್ರತಿಕ್ರಿಯೆಯಾಗಿ ಎಲಾನ್ ಮಸ್ಕ್ ಇವಿಎಂ ಬಗ್ಗೆ ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ‘‘ಪೋರ್ಟೊರಿಕೋದ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ಮತಯಂತ್ರಗಳಿಗೆ ಸಂಬಂಧಿಸಿದಂತೆ ನೂರಾರು ಅಕ್ರಮಗಳು ನಡೆದಿರುವುದು ಅನುಭವಕ್ಕೆ ಬಂದಿದ್ದವು. ಅದೃಷ್ವಶಾತ್, ವಿವಿಪ್ಯಾಟ್ ಮತಪತ್ರಗಳಿದ್ದುದರಿಂದ ಸಮಸ್ಯೆಯನ್ನು ಗುರುತಿಸಲಾಯಿತು. ಹಾಗೂ ಮತಗಳ ಲೆಕ್ಕವನ್ನು ಸರಿಪಡಿಸಲಾಯಿತು. ಹಾಗಾದರೆ ವಿವಿಪ್ಯಾಟ್ ಇಲ್ಲದ ಸ್ಥಳಗಳಲ್ಲಿ ಪರಿಸ್ಥಿತಿ ಏನಾದೀತು?’’ ಎಂದು ಕೆನಡಿ ಪ್ರಶ್ನಿಸಿದ್ದರು. ಇದು ಅಮೆರಿಕದಲ್ಲಿ ಮಾತ್ರವಲ್ಲ, ಭಾರತದಲ್ಲಿ ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಚರ್ಚೆಯನ್ನು ಹುಟ್ಟಿಸಿ ಹಾಕಿತು. ಈ ಹಿನ್ನೆಲೆಯಲ್ಲಿ ಅನಿಸಿಕೆಯನ್ನು ವ್ಯಕ್ತಪಡಿಸಿರುವ ಎಲಾನ್ ಮಸ್ಕ್ ‘‘ಇವಿಎಂನ್ನು ಹ್ಯಾಕಿಂಗ್ ಮಾಡಲು ಸಾಧ್ಯ. ಮಾನವ ಕೃತಕ ಬುದ್ಧಿ ಮತ್ತೆಯಿಂದ ಇವಿಎಂಗಳು ಹ್ಯಾಕ್ ಆಗುವ ಅಪಾಯ ಈಗಲೂ ತುಂಬಾ ಅಧಿಕವಾಗಿದೆ. ನಾವು ಇಲೆಕ್ಟ್ರಾನಿಕ್ ಮತ ಯಂತ್ರಗಳನ್ನು ತೊರೆಯುವ ಅಗತ್ಯವಿದೆ’’ ಎಂದು ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಪರ್ಯಾಸವೆಂದರೆ ಎಲಾನ್ ಮಸ್ಕ್ ಹೇಳಿಕೆಗೆ ಪ್ರತಿ ಹೇಳಿಕೆ ನೀಡಲು ಹೋಗಿ ಉದ್ಯಮಿ, ರಾಜಕಾರಣಿ ರಾಜೀವ್ ಚಂದ್ರಶೇಖರ್ ಮುಖಭಂಗ ಅನುಭವಿಸಿದ್ದಾರೆ. ‘‘ಎಲಾನ್ ಮಸ್ಕ್ ಅವರದು ಆಧಾರರಹಿತವಾದ ಹೇಳಿಕೆ. ಭಾರತದ ಇವಿಎಂಗಳನ್ನು ಹ್ಯಾಕ್ ಮಾಡಲಾಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ’’ ಎಂದು ರಾಜೀವ್ ಚಂದ್ರ ಶೇಖರ್ ಪ್ರತಿಕ್ರಿಯಿಸಿದ್ದಾರೆ. ಆದರೆ ಇದನ್ನು ತಿರಸ್ಕರಿಸಿರುವ ಮಸ್ಕ್ , ಯಾವುದನ್ನು ಬೇಕಾದರೂ ಹ್ಯಾಕ್ ಮಾಡಬಹುದು ಎಂದು ಹೇಳಿದ್ದಾರೆ. ಎಲಾನ್ ಮಸ್ಕ್ ತಂತ್ರಜ್ಞಾನ ಉದ್ಯಮದ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾಗಿರುವುದರಿಂದ, ಅವರ ಹೇಳಿಕೆಯನ್ನು ಸಾಮಾನ್ಯೀಕರಿಸುವುದು ತಪ್ಪಾಗಿದೆ. ಬದಲಿಗೆ, ಅವರ ಹೇಳಿಕೆಯನ್ನು ಗಂಭೀರವಾಗಿ ಸ್ವೀಕರಿಸಿ, ಭಾರತದಲ್ಲಿ ಇವಿಎಂನ್ನು ದುರುಪಯೋಗಗೊಳಿಸುವ ಪ್ರಯತ್ನ ನಡೆದಿದೆಯೇ ಎನ್ನುವುದರ ಬಗ್ಗೆ ತನಿಖೆ ನಡೆಯಬೇಕು. ಈ ಮೂಲಕ ಈ ದೇಶದ ಪ್ರಜಾಸತ್ತೆಯನ್ನು ನಾವು ಉಳಿಸಿಕೊಳ್ಳುವ ಪ್ರಯತ್ನ ನಡೆಸಬೇಕು. ಮಸ್ಕ್ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕುವುದು ಪಲಾಯನವಾಗುತ್ತದೆ. ತಂತ್ರಜ್ಞಾನದಲ್ಲಿ ಬಹಳಷ್ಟನ್ನು ಸಾಧಿಸಿದ ಅಮೆರಿಕದಂತಹ ದೇಶದ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವಾಗ, ಭಾರತವೇಕೆ ಅದನ್ನು ಗಂಭೀರವಾಗಿ ಸ್ವೀಕರಿಸಲು ಸಿದ್ಧವಿಲ್ಲ? ಮತಯಂತ್ರಗಳನ್ನು ತಿರುಚಲು ಸಾಧ್ಯ ಎನ್ನುವ ಅನುಮಾನ ವ್ಯಕ್ತವಾದುದರಿಂದಲೇ ಈ ಹಿಂದೆ ಹಲವು ಶ್ರೀಮಂತ ರಾಷ್ಟ್ರಗಳು ಚುನಾವಣೆಯಲ್ಲಿ ಮತ್ತೆ ಮತ ಪತ್ರಗಳನ್ನು ಬಳಸತೊಡಗಿದವು. ಅಮೆರಿಕದಲ್ಲೂ ಮತ ಯಂತ್ರಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಲಾಗುತ್ತಿಲ್ಲ. ಮತಯಂತ್ರಗಳನ್ನು ಬಳಸುವಲ್ಲಿ ಪೂರ್ಣ ಪ್ರಮಾಣದಲ್ಲಿ ವಿವಿ ಪ್ಯಾಟ್ಗಳನ್ನು ಅವಲಂಬಿಸಲಾಗುತ್ತದೆ. ತಾಳೆ ನೋಡಿ ತಪ್ಪುಗಳನ್ನು ತಿದ್ದ ಲಾಗುತ್ತದೆ. ಆದರೆ ಭಾರತದಲ್ಲಿ ಶೇ. ೧೦೦ರಷ್ಟು ವಿವಿಪ್ಯಾಟ್ಗಳನ್ನು ಅಳವಡಿಸಿ, ಅದರ ಪೂರ್ಣ ಪ್ರಮಾಣದ ಎಣಿಕೆಗೆ ಚುನಾವಣಾ ಆಯೋಗ ಮುಂದಾಗಿಲ್ಲ. ಅಷ್ಟೇ ಅಲ್ಲ, ಈ ಬಾರಿಯ ಮತಗಳ ಗೊಂದಲಗಳನ್ನು ಕೂಡ ಪೂರ್ಣ ಪ್ರಮಾಣದಲ್ಲಿ ನಿವಾರಿಸುವಲ್ಲಿ ಆಯೋಗ ವಿಫಲವಾಗಿದೆ.
ಎಲಾನ್ ಮಸ್ಕ್ ಅವರು ಇವಿಎಂ ಬಗ್ಗೆ ತನ್ನ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಂತೆಯೇ ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಮತ್ತೆ ಇವಿಎಂ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ. ‘‘ಭಾರತದಲ್ಲಿ ಇವಿಎಂ ಬ್ಲ್ಯಾಕ್ ಬಾಕ್ಸ್ಗಳಾಗಿವೆ. ಪ್ರಜಾಪ್ರಭುತ್ವವು ಒಂದು ಸೋಗು ಮಾತ್ರವಾಗಿದೆ’’ ಎಂದು ಅವರು ಹೇಳಿಕೆ ನೀಡಿದ್ದಾರೆ. ಆದರೆ ಇಂತಹ ಹೇಳಿಕೆಗಳಿಂದ ಇವಿಎಂ ಲೋಪದೋಷಗಳನ್ನು ನಿವಾರಿಸಲು ಸಾಧ್ಯವಿಲ್ಲ. ವಿರೋಧ ಪಕ್ಷಗಳು ಸಂಘಟಿತವಾಗಿ ಇವಿಎಂ ವಿರುದ್ಧ ಆಂದೋಲನವನ್ನು ನಡೆಸಿ ಚುನಾವಣಾ ಆಯೋಗವನ್ನು ಎಚ್ಚರಿಸುವ ಅಗತ್ಯವಿದೆ. ಇವಿಎಂನ್ನು ಕಿತ್ತು ಹಾಕದಿದ್ದರೂ ಪರವಾಗಿಲ್ಲ. ಕನಿಷ್ಠ ಶೇ.೧೦೦ರಷ್ಟು ಇವಿಎಂ ಪ್ಯಾಟ್ ಅಳವಡಿಸಿ ಅದರ ಮೂಲಕ ಚಲಾವಣೆಯಾದ ಮತಗಳ ತಾಳೆ ನೋಡುವ ವ್ಯವಸ್ಥೆಯನ್ನು ಮಾಡಲು ಚುನಾವಣಾ ಆಯೋಗ ಇನ್ನಾದರೂ ಮುಂದಾಗಬೇಕಾಗಿದೆ. ಇವಿಎಂ ಮೂಲಕ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ಜಾರಿಗೆ ತರಬೇಕು. ಚುನಾವಣೆಯ ಪ್ರಕ್ರಿಯೆಯೇ ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ, ಆಮೂಲಕ ಆಯ್ಕೆಯಾಗುವ ಸರಕಾರ ಕೂಡ ಜನರ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲಾರದು. ಇವಿಎಂ ಅಪಾಯದಲ್ಲಿದೆ ಎನ್ನುವುದರ ಅರ್ಥ, ದೇಶದ ಪ್ರಜಾಸತ್ತೆ ಅಪಾಯದಲ್ಲಿದೆ ಎನ್ನುವುದೇ ಆಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಲು ಚುನಾವಣಾ ಆಯೋಗ ಸಿದ್ಧವಿಲ್ಲ ಎಂದರೆ, ಅದು ಕೂಡ ಇವಿಎಂ ದುರುಪಯೋಗದಲ್ಲಿ ಶಾಮೀಲಾಗಿದೆ ಎಂದು ಜನಸಾಮಾನ್ಯರು ಭಾವಿಸಬೇಕಾಗುತ್ತದೆ. ದೇಶದ ಸಂವಿಧಾನವನ್ನು, ಪ್ರಜಾಸತ್ತೆಯನ್ನು ಉಳಿಸಲು ನಡೆಸುವ ಹೋರಾಟದ ಭಾಗವಾಗಿದೆ, ಇವಿಎಂ ಸುಧಾರಣೆಗಾಗಿ ನಾವು ನಡೆಸಬೇಕಾದ ಹೋರಾಟ. ದೇಶದ ಜನತೆಯೂ ಈ ಹೋರಾಟದಲ್ಲಿ ಕೈಜೋಡಿಸುವುದು ಅತ್ಯಗತ್ಯವಾಗಿದೆ.