ಕನ್ನಡ ಉಳಿವಿಗೆ ಕನ್ನಡಿಗರ ಸಮೀಕ್ಷೆ ನಡೆಯಲಿ

Update: 2023-10-25 04:30 GMT

ಮೈಸೂರು ದಸರಾಕ್ಕೆ ಚಾಲನೆಯನ್ನು ನೀಡುತ್ತಾ ಖ್ಯಾತ ಕಲಾವಿದ ಹಂಸಲೇಖ ಅವರು ಕನ್ನಡ ನಾಡು, ನುಡಿಯ ಬಗ್ಗೆ ಕಾಳಜಿಯ ಮಾತುಗಳನ್ನಾಡಿದರು. ಅಲ್ಲಿ ಬರೇ ಕಾಳಜಿಯಷ್ಟೇ ಇರಲಿಲ್ಲ, ಕಳವಳವೂ ಇತ್ತು. ಜೊತೆಗೆ ಕನ್ನಡವನ್ನು ಎತ್ತಿ ಹಿಡಿಯಲು ಸರಕಾರಕ್ಕೆ ಕೆಲವು ಸಲಹೆ ಸೂಚನೆಗಳೂ ಇದ್ದವು. ಮುಖ್ಯವಾಗಿ ‘‘ಕನ್ನಡಿಗರ ಕುರಿತಂತೆ ಒಂದು ಸಮೀಕ್ಷೆ ನಡೆಯಬೇಕಾಗಿದೆ’’ ಎನ್ನುವ ಮಹತ್ವದ ಸಲಹೆಯನ್ನು ಅವರು ನೀಡಿದ್ದಾರೆ. ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ ಸರಕಾರವೇನೋ ಭರವಸೆಗಳ ಮೇಲೆ ಭರವಸೆಗಳನ್ನು ನೀಡುತ್ತಿದೆ. ಆದರೆ ಕಾರ್ಯರೂಪಕ್ಕೆ ಬರುವ ಸಂದರ್ಭದಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯವಾಗಿ ರಾಜ್ಯದಲ್ಲಿ ಕನ್ನಡ ಭಾಷೆಯ ಸೋಲಿನ ಮೂಲ ಎಲ್ಲಿದೆ ಎನ್ನುವುದನ್ನು ಕಂಡುಕೊಳ್ಳದೇ ನಾವು ಕನ್ನಡವನ್ನು ಹಿಡಿದೆತ್ತಲು ಸಾಧ್ಯವಿಲ್ಲ. ಆದುದರಿಂದ ಮೊತ್ತ ಮೊದಲು ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ಒಂದು ಗಣತಿ ನಡೆಯುವುದು ಖಂಡಿತವಾಗಿಯೂ ಅಗತ್ಯವಿದೆ. ಆ ಗಣತಿಯಲ್ಲಿ ಈ ನಾಡಿನಲ್ಲಿ ನಿಜಕ್ಕೂ ಕನ್ನಡವನ್ನು ಮನೆ ಭಾಷೆಯಾಗಿ ಆಡುವವರು ಎಷ್ಟು ಜನರು? ಕನ್ನಡ ಗೊತ್ತಿರುವವರು ಎಷ್ಟು? ಕನ್ನಡ ಬಾರದವರೆಷ್ಟು? ಕನ್ನಡ ಮನೆ ಭಾಷೆಯಾಗಿ ಬಳಸುತ್ತಿರುವವರ ಆರ್ಥಿಕ ಸ್ಥಿತಿಗತಿ ಹೇಗಿದೆ? ಕನ್ನಡ ಮಾಧ್ಯಮದಲ್ಲಿ ಕಲಿತವರೆಷ್ಟು? ಅವರ ಆರ್ಥಿಕ ಸ್ಥಿತಿಗತಿ ಹೇಗಿದೆ? ನಿಜಕ್ಕೂ ಅವರು ಕನ್ನಡ ಮಾಧ್ಯಮವನ್ನು ಆರಿಸಿಕೊಳ್ಳಲು ಕಾರಣ ಕನ್ನಡದ ಮೇಲಿನ ಪ್ರೀತಿಯೇ ಅಥವಾ ಆರ್ಥಿಕ ಸ್ಥಿತಿಗತಿಯೆ? ಕನ್ನಡ ಮಾಧ್ಯಮ ಸರಕಾರಿ ಶಾಲೆಗಳ ಸ್ಥಿತಿಗತಿ ಹೇಗಿದೆ? ಕನ್ನಡ ಮಾಧ್ಯಮ ಕಲಿಕೆಯ ಗುಣಮಟ್ಟ ಹೇಗಿದೆ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ. ಕರ್ನಾಟಕದಲ್ಲಿ ಕನ್ನಡ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಕಂಡುಕೊಳ್ಳದೇ ಕನ್ನಡವನ್ನು ಮೇಲ್‌ಮಟ್ಟಕ್ಕೆ ತರುವುದು ಅಸಾಧ್ಯದ ಮಾತು.

ಹಂಸಲೇಖ ಅವರು ಕನ್ನಡಿಗರ ಗಣತಿ, ಸಮೀಕ್ಷೆಯ ಬಗ್ಗೆ ಮಾತನಾಡಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕನ್ನಡ ಸಂಭ್ರಮ-೫೦’ರ ಲಾಂಛನವನ್ನು ಬಿಡುಗಡೆ ಮಾಡಿದರು. ನವೆಂಬರ್ ೧ರಿಂದ ಇಡೀ ವರ್ಷ ಸಂಭ್ರಮಾಚರಣೆ ಮಾಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಎಂದಿನಂತೆ, ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸುವ ಬಗ್ಗೆಯೂ ಅವರು ಭರವಸೆಗಳನ್ನು ನೀಡಿದರು. ‘ಕರ್ನಾಟಕದಲ್ಲಿ ಕನ್ನಡದ ಅನಿವಾರ್ಯತೆ ಸೃಷ್ಟಿಸುವುದು ಅಗತ್ಯ’ ಎಂದು ಅವರು ಹೇಳಿದರೇ ಹೊರತು, ಆ ಅಗತ್ಯವನ್ನು ಸೃಷ್ಟಿಸುವುದು ಹೇಗೆ ಎನ್ನುವುದರ ಕುರಿತು ಅವರಲ್ಲಿ ಪರಿಹಾರವಿರಲಿಲ್ಲ. ಈ ಬಗ್ಗೆ ಸರಕಾರ ಯಾವುದಾದರೂ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆಯೇ ಎನ್ನುವ ಬಗ್ಗೆಯೂ ಸ್ಪಷ್ಟತೆಯಿರಲಿಲ್ಲ. ಒಂದು ವರ್ಷ ಕನ್ನಡ ಸಂಭ್ರಮ ಆಚರಣೆಯಿಂದ ಕನ್ನಡ ಜಾಗೃತಿಯಾಗಲು ಸಾಧ್ಯವೆ? ಪ್ರಧಾನಿಯ ಸ್ವಚ್ಛತಾ ಆಂದೋಲನದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಹಣ ಲೂಟಿ ಹೊಡೆದ ಹಾಗೆಯೇ ಈಗ ಕನ್ನಡದ ಹೆಸರಿನಲ್ಲಿ ಕೆಲವು ಅಧಿಕಾರಿಗಳು ರಾಜಕಾರಣಿಗಳು ಸಂಭ್ರಮ ಆಚರಿಸಿಕೊಳ್ಳಬಹುದು. ಅದಕ್ಕೆ ಹೊರತಾಗಿ ಈ ಸಂಭ್ರಮದಿಂದ ಕನ್ನಡಕ್ಕೆ ನಿಜವಾದ ಲಾಭವೇನಾದರೂ ಆಗುವ ಸಾಧ್ಯತೆಗಳಿವೆಯೆ?

‘‘ತಮಿಳು ನಾಡು, ಕೇರಳ, ತೆಲಂಗಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಕಲಿಯದೆ ಕನ್ನಡ ಮಾತನಾಡಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಬಾರದೇ ಇದ್ದರೂ ಬದುಕಬಹುದು ಎನ್ನುವ ವಾತಾವರಣವಿದೆ’’ ಎಂದು ಮುಖ್ಯಮಂತ್ರಿ ತಮ್ಮ ಮಾತಿನಲ್ಲಿ ತೋಡಿಕೊಂಡರು. ಕರ್ನಾಟಕದಲ್ಲಿ ಕನ್ನಡ ಇಲ್ಲವಾಗಲು ಹೊರಗಿನಿಂದ ಬಂದವರೇ ಮುಖ್ಯ ಕಾರಣ ಎನ್ನುವ ತಪ್ಪು ಕಲ್ಪನೆ ಅವರಲ್ಲೂ ಇದ್ದಂತಿದೆ. ಮುಖ್ಯವಾಗಿ, ಕರ್ನಾಟಕ ಭಾಷಾ ವೈವಿಧ್ಯಗಳಿಗೆ ಹೆಸರಾಗಿವೆ. ಇಲ್ಲಿ ಕನ್ನಡವನ್ನು ಬಹುತೇಕರು ಶಾಲೆಗಳಲ್ಲಿ ಕಲಿತವರು. ಕೊಂಕಣಿ, ಉರ್ದು, ಹವ್ಯಕ, ತುಳು, ಮರಾಠಿ, ಬ್ಯಾರಿ, ಮಲಯಾಳಂ ಹೀಗೆ ಬೇರೆ ಬೇರೆ ಮನೆ ಭಾಷೆಗಳನ್ನಾಡುವವರೇ ಜಾಸ್ತಿ. ಕನ್ನಡ ಇವರ ಪಾಲಿಗೆ ರಾಜ್ಯ ಭಾಷೆಯೇ ಹೊರತು ಮಾತೃ ಭಾಷೆಯಲ್ಲ. ಇವರು ರಾಜ್ಯ ಭಾಷೆಯನ್ನು ಕಲಿಯಲು ಇದ್ದ ಒಂದೇ ಬಾಗಿಲು ‘ಕನ್ನಡ ಮಾಧ್ಯಮ ಶಾಲೆಗಳು’. ಮನೆ ಭಾಷೆ ಕನ್ನಡ ಅಲ್ಲದವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂಗೆ ಹಾಕಿದಾಗ ಅವರು ಸಹಜವಾಗಿಯೇ ಕನ್ನಡದ ಜೊತೆಗೆ ನಂಟನ್ನು ಕಳೆದುಕೊಳ್ಳುತ್ತಾರೆ ಅಥವಾ ಒಂದು ಪಠ್ಯವಾಗಿ ಮಾತ್ರ ಕನ್ನಡವನ್ನು ಕಲಿಯುತ್ತಾರೆ. ಕರ್ನಾಟಕದಲ್ಲಿ ಎಳವೆಯಲ್ಲೇ ಒಂದು ಪಠ್ಯವಾಗಿ ಮಾತ್ರ ಕನ್ನಡ ಕಲಿತವರು ಕನ್ನಡದಲ್ಲಿ ಸುಲಲಿತವಾಗಿ ವ್ಯವಹರಿಸಲು ಸಾಧ್ಯವೆ? ಸಹಜವಾಗಿಯೇ ಅವರು ಇಂಗ್ಲಿಷ್ ಮತ್ತು ತಮ್ಮ ಮನೆ ಭಾಷೆಯನ್ನೇ ದೈನಂದಿನ ವ್ಯವಹಾರಕ್ಕೆ ಬಳಸುತ್ತಾರೆ. ಕನ್ನಡ ಮಾಧ್ಯಮದ ಜೊತೆಗೆ ನಂಟು ಕಳೆದುಕೊಂಡ ಹೊಸ ತಲೆಮಾರು ದೊಡ್ಡ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಇವರೇ ಕನ್ನಡದಲ್ಲಿ ವ್ಯವಹರಿಸಲು ಬಾರದ ಭವಿಷ್ಯದ ಕನ್ನಡಿಗರು. ಮನೆಯಲ್ಲಿ ಮಾತನಾಡಲು ಕನ್ನಡ ಬಳಸುವವರಷ್ಟೇ ಭವಿಷ್ಯದಲ್ಲಿ ಕನ್ನಡದ ಅಧಿಕೃತ ಪ್ರತಿನಿಧಿಗಳಾಗಿ ಉಳಿಯುತ್ತಾರೆ. ಅದೂ ಮೌಖಿಕವಾಗಿ ಮಾತ್ರ. ಉಳಿದಂತೆ, ಖಾಸಗಿ ಶಾಲೆಗೆ ಸೇರಿಸಲು ಸಾಧ್ಯವಿಲ್ಲದ ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳು ಕನ್ನಡ ಮಾಧ್ಯಮಗಳಲ್ಲಿ ಕಲಿಯುತ್ತಿದ್ದಾರೆ. ಅವರು ಭವಿಷ್ಯದ ಕನ್ನಡದ ಆಶಾಕಿರಣವಾಗಿದ್ದಾರೆ. ಆದರೆ ಇವರು ನೆಚ್ಚಿಕೊಂಡ ಕನ್ನಡ ಇವರ ಪಾಲಿಗೆ ಅನ್ನವನ್ನು ಕೊಡದೆ ಇದ್ದರೆ ಅದೂ ಉಳಿಯುವುದಿಲ್ಲ. ಆದುದರಿಂದ ಮೊತ್ತ ಮೊದಲು ಕನ್ನಡವನ್ನು ಅನ್ನದ ಭಾಷೆಯಾಗಿ ಬೆಳೆಸುವ ನಿಟ್ಟಿನಲ್ಲಿ ಸರಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು.

ಸರಕಾರಕ್ಕೆ ಎಲ್ಲ ಸರಕಾರಿ ವಲಯಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡುವ ಅವಕಾಶ ಖಂಡಿತ ಇದೆ. ‘‘ಕನ್ನಡದಲ್ಲಿಯೇ ವ್ಯವಹರಿಸಬೇಕು ಮಾತ್ರವಲ್ಲ, ವ್ಯವಹಾರಗಳ ಸಂದರ್ಭಗಳಲ್ಲಿ ಕನ್ನಡೇತರ ಭಾಷೆಗಳಿಗೆ ಅವಕಾಶ ನೀಡಬಾರದು’’. ಆಗ ಮಾತ್ರ ಹೊರಗಿನಿಂದ ಬಂದವರೂ ಕನ್ನಡ ಕಲಿಯುತ್ತಾರೆ ಜೊತೆಗೆ, ಕನ್ನಡಿಗರೇ ಆಗಿದ್ದೂ ಕನ್ನಡ ಮಾತೃಭಾಷೆಯಲ್ಲದವರು ಕನ್ನಡವನ್ನು ಕಲಿಯಲೇಬೇಕಾದ ಅನಿವಾರ್ಯತೆಗೆ ಸಿಲುಕಿಕೊಳ್ಳುತ್ತಾರೆ. ಒಳನಾಡಿನಲ್ಲಿ ಕನ್ನಡ ಎದುರಿಸುತ್ತಿರುವ ಸವಾಲುಗಳನ್ನು ಸ್ವೀಕರಿಸಿದ ಬಳಿಕ, ಗಡಿನಾಡಿನಲ್ಲಿ ಕನ್ನಡದ ಸ್ಥಿತಿಗತಿಯ ಬಗ್ಗೆ ಯೋಚಿಸಬೇಕು. ಮಹಾಜನ್ ವರದಿ ಬಂದ ಸಂದರ್ಭದಲ್ಲಿ ಇದ್ದ ವಾತಾವರಣ ಇಂದು ಬೆಳಗಾವಿಯ ಗಡಿಭಾಗದಲ್ಲಿ ಇಲ್ಲ. ಆ ಭಾಗದಲ್ಲಿ ಕನ್ನಡ ಮಾತೃಭಾಷಿಗರು ಇಳಿಮುಖವಾಗಿದ್ದಾರೆ ಮತ್ತು ಮರಾಠಿ ಮಾತೃಭಾಷಿಗರ ಸಂಖ್ಯೆ ಅಂದಿಗಿಂತ ಹೆಚ್ಚಿದೆ. ಗಡಿಭಾಗದಲ್ಲಿ ಎಲ್ಲಿಯವರೆಗೆ ಕನ್ನಡ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆಯೋ ಅಲ್ಲಿಯವರೆಗೆ ಬೆಳಗಾವಿ ನಮ್ಮದಾಗಿರುತ್ತದೆ. ಜನರನ್ನು ಹೊರಗಿಟ್ಟು ಬರೀ ನೆಲವನ್ನು ಕನ್ನಡ ಎಂದು ಘೋಷಿಸುವುದಕ್ಕೆ ಸಾಧ್ಯವಿಲ್ಲ. ಆದುದರಿಂದ ಗಡಿಭಾಗದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಇಳಿಮುಖವಾಗಲು ಕಾರಣವೇನು ಎನ್ನುವುದರ ಅಧ್ಯಯನವೂ ತುರ್ತಾಗಿ ನಡೆಯಬೇಕಾಗಿದೆ. ಇದರ ಜೊತೆಜೊತೆಗೆ ಹೊರಗಿನಿಂದ ಬಂದವರಿಗೆ ಕನ್ನಡ ಕಲಿಸುವ ಅಥವಾ ಕನ್ನಡ ಕಲಿಯಬೇಕಾದಂತಹ ಅನಿವಾರ್ಯ ವಾತಾವರಣವನ್ನು ಸೃಷ್ಟಿಸಬೇಕು. ಕನ್ನಡಿಗರಲ್ಲಿ ಕನ್ನಡ ಜಾಗೃತಿಗೊಂಡಾಗ ಮಾತ್ರ, ಹಿಂದಿಯ ವಿರುದ್ಧ ನಾವು ಮಾಡುವ ವಿರೋಧಗಳಿಗೆ ಅರ್ಥ ಬರುತ್ತದೆ ಮತ್ತು ಹಿಂದಿ ಭಾಷೆಯನ್ನು ಎದುರಿಸಲು ನಾವು ಶಕ್ತರಾಗುತ್ತೇವೆ. ಕನ್ನಡವನ್ನು ಉಳಿಸಿ ಬೆಳೆಸಲು ಕಾರ್ಯಸಾಧ್ಯ ಯೋಜನೆಗಳನ್ನು ಹಮ್ಮಿಕೊಳ್ಳುವುದೇ ಇದಕ್ಕಿರುವ ಪರಿಹಾರವಾಗಿದೆ. ಇದನ್ನು ಸಾಧ್ಯವಾಗಿಸಬೇಕಾದರೆ ಮೊತ್ತ ಮೊದಲು ಕನ್ನಡಿಗರ ಕುರಿತಂತೆ ಸಮಗ್ರವಾದ ಒಂದು ಸಮೀಕ್ಷೆ, ಗಣತಿ ನಡೆಯುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News