ಸಾಮೂಹಿಕ ಜನಾಂದೋಲನಗಳ ತುರ್ತು ಅಗತ್ಯವಿರುವ ಹಲವು ಕ್ಷೇತ್ರಗಳು

Update: 2024-08-29 05:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವಾರ್ತಾಭಾರತಿ’ ಮಾಧ್ಯಮ ಬಳಗವು ಇಂದು ತನ್ನ ಪ್ರಯಾಣದಲ್ಲಿ ಮೂರನೆಯ ದಶಕದ ಎರಡನೆಯ ವರ್ಷವನ್ನು ಪ್ರವೇಶಿಸುತ್ತಿದೆ. ಈ ನಿಮ್ಮ ಮಾಧ್ಯಮ ಬಳಗವು ಪ್ರತಿವರ್ಷವೂ ತಾನು ಹೊಸ ಪರ್ವದೆಡೆಗೆ ಮುಂದಡಿ ಇಡುವ ಮಹತ್ವದ ದಿನವನ್ನು ಉತ್ಸವದ ದಿನವಾಗಿ ಆಚರಿಸುವ ಬದಲು ಒಂದಷ್ಟು ಆತ್ಮ ವಿಮರ್ಶೆ ನಡೆಸುವ ಮತ್ತು ಜನಜೀವನದ ವಾಸ್ತವಗಳನ್ನು ಅವಲೋಕಿಸುವ ಸಂದರ್ಭವಾಗಿ ಆಚರಿಸುತ್ತಾ ಬಂದಿದೆ. ಸಮಾಜದ ಕಣ್ಣು, ಕಿವಿ ಮತ್ತು ಕನ್ನಡಿಯಾಗಿರುವುದೇ ಮಾಧ್ಯಮದ ಪ್ರಾಥಮಿಕ ಪಾತ್ರ ಎಂಬ ಅರಿವಿನ ಆಧಾರದಲ್ಲಿ, ಈ ಪಾತ್ರವನ್ನು ನಾವೆಷ್ಟು ಸಮರ್ಥವಾಗಿ ನಿರ್ವಹಿಸಿದ್ದೇವೆ, ಸ್ವತಃ ಎಷ್ಟು ಸಂವೇದನಾಶೀಲರಾಗಿದ್ದೇವೆ ಮತ್ತು ಸಮಾಜದಲ್ಲಿ ಸಂವೇದನೆಯನ್ನು ಬೆಳೆಸುವಲ್ಲಿ ಯಾವ ಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂಬ ಕುರಿತು ನಿಷ್ಠುರ ವಿಮರ್ಶೆಗೆ ಇದು ಸೂಕ್ತ ಸಮಯ. ಹಲವು ಸವಾಲುಗಳು ಹಾಗೂ ಇತಿಮಿತಿಗಳ ಹೊರತಾಗಿಯೂ ನಮ್ಮ ಪ್ರಯಾಣದ ದಿಕ್ಕು ಘೋಷಿತ ಗುರಿಯ ಕಡೆಗೇ ಇದೆ ಮತ್ತು ಆ ಗುರಿಯ ಕಡೆಗಿನ ನಡಿಗೆಯಲ್ಲಿ ನಮಗೆ ಎಲ್ಲ ಬಗೆಯ ಬೆಂಬಲ ಮತ್ತು ಸಹಕಾರ ನೀಡುವವರು, ಮಾತ್ರವಲ್ಲ, ನಮ್ಮ ಜೊತೆ ಹೆಜ್ಜೆ ಹಾಕುವವರ ವಲಯ ಕೂಡಾ ಕ್ರಮೇಣ ವಿಸ್ತರಿಸುತ್ತಾ ಸಾಗಿದೆ ಎಂಬುದು ಸಹಜವಾಗಿಯೇ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಬೆಳವಣಿಗೆಯಾಗಿದೆ.

ಹಲವು ದೊಡ್ಡ ಸಂಪನ್ನ ಮಾಧ್ಯಮಗಳು ಮತ್ತು ವಿಭಿನ್ನ ಪಾರಂಪರಿಕ ಭದ್ರ ಪೀಠಗಳಲ್ಲಿ ಕೂತು ಅವುಗಳನ್ನು ನಡೆಸುವವರು, ಸತ್ಯಗಳ ಮೇಲೆ ತೆರೆ ಎಳೆಯುವುದನ್ನೇ ತಮ್ಮ ಪರಮ ಕಾಯಕವಾಗಿಸಿಕೊಂಡಿರುವ ಸನ್ನಿವೇಶದಲ್ಲಿ, ಜನರ ಪಾಲಿಗೆ ನಿಜಕ್ಕೂ ಸಂಗತವಾಗಿರುವ ಕಟು ಸತ್ಯಗಳನ್ನು ಗಟ್ಟಿ ಧ್ವನಿಯಲ್ಲಿ ಪ್ರಸ್ತಾಪಿಸುತ್ತಿರಬೇಕು, ಅವುಗಳನ್ನು ಮತ್ತೆ ಮತ್ತೆ ಸಮಾಜಕ್ಕೆ ನೆನಪಿಸುತ್ತಿರಬೇಕು, ಆ ಕುರಿತು ಸಮಾಜದಲ್ಲಿ ಆಸಕ್ತಿ ಮತ್ತು ಜಾಗೃತಿ ಬೆಳೆಸುತ್ತಿರಬೇಕು, ಅವುಗಳನ್ನು ಸಾಮೂಹಿಕ ಸ್ತರದಲ್ಲಿ ಗಂಭೀರ ಚರ್ಚೆ, ಸಂವಾದಗಳ ವಸ್ತುಗಳಾಗಿಸುತ್ತಿರಬೇಕು ಮತ್ತು ಆ ಮೂಲಕ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಯನ್ನು ಸಕ್ರಿಯ ಹಾಗೂ ಸಶಕ್ತವಾಗಿಡಬೇಕು - ಇದುವೇ ನಮ್ಮ ಕರ್ತವ್ಯ ಎಂಬ ಪ್ರಜ್ಞೆಯನ್ನು ನಾವು ಉಳಿಸಿಕೊಂಡು ಬಂದಿದ್ದೇವೆ. ಈ ವಿಷಯಗಳಲ್ಲಿ ನಮಗೆ ದಕ್ಕಿರುವ ಯಶಸ್ಸು ಎಷ್ಟೇ ಸೀಮಿತವಾಗಿದ್ದರೂ ಸತತವಾಗಿ ಸಿಗುವ ಪುಟ್ಟ ಯಶಸ್ಸುಗಳು ಕೂಡಾ ನಮ್ಮ ಬದ್ಧತೆಗೆ ಬಲ ಒದಗಿಸಿವೆ.

ಒಂದೆಡೆ ತೀರಾ ಸೀಮಿತ ಸಂಖ್ಯೆಯಲ್ಲಿರುವ ಕಟುಕ ಪ್ರಭುಗಳು ಸಂಘಟಿತರಾಗಿ ಭಾರೀ ಶಕ್ತಿಶಾಲಿಗಳಾಗಿ ಬಿಟ್ಟಿರುವ ಮತ್ತು ಇನ್ನೊಂದೆಡೆ ಕೋಟಿಗಟ್ಟಲೆ ಸಂಖ್ಯೆಯಲ್ಲಿರುವ ಅವರ ಬಲಿಪಶುಗಳು ತಮ್ಮ ಮುಗ್ಧತೆಯಿಂದಾಗಿ ಛಿದ್ರರಾಗಿ ದುರ್ಬಲರಾಗಿರುವ ಸಮಾಜದಲ್ಲಿ ಬದಲಾವಣೆಯ ಪ್ರಕ್ರಿಯೆ ಬಹಳ ಕ್ಲಿಷ್ಟ ಹಾಗೂ ಸಂಕೀರ್ಣವಾಗಿರುತ್ತದೆ. ಈ ಪ್ರಕ್ರಿಯೆ ಸುಲಭ ಅಥವಾ ಸರಳವೆಂದು ನಂಬಿರುವವರು ಅದಕ್ಕಾಗಿ ಸರಕಾರ ಮತ್ತು ರಾಜಕೀಯಪಕ್ಷಗಳನ್ನು ಅವಲಂಬಿಸಿರುತ್ತಾರೆ. ಆದರೆ ಬದಲಾವಣೆಗಾಗಿ ಕೇವಲ ಸರಕಾರ, ಮಂತ್ರಿಗಳು, ಪುಢಾರಿಗಳು, ಕಾನೂನು, ನ್ಯಾಯಾಂಗ ಇತ್ಯಾದಿಗಳನ್ನೇ ಅವಲಂಬಿಸಿಕೊಂಡಿರುವುದು ಪರಮ ಮೂರ್ಖತನವೆಂಬುದಕ್ಕೆ ಸಾವಿರ ಪುರಾವೆಗಳು ನಮ್ಮ ಮುಂದಿವೆ.

ಗುಲಾಮಗಿರಿಗಿಂತಲೂ ಹೀನಾಯವಾದ, ಜಗತ್ತಿನಲ್ಲಿ ಬೇರೆಲ್ಲೂ ಎಂದೂ ಇಲ್ಲದಿದ್ದ ಅಸ್ಪಶ್ಯತೆ ಎಂಬ ನೀಚ ಪದ್ಧತಿಯನ್ನು ಕಾನೂನು ಪ್ರಕಾರ ಕಟ್ಟುನಿಟ್ಟಾಗಿ ನಿಷೇಧಿಸಿ 7 ದಶಕಗಳು ಕಳೆದಿವೆ. ಆದರೂ ಆ ಅನಿಷ್ಟವನ್ನು ಅಳಿಸಲು ಆ ಕಾನೂನಿಗೆ ಸಾಧ್ಯವಾಗಿಲ್ಲ. ವಿಶ್ವಾಸಾರ್ಹ ಸಮೀಕ್ಷೆಯೊಂದರ ಪ್ರಕಾರ, ಇಂದಿನ ಭಾರತದಲ್ಲಿ ಗ್ರಾಮೀಣ ಪ್ರದೇಶದ 30 ಶೇ. ಮಂದಿ ಮತ್ತು ನಗರ ಪ್ರದೇಶಗಳ 20 ಶೇ. ಮಂದಿ ತಾವು ಅಸ್ಪಶ್ಯತೆಯನ್ನು ಆಚರಿಸುತ್ತಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಆಚರಿಸುತ್ತಿದ್ದರೂ ಒಪ್ಪಿಕೊಳ್ಳದವರ ಸಂಖ್ಯೆ ಅಜ್ಞಾತವಾಗಿದೆ. ಅಸ್ಪಶ್ಯರೆಂದು ಪರಿಗಣಿಸಿ ಅಮಾನುಷ ಅಪಮಾನಕ್ಕೆ ಗುರಿಪಡಿಸಲಾದವರ ಸಂಖ್ಯೆಯಂತೂ ಖಂಡಿತ ಇದಕ್ಕಿಂತ ಕೆಲವು ಪಟ್ಟಾದರೂ ಹೆಚ್ಚಿರಬಹುದು. ಅಸ್ಪಶ್ಯತೆ ಎಂಬ ದೌರ್ಜನ್ಯ ಸಾಲದ್ದಕ್ಕೆ, ದಲಿತರಿಗೆ ಮಾನವೀಯ ಘನತೆಯನ್ನು ನಿರಾಕರಿಸುವ ಧೋರಣೆ ಬೇರೆ ಹಲವು ವಿಧಗಳಲ್ಲೂ ಪ್ರಕಟವಾಗುತ್ತಿರುತ್ತದೆ. ಮಲಗುಂಡಿಗಳ ಶುಚೀಕರಣಕ್ಕೆ ಮಾನವರನ್ನು ಇಳಿಸುವುದು ಕಾನೂನು ಪ್ರಕಾರ ನಿಷಿದ್ಧ. ಇದನ್ನು ನಿವಾರಿಸಲು ಎಲ್ಲ ಕಡೆ ಸೂಕ್ತ ಒಳಚರಂಡಿ ವ್ಯವಸ್ಥೆಯನ್ನು ಒದಗಿಸಬೇಕಾದದ್ದು ಸರಕಾರದ ಕರ್ತವ್ಯ. ಆದರೂ ಬಾಹ್ಯಾಕಾಶದ ಸಂಶೋಧನೆಗಾಗಿ ಈ ವರ್ಷದ ಬಜೆಟ್ ನಲ್ಲಿ ಹನ್ನೊಂದು ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಮೀಸಲಿಟ್ಟಿರುವ ಸರಕಾರ, ನಮ್ಮ ಭೂಮಿಯ ಈ ಕಳಂಕದ ಬಗ್ಗೆ ತೋರಿರುವ ನಿರಾಸಕ್ತಿಯಿಂದಾಗಿ ಈ ನೀಚ ಆಚರಣೆ ದೇಶದಲ್ಲಿ ಇಂದಿಗೂ ಹಲವೆಡೆ ಅಬಾಧಿತವಾಗಿ ಜಾರಿಯಲ್ಲಿದೆ. ‘ಸಫಾಯಿ ಕರ್ಮಚಾರಿ ಆಂದೋಲನ್’ ಸಂಸ್ಥೆಯವರ ಪ್ರಕಾರ ಸುಮಾರು 8 ಲಕ್ಷ ಮನುಷ್ಯರನ್ನು ಈ ಚಟುವಟಿಕೆಯಲ್ಲಿ ಬಳಸಲಾಗುತ್ತಿದೆ. ಕಳೆದ ವರ್ಷ ಸಾಕ್ಷಾತ್ ಸರಕಾರವೇ ಸಂಸತ್ತಿನಲ್ಲಿ ಒಪ್ಪಿಕೊಂಡಿರುವಂತೆ, 2018 ಮತ್ತು 2023 ರ ನಡುವೆ ಮಲಗುಂಡಿಗಳನ್ನು ಶುಚೀಕರಿಸುವ ಪ್ರಕ್ರಿಯೆಯಲ್ಲಿ 400 ಕ್ಕೂ ಹೆಚ್ಚಿನ ಮಾನವರು ಉಸಿರುಗಟ್ಟಿ ಸತ್ತಿದ್ದಾರೆ. ದುರಂತವೇನೆಂದರೆ ಇಷ್ಟೊಂದು ದೈತ್ಯ ಕಳಂಕ ನಮ್ಮ ಸಮಾಜದಲ್ಲಿ ತಾಂಡವವಾಡುತ್ತಿದ್ದರೂ ಇದರ ಪ್ರಸ್ತಾಪ ನಮ್ಮ ಟಿವಿ ಚಾನೆಲ್ಲುಗಳ ಪ್ರೈಮ್ ಟೈಮಿನಲ್ಲಾಗಲಿ, ಪತ್ರಿಕೆಗಳ ಮುಖಪುಟ ಬಿಡಿ, ಯಾವುದಾದರೂ ಮೂಲೆಯಲ್ಲಾಗಲಿ ಕಾಣಿಸುವುದಿಲ್ಲ. ಈ ಕುರಿತು ಚರ್ಚೆ, ಸಂವಾದ, ಸೆಮಿನಾರ್, ಧರಣಿ, ಸತ್ಯಾಗ್ರಹ ಇತ್ಯಾದಿ ಯಾವುದೂ ನಡೆಯುತ್ತಿಲ್ಲ. ಪಾರ್ಲಿಮೆಂಟು ಮತ್ತು ಅಸೆಂಬ್ಲಿ ಗಳಲ್ಲೂ ಈ ಕುರಿತು ಚರ್ಚೆ ತೀರಾ ಅಪರೂಪ.

ಇಂತಹ ಅಮಾನುಷ ಆಚರಣೆಗಳನ್ನು ಸಮಾಜದ ಮೇಲೆ ಹೇರಿ ಅವುಗಳನ್ನು ಪೋಷಿಸುತ್ತಾ ಬಂದಿರುವ ಪುರೋಹಿತಶಾಹಿಗಳು ಮತ್ತು ಪ್ರಾಚೀನ ಕಾಲದಿಂದಲೂ ಬಡವರ ಗೋರಿಗಳ ಮೇಲೆ ತಮ್ಮ ಅರಮನೆಗಳನ್ನು ಕಟ್ಟುತ್ತಾ ಬಂದಿರುವ ಕುಬೇರಶಾಹಿಗಳು ಮಾನವ ಸಮಾಜದ ಮತ್ತು ವಿಶೇಷವಾಗಿ ಭಾರತೀಯ ಸಮಾಜದ ಹಳೆಯ ಶತ್ರುಗಳು. ಇವರ ನಡುವಣ ಸಖ್ಯವೂ ಅಷ್ಟೇ. ಅದು ಎಷ್ಟು ಹಳೆಯದೋ ಅಷ್ಟೇ ಅಭೇದ್ಯ ಕೂಡಾ. ಹಗ್ಗ, ಸರಪಣಿ, ಸೆರೆಮನೆ, ಕತ್ತಿ, ಬಂದೂಕು ಇತ್ಯಾದಿ ಯಾವುದನ್ನೂ ಬಳಸದೆಯೇ ಜನರ ಮೆದುಳುಗಳನ್ನು ವಶೀಕರಿಸಿ, ಅವರ ಮನದಲ್ಲಿ ನ್ಯಾಯ ಹಾಗೂ ಸಮಾನತೆಯ ಆಶೆ ಕೂಡಾ ಚಿಗುರದಷ್ಟು ಮತ್ತು ಬಂಡಾಯದ ಆಲೋಚನೆ ಅವರ ಕನಸಲ್ಲೂ ಮೂಡದಷ್ಟು ಅವರನ್ನು ನಿಶ್ಚೇತನರಾಗಿಸಿ ತಮ್ಮ ಕಾಲಡಿಯಲ್ಲಿ ಇಟ್ಟುಕೊಳ್ಳುವುದು ಅವರ ಹಳೆಯ ಪರಿಪಾಠ. ಅವರ ಜಂಟಿ ಸಾಧನೆ ಕೇವಲ ಅಸ್ಪಶ್ಯತೆಯನ್ನು ಹೇರಿ ಭದ್ರಪಡಿಸುವಲ್ಲಿಗೆ ಸೀಮಿತವಾಗಿಲ್ಲ. ಅನ್ಯಾಯ, ಅಸಮಾನತೆಗಳ ಪ್ರತ್ಯಕ್ಷ, ಅದೃಶ್ಯ, ನೇರ, ಪರೋಕ್ಷ, ಸರಳ, ಸಂಕೀರ್ಣ ಇತ್ಯಾದಿ ಹತ್ತು ಹಲವು ಪ್ರಕಾರಗಳನ್ನು ಅವರು ಸಮಾಜದ ಮೇಲೆ ಹೇರಿದ್ದಾರೆ. ಹೇರುತ್ತಲೇ ಇದ್ದಾರೆ. ಯಾವೆಲ್ಲ ವಲಯಗಳಿಂದ ಬಂಡಾಯದ ಸಾಧ್ಯತೆ ಇದೆಯೋ ಆ ಎಲ್ಲ ವಲಯಗಳನ್ನು ಪರಸ್ಪರರ ವಿರುದ್ಧವೇ ಘರ್ಷಣೆಯಲ್ಲಿ ತಲ್ಲೀನರಾಗಿಸಿದ್ದಾರೆ. ಆದರೆ ಇಂತಹ ಸಂಚುಗಳ ಕುರಿತು ಗಮನಹರಿಸುವುದಕ್ಕೆ ಸಮಾಜಕ್ಕಿನ್ನೂ ಪುರುಸೊತ್ತಾಗಿಲ್ಲ. ಸಮಾಜದ ಗಮನವೆಲ್ಲ ಕೆಲವು ತೀರಾ ಸಾಮಾನ್ಯ, ಕ್ಷುಲ್ಲಕ, ಅಸಂಗತ ಅಥವಾ ಸಂಪೂರ್ಣ ಕೃತಕ ಸಂಗತಿಗಳಲ್ಲಿ ಕೇಂದ್ರೀಕೃತವಾಗಿದೆ. ಆದ್ದರಿಂದಲೇ ನಮ್ಮನ್ನು ಕಟ್ಟಿಟ್ಟಿರುವ ಅಸ್ಪೃಶ್ಯತೆ, ಅಸಮಾನತೆ ಮತ್ತು ಸಾಂಸ್ಥಿಕ ಅನ್ಯಾಯದಂತಹ ಭಾರೀ ಗಾತ್ರದ ದೊಡ್ಡ, ಪ್ರಾಚೀನ ಸಮಸ್ಯೆಗಳು ಮತ್ತು ಅವುಗಳ ಪೋಷಕರ ಕಡೆಗೆ ಕ್ಷಣಮಾತ್ರಕ್ಕೂ ನಮ್ಮ ಗಮನ ಹರಿಯುವುದೇ ಇಲ್ಲ.

ನಮ್ಮನ್ನಾಳುವ ವ್ಯವಸ್ಥೆಯಲ್ಲಿ ನಾವೇ ಪ್ರಭುಗಳು ಎಂಬ ಪರಮ ಪೆದ್ದು ನಂಬಿಕೆಯನ್ನು ಬಹುಕಾಲದಿಂದ ನಮ್ಮೊಳಗೆ ಸಾಕುತ್ತಾ ಬಂದಿರುವ ನಾವು ಕಣ್ಣುತೆರೆದು ನಮ್ಮದೇ ಅಕ್ಕಪಕ್ಕದ ಸತ್ಯಗಳನ್ನೊಮ್ಮೆ ನೋಡಿದರೆ ಈ ನಮ್ಮ ನಂಬಿಕೆಯ ಭ್ರಾಮಕ ಸ್ವರೂಪ ಬಯಲಾದೀತು. ನಿಜಕ್ಕೂ ನಾವು ಪ್ರಭುಗಳೇ? ಇಲ್ಲಿ ಮೆರೆಯುತ್ತಿರುವ ಪ್ರಭುತ್ವ ಯಾರದ್ದು? ಇಲ್ಲಿ ಚಂದದ ಮುಖವಾಡಗಳ ಹಿಂದೆ ಮುಖ ಮರೆಸಿಕೊಂಡಿರುವ ನಮ್ಮ ಪಾಲಿನ ಕಟುಕರು ಮತ್ತು ಬೇಟೆಗಾರರು ಯಾರು? ದಾಸ್ಯದ ಈ ಸ್ಥಿತಿಯಿಂದ ನಮ್ಮನ್ನು ವಿಮೋಚಿಸುವ ಪ್ರಕ್ರಿಯೆಯಲ್ಲಿ ನಮ್ಮ ಮಿತ್ರರು, ಸಹವರ್ತಿಗಳು ಮತ್ತು ಸಂಭಾವ್ಯ ಸಹಭಾಗಿಗಳು ಯಾರು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕೀತು. ಆದರೆ ಅದಕ್ಕಾಗಿ ತುಸು ಪುರುಸೊತ್ತು ಮಾಡಿಕೊಂಡು ನೇರವಾಗಿ ನಾವೇ ನಮ್ಮ ಸ್ಥಿತಿಯನ್ನು ಅಳೆಯಲು ಧರೆಗಿಳಿಯಬೇಕಾಗುತ್ತದೆ. ಹಾಗೆ ಧರೆಗಿಳಿದು ನೋಡಿದಾಗ ನಮಗೆ ಕಾಣ ಸಿಗುವ ನಮ್ಮದೇ ಪಾಡು ದಾರುಣವಾಗಿದೆ. ಉದಾಹರಣೆಗೆ:

ನಮ್ಮ ಪ್ರಭುತ್ವ ಯಾವ ಮಟ್ಟದ್ದೆಂಬುದನ್ನು ಅಳೆಯುವುದಕ್ಕೆ ನಾವು ನಮ್ಮ ಅತ್ಯಂತ ಮೂಲಭೂತ ಅಗತ್ಯಗಳಾದ ವಾಯು, ನೀರುಗಳನ್ನೇ ಮಾಪಕವಾಗಿ ಬಳಸಬಹುದು. ನಗರ-ಗ್ರಾಮ ಎಂಬ ಭೇದವಿಲ್ಲದೆ ನಮ್ಮ ಸಂಪೂರ್ಣ ದೇಶ ವಾಯುಮಾಲಿನ್ಯಕ್ಕೆ ತುತ್ತಾಗಿದೆ. 140 ಕೋಟಿ ಪ್ರಭುಗಳು ಮಲಿನ ವಾಯುವನ್ನು ಉಸಿರಾಡುತ್ತಿದ್ದಾರೆ. ಒಲಿಂಪಿಕ್ಸ್

ನಲ್ಲಿ ತಲೆತಗ್ಗಿಸಿ 71ನೇ ಸ್ಥಾನದಲ್ಲಿ ನಿಂತಿದ್ದ ನಾವು ಜಗತ್ತಿನ ಅತ್ಯಧಿಕ ವಾಯು ಮಾಲಿನ್ಯ ಪೀಡಿತ ದೇಶಗಳ ಸಾಲಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ‘ಅತ್ಯಧಿಕ ಪ್ರದೂಷಿತ’ ಎಂದು ಘೋಷಿತವಾಗಿರುವ ಜಗತ್ತಿನ 30 ನಗರಗಳ ಪೈಕಿ 21 ನಗರಗಳು ನಮ್ಮ ದೇಶದಲ್ಲಿವೆ. ವಾಯು ಮಾಲಿನ್ಯದಿಂದಾಗಿ ಸರಾಸರಿ ನಾಗರಿಕನ ಸಹಜ ಆಯುಷ್ಯದಲ್ಲಿ 5 ವರ್ಷಕ್ಕಿಂತಲೂ ಹೆಚ್ಚಿನ ಕಡಿತವಾಗುತ್ತಿದೆ. ಕೆಲವು ಪ್ರದೇಶಗಳಲ್ಲಂತೂ ವಾಯು ಮಾಲಿನ್ಯದ ತೀವ್ರತೆಯಿಂದಾಗಿ ಜನರ ಆಯುಷ್ಯದಲ್ಲಿ ಸುಮಾರು 12 ವರ್ಷಗಳಷ್ಟು ಕಡಿತವಾಗುತ್ತಿದೆ. ನೀರಿನ ಸ್ಥಿತಿ ನೋಡಿದರೆ ಸುಮಾರು 40 ಶೇ.ದಷ್ಟು ಜನರಿಗೆ ಕುಡಿಯುವುದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಶುದ್ಧ, ಸುರಕ್ಷಿತ ನೀರು ಲಭ್ಯವಿಲ್ಲ. ಜಲಮಾಲಿನ್ಯದಿಂದಾಗಿ ಇಲ್ಲಿ ಕೋಟ್ಯಂತರ ಜನ, ವಿಶೇಷವಾಗಿ ಮಕ್ಕಳು ವಿವಿಧ ಬಗೆಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸರಕಾರ ಕಟ್ಟಿಸಿದ ರಸ್ತೆ, ಸೇತುವೆ ಇತ್ಯಾದಿಗಳಂತೆ ಪ್ರಜೆಗಳು ಕೂಡಾ ಅಲ್ಪಾಯುಷ್ಯ ಮತ್ತು ಅಕಾಲ ಮರಣಕ್ಕೆ ಸಿದ್ಧರಾಗಿರಬೇಕಾಗಿದೆ.

ಜಗತ್ತಿನಲ್ಲಿರುವ, ಹೊಟ್ಟೆ ತುಂಬಾ ಉಣ್ಣಲಿಕ್ಕಿಲ್ಲದೆ ಹಸಿವಿಂದ ನರಳುವ ಜನಸಂಖ್ಯೆಯಲ್ಲಿ 25 ಶೇ. ಮಂದಿ ಭಾರತೀಯರು. ಸೂಕ್ತ ಆಹಾರ ಹಾಗೂ ಪೌಷ್ಟಿಕಾಂಶಗಳ ಕೊರತೆಯಿಂದಾಗಿ ಇಲ್ಲಿನ 44 ಶೇ. ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಎಳೆಯ ಶಿಶುಗಳ ಪೈಕಿ 72 ಶೇ. ಶಿಶುಗಳು ಮತ್ತು 52 ಶೇ. ಮಹಿಳೆಯರು ರಕ್ತಹೀನತೆಯಿಂದ ನರಳುತ್ತಿದ್ದಾರೆ. ಜಗತ್ತಿನಲ್ಲಿ ಪೋಷಕಾಂಶಗಳ ಕೊರತೆಯಿಂದ ನರಳುತ್ತಿರುವ ಎಳೆಯ ಮಕ್ಕಳ ಪೈಕಿ 30 ಶೇ.ಕ್ಕಿಂತ ಅಧಿಕ ಮಕ್ಕಳು ಭಾರತೀಯರು. ನಮ್ಮಲ್ಲಿ ಈಗಲೂ ಬದುಕಲಿಕ್ಕಾಗಿ ಅಕ್ಷರಶಃ ಭಿಕ್ಷೆ ಬೇಡುವುದಕ್ಕೆ ನಿರ್ಬಂಧಿತರಾಗಿರುವ ಲಕ್ಷಾಂತರ ಮಂದಿ ಇದ್ದಾರೆ. ಕೋಟಿಗಟ್ಟಲೆ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಸುಮಾರು ಎರಡು ಕೋಟಿಯಷ್ಟು ಮಕ್ಕಳು ನೆಲೆಯಿಲ್ಲದೆ ಬೀದಿಗಳಲ್ಲಿದ್ದಾರೆ. ಶಾಲೆಗಳಲ್ಲಿರಬೇಕಾಗಿದ್ದ ಲಕ್ಷಾಂತರ ಮಕ್ಕಳು ಒಂದೋ ಬಾಲಕಾರ್ಮಿಕರಾಗಿದ್ದಾರೆ ಅಥವಾ ಅಂಬಾನಿಯವರ ಸಾಕುಪ್ರಾಣಿಗಳ ಐಷಾರಾಮಿ ಬದುಕಿನ ಕಥೆಗಳನ್ನು ಕೇಳುತ್ತಾ, ನಾವೇಕೆ ಮನುಷ್ಯರಾಗಿ ಹುಟ್ಟಿದೆವೆಂದು ಪರಿತಪಿಸುತ್ತಾ, ಬೀದಿಗಳಲ್ಲಿಕಂಡ ಕಂಡವರ ಮುಂದೆ ಕೈಚಾಚುತ್ತಾ ಹಲವು ಬಗೆಯ ಶೋಷಣೆ, ದೌರ್ಜನ್ಯಗಳಿಗೆ ತುತ್ತಾಗುತ್ತಿದ್ದಾರೆ. ಒಂದೂವರೆ ಕೋಟಿಗೂ ಅಧಿಕ ಮಹಿಳೆಯರು ಮೈಮಾರುವ ದಂಧೆಗೆ ತಳ್ಳಲ್ಪಟ್ಟಿದ್ದಾರೆ. ಮಹಿಳೆಯರೂ ಸೇರಿದಂತೆ ಜನಸಂಖ್ಯೆಯ ಒಂದು ಗಣ್ಯಭಾಗ ಶೌಚಾಲಯದ ಸವಲತ್ತಿಲ್ಲದೆ ಬಯಲು ಶೌಚಕ್ಕೆ ಶರಣಾಗಬೇಕಾಗಿ ಬಂದಿದೆ. ಜಗತ್ತಿನಲ್ಲೇ ಅತ್ಯಧಿಕ ಆತ್ಮಹತ್ಯೆಗಳು ನಡೆಯುವ ದೇಶ ಎಂಬ ಕೀರ್ತಿ ಭಾರತಕ್ಕೆ ಮೊದಲೇ ಇದೆ. ವಿಶೇಷವಾಗಿ ದೇಶದ ಅನ್ನದಾತರೆಂದು ವೈಭವೀಕರಿಸಲಾಗುವ ರೈತ ಸಮುದಾಯದಲ್ಲಿ ಆತ್ಮಹತ್ಯೆಯ ಪ್ರಮಾಣ ಕಳವಳಕಾರಿ ಮಟ್ಟದಲ್ಲಿ ಅಧಿಕವಾಗಿದೆ. ಎನ್‌ಸಿಆರ್‌ಬಿ ವರದಿಯ ಪ್ರಕಾರ 2014ರಿಂದ 2022ರ ನಡುವೆ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದರು.

ನಾವು ಪ್ರಭುಗಳೆಂಬ ನಮ್ಮ ನಂಬಿಕೆಯನ್ನು ಕ್ರೂರವಾಗಿ ಅಣಕಿಸುವ ಈ ದುರಂತಗಳೆಲ್ಲಾ ವ್ಯಾಪಕ ಪ್ರಮಾಣದಲ್ಲಿ ನಿತ್ಯ ಚರ್ಚೆಯ ವಿಷಯಗಳಾಗಿರಬೇಕಿತ್ತು. ಆದರೆ ನಾವು ಈ ಸನ್ನಿವೇಶವನ್ನಾಗಲಿ ಅದರ ಹಿಂದಿನ ಕಾರಣಗಳನ್ನಾಗಲಿ ಚರ್ಚಿಸುತ್ತಿಲ್ಲ. ಒಂದುವೇಳೆ ನಮ್ಮ ಪ್ರಸ್ತುತ ದಾರುಣ ಸ್ಥಿತಿಗೆ ಸಂಪತ್ತು, ಸಂಪನ್ಮೂಲಗಳ ಕೊರತೆ ಅಥವಾ ನೆರೆ, ಬರ, ಸಾಂಕ್ರಾಮಿಕ ರೋಗ ಇತ್ಯಾದಿಗಳು ಕಾರಣವಾಗಿದ್ದರೆ ಸಹಿಸಿಕೊಳ್ಳಬಹುದಿತ್ತು. ಆದರೆ ಭಾರತದಲ್ಲಿ ಸಂಪತ್ತಿಗೆ ಯಾವ ಕೊರತೆಯೂ ಇಲ್ಲ.

ಜಾಗತಿಕ ಜಿಡಿಪಿ ರ್ಯಾಂಕಿಂಗ್ ನಲ್ಲಿ ನಾವು ನಮ್ಮ ದೇಶವನ್ನು ಐದನೇ ಸ್ಥಾನಕ್ಕೆ ತಲುಪಿಸಿದ್ದೇವೆಂದು ಮತ್ತು ಕೆಲವೇ ವರ್ಷಗಳಲ್ಲಿ ನಮ್ಮ ಆರ್ಥಿಕ ಶಕ್ತಿ ಏಳು ಟ್ರಿಲಿಯನ್ ಡಾಲರ್‌ಗಳ ಮಟ್ಟಕ್ಕೆ ತಲುಪಲಿದೆ ಎಂದು ಅಧಿಕೃತವಾಗಿಯೇ ಘೋಷಿಸಲಾಗಿದೆ. ಭಾರತದ ಆರ್ಥಿಕತೆಯನ್ನು ಜಗತ್ತಿನಲ್ಲೇ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಸಾಲಲ್ಲಿ ಗಣಿಸಲಾಗುತ್ತದೆ. ಕಳೆದ ಒಂದು ದಶಕದಲ್ಲಿ ನಮ್ಮ ಜಿಡಿಪಿಯಲ್ಲಿ 50 ಶೇ. ಹೆಚ್ಚಳವಾಗಿದೆ. ಇಷ್ಟೆಲ್ಲಾ ಸಂಪತ್ತಿರುವ ದೇಶದಲ್ಲಿ ಸರಕಾರ ಸರಿಯಾದ ಧೋರಣೆಗಳನ್ನು ರೂಪಿಸಿಕೊಂಡರೆ ಮತ್ತು ತನ್ನ ಪ್ರಾಶಸ್ತ್ಯಗಳನ್ನು ಸರಿಪಡಿಸಿಕೊಂಡರೆ ಮೇಲೆ ಪ್ರಸ್ತಾಪಿಸಲಾದ ಎಲ್ಲ ಸಮಸ್ಯೆಗಳನ್ನೂ ಕೆಲವೇ ವರ್ಷಗಳಲ್ಲಿ ಬಗೆಹರಿಸಲು ಸಾಧ್ಯವಿದೆ. ಆದರೆ ಅದು ಸಾಧ್ಯವಾಗಬೇಕಿದ್ದರೆ, ನಮ್ಮ ದೇಶದ ಸಂಪತ್ತನ್ನು ನಿಯಂತ್ರಿಸುತ್ತಿರುವವರು ಯಾರು? ಅವರು ನಂಬಿರುವ ತತ್ವ ಸಿದ್ಧಾಂತಗಳು, ಮಾರ್ಗದರ್ಶಿಸೂತ್ರಗಳೇನು? ಆಳುವವರ ಧೋರಣೆಗಳು, ಪ್ರಾಶಸ್ತ್ಯಗಳು ಮತ್ತು ಕ್ರಮಗಳ ಫಲಾನುಭವಿಗಳು ಯಾರು? ಎಂಬ ಬಗ್ಗೆ ದೊಡ್ಡ ಪ್ರಮಾಣದ ಸಾರ್ವಜನಿಕ ಚರ್ಚೆ, ಸಂವಾದಗಳು ನಡೆದು, ಆ ಮೂಲಕ ವ್ಯಾಪಕ ಜನಜಾಗೃತಿ ಮೂಡಿ, ಆ ಜಾಗೃತಿಯು ಬೃಹತ್ ಮಟ್ಟದ ಜನಾಂದೋಲನದ ರೂಪ ಪಡೆದು ಯಾರ್ಯಾರದೋ ಪರವಾಗಿರುವ ವ್ಯವಸ್ಥೆಯನ್ನು ಜನಪರವಾಗಿ ಪರಿವರ್ತಿಸಬೇಕಾದುದು ಅನಿವಾರ್ಯವಾಗಿದೆ.

ವ್ಯವಸ್ಥೆ ಮನಸ್ಸು ಮಾಡಿದರೆ ಯಾರನ್ನಾದರೂ ಸಂಪನ್ನರಾಗಿಸಲು ಅದಕ್ಕೆ ಖಂಡಿತ ಸಾಧ್ಯವಿದೆ. ಅದಕ್ಕಾಗಿ ವ್ಯವಸ್ಥೆಯ ಮುಂದೆ ಸಾವಿರ ದಾರಿಗಳಿವೆ. ಆದರೆ ಇಂದು ನಮ್ಮ ವ್ಯವಸ್ಥೆ ತನ್ನ ಅಧಿಕಾರ ಮತ್ತು ಸಾಮರ್ಥ್ಯಗಳನ್ನು ಯಾವ ರೀತಿ ಬಳಸುತ್ತಿದೆ ಎಂಬುದನ್ನು ನೋಡಿದರೆ ದಿಗಿಲಾಗುತ್ತದೆ. ಜಗತ್ತಿನ ಅತಿದೊಡ್ಡ ಕುಬೇರರ ಪಟ್ಟಿಯಲ್ಲಿ ಭಾರತೀಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಪ್ರಕಟವಾದ ಜಗತ್ತಿನ ಮಹಾ ಕುಬೇರರ ಪಟ್ಟಿಯಲ್ಲಿ 271 ಭಾರತೀಯರಿದ್ದಾರೆ. ಒಂದೇ ವರ್ಷದಲ್ಲಿ 94 ಮಂದಿ ಭಾರತೀಯರು ಹೊಸದಾಗಿ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಬೇರಾವುದೇ ದೇಶದಲ್ಲಿ ಕುಬೇರರ ಸಂಖ್ಯೆ ಇಷ್ಟು ಕ್ಷಿಪ್ರವಾಗಿ ಹೆಚ್ಚಿಲ್ಲ. ಭಾರತದ ಒಟ್ಟು ವಾರ್ಷಿಕ ಆದಾಯದ 22.6 ಶೇ. ಭಾಗವು ಕೇವಲ 1 ಶೇ. ರಷ್ಟಿರುವ ಅತಿಶ್ರೀಮಂತರ ಬೊಕ್ಕಸಕ್ಕೆ ಹೋಗುತ್ತದೆ ಮತ್ತು ದೇಶದ ಸಂಪತ್ತಿನ 40 ಶೇ. ಪಾಲು ಅವರ ಬೊಕ್ಕಸದಲ್ಲಿದೆ. ಇದಕ್ಕೆ ಹೋಲಿಸಿದರೆ, ದೇಶದ ಸಂಪತ್ತಿನಲ್ಲಿ, ಆರ್ಥಿಕವಾಗಿ ಕೆಳಸ್ತರದಲ್ಲಿರುವ 50 ಶೇ. ಜನರಿಗೆ ಅಂದರೆ ಸುಮಾರು 70 ಕೋಟಿ ಜನರಿಗೆ ಸಿಗುವ ಒಟ್ಟು ಪಾಲು 10 ಶೇ. ಮಾತ್ರ. ಆ ಮಹಾ ಕುಬೇರರು ಮತ್ತು ಆ 1 ಶೇ. ಸಂಪನ್ನರು ದೇಶದ ಸಂಪತ್ತಿನ ಮೇಲೆ ಆ ಮಟ್ಟದ ಏಕಸ್ವಾಮ್ಯ ಗಳಿಸಿದ್ದು ತಮ್ಮ ಪ್ರತಿಭೆಯಿಂದಲ್ಲ. 140 ಕೋಟಿ ಜನರ ತಲೆಯ ಮೇಲೆ ನಿಂತಿರುವ ವ್ಯವಸ್ಥೆಯು ಈ ಕುಬೇರರನ್ನು ತನ್ನ ಹೆಗಲ ಮೇಲೆ ಹೊತ್ತು ಅವರನ್ನು ಈ ಸ್ಥಾನಕ್ಕೆ ತಲುಪಿಸಿದೆ. ಕಳೆದ ಒಂದು ದಶಕದಲ್ಲಿ ಸಾಲ ಪಡೆದು ಬ್ಯಾಂಕುಗಳನ್ನು ವಂಚಿಸುವವರು 5 ಲಕ್ಷ ಕೋಟಿಯಷ್ಟು ಮೊತ್ತವನ್ನು ದೋಚಿದ್ದಾರೆ. ಈ ಪೈಕಿ ಸಿಂಹ ಪಾಲನ್ನು ಕಬಳಿಸಿ ಬೇರೆ ದೇಶಗಳಲ್ಲಿ ಆಶ್ರಯ ಪಡೆದವರು ಬೆರಳೆಣಿಕೆಯ ಕೆಲವು ಕುಬೇರರು. ಕೋಟ್ಯಂತರ ಬಡವರ ಬಡತನ ನಿವಾರಿಸಲು ಪರ್ಯಾಪ್ತವಾದ ಮೊತ್ತ ಅದು. ಜಲಮಾಲಿನ್ಯ, ವಾಯು ಮಾಲಿನ್ಯಗಳನ್ನು ನಿವಾರಿಸುವುದಕ್ಕೆ, ಭಿಕ್ಷಾಟನೆ, ವೇಶ್ಯಾವಾಟಿಕೆ, ಬಾಲ ಕಾರ್ಮಿಕರು, ರೈತರ ಆತ್ಮಹತ್ಯೆ ಇತ್ಯಾದಿ ಹಲವು ಕಳಂಕಗಳಿಂದ ಮುಕ್ತವಾಗಲು ಸಹಾಯಕವಾಗಬಹುದಾಗಿದ್ದ ಮೊತ್ತ ಅದು. ಕೇವಲ ಕೆಲವು ಸಾವಿರ ರೂಪಾಯಿಗಳ ಸಾಲ ಪಡೆದವನು ಅದನ್ನು ಮರುಪಾವತಿ ಮಾಡಲು ತಡವಾದರೆ ಬ್ಯಾಂಕಿನವರು ಅವನ ಮನೆ, ಹೊಲಗಳನ್ನು ಜಪ್ತಿ ಮಾಡಲು ಬಂದು ಬಿಡುತ್ತಾರೆ. ಅಂತಹ ಬ್ಯಾಂಕುಗಳಿಂದ ಈ ರೀತಿ ಲಕ್ಷಾಂತರ ಕೋಟಿಗಳನ್ನು ದೋಚುವ ಕಾರ್ಯ, ವ್ಯವಸ್ಥೆಯ ಸೂತ್ರಧಾರಿಗಳ ಸಕ್ರಿಯ ಸಹಕಾರ ಮತ್ತು ಸಹಭಾಗಿತ್ವ ಇಲ್ಲದೆ ಖಂಡಿತ ಸಾಧ್ಯವಿಲ್ಲ.

ಪ್ರಸ್ತುತ ಜನವಿರೋಧಿ ವ್ಯವಸ್ಥೆಯನ್ನು ಸರಿದಾರಿಗೆ ತರುವ ಹೊಣೆ ನಮ್ಮ ಮೇಲಿರುವಾಗ ನಾವು ಈ ವರ್ಷ ನಮ್ಮ ಅದೆಷ್ಟೋ ಅಮೂಲ್ಯ ದಿನಗಳನ್ನು ನಮ್ಮನ್ನು ಅಣಕಿಸಲಿಕ್ಕೆಂದೇ ಏರ್ಪಡಿಸಲಾಗಿದ್ದ ಅನಂತ್ ಅಂಬಾನಿ ಎಂಬ ಮಹಾಕುಬೇರಪುತ್ರನ 5 ಸಾವಿರ ಕೋಟಿ ರೂಪಾಯಿಯ ದುಬಾರಿ ಮದುವೆ, ಆ ಮದುವೆಗೆ ಬಂದ ನಾಯಕರು, ಸಿಲೆಬ್ರಿಟಿಗಳು, ಅವರ ಐಷಾರಾಮಿ ಕಾರುಗಳು, ಅವರಿಗೆ ನೀಡಲಾದ ಉಡುಗೊರೆಗಳು, ಮುಕೇಶ್ ಅಂಬಾನಿಯ ನೆಟ್ ವರ್ತ್, ಅನಂತ್ ಅಂಬಾನಿಯ ಆರೋಗ್ಯ, ಆತನ ಅಭಿರುಚಿಗಳು, ಅವನ ತಾಯಿಯ ಹವ್ಯಾಸಗಳು, ಅವರ ಪರಿವಾರ ಸಾಕುತ್ತಿರುವ ಆನೆಗಳು, ಅವರ ಆನೆಗೆ ತಿನ್ನಿಸಲಾಗುವ ಖಿಚಡಿ - ಇವುಗಳನ್ನೇ ನೋಡುತ್ತಾ, ಓದುತ್ತಾ, ಚರ್ಚಿಸುತ್ತಾ ಕಳೆದೆವು. ಆ ಮದುಮಗನ ಸಾಕುನಾಯಿಯ ಪ್ರಯಾಣಕ್ಕೆಂದೇ ಖರೀದಿಸಲಾದ ಕೆಲವು ಕೋಟಿ ರೂಪಾಯಿಯ ದುಬಾರಿ ಮರ್ಸಿಡೀಸ್ ಕಾರು, ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಆ ನಾಯಿಗಾಗಿ ಸಿಲೆಬ್ರಿಟಿ ಡಿಸೈನರ್ ಗಳ ಮಾರ್ಗದರ್ಶನದಲ್ಲಿ ಹೊಲಿಸಲಾದ ಕುಲಾವಿಗಳು, ಅದಕ್ಕೆ ತಗಲಿದ ವೆಚ್ಚ - ಇವು ಕೂಡಾ ನಮ್ಮ ಗಮನ ಸೆಳೆದು ನಮ್ಮ ಸಾಕಷ್ಟು ಸಮಯವನ್ನು ಕಬಳಿಸಿದವು. ಉಳಿದ ದಿನಗಳಲ್ಲಿ ನಾವು ನಮ್ಮ ರಾಜಕೀಯ ನಾಯಕರ ಹಗರಣಗಳು, ಆರೋಪ ಪ್ರತ್ಯಾರೋಪಗಳು, ಪಕ್ಷಾಂತರಗಳು, ವಿವಿಧ ಕ್ರೀಡೋತ್ಸವಗಳು, ಮ್ಯಾಚುಗಳು, ಹೊಸದಾಗಿ ಬಿಡುಗಡೆಯಾದ ಮತ್ತು ಶೀಘ್ರವೇ ಬಿಡುಗಡೆಯಾಗಲಿರುವ ಸಿನೆಮಾಗಳು, ಅವುಗಳಲ್ಲಿ ನಟಿಸುವವರು, ಅವರ ಖಾಸಗಿ ಬದುಕಿನ ಕುರಿತಾದ ಗಾಸಿಪ್‌ಗಳು ಇತ್ಯಾದಿಗಳ ಕುರಿತು ಚಿಂತನ ಮಂಥನದಲ್ಲಿ ತಲ್ಲೀನರಾಗಿದ್ದೆವು.

ಈ ರೀತಿ ನಮ್ಮನ್ನು ನಮ್ಮದಲ್ಲದ ಲೋಕದಲ್ಲಿ ಬಂಧಿಸಿಡುವಲ್ಲಿ ನಮ್ಮ ಮಾಧ್ಯಮಗಳು ದೊಡ್ಡ ಪಾತ್ರವನ್ನು ವಹಿಸಿದವು. ಒಂದುವೇಳೆ ಈ ಸಮಯವನ್ನೆಲ್ಲಾ ನಾವು ಸ್ವತಃ ನಮ್ಮ ಸ್ಥಿತಿಗತಿಗಳ ಕುರಿತು, ನಮ್ಮ ಮೇಲಾಗುತ್ತಿರುವ ಅನ್ಯಾಯಗಳು, ನಮ್ಮ ಸಂಪತ್ತಿನ ವ್ಯವಸ್ಥಿತ ದರೋಡೆ, ನಾವು ಅನುಭವಿಸುತ್ತಿರುವ ಅಸಮಾನತೆ, ಪಕ್ಷಪಾತ, ಶೋಷಣೆ, ಭ್ರಷ್ಟಾಚಾರ, ಅಪರಾಧಗಳು, ನಿರುದ್ಯೋಗ, ನಮ್ಮ ರೈತರು ಮತ್ತು ಕಾರ್ಮಿಕ ವರ್ಗಗಳ ಸಂಕಟಗಳು, ಶ್ರೀಮಂತರನ್ನು ಮಹಾಶ್ರೀಮಂತರಾಗಿಸಿ ಬಡವರನ್ನು ಭಿಕಾರಿಗಳಾಗಿಸುವ, ಎಲ್ಲ ನಿರ್ಣಾಯಕ ರಂಗಗಳಲ್ಲಿ ಕಡಿಮೆ ಸಂಖ್ಯೆಯವರಿಗೆ ವಿಪರೀತ ಅಧಿಕ ಪ್ರಾತಿನಿಧ್ಯ ಮತ್ತು ಭಾರೀ ಬಹುಜನರಿಗೆ ಬಹುತೇಕ ಶೂನ್ಯ ಪ್ರಾತಿನಿಧ್ಯ ನೀಡುವ ಸರಕಾರದ ಧೋರಣೆಗಳು ಇತ್ಯಾದಿಗಳ ಕುರಿತು ಅರಿವು ಬೆಳೆಸಿಕೊಳ್ಳುವುದಕ್ಕೆ ಮತ್ತು ನಮ್ಮ ಸುತ್ತಮುತ್ತಲ ಮುಗ್ಧ ಜನರಲ್ಲಿ ಆಕುರಿತು ಅರಿವು ಮೂಡಿಸುವುದಕ್ಕೆ ಬಳಸಿಕೊಂಡಿದ್ದರೆ ನಮ್ಮ ಸ್ಥಿತಿಯಲ್ಲಿ ಬದಲಾವಣೆ ಖಂಡಿತ ಸಾಧ್ಯವಿತ್ತು. ಅಂಬಾನಿ ಎಂಬ ಒಬ್ಬ ಕುಬೇರನ ಬೊಕ್ಕಸದಲ್ಲಿರುವ ಸುಮಾರು ಎಂಟು ಲಕ್ಷ ಕೋಟಿ ರೂಪಾಯಿಗಳೆಲ್ಲಾ ನಿಜವಾಗಿ ನಮಗೆ ಸಿಗಬೇಕಾಗಿದ್ದ ನಮ್ಮದೇ ಸಂಪತ್ತು. ಈ ಅರಿವು ನಮ್ಮಲ್ಲಿ ಇದ್ದಿದ್ದರೆ ಹಾಗೂ ಈ ರೀತಿ 140 ಕೋಟಿ ಜನರ ಸಂಪತ್ತಿನ ಮೇಲೆ ಕೆಲವೇ ಮಂದಿ ಸ್ಥಾಪಿಸಿಕೊಂಡಿರುವ ಏಕಸ್ವಾಮ್ಯ ಮತ್ತು ಈ ಘೋರ ಅಪರಾಧದಲ್ಲಿ ಸರಕಾರದ ಸಹಭಾಗಿತ್ವದ ಬಗ್ಗೆ ನಮ್ಮಲ್ಲಿ ಆಕ್ರೋಶ ಇದ್ದಿದ್ದರೆ ಮತ್ತು ಯಾವುದಾದರೂ ವಿಧದಲ್ಲಿ ನಾವು ನಮ್ಮ ಆಕ್ರೋಶವನ್ನು ಪ್ರದರ್ಶಿಸಿದ್ದರೆ ಅನಂತ್ ಅಂಬಾನಿಯ ವಿವಾಹ ತುಂಬಾ ಗುಟ್ಟಾಗಿ ಸದ್ದಿಲ್ಲದೆ ನಡೆದು ಬಿಡುತ್ತಿತ್ತು. ಜನಸಾಮಾನ್ಯನ ದಾರಿದ್ರ್ಯವನ್ನು ಅಣಕಿಸುವ ಆ ವಿವಾಹವನ್ನು ಅಷ್ಟೆಲ್ಲಾ ವಿಪರೀತವಾಗಿ ವೈಭವೀಕರಿಸುವುದಕ್ಕೆ ಮಾಧ್ಯಮಗಳು ಕೂಡಾ ಧೈರ್ಯ ತೋರುತ್ತಿರಲಿಲ್ಲ.

ತಮ್ಮ ನಿಜವಾದ ಸಮಸ್ಯೆ ಏನೆಂಬುದರ ಅರಿವಿಲ್ಲದವರು ತಮ್ಮದಲ್ಲದ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುತ್ತಾರೆ. ತಮ್ಮ ಶತ್ರುಗಳ ಪರಿಚಯ ಇಲ್ಲದವರು ಮಿತ್ರರನ್ನೇ ಶತ್ರುಗಳೆಂದು ಪರಿಗಣಿಸಿ ಅವರ ವಿರುದ್ಧ ಸಮರ ನಿರತರಾಗುತ್ತಾರೆ. ವಂಚಕ ವ್ಯವಸ್ಥೆ ಮತ್ತು ಅದರ ಪಾಲಕರಿಗೆ ಬೇಕಾಗಿರುವುದು ಇದುವೇ. ಅವರ ಮಾಲಕತ್ವದ ಮಾಧ್ಯಮಗಳು ಜನರ ನೈಜ ಸಮಸ್ಯೆಗಳ ಬಗ್ಗೆ ತಾಳಿರುವ ಮೌನಕ್ಕೆ ಮರೆವು ಖಂಡಿತ ಕಾರಣವಲ್ಲ. ಜನತೆಯನ್ನು ಮರೆವಿನಲ್ಲಿಡಬೇಕೆಂಬ ಯೋಜನೆಯೇ ಅದಕ್ಕೆ ಕಾರಣ.

ಯಾವುದೇ ಸಮಸ್ಯೆಯನ್ನು ಬಗೆಹರಿಸುವುದಕ್ಕಿರುವ ಮೊದಲ ಹೆಜ್ಜೆ, ಆ ಸಮಸ್ಯೆಯ ಅಸ್ತಿತ್ವವನ್ನು ಗುರುತಿಸಬೇಕು. ಆ ಬಳಿಕ ಅದನ್ನು ಒಪ್ಪಿಕೊಂಡು ಅದನ್ನು ಪದೇಪದೇ ಪ್ರಸ್ತಾಪಿಸಲು ಮತ್ತು ಆ ಕುರಿತು ಅಲ್ಲಲ್ಲಿ ಆಗಾಗ ವಿವಿಧ ರೂಪಗಳಲ್ಲಿ ಚರ್ಚೆ ಸಂವಾದಗಳು ನಡೆಯಬೇಕು. ಅಂತಹ ಪ್ರಕ್ರಿಯೆ ಆರಂಭವಾದರೆ, ಮೀಸಲಾತಿಯೇ ನಮ್ಮ ಸಮಸ್ಯೆ, ತುಷ್ಟೀಕರಣವೇ ನಮ್ಮ ಸಮಸ್ಯೆ, ಮಂದಿರ-ಮಸೀದಿಯೇ ನಮ್ಮ ಸಮಸ್ಯೆ, ಪ್ರಗತಿಪರರೇ ನಮ್ಮ ಸಮಸ್ಯೆ, ಮಾನವಹಕ್ಕು ಹೋರಾಟಗಾರರೇ ನಮ್ಮ ಸಮಸ್ಯೆ ಎಂದೆಲ್ಲಾ ಸುಳ್ಳು ಹೇಳುವವರು ನಗ್ನರಾಗುತ್ತಾರೆ. ಅನ್ಯಾಯದ ಎಲ್ಲ ಸ್ವರೂಪಗಳ ವಿರುದ್ಧ ಜಾಗೃತಿ ಮೂಡಿದಾಗ ಮಾತ್ರ ಅವುಗಳ ವಿರುದ್ಧ ಪ್ರತಿರೋಧ ಚಿಗುರ ಬಹುದು. ನ್ಯಾಯ, ಸಮಾನತೆ ಮತ್ತು ಭದ್ರತೆಗಳನ್ನು ಜನತೆ ತಮ್ಮ ಪರಮ ಗುರಿಗಳಾಗಿ ಸ್ವೀಕರಿಸಬಹುದು. ಮಸೀದಿ-ಮಂದಿರಗಳ ವಿಷಯದಲ್ಲಿ ಪ್ರಕಟವಾದ ಭಾವುಕತೆ ನ್ಯಾಯದ ಪರವಾಗಿ ವ್ಯಕ್ತವಾಗಬಹುದು. ಸಮಾನ ಗುರಿಯ ಪ್ರಜ್ಞೆಯು ವಿವಿಧ ಜನವರ್ಗಗಳ ನಡುವೆ ಮೈತ್ರಿ ಮೂಡಿಸಬಹುದು. ತಮ್ಮ ಸಂಯುಕ್ತ ಗುರಿಯನ್ನು ಸಾಧಿಸಲು ಜನರು ಪರಸ್ಪರ ಕೈಜೋಡಿಸಿ ಸಂಘಟಿತರಾಗಬಹುದು. ಆಮೂಲಕ ನಮ್ಮ ಸಮಾಜದಲ್ಲಿ, ಪ್ರತಿಯೊಂದು ಸಾಮೂಹಿಕ ಸವಾಲಿನ ಸುತ್ತ ಬೃಹತ್ ಪ್ರಮಾಣದ ಸಾಮೂಹಿಕ ಆಂದೋಲನಗಳು ರೂಪುಗೊಳ್ಳಬಹುದು. ಆ ಆಂದೋಲನಗಳಿಂದಾಗಿ ಕ್ರಮೇಣವಾದರೂ ಬದಲಾವಣೆಯ ಬಾಗಿಲುಗಳು ತೆರೆದುಕೊಳ್ಳಬಹುದು. ನಿಜಾರ್ಥದಲ್ಲಿ ವಂಚಿತರ ಸಬಲೀಕರಣದ ಕನಸು ನನಸಾಗಬಹುದು. ದಾಸ್ಯವನ್ನೇ ಪ್ರಭುತ್ವವೆಂದು ನಂಬಿಕೊಂಡಿರುವವರು ನೈಜ ಪ್ರಭುತ್ವದ ರುಚಿ ಸವಿಯಬಹುದು.

ಈ ಪ್ರಕ್ರಿಯೆಯಲ್ಲಿ ಮಾಧ್ಯಮಗಳು ವಹಿಸಬಹುದಾದ ಪಾತ್ರ ತುಂಬಾ ನಿರ್ಣಾಯಕ. ನಮ್ಮ ಪ್ರಯಾಣದಲ್ಲಿ ಮುಂದಿನ ಮಜಲಿನೆಡೆಗೆ ಮುನ್ನಡೆಯುವ ವೇಳೆ ನಾವು ಸ್ವತಃ ನಮಗೆ ನೆನಪಿಸಿಕೊಳ್ಳುವ ಸತ್ಯಗಳು ಇವು. ಈ ಪ್ರಯಾಣದಲ್ಲಿ ನಮಗೆ ಬೆಂಬಲ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಾ ಬಂದ ನಮ್ಮ ಓದುಗ, ವೀಕ್ಷಕ ಮತ್ತು ಶ್ರೋತೃ ಬಳಗದ ಎಲ್ಲ ಸದಸ್ಯರಿಗೆ ನಮ್ಮ ಮನಃಪೂರ್ವಕ ಧನ್ಯವಾದಗಳು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಅಬ್ದುಸ್ಸಲಾಮ್ ಪುತ್ತಿಗೆ

contributor

Similar News