ಪ್ರೀತಿಯ ನೆಪದಲ್ಲಿ ಹೆಣ್ಣಿನ ಕೊಲೆ: ಪೊಲೀಸ್ ನಿರ್ಲಕ್ಷ್ಯದ ಪಾಲೆಷ್ಟು?

Update: 2024-05-16 04:35 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹೂ-ಬಳ್ಳಿಗಳ ಮೂಲಕ ತನ್ನ ಘಮವನ್ನು ನಾಡಿಗೆ ಹರಡುತ್ತಿದ್ದ ಹುಬ್ಬಳ್ಳಿ ಪ್ರೀತಿ ಪ್ರೇಮದ ಹೆಸರಿನಲ್ಲಿ ರಕ್ತ ಹರಿಸುವ ನರಭಕ್ಷಕ ಹೆಬ್ಬುಲಿಗಳ ಕಾರಣದಿಂದ ಸುದ್ದಿ ಮಾಡುತ್ತಿದೆ. ಪ್ರೇಮ ನಿರಾಕರಿಸಿದಳು ಎನ್ನುವ ಕಾರಣಕ್ಕೆ ನೇಹಾ ಎನ್ನುವ ವಿದ್ಯಾರ್ಥಿನಿಯ ಹತ್ಯೆಯ ಬೆನ್ನಿಗೇ ಹುಬ್ಬಳ್ಳಿಯಲ್ಲಿ ಇನ್ನೊಬ್ಬ ಅಮಾಯಕ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ಭೀಕರವಾಗಿ ಕೊಂದು ಹಾಕಲಾಗಿದೆ. ಆರೋಪಿಯನ್ನು ವಿಶ್ವ ಅಲಿಯಾಸ್ ಸಾವಂತ್ ಎಂದು ಗುರುತಿಸಲಾಗಿದೆ. ಈತ ವೀರಾಪುರ ಓಣಿಯ ದೇವಿಗುಡಿ ನಿವಾಸಿ ಅಂಜಲಿ ಎಂಬಾಕೆಯನ್ನು ಕಳೆದ ಹಲವು ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಸಂತ್ರಸ್ತ ಕುಟುಂಬ ಪೊಲೀಸರಿಗೆ ದೂರು ನೀಡಿತ್ತಾದರೂ, ಪೊಲೀಸರು ಆರೋಪಿಯ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕಿದ್ದರು. ಪೊಲೀಸರ ನಿರ್ಲಕ್ಷ್ಯ ಆರೋಪಿಗೆ ಪರೋಕ್ಷ ಕುಮ್ಮಕ್ಕು ನೀಡಿರಬೇಕು. ಅಂತಿಮವಾಗಿ ಬುಧವಾರ ಬೆಳಗ್ಗೆ ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಂದು ಹಾಕಿ ಪರಾರಿಯಾಗಿದ್ದಾನೆ. ಪೊಲೀಸರು ಇದೀಗ ಪರಾರಿಯಾಗಿರುವ ಆರೋಪಿಯನ್ನು ಹುಡುಕುತ್ತಿದ್ದಾರೆ.

ಈ ಹಿಂದಿನ ನೇಹಾ ಹತ್ಯೆ ಪ್ರಕರಣಕ್ಕೆ ರಾಜಕಾರಣಿಗಳು ಸ್ಪಂದಿಸಿದಂತೆ ಅಂಜಲಿಯ ಹತ್ಯೆ ಪ್ರಕರಣಕ್ಕೆ ಸ್ಪಂದಿಸುತ್ತಿಲ್ಲ. ನೇಹಾ ಮತ್ತು ಅಂಜಲಿ ಒಂದೇ ಧರ್ಮಕ್ಕೆ ಸೇರಿದರೂ, ಒಂದೇ ಕಾರಣಕ್ಕೆ ಹತ್ಯೆಯಾಗಿದ್ದರೂ ರಾಜಕೀಯ ನಾಯಕರ ಸ್ಪಂದನದಲ್ಲಿ ಅಜಗಜಾಂತರವಿದೆ. ಮುಖ್ಯವಾಗಿ ಮೃತ ನೇಹಾ ಕುಟುಂಬ ಸಾಮಾಜಿಕವಾಗಿ ಬಲಾಢ್ಯ ವರ್ಗಕ್ಕೆ ಸೇರಿತ್ತು. ಅಂಜಲಿ ಕುಟುಂಬ ತೀವ್ರ ಬಡತನದ ಹಿನ್ನೆಲೆಯನ್ನು ಹೊಂದಿದೆ. ಎರಡನೆಯದಾಗಿ, ನೇಹಾಳ ಕೊಲೆಗಾರನಂತೆ ಅಂಜಲಿಯ ಕೊಲೆಗಾರ ಮುಸ್ಲಿಮ್ ಧರ್ಮಕ್ಕೆ ಸೇರಿದವನಲ್ಲ. ಕೊಲೆಯಂತಹ ಕೃತ್ಯಗಳನ್ನು ಯಾರೇ ಮಾಡಿರಲಿ ಅದನ್ನು ಖಂಡಿಸಿ ಅದರ ವಿರುದ್ಧ ಸಮಾಜವನ್ನು ಸಂಘಟಿಸಬೇಕಾಗಿದ್ದ ರಾಜಕೀಯ ನಾಯಕರು, ಕೊಲೆಯಾದವರು ಮತ್ತು ಕೊಲೆ ಮಾಡಿದವರ ಧಾರ್ಮಿಕ ಹಿನ್ನೆಲೆಯ ಆಧಾರದಲ್ಲಿ ಹೇಳಿಕೆ ನೀಡುವ ಅಪಾಯಕಾರಿ ಮನಸ್ಥಿತಿಯೇ ಇಲ್ಲಿ ಕೊಲೆಗಾರರನ್ನು ಹುಟ್ಟಿಸಿ ಹಾಕುತ್ತಿದೆೆ. ನೇಹಾ ಪ್ರಕರಣದ ಬೆನ್ನಿಗೇ ತುಮಕೂರಿನಲ್ಲಿ ರುಕ್ಸಾನ ಎನ್ನುವ ತರುಣಿಯನ್ನು ಪ್ರದೀಪ್ ನಾಯಕ ಎಂಬಾತ ಬರ್ಬರವಾಗಿ ಸುಟ್ಟುಕೊಂದಿದ್ದ. ಇಲ್ಲಿ ರುಕ್ಸಾಳನ್ನು ಪ್ರೀತಿಸಿದ್ದ ಪ್ರದೀಪ್ ನಾಯಕ, ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಅದಾಗಲೇ ಒಂದು ಮಗುವನ್ನು ಹೊಂದಿದ್ದ ಆಕೆ ಆತನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದಳು. ಆದರೆ ಪ್ರದೀಪ್ ನಾಯಕ ಆಕೆಗೆ ವಂಚಿಸಿದ್ದಲ್ಲದೆ, ಆಕೆಯನ್ನು ಸುಟ್ಟು ಕೊಂದು ಹಾಕಿ, ಮಗುವನ್ನು ನೆಲಮಂಗಲದ ಬಳಿ ಎಸೆದು ಹೋಗಿದ್ದ. ನೇಹಾ ಹತ್ಯೆಯಲ್ಲಿ ಧರ್ಮವನ್ನು ಗುರುತಿಸಿದ್ದ ಸಂಘಪರಿವಾರ ನಾಯಕರಿಗೆ, ರುಕ್ಸಾನ ಕೊಲೆ ಆರೋಪಿಯ ಧರ್ಮ ಕಾಣಲೇ ಇಲ್ಲ. ಕ್ರೌರ್ಯವೇ ಕೊಲೆಗಾರರ ಧರ್ಮ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದರೆ ಎಲ್ಲ ಕೊಲೆಗಳನ್ನೂ ರಾಜಕೀಯ ನಾಯಕರು ಒಂದೇ ದೃಷ್ಟಿಯಿಂದ ನೋಡಿ ಅದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೋ ಏನೋ?. ಆದರೆ ಇವರಿಗೆ ಹೆಣ್ಣಿನ ಕಗ್ಗೊಲೆ ಯಾವತ್ತೂ ಮುಖ್ಯ ವಿಷಯವಾಗಿರಲೇ ಇಲ್ಲ. ಆ ಕೊಲೆಯ ಹೆಸರಿನಲ್ಲಿ ಸಮಾಜವನ್ನು ಇನ್ನಷ್ಟು ವಿಷಮಯವಾಗಿಸುವುದಷ್ಟೇ ಇವರ ಗುರಿ.

ನೇಹಾಳ ಹತ್ಯೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ಬಳಿಕವೂ ಭಾರೀ ಪ್ರತಿಭಟನೆ ನಡೆದವು. ಈ ಪ್ರತಿಭಟನೆಯ ಉದ್ದೇಶ, ಅಂತಹದೊಂದು ಕೃತ್ಯ ಮತ್ತೊಮ್ಮೆ ಹುಬ್ಬಳ್ಳಿಯಲ್ಲಿ ನಡೆಯದೇ ಇರಲಿ ಎನ್ನುವ ಉದ್ದೇಶದಿಂದಾಗಿದ್ದಿದ್ದರೆ ಇದೀಗ ಅಂಜಲಿಯ ಹತ್ಯೆಯಾಗುತ್ತಿರಲಿಲ್ಲವೇನೋ. ಆದರೆ ಬಿಜೆಪಿಗೆ ನೇಹಾ ಹತ್ಯೆ ಆರೋಪಿ ಪ್ರತಿನಿಧಿಸುತ್ತಿದ್ದ ಇಡೀ ಧರ್ಮವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಹಿಂದೂ-ಮುಸ್ಲಿಮ್ ದ್ವೇಷವನ್ನು ಬಿತ್ತಬೇಕಾಗಿತ್ತು. ಪರಿಣಾಮವಾಗಿಯೇ ಫಯಾಝ್‌ನ ಜಾಗದಲ್ಲಿ ಇನ್ನೊಬ್ಬ ಗಿರೀಶ್ ಹುಟ್ಟಿಕೊಂಡ. ಈ ಪ್ರಕರಣದಲ್ಲಿ ಅಂಜಲಿ ಯಾವತ್ತೂ ಹುಡುಗನನ್ನು ಪ್ರೀತಿಸುತ್ತಲೇ ಇದ್ದಿರಲಿಲ್ಲ. ಬದಲಿಗೆ ಹುಡುಗನೇ ತರುಣಿಯ ಹಿಂದೆ ಬಿದ್ದಿದ್ದ . ಈತ ಸಣ್ಣ ಪುಟ್ಟ ಅಪರಾಧ ಪ್ರಕರಣಗಳಲ್ಲಿ ಈಗಾಗಲೇ ಗುರುತಿಸಿಕೊಂಡವನಾಗಿದ್ದ. ಆದುದರಿಂದ ಸಂತ್ರಸ್ತೆಯ ಕುಟುಂಬಸ್ಥರು ಭಯಭೀತರಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನೂ ಒಯ್ದಿದ್ದರು. ಅದಾಗಲೇ ನೇಹಾ ಕೊಲೆ ಹುಬ್ಬಳ್ಳಿಯನ್ನು ಉದ್ವಿಗ್ನಗೊಳಿಸಿದ್ದುದರಿಂದ, ಅಂಜಲಿಯ ಪೋಷಕರು ದೂರು ನೀಡಿದಾಕ್ಷಣ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಪೊಲೀಸರ ಕರ್ತವ್ಯವಾಗಿತ್ತು. ಆದರೆ ಪೊಲೀಸರು ದೂರು ನೀಡಿದವರನ್ನೇ ಸಾಗ ಹಾಕಿದರು. ಆರೋಪಿಯನ್ನು ಕರೆದು ಆತನಿಗೆ ಸಣ್ಣದೊಂದು ಬೆದರಿಕೆ ಹಾಕಿ ಕಳುಹಿಸಿದ್ದಿದ್ದರೂ ಅಂಜಲಿ ಇಂದು ಸಾಯುವ ಸ್ಥಿತಿ ಬರುತ್ತಿರಲಿಲ್ಲವೇನೋ. ಇದೀಗ ಪೊಲೀಸರು ಗೊಂದಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ‘ಸಂತ್ರಸ್ತೆಯ ಕುಟುಂಬಸ್ಥರು ದೂರು ನೀಡಿರಲೇ ಇಲ್ಲ’ ಎಂದು ಅವರು ಹೇಳಿದರೆ, ಸಿಸಿ ಕ್ಯಾಮರಾದಲ್ಲಿ ಸಂತ್ರಸ್ತ ಕುಟುಂಬ ಪೊಲೀಸ್ ಠಾಣೆಗೆ ಬಂದಿರುವುದು ದಾಖಲಾಗಿದೆ. ‘‘ಅವರು ಬೇರೆ ಕಾರಣಕ್ಕಾಗಿ ಪೊಲೀಸ್ ಠಾಣೆಗೆ ಬಂದಿರುವುದು. ಈತನ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ’’ ಎಂದು ಇದೀಗ ಪೊಲೀಸರು ಹೇಳಿಕೆಯನ್ನು ತಿರುಚುತ್ತಿದ್ದಾರೆ. ಆರೋಪಿಯನ್ನು ಬಂಧಿಸಿ ಆತನಿಗೆ ಕಠಿಣ ಶಿಕ್ಷೆ ನೀಡುವುದರ ಜೊತೆ ಜೊತೆಗೇ ಪೊಲೀಸರ ಬೇಜವಾಬ್ದಾರಿಯೂ ತನಿಖೆಗೆ ಒಳಪಡಬೇಕಾಗಿದೆ. ದೂರನ್ನು ಗಂಭೀರವಾಗಿ ಸ್ವೀಕರಿಸದ ಪೊಲೀಸರನ್ನು ತಕ್ಷಣ ಅಮಾನತು ಮಾಡಿ, ಮುಂದೆ ಇಂತಹ ಬೇಜವಾಬ್ದಾರಿಯನ್ನು ಪೊಲೀಸರು ಪ್ರದರ್ಶಿಸದಂತೆ ನೋಡಿಕೊಳ್ಳಬೇಕಾಗಿದೆ.

ಕೆಲವೇ ದಿನಗಳ ಹಿಂದೆ ಕೊಡಗಿನಲ್ಲಿ, ಎಸೆಸೆಲ್ಸಿ ವಿದ್ಯಾರ್ಥಿಯನ್ನು ಯುವಕನೊಬ್ಬ ಬರ್ಬರವಾಗಿ ತಲೆ ಕತ್ತರಿಸಿ ಕೊಂದು ಹಾಕಿದ್ದ. ಆಕೆಯನ್ನು ಈತನಿಗೆ ಮದುವೆ ಮಾಡಿಕೊಡಲಿಲ್ಲ ಎನ್ನುವ ಆಕ್ರೋಶವೇ ಇದಕ್ಕೆ ಕಾರಣ. ಸಮಾಜದಲ್ಲಿ ಹೆಣ್ಣಿನ ಕುರಿತಂತೆ ಪುರುಷ ಮನಸ್ಥಿತಿ ಹೇಗೆ ತಳಮಟ್ಟವನ್ನು ತಲುಪುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಗಂಡನ್ನು ತಿರಸ್ಕರಿಸುವ ಅಧಿಕಾರ ಹೆಣ್ಣಿಗಿಲ್ಲ ಎನ್ನುವ ಪುರುಷ ಮನಸ್ಥಿತಿಯೇ ಆತನನ್ನು ಈ ಕೃತ್ಯಕ್ಕೆ ಇಳಿಸುತ್ತಿದೆ. ಹೆಣ್ಣು ಗಂಡು ಹಾಕಿದ ಗೆರೆಗಳನ್ನು ದಾಟಬಾರದು, ಆಕೆ ತನ್ನ ಹದ್ದನ್ನು ಮೀರಬಾರದು ಎನ್ನುವ ಸಮಾಜವು ಇಂತಹ ಕೊಲೆಗಳನ್ನು ಮೌನವಾಗಿ ಒಳಗಿಂದೊಳಗೆ ಸಮ್ಮತಿಸಿರುತ್ತವೆ. ಅಂತಹ ಮನಸ್ಸುಗಳು ಸಂತ್ರಸ್ತೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತವೆ. ವಿಪರ್ಯಾಸವೆಂದರೆ, ಪ್ರೀತಿಸಿ ಹೆಣ್ಣು ಮಕ್ಕಳಿಗೆ ವಂಚಿಸುವ ನೂರಾರು ಪ್ರಕರಣಗಳು ಪುರುಷರಿಂದ ನಡೆಯುತ್ತವೆ. ಇಂತಹ ಪ್ರಕರಣಗಳಲ್ಲಿ ತನ್ನನ್ನು ತಿರಸ್ಕರಿಸಿದ ಅಥವಾ ತನಗೆ ವಂಚಿಸಿದ ಪುರುಷನ ವಿರುದ್ಧ ಹೆಣ್ಣು ಸೇಡು ತೀರಿಸಲು ಹೊರಟರೆ ಸಮಾಜದಲ್ಲಿ ಅರ್ಧಕ್ಕರ್ಧ ಪುರುಷರು ಕೊಲೆಯಾದ ಸ್ಥಿತಿಯಲ್ಲಿರಬೇಕಾಗುತ್ತದೆ.

ತಕ್ಷಣಕ್ಕೆ ಹೆಣ್ಣಿನ ಪರವಾದ ಕಾನೂನುಗಳನ್ನು ಇನ್ನಷ್ಟು ಬಿಗಿಗೊಳಿಸುವುದಷ್ಟೇ ಇಂತಹ ಕೃತ್ಯಗಳನ್ನು ತಡೆಯಲು ಇರುವ ಏಕೈಕ ಮಾರ್ಗ. ಚುಡಾವಣೆ, ರ್ಯಾಗಿಂಗ್ ಮೊದಲಾದ ದೂರುಗಳನ್ನು ಹಿಡಿದುಕೊಂಡು ಮಹಿಳೆಯರು ಬಂದರೆ ಅದನ್ನು ಆದ್ಯತೆಯಲ್ಲಿ ನಿಭಾಯಿಸುವುದು ಮಾತ್ರವಲ್ಲ, ಕುಟುಂಬಕ್ಕೆ ಸಂಪೂರ್ಣ ರಕ್ಷಣೆಯನ್ನು ನೀಡುವ ಕೆಲಸವನ್ನು ಪೊಲೀಸರು ಮಾಡಬೇಕು. ಈ ನಿಟ್ಟಿನಲ್ಲಿ ಗೃಹ ಸಚಿವರು ಪ್ರತ್ಯೇಕವಾಗಿ ಸಭೆಯೊಂದನ್ನು ನಡೆಸಿ ಪೊಲೀಸರಿಗೆ ನಿರ್ದೇಶನವನ್ನು ನೀಡಬೇಕು. ಮಹಿಳೆಯರು ಈ ನಿಟ್ಟಿನಲ್ಲಿ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಯಾವ ಕಾರಣಕ್ಕೂ ಹಿಂಜರಿಯದಂತೆ ನೋಡಿಕೊಳ್ಳಲು, ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಪ್ರತ್ಯೇಕವಾಗಿ ನೇಮಿಸಬೇಕು. ಜೊತೆಗೇ ರಾಜಕಾರಣಿಗಳು, ಇಂತಹ ಕೃತ್ಯಗಳಲ್ಲಿ ಜಾತಿ, ಧರ್ಮಗಳನ್ನು ಹುಡುಕದೇ ಅವುಗಳನ್ನು ಒಕ್ಕೊರಲಿನಿಂದ ಖಂಡಿಸಬೇಕು. ಇಲ್ಲವಾದರೆ ನಾವೇ ನಮ್ಮ ಸಮಾಜದ ಹೆಣ್ಣು ಮಕ್ಕಳನ್ನು ಪುರುಷಾಹಂಕಾರದ ಹೆಬ್ಬುಲಿಯ ಬಾಯಿಗೆ ತಳ್ಳಿದಂತಾಗಬಹುದು. ಮಹಿಳೆಯರು ತಮ್ಮ ರಕ್ಷಣೆಗಾಗಿ ತಾವೇ ಕುಡುಗೋಲು, ಕೊಡಲಿ ಕೈಗೆತ್ತಿಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News