ಹೆಣ್ಣು ಭ್ರೂಣ ಹತ್ಯೆಗೆ ಕೊನೆ ಯಾವಾಗ ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸರಕಾರ ಎಷ್ಟೇ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಹೆಣ್ಣು ಭ್ರೂಣ ಹತ್ಯೆಯಂತಹ ಹೇಯ, ಕ್ರೂರ ಕೃತ್ಯಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮತ್ತು ಮಂಡ್ಯ ಜಿಲ್ಲೆಯಿಂದ ಇಂತಹ ಘಟನೆಗಳು ವರದಿಯಾಗಿವೆ. ಇಂತಹ ದುಷ್ಕೃತ್ಯಗಳು ಬೆಳಕಿಗೆ ಬಂದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಇಂತಹ ಜಾಲವನ್ನು ಬಯಲಿಗೆಳೆಯುತ್ತಾರೆ. ಆದರೆ ಇನ್ನೊಂದೆಡೆ ಇಂತಹ ಅಮಾನವೀಯ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಲಿಂಗ ತಾರತಮ್ಯದ ವಿರುದ್ಧ ಸಾಕಷ್ಟು ಜಾಗೃತಿ ಅಭಿಯಾನಗಳು ನಡೆದರೂ ಸಮಾಜದಲ್ಲಿ ಬೇರುಬಿಟ್ಟ ಈ ಕ್ರೌರ್ಯವನ್ನು ತೊಲಗಿಸಲು ಸಾಧ್ಯವಾಗುತ್ತಿಲ್ಲ. ಗರ್ಭಿಣಿಯರನ್ನು ಅಕ್ರಮವಾಗಿ ಸ್ಕ್ಯಾನಿಂಗ್ಗೆ ಒಳಪಡಿಸಿ ಭ್ರೂಣ ಲಿಂಗ ಪತ್ತೆ ಮಾಡುವ ಜಾಲ ರಾಜ್ಯದಲ್ಲಿ ವ್ಯಾಪಕವಾಗಿರುವುದು ಆತಂಕದ ಸಂಗತಿಯಾಗಿದೆ. ಮೊದಲು ಭ್ರೂಣ ಲಿಂಗ ಪತ್ತೆ ಹಚ್ಚುವುದು, ಹೆಣ್ಣು ಎಂದು ಕಂಡು ಬಂದರೆ ನಿರ್ದಯವಾಗಿ ಗರ್ಭಪಾತ ಮಾಡಿಸುವುದು ನಾಗರಿಕತೆ ನಾಚಿ ತಲೆ ತಗ್ಗಿಸುವ ಸಂಗತಿಯಾಗಿದೆ. ವೈದ್ಯಕೀಯ ತಂತ್ರಜ್ಞಾನವನ್ನು ಬಳಸಿಕೊಂಡು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಈ ಹೇಯ ಕೃತ್ಯಗಳು ನಡೆಯುತ್ತಿವೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆಸಲಾಗುತ್ತಿದ್ದ ಅಕ್ರಮ ಸ್ಕ್ಯಾನಿಂಗ್ ಮೂಲಕ ಭ್ರೂಣಲಿಂಗ ಪತ್ತೆ ಮಾಡಿ ಹೆಣ್ಣು ಎಂದು ಕಂಡು ಬಂದರೆ ಕೊಲ್ಲುವ ಹೇಯ ಕೃತ್ಯವನ್ನು ಪೊಲೀಸರು ಇತ್ತೀಚೆಗೆ ಬಯಲಿಗೆಳೆದರು. ರಾಜ್ಯದ ಮಾತ್ರವಲ್ಲ ಮಹಾರಾಷ್ಟ್ರದಿಂದ ಬಂದು ಇಲ್ಲಿ ಭ್ರೂಣಲಿಂಗ ಪತ್ತೆ ಹಚ್ಚಿಸಿ ಹೆಣ್ಣಾಗಿದ್ದರೆ ಗರ್ಭಪಾತ ಮಾಡಿಸಿಕೊಂಡು ಹೋಗುವ ಜಾಲವನ್ನು ಪೊಲೀಸರು ಇತ್ತೀಚೆಗೆ ಪತ್ತೆ ಹಚ್ಚಿದ್ದಾರೆ. ಕಳೆದ ವರ್ಷ ರಾಮನಗರ, ಮಂಡ್ಯ, ಮೈಸೂರುಗಳಲ್ಲಿ ಈ ಕೃತ್ಯದಲ್ಲಿ ತೊಡಗಿದ್ದ ಜಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದರು. ಮಂಡ್ಯ-ಪಾಂಡವಪುರ ರಸ್ತೆಯಲ್ಲಿ ಆಲೆಮನೆಯೊಂದರಲ್ಲಿ ಸ್ಕ್ಯಾನಿಂಗ್ ಯಂತ್ರ ಇರಿಸಿ ಅಲ್ಲಿಯೇ ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣವೆಂದು ತಿಳಿಯುತ್ತಿದ್ದಂತೆ ಗರ್ಭಪಾತ ಮಾಡಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಈ ಹಿಂದೆ ಪತ್ತೆ ಹಚ್ಚಿದ್ದರು. ಪೊಲೀಸರು ಎಷ್ಟೇ ಎಚ್ಚರ ವಹಿಸಿದರೂ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ಭ್ರೂಣಕ್ಕೆ ಸಾಮಾನ್ಯವಾಗಿ 7-8 ವಾರಗಳಾದ ನಂತರ ಲಿಂಗ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಹೆಣ್ಣು ಭ್ರೂಣ ಎಂದು ಗೊತ್ತಾದರೆ ಈ ಸಂದರ್ಭದಲ್ಲೇ ಗರ್ಭಪಾತ ಮಾಡಿಸಲಾಗುತ್ತದೆ. ಭ್ರೂಣಗಳಿಗೆ 10-12 ವಾರಗಳು ತುಂಬಿದಾಗ ಹೆಚ್ಚಿನ ವೈದ್ಯಕೀಯ ಗರ್ಭಪಾತ ಪ್ರಕರಣಗಳು ನಡೆಯುತ್ತಿರುವುದಕ್ಕೂ ಭ್ರೂಣಲಿಂಗ ಪತ್ತೆಗೂ ನೇರ ಸಂಬಂಧ ಇರುವುದು ಸ್ಪಷ್ಟ. ಭಾರತದಲ್ಲಿ 24 ವಾರಗಳು ತುಂಬುವವರೆಗೂ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಕಾನೂನಿನಲ್ಲಿ ಇರುವ ಈ ಅವಕಾಶವನ್ನು ವ್ಯಾಪಕವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿಯಾಗಿವೆ.
ಸಮಾಜದಲ್ಲಿ ವಿದ್ಯಾವಂತರ ಪ್ರಮಾಣ ಜಾಸ್ತಿಯಾದಂತೆ ಹೆಣ್ಣು ಭ್ರೂಣ ಹತ್ಯೆಯಂತಹ ಪಿಡುಗು ತೊಲಗಬೇಕಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾದ ವಿದ್ಯಮಾನಗಳು ನಮ್ಮ ಸಮಾಜದಲ್ಲಿ ನಡೆಯುತ್ತಿವೆ. ವಿದ್ಯಾವಂತರು, ಧನಿಕರು ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಹೆಣ್ಣು ಕೂಸನ್ನು ಈ ಪರಿ ದ್ವೇಷಿಸಲು ಕಾರಣವೇನು? ಮಕ್ಕಳಲ್ಲಿ ಹೆಣ್ಣು-ಗಂಡು ಎಂಬ ತಾರತಮ್ಯ ಮಾಡುವುದೇಕೆ? ಹೆಣ್ಣು, ಪುರುಷರಿಗೆ ಯಾವುದರಲ್ಲೂ ಕಡಿಮೆಯಲ್ಲ ಎಂದು ಈಗಾಗಲೇ ಸಾಬೀತು ಮಾಡಿದ್ದಾಳೆ. ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ವೈದ್ಯೆ, ವಿಜ್ಞಾನಿ, ಅಧ್ಯಾಪಕಿ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ತಾನು ಯಾವುದರಲ್ಲೂ ಕಡಿಮೆಯಿಲ್ಲ ಎಂದು ತೋರಿಸಿದ್ದಾಳೆ. ಆದರೂ ಗಂಡು ಮಗುವೇ ಬೇಕೆಂಬ ವ್ಯಾಮೋಹ ಏಕೆ?
ನಮ್ಮ ಸಮಾಜದಲ್ಲಿ ವ್ಯಾಪಕವಾಗಿ ಬೇರು ಬಿಟ್ಟಿರುವ ಈ ಲಿಂಗಭೇದದ ಮನೋಭಾವದಿಂದಾಗಿ ಹೆಣ್ಣು-ಗಂಡಿನ ಲಿಂಗಾನುಪಾತದಲ್ಲಿ ವ್ಯಾಪಕ ಕುಸಿತ ಉಂಟಾಗಿದೆ. 2011ರ ಜನಗಣತಿ ಪ್ರಕಾರ ಪ್ರತೀ ಸಾವಿರ ಪುರುಷರಿಗೆ ಇರುವ ಮಹಿಳೆಯರ ಪ್ರಮಾಣ ಕೇವಲ 918 ಮಾತ್ರ. ಹೀಗಾಗಿ ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಯುವಕರಿಗೆ ಕನ್ಯೆಯರು ಸಿಗದೆ ದಕ್ಷಿಣ ಭಾರತದ ರಾಜ್ಯಗಳಿಗೆ ಬಂದು ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ನಿಜಕ್ಕೂ ಕಳವಳಕಾರಿ ಸಂಗತಿ.
ಭಾರತದ ಸಾಮಾಜಿಕ ಜೀವನದಲ್ಲಿ ಹೆಣ್ಣು-ಗಂಡು ಭೇದ ಶತಮಾನಗಳಿಂದ ಬೇರು ಬಿಟ್ಟಿದೆ. ಹೆಣ್ಣು ಹೊರೆ ಎಂಬ ಮನೋಭಾವ ವ್ಯಾಪಕವಾಗಿದೆ. ಎಷ್ಟೋ ಮಹಿಳೆಯರು ಕೂಡ ಹೆಣ್ಣು ಮಗುವನ್ನು ಬಯಸುವುದಿಲ್ಲ. ಇದರ ನಿವಾರಣೆಗೆ ಬರೀ ಸರಕಾರ ಪ್ರಯತ್ನಿಸಿದರೆ ಸಾಲದು, ಸ್ವಯಂ ಸೇವಾ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕೂಡ ಶ್ರಮಿಸಬೇಕಾಗಿದೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೋಮು ಪ್ರಚೋದಕ ಚಟುವಟಿಕೆಗಳಲ್ಲಿ ತೊಡಗಿರುವ ನಕಲಿ ಧರ್ಮ ರಕ್ಷಕರು, ಕೋಮುವಾದಿ ಸಂಘಟನೆಗಳು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಧ್ವನಿಯೆತ್ತಿದ ಉದಾಹರಣೆಗಳಿಲ್ಲ. ಹೀಗಾಗಿ ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.
ಮೊದಲು ನಗರ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆ ಈಗ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇದರ ತಡೆಗೆ ಸರಕಾರ ಕಾನೂನು ಮಾಡಿದರೆ ಸಾಲದು ಅದರ ಕಟ್ಟುನಿಟ್ಟಿನ ಜಾರಿಯ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಭ್ರೂಣ ಲಿಂಗ ಪತ್ತೆ ಹಚ್ಚುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಇದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ ಎಂಬುದು ಕಳವಳಕಾರಿ ಸಂಗತಿಯಾಗಿದೆ.
ಭ್ರೂಣ ಲಿಂಗ ಪತ್ತೆಗೆ ಕಡಿವಾಣ ಹಾಕಿ, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಈ ದುಷ್ಕೃತ್ಯದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ವಿಶೇಷ ಕಾರ್ಯಕ್ರಮ ರೂಪಿಸಬೇಕಾಗಿದೆ. ಹೆಣ್ಣು ಭ್ರೂಣ ಹತ್ಯೆಯ ಜಾಲದ ಹಿಂದೆ ಪ್ರಭಾವಿ ಶಕ್ತಿಗಳ ಕೈವಾಡವೂ ಇರಬಹುದು. ಆದರೆ ಎಷ್ಟೇ ಪ್ರಭಾವಿಯಾಗಿದ್ದರೂ ಅಪರಾಧ ಕೃತ್ಯಗಳಲ್ಲಿ ತೊಡಗುವವರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು. ‘ಬೇಟಿ ಬಚಾವೋ’ ಎಂಬುದು ಕೇವಲ ಸರಕಾರದ ಘೋಷಣೆಯಾಗಿ ಉಳಿಯಬಾರದು. ಆದ್ದರಿಂದ ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕು. ಇಂತಹ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಈ ಪಿಡುಗನ್ನು ಸಂಪೂರ್ಣವಾಗಿ ಅಳಿಸಿಹಾಕುವುದು ಮೊದಲ ಆದ್ಯತೆಯಾಗಬೇಕು.