ವಾಚಾಳಿ ಪ್ರಧಾನಿಯನ್ನು ತಿವಿಯುವ ಸಿಂಗ್ ಮೌನ

Update: 2024-12-28 06:40 GMT

PC: x.com/narendramodi

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪ್ರಧಾನಿಯಾಗಿದ್ದ ಕಾಲದಲ್ಲಿ ಮನಮೋಹನ್ ಸಿಂಗ್ ತನ್ನ ಮೌನಕ್ಕಾಗಿಯೇ ವಿರೋಧಪಕ್ಷಗಳಿಂದ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದ್ದರು. ಆದರೆ ಬಳಿಕ ಬಂದ ಪ್ರಧಾನಿ ನರೇಂದ್ರ ಮೋದಿಯ ವಾಚಾಳಿತನ, ಮಾಜಿ ಪ್ರಧಾನಿ ಸಿಂಗ್ ಮೌನಕ್ಕೆ ನಿಜವಾದ ಅರ್ಥವನ್ನು ನೀಡತೊಡಗಿತು. ಒಬ್ಬ ಪ್ರಧಾನಿ ಯಾವ ಸಂದರ್ಭದಲ್ಲಿ ಮಾತನಾಡಬೇಕು ಎನ್ನುವುದಕ್ಕೆ ಮನಮೋಹನ್ ಸಿಂಗ್ ಉದಾಹರಣೆಯಾಗಿದ್ದರೆ, ಒಬ್ಬ ಪ್ರಧಾನಿಯಾಗಿ ಯಾವೆಲ್ಲ ಸಂದರ್ಭದಲ್ಲಿ ಮಾತನಾಡಬಾರದು ಮತ್ತು ಹೇಗೆ ಮಾತನಾಡಬಾರದು ಎನ್ನುವುದಕ್ಕೆ ಪ್ರಧಾನಿ ಮೋದಿ ಉದಾಹರಣೆಯಾಗಿ ದೇಶದ ಮುಂದಿದ್ದಾರೆ. ಪಿ.ವಿ. ನರಸಿಂಹರಾವ್ ಅವರ ಕಾಲದಲ್ಲಿ ವಿತ್ತ ಸಚಿವರಾಗಿ ಮನಮೋಹನ್ ಸಿಂಗ್ ಮಾಡಿದ ಆರ್ಥಿಕ ಸುಧಾರಣೆಗಳೇ ಮುಂದೆ ಅವರನ್ನು ಪ್ರಧಾನಿಯನ್ನಾಗಿಸಿತು. ಪಿ. ವಿ. ನರಸಿಂಹರಾವ್ ಕಾಲದಲ್ಲೇ ಬಾಬರಿ ಮಸೀದಿ ಧ್ವಂಸಗೊಂಡಿತು. ಇದೇ ಹೊತ್ತಿಗೆ ದೇಶದ ಅಳಿದುಳಿದ ಸಮಾಜವಾದಿ ನೆಹರೂ ಆಶಯಗಳೂ ಧ್ವಂಸಗೊಂಡವು. ಬಡವರು, ರೈತರು, ಕಾರ್ಮಿಕರ ಹೆಸರಿನಲ್ಲಿ ನಡೆಯುತ್ತಿದ್ದ ರಾಜಕೀಯ ಧರ್ಮಾಧಾರಿತವಾದದ್ದು ಮತ್ತು ಬೃಹತ್ ಉದ್ಯಮಿಗಳ ಮೂಗಿನ ನೇರಕ್ಕೆ ಭಾರತದ ಆರ್ಥಿಕತೆಯನ್ನು ಕಟ್ಟಲು ಮುಂದಾದದ್ದು ಏಕಕಾಲದಲ್ಲೇ ನಡೆಯಿತು. ಒಂದಕ್ಕೆ ನರಸಿಂಹರಾವ್ ಹೆಗಲು ಕೊಟ್ಟರೆ, ಇನ್ನೊಂದಕ್ಕೆ ಮನಮೋಹನ್ ಸಿಂಗ್ ಹೆಗಲು ಕೊಟ್ಟರು. ಜಗತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದ ಮನಮೋಹನ್ ಸಿಂಗ್‌ರನ್ನು ಪ್ರಧಾನಮಂತ್ರಿಯಾಗಿಸುವ ಅನಿವಾರ್ಯವನ್ನು ಕಾಲವೇ ಸೃಷ್ಟಿಸಿತ್ತು. ೨೦೦೪ರಲ್ಲಿ ಎಲ್ಲವೂ ಸರಿಯಾಗಿದ್ದರೆ ಈ ದೇಶದ ಪ್ರಧಾನಿಯಾಗಿ ಸೋನಿಯಾಗಾಂಧಿ ಆಯ್ಕೆಯಾಗುತ್ತಿದ್ದರು. ಆದರೆ ಅಂದಿನ ರಾಜಕೀಯ ಸಂದರ್ಭ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇಂತಹ ಹೊತ್ತಿನಲ್ಲಿ ಈ ದೇಶದ ಪ್ರಧಾನಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದಾಗ ಸೋನಿಯಾಗಾಂಧಿಗೆ ಮನಮೋಹನ್ ಸಿಂಗ್‌ಗಿಂತ ಹೊರತಾದ ಇನ್ನೊಂದು ಆಯ್ಕೆ ಇದ್ದಿರಲಿಲ್ಲ.

ಒಂದು ಕಲ್ಲಿನಲ್ಲಿ ಹಲವು ಹಣ್ಣುಗಳನ್ನು ಉದುರಿಸಿದ್ದರು ಸೋನಿಯಾಗಾಂಧಿ. ಜಗತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾಲದಲ್ಲಿ, ಇದನ್ನು ಅರಿತುಕೊಂಡು ಅದರ ಲಯಕ್ಕೆ ತಕ್ಕಂತೆ ದೇಶವನ್ನು ಮುನ್ನಡೆಸುವ ಮುತ್ಸದ್ದಿತನ, ಅರ್ಥಶಾಸ್ತ್ರಜ್ಞರಾಗಿರುವ ಮನಮೋಹನ್ ಸಿಂಗ್ ಅವರಿಗೆ ಮಾತ್ರ ಇರುವುದನ್ನು ಸೋನಿಯಾಗಾಂಧಿ ಅರಿತಿದ್ದರು. ಇದೇ ಸಂದರ್ಭದಲ್ಲಿ, ಸಿಖ್ ಹತ್ಯಾಕಾಂಡದ ಕಳಂಕವನ್ನು ತೊಳೆದುಕೊಳ್ಳುವ ಅವಕಾಶವಾಗಿಯೂ ಅವರು ಮನಮೋಹನ್ ಸಿಂಗ್ ಅವರನ್ನು ಬಳಸಿಕೊಂಡರು. ಸಿಖ್ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಈ ದೇಶದ ಪ್ರಧಾನಿಯಾಗಿಸುವ ಮೂಲಕ, ಇಂದಿರಾ ಗಾಂಧಿಯಿಂದಾಗಿರುವ ಕೆಲವು ಪ್ರಮಾದಗಳ ಗಾಯಗಳಿಗೆ ಮುಲಾಮು ಹಚ್ಚುವ ಪ್ರಯತ್ನ ನಡೆಸಿದರು. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಧಾನಿಯಾಗದೆಯೂ ಸೂಪರ್ ಪವರ್ ತನ್ನ ಕೈಯಲ್ಲೇ ಉಳಿಸಿಕೊಳ್ಳುವಲ್ಲೂ ಈ ಮೂಲಕ ಯಶಸ್ವಿಯಾದರು. ಮನಮೋಹನ್ ಸಿಂಗ್ ಅವರು ಹಿಂಬಾಗಿಲ ಮೂಲಕ ಸಂಸತ್‌ನ್ನು ಪ್ರವೇಶಿಸಿದ್ದರು. ಅವರೆಂದಿಗೂ ಜನರಿಂದ ನೇರವಾಗಿ ನಾಯಕರಾಗಿ ರೂಪುಗೊಂಡವರಲ್ಲ. ಅವರ ವಿದ್ವತ್ತು, ಸಜ್ಜನಿಕೆ ಮತ್ತು ಸೋನಿಯಾಗಾಂಧಿಯ ‘ಅಗತ್ಯ’ ಅವರನ್ನು ಅನಿರೀಕ,ಇ್ತ ನಾಯಕನನ್ನಾಗಿಸಿತ್ತು. ಸೋನಿಯಾಗಾಂಧಿ ಆಗಷ್ಟೇ ರಾಜಕೀಯ ಪ್ರವೇಶವನ್ನು ಮಾಡಿದ್ದರು. ಪ್ರಧಾನಿ ಸ್ಥಾನಕ್ಕೆ ಸಿಂಗ್ ಹೊರತಾದ ಬೇರೆ ಯಾವ ನಾಯಕರನ್ನು ಆಯ್ಕೆ ಮಾಡಿದ್ದರೂ ಅವರು ಸೋನಿಯಾಗಾಂಧಿಗೆ ಪರ್ಯಾಯ ನಾಯಕರಾಗಿ, ಸವಾಲಾಗಿ ಬೆಳೆಯುವ ಸಾಧ್ಯತೆಯಿತ್ತು. ಇನ್ನೊಬ್ಬ ನರಸಿಂಹರಾವ್ ಅಥವಾ ಸೀತಾರಾಮ್ ಕೇಸರಿ ಸೋನಿಯಾಗಾಂಧಿಗೆ ಬೇಡವಾಗಿತ್ತು. ಹಾಗೆಯೇ ಮನಮೋಹನ್ ಸಿಂಗ್ ಅವರ ಪ್ರಬುದ್ಧತೆ, ಕಡಿಮೆ ಮಾತುಗಳು ಪ್ರಧಾನಿಯಾಗಲು ಇನ್ನು ಕೆಲವು ಅರ್ಹತೆಗಳಾಗಿದ್ದವು. ಪ್ರಧಾನಿಯಾದ ಅವಧಿಯಲ್ಲಿ ಸೋನಿಯಾಗಾಂಧಿಗೆ ಮುಜುಗರವುಂಟು ಮಾಡುವ ಮಾತುಗಳನ್ನು ಅವರು ಆಡಲಿಲ್ಲ ಎನ್ನುವುದೇ ವಿರೋಧಪಕ್ಷಕ್ಕೆ ಮತ್ತು ಮಾಧ್ಯಮಗಳಿಗೆ ಮನಮೋಹನ್ ಸಿಂಗ್ ಅವರ ಮೇಲಿದ್ದ ಸಿಟ್ಟಾಗಿತ್ತು. ಆದರೆ ಮನಮೋಹನ್ ಸಿಂಗ್ ಪ್ರಧಾನಿಯಾಗಿರುವ ಸಂದರ್ಭದಲ್ಲಿ ಪತ್ರಕರ್ತರನ್ನು ತನ್ನ ಪ್ರವಾಸದ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಮಾತುಗಳಿಗೆ ಉತ್ತರಿಸುವ ಧೈರ್ಯವನ್ನೂ ತೋರಿಸಿದ್ದರು. ಮನಮೋಹನ್ ಸಿಂಗ್‌ರನ್ನು ‘ಮೌನ ಮೋಹನ ಸಿಂಗ್’ ಎಂದು ವ್ಯಂಗ್ಯವಾಡಿದ್ದ ಪ್ರಧಾನಿ ಈವರೆಗೆ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಕರೆದು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರಿಲ್ಲ ಎನ್ನುವುದೇ ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ ಏನು ಮತ್ತು ಎಲ್ಲಿ ಅವರು ಪ್ರಧಾನಿ ಮೋದಿಗಿಂತ ಭಿನ್ನ ಎನ್ನುವುದನ್ನು ಹೇಳುತ್ತದೆ.

ಮನಮೋಹನ್ ಸಿಂಗ್ ಉದಾರೀಕರಣದ ರೂವಾರಿ. ವಿಶ್ವಬ್ಯಾಂಕ್‌ನ ಆರ್ಥಿಕ ನೀತಿಗೆ ಪೂರಕವಾಗಿ ಭಾರತವನ್ನು ತೆರೆದುಕೊಟ್ಟರು ಎನ್ನುವುದು ನಿಜ. ಅಭಿವೃದ್ಧಿಯ ವ್ಯಾಖ್ಯಾನ ಬುಡಮೇಲಾದದ್ದೂ ಇದೇ ಅವಧಿಯಲ್ಲಿ. ಆದರೆ ಆ ಹೊತ್ತಿಗೆ ಭಾರತ ಉದಾರೀಕರಣಕ್ಕೆ ತೆರೆದುಕೊಳ್ಳುವ ಅನಿವಾರ್ಯತೆಯನ್ನು ಮೈಮೇಲೆ ಎಳೆದುಕೊಂಡಿತ್ತು. ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ತಕ್ಷಣದ ಅಗತ್ಯಕ್ಕೆ ಭಾರೀ ಬೆಲೆಯನ್ನು ತೆರಬೇಕಾಯಿತು. ಇಂತಹ ಹೊತ್ತಿಗೂ ಒಬ್ಬ ಪ್ರಧಾನಿಯಾಗಿ ಈ ದೇಶದ ತಳಸ್ತರದ ಜನರ ಬಗ್ಗೆಯೂ ಮನಮೋಹನ್ ಸಿಂಗ್ ಯೋಚಿಸಿದ್ದರು. ಅವರೆಂದಿಗೂ ಮೋದಿಯವರಂತೆ ಬಡವರಿಗೆ ನೀಡುವ ಉಚಿತ ಕೊಡುಗೆಗಳನ್ನು ವ್ಯಂಗ್ಯವಾಡಿರಲಿಲ್ಲ. ಶಿಕ್ಷಣ, ಆಹಾರ, ಉದ್ಯೋಗಗಳು ತಳಸ್ತರದ ಜನರನ್ನು ತಲುಪುವಂತಾಗಲು ಅವರು ಕೆಲವು ಕ್ರಾಂತಿಕಾರಿ ಕಾನೂನುಗಳನ್ನು ರೂಪಿಸಿದರು. ಪ್ರಧಾನಿಯಾಗಿದ್ದರೂ, ಸರಕಾರದೊಳಗಿರುವ ಭ್ರಷ್ಟಾಚಾರಗಳನ್ನು ನಿಯಂತ್ರಿಸುವ ಯಾವುದೇ ಅಧಿಕಾರ ಅವರಿಗಿರಲಿಲ್ಲ ಎನ್ನುವುದು ನಿಜ. ೨ಜಿ ಸೆಕ್ಟ್ರಂ, ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್ ಗೇಮ್ಸ್ ಹಗರಣ ಅವರ ಅವಧಿಯ ಕುಖ್ಯಾತ ಹಗರಣಗಳು. ಇವುಗಳಲ್ಲಿ ಇವರ ನೇರ ಪಾತ್ರ ಇಲ್ಲ ಎನ್ನುವುದು ದೇಶಕ್ಕೆ ಸ್ಪಷ್ಟ. ಆದರೆ ಇವರ ಮೌನ ಈ ಹಗರಣಗಳಿಗೆ ಒತ್ತಾಸೆಯಾಗಿತ್ತು. ಇದೇ ಸಂದರ್ಭದಲ್ಲಿ ಜಾರಿಗೆ ತಂದ ಆರ್‌ಟಿಐ ಕಾಯ್ದೆ ಇಂದಿಗೂ ಭ್ರಷ್ಟರನ್ನು ಎದುರಿಸಲು ಜನಸಾಮಾನ್ಯರ ಕೈಗೆ ಸಿಕ್ಕಿದ ಬ್ರಹ್ಮಾಸ್ತ್ರ ಎನ್ನುವುದನ್ನು ದೇಶ ಮರೆತಿಲ್ಲ. ಕಾಂಗ್ರೆಸ್ ಸರಕಾರ ಜಾರಿಗೆ ತಂದ ಅದೇ ಆರ್‌ಟಿಐ ಕಾಯ್ದೆಯನ್ನು ಬಳಸಿಕೊಂಡು ಕಾಂಗ್ರೆಸ್ ಸರಕಾರದೊಳಗಿರುವ ಅದೆಷ್ಟೋ ಹಗರಣಗಳನ್ನು ಆರ್‌ಟಿಐ ಕಾರ್ಯಕರ್ತರು ಬಯಲಿಗೆಳೆದರು. ಇಂದಿಗೂ ಮೋದಿ ಸರಕಾರಕ್ಕೆ ಅತಿ ದೊಡ್ಡ ತಲೆನೋವಾಗಿ ಆರ್‌ಟಿಐ ಕಾಯ್ದೆ ಕಾಡುತ್ತಿದೆ. ಕಾಂಗ್ರೆಸ್ ಸರಕಾರವನ್ನು ಭ್ರಷ್ಟ ಸರಕಾರ ಎಂದು ಟೀಕಿಸುವ ಮೋದಿ ಬಳಗ, ಭ್ರಷ್ಟವಾಗಿದ್ದರೂ ಅದೇ ಕಾಂಗ್ರೆಸ್ ಆರ್‌ಟಿಐ ಕಾಯ್ದೆಯನ್ನು ಜಾರಿಗೊಳಿಸಿ ಭ್ರಷ್ಟರನ್ನು ಪ್ರಶ್ನಿಸುವ ಅಧಿಕಾರವನ್ನು ಜನರಿಗೆ ನೀಡಿತ್ತು ಎನ್ನುವುದನ್ನು ಮರೆತಿದೆ. ತಾನು ಕಾಂಗ್ರೆಸ್‌ಗಿಂತ ಸುಭಗ ಎಂದಾದರೆ, ಕಾಂಗ್ರೆಸ್ ಜಾರಿಗೆ ತಂದ ಭ್ರಷ್ಟಾಚಾರ ವಿರೋಧಿ ಆರ್‌ಟಿಐಯನ್ನು ಯಾಕೆ ದುರ್ಬಲಗೊಳಿಸಲು ಮುಂದಾಗಿದೆ ಎನ್ನುವ ಪ್ರಶ್ನೆಗೆ ಮೋದಿ ಸರಕಾರ ಉತ್ತರಿಸಬೇಕಾಗಿದೆ.

ಗ್ರಾಮೀಣ ಭಾರತಕ್ಕೆ ಉದ್ಯೋಗವನ್ನು ನೀಡುವ ಮಹದುದ್ದೇಶದಿಂದ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲೇ ನರೇಗಾ ಜಾರಿಗೊಂಡಿತು. ಹಾಗೆ ಜಾರಿಗೊಳಿಸಿದ ಸಂದರ್ಭದಲ್ಲಿ ಅದನ್ನು ಟೀಕಿಸಿದ, ವ್ಯಂಗ್ಯ ಮಾಡಿದ ಬಿಜೆಪಿ, ತಾನು ಅಧಿಕಾರಕ್ಕೆ ಬಂದ ಬಳಿಕ ಆ ಯೋಜನೆಯನ್ನು ಬೆಂಬಲಿಸಿತ್ತು. ನರೇಗಾ ಯೋಜನೆಯನ್ನು ವಿಶ್ವಸಂಸ್ಥೆ ಕೂಡ ಶ್ಲಾಘಿಸಿತ್ತು. ಕೊರೋನ ಕಾಲದಲ್ಲಿ ಗ್ರಾಮೀಣ ಭಾರತವನ್ನು ರಕ್ಷಿಸಿದ್ದು ಇದೇ ಯೋಜನೆ. ಆದರೆ ಇಂದು ನರೇಂದ್ರ ಮೋದಿ ಸರಕಾರ ಹಣದ ಕೊರತೆಯನ್ನು ಮುಂದಿಟ್ಟು ಆ ಯೋಜನೆಯನ್ನೂ ಹಂತ ಹಂತವಾಗಿ ಸಾಯಿಸುವ ಕೆಲಸ ಮಾಡುತ್ತಿದೆ. ಆರ್‌ಟಿಇ ಮೂಲಕ ಶಿಕ್ಷಣದ ಹಕ್ಕನ್ನು, ಆಹಾರ ಭದ್ರತೆಯ ಕಾಯ್ದೆಯನ್ನೂ ಜಾರಿಗೆ ತಂದಿರುವುದು ಮನಮೋಹನ್ ಸಿಂಗ್. ಇವೆಲ್ಲವು ಸೋನಿಯಾಗಾಂಧಿಯ ಒತ್ತಾಸೆಯಿಂದಲೇ ಜಾರಿಗೆ ಬಂದಿರುವುದು ಎನ್ನುವುದು ಅಷ್ಟೇ ನಿಜ. ಆದರೆ ಸಿಂಗ್‌ರ ಯಾವ ದೂರದೃಷ್ಟಿಯೂ ಇಲ್ಲದ ಪ್ರಧಾನಿ ಮೋದಿಯವರು, ಅವರ ಅಳಿದುಳಿದ ಜನಪರ ಯೋಜನೆಗಳ ಮೇಲೂ ಬುಲ್ಡೋಜರ್ ಹತ್ತಿಸಿ, ದೇಶವನ್ನು ಅಂಬಾನಿ, ಅದಾನಿ ಸೊತ್ತಾಗಿ ಮಾರ್ಪಡಿಸುತ್ತಿರುವುದನ್ನು ಸಿಂಗ್ ಕಳವಳದಿಂದ ನೋಡಿದ್ದರು. ರಾಜಕೀಯ ಬದುಕಿನಲ್ಲಿ ಮೌನದ ಕಾರಣಕ್ಕೆ ಗುರುತಿಸಲ್ಪಟ್ಟಿದ ಸಿಂಗ್, ‘ಮೋದಿ ದೇಶದ ಪ್ರಧಾನಿಯಾದರೆ ಅದರಿಂದ ಭಾರೀ ಅಪಾಯವಿದೆ’ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ನೋಟು ನಿಷೇಧವನ್ನು ಮಹಾ ಪ್ರಮಾದವೆಂದು ಕರೆದಿದ್ದರು. ಲಾಕ್‌ಡೌನ್‌ನ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದರು. ಇಂದು ಮನಮೋಹನ್ ಸಿಂಗ್ ಮೌನವಾಗಿದ್ದಾರೆ. ಆದರೆ ಅವರ ಮೌನ, ಮೋದಿಯ ಅರ್ಥಹೀನ ಮಾತುಗಳನ್ನು , ತಲೆಬುಡವಿಲ್ಲದ ಆಡಳಿತವನ್ನು ತಿವಿಯುವಂತಿದೆ. ‘ಇತಿಹಾಸ ನನ್ನ ಬಗ್ಗೆ ಹೆಚ್ಚು ದಯಾಳುವಾಗಿರುತ್ತದೆ’ ಎನ್ನುವ ಸಿಂಗ್ ಮಾತು ಇಂದಿನ ದಿನಗಳಲ್ಲಿ ಪ್ರಧಾನಿ ಮೋದಿಯ ಕಾರಣದಿಂದ ಹೆಚ್ಚು ಹೆಚ್ಚು ಅರ್ಥ ಪಡೆದುಕೊಳ್ಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News