ಭಾರತೀಯರ ತಲೆಯ ಮೇಲೆ ಪಾಕ್ ಧ್ವಜ ಹಾರಿಸಿದವರು!

Update: 2024-05-15 08:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅರ್ಧ ಕಿವುಡು ಸುದ್ದಿ ಚಾನೆಲ್ ಒಂದು ಇತ್ತೀಚೆಗೆ ಅದಾವುದೋ ಒಂದು ವೀಡಿಯೊದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಲಾಗಿದೆ ಎಂದು ಗದ್ದಲ ಎಬ್ಬಿಸಿ, ಅಂತಿಮವಾಗಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಮಾಡಿತು. ಈ ಸಂಬಂಧವಾಗಿ ಅಮಾಯಕರ ಬಂಧನವೂ ಆಯಿತು. ವೀಡಿಯೊದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುತ್ತಿರುವುದು ಸ್ಪಷ್ಟವಿಲ್ಲದೇ ಇದ್ದರೂ, ಆ ಗುಂಪು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಾಗಿರುವುದೇ ಅಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿರುವುದಕ್ಕೆ ಸಾಕ್ಷಿ ಎಂಬ ರೀತಿಯಲ್ಲಿ ಆ ಟಿವಿ ವಾಹಿನಿ ದಿನವಿಡೀ ಹುಯಿಲೆಬ್ಬಿಸಿತು. ಹಲವರಿಗೆ ಕೇಳಿಸದೇ ಇದ್ದ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಇವರಿಗೆ ಹೇಗೆ ಕೇಳಿಸಿತು? ಎನ್ನುವ ನಿಗೂಢ ಪ್ರಶ್ನೆಗೆ ಉತ್ತರವನ್ನು ಇದೀಗ ಆ ಸುದ್ದಿ ವಾಹಿನಿಯೇ ನೀಡಿದೆ.

ಇತ್ತೀಚೆಗೆ ‘ದೇಶದ ಹಿಂದೂಗಳ ಮತ್ತು ಮುಸ್ಲಿಮರ ಜನಸಂಖ್ಯೆ’ಕುರಿತ ಅಂಕಿ ಅಂಶಗಳನ್ನು ಮುಂದಿಡುವ ಸಂದರ್ಭದಲ್ಲಿ ಹಿಂದೂ ಧರ್ಮೀಯರ ಸಂಖ್ಯೆಯನ್ನು ಭಾರತದ ಧ್ವಜದಡಿಯಲ್ಲಿ ಈ ಚಾನೆಲ್ ತೋರಿಸಿದ್ದರೆ, ಭಾರತದ ಮುಸ್ಲಿಮರ ಸಂಖ್ಯೆಯನ್ನು ‘ಪಾಕಿಸ್ತಾನ ಧ್ವಜ’ದಡಿಯಲ್ಲಿ ಈ ಸುದ್ದಿ ಚಾನೆಲ್ ತೋರಿಸಿತು. ಅಂದರೆ ಈ ಸುದ್ದಿ ಚಾನೆಲ್‌ನ ಪ್ರಕಾರ, ಭಾರತದ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಸೇರಿದವರು. ಇಂತಹ ಮನಸ್ಥಿತಿಯನ್ನು ಹೊತ್ತ ಚಾನೆಲ್ ಒಂದಕ್ಕೆ ಮುಸ್ಲಿಮರು ಗುಂಪು ಸೇರಿದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೇಳುವುದು ಅಚ್ಚರಿಯ ವಿಷಯವೇನೂ ಅಲ್ಲ. ತನ್ನದೇ ದೇಶದ ಜನರನ್ನು ಪಾಕಿಸ್ತಾನದ ಬಾವುಟದ ಅಡಿಯಲ್ಲಿ ತೋರಿಸಿದ ಈ ದೇಶದ್ರೋಹದ ಕೃತ್ಯಕ್ಕಾಗಿ ಈ ಚಾನೆಲ್‌ನ ಮುಖ್ಯಸ್ಥರನ್ನು ಈವರೆಗೂ ಬಂಧಿಸಲಾಗಿಲ್ಲ ಎನ್ನುವುದು ಮಾತ್ರ ಅಚ್ಚರಿಯ ವಿಷಯವೇ ಸರಿ. ತನ್ನ ಈ ಕೃತ್ಯಕ್ಕಾಗಿ

ಚಾನೆಲ್ ಕ್ಷಮೆ ಯಾಚಿಸಿತಾದರೂ, ಇದು ಆಕಸ್ಮಿಕವಾಗಿ ನಡೆದಿರುವ ಕೃತ್ಯ ಎಂದು ತೇಪೆ ಹಚ್ಚಲು ಪ್ರಯತ್ನಿಸಿತು. ಮಾತನಾಡುವ ಸಂದರ್ಭದಲ್ಲಿ ತಪ್ಪಿ ಮಾತುಗಳು ಹೊರ ಬಿದ್ದರೆ ಅದನ್ನು ಆಕಸ್ಮಿಕವೆಂದು ಕರೆಯಬಹುದು ಅಥವಾ ಮುದ್ರಣ ದೋಷಗಳು ಸಂಭವಿಸಿದರೂ ಅದನ್ನು ಕ್ಷಮಿಸಬಹುದು. ಆದರೆ, ಭಾರತದ ಒಂದು ಸಮುದಾಯದ ತಲೆಯ ಮೇಲೆ ಪಾಕಿಸ್ತಾನದ ಧ್ವಜವನ್ನು ಕೂರಿಸುವುದು ಆಕಸ್ಮಿಕವಾಗಲು ಸಾಧ್ಯವೇ ಇಲ್ಲ. ಯಾವನೋ ಒಬ್ಬ ಮುಸ್ಲಿಮನು ಹಸಿರು ಬಾವುಟ ಕೈಯಲ್ಲಿ ಹಿಡಿದುಕೊಂಡರೆ ತಕ್ಷಣ ಆ ಬಾವುಟವನ್ನು ಪಾಕಿಸ್ತಾನದ ಧ್ವಜವಾಗಿಸುವ ಈ ಸುದ್ದಿ ಚಾನೆಲ್‌ಗಳು ಭಾರತೀಯರ ತಲೆಯ ಮೇಲೆ ಸ್ಪಷ್ಟವಾದ ಪಾಕಿಸ್ತಾನದ ಧ್ವಜವನ್ನೇ ತನ್ನ ಟಿವಿ ವಾಹಿನಿಯಲ್ಲಿ ಹಾರಿಸಿ ದೇಶದ್ರೋಹದ ಕೃತ್ಯವನ್ನು ಎಸಗಿರುವುದು ಅದರ ಮಾನಸಿಕ ಸ್ಥಿತಿ ದುರಸ್ತಿ ಮಾಡಲಾಗದಷ್ಟು ಕೆಟ್ಟಿರುವುದನ್ನು ಸೂಚಿಸುತ್ತದೆ. ಹಲವರು ಈ ಚಾನೆಲ್ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರಾದರೂ, ಕೃತ್ಯಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸದೇ ಇರುವುದು ಮಾತ್ರ ಆತಂಕಕಾರಿಯಾಗಿದೆ.

ಇಡೀ ಕಾರ್ಯಕ್ರಮದ ಉದ್ದೇಶವೇ ದೇಶವನ್ನು ‘ಹಿಂದೂ-ಮುಸ್ಲಿಮ್’ ಎಂದು ವಿಭಜಿಸುವುದಾಗಿತ್ತು. ಈ ಧ್ರುವೀಕರಣಕ್ಕೆ ಇಷ್ಟು ತೀವ್ರತೆಯನ್ನು ನೀಡಲು ಮುಸ್ಲಿಮರ ತಲೆಯ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿತ್ತು. ಮುಖ್ಯವಾಗಿ ಈ ಅಂಕಿಅಂಶವೇ ಬಹಳಷ್ಟು ಗೊಂದಲಗಳಿಂದ, ತಪ್ಪು ಮಾಹಿತಿಗಳಿಂದ ಕೂಡಿವೆ. ಅವಸರವಸರವಾಗಿ ಚುನಾವಣೆಯ ಹೊತ್ತಿನಲ್ಲಿ ಇದನ್ನು ಸರಕಾರದ ಅಧಿಕೃತ ಅಂಕಿಅಂಶವೆನ್ನುವ ರೀತಿಯಲ್ಲಿ ಬಹಿರಂಗ ಪಡಿಸಿರುವುದರ ಹಿಂದೆಯೂ ರಾಜಕೀಯ ಉದ್ದೇಶಗಳಿವೆ. ಕಳೆದ ಎರಡು ವಾರಗಳಿಂದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ನೀಡುತ್ತಿರುವ ಮುಸ್ಲಿಮ್ ದ್ವೇಷದ ಹೇಳಿಕೆಗಳಿಗೆ ಪುಷ್ಟಿ ನೀಡುವುದಕ್ಕಾಗಿಯೇ ಈ ಅಂಕಿಅಂಶಗಳನ್ನು ಬಹಿರಂಗಪಡಿಸಲಾಗಿದೆ. ‘ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಾಗುತ್ತದೆ’ ‘ಭಾರತದ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರಿಗೆ ಆದ್ಯತೆ ನೀಡಲಾಗುತ್ತದೆ’ ಎಂಬಿತ್ಯಾದಿ ದ್ವೇಷ ಹೇಳಿಕೆಗಳ ಮುಂದುವರಿದ ಭಾಗ ಇದಾಗಿದೆ. ‘ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ 1950ರಿಂದ 2015ರ ನಡುವೆ ಶೇ. 43ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಹಿಂದೂಗಳ ಪ್ರಮಾಣ ಶೇ. 7.8ರಷ್ಟು ಇಳಿಕೆಯಾಗಿದೆ’ ಎಂದು ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯ ಅಧಿಕಾರಿಗಳು ಸಿದ್ಧಪಡಿಸಿರುವ ವರದಿ ಹೇಳಿದೆ. ಚುನಾವಣೆಯ ಹೊತ್ತಿಗೇ ಈ ವರದಿಯನ್ನು ಬಿಡುಗಡೆ ಮಾಡಿರುವ ಕುರಿತಂತೆ ಹಲವರು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಇದರಲ್ಲಿರುವ ತಪ್ಪು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಈ ವರದಿಯ ಅಭಿಪ್ರಾಯಗಳು ಸಂಬಂಧಪಟ್ಟ ಲೇಖಕರದ್ದು ಎಂದು ಸಮಿತಿಯೇ ಹೇಳಿದೆ. ಅಂದರೆ, ಇದರಲ್ಲಿಯಾವುದೇ ಲೋಪದೋಷಗಳು ಕಂಡು ಬಂದರೂ ಅದಕ್ಕೆ ಸರಕಾರ ಹೊಣೆ ಅಲ್ಲ ಎನ್ನುವ ನಿರೀಕ್ಷಣಾ ಜಾಮೀನಿನ ಜೊತೆಗೆ ವರದಿಯನ್ನು ಬಹಿರಂಗ ಪಡಿಸಲಾಗಿದೆ. 2015ಕ್ಕೆ ಹಿಂದೂಗಳ ಜನಸಂಖ್ಯೆ ಇಳಿಮುಖವಾಗಿ, ಮುಸ್ಲಿಮರ ಜನಸಂಖ್ಯೆ ಏರಿಕೆಯಾಗಿದೆ ಎನ್ನುವುದನ್ನು ಗುರುತಿಸಲು ಯಾವುದಾದರೂ ಜನಗಣತಿಯನ್ನು ಸರಕಾರ ನಡೆಸಿದೆಯೆ? 2011ರಂದು ಅಂತಿಮವಾಗಿ ಜನಗಣತಿಯನ್ನು ದೇಶ ನಡೆಸಿತ್ತು. ಈ ಸಂದರ್ಭದ ಅಂಕಿಅಂಶಗಳನ್ನು ಬಳಸಿಕೊಳ್ಳದೆ 2015ರ ಜನಸಂಖ್ಯೆಯ ಲೆಕ್ಕವನ್ನು ಯಾವ ಮೂಲದಿಂದ ವರದಿ ಪಡೆದುಕೊಂಡಿದೆ ಎನ್ನುವುದರ ಬಗ್ಗೆ ಯಾವ ಸ್ಪಷ್ಟನೆಯೂ ಇಲ್ಲ. 1951ರ ಜನಗಣತಿಯ ಪ್ರಕಾರ ಮುಸ್ಲಿಮರ ಸಂಖ್ಯೆ ಶೇ. 9.91ರಷ್ಟು ಇತ್ತು. ಆದರೆ ವರದಿಯಲ್ಲಿ ಶೇ. 9.8 ಎಂದು ಉಲ್ಲೇಖಿಸಲಾಗಿದೆ. ಹಾಗೆಯೇ 1951ರ ಜನಗಣತಿ ಪ್ರಕಾರ ದೇಶದ ಹಿಂದೂಗಳ ಪ್ರಮಾಣ ಶೇ. 84.98ರಷ್ಟಿತ್ತು. ಆದರೆ ಇದನ್ನು ವರದಿಯಲ್ಲಿ ಶೇ. 80 ಎಂದು ಉಲ್ಲೇಖಿಸಲಾಗಿದೆ. ಈ ವರದಿ ಅದೆಷ್ಟು ರಾಜಕೀಯ ದುರುದ್ದೇಶದಿಂದ ಕೂಡಿದೆಯೆಂದರೆ, ‘ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಸರಕಾರಗಳು ವಿಶೇಷ ಹಕ್ಕುಗಳು ಮತ್ತು ವಿಶೇಷ ರಕ್ಷಣೆಯನ್ನು ಒದಗಿಸುತ್ತಿದೆ. ಆದುದರಿಂದಲೇ ಜನಸಂಖ್ಯೆ ಏರಿಕೆಯಾಗಿದೆ’ ಎಂದು ಷರಾ ಬರೆಯುತ್ತದೆ. ದೇಶದ ಇತರರಿಗೆ ಇಲ್ಲದ ಅಂತಹ ವಿಶೇಷ ಸವಲತ್ತುಗಳು, ವಿಶೇಷ ರಕ್ಷಣೆ ಯಾವುದು ? ಎನ್ನುವ ಉಲ್ಲೇಖಗಳೇ ಇಲ್ಲ. ಇಷ್ಟಕ್ಕೂ ಈ ದೇಶದಲ್ಲಿ ಮುಸ್ಲಿಮರಿಗೆ ನೀಡುವ ಎಲ್ಲ ಸವಲತ್ತುಗಳನ್ನು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೂ ನೀಡಲಾಗುತ್ತದೆ ಎನ್ನುವುದನ್ನು ವರದಿ ಮರೆತಿದೆ. ಮುಸ್ಲಿಮರೂ ಭಾರತೀಯರು ಎನ್ನುವ ಅಂಶವನ್ನಂತೂ ವರದಿ ಮರೆತೇ ಬಿಟ್ಟಿದೆ.

ಈ ವರದಿ ಸುಳ್ಳುಗಳನ್ನು ಮುಂದಿಟ್ಟಿದೆ ಮಾತ್ರವಲ್ಲ, ಕೆಲವು ಸತ್ಯಗಳನ್ನು ಮರೆ ಮಾಚಿದೆ. ಅದರಲ್ಲಿ ಮುಖ್ಯವಾದುದು ಮುಸ್ಲಿಮರ ಜನಸಂಖ್ಯೆಯ ಏರಿಕೆ ದರ. ‘‘ಮುಸ್ಲಿಮರ ಜನಸಂಖ್ಯೆ ಏರಿಕೆ ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಮತ್ತು ದೇಶದ ಯಾವುದೇ ಧರ್ಮದ ಜನಸಂಖ್ಯೆ ಏರಿಕೆ ದರ ಇಳಿಕೆಗಿಂತಲೂ ಮುಸ್ಲಿಮರ ಜನಸಂಖ್ಯೆ ಏರಿಕೆ ದರ ಕುಸಿತವೇ ಹೆಚ್ಚು’’ ಎಂದು ಸ್ವಯಂ ಸೇವಾ ಸಂಸ್ಥೆ ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ ಹೇಳಿದೆ. ‘1981-1991ರ ದಶಕದಲ್ಲಿ ಮುಸ್ಲಿಮರ ಜನಸಂಖ್ಯೆ ಏರಿಕೆ ದರವು ಶೇ. 32.9ರಷ್ಟು ಇತ್ತು. 2001-2011ರ ದಶಕದಲ್ಲಿ ಈದರವು ಶೇ. 24.6ಕ್ಕೆ ಕುಸಿದಿತ್ತು. ಅಂದರೆ ಈ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಏರಿಕೆ ದರವು 8.3 ಶೇಕಡವಾರು ಕುಸಿತ ಕಂಡಿದೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಿದೆಯಾದರೆ ರಾಜಕೀಯವಾಗಿ ಅವರ ಪಾಲುದಾರಿಕೆಯೂ ಹೆಚ್ಚಬೇಕಾಗಿತ್ತು. ಆದರೆ ಭಾರತದ ಸಂಸತ್‌ನಲ್ಲಿ ಮುಸ್ಲಿಮರ ಪ್ರಾತಿನಿಧ್ಯದಲ್ಲಿ ಕುಸಿತ ಕಂಡಿದೆ. ಇದು ಅವರ ಆರ್ಥಿಕ, ಸಾಮಾಜಿಕ ಬದುಕಿನಲ್ಲೂ ದುಷ್ಪರಿಣಾಮವನ್ನು ಬೀರಿದೆ. ಇಂದು ಚರ್ಚೆಯಾಗಬೇಕಾಗಿರುವುದು ಮುಸ್ಲಿಮರ ಸಾಮಾಜಿಕ ಬದುಕು. ಸಾಚಾರ್ ವರದಿಯು ಈ ದೇಶದಲ್ಲಿ ಮುಸ್ಲಿಮರ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಸ್ಪಷ್ಟವಾಗಿ ವಿವರಿಸಿದೆ. ಅವರನ್ನು ಈ ವರದಿ ‘ನವ ದಲಿತರು’ ಎಂದು ಕರೆದಿದೆ. ಕಳೆದ ಒಂದು ದಶಕದಿಂದ ದೇಶದ ಮುಸ್ಲಿಮರ ಮೇಲೆ ಬೇರೆ ಬೇರೆ ರೀತಿಯ ದಾಳಿಗಳು ಹೆಚ್ಚುತ್ತಿವೆ. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲಗೊಳಿಸಲು ರಾಜಕೀಯ ಶಕ್ತಿಗಳು ಹಲವು ಸಂಚುಗಳನ್ನು ಮಾಡುತ್ತಿವೆ. ಇದು ಪರೋಕ್ಷವಾಗಿ ದೇಶದ ಅಭಿವೃದ್ಧಿಯ ಮೇಲೂ ದುಷ್ಪರಿಣಾಮವನ್ನು ಬೀರುತ್ತಿವೆ. ಸಾಧಾರಣವಾಗಿ ಜನಸಂಖ್ಯೆಯ ಅಧ್ಯಯನ ನಡೆಯುವುದು ಆ ಸಮುದಾಯದ ಎಲ್ಲ ಸ್ತರದ ಜನರಿಗೆ ಸಾಮಾಜಿಕ ನ್ಯಾಯವನ್ನು ನೀಡುವ ಉದ್ದೇಶದಿಂದ. ಆದರೆ ಇಲ್ಲಿ, ಅವರನ್ನು ಸಮಾಜದಿಂದ ಪ್ರತ್ಯೇಕಿಸಿ, ಇನ್ನಷ್ಟು ದುರ್ಬಲಗೊಳಿಸಲು ಈ ಅಧ್ಯಯನವನ್ನು ಬಳಸಲಾಗಿದೆ. ಜಾತಿ ಜನಗಣತಿ ಹೆಚ್ಚು ಚರ್ಚೆಗೆ ಬರುವುದನ್ನು ತಡೆಯುವುದಕ್ಕಾಗಿಯೂ ಮುಸ್ಲಿಮ್ ಗಣತಿಯನ್ನು ಮುನ್ನೆಲೆಗೆ ತರಲಾಗಿದೆ ಎನ್ನುವ ಆರೋಪಗಳಿವೆ. ಭಾರತದ ಪಾಲಿಗೆ ಜನಸಂಖ್ಯೆಯನ್ನು ಸಂಪನ್ಮೂಲವಾಗಿಸುವ ನಿಟ್ಟಿನಲ್ಲಿ, ಸಂಪತ್ತು ಒಂದೇ ಕಡೆ ಶೇಖರಣೆಯಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ. ಸಂಪನ್ಮೂಲಗಳ ಸಮಾನ ಹಂಚಿಕೆಯಾದಂತೆಯೇ ಇರುವ ಜನಸಂಖ್ಯೆ ದೇಶದ ಪಾಲಿಗೆ ಸಂಪತ್ತಾಗಿ ಪರಿವರ್ತನೆ ಹೊಂದುತ್ತದೆ. ಈ ನಿಟ್ಟಿನಲ್ಲಿ, ದೇಶಾದ್ಯಂತ ಜಾತಿಗಣತಿಯನ್ನು ಯಶಸ್ವಿಯಾಗಿ ನಡೆಸುವ ಕಡೆಗೆ ಸರಕಾರ ಯೋಚಿಸಬೇಕು. ಮುಖ್ಯವಾಗಿ ಈ ದೇಶದ ದಲಿತರ ಸಂಖ್ಯೆ ಮತ್ತು ಅವರ ಸ್ಥಿತಿಗತಿಯ ಬಗ್ಗೆ ಸರಕಾರ ವಾಸ್ತವವನ್ನು ಬಹಿರಂಗಪಡಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News