ಸಂಸತ್ ಅಧಿವೇಶನ: ಪಲಾಯನ ಬೇಡ, ಉತ್ತರ ನೀಡಿ
ಕಳೆದ ಡಿಸೆಂಬರ್ 1ರಂದು ಲೋಕಸಭೆಯಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಗಂಭೀರ ಭದ್ರತಾ ಲೋಪದ ಬಗ್ಗೆ ಸಹಜವಾಗಿ ಎಲ್ಲೆಡೆ ಆತಂಕ ಉಂಟಾಗಿದೆ. ಇಂತಹ ಆತಂಕದ ಸಂದರ್ಭದಲ್ಲಿ ಸರಕಾರದ ಪರವಾಗಿ ಗೃಹ ಮಂತ್ರಿ ಅಮಿತ್ ಶಾ ಅವರು ಹೇಳಿಕೆ ನೀಡಬೇಕೆಂಬುದು ಪ್ರತಿಪಕ್ಷಗಳ ಆಗ್ರಹ ನ್ಯಾಯಸಮ್ಮತವಾಗಿದೆ. ಆದರೆ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸದೆ ಸ್ಪಷ್ಟೀಕರಣ ಬಯಸಿದ ಲೋಕಸಭೆ ಮತ್ತು ರಾಜ್ಯಸಭೆಯ ೯೨ ಸದಸ್ಯರನ್ನು ಅಮಾನತಿನಲ್ಲಿಟ್ಟಿರುವುದು ಸರಿಯಲ್ಲ. ಈ ಬಗ್ಗೆ ಸರಕಾರ ಹೇಳಿಕೆ ನೀಡದೆ ಪಲಾಯನ ಮಂತ್ರ ಪಠಿಸುವುದು ಅನವಶ್ಯಕವಾಗಿ ಸಂದೇಹಕ್ಕೆ ಕಾರಣವಾಗುತ್ತದೆ. ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ನಡೆದು ಅದಕ್ಕೆ ಸರಕಾರ ನಿರ್ದಿಷ್ಟ ಸ್ಪಷ್ಟನೆ ನೀಡಿದರೆ ಎಲ್ಲಾ ಗೊಂದಲ ನಿವಾರಣೆಯಾಗುತ್ತದೆ.
ಡಿಸೆಂಬರ್ ೧೩ರಂದು ಲೋಕಸಭೆಯ ಮೇಲೆ ದಾಳಿ ನಡೆಯಬಹುದು ಎಂಬ ಮುನ್ನೆಚ್ಚರಿಕೆ ಇದ್ದರೂ ಅದನ್ನು ನಿರ್ಲಕ್ಷಿಸಿ ಯಾವುದೇ ತಪಾಸಣೆ ಇಲ್ಲದೆ ಪ್ರೇಕ್ಷಕರ ಗ್ಯಾಲರಿಗೆ ಪ್ರವೇಶ ನೀಡಿರುವುದು ಆತಂಕದ ವಿಚಾರ. ಲೋಕಸಭೆ ಮತ್ತು ರಾಜ್ಯಸಭೆ ಸೇರಿ ೭೯೫ ಜನಪ್ರತಿನಿಧಿಗಳಿರುವ ನಮ್ಮ ಸಂಸತ್ತಿನಲ್ಲಿ ಸದಸ್ಯರನ್ನು ಪರಿಚಯಿಸಿಕೊಂಡು ಗುರುತಿಸಿ ಒಳಗೆ ಬಿಡುವುದೇ ಅತ್ಯಂತ ಕಷ್ಟದ ಕೆಲಸ. ತಮ್ಮನ್ನು ತಾವು ಅತಿ ಗಣ್ಯವ್ಯಕ್ತಿಗಳೆಂದು ಭಾವಿಸಿಕೊಂಡ ಜನಪ್ರತಿನಿಧಿಗಳು ತಪಾಸಣೆ ಬಗ್ಗೆ ಗೊಣಗಾಡುವುದರಿಂದ ಅನೇಕ ಸಲ ಭದ್ರತಾ ಅಧಿಕಾರಿಗಳು ನಿಯಮಾವಳಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರೇಕ್ಷಕರ ಗ್ಯಾಲರಿಗೆ ಪ್ರವೇಶಕ್ಕಾಗಿ ಪಾಸ್ ಕೊಡುವ ಮುನ್ನ ಸಂಬಂಧಿಸಿದವರು ಗಂಭೀರವಾಗಿ ಯೋಚಿಸಬೇಕಾಗಿತ್ತು. ಈ ಬಗ್ಗೆ ಸದನದಲ್ಲಿ ಹೇಳಿಕೆ ನೀಡಲು ಹಿಂಜರಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುರಕ್ಷತೆ ಪ್ರಶ್ನೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಸಂಸತ್ತಿನ ಉಭಯ ಸದನಗಳ ಅಧಿವೇಶನ ನಡೆಯುತ್ತಿರುವಾಗ ಇದೇ ಮಾತನ್ನು ಅವರು ಸಂಸತ್ತಿನ ಒಳಗೆ ನೀಡಬೇಕಾಗಿತ್ತು. ಅದರ ಬದಲಿಗೆ ಹೇಳಿಕೆಗೆ ಆಗ್ರಹಿಸಿದ ಪ್ರತಿಪಕ್ಷಗಳ ೯೨ ಸದಸ್ಯರನ್ನು ಸಸ್ಪೆಂಡ್ ಮಾಡಿರುವುದು ಖಂಡನೀಯ ಕ್ರಮವಾಗಿದೆ.
ಪ್ರಜಾಪ್ರಭುತ್ವದಲ್ಲಿ ಸಂಸತ್ತು ಎನ್ನುವುದು ದೇಶಕ್ಕೆ ಸಂಬಂಧಿಸಿದ ವಿಷಯಗಳ ಚರ್ಚಾ ವೇದಿಕೆಯಾಗಿದೆ. ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳಬೇಕಾದುದು ಸರಕಾರದ, ಆಡಳಿತ ಪಕ್ಷದ ಹಾಗೂ ಪ್ರತಿಪಕ್ಷಗಳ ಹೊಣೆಗಾರಿಕೆಯಾಗಿದೆ. ಅದರಲ್ಲೂ ಸರಕಾರ ಹಾಗೂ ಆಡಳಿತ ಪಕ್ಷದ ಹೊಣೆಗಾರಿಕೆ ಹೆಚ್ಚಿನದಾಗಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರದ ಸ್ಪಷ್ಟೀಕರಣ ಬಯಸುವುದು ಪ್ರತಿಪಕ್ಷಗಳ ಸಹಜ ಕರ್ತವ್ಯವಾಗಿದೆ. ಸರಕಾರ ಪ್ರತಿಪಕ್ಷಗಳ ಕಳವಳಕ್ಕೆ ಸಮಾಧಾನಕರ ಉತ್ತರ ನೀಡುವ ಬದಲಿಗೆ ತನ್ನ ಬಹುಮತವನ್ನು ಬಳಸಿಕೊಂಡು ಪ್ರತಿಪಕ್ಷ ಸದಸ್ಯರನ್ನು ಅಮಾನತಿನಲ್ಲಿಡುವ ಕ್ರಮ ಸಂಸದೀಯ ಜನತಂತ್ರಕ್ಕೆ ಶೋಭೆ ತರುವುದಿಲ್ಲ. ಸರಕಾರ ಏನನ್ನೋ ಮುಚ್ಚಿಡುತ್ತದೆ ಎಂಬ ಭಾವನೆ ಪ್ರತಿಪಕ್ಷ ಸದಸ್ಯರಲ್ಲಿ ಮೂಡಬಾರದು.
ಈಗ ಸಂಸತ್ತಿನ ಅಧಿವೇಶನ ನಡೆದಿರುವ ಹೊಸ ಸಂಸತ್ ಭವನದಲ್ಲಿ ವಿಶೇಷ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ಹೊಸ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಹೇಳಲಾಗಿತ್ತು. ವೈಮಾನಿಕ ದಾಳಿ ಸೇರಿದಂತೆ ಯಾವುದೇ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ ನೂತನ ಸಂಸತ್ ಭವನವನ್ನು ಸಜ್ಜುಗೊಳಿಸಲಾಗಿದೆ ಎಂದು ಆಗ ವಿವರಣೆ ನೀಡಲಾಗಿತ್ತು. ಆದರೆ ಭಗತ್ ಸಿಂಗ್ ಹೆಸರನ್ನು ದುರ್ಬಳಕೆ ಮಾಡಿಕೊಂಡ ಕೆಲವು ಯುವಕರು ಭದ್ರತಾ ಕಾವಲನ್ನು ಭೇದಿಸಿ ಒಳಗೆ ಪ್ರವೇಶ ಮಾಡಿ ಕೋಲಾಹಲಕ್ಕೆ ಕಾರಣವಾಗಿದ್ದು ನಮ್ಮ ರಕ್ಷಣಾ ವ್ಯವಸ್ಥೆಗೆ ಹಿಂದೆಂದೂ ಎದುರಿಸಲಾಗದ ಸವಾಲಾಗಿದೆ. ಜಾಗತಿಕವಾಗಿಯೂ ಮುಜುಗರ ಉಂಟು ಮಾಡಿದೆ. ಸಂಸತ್ ಭವನದ ಭದ್ರತಾ ವ್ಯವಸ್ಥೆಯ ಲೋಪಗಳನ್ನು ಗುರುತಿಸಿಯೇ ಈ ಆರೋಪಿಗಳು ಒಳಗೆ ಪ್ರವೇಶ ಪಡೆದಿದ್ದಾರೆ. ಈ ಸಂಬಂಧ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಿದರೆ ಮಾತ್ರ ಸಾಲದು, ಸರಕಾರ ಸಮಗ್ರ ಹೇಳಿಕೆ ನೀಡಬೇಕು.
ಸಂಸತ್ತಿನಲ್ಲಿ ಭಾರತೀಯ ದಂಡ ಸಂಹಿತೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ತರಲು ಉದ್ದೇಶಿಸಿರುವ ಮೂರು ವಿಧೇಯಕಗಳಿಗೆ ಅಂಗೀಕಾರ ಪಡೆಯಬೇಕಾಗಿದೆ. ಇಂತಹ ಸನ್ನಿವೇಶದಲ್ಲಿ ಸದನದ ಕಲಾಪವನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ವಾತಾವರಣ ನಿರ್ಮಾಣ ಮಾಡುವುದು ಸರಕಾರದ ಕರ್ತವ್ಯ. ಈ ಗಂಭೀರ ಭದ್ರತಾ ಲೋಪದ ಬಗ್ಗೆ ಅಧಿವೇಶನ ನಡೆಯುತ್ತಿರುವಾಗ ಸ್ಪಷ್ಟನೆ ನೀಡುವ ಬದಲಾಗಿ ಸಂಸತ್ತಿನ ಹೊರಗೆ ಹೇಳಿಕೆ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ವರ್ತನೆ ಸಹಜವಾಗಿ ಪ್ರತಿಪಕ್ಷಗಳನ್ನು ಕೆರಳಿಸಿದೆ. ಈ ಘಟನೆ ನಡೆದಾಗಿನಿಂದ ಸಂಸತ್ತಿಗೆ ಬರದೆ ತಪ್ಪಿಸಿಕೊಳ್ಳುತ್ತಿರುವ ಪ್ರಧಾನಿ ಹಾಗೂ ಗೃಹ ಮಂತ್ರಿಗಳ ವರ್ತನೆ ಸರಿಯಾದುದಲ್ಲ. ಇದು ಪಲಾಯನವಾದ ಎಂಬ ಪ್ರತಿಪಕ್ಷಗಳ ಆಕ್ಷೇಪ ನ್ಯಾಯ ಸಮ್ಮತವಾಗಿದೆ.
ಸಂಸತ್ ಭವನವನ್ನು ಪ್ರವೇಶ ಮಾಡಿದ ದುಷ್ಕರ್ಮಿಗಳಿಗೆ ಪಾಸುಗಳನ್ನು ನೀಡಿದವರು ಮೈಸೂರಿನ ಬಿಜೆಪಿ ಲೋಕಸಭಾ ಸದಸ್ಯ ಪ್ರತಾಪಸಿಂಹ. ಅವರ ಬಗ್ಗೆ ಸಣ್ಣ ಸುಳಿವು ಗೊತ್ತಾಗಿದ್ದರೂ ಪಾಸು ಕೊಡುತ್ತಿರಲಿಲ್ಲ ಎಂಬ ಪ್ರತಾಪಸಿಂಹ ಅವರ ಸಮರ್ಥನೆಯನ್ನು ಹೇಗೆ ನಂಬುವುದು? ಅದೇ ಕಾಂಗ್ರೆಸ್, ಕಮ್ಯುನಿಸ್ಟ್ ಇಲ್ಲವೇ ಯಾವುದೇ ಪ್ರತಿಪಕ್ಷಗಳ ಸದಸ್ಯರು ಪಾಸು ನೀಡಿದ್ದರೆ, ಆರೋಪಿಗಳು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದರೆ ಸಂಸತ್ತಿನಲ್ಲಿ ಬಿಜೆಪಿ ಸಂಸದರು ಕೋಲಾಹಲ ಉಂಟು ಮಾಡುತ್ತಿರಲಿಲ್ಲವೇ? ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಸಂಸತ್ ಕಲಾಪದಲ್ಲಿ ಭಾಗವಹಿಸದೇ ಇರುತ್ತಿದ್ದರೇ ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.
ಸಂಸತ್ತಿನ ಅಧಿವೇಶನಕ್ಕೆ ಬರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರು ಯಾಕೆ ಹಿಂಜರಿಯುತ್ತಿದ್ದಾರೆ ಅಂದರೆ ಸದನದ ಒಳಗೆ ಜಿಗಿದವರಿಗೆ ಪಾಸ್ ನೀಡಿದ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರ ಪಾತ್ರದ ಬಗ್ಗೆ ಸಹಜವಾಗಿ ಪ್ರಶ್ನೆಗಳು ಎದುರಾಗುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವ ಸ್ಥಿತಿಯಲ್ಲಿ ಪ್ರಧಾನಿಯಾಗಲಿ, ಗೃಹ ಮಂತ್ರಿಗಳಾಗಲಿ ಇಲ್ಲ, ಆ ಕಾರಣ ಪಲಾಯನ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂಬ ಪ್ರತಿಪಕ್ಷ ಸದಸ್ಯರ ಆರೋಪದಲ್ಲಿ ಹುರುಳಿಲ್ಲದಿಲ್ಲ.
ನ್ಯಾಯಸಮ್ಮತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರು ಸಂಸತ್ತಿನ ಅಧಿವೇಶನದಲ್ಲಿ ಪಾಲ್ಗೊಂಡು ಭದ್ರತಾ ಲೋಪದ ಹೊಣೆಗಾರಿಕೆಯನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಭದ್ರತಾ ವೈಫಲ್ಯವನ್ನು ಮುಚ್ಚಿ ಹಾಕಿ ಜಾರಿಕೊಳ್ಳುವ ಪಲಾಯನ ಮಾರ್ಗ ಸರಿಯಲ್ಲ. ಆರೋಪಿಗಳ ಬಗ್ಗೆ ಸಂಸತ್ತಿನ ಹೊರಗೆ ಕಟ್ಟುಕತೆಗಳನ್ನು ಹರಡುವ ಬದಲಾಗಿ ಸಂಸತ್ತಿಗೆ ಬಂದು ವಾಸ್ತವವಾಗಿ ಏನು ನಡೆದಿದೆ ಎಂಬ ಸ್ಪಷ್ಟೀಕರಣ ನೀಡಬೇಕಾಗಿದೆ. ಹಾಗಾಗಿ ಸರಕಾರ ಅಮಾನತು ಮಾಡಿದ ಸಂಸದರನ್ನು ಅಮಾನತಿನಿಂದ ಮುಕ್ತಗೊಳಿಸಿ ಸಂಸತ್ತಿನಲ್ಲಿ ಆರೋಗ್ಯಕರ ಮತ್ತು ಪಾರದರ್ಶಕವಾದ ಚರ್ಚೆಗೆ ಅವಕಾಶ ಕೊಡಬೇಕು. ಏನು ನಡೆದಿದೆ ಎಂಬುದರ ಬಗ್ಗೆ ಸಮಗ್ರ ಹೇಳಿಕೆಯನ್ನು ನೀಡಬೇಕು. ಏನನ್ನೂ ಮುಚ್ಚಿಡಲು ಮಸಲತ್ತು ಮಾಡಬಾರದು. ಸಂಸತ್ತು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು.